ಸ್ವ್ಯಾನ್ ಕೃಷ್ಣಮೂರ್ತಿ ಕಾಲಂ: ನನ್ನ ಕಪಾಳಕ್ಕೆ ಹೊಡೆದರು..

ಪೊಲೀಸ್ ಕೈರುಚಿಯ ಸವಿ

ನಮ್ಮ ಕಚೇರಿಯಲ್ಲಿ ಅನೇಕ ಮಂದಿ ನನ್ನೊಂದಿಗೆ ಕೆಲಸ ಮಾಡುತ್ತಾರೆ.

೨೫ ಜನರಿಂದ ಕೂಡಿದ ಚಿಕ್ಕ ಕಚೇರಿ ನಮ್ಮದು. ಈ ಪೈಕಿ ಒಂದು ಹುಡುಗ – ಹುಡುಗಿ ಪರಸ್ಪರ ಪ್ರೇಮಿಸುತ್ತಿದ್ದರಂತೆ. ಈ ಕಥೆ ನಡೆಯುವವರೆಗೆ ಅವರ ಪ್ರೇಮದ ವಿಷಯ ನನಗೆ ಗೊತ್ತೇ ಇರಲಿಲ್ಲ . ಹುಡುಗಿಯ ಮನೆಯಲ್ಲಿ ಇವರ ಪ್ರೇಮಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಇಷ್ಟಾದ ಮೇಲೆ ಈ ಪ್ರೇಮಿಗಳು ತಾವೇ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಇದೆಲ್ಲಾ ಗುಟ್ಟಾಗಿಯೇ ನಡೆದುಹೋಗಿದೆ. ಒಂದು ದಿನ ಹುಡುಗಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟವಳು ನಂತರ ಆ ಹುಡುಗನ ಜೊತೆ ಓಡಿ ಹೋಗಿದ್ದಾಳೆ. ಅವಳ ಮನೆ ನಮ್ಮ ಕಚೇರಿಯ ಹತ್ತಿರವೇ ಇತ್ತು.

ಮಗಳು ಮಧ್ಯಾಹ್ನ ಮನೆಗೆ ಊಟಕ್ಕೆ ಬಾರದೆ ಇದ್ದುದ್ದನ್ನು ನೋಡಿ ಮತ್ತು ಅವಳ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿರುವುದನ್ನು ಗಮನಿಸಿ, ಅವರಮ್ಮ ಪ್ರೆಸ್ ಬಳಿ ಬಂದು ವಿಚಾರಿಸಿದ್ದಾರೆ. ಆ ಹುಡುಗಿ ಬೆಳಿಗ್ಗೆಯಿಂದ ಕೆಲಸಕ್ಕೆ ಬಂದಿಲ್ಲ ಎಂದು ತಿಳಿದು, ಯಾರಾದರೂ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ಯೋಚಿಸಿ ಎಲ್ಲಾ ಕಡೆ ವಿಚಾರಿಸಿದ್ದಾರೆ. ಸಂಜೆ ಹೊತ್ತಿಗೆ ಅವರ ಪ್ರೇಮ ಪ್ರಕರಣ ಗೊತ್ತಾಗಿದೆ. ಈಗ ಹುಡುಗಿ ಆ ಹುಡುಗನ ಜೊತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ತಕ್ಷಣ ಹುಡುಗಿಯ ಮನೆಯವರು ಪೊಲೀಸ್ ಸ್ಟೇಷನ್ ಗೆ ಹೋಗಿ- ” ನಮ್ಮ ಹುಡುಗಿಗೆ ಅವನ ಜೊತೆ ಮದುವೆ ಆಗಲು ಇಷ್ಟ ಇರಲಿಲ್ಲ. ಆ ಹುಡುಗ ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ” ಎಂದು ಕಂಪ್ಲೇಂಟ್ ಕೊಟ್ಟುಬಿಟ್ಟಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಸೀದಾ ನಮ್ಮ ಪ್ರೆಸ್ ಗೆ ಬಂದು -‘ಹುಡುಗನ ಫೋಟೋ ಕೊಡಿ, ಅವನ ಅಪ್ಪ- ಅಮ್ಮನ ವಿಳಾಸ, ಮೊಬೈಲ್ ನಂಬರ್ ಕೊಡಿ, ಅವನ ಬಗ್ಗೆ ಪೂರ್ಣ ಮಾಹಿತಿ ಕೊಡಿ’ ಎಂದು ಜೋರಾಗಿ ಕೇಳಿದರು. ನಮ್ಮ ಬಳಿ ಮಾಹಿತಿಯಿದ್ದರೂ, ನಾವು ಅವರಿಗೆ ಕೊಡಲಿಲ್ಲ. ಕಡೆಗೆ ” ಬನ್ನಿ, ಪೊಲೀಸ್ ಸ್ಟೇಷನ್ನಿಗೆ ಅಲ್ಲಿ ದೊಡ್ಡ ಸಾಹೇಬರು ಎಲ್ಲಾ ವಿಚಾರಿಸಿಕೊಳ್ಳುತ್ತಾರೆ ” ಅಂತ ಅವರ ಪೊಲೀಸ್ ಜೀಪಿನಲ್ಲಿ ನನ್ನನ್ನು ಕರೆದುಕೊಂಡು ಹೋದರು.

ಅಲ್ಲಿ ಹೋದ ಮೇಲೆ, ಸಾಹೇಬರು ಇಲ್ಲ, ರೌಂಡ್ಸ್ ಗೆ ಹೋಗಿದ್ದಾರೆ ಬರ್ತಾರೆ, ಇಲ್ಲೇ ಕೂತ್ಕೊಳ್ಳಿ ಅಂದರು. ಹೊರಗಡೆ ರೌಂಡ್ಸ್ ಗೆ ಹೋಗಿದ್ದ ಹೆಡ್ ಕಾನ್ ಸ್ಟೇಬಲ್ ಬಂದರು. ನಾನು ಎದ್ದು ನಿಂತು ನಮಸ್ಕಾರ ಮಾಡಿದೆ. ನನ್ನ ನೋಡಿ, ಇವನು ಯಾರು? ಯಾವ ಕೇಸ್? ಎಂದು ಅಲ್ಲಿದ್ದ P C ನ ಜೋರಾಗಿ ಕೇಳಿದರು . ಆ P C .. ಅದೇ… ಹುಡುಗಿ ಕಿಡ್ನಾಪ್ ಕೇಸ್ ಸರ್ ಅಂದ್ರು. ತಕ್ಷಣ ಆ ಹೆಡ್ ಕಾನ್ ಸ್ಟೇಬಲ್- “ಓ..ಸಿಕ್ಕುಬಿಟ್ನಾ .. !! ಕಳ್ ನನ್ಮಗನೇ .. ನೋಡೋಕೆ ಒಳ್ಳೆ ಹಿಂಗಿದಿಯಾ ..!! ಹುಡುಗೀನ ಕಿಡ್ನಾಪ್ ಮಾಡ್ತೀಯೇನೋ ಬೋಳಿಮಗನೇ… ಎಂದವರೇ ಕೆನ್ನೆಗೆ ಜೋರಾಗಿ ಒಂದೇಟು ಕೊಟ್ಟೇ ಬಿಟ್ಟರು.

ನಾನು ” ಸರ್ ಸರ್, ಕಿಡ್ನಾಪ್ ಮಾಡಿದ್ದು ನಾನಲ್ಲ” ಅಂದೆ . ತಕ್ಷಣ ಆ P C ‘..ಸರ್, ಆ ಹುಡುಗ ಇವರ ಪ್ರೆಸ್ ನಲ್ಲೇ ಕೆಲಸ ಮಾಡೋದು. ಅವನ ವಿವರಗಳನ್ನು ಇವರು ಸರಿಯಾಗಿ ಕೊಡ್ತಾ ಇಲ್ಲ, ಅದಕ್ಕೇ ಕರೆದುಕೊಂಡು ಬಂದ್ವಿ’ ಎಂದು ಹೇಳಿದ… ಆಗ ಹೆಡ್ ಕಾನ್ಸ್ ಟೇಬಲ್ – ” ಓ..ಮುಂಚೆಯೇ ಹೇಳಬಾರದಾ, ಸಾರಿ ಸರ್ ” ಅಂದ.

ನನಗೆ ಕೋಪ ಬಂತು, ” ಏನ್ರೀ ಹಾಗೆ ಮಾತಾಡ್ತೀರಾ, ಸುಮ್ಮನೆ ಹೊಡಿತೀರಾ? ಕನಿಷ್ಠ ಯಾರು, ಏನು ಅಂತ ವಿಷಯ ತಿಳಿಯಬಾರದಾ?” ಎಂದು ಜೋರಾಗಿಯೇ ಕೇಳಿದೆ. ”ಓ..ಆಯ್ತು ಬಿಡಪ್ಪ, ಬಾ
ಇಲ್ಲಿ ಒಳಗೆ… ಅಂತ ಕರೆದುಕೊಂಡು ಹೋದರು. ಅಲ್ಲಿ ಒಂದು ಕೋಣೆಯಲ್ಲಿ ಒಬ್ಬನಿಗೆ ಸಿಕ್ಕಾಪಟ್ಟೆ ಹೊಡೆದಿದ್ದರು .ಅವನನ್ನು ತೋರಿಸಿ, ನೋಡು, ಇವನಿಗೆ ಎರಡು ದಿನದಿಂದ ಚೆನ್ನಾಗಿ ಬೆಂಡ್ ಎತ್ತುತ್ತಿದ್ದೇವೆ. ಆದರೆ ಕೊನೆಗೂ ಇವತ್ತು ಅವನು ನಿಜ ಬಾಯ್ಬಿಟ್ಟ. ನಾವು ಪೊಲೀಸರು ಈ ರೀತಿ ಮಾತನಾಡಿ ಚೆನ್ನಾಗಿ ಬೆಂಡೆತ್ತಿದ್ರೇನೇ ನಿಜ ಹೊರಗೆ ಬರುವುದು, ಎಂದರು. ಹೋಗಿ ಕೂತ್ಕೋ, ಆದರೆ ಅಲ್ಲಿ ಕೂತ್ಕೊಬೇಡ. ಇಲ್ಲೇನಾದ್ರೂ ಕೂತರೆ, ಬರುವ ಹೋಗುವ ಎಲ್ಲರೂ ಒಂದೊಂದು ಒದೆ ಕೊಡ್ತಾನೆ ಇರ್ತಾರೆ, ಹೋಗಿ ಒಳಗೆ ಸಾಹೇಬರ ರೂಮ್ನಲ್ಲಿ ಕೂತ್ಕೋ, ಎಂದರು.

ಅವರ ಮಾತು ಕೇಳಿ ನನಗೆ ಭಯ ಆಗಲು ಶುರುವಾಯ್ತು. ಇಲ್ಲಿ ಬಹಳ ಹೊತ್ತು ಇದ್ದರೆ ಸರಿ ಇರಲ್ಲ ಅಂದುಕೊಂಡು, ಆ ಹುಡುಗನ ವಿವರ ಎಲ್ಲಾ ಕೊಟ್ಟೆ. ”ನೀವು ಯಾವಾಗ ಕರೆದರೂ ಬರುತ್ತೇನೆ, ಊರು ಬಿಟ್ಟು ಎಲ್ಲೂ ಹೋಗಲ್ಲ” ಎಂದು ಮುಚ್ಚಳಿಕೆ ಬರೆಸಿಕೊಂಡು, ನಾಳೆ ಬೆಳಿಗ್ಗೆ ಬನ್ನಿ ಎಂದು ಹೇಳಿ ಕಳಿಸಿದರು. ನಾನು ಗಾಬರಿಯಲ್ಲಿ ಆ ಹುಡುಗನ ವಿವರ, ಮುಚ್ಚಳಿಕೆ ಪತ್ರ ಬರೆದುಕೊಟ್ಟು ಹೋಗುವ ಅವಸರ ನೋಡಿ, ನನಗೆ ಹೊಡೆದ ಪೊಲೀಸ್ ಇನ್ನೊಬ್ಬ P C ಕಡೆ ನೋಡುತ್ತಾ ಒಂದು ಕಿರುನಗೆ ಬೀರಿದ.

ಆ ನಗು ನನಗೆ-” ಲೇ,.. ಮಗನೇ, ನೋಡು ಒಂದು ಒದೆ ಬಿದ್ದ ತಕ್ಷಣ, ಎಲ್ಲಾ ವಿವರಗಳನ್ನು ಹೆಂಗೆ ಕೊಡ್ತಾ ಇದಿಯಾ ನೋಡು…” ಅನ್ನುವ ಹಾಗೆ ಅನಿಸಿತು. ತಕ್ಷಣ ಅವರ ಕಡೆ ನೋಡದೆ,ಸರಸರ ಹೊರನಡೆದೆ…

ಮಾರನೇ ದಿನ ಬೆಳಿಗ್ಗೆ ಆ ಹುಡುಗ-ಹುಡುಗಿಯ ಮದುವೆಯಾಯಿತು! ಹುಡುಗ – ಹುಡುಗಿ ಕಡೆಯವರು ರಾಜಿಯಾಗಿ ( ಸಂಬಂಧಿಕರೂ ಆಗಿ ) ಕಂಪ್ಲೇಂಟ್ ವಾಪಸ್ ತೆಗೆದುಕೊಂಡರು.

ಆದರೆ, ನನಗೆ ಬಿದ್ದ ಏಟು ಮಾತ್ರ ಹಾಗೇ ನೆನಪಿನಲ್ಲಿ ಉಳಿಯಿತು.

‍ಲೇಖಕರು avadhi

April 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: