ಸ್ವರ್ಣ ಓದಿದ ಚಿನುವಾ ಅಚಿಬೆ..

ಸ್ವರ್ಣಾ ಎನ್ ಪಿ

ನೈಜಿರಿಯಾದ ಬರಹಗಾರ ಚಿನುವ ಅಚಿಬೆ ಬಗ್ಗೆ ಮೊದಲ ಬಾರಿ ಓದಿದ್ದು ಬಹುಶಃ ಅವಧಿಯಲ್ಲಿ. ಆತನ ಪುಸ್ತಕಗಳಲ್ಲಿ ಮೊದಲು ಓದಿದ್ದು ‘Things Fall Apart’. 80 ಲಕ್ಷಕ್ಕೂ ಹೆಚ್ಚು ಮಾರಾಟವಾಗಿರುವ, ಜಗತ್ತಿನ ೧೦೦ ಪ್ರಸಿಧ್ಧ ಕಾದಂಬರಿಗಳ ಪಟ್ಟಿಯಲ್ಲಿ ಸ್ಥಾನಪಡೆದ ಪುಸ್ತಕ. ಈ ಅಂಕಿ ಅಂಶಗಳನ್ನು ಕಾದಂಬರಿಯ ಇನ್ನಿತರ ವಿವರಗಳನ್ನು ನಾನು ಜಾಲಾಡಿದ್ದು ಓದಿದ ನಂತರ. ‘ಮಾನವನ ಕೈಗೆ ಬಾಣ ಕೊಟ್ಟ ದೈವ ಹಕ್ಕಿಯ ರೆಕ್ಕೆಗೆ ಕಸುವು ತುಂಬುವುದನ್ನೂ ಮರೆಯಲಿಲ್ಲ’. ‘ಉರಿವ ಬೆಂಕಿ ನಿಶಕ್ತ ಬೂದಿಯನ್ನೂ ಕೂಡ ಹೆರುತ್ತದೆ’. ಈ ರೀತಿಯ ಸಾಲುಗಳು ಇಂಗ್ಲೀಷ್ ಶಬ್ಧಕೋಶಕ್ಕೆ ಹೆದರುವ ನನ್ನನ್ನೂ ಕಥೆಯೊಳಗೆ ತೂರಿಕೊಳ್ಳುವಂತೆ ಮಾಡಿದವು .
ಒಕೊಂಕೋ ( Okonkwo) ಎಂಬ ಪಾತ್ರದ ಸುತ್ತ ಹೆಣೆಯಲ್ಪಟ್ಟ ಕಥೆಯಲ್ಲಿ ಎಲ್ಲವೂ ಇದೆ. ನೈಜಿರಿಯಾದ ಇಬೋ (Ibo) ಜನಾಂಗದ ಸಂಸ್ಕೃತಿ , ಪ್ರೀತಿ , ಪ್ರೇಮ, ಹತಾಷೆ, ವಿಷಾದ, ಸೋಲು,ಗೆಲುವು,ದೇವರು, ಧರ್ಮ, ಆತ್ಮ , ದ್ವೇಷ, ಯುಧ್ಧ, ಬದುಕು ಮತ್ತೆಲ್ಲವೂ. ಕೊಳಲನ್ನು ಪ್ರೀತಿಸುವ ಬದುಕಿನ ಬಗ್ಗೆ ತನ್ನದೇ ಆದ ನಿರ್ಲಿಪ್ತತೆ ಹೊಂದಿದ ತಂದೆಯ ಮಗನಾದ ಒಕೊಂಕೋನ ಮೂಲ ಮಂತ್ರ ಮೇಲೇರುವುದು .ಶಕ್ತಿ ಮತ್ತು ಛಲದಿಂದ ಮೇಲೇರಿದ ನಾಯಕ ಇಬೋ ಗುಂಪಿನ ಮೂವರು ಪ್ರಮುಖರಲ್ಲಿ ಒಬ್ಬನಾಗುತ್ತಾನೆ . ಕುಟುಂಬವೊಂದರ ಕಥೆಯಾಗಿ ಪ್ರಾರಂಭವಾಗುವ ಕಾದಂಬರಿ ಜನಾಂಗದ , ಸಂಸ್ಕೃತಿಯ, ಹೋರಾಟದ ಕಡೆಗೆ ಅವನತಿಯ ಕಥೆಯಾಗಿ ಬೆಳೆಯುತ್ತದೆ. ಮೂವರು ಹೆಂಡಂದಿರೊಂದಿಗೆ ಬದುಕು ಕಟ್ಟಿಕೊಳ್ಳುವಷ್ಟರಲ್ಲಿ ಒಕೊಂಕೋ ಕುಟುಂಬಕ್ಕೆ ಬಂದೊದಗುವ ಸಮಸ್ಯೆ ಓದುಗನನ್ನೂ ಕಲಕುತ್ತದೆ.
ಒಕೊಂಕೋಗೆ ಮೂವರು ಹೆಂಡತಿಯರು. ಗಂಡ ಹೆಂಡತಿಯರು ಅಕ್ಕ ಪಕ್ಕವಿರುವ ಪ್ರತ್ಯೇಕವಾದ ನಾಲ್ಕು ಹಟ್ಟಿಗಳಲ್ಲಿ ಬದುಕುತ್ತಾರೆ . ಸಾಮಾನ್ಯವಾಗಿರುವಂತೆ ಇಲ್ಲೂ ಗಂಡಸಿಗೆ ಎಲ್ಲಿ ಉಣ್ಣ ಬೇಕು , ಯಾರೊಂದಿಗಿರಬೇಕು ಎಂಬಿತ್ಯಾದಿ ಸ್ವಾತಂತ್ರ್ಯಗಳಿವೆ . ಈ ವಿವರಗಳು ಇಬೋ (Ibo) ಜನಾಂಗದ ರೀತಿನಿಗಳನ್ನು ಪರಿಚಯಿಸುತ್ತದೆ . ಮೂವರು ಹೆಂಡಿರಲ್ಲಿ ಎರಡನೇ ಹೆಂಡತಿ ಏಕ್ವೆಫಿಗೆ (Ekwefi) ಒಕೊಂಕೋ ನಲ್ಲಿ ಸ್ವಲ್ಪ ಸಲಿಗೆ ಇದೆ , ಉಳಿದವರು ಬಾ ಎಂದಾಗ ಬಂದು, ಬಡಿದಾಗ ಬಡಿಸಿಕೊಳ್ಳುವ ಬಾಯಿ ಸತ್ತವರು . ಈ ಎರಡನೆಯವಳು ಅವನನ್ನು ಮೆಚ್ಚಿ ಮದುವೆಯಾದದ್ದೇ ಮತ್ತೊಂದು ಕಥೆ. ವಧುದಕ್ಷಿಣೆ ಕೊಡಲಾಗದ ಒಕೊಂಕೋನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗಿ , ಇವನನ್ನು ಬಿಟ್ಟಿರಲಾರದೆ ನಂತರದಲ್ಲಿ ಇವನ ಮನೆಯ ಹೊಸ್ತಿಲು ತುಳಿದವಳು,ಒಕೊಂಕೋನ ಎದುರು ನಿಂತು ಮಾತನಾಡುವ ಧೈರ್ಯ ಉಳ್ಳವಳು . ಅವಳ ಒಂಬತ್ತು ಮಕ್ಕಳು ಸತ್ತು ಮಗಳು (ಏಜಿನ್ಮ- Ezinma) ಮಾತ್ರ ಬದುಕಿದ್ದಾಳೆ. ಸಾಲು ಸಾಲು ಮಕ್ಕಳನ್ನು ಕಳೆದು ಕೊಂಡ ತಾಯಿಗೆ ಉಳಿದ ಮಗುವೇ ಪ್ರಪಂಚವಾಗುತ್ತದೆ . ಮಗಳಿಗಾಗಿ ಸಾವನ್ನೂ ಎದುರಿಸಲು ಸಿಧ್ಧವಾಗುವ ತಾಯಿಯಾಗಿ ಏಕ್ವೆಫಿ ನೆನಪಿನಲ್ಲುಳಿಯುತ್ತಾಳೆ.

ಏಕ್ವೆಫಿಯಂತೆ ಭಿನ್ನವಾಗಿ ನಿಲ್ಲುವ ಮತ್ತೊಂದು ಪಾತ್ರ ಇಕೆಮೆಫುನ (Ikemefuna) ಎಂಬ ಹುಡುಗನದು . ಇಬೋ ಹೆಂಗಸೊಬ್ಬಳನ್ನು ಪಕ್ಕದ ಬೈನೋ (Mbaino) ಎಂಬ ಜನಾಂಗದವರು ಕೊಲ್ಲುತ್ತಾರೆ. ಸತ್ತ ಹೆಂಗಸಿನ ಗಂಡನಿಗೊಬ್ಬಳು ಬೈನೋ ಹುಡುಗಿಯನ್ನೂ ಮತ್ತು ಒಬ್ಬ ಬೈನೋ ಹುಡುಗನನ್ನೂ ಇಬೋಗಳಿಗೊಪ್ಪಿಸಬೇಕೆಂದು ನ್ಯಾಯ ತೀರ್ಮಾನವಾಗುತ್ತದೆ . ಹೀಗೆ ಬಂದ ಹುಡುಗ ಇಕೆಮೆಫುನ. ಸ್ವಲ್ಪ ಕಾಲ ಅವನು ಒಕೊಂಕೋ ಕುಟುಂಬದೊಂದಿಗೆ ವಾಸಿಸುತ್ತಾನೆ. ಒಕೊಂಕೋನ ಕುಟುಂಬ ಮತ್ತು ಆ ಹುಡುಗನ ನಡುವೆ ಏರ್ಪಡುವ ಸಂಬಂಧ ನಂತರ ಊರ ಪ್ರಮುಖರ ತೀರ್ಮಾನದಂತೆ ಅವನನ್ನು ಕೊಲ್ಲಬೇಕಾಗಿ ಬಂದಾಗ ಒಕೊಂಕೋ ಅನುಭವಿಸುವ ತುಮುಲ ಅವನ ವ್ಯಕ್ತಿತ್ವದ ಮತ್ತೊಂದು ಮಜಲು .
ಒಕೊಂಕೋನ ಸ್ನೇಹಿತ ,ದೇವರ ಕಟ್ಟೆಯ ಪೂಜಾರಿ,ಅಪ್ಪನ ನೆರಳಿನಿಂದ ಹೊರಬರಲಾರದೆ ಒದ್ದಾಡುವ ಒಕೊಂಕೋನ ಮಗ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ತೆರೆದುಕೊಳ್ಳುವ ನೈಜಿರಿಯಾದ ಹಳ್ಳಿಯ ಕಥೆ ಯಾವುದೇ ಹಳ್ಳಿಯ ಕಥೆಯೂ ಆಗಬಹುದು. ವಿಸ್ತರಿಸುವ ಹವಣಿಕೆ ಮನುಷ್ಯನ ಮೂಲಭೂತ ಆಸೆ.ಈ ಆಸೆಯೇ ಒಕೊಂಕೋನ ಕುಟುಂಬವನ್ನೂ ಅವನ ಗುಂಪನ್ನೂ ಅವಸಾನದ ಅಂಚಿಗೆ ದೂಡುತ್ತದೆ. ನಾಗರೀಕತೆಯಿಂದ ದೂರವಾಗಿ ಕಾಡಿನ ಮಧ್ಯೆ ವಾಸಿಸುವವರು ಕಾಡಿನಷ್ಟೇ ಸುಂದರ ಬದುಕುನ್ನು ಕಟ್ಟಿಕೊಂಡಿರುತ್ತಾರೆ. ಅಲ್ಲಿಗೆ ಪೊಳ್ಳು ನಾಗರಿಕತೆ ಪ್ರವೇಶಿಸಿದಾಗ ಆಗುವ ಅನಾಹುತವೇ ‘ಥಿಂಗ್ಸ್ ಫಾಲ್ ಅಪಾರ್ಟ್’. ಈ ರೀತಿಯ ಅದೆಷ್ಟೋ ಕಥೆಗಳನ್ನು ಇತ್ತೀಚಿಗೆ ಕೇಳಿದ್ದೇವೆ ಆದರೆ ಅವು ಈ ಕೃತಿಯನ್ನು ಸರಿಗಟ್ಟಲಾರವು. ಲೇಖಕರ ಅನುಭವವೇ ಕಥನವಾದಾಗ ಕೃತಿ ಹೆಚ್ಚು ಹರಳು ಗಟ್ಟುತ್ತದೆ. ಈ ಕಥನಕ್ಕೂ ಅಚಿಬೆಯವರ ಅನುಭವಗಳೇ ಮೂಲಾಧಾರ ಎಂದು ಬರವೊಂದರಲ್ಲಿ ಓದಿದೆ.
ಕಥೆಯಲ್ಲಿ ನನ್ನನ್ನು ಕಾಡಿದ ಮತ್ತೊಂದು ಅಂಶ ಮಾನವನ ಒಟ್ಟು ನಂಬಿಕೆಗಳ ಮೂಲ . ನಮ್ಮಲ್ಲಿ ದೀಪ ಹಚ್ಚಿದ ನಂತರ ಕೆಲವು ಹೆಸರುಗಳನ್ನು ಮನೆಯಲ್ಲಿ ಹೇಳುವಹಾಗಿಲ್ಲ. ಉದಾಹರಣೆಗೆ ಹಾವನ್ನು ‘ಸುಬ್ರಮಣ್ಯ’ ಅಂತಲೇ ಹೇಳಬೇಕು,ರಾತ್ರಿಯ ವೇಳೆ ಸೀಟಿ ಊದುವಂತಿಲ್ಲ .ಈ ನಂಬಿಕೆಗಳು ಇಬೋ ಜನಾಂಗದಲ್ಲೂ ಇದೆಯಂತೆ.ಅವರು ರಾತ್ರಿವೇಳೆ ಹಾವನ್ನು ದಾರವೆನ್ನುತ್ತಾರೆ. ಅಲ್ಲೂ ಮಕ್ಕಳು ಸೀಟಿ ಊದುವ ಹಾಗಿಲ್ಲ . ವಿಶ್ವಸಾಕ್ಷಿಯ ಒಂದೇ ಮೂಲ ಹತ್ತು ಹಲವು ಕವಲಾಗಿ ಹರಿಯುತ್ತಿರುವುದಕ್ಕೆ ಇವು ಸಾಕ್ಷಿಗಳಾಗುತ್ತವೆ.
ವಿಕಿಪಿಡಿಯಾ ಪುಟ ತೆಗೆದರೆ ಕಾದಂಬರಿಯ ಇನ್ನಿತರ ವಿವರಗಳೊಂದಿಗೆ ಕಾದಂಬರಿಯ ಕಥೆಯೂ ದೊರೆಯುತ್ತದೆ . ಆದರಿದು ಹಾಗೆ ಓದಿ ಮರೆಯುವ ಕಥೆಯಲ್ಲ ಮರೆಯುವ ಹಾಗಿದ್ದರೆ ಹತ್ತಿರ ಹತ್ತಿರ ನೂರುವರ್ಷ ಬಾಳುತ್ತಿರಲಿಲ್ಲ ಮುರಿದು ಬಿದ್ದ ಮನೆಯೊಂದನ್ನು ನೋಡಿದಾಗ ಆಗುವ ಅನುಭವವೇ ‘ಥಿಂಗ್ಸ್ ಫಾಲ್ ಅಪಾರ್ಟ್ . ಓದಿ ಮುಗಿಸಿದ ನಂತರದ ವಿಷಾದದಿಂದ ಹೊರಬರಲು ನನಗೆ ಕೆಲ ವಾರ ಬೇಕಾಯಿತು. ನಂತರವಷ್ಟೇ ಅಂತರ್ಜಾಲ ತೆರೆದು ಈ ಕೃತಿಯ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದು. ಇದರ ಮುಂದಿನ ಭಾಗ ‘No Longer At Ease’ ನಾನಿನ್ನೂ ಓದಿಲ್ಲ .
೧೯೫೮ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಕಾದಂಬರಿಯ ಹೆಸರಿನಲ್ಲೇ ವಿಷಾದವಿದೆ. ‘Things Fall Apart’ ಎನ್ನುವುದು WB Yeats ನ ‘The Second Coming’ ಎಂಬ ಕವನದ ಸಾಲು. ಕವಿತೆಯನ್ನು ಓದಿರದಿದ್ದರೂ ಈ ಕವಿತೆಯ ಕೆಲ ಸಾಲುಗಳು ಪ್ರಸಿಧ್ಧವಾಗಿವೆ . ಅದರಲ್ಲೊಂದು “The best lack all conviction, while the worst Are full of passionate intensity.” (ತಿಳಿದವರ ಇಚ್ಛಾ ಶಕ್ತಿಯ ಕೊರತೆ ಮೂರ್ಖರ ಅತೀಯಾದ ವಿಶ್ವಾಸ ಈ ಜಗತ್ತಿನ ದುರಂತ ).
ಬುವಿಯ ಬದುಕು ಅಸಹ್ಯವಾದಾಗ ದೈವ ಮತ್ತೆ ಅವತರಿಸಿ ಕಾವುದೆಂಬ ನಂಬಿಕೆ ಕೆಲ ಮತಗಳಲ್ಲಿದೆ. ಅದೇ ನಂಬಿಕೆಯನ್ನು ಸಾರುತ್ತದೆ WB Yeats ನ ‘The Second Coming’ . ಈ ಕವನ ಓದಿದ ನಂತರ ಮೂಡಿದ ಸಾಲುಗಳು :
ಸನ್ನಿಹಿತವಾಗಿದೆ ಸಂಭಿಸುವ ಕಾಲ
ಸುಳಿಯ ಆಳದಲ್ಲಿ ಗೂಡು ಕಟ್ಟಿದ ಗುಬ್ಬಿಗೆ
ಬಾಣದ ಸದ್ದು ಕೇಳದು
ಚದುರಿ ಉದುರುವ ಎಲೆಗಳ, ಬೇರು
ಹಿಡಿದಿಡಲಾಗದು
ನೆತ್ತರ ನದಿಯಲ್ಲಿ ಸದಾ ಪ್ರವಾಹ
ಕೊಚ್ಚಿಹೋದ ಸತ್ಯವ
ಹುಡುಕಲಾಗದು
ಶಕ್ತರಿಗಿಲ್ಲಿ ಬರೀ ಭಯವೇ
ಮೂರ್ಖರ ಗೌಜಿ ಕೇಳಲಾಗದು !
 
ಮಹತ್ತೊಂದು ಘಟಿಸುವ ಕಾಲ
ಬಂದಾಗಿದೆ
ಸತ್ಯಾವತಾರಕ್ಕೆ ಘಳಿಗೆ
ಸನ್ನಿಹಿತವಾಗಿದೆ.
ವಿಶ್ವಾತ್ಮನ ಬೆಳಕಿನಿಂದ
ದೂರ ದೂರ ,
ಸಿಂಹದ ದೇಹ ನರನ ತಲೆ
ಹೊತ್ತ ವಿಚಿತ್ರ ಜೀವ ,
ಮರುಭೂಮಿಯಲ್ಲಿ
ತೆವಳುತ್ತಿದೆ, ಕೋಟಿ ಕಿರಣಗಳ ತೀಕ್ಷ್ಣತೆ
ಅದರ ದೃಷ್ಟಿಗಿದೆ
ಇತ್ತಿತ್ತ ಅದು ತೆವಳುತ್ತಿರುವಂತೆ
ಅಲ್ಲೊಂದು ಮರಳ ಹಕ್ಕಿಯ ನೆರಳ
ಕಂಡು ನಾ ಬೆಚ್ಚಿದೆ
ಅಷ್ಟರಲ್ಲಿ ಮತ್ತೆ ಎಲ್ಲೆಲ್ಲೂ
ಕತ್ತಲು, ಆದರೀಗ ನನಗೆ
ಅರ್ಥವಾಗಿದೆ
ಶತಶತಮಾನಗಳ ಶಿಲಾಸ್ವಪ್ನ
ಕಲ್ಲತೊಟ್ಟಿಲು
ಅಬ್ಬಾ! ಎಂಥಾ ಕಾಲದ ಅಂತ್ಯ
ಕೊನೆಗೀಗ , ಗೋಕುಲ ಮತ್ತೆ
ಜನಿಸುವ ಕಾಲ ಬಂದಿದೆ ?
 

‍ಲೇಖಕರು G

June 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Hanumanth Ananth Patil

    ಮೇಡಂ ವಂದನೆಗಳು
    ಚಿನುವಾ ಅಚಿಬೆ ಮತ್ತು ಆತನ ಕೃತಿ ’Things Fall Apart’ ಬಗೆಗೆ ಬಹಳ ಸೊಗಸಾಗಿ ಬರೆದಿದ್ದೀರಿ. ಅದೆ ರೀತಿ ಡಬ್ಲೂ.ಜಿ.ಏಟ್ಸನ ’ The Second Comming’ ಕವನದ ಅನುವಾದ ಕೂಡ ಅರ್ಥರ್ಪೂರ್ಣವಾಗಿ ಮೂಡಿ ಬಂದಿದೆ.

    ಪ್ರತಿಕ್ರಿಯೆ
  2. ಅಪರ್ಣ ರಾವ್

    (ಕಥೆಯಲ್ಲಿ ನನ್ನನ್ನು ಕಾಡಿದ ಮತ್ತೊಂದು ಅಂಶ ಮಾನವನ ಒಟ್ಟು ನಂಬಿಕೆಗಳ ಮೂಲ . ನಮ್ಮಲ್ಲಿ ದೀಪ ಹಚ್ಚಿದ ನಂತರ ಕೆಲವು ಹೆಸರುಗಳನ್ನು ಮನೆಯಲ್ಲಿ ಹೇಳುವಹಾಗಿಲ್ಲ. ಉದಾಹರಣೆಗೆ ಹಾವನ್ನು ‘ಸುಬ್ರಮಣ್ಯ’ ಅಂತಲೇ ಹೇಳಬೇಕು,ರಾತ್ರಿಯ ವೇಳೆ ಸೀಟಿ ಊದುವಂತಿಲ್ಲ .ಈ ನಂಬಿಕೆಗಳು ಇಬೋ ಜನಾಂಗದಲ್ಲೂ ಇದೆಯಂತೆ.ಅವರು ರಾತ್ರಿವೇಳೆ ಹಾವನ್ನು ದಾರವೆನ್ನುತ್ತಾರೆ. ಅಲ್ಲೂ ಮಕ್ಕಳು ಸೀಟಿ ಊದುವ ಹಾಗಿಲ್ಲ . ವಿಶ್ವಸಾಕ್ಷಿಯ ಒಂದೇ ಮೂಲ ಹತ್ತು ಹಲವು ಕವಲಾಗಿ ಹರಿಯುತ್ತಿರುವುದಕ್ಕೆ ಇವು ಸಾಕ್ಷಿಗಳಾಗುತ್ತವೆ.)ನನಗೂ ಸಾಕಷ್ಟು ಸಲ ಈ ಜಿಜ್ಞಾಸೆ ಹುಟ್ಟಿದೆ. ಸ್ವರ್ಣ ನಿನ್ನ ಲೇಖನ ಅಚ್ಚುಕಟ್ಟಾಗಿದೆ. 🙂

    ಪ್ರತಿಕ್ರಿಯೆ
  3. chethan

    jagatthima prasidda kaviyannu nanage parichayisida nimage dhanyavaadagalu…. kavana suliya garbadanthe teekshnavaagide nimma shaba prayooga…………………. “things fall apart” oodi anubavisabeku anisutthide.. nimma baraha oodida nantara…

    ಪ್ರತಿಕ್ರಿಯೆ
  4. Anonymous

    ಸೊಗಸಾಗಿದೆ ಬರಹ ಮತ್ತು ಕಾದಂಬರಿಯ ಆಳಕ್ಕಿಳಿದು ವಿಷಯವನ್ನು ಸಂಗ್ರಹಿಸಿ ಹಂಚಿಕೊಂಡಿರುವ ರೀತಿ.

    ಪ್ರತಿಕ್ರಿಯೆ
  5. Gopaala Wajapeyi

    ೧೯೮೪-೮೫ ಇರಬೇಕು. ಹೆಗ್ಗೋಡಿನ ನೀನಾಸಂ ‘ಜನಸ್ಪಂದನ’ ಎಂಬ ಹೆಸರಿನಲ್ಲಿ ಅಲ್ಲಲ್ಲಿ ಗ್ರಾಮೀಣ ರಂಗ ಶಿಬಿರಗಳನ್ನು ಏರ್ಪಡಿಸುವ ಯೋಜನೆ ಹಾಕಿಕೊಂಡಿತ್ತು. ಅದರನ್ವಯ ಕಿತ್ತೂರಿನಲ್ಲಿ ಏರ್ಪಟ್ಟ ಶಿಬಿರಕ್ಕಾಗಿ ನಾನು ಬ್ರೆಕ್ಟನ ‘ದಿ ಕಕೇಶಿಯನ್ ಚಾಕ್ ಸರ್ಕಲ್’ ನಾಟಕವನ್ನು ‘ಧರ್ಮಪುರಿಯ ಶ್ವೇತವೃತ್ತ’ ಎಂಬ ಹೆಸರಿನಲ್ಲಿ ರೂಪಾಂತರ ಮಾಡಿದೆ. ಜಯತೀರ್ಥ ಜೋಶಿ ಅದನ್ನು ನಿರ್ದೇಶಿಸಿದರು.
    ಅದೇ ರೀತಿ ಮಂಚಿಕೇರಿಯ (ಉತ್ತರ ಕನ್ನಡ ಜಿಲ್ಲೆ) ಸಿದ್ದಿ ಜನಾಂಗದವರಿಗಾಗಿ ನಡೆದ ರಂಗ ಶಿಬಿರಕ್ಕಾಗಿ ಕೆ. ವಿ. ಸುಬ್ಬಣ್ಣ ಅವರು ಚಿನುವಾ ಅಚಿಬೆಯ ’Things Fall Apart’ ಕಾದಂಬರಿಯನ್ನು ‘ಕಪ್ಪು ಜನ ಕೆಂಪು ನೆರಳು’ ಎಂಬ ಹೆಸರಿನ ನಾಟಕವನ್ನಾಗಿ ರೂಪಾಂತರಿಸಿದರು. ಸಿದ್ದಿ ಜನಾಂಗದವರು ಆಫ್ರಿಕನ್ ಮೂಲದವರಾದ್ದರಿಂದ, ಅವರಿಗಾಗಿ ಹೇಳಿ ಮಾಡಿಸಿದಂತಿತ್ತು ಈ ನಾಟಕ. ಇದೀಗ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿರುವ ಚಿದಂಬರ ರಾವ್ ಜಂಬೆ ಈ ನಾಟಕವನ್ನು ನಿರ್ದೇಶಿಸಿದ್ದರು.
    ಸ್ವರ್ಣಾ… ಅಚಿಬೆ ಮತ್ತು ಆತನ ಕೃತಿಯ ಬಗ್ಗೆ ನೀವು ಬರೆದ ಸೊಗಸಾದ ಲೇಖನ ನನಗೆ ಈ ನೆನಪುಗಳು ಮರುಕಳಿಸುವಂತೆ ಮಾಡಿತು.

    ಪ್ರತಿಕ್ರಿಯೆ
  6. ಸ್ವರ್ಣಾ

    ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: