ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸ್ವರ್ಗಕ್ಕೆ ಮೂರೇ ಮೈಲಿ’ ನಡೆದು ನಿರಾಶರಾಗಬೇಡಿ..

ಡಾ.ಎಸ್.ಬಿ.ಜೋಗುರ

ಸ್ವರ್ಗಕ್ಕೆ ಮೂರೇ ಮೈಲಿ!

ಜೆರೆಮಿ ಸೀಬ್ರೂಕ್

ಅನುವಾದ
ರೋಸಿಡಿಸೋಜಾ
ಸುಗತ ಶ್ರೀನಿವಾಸರಾಜು

ಅಹರ್ನಿಶಿ ಪ್ರಕಾಶನ
ಪುಟ -208 ಬೆಲೆ-200 ರೂಪಾಯಿ

 

ವಿಶ್ವ ಮಾರುಕಟ್ಟೆಯ ಕೀಲಿ ಕೈ ಎಂದು ಕರೆಯಿಸಿಕೊಳ್ಳುವ ಜಾಗತೀಕರಣ ಕೇವಲ ಕೆಲವರ ಆಗಮನಕ್ಕೆ ಮಾತ್ರ ಬಾಗಿಲು ತೆರೆದು, ಹಲವರ ಪಾಲಿಗೆ ಸದಾ ಕೀಲೀ ಜಡಿದಂತಿರುವ ಸ್ಥಿತಿಯನ್ನು, ಅಭಿವೃದ್ಧಿಯ ಕನಸು ತೋರುವ, ಅಭಿವೃದ್ಧಿಯ ನೆಪದಲ್ಲಿ ಸ್ವರ್ಗವನ್ನು ಮೂರೇ ಮೈಲಿ ಅಂತರದಲ್ಲಿ ರೂಪಿಸುವಂತಿರುವ ಭ್ರಮೆಯನ್ನು ಬಿತ್ತುವ ಮೂಲಕ ಸಮಷ್ಟಿಯ ಬಹುಸಂಖ್ಯಾಕರನ್ನು ನಿರಾಶೆಗೊಳಿಸುವ ಕ್ರಮವನ್ನು ಬ್ರಿಟನ್ ಮೂಲದ ಲೇಖಕ ಜೆರೆಮಿ ಸಿ ಬ್ರೂಕ್ ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ರೋಸಿ ಡಿಸೋಜಾ ಮತ್ತು ಸುಗತ ಶ್ರೀನಿವಾಸರಾಜು ಅವರು ಜೆರೆಮಿ ಸೀಬ್ರೂಕ್ ಅವರ ಬರಹಗಳನ್ನು ಸಾಧ್ಯವಾದಷ್ಟು ಎಲ್ಲ ಸ್ತರದ ಓದುಗರಿಗೂ ನಿಲುಕುವ ಹಾಗೆ ಅನುವಾದಿಸಿದ್ದಾರೆ.

ಅನುವಾದವೆ ಒಂದು ಕಿರಿಕಿರಿ ಎನ್ನುವಂಥಹ ಕೃತಿಗಳ ಸಾಲಿಗೆ ಈ ಕೃತಿ ಸೇರದ ಹಾಗೆ ಸೊಗಸಾಗಿ ಅನುವಾದಿಸಿದ್ದಾರೆ.

‘ಸ್ವರ್ಗಕ್ಕೆ ಮೂರೇ ಮೈಲಿ!’ ಎನ್ನುವ ಕೃತಿಯ ಓದು ಅಭಿವೃದ್ಧಿಯ ಬಗೆಗಿರುವ ದಟ್ಟದಾದ ಪೆರೆ ಕಳಚುವ ಯತ್ನವನ್ನು ಮಾಡುತ್ತದೆ.ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿದಾಗ ಅದೇ ಸತ್ಯವಾಗುವ ಅಪಾಯಗಳನ್ನು ಮರೆಯಲಾಗುವದಿಲ್ಲ. ಅಭಿವೃದ್ಧಿ ಎನ್ನುವ ಪರಿಕಲ್ಪನೆ ಕೂಡಾ ಬಡವರ ಪಾಲಿಗೆ ಹಸಿಹಸಿಯಾದ ಹುಸಿ ಕಲ್ಪನೆ ಎನ್ನುವ ಬಗ್ಗೆ ಹತ್ತಾರು ವಸ್ತುನಿಷ್ಟ ದೃಷ್ಟಾಂತಗಳ ಮೂಲಕ ಈ ಕೃತಿ ಮನದಟ್ಟು ಮಾಡಿಕೊಡುವುದು ಮಾತ್ರವಲ್ಲ.. ಹೌದಲ್ಲ.. ಇದು ಹೀಗೂ ಇದೆಯಲ್ಲ..! ಎನ್ನುವ ಅಚ್ಚರಿಯನ್ನೂ ಹುಟ್ಟುಹಾಕುತ್ತದೆ.

ಜೆರಮಿ ಸೀಬ್ರೂಕ್ ಅವರು ಬೆಂಗಳೂರಿನ ಬಗ್ಗೆ ಬರೆಯುವಾಗ ನಮ್ಮ ಪರಿಸರಪ್ರೇಮಿಗಳನ್ನು ಉಲ್ಲೇಖಿಸುವಾಗ ಇವರು ಬ್ರಿಟನ್ ಲೇಖಕರಲ್ಲ ಇದೇ ನೆಲದವರು ಎನ್ನುವ ಹಾಗೆ ಆಪ್ತವಾಗಿಬಿಡುವ ಬರವಣಿಗೆ ಶೈಲಿ ಅವರದು. ಸೀಬ್ರೂಕ್ ಅವರು ಅಭಿವೃದ್ಧಿ ಎನ್ನುವ ಪದವೇ ಬೆಚ್ಚಿ ಬೀಳಿಸುವಂಥದು. ಯಾವುದೋ ಒಂದು ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಒಕ್ಕಲೆಬ್ಬಿಸುವ ಕ್ರಿಯೆ ಅದು ಕೇವಲ ಭೌತಿಕವಾಗಿ ನಡೆಯುವಂಥದಲ್ಲ ಎನ್ನುವುದನ್ನು ಹೀಗೆ ದಾಖಲಿಸುತ್ತಾರೆ. ‘ ಒಕ್ಕಲೇಳುವುದು ಒಂದು ಭೌತಿಕ ಅನುಭವ ಮಾತ್ರವಲ್ಲ. ಹತಾಶೆಯ ವಲಸೆಗಳ ಮೂಲಕ, ಆರ್ಥಿಕವಾಗಿ ಹರಿದು ಹಂಚಿಹೋಗುವ ಜನರು ಅಥವಾ ದಿಕ್ಕಾಪಾಲಾಗುವ ಮಮತೆಯ ಹಾದಿಗಳು ಕೌಟುಂಬಿಕ ಬದುಕನ್ನು ಮೂರಾಬಟ್ಟೆ ಮಾಡಿ, ಸಂಬಂಧಗಳನ್ನು ಶಿಥಿಲಗೊಳಿಸುತ್ತವೆ. ಇದು ಒಂದರ್ಥದಲ್ಲಿ ನಮ್ಮ ಹೃದಯಗಳ ಒಕ್ಕಲೆಬ್ಬಿಸುವಿಕೆಯೇ ಆಗಿದೆ.’ ಎನ್ನುವ ಮಾತು ಅಭಿವೃದ್ಧಿ ಎನ್ನುವದು ಕಂಪಿಸುವಂತೆ ಮಾಡುತ್ತದೆ ಎನ್ನುವುದು ಕಟುವಾಸ್ತವ.

ಮುಕ್ತ ಮಾರುಕಟ್ಟೆ ಮತ್ತು ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯ ಬಗ್ಗೆ ಬರೆಯುತ್ತ ಲೇಖಕರು ‘ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆ ಯಾವುದೇ ಬಗೆಯ ಸ್ವಾತಂತ್ರ್ಯಗಳನ್ನು ಕೊಡಮಾಡಿದರೂ ಅದು ಖಂಡಿತವಾಗಿಯೂ ಕೆಲವು ಚಟುವಟಿಕೆಗಳ ಮೇಲೆ ಕಡಿವಾಣ ಹಾಕೇ ಹಾಕುತ್ತದೆ ಪಾಶ್ಚಾತ್ಯ ಸಮಾಜದಲ್ಲಿ ನಾವು ಸಾಮಾನ್ಯವಾಗಿ ಕೇಳಲ್ಪಡುವ ‘ದುಡ್ದಿಲ್ಲದೇ ಏನೂ ಮಾಡಲಾಗುವದಿಲ್ಲ.’ ಎಂಬ ನಿಯತಿವಾದದ ಸರ್ವಸಮ್ಮತ ಹೇಳಿಕೆಗಳಲ್ಲಿ ಇದು ನಮಗೆ ಕಾಣುತ್ತದೆ. ಹಣದಿಂದ ಮಾತ್ರ ಎಲ್ಲವನ್ನು ಮಾಡಲು ಸಾಧ್ಯ ಎಂದು ಪರಿಗಣಿಸಲಾಗುತ್ತಿದೆ.

ಇದು ನಮ್ಮ ನಂಬಿಕೆಗಳನ್ನಷ್ಟೆ ಪ್ರತಿನಿಧಿಸುವದಲ್ಲದೇ ದಯೆ, ಕರುಣೆ, ಭರವಸೆಗಳಿಗೂ ತಾನೇ ಪ್ರತಿನಿಧಿಯಂತಾಗಿದೆ. ಉದಾತ್ತ ಕಲ್ಪನೆಗಳನ್ನು, ಉನ್ನತ ಮೌಲ್ಯಗಳನ್ನು ಕೂಡಾ ಹಣವು ಅತ್ಯಂತ ನಿಗೂಢ ರೀತಿಯಲ್ಲಿ ಜಡಗಟ್ಟಿಸಿಬಿಟ್ಟಿದೆ. ಎಲ್ಲ ಮಾನವ ಸಾಧ್ಯತೆಗಳು ಕೂಡಾ ಅದರ ಬಿಗಿ ಹಿಡಿತದಲ್ಲಿ ಉಸಿರುಗಟ್ಟಿ ನಲಗುತ್ತಿವೆ. ಯಾವುದೋ ಆದಿಮ ಮಾಂತ್ರಿಕ ಶಕ್ತಿಯಿಂದ ಇಡೀ ಮಾನವ ಸಮಾಜವನ್ನೇ ಮೋಡಿಗೆ ಒಳಪಡಿಸಿದೆ. ಈ ಮೋಡಿಯ ಮಂಪರಿನಿಂದ ಏಳಬೇಕಾದರೆ ಹಣವೇ ಬಂದು ಮುತ್ತಿಡಬೇಕು.’ಎನ್ನುವ ಮೂಲಕ ಮುಕ್ತ ಮಾರುಕಟ್ಟೆಯ ಕಬಂಧಬಾಹುಗಳಿಂದ ಬಿಡುಗಡೆಯೇ ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ನಾವಿರುವ ಬಗ್ಗೆ ಅವರು ನೆನಪು ಮಾಡಿಕೊಟ್ಟು ನಮ್ಮನ್ನು ಹೈರಾಣಾಗಿಸುವುದೂ ಇದೆ. ಇಲ್ಲಿರುವ ಬಹುತೇಕ ಬರಹಗಳು ಯಾವುದೋ ಪರಿಕಲ್ಪನೆಗಳ ಸುತ್ತಮುತ್ತ ಗಿರಕೀ ಹೊಡೆದಂತೆನಿಸಿದರೂ ಅವು ಕೊನೆಗೂ ಬಂದು ನಿಲ್ಲುವುದು ನಮ್ಮ ಎದುರಲ್ಲಿಯೇ.. ಹೀಗಾಗಿಯೇ ಸೀಬ್ರೂಕ್ ಅವರ ವಿಚಾರಗಳು ಇಲಿ ನಮಗೆ ಮುಖ್ಯವಾಗುತ್ತವೆ.

ನಮ್ಮಲ್ಲಿ ತೃಪ್ತಿ ಎನ್ನುವುದು ಅನಾಹುತಕ್ಕೆ ಹೇಗೆ ಎಡೆ ಮಾಡಿಕೊಟ್ಟಿದೆ ಎನ್ನುವದನ್ನು ವಿವರಿಸುತ್ತ ‘ಹೆಚ್ಚುತ್ತಿರುವ ನಿರೀಕ್ಷೆಗಳು ಕುಸಿಯುತ್ತಿರುವ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಇದು ನಿಜವಾಗಿಯೂ ಪರಾವಲಂಬನೆಯ ಸಂಸ್ಕೃತಿ’ ಇದರ ಇನ್ನೊಂದು ಅಪಾಯಕಾರಿ ಮುಖದ ಬಗ್ಗೆ ಮಾತನಾಡುತ್ತ ‘ಎಲ್ಲಿಯತನಕ ಆರ್ಥಿಕ ಅಭಿವೃದ್ಧಿ ಎಂಬುದು ಸಮಾಜದ ಮುಖ್ಯ ಹಪಾಹಪಿಯಾಗಿರುತ್ತದೆಯೋ ಅಲ್ಲಿಯತನಕ ಜನರು ‘ನಾವು ಬಡವರು’ ಎಂಬ ಭಾವನೆಯಲ್ಲಿ ತೊಳಲಾಡುತ್ತಾರೆ’ ಲೇಖಕರು ಇಂಗ್ಲಂಡ್ ದಂತಹ ದೇಶಕ್ಕೆ ಪ್ರತಿಭಾವಂತ ವಲಸಿಗರ ಕೊಡುಗೆ ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾಗುತ್ತದೆ ಎನ್ನುತ್ತಾರೆ. ಬಡತನದ ನಿರ್ಮೂಲನೆಯ ವಿಷಯದಲ್ಲಿ ಬ್ರಿಟನ್ ನ ಧೋರಣೆ ಆಶಾದಯಕವಾಗಿಲ್ಲ ದುರಂತವೆಂದರೆ ಭಾರತ ಇದೇ ದೋರಣೆಗಳನ್ನು ಅನುಸರಿಸಿ ಬಡತನ ನಿರ್ಮೂಲನೆಗೆ ಯತ್ನಿಸುತ್ತಿರುವ ಬಗ್ಗೆ ಅವರು ವಿಷಾದ ವ್ಯಕ್ತ ಪಡಿಸುತ್ತಾರೆ.

ಬಾಂಗ್ಲಾ ದೇಶದ ಬಟ್ಟೆ ಗಿರಣಿಗಳಲ್ಲಿ ಅತ್ಯಂತ ಅಸಹನೀಯವಾಗಿ ಬದುಕುವ ಕಾರ್ಮಿಕರು ಬೆಂಕಿಗಾಹುತಿಯಾಗುವುದು ಮಾತ್ರವಲ್ಲದೇ ‘ಒಮ್ಮೆ ಬಳಸಿ ಎಸೆದುಬಿಡುವಂತಹ ವಸ್ತುಗಳನ್ನು ತಯಾರಿಸುವ ಈ ಕಾರ್ಮಿಕರ ಜೀವದ ಮೌಲ್ಯ ಆ ವಸ್ತುವಿಗಿಂತ ಹೆಚ್ಚಾಗಿರಬಹುದು ಎಂಬ ಯೋಚನೆಯಾದರೂ ಹೇಗೆ ಬಂದೀತು..?’ ಎಂದು ಕೇಳುವ ಅವರು ವಲಸೆಯ ಬಗ್ಗೆ, ಪ್ರಜಾಪ್ರಭುತ್ವದ ಅರ್ಥವಂತಿಕೆ ಮತ್ತು ವಿಫಲತೆಯ ಬಗ್ಗೆ, ಓದಲು ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಬಗ್ಗೆ , ಬದಲಾದ ಬೆಂಗಳೂರಿನ ನೋಟದ ಬಗ್ಗೆ ಹೀಗೆ ಅಭಿವೃದ್ಧಿ ಮತ್ತು ಜಾಗತೀಕರಣದ ಪರಿಕಲ್ಪನೆಗಳು ದೀಪದ ಬುಡದ ಕತ್ತಲಿನಂತೆ ಬಡವರ ಪಾಲಿಗೆ ಆಶಾಗೋಪುರ ಕಟ್ಟಿಕೊಡುವಲ್ಲಿ ನೆರವಾಗಿರುವದಿದೆಯೇ ಹೊರತು ಈಡೇರಿಸುವದರಲ್ಲಿ ಅಲ್ಲ ಎನ್ನುವ ಬಗ್ಗೆ ಜೆರಮಿ ಸಿ ಬ್ರೂಕ್ ಅವರು ಈ ಕೃತಿಯ ಹಲವಾರು ಲೇಖನಗಳಲ್ಲಿ ಚರ್ಚಿಸಿದ್ದಾರೆ.

ಇದೊಂದು ಉತ್ತಮ ಓದು. ಅಭಿವೃದ್ಧಿಯ ಬಗೆಗೆ ನಮಗಿರುವ ಸ್ಥಾಪಿತ ಗ್ರಹಿಕೆಗಳನ್ನು ಹಿಡಿದು ಅಲ್ಲಾಡಿಸುವಷ್ಟು ಸಶಕ್ತವಾದ ಬರವಣಿಗೆ. ಸುಗತ ಶ್ರೀನಿವಾಸರಾಜು ಮತ್ತು ರೋಸಿ ಡಿಸೋಜಾ ತುಂಬಾ ಸತ್ವಪೂರ್ಣವಾಗಿ ಅನುವಾದ ಮಾಡಿದ್ದಾರೆ. ಹುಸಿವಾದಗಳನ್ನು ಬಿತ್ತುವ ಕೆಲವರು ಮತ್ತು ಅವುಗಳನ್ನು ನಿಜ ಎಂದು ನಂಬುವ ಹಲವರು ಇಬ್ಬರೂ ಓದಬೇಕಾದ ಕೃತಿ ಎರಡನೆಯ ವರ್ಗವಂತೂ ಓದಲೇಬೇಕಾದ ಕೃತಿ.

‍ಲೇಖಕರು admin

5 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading