ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವರ್ಣ ಹೇಳಿದ ಚಂದಲೆಯ ಕಥೆ

ಸ್ವರ್ಣ ಎನ್ ಪಿ

ಬೆಂಬತ್ತಿದ ಭೂತ ಕುಣಿಯತೊಡಗಿದ್ದು ಈ ಕಲ್ಲನ್ನು ಕಂಡಾಗ .  ಬಸದಿಗಳ ನಾಡು ಗತಿಸಿದ್ದನ್ನು ಕಣ್ಣ ಮುಂದೆ ತಂದು ನಿಲ್ಲಿಸಬಹುದೆಂದು ಗೊತ್ತಿದ್ದರೆ ಇಲ್ಲಿಗೆ ಬರುವ ಧೈರ್ಯ ಮಾಡುತ್ತಿರಲಿಲ್ಲ. ಕೆಳುವವರಿದ್ದರೆ ಕಲ್ಲೂ ಕಥೆ ಹೇಳುತ್ತದೆ. ಬದುಕಿನಲ್ಲಿ ಸುಂದರ ಕನಸುಗಳಿಗಿಂತ ಕಾಡುವ ಭೂತದ ನೆನಪುಗಳೇ ಹೆಚ್ಚು. ಕಾಲದ ಮೇರೆ ಮೀರಿ ಹರಿವ ಪ್ರವಾಹಕ್ಕೆ ಕೊಚ್ಚಿ ಹೋಗದೇ ಉಳಿದವರರಾರು ? ಈಗಿರುವ ಕಾಲದ ನೆನಪಲ್ಲ ಅದು. ಪ್ರವಾಹದೊಡನೆ ಕೊಚ್ಚಿ ಹೋಗಲು ಅಣಿಯಾಗಿ ಕುಳಿತಿದ್ದೇನೆ. ಇಂದಿಗೆಲ್ಲವೂ ಮುಗಿದು ಹೋಗಲಿ. ನಂಬಲಾರದ ನನ್ನ ವ್ಯಥೆ ಮುಗಿದು ಹೋದ ಒಂದು ಕಥೆ . ಜಿನ ದೀಕ್ಷೆ ಕೊಟ್ಟ ಗುರುವಿನ ಹೆಸರು  ನಿಸಿದಿಯೊಂದರಲ್ಲಿ ಕಂಡಾಗ ಮತ್ತೆ ಹೊತ್ತಿ ಉರಿದಿತ್ತು ಮನಸು .
ಯಾವುದು ಆ ಕಾಲ , ಸ್ಮೃತಿ ಪಟಲದಲ್ಲಿ ಮೂಡುತ್ತಿಲ್ಲ . ಸ್ಥಪತಿಯೋಬ್ಬರ ಬಳಿ ದುಡಿಯುತ್ತಿದ್ದ ಅಪ್ಪ ಆಗ ಇಲ್ಲಿ ಕಟ್ಟುತ್ತಿದ್ದ ಬೃಹತ್ ದೇವಾಲಯದ ಕೆಲಸಕ್ಕಾಗಿ ಬಂದಿದ್ದ. ಅವ್ವ ಸುಗ್ಗಬ್ಬೆ , ತಂದೆ ರಾಮದೇವ. ನನ್ನ ಹೆಸರು ಚಂದಲೆ. ‘ಚಂದಲೆ ಎಂದರೆನಬ್ಬೆ ?’ ಎಂದರೆ ‘ಚಂದಗಿರುವ ನಿನಗೆ ‘ಚಂದಲೆ’ ಎಂದಲ್ಲದೇ ಮತ್ತೇನೆಂದು ಕರೆಯಲಾದೀತು ಮಗಳೇ ?’ ಎಂದು ಮರುಪ್ರಶ್ನೆ ಹಾಕಿದ್ದಳು. ತಂದೆ ತಾಯಿಗಳ ಒಬ್ಬಳೇ ಮಗಳಾದವಳಿಗೆ ಸಿಕ್ಕ ಪ್ರೀತಿಗೆ ಎಣೆಯುಂಟೆ? ತಂದೆ ಉಳಿಯೊಂದಿಗೆ ಕೆಲಸ ಮಾಡುತ್ತಿದ್ದರೆ ನಾನಲ್ಲಿಗೆ ‘ಚನ್ ಚನ್ ‘ ಎಂಬ ಸದ್ದು ಕೇಳಲು ಹೋಗುತ್ತಿದ್ದೆ . ಆ ನಾದದೊಂದಿಗೆ ತಿಳಿದಂತೆ ಹೆಜ್ಜೆ ಹಾಕುತ್ತಿದ್ದೆ . ಆಸೆ ಅರಿತ ಅಬ್ಬೆ ನೃತ್ಯ ಕಲಿಸಲು ಗುರುಗಳ ಬಳಿಗೆ ಕರೆದೊಯ್ದಿದ್ದಳು . ಅಲ್ಲಿ ಸಿಕ್ಕವಳು ಶೀತಲೆ. ಊರಿನ ಪ್ರಮುಖರ ಮಗಳು. ಅವಳಮ್ಮ ಉತ್ತರ ದೇಶದವಳಾದ್ದರಿಂದ ತನ್ನ ಕುಲದೇವಿಯ ಹೆಸರನ್ನೇ ಮಗಳಿಗಿಟ್ಟಿದ್ದಳಂತೆ. ಅದಾವ ಋಣವೋ ಕಂಡೊಡನೆಯೇ ಶೀತಲೆ ನನಗೆಲ್ಲವೂ ಆಗಿದ್ದಳು. ಅವಳಿಗೆ ನಾನೂ ಎಲ್ಲ ಆಗಿದ್ದೆ ಎಂತಲೇ ತಿಳಿದಿದ್ದೆ ನಾನು. ದಿನವೂ ಅಭ್ಯಾಸದ ಬಳಿಕ ಅವಳ ಭವನದೆಡೆಗೆ ಸಾಗುತ್ತಿತ್ತು ನಮ್ಮ ಸವಾರಿ. ನಾ ಮರಳಿ ಬರುತ್ತಿದ್ದದ್ದು ಹೊತ್ತು ಮುಳುಗುವ ಹೊತ್ತಿಗೇ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವುದು ಮತ್ತು ಶೀತಲೆಯೊಂದಿಗಿನ ನೇಹ ಇವುಗಳನ್ನು ಬಿಟ್ಟರೆ ಬಾಲ್ಯದ ಬುತ್ತಿಯಲ್ಲಿನ್ನೇನೂ ಇರಲಿಲ್ಲ . ಊರ ಪ್ರಮುಖರ ಮಗಳಾದರೂ ನನ್ನೊಡನೆ ಸಲುಗೆಯಿಂದ ಬೆರೆವ ಅವಳನ್ನು ಕಂಡಾಗ ಎಲ್ಲ ಸುನೀತ ಭಾವಗಳೂ ಒಟ್ಟಿಗೆ ಮೂಡುತ್ತಿದ್ದವು.
ಹರೆಯ ಕಾಲಿಟ್ಟಾಗ ಅದೆಷ್ಟೋ ಕನಸುಗಳನ್ನು ಹಂಚಿಕೊಂಡೆವು . ಹಂಚಿಕೊಂಡದ್ದೆಷ್ಟು , ಕೊಟ್ಟುದೆಷ್ಟು , ಪಡೆದುದೆಷ್ಟು ಬಲ್ಲವರಾರು. ದೇವಾಲಯ ಮುಗಿವ ಹಂತಕ್ಕೆ ಬಂದಾಗ ಪರಿಶೀಲಿಸಲು ಬಂದ ರಾಜ ಹತ್ತಿರದಲ್ಲೆಲ್ಲೋ ಗೆಜ್ಜೆ ಸದ್ದು ಕೇಳಿ ಅದನ್ನನುಸರಿಸಿ ಗುರುಗಳ ಮನೆಯ ಬಳಿ ಸಾರಿ -ಸ್ವಲ್ಪ ಹೊತ್ತು ಆಲಿಸಿ ಊರ ಪ್ರಮುಖರಿಗೆ ಗೆಜ್ಜೆಯ ಕಾಲಿನ ಬಗ್ಗೆ ವಿವರ ತರುವಂತೆ ಹೇಳಿ ಹೊರಟ. ಎಂದಿನಂತೆ ಅಂದೂ ಸಾಯಂಕಾಲ ನಾ ಮನೆಯ ಕಡೆ ಹೊರಟ ಮೇಲೆ ಹಿಂತಿರುಗಿದ ಪ್ರಮುಖರು ಮಗಳನ್ನು ಕರೆದು “ಇಂದು ಬೆಳ್ಳಿಗ್ಗೆ ನಿಮ್ಮ ನೃತ್ಯಾಲಯದಿಂದ ಬಂದ ಗೆಜ್ಜೆ ಸದ್ದಿಗೆ ನಮ್ಮ ಮಹಾರಾಜರು ಮಾರುಹೋಗಿದ್ದಾರೆ ಕಣಮ್ಮ . ಯಾರಿಂದು ಬೆಳಿಗ್ಗೆ ಅಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದದ್ದು ?” ಎಂದರೆ ಶೀತಲೆ ಸರಾಗವಾಗಿ “ಅದು ನಾನೇ ಅಪ್ಪಾಜಿ ” ಎಂದಳು. ಅಂದು ಬೆಳಿಗ್ಗೆ ಸ್ನೇಹಿತೆಯರೊಂದಿಗೆ ಹೊಳೆ ದಂಡೆಗೆ ಹೋದವಳು ಬಂದದ್ದೆ ಅಭ್ಯಾಸ ಮುಗಿದ ನಂತರ ! ಗುರುಗಳೂ ಇಲ್ಲದ ಆ ಆಲಯದಲ್ಲಿ ಒಂಟಿಯಾಗಿ ನರ್ತಿಸುತ್ತಿದ್ದದ್ದು ನಾನು. ಮಾರನೆಯ ದಿನ ಬಂದ ಶೀತಲೆ ಯಾರು ಕೇಳಿದರೂ ಹಿಂದಿನ ದಿನ ಅಲ್ಲಿ ನರ್ತಿಸುತ್ತಿದ್ದದ್ದು ಅವಳೇ ಎಂದು ಹೇಳಬೇಕೆಂದು ನನ್ನಲ್ಲಿ ವಿನಂತಿಸಿಕೊಂಡಳು. ಕಾರಣವನ್ನೂ ಕೇಳದೆ ನಾ ಒಪ್ಪಿಗೆ ಇತ್ತಿದ್ದೆ.
ಪ್ರಮುಖರು ರಾಜನಿಗೆ ಮಗಳ ವಿವರ ತಿಳಿಸಿದರು. ರಾಜ ಈ ಬಾರಿ ಗೆಜ್ಜೆಯ ಸದ್ದಿನೊಂದಿಗೆ ನೃತ್ಯ ನೋಡ ಬಯಸಿದ. ವಿಷಯ ತಿಳಿದ ಶೀತಲೆ ತಾನು ಗುರುಗಳ ಹೊರತು ಬೇರಾವುದೇ ಗಂಡಸರ ಮುಂದೆ ನರ್ತಿಸುವುದಿಲ್ಲವೆಂದಳು. ತಂದೆ , ತಾಯಿಯ ಒತ್ತಾಯಕ್ಕೆ ರಾಜ ತನ್ನ ನೃತ್ಯವನ್ನು ಪರದೆಯ ಹಿಂದಿನಿಂದ ಕಾಣಬಹುದೆಂದು , ನರ್ತಿಸುವಾಗ ಚಂದಲೆಯಲ್ಲದೆ ಬೇರಾರೂ ಅವಳೊಂದಿಗಿರಕೂಡದೆಂದೂ ಶರತ್ತನಿಟ್ಟಳು. ಅಂದು ಪರದೆಯ ಮರೆಯಲ್ಲಿ ನರ್ತಿಸಿದ್ದು ಮತ್ತದೇ ನಾನು . ಮಾರನೆಯ ದಿನ ಪ್ರಮುಖರ ಮನೆಗೆ ರಾಜ ಮಾತೆಯ ಸಂದೇಶ ಹೊತ್ತ ಮೇನೆ ಬಂದಿತು. “ಮಹಾರಾಜನನ್ನು ಮದುವೆಯಾಗಲು ಒಪ್ಪಿಗೆಯೇ ? ” ಎಂಬ ಪ್ರಶ್ನೆಗೆ ಶೀತಲೆ ತನ್ನ ಶರತ್ತುಗಳಿಗೆ ಒಪ್ಪಿಗೆ ಇದ್ದರೆ ಮಾತ್ರ ಎಂದು ಉತ್ತರಿಸಿದ್ದಳು. ಅವಳೇ ಪಟ್ಟದರಸಿಯಾಗಬೇಕು ಮತ್ತು ರಾಜ ಅವಳ ಪ್ರಿಯ ಗೆಳತಿಯನ್ನೂ ವರಿಸಬೇಕು. ಯಾವ ಸುಳಿವೂ ಇಲ್ಲದೇ ನನ್ನ ಬದುಕಿನ ನಿರ್ಧಾರ ನಡೆದುಹೋಗಿತ್ತು. ‘ಆಹಾ ಎಂಥಾ ಗೆಳತಿ ತನ್ನ ಅರಮನೆಯ ಸುಖದಲ್ಲೂ ಸ್ನೇಹ ಮರೆಯಲಿಲ್ಲ ‘ ಎಂದು ಸುತ್ತಲಿನವರು ಶೀತಲಾ ದೇವಿಯನ್ನು ಹಾಡಿ ಹೊಗಳಿದರು. ಅಂದಿಗೆ ನನಗೂ ಹಾಗೆ ಅನ್ನಿಸಿತ್ತು. ಅವಳ ತಂದೆಯ ಮೂಲಕ ನನ್ನ ತಂದೆಯನ್ನು ಒಪ್ಪಿಸಿದ್ದೂ ಆಯಿತು . ಅಲ್ಲಿ ನಿರಾಕರಣೆಗೆ ಕಾರಣವಾದರೂ ಎಲ್ಲಿತ್ತು ? ಸಾಮಾನ್ಯ ಸ್ಥಪತಿಯ ಮಗಳನ್ನು ಮಹಾರಾಜ ನೋಡದೇ ಮದುವೆಯಾಗಲೊಪ್ಪಿದ್ದೇ ಸೋಜಿಗ.

“ಮಹಾರಾಜನಿಗೆ ನಿನ್ನನ್ನು ಕಂಡರೆ ಅಷ್ಟಕ್ಕಷ್ಟೇ ನಿನ್ನ ರೂಪು , ಹಿನ್ನಲೆ ಅವರಿಗೊಂದೂ ಇಷ್ಟವಿಲ್ಲವಂತೆ. ಅದಕ್ಕೆ ನಮ್ಮಿಬ್ಬರಿಗೂ ಬೇರೆ ಅಂತಃಪುರಗಳ ಏರ್ಪಾಡು ಮಾಡಿದ್ದೂ ಅವರೇ” ಮದುವೆಯಾದ ಕೆಲ ದಿನಗಳ ನಂತರ ಮಹಾರಾಣಿ ನೊಂದು ನುಡಿದಿದ್ದಳು . ಮಹಾರಾಣಿಯ ಅಂತಃಪುರಕ್ಕೂ ಉಳಿದ ರಾಣಿಯರ ಅಂತಃಪುರಕ್ಕೂ ಇರುವ ಅಂತರ ಅರಮನೆಯ ಹೊರ ಜಗತ್ತಿಗೆ ಎಂದೂ ತಿಳಿದಿಲ್ಲ. ರಾಜ ಮತ್ತೆ ನೃತ್ಯ ನೋಡಲೇ ಬೇಕೆಂದಾಗ ಒಂದೇ ಒಂದು ಬಾರಿ ಪರದೆಯ ನಾಟಕ ನಡೆಯಿತು. ಕಲಾಭಿಮಾನಿಯಾಗಿದ್ದ ಮಹಾರಾಜ ಅರಸಿ ನೃತ್ಯಾಭ್ಯಾಸ ಮುಂದುವರೆಸಲು ಅನುಮತಿ ಇತ್ತಿದ್ದ. ಆದರೆ ಅಲ್ಲಿ ಅಭ್ಯಾಸ ಮಾಡುತ್ತಿದ್ದುದು ನಾನು .ಅನುಮತಿ ದೊರೆತಿರುವುದು ನನಗೆ ಮಾತ್ರ , ನಿನಗೂ ಅನುಮತಿ ಬೇಡಿದರೆ ಮಹಾರಾಜ ಒಪ್ಪದೇ ಹೋಗಬಹುದು , ಅವರು ಒಪ್ಪಿದರೂ ರಾಜಮಾತೆ ನಿರಾಕರಿಸಬಹುದು ಎಂದಿದ್ದಳು ಗೆಳತಿ, ಎಂದಿನಂತೆ ನಾನು ತಲೆಯಾಡಿಸಿದ್ದೆ. ಗಂಡನಾಗಿ ಮಹಾರಾಜ ನನಗೆ ದೊರೆತದ್ದು ಅತೀ ಕಡಿಮೆ. ಒಂದೊಮ್ಮೆ ದೊರೆತರೆ “ಒಂದು ಹೆಣ್ಣಿಗಾಗಿ ಹೀಗೆ ಮತ್ತೊಂದು ಹೆಣ್ಣನ್ನು ಒಲ್ಲದೆ ವರಿಸುವುದು ಸರಿಯೇ ?” ಎಂದು ಕೇಳಬೇಕೆಂದಿದ್ದೆ , ಹಾಗಾಗಲಿಲ್ಲ. ಮಹಾರಾಜ ನನ್ನ ಅಂತಃಪುರಕ್ಕೆ ಬರುವನೆಂಬ ಸುಧ್ಧಿ ಬಂದ ಕೆಲವೇ ಕ್ಷಣಗಳಲ್ಲಿ ಇಲ್ಲವೆಂಬ ಸುಧ್ಧಿಯೂ ಬರುತ್ತಿತ್ತು . ಪ್ರತೀ ಬಾರಿಯೂ ಮಹಾರಾಣಿಗೆ ಆರೋಗ್ಯ ತಪ್ಪುತ್ತಿತ್ತು , ಪಗಡೆಯಾಡುವ ಹುಕಿ ಬರುತ್ತಿತ್ತು ಏನೂ ಇಲ್ಲದಿದ್ದರೆ ರಾಜನೊಡನೆ ಮಹಡಿಯಲ್ಲಿ ಕುಳಿತು ಬೆಳದಿಂಗಳನ್ನು ಸವಿಯುವ ಆಸೆಯಾಗುತ್ತಿತ್ತು . ಸದಾ ಮಹಾರಾಣಿಯ ನೆರಳಾಗಿ ಮೂಗಳಂತಿರುವ ನನ್ನ ಮೇಲೆ ಪತಿಗೂ ಕುತೂಹಲವಿರಲಿಲ್ಲವೇನೋ ? ಕನಸುಗಳ ಮೆರವಣಿಗೆ ಮುಗಿವ ಮುನ್ನ ಹಸೆಮಣೆ ಏರಿ ಅಂತಃಪುರದ ಒಂಟಿಲೋಕಕ್ಕೆ ಕಾಲಿಟ್ಟಾಗಿತ್ತು.

ಎಲ್ಲದರ ನಡುವೆ ಪಟ್ಟದರಸಿ ಪುತ್ರನನ್ನೂ ಪಡೆದಳು. ಮಗನೊಂದಿಗೆ ರಾಣಿ ವ್ಯಸ್ತಳಾಗಿದ್ದ ರಾತ್ರಿಗಳಲ್ಲಿ ರಾಜ ಇನ್ನಿತಿರ ರಾಣಿಯರ ಕೋಣೆಗೆ ಬಂದಂತೆ ನನ್ನಲ್ಲಿಗೂ ಬಂದ . ಪ್ರಶ್ನೆ ಕೇಳುವ ಆಸೆ ಬಾಡಿ ಹೋಗಿತ್ತು. ಮಹಾರಾಜ ಯಾವಾಗ, ಯಾವುದಕ್ಕೆ ವ್ಯಗ್ರನಾಗುತ್ತಾನೋ ಗೊತ್ತಿಲ್ಲ , ಹಾಗಾದಾಗ ಅವನು ಏನೂ ಮಾಡಬಲ್ಲ ಎಂಬ ಹೆದರಿಕೆ ಗೆಳತಿಯ ದೆಸೆಯಿಂದ ನನ್ನಲ್ಲಿ ಬಲವಾಗಿ ಬೇರೂರಿತ್ತು. ಪತಿ ಕೇಳಿದ ಪ್ರಶ್ನೆಗಳಿಗೆ ಒಂದೆರಡು ಶಬ್ದದ ಉತ್ತರಕ್ಕಾಗಿ ಮಾತ್ರ ಬಾಯಿ ತೆರೆಯುತ್ತಿದ್ದೆ . ಮಹಾರಾಜನೊಂದಿಗೆ ನಾನೆಂದೂ ತೆರೆದುಕೊಳ್ಳಲಿಲ್ಲ . ಎರಡು ವರ್ಷದ ವರ್ಷದ ನಂತರ ನನಗೂ ಒಬ್ಬ ಮಗ ಹುಟ್ಟಿದ. ಶೀತಲೆ ಆಗಾಗ ಮಹಾರಾಜನೊಂದಿಗೆ ರಾಜ್ಯ ಸಂಚಾರಕ್ಕೆ ಹೋಗುತ್ತಿದ್ದಳು. ಅವರೊಂದಿಗೆ ಇನ್ನೊಂದಿಬ್ಬರು ರಾಣಿಯರು. ಅವಳ ಮತ್ತು ನನ್ನ ಮಗನನ್ನು ಸಂಭಾಳಿಸುತ್ತಾ ನಾನು ಮತ್ತೆ ಪರದೆಯ ಹಿಂದೆ ಉಳಿಯುತ್ತಿದ್ದೆ. ” ಪುತ್ರ ಸಣ್ಣವನು ಕರೆದೊಯ್ಯಲಾರೆ ನೀನಲ್ಲದೇ ಇನ್ನಾರೊಟ್ಟಿಗೂ ಬಿಟ್ಟು ಹೋಗಲಾರೆ” ಎಂಬ ಮಾತನ್ನು ನಾನೂ ಪೂರ್ತಿಯಾಗಿ ನಂಬಿದ್ದೆ . ಅವಳು ನನ್ನ ಮಗನಿಗೆ ದೊಡ್ಡಮ್ಮಳಾದಳು ನಾನು ಯುವರಾಜನಿಗೆ ಚಂದಮ್ಮಳಾದೆ .
ಒಂದು ಬಾರಿ ಮಹಾರಾಜ ಕೇಳಿಯೂ ಕೇಳಿದ “ಇಷ್ಟೊಂದು ಮೌನ ನಿನಗೆ ಹೇಗೆ ಸಾಧ್ಯ ? ಗೆಳತಿಯನ್ನು ಬಿಟ್ಟರೆ ನಿನಗೆ ಬೇರೆ ಲೋಕವಿಲ್ಲವೇ? ” ಮತ್ತೆ ಉತ್ತರ ಕೊಡಲಾಗದ ಸ್ಥಿತಿ ನನ್ನದು . ಗೆಳತಿ ಹೇಳಿದ್ದು ಬಿಟ್ಟು ಬೇರಾವುದನ್ನು ಕೇಳಲು ಕಿವಿ ಇರಲಿಲ್ಲ .
ಪಟ್ಟದರಸಿಯ ಮಗ ಮುಂದಿನ ರಾಜ ಉಳಿದ ಮಕ್ಕಳು ಅವನ ಊಳಿಗಕ್ಕೆ. ಇದು ಸಾಮಾನ್ಯ ಪಧ್ಧತಿ . ಆದರೆ ಯುವರಾಜ ಪಟ್ಟಾಭಿಷೇಕವಾದ ಒಂದೆರಡು ವರ್ಷಕ್ಕೆ ಇತರ ರಾಣಿಯರ ಕೆಲ ಮಕ್ಕಳು ಯುವರಾಜನಿಲ್ಲದೆ ನಾವೂ ಬಾಳೆವೆಂದು ಕಂಕಣ ಕಟ್ಟಿಕೊಂಡರು.ಮಗನ ಬದುಕು ನಾನೇ ಸಾಕಿದ ಯುವರಾಜನ ಬದುಕಿನ ಮೇಲೆ ನಿರ್ಭರವಾಗಿದೆ ಎಂದರೆ ಅದೇಕೋ ಅರಗಿಸಿಕೊಳ್ಳಲಾಗಲಿಲ್ಲ. ಒಂದು ರಾತ್ರಿ ಮಗ ಉಣ್ಣಲು ಕುಳಿತಾಗ ಕೇಳಿದೆ
” ಮಗು ಇದೇನು ಮಾಡಿದೆ ? ಯುವರಾಜನಿಗೆನಾದರೂ ಆದರೆ ?”
“ಆದರೇನಮ್ಮ , ಆ ಕ್ಷಣವೇ ನನ್ನದೂ ಕಡೆಯ ಉಸಿರು ” ತಾಯಿ ಕೇಳಬಾರದ ಮಾತುಗಳು. ಒಂದೆರಡು ಕ್ಷಣದ ನಂತರ ಮಗನೆಂದ “ನಿನ್ನಾಸೆಯೂ ಇದೇ ಅಲ್ಲವೇನಮ್ಮ?”
“ನಾನೆಲ್ಲಿ ಹೇಳಿದೆ ?”
“ದೊಡ್ಡಮ್ಮ ಹೇಳಿದರಮ್ಮ ”
ಹೀಗಾಗಬಹುದೆಂಬ ಅನುಮಾನವೂ ಇರದ ತಾಯಿ ಏನು ಹೇಳಿಯಾಳು ?
“ಮೋಸ ” ಎಷ್ಟೋ ಹೊತ್ತಿನ ನಂತರ ನನ್ನ ಬಾಯಿಂದ ಬಂದ ಎರಡಕ್ಷರ .
“ಇಷ್ಟು ವರ್ಷ ಮಾಡಿದ್ದಕ್ಕಿಂತ ದೊಡ್ಡದೇನಮ್ಮ ? ” ಮಗ ದೃಢವಾಗಿ ಕೇಳಿದ್ದ .
“ಪೆಟ್ಟಿಗೆಯಲ್ಲಿರುವ ಗೆಜ್ಜೆಗಳನ್ನು ದಿನವೂ ನೀನು ನೋಡುವುದನ್ನು ಕಂಡಿದ್ದೇನಮ್ಮ. ಅಜ್ಜಿ ಸತ್ಯ ಹೇಳಿದ್ದಾಳೆ ”
ಅಬ್ಬೆಗೆ ತಿಳಿದಿಲ್ಲವೆಂದುಕೊಂಡಿದ್ದೆ.
ಒಂದೆರಡು ಕ್ಷಣ ನಿಂತ ಮಗ ಹೊರಟು ಹೋದ. ಕಪ್ಪು ರಾತ್ರಿ ಸತ್ಯ ದರ್ಶನ ಮಾಡಿಸಿತ್ತು.

ಅವಳಿಗೇನೂ ಹೇಳಲು , ಕೇಳಲು ಉಳಿದಿರಲಿಲ್ಲ. ಅಬ್ಬೆಗೆ ಸತ್ಯ ಯಾವಾಗ ತಿಳಿದದ್ದು ? ಶೀತಲೆಯ ಬಗೆಗಿನ ನನ್ನ ಪ್ರೀತಿ ಗೊತ್ತಿದ್ದ ಅಬ್ಬೆ ನನ್ನ ನಂಬಿಕೆ ಒಡೆಯಬಾರದೆಂದು ಸುಮ್ಮನಿದ್ದಳೋ ? ಅವಳಿಗೆ ಸತ್ಯ ದರ್ಶನವಾದಾಗ ಅದಾಗಲೇ ತಡವಾಗಿತ್ತೋ ? ಉತ್ತರದ ಅಗತ್ಯವಿರಲಿಲ್ಲ. ಬದುಕಿನ ಕನ್ನಡಿ ತೋರಿಸಿದ ಬಿಂಬಕ್ಕೆ ಬೆನ್ನು ತೋರಿಸಿದ್ದೆನೇ ? ಅವಳ ಸತ್ಯ ಅರಿಯದೇ ಹೋದೆನೇ ? ಒಡನಾಡಿಗಿಂತ ಹೆಚ್ಚು ಸುಖ ತನಗೊದಗಬೇಕೆಂಬುದು ಮಾನವ ಸಹಜ ಆಸೆಯಲ್ಲವೇ ? ನಂಬಿಕೆ ಒಡೆದರೆ ಅದೇಕೋ ಈ ಬದಿಯವರಿಗೇ ನೋವು ಹೆಚ್ಚು ಆಚೆ ದಡದವರು ನಂಬಿಸಿ ಗೆದ್ದೆ ಎಂದು ಬೀಗುವುದೇ ಹೆಚ್ಚು. ಸುಳ್ಳಿನಾಸರೆ ಇಲ್ಲದೆಯೂ ಅವಳು ಆಸೆ ಪಟ್ಟಂತೆಯೇ ನಾ ನಡೆಯುತ್ತಿದ್ದೆ. ಮಗ ಪ್ರಶ್ನೆ ಕೇಳುವವರೆಗೂ ಅನುಮಾನ ಸುಳಿದಿರಲಿಲ್ಲ. ನೇಹದ ನಾಟಕ ಭಾವ ಮೂಲವನ್ನೇ ಅಲ್ಲಾಡಿಸಿತ್ತು.
ಅದೆಷ್ಟೋ ದಿನಗಳು ಮಾತಿಲ್ಲದೇ ಕಳೆದೆ . ನಂತರ ಮೌನ ದಕ್ಕಿತು. ತಡೆದು ನಿಲ್ಲಿಸುವಂಥಾ ಯಾವ ಬಂಧಗಳೂ ಅರಮನೆಯಲ್ಲಿ ಉಳಿದಿರಲಿಲ್ಲ ಅಥವಾ ನಾನೇ ಅವೆಲ್ಲದರಿಂದಲೂ ದೂರ ಉಳಿದಿದ್ದೆ. ಅಬ್ಬೆ , ತಂದೆ ಇನ್ನಿಲ್ಲವಾಗಿದ್ದರು . ಶೀತಲೆಯೊಂದಿಗೆ ಆಡಬಹುದಾದ , ಆಡಬೇಕಾದ ಯಾವ ಮಾತೂ ನೆನಪಾಗಲಿಲ್ಲ ಅಥವಾ ಇರಲೇ ಇಲ್ಲ
“ಮೊಲೆವಾಲ ಪ್ರೀತಿ ನಂಜಾಗದಿರಲಿ ಶೀತಲೆ ” ಎಂಬ ಕಡೆಯ ಮಾತನ್ನು ಪತ್ರದಲ್ಲಿರಿಸಿದೆ.
“ನನ್ನ ಬದುಕಿನ ಭ್ರಮೆಗಳನ್ನು ದೂರಾಗಿಸಿದ ಗುರು ನೀನು. ನಿನ್ನ ಬದುಕು ಬಂಗಾರವಾಗಿರಲಿ ಎಂದಷ್ಟೇ ಹಾರೈಸಬಲ್ಲೆ ಮಗು. ನಂಬಿಕೆಯನ್ನು ಕಾಯ್ದುಕೋ ” ಎಂದು ಮಗನಿಗೆ ಬರೆದು ಅದೊಂದು ರಾತ್ರಿ ಅರಮನೆಯಿಂದ ಹೊರಟೆ. ನೂಪುರದ ವ್ಯಾಮೋಹ ಬಿಡಲಾಗದೆ ಅದೊಂದನ್ನು ಮಾತ್ರ ಅಲ್ಲಿಂದ ತಂದೆ. ನಂತರದ ಬದುಕನ್ನು ರಾಜ್ಯದ ಯಾವುದೋ ಹಳ್ಳಿಯಲ್ಲಿ ಅನಾಮಿಕಳಾಗಿ ಕಳೆದೆ.
ಒಂದಷ್ಟು ವರ್ಷಗಳ ನಂತರ ಮಗ ಊರ ಪ್ರಮುಖನಾಗಿರುವ ಸುಧ್ಧಿ ತಿಳಿಯಿತು . ಶೀತಲೆಯನ್ನೊಮ್ಮೆ ಕಂಡು ಅವಳ ಪಶ್ಚಾತ್ತಾಪದ ಬೇಗೆಯನ್ನು ಕಡಿಮೆ ಮಾಡಲೇ ಎಂಬ ಯೋಚನೆಯೂ ಬಂದಿತ್ತು . ಹೊತ್ತಿ ಉರಿದ ಎಲ್ಲ ಬೇಗೆಯೂ ಒಂದಿಲ್ಲೊಂದು ದಿನ ನಂದಬೇಕು , ರಾಡಿಯಾದ ನೀರು ತಿಳಿಯಾಗಲೇ ಬೇಕು ಎಂಬ ಸತ್ಯ ಹಿಂದೆಯೇ ಅರಿವಿಗೆ ಬಂದು ಹೆಜ್ಜೆಯನ್ನು ಹಿಂದಿಟ್ಟೆ.
ಆಗ ರಾಜನ ಧರ್ಮವೇ ಅವನ ಅರಮನೆಯವರ ಧರ್ಮವೂ ಆಗುತ್ತಿತ್ತು . ರಾಜ ಜಿನ ದೀಕ್ಷೆ ತೆಗೆದುಕೊಂಡಾಗ ನಾವೆಲ್ಲರೂ ಆತನನ್ನು ಅನುಸರಿಸಿದ್ದೆವು. ದೀಕ್ಷಾಗುರುವಿನ ನಿಸಿದಿಯಿಂದಾಗಿ ಚಂದಲೆ , ಶೀತಲೆಯರಿಗೆ ಮತ್ತೆ ಜೀವ ಬಂದಿದೆ. ಯಾರನ್ನೂ ನಂಬಲಾರದ ನನ್ನ ನೋವು ಹಾಡಾಗಿದೆ.

‍ಲೇಖಕರು G

30 July, 2015

9 Comments

  1. Kiran

    A very poignant, beautiful poetry…

  2. Bharathi b v

    ಸ್ವರ್ಣ ಎಂಥ ಚೆಂದ ಬರ್ದಿದ್ದೀಯ … ಪ್ರತಿಯೊಂದು ಸಾಲೂ ಮನಸ್ಸಿನಲ್ಲಿ ನಿಂತು ಬಿಟ್ಟಿತು …

  3. Praveen V Savadi

    ಸ್ವರ್ಣ ಅವರೇ,ಎಷ್ಟು ಸುಂದರವಾಗಿ ಬರೆದಿದ್ದೀರಿ…ಬರಹವಂತೂ ಚಂದದ ಚಂದಲೆಯ ನಂಬಿಕೆಯ ಛಾಯಾಗ್ರಹಣ…ಅಲ್ಲಿ ಬರುವ ಸನ್ನಿವೇಶಗಳು, ಪಾತ್ರಗಳು ಅವುಗಳ ಮನೋಧರ್ಮಗಳು…ಒಂದಾನೊಂದು ಕಾಲದಲ್ಲಿ ನಡೆದಿರಬಹುದಾದ ದೃಶ್ಯಗಳು… ಅವೆಲ್ಲವನ್ನೂ ಅಚ್ಚುಕಟ್ಟಾಗಿ ಸ್ಮೃತಿ ಪಟಲದ ಮೇಲೆ ಮೂಡಿಸಿದಂತ ಬರಹ…
    ಕಥೆಯಲ್ಲಿ, ಪಾತ್ರಗಳಿಗೆ ಮನೋಧರ್ಮಗಳ ಹಂಚಿಕೆ ತುಂಬ ಇಷ್ಟವಾಯಿತು… ಆ ರಾಜನಿಗೆ, ಅಂದವಾದದ್ದು, ಚಂದವಾದದ್ದು, ಇಷ್ಟವಾದದ್ದು ಎಲ್ಲವೂ ತನ್ನ ಅರಮನೆಯ ಸೇರಬೇಕೆನ್ನುವ ದುರಾಸೆ. ಊರ ಪ್ರಮುಖ ಅಂದರೆ ವ್ಯವಹಾರ ಚತುರ ಅವರ ಮಗಳಲ್ಲವೇ ಶೀತಲೆ! ಗೆಳತಿಗೆ ಧ್ರೋಹ ಮಾಡಿಯಾದರೂ ರಾಜನ ದುರಾಸೆಯ ಸದುಪಯೋಗ ಮಾಡಿಕೊಂಡಳು. ಕಲ್ಲಿನಲ್ಲಿ ಮೂರ್ತಿಯನು ಮಾಡಲು ಬಂದ ರಾಮದೇವನ ಮಗಳಲ್ಲವೇ ಚಂದಲೆ!,ಕಲ್ಲಿನಂತ – ಶೀ(ತ)ಲೆ ಯಲ್ಲಿ ನಂಬಿಕೆಯನಿಟ್ಟು ರಾಜನ ಅರಮನೆಯ ಸೆರೆಮನೆಯ ಸೇರಿದಳು,ಮೋಸ ಅರಿತು ದೂರ ಸರಿಯುವಾಗಲು ಮಗನಿಗೆ ಹೇಳಿದ್ದು ನಂಬಿಕೆಯನ್ನು ಕಾಯ್ದುಕೋ…ಕೊನೆಯಿಂದ ಎರಡನೇ ಪ್ಯಾರ ವಂತೂ ಕಥಾನಾಯಕಿಯ ಮನೋಧರ್ಮದ ಉತ್ಕ್ರುಷ್ಟತೆಯೇ ಸರೀ… ಧನ್ಯವಾದಗಳು.

  4. Nagesha M N

    ತುಂಬಾ ಚೆನ್ನಾಗಿದೆ …ಕಾವ್ಯ ರೂಪದ ಕಥೆ !

  5. chethan

    beautifulll madm

  6. Jayaram

    ಕತೆ ಅದ್ಭುತವಾಗಿದೆ ..
    ಥಾಂಕ್ ಯು

  7. Mallappa

    ಮುಗ್ಧ ಮನಸ್ಸಿನ ಮೇಲೆ ವ್ಯವಹಾರಿಕ ಪ್ರೌಢ ಮನಸ್ಸಿನ ಸವಾರಿಯ ಸುಂದರ ಚಿತ್ರಣ ಸೂಕ್ಷ ವಿವರ ಗಳೊಂದಿಗೆ ಮೂಡಿ ಬಂದಿದೆ.”ಮೊಲೆವಾಲು ನಂಜಾಗದಿರಲಿ” ಎನ್ನುವ ಪ್ರಜ್ಞೆ ಮೂಡುವ ಹೊತ್ತಿಗೆ ಜೀವನವೇ ಮಂಜಾಗಿ,ಮಬ್ಬಾಗಿ ಮಸಣದತ್ತ ಧಾವಿಸಿರತ್ತೆ.ಎದುರಿಗೆ ಇದ್ದ ಮನಸ್ಸಿಗೆ ಈ ಸತ್ಯ ಗೊತ್ತಿಲ್ಲದೇ ಏನಿಲ್ಲ. ಎಲ್ಲಾ ಗೊತ್ತು. ಚದುರಂಗದ ನಡೆ ಗೊತ್ತಿದ್ದೇ ಸರಿಯಾದ ಗಾಳ,ಸರಿಯಾದ ನಿಟ್ಟಿನಲ್ಲಿ ನಡೆದಿರುತ್ತದೆ.ನಾವು ಹೇಳುವ “ನಂಜಾಗದಿರಲಿ” ಸ್ವೀಕರಿಸಿ ಬದಲಾವಣೆ ನಿರೀಕ್ಷಿಸಿದ್ದರೆ ಅದು ನಮ್ಮ ಭ್ರಮೆ. ಭ್ರಮೆ ಒಡೆದು ಜೀವದ ದಿಕ್ಕು ಬದಲಾಯಿಸಿ ಅಜ್ಞಾತದಲ್ಲಿ ನೆಮ್ಮದಿ ಕಂಡು ಕೊಂಡ ಬಳಿಕ,ಅನಾಮಿಕಳಾಗಿ ಮನ ಒಪ್ಪುವ ನೃತ್ಯ ದಲ್ಲಿ ದರ್ಶನ ಕಂಡಾಗ ಮತ್ತೇಕೆ “ರಾಜ ಜಿನ ದೀಕ್ಷೆ ತೆಗೆದುಕೊಂಡಾಗ ನಾವೆಲ್ಲ(?) ” ಚಂದೆಲೆ ಯಾಕೆ ಅನುಸರಿಸಿ ಬೇಕು? ಒಮ್ಮೆ ಭ್ರಮೆಗೊಳಗಾ್ದ ಮನ ಎಷ್ಟೇ ಪ್ರಯತ್ನ ಪಟ್ಟರೂ ಮತ್ತೆ ಮತ್ತೆ ಭ್ರಮಾಲೋಕ ಸೃಷ್ಟಿಸಿ ದೀಪದ ಹುಳುವಿಂತೆ ಈ ಸಂದೇಶ ಕೊಡ ಬಯಸುತ್ತಾರಾ ಲೇಖಕಿ? ಕೊನೆಯ ಪ್ಯಾರಾ ಅವಸರದ ಮುಕ್ತಾಯ ಹಾಗು ಗೊಂದಲವಾಗಿದೆ.ಲೇಖಕಿಯೇ ಆಶಯ ದಯವಿಟ್ಟು ತಿಳಿಸಲಿ

  8. ಸ್ವರ್ಣಾ

    ಪ್ರತಿಕ್ರಿಸಿದ ತಮಗೆಲ್ಲರಿಗೂ ವಂದನೆಗಳು.
    ಮಲ್ಲಪ್ಪನವರೇ, ಆಕೆ ಜಿನ ದೀಕ್ಷೆ ತೆಗೆದುಕೊಳ್ಳುವುದು ರಾಜನ ಅರಮನೆಯಲ್ಲಿದ್ದಾಗ ಹಾಗಾಗಿ ಭೂತ ಕಾಲದ ನೆನಪು.
    ಕಥೆಯ ಆಶಯ ಪ್ರೀತಿಯ ನಟನೆ ಕೊಡಬಹುದಾದ ನೋವು ಮತ್ತು ಅದೆಲ್ಲದರಿಂದ ಮೇಲೇರಿ ‘ನಾನು ‘ ‘ನಾನಾಗುವ’ ಪರಿ.

  9. Mallappa

    ದನ್ಯವಾದಗಳು ಸ್ವರ್ಣ ಅವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading