‘ಸ್ವ್ಯಾನ್’ಗೆ ಸಿದ್ಧಲಿಂಗಯ್ಯನವರ ಪ್ರೀತಿ ದೊಡ್ಡದು..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಕವಿ ಸಿದ್ಧಲಿಂಗಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಂಪಿ ಕನ್ನಡ ವಿ.ವಿ. ಪ್ರಸಾರಾಂಗದ ನಿರ್ದೇಶಕರಾಗಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಿದ್ಧಲಿಂಗಯ್ಯನವರನ್ನು ಪ್ರಸಾರಾಂಗದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಬಿಡುಗಡೆಗೊಳ್ಳುವ ಪುಸ್ತಕವನ್ನು ಸಿದ್ಧಲಿಂಗಯ್ಯನವರಿಗೆ ಮುಂಚಿತವಾಗಿ ತಲುಪಿಸಲು ತಿಳಿಸಿದ್ದರು.

ನಾವು ಪುಸ್ತಕ ಕಳಿಸುವುದು ತಡವಾಗಿದ್ದರಿಂದ ಸಿದ್ಧಲಿಂಗಯ್ಯನವರು ಕಚೇರಿಯ ಸಹಾಯಕರಿಗೆ “ಇನ್ನೂ ಪುಸ್ತಕ ಬಂದಿಲ್ಲ, ಮುದ್ರಣಾಲಯಕ್ಕೆ ಕರೆ ಮಾಡಿ ವಿಚಾರಿಸಿ” ಎಂದು ಹೇಳಿದ್ದಾರೆ. ಅವರ ಸಹಾಯಕ ನನಗೆ ಕರೆ ಮಾಡಿ, “ಸಾಹೇಬರು ಪುಸ್ತಕ ಕಳಿಸೋಕೆ ಹೇಳಿದ್ರಂತೆ, ಇನ್ನೂ ಬಂದೇ ಇಲ್ಲ” ಅಂತ ಸ್ವಲ್ಪ ಜೋರಾಗಿ ಕೇಳಿದರು. ನಾನು- “ಸರ್, ಆಗಲೇ ಸಂಜೆ ಆಗ್ತಾ ಇದೆ, ಈಗ ಹೊರಟು ವಿಧಾನಸೌಧಕ್ಕೆ ಬರುವಷ್ಟರಲ್ಲಿ ಕಛೇರಿ ಮುಚ್ಚುವ ಸಮಯವಾಗಿಬಿಡುತ್ತೆ.

ಪುಸ್ತಕ ಬಿಡುಗಡೆಯ ದಿನ ಇನ್ನೂ ದೂರವಿದೆ, ನಾನು ಅಧ್ಯಕ್ಷರಿಗೆ ಕರೆ ಮಾಡಿ ಹೇಳ್ತೀನಿ, ಅವರು ಮನೆಗೆ ಹೋಗಬೇಕಾದರೆ ನಮ್ಮ ಕಚೇರಿಯ ಮುಂದಿನ ಮೈಸೂರು ರಸ್ತೆಯಲ್ಲಿ ಹಾದು ಹೋಗುತ್ತಾರಲ್ಲ, ಆ ಸಮಯದಲ್ಲಿ ನಾನು ಇಲ್ಲೇ ಅವರಿಗೆ ಪುಸ್ತಕ ಕೊಡುತ್ತೇನೆ” ಅಥವಾ ರಾತ್ರಿ ನಾವೇ ಅವರ ಮನೆಗೆ ತಲುಪಿಸುತ್ತೇವೆ ಎಂದೆ. ಆ ಮಾತಿಗೆ ಸಿದ್ಧಲಿಂಗಯ್ಯನವರ ಸಹಾಯಕ ಸಿಟ್ಟಿನಿಂದ ಕೂಗಾಡಲು ಶುರುಮಾಡಿಬಿಟ್ಟರು.

“ಏನ್ರೀ, ನಮ್ಮ ಅಧ್ಯಕ್ಷರು ಪುಸ್ತಕಕ್ಕಾಗಿ ಅದು ಎಲ್ಲೋ ರಸ್ತೆ ಮಧ್ಯದಲ್ಲಿ ನಿಂತು ಕಾಯಬೇಕೇನ್ರೀ..? ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ವಾ..?” ಅಂತ ನನಗೆ ಮಾತನಾಡಲು ಅವಕಾಶ ಕೊಡದ ಹಾಗೆ ಬೈಯತೊಡಗಿದರು. ನಾನು ಸಿದ್ಧಲಿಂಗಯ್ಯನವರಿಗೆ ಕರೆ ಮಾಡಿ ಮಾತನಾಡಿದರಾಯ್ತು ಎಂದು ಫೋನ್ ಕಟ್ ಮಾಡಿಬಿಟ್ಟೆ. ಮರುಕ್ಷಣವೇ ಅವರ ಕಚೇರಿಯಿಂದ ಕರೆ. “ಏನ್ರೀ ನಾನು ಇನ್ನೂ ಮಾತಾಡ್ತಾ ಇದ್ದೀನಿ, ನೀವು ಕಾಲ್ ಕಟ್ ಮಾಡ್ತೀರಾ.?” ಅಂತ ಮತ್ತೆ ಇನ್ನೂ ಜೋರಾಗಿ ಶುರುಹಚ್ಚಿಕೊಂಡರು..

ಅಯ್ಯೋ ರಾಮ..!! ಇದು ಒಳ್ಳೆ ಕಥೆ ಆಯ್ತಲ್ಲ ಎಂದುಕೊಳ್ಳುವಷ್ಟರಲ್ಲಿ, “ನಿಮಗೆ ಹೀಗೆಲ್ಲಾ ಫೋನ್ನಲ್ಲಿ ಹೇಳಿದರೆ ಆಗಲ್ಲ, ಇರಿ ಮಾಡ್ತೀನಿ” ಅಂತ ಕಾಲ್ ಕಟ್ ಮಾಡಿಬಿಟ್ರು. 

ನಾನು ಅಧ್ಯಕ್ಷರ ಮೊಬೈಲ್‌ಗೆ ಎರಡು ಮೂರು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ. ಯಾವುದೋ ಸಭೆಯಲ್ಲಿ ಇರಬೇಕು, ಮತ್ತೆ ಮಾಡಬಹುದು ಎಂದು ಸುಮ್ಮನಾದೆ.  ಸ್ವಲ್ಪ ಸಮಯದಲ್ಲೇ ಚಾಮರಾಜಪೇಟೆ ಪೊಲೀಸ್ ಸ್ಟೇಷನ್‌ನಿಂದ ಒಬ್ಬರು ಪೊಲೀಸರು ಬಂದರು.  “ವಿಧಾನಸೌಧ ಪ್ರಾಧಿಕಾರ ಆಫೀಸಿಗೆ ಯಾವುದೋ ಪುಸ್ತಕ ಕಳಿಸಿಲ್ಲವಂತೆ.. ಏನ್ರೀ ಅದು….??” ಎಂದು ಅವರು ಜೋರು ಮಾಡಿದರು.

ಇದೇನಪ್ಪಾ ಸಣ್ಣ ವಿಷಯ ಪೊಲೀಸ್‌ವರೆಗೆ ಹೋಯಿತಲ್ಲ ಅಂತ…  “ಸರ್, ಪುಸ್ತಕ ರೆಡಿ ಇದೆ, ಹುಡುಗ ಹೊರಟ” ಅಂತ ಹೇಳಿ, ಅವರ ಮುಂದೇನೇ ನಮ್ಮ ಸುಜನ್ ಕೈಯಲ್ಲಿ ಪುಸ್ತಕ ಕೊಟ್ಟು ಕಳಿಸಿದೆ. ಸ್ವಲ್ಪ ಸಮಯದ ನಂತರ ಮತ್ತೆ ವಿಧಾನಸೌಧದ ಕಚೇರಿಯಿಂದ ಕರೆ ಬಂತು. ಹೋ, ಸುಜು ಹೋಗಿರಬೇಕು, ಪುಸ್ತಕ ತಲುಪಿದೆ ಎಂದು ಧೈರ್ಯವಾಗಿ ಕರೆ ಸ್ವೀಕರಿಸಿದರೆ..” ಏನ್ರೀ, ಹುಡುಗಾಟ ಆಡ್ತೀರಾ ಏನ್ರಿ? ….

ಯಾವುದೋ ಬೇರೆ ಬುಕ್ಕು ಕಳಿಸಿದ್ದೀರಲ್ರೀ” ಎಂದು ಮತ್ತೆ ಚೀರಾಟ! “…..ಅಯ್ಯೋ ಆ ಹುಡುಗ ಅರ್ಜೆಂಟ್ ಅರ್ಜೆಂಟಾಗಿ ಹೊರಡುವಾಗ ಒತ್ತಡದಲ್ಲಿ ಬೇರೆ ಬುಕ್ ತಂದಿದ್ದಾನೆ, ಮಿಸ್ಸಾಗಿದೆ” ಅಂತ ಹೇಳಿದ್ರು ಕೇಳ್ತಿಲ್ಲ..! “ಇರಿ, ಅಲ್ಲಿಗೆ ಬರ್ತೀವಿ” ಅಂತ ನಮ್ಮ ಕಚೇರಿಗೆ ಬಂದೇಬಿಟ್ಟರು. ಬರುತ್ತಲೇ ಸಿದ್ಧಲಿಂಗಯ್ಯನವರು ಕಣ್ಣುಮಿಟುಕಿಸಿ, ಒಂದು ಬೆರಳನ್ನು ಬಾಯ ಮೇಲಿಟ್ಟು, ಮಾತಾಡಬೇಡಿ ಸುಮ್ಮನಿರಿ ಎಂಬ ಸೂಚನೆ ಕೊಟ್ಟರು. ಅವರ ಸಹಾಯಕ ಕೂಗಾಡಿ, ಸಿದ್ಧಲಿಂಗಯ್ಯನವರಿಗೆ  ಪುಸ್ತಕ ಕೊಡಿಸಿ ಹೊರಟುಹೋದರು.

 ನಂತರ ಸಿದ್ಧಲಿಂಗಯ್ಯನವರು “ಬೇಜಾರ್ ಮಾಡ್ಕೋಬೇಡಿ, ಇದು ಮಾಮೂಲು” ಎಂದು ಹೇಳಿದರು. ಅವರು ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಸಾಬೂನು ಕಾರ್ಖಾನೆಯಲ್ಲಿ ‘ಕಲಿಕೆ ಗಳಿಕೆ’ ಯೋಜನೆಯಡಿಯಲ್ಲಿ ಕೆಲಸ ಮಾಡುವಾಗ, ಯಾರೋ ಇವರ ಜೊತೆಯಲ್ಲಿ ಕೆಲಸ ಮಾಡುವ ಹುಡುಗರು ಸಾಬೂನು ತುಂಬದೇ ಇರೋ ಖಾಲಿ ಬಾಕ್ಸ್ಗಳನ್ನು ದಿನವೂ ಹೊರಗೆ ಕಳುಹಿಸುತ್ತಿದ್ದುದು ಹೇಗೋ ಕಂಪನಿಯವರಿಗೆ ಗೊತ್ತಾಗಿ, ತಪ್ಪು ಮಾಡಿದ ಆ ಬ್ಯಾಚ್‌ನ ಹುಡುಗರ ಜೊತೆ ಸಿದ್ಧಲಿಂಗಯ್ಯನವರೂ ಕೆಲಸ ಕಳೆದುಕೊಂಡ ಘಟನೆಯನ್ನು ಹಾಸ್ಯಭರಿತವಾಗಿ ಹೇಳಿದರು.

ಆಗ ನಾನು “ಸರ್ ನೀವು ಬರುವ ಒಂದೆರಡು ನಿಮಿಷ ಮುಂಚೆಯೇ ಪುಸ್ತಕ ಸಿದ್ಧವಾಗಿದ್ದು!” ಎಂದೆ. ಅವರು ಆಶ್ಚರ್ಯಚಕಿತರಾಗಿ ಒಂದು ಕಿರುನಗೆಬೀರಿ ನನ್ನಕಡೆ ನೋಡುತ್ತಾ ಇನ್ನೊಂದು ಹಾಸ್ಯ ಪ್ರಸಂಗವನ್ನು ಹೇಳಿ ಎಲ್ಲರನ್ನೂ ನಗಿಸಿ ಹೋದರು.

ಸಿದ್ಧಲಿಂಗಯ್ಯನವರು ಸದಾ ಅವರ ಎತ್ತರ, ಅವರ ಬಣ್ಣ, ಕೆದರಿದ ಕೂದಲು, ಅವರು ತೊಡುವ ಬಟ್ಟೆ ಹೀಗೆ ಅವರನ್ನೇ ಕೇಂದ್ರವಾಗಿ ಇಟ್ಟುಕೊಂಡು ಒಂದಿಲ್ಲ ಒಂದು ಘಟನೆಯ  ಜೋಕ್‌ಗಳನ್ನು ಹೇಳುತ್ತಲೇ ಇರುತ್ತಾರೆ. ಹಾಗೆ ಒಂದು ದಿನ ನಮ್ಮ ಮುದ್ರಣಾಲಯಕ್ಕೆ ಬಂದವರೇ- “ಕಿಟ್ಟಿ ಅವರೇ, ನಾನು ಯಾವುದಾದರೂ ಕಚೇರಿಯ ದೊಡ್ಡ ಸಾಹೇಬರನ್ನು ನೋಡಲು ಹೋದಾಗ, ಅವರ ಸಹಾಯಕರ ಬಳಿ `ಸಿದ್ಧಲಿಂಗಯ್ಯ ಬಂದಿದ್ದಾರೆ, ಎಂದು ನಿಮ್ಮ ಸಾಹೇಬರಿಗೆ ಹೇಳಿ’ ಎಂದರೆ,  ನನ್ನನ್ನು ನೋಡಿ ಯಾವನೋ ಕುಳ್ಳ ಬಂದಿದ್ದಾನೆ,

ಆಮೇಲೆ ಹೇಳಿದ್ರೆ ಆಯ್ತು ಅಂತ, `ಕೂತ್ಕೊಳ್ಳಿ ಹೇಳ್ತೀನಿ’ ಅಂತ ಹೇಳಿ ಕೂರಿಸಿಸಬಿಡುತ್ತಾರೆ. ಅದರಿಂದ ನನಗೆ ದಪ್ಪಕ್ಷರದಲ್ಲಿ ನನ್ನ ಹೆಸರು ಜೊತೆ Ex.MLC ಅಂತ ಇರುವ ಹಾಗೆ ವಿಸಿಟಿಂಗ್ ಕಾರ್ಡ್ ಮಾಡಿಕೊಡಿ” ಎಂದು ಹಾಸ್ಯ ಚಟಾಕಿ ಹಾರಿಸಿದ್ರು. ಹೀಗೆ ಬಂದಾಗಲೆಲ್ಲಾ ಏನಾದ್ರೂ ಮೂರ್ನಾಲ್ಕು  ತಮಾಷೆ ಪ್ರಸಂಗಗಳನ್ನು ಹೇಳಿ ನಗಿಸುತ್ತಲೇ ಇರುತ್ತಾರೆ.

ಇನ್ನು ಇವರ ಜೊತೆ `ಗೋಷ್ಠಿ’ಗಳಲ್ಲಿ ಕೂತಾಗಲಂತೂ ಅವರು  ಬರೆಯದಿರುವ,  ಭಾಷಣಗಳಲ್ಲಿ ಹೇಳದಿರುವ ಹೊಸ ಹಾಸ್ಯ ಪ್ರಸಂಗಗಳನ್ನು ಹೇಳಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ… ಅವರು ಪ್ರೆಸ್‌ಗೆ ಬಂದು ವಿರಾಮವಾಗಿ ಕೂತಾಗಲೆಲ್ಲ, ಇವತ್ತು ಯಾವ ರಸಪ್ರಸಂಗ ಹೇಳಿ ನಗಿಸಲಿದ್ದಾರೆಯೋ ಎಂದು ಮನಸ್ಸೆಲ್ಲ ಅತ್ತ ಕಡೆಗೇ ಇರುತ್ತದೆ.

September 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: