ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ವಯಂ ರತಿಯತ್ತ ವಾಲುತ್ತಿದ್ದೇವೆಯೇ ನಾವು?’ – ಶ್ರೀದೇವಿ ಕೆರೆಮನೆ

ತಮ್ಮ ಬೆನ್ನು ತಾವೇ ತಟ್ಟುಕೊಳ್ಳುವವರು

ಶ್ರೀದೇವಿ ಕೆರೆಮನೆ

ನೀವ್ಯಾಕೆ ಇನ್ನೂ ನಿಮ್ಮ ಪ್ರೊಪೈಲ್ ಫೋಟೋ ಛೇಂಜ್ ಮಾಡಲಿಲ್ಲ ಕೆಲವು ದಿನಗಳ ಹಿಂದೆ ಯಾರೋ ಫೇಸ್ ಬುಕ್ ಸ್ನೇಹಿತರು ಕೇಳುತ್ತಿದ್ದರು. ಅದಕ್ಕೆ ಇನ್ನೂ ಇನ್ನೂರರ ಮೇಲೆ ಲೈಕ್ ಬರಲಿಲ್ಲ ನಾನು ತಮಾಶೆಯಾಗಿ ನುಡಿದೆ. ಅಂದ್ರೆ? ಅವರಿಗೆ ಆಶ್ಚರ್ಯ. ನನಗೆ ಮುವತ್ತರಿಂದ ನಲವತ್ತು ಲೈಕ್ಸ ಬರೋಲ್ಲ. ನೀವು ಇನ್ನೂರರ ಮೇಲೆ ಕೇಳ್ತೀರಲ್ಲ. ಅವರ ಪ್ರಶ್ನೆಗೆ ನಾನು ಸುಮ್ಮನೆ ನಕ್ಕು ಸುಮ್ಮನಾದೆ. ಹೌದು. ಈ ಆಧುನಿಕ ಜಗತ್ತು ನಾವು ಎಷ್ಟೇ ಬೇಡ ಬೇಡ ಎಂದರೂ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಸ್ವಯಂ ರತಿಯತ್ತ ವಾಲುತ್ತಿದ್ದೇವೆ. ನಾವಷ್ಟೇ ಶ್ರೇಷ್ಠರು ಉಳಿದವರೆಲ್ಲ ಕೀಳು ಎಂಬಂತಹ ಆತ್ಮರತಿಯನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವೆ.
ಕೆಲವು ದಿನಗಳ ಹಿಂದೆ ನನ್ನ ಹಿರಿಯ ಸಂಬಂಧಿಗಳೊಬ್ಬರು ಈ ತಮ್ಮ ಬೆನ್ನನ್ನು ತಾವೇ ಅತಿಯಾಗಿ ತಟ್ಟಿಕೊಳ್ಳುವ ಅತಿರೇಕದ ಕುರಿತು ತೀವ್ರ ಆಶ್ಚರ್ಯ ಹಾಗೂ ತೀವ್ರ  ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದರು. ಅವರು ಯಾವುದೋ ಹಿಂದಿನ ಶಿಕ್ಷಕರ ಕುರಿತು ಇಂದಿನ ಒಬ್ಬ ಶಿಕ್ಷಕರ ಬಳಿ ಪ್ರಸ್ತಾಪಿಸಿದ್ದರಂತೆ. ಅವರು ಕಲಿಯುವ ಕಾಲವನ್ನು ಪ್ರಸ್ತಾಪಿಸುತ್ತ ಅವರಂತಹ ಶಿಕ್ಷಕರನ್ನು ಕಂಡೇ ಇಲ್ಲ ಎಂದು ಹೊಗಳಿದ್ದರಂತೆ. ಆದರೆ ಅದಕ್ಕೆ ಪೂರಕ ಪ್ರತಿಕ್ರೀಯೆ ನಿರೀಕ್ಷಸಿದದ್ ಅವರಿಗೆ ಸಿಕ್ಕಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾದ ಮತ್ತು ‘ಹೀಗೂ ಉಂಟೇ?’ ಎಂದೆನಿಸುವ ಪ್ರತಿಕ್ರೀಯೆ. ಅವರ ಮಾತನ್ನು ಕೇಳಿದ ಈ ಶಿಕ್ಷಕರು ಒಂದು ನಿಮಿಷ ಸುಮ್ಮನಿದ್ದು, ಅಂತವರೆಲ್ಲ ತನ್ನ ಎದುರು ಏನೇನೂ ಇಲ್ಲ. ತಾನು ಕಲಿಸುವುದರ ಎದುರು ಯಾರೂ ತಾಡೋದಿಲ್ಲ. ಎಮದಾಗ ಮಾತ್ರ ಇವರು ಸುಸ್ತಾಗಿದ್ದರು. ನೋ ಡೌಟ್ ಈ ಶಿಕ್ಷಕರೂ ತುಂಬಾ ಪ್ರತಿಭಾವಂತರೇ. ಅವರಿಗಿಂತ ಹೆಚ್ಚಿನ ಬುದ್ಧಿವಂತರೂ ಇರಬಹುದು. ಆದರೆ ಹಾಗೆ ಎದುರೇ ಎದುರೇ ತಮ್ಮನ್ನು ತಾವು ಹೊಗಳಿಕೊಳ್ಳುತ್ತ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಭರದಲ್ಲಿ ಮತ್ತೊಬ್ಬರನ್ನು ಮೂಲೆಗುಂಪು ಮಾಡುವುದನ್ನು ಅವರು ಹೇಳಿಕೊಂಡು ವಿಷಾದ ವ್ಯಕ್ತಪಡಿಸಿದ್ದರು.
ಕೆಲವರಿಗೆ ತಮ್ಮನ್ನು ತಾವು ಹೊಗಳಿಕೊಳ್ಳುವುದು ಒಂದು ಚಟವಾಗಿಬಿಟ್ಟಿರುತ್ತದೆ. ಮಾತನಾಡಲು ಪ್ರಾರಂಭಿಸಿದರೆ ಸಾಕು, ತನ್ನದೇ ಕುರಿತಾದ ಮಾತು ಎದುರಿಗಿದ್ದವರನ್ನು ಹಿಗ್ಗಾಮುಗ್ಗಾ ಹಿಂಡುತ್ತದೆ. ತನ್ನದೇ ಸಾಧನೆಯನ್ನು ಅದೂ ಕೆಲವೊಮ್ಮೆ ವಾಸ್ತವಕ್ಕಿಂತ ಅತೀ ದೂರವಾದದ್ದನ್ನು ಹೇಳುತ್ತ ಎದುರಿಗಿದ್ದವರನ್ನು ನಂಬಿಸಲು ಮಾಡುವ ಪ್ರಯತ್ನಗಳು ಅವರನ್ನು ಜೋಕರ್ನನ್ನಾಗಿಸುತ್ತದೆ. ಮೊದಮೊದಲು ಅವರ ಮಾತುಗಳು ರೋಚಕ ಎನ್ನಿಸುತ್ತದೆ. ಆದರೂ ಅತಿಯಾಗಿ ತನ್ನ ಬೆನ್ನನ್ನು ತಾನು ತಟ್ಟಿಕೊಳ್ಳುವವರು ಮುಂದೆ ನಗೆಪಾಟಲಿಗಿಡಾಗುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಅತಿಯಾಗಿ ತನ್ನ ಬಗ್ಗೆ ತಾನು ಹೇಳಿಕೊಳ್ಳುವವರು ಮೊದ ಮೊದಲು ಎಲ್ಲರ ಕಣ್ಣು ಅರಳಿಸಿದರೂ ಕೊನೆಗೆ ನಿಜಾಂಶ ಗೊತ್ತಾಗತೊಡಗಿದಂತೆ ಜನರ ಕಣ್ಣಲ್ಲಿ ತಮ್ಮೆಲ್ಲ ಗೌರವವನ್ನೂ ಕಳೆದುಕೊಳ್ಳುತ್ತಾರೆ. ಕೆಲವೊಬ್ಬರನ್ನು ಹಿಂದಿನಿಂದ ‘ಪೊಕ್ಕಳೆ’ ಎಂದು ಅಡ್ಡ ಹೆಸರಿಟ್ಟು ಕರೆಯುವುದನ್ನೂ ಕಾಣುತ್ತೇವೆ.

ಇಂತಹ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಕೆಲಸಕ್ಕೆ ನಾವೇ ಅರಿವಾಗದಂತೆ ಚಿಕ್ಕಂದಿನಲ್ಲೇ ಮಕ್ಕಳಲ್ಲಿ ತುಂಬಿ ಬಿಡುತ್ತೇವೆ. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ತಮ್ಮ ಮಗುವಿನಲ್ಲಿ ಇಲ್ಲದ ಗುಣಗಳನ್ನು ಆ ಮಗುವಿನ ಎದುರೇ ಹೊಗಳಿ ಅಟ್ಟಕ್ಕೇರಿಸುತ್ತೇವೆ. ಎದುರಿಗಿರುವವರ ಬೆರಗುಗಣ್ಣಿನ ಪ್ರತಿಕ್ರೀಯೆಯನ್ನು ಸೂಕ್ಷ್ಮವಾಗಿ ಗಮನಿಸುವ ಮಗು ತನ್ನ ಬಗ್ಗೆ ತಾನು ಹೆಚ್ಚಿನದನ್ನು ಹೇಳಿಕೊಂಡರೆ ತಾನು ಎಲ್ಲರ ಕಣ್ಣಲ್ಲೂ ಗ್ರೇಟ್ ಎನ್ನಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ. ಹೀಗಾಗಿ ಬೆಳೆದಂತೆ ತನ್ನ ಬಗ್ಗೆ ಇದ್ದುದಕ್ಕಿಂತ ಹೆಚ್ಚಿನದ್ದನ್ನು ಹೇಳಿಕೊಳ್ಳಲು ತೊಡಗುತ್ತದೆ. ತಂದೆ ತಾಯಿಯರನ್ನು ಇಂಪ್ರೆಸ್ ಮಾಡುವ ಏಕೈಕ ಉದ್ದೇಶದಿಂದ ಇಂತಹ ಟ್ರಿಕ್ನ್ನು ಆಗಾಗ ಉಪಯೊಗಿಸುವ ಮಗುವಿಗೆ ಮುಂದೆ ಅದೊಂದು ಚಟವಾಗಿಬಿಡುತ್ತದೆ. ಅದರಲ್ಲೂ ಮಕ್ಕಳು ತಮ್ಮ ಬಗ್ಗೆ ತಾವು ಹೊಗಳಿಕೊಳ್ಳುವುದನ್ನು ಸುಲಭವಾಗಿ ನಂಬುವ ತಾಯಂದಿರೆದುರು ಮಗು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವ ಅದ್ಭುತ ನಾಟಕದಲ್ಲಿ ಲೀಲಾಜಾಲವಾಗಿ ನಟಿಸಿ ಅಮ್ಮನ ಕಣ್ಣಲ್ಲಿ ಹೀರೊ ಎನ್ನಿಸಿಕೊಳ್ಳುತ್ತದೆ.ಬಹೀಗಾಗಿ ಚಿಕ್ಕವರಿದ್ದಾಗಿನಿಂದಲೇ ಮಕ್ಕಳಲ್ಲಿ ವಾಸ್ತವ ಅತೀ ಮುಖ್ಯ ಎನ್ನುವುದನ್ನು ರೂಢಿಸಬೇಕಿದೆ.
ಇಂತಹ ತಮ್ಮ ಬೆನ್ನನ್ನು ತಾವು ತಟ್ಟಿ ಕೊಳ್ಳುವವರು ಒಂದು ತುಂಬಾ ಡಾಮಿನೇಟಿಂಗ್ ಮೈಂಡ್ ಹೊಂದಿದವರಾಗಿರುತ್ತಾರೆ. ತಮ್ಮನ್ನು ತಾವು ಶ್ರೇಷ್ಟ ಎಂದುಕೊಳ್ಳುವವರಾಗಿರುತ್ತಾರೆ ಅಥವಾ ಏನೂ ಅರಿಯದ, ಆದರೆ ಎಲ್ಲೆಲ್ಲೂ ಹೆಸರು ಮಾಡಿಕೊಳ್ಳಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿದವರಾಗಿರುತ್ತಾರೆ. ಅತಿಯಾದ ಆತ್ಮವಿಶ್ವಾಸ ಕೂಡ ಉಳಿದವರನ್ನು ಕಡೆಗಣಿಸಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವಂತೆ ಮಾಡಿದೆ. ಅದೇ ರೀತಿ ಏನೂ ಇಲ್ಲದ ಖಾಲಿ ಕೊಡ ಕೂಡ ಕೆಲವೊಮ್ಮೆ ಉರುಳುವಾಗ ಜೋರಾಗಿ ಸದ್ದು ಮಾಡುವಂತೆ ಏನೂ ಇಲ್ಲದವರೂ ತಮ್ಮ ಬೆನ್ನನ್ನು ತಾವು ತಟ್ಟಿಕೊಂಡು ಪ್ರಚಲಿತದಲ್ಲಿರಲು ನೋಡುತ್ತಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬೆನ್ನನ್ನು ತಟ್ಟಿಕೊಳ್ಳುವ ಪ್ರಕ್ರೀಯೆ ಜೋರಾಗಿಯೇ ನಡೆಯುತ್ತಿದೆ.
ಹೌದು, ನಾಮ್ಮ ಬೆನ್ನನ್ನು ನಾವು ತಟ್ಟಿಕೊಳ್ಳುತ್ತ, ನಮ್ಮ ಗುಣಗಾನವನ್ನು ನಾವೇ ಮಾಡಿಕೊಳ್ಳುತ್ತ ಉಳಿದವರನ್ನೆಲ್ಲ ಕೀಳಾಗಿ ಕಾಣುವ ವಿಚಿತ್ರವಾದ ಮನಸ್ಥಿತಿ ಇತ್ತೀಚೆಗೆ ಹೆಚ್ಚುತ್ತಿದೆ. ಆಧುನಿಕ ಪರಿಕರಗಳ ಸಹವಾಸದಿಂದಾಗಿ ಮನುಷ್ಯ-ಮನುಷ್ಯರ ನಡುವಣ ಸಂಬಂಧ ದಿನೇ ದಿನೇ ತೆಳುವಾಗುತ್ತಿದೆ. ತಾವೆ ಸರಿ ಉಳಿದವರೆಲ್ಲ ತಪ್ಪು ಎನ್ನುವ ಮತ್ತು ಅದನ್ನೇ ಸಾಧಿಸುವ ತೆವಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಬರುವಾಗ ಬಹು ಪರಾಕ್ ಹೇಳಲು ಭಟ್ಟಂಗಿಗಳು ಇರುತ್ತಿದ್ದರು. ರಾಜರು ಯಾವುದೇ ಕೋನೆ ಪ್ರವೇಶಿಸಿದರೂ ಸಾಕು, ಅಲ್ಲೊಂದು ವಿಜಯೀ ಗೀತೆ ಹೇಳಲೇಬೇಕಾಗಿತ್ತು. ಅಂತಹ ಶೂರ, ಇಂತಹ ಧೀರ, ಹುಲಿ ಕೊಂದವನು, ಮದಕರಿಗಳನ್ನು ಪಳಗಿಸಿದವನು ಎನ್ನುವ ಎಲ್ಲಾ ವಿಶೇಷಣಗನ್ನು ಮಾಡಿಕೊಂಡು ಜೈಘೋಷ ಹಾಕುವಾಗ ಹಾಗೇನೂ ಸಾಧಿಸದ ಸಾಮಾನ್ಯ ರಾಜನೂ ಕೂಡ ತನ್ನ ಮೇಲೆ ಹಾಡಲಾದ ಉತ್ಪ್ರೇಕ್ಷಿತ ಯಶೋಗೀತೆಗೆ ಪುಳಕಿತನಾಗಿ ತನ್ನಲ್ಲಿಲ್ಲದ ಗುಣಗಳನ್ನು ಆವಾಹಿಸಿಕೊಳ್ಳಲು ಹಾತೊರೆಯುತ್ತಿದ್ದನಂತೆ. ಹಾಗೆಯೇ ಇಂದೂ ಕೂಡ ತಮ್ಮದೇ ಆದ ಒಂದು ಭಟ್ಟಂಗಿಗಳ ಗುಂಪನ್ನು ಮಾಡಿಕೊಂಡು ಹಿಂದೆ ಮುಂದೆ ಹೋದಲ್ಲಿ ಬಂದಲ್ಲಿ ಹೊಗಳಿಸಿಕೊಳ್ಳುವ ಒಂದು ವಿಚಿತ್ರವಾದ ವಾಂಛೆ ಜನರಲ್ಲಿ ಮನೆ ಮಾಡುತ್ತಿದೆ. ಅದಕ್ಕೆ ತಕ್ಕಂತೆ ಅಭಿಮಾನಿಗಳ ಹಾಗೂ ಹಿಂಬಾಲಕರ ಸಂಖ್ಯೆಯೂ ಬೆಳೆಂುುುತ್ತಿದೆ.
ರಾಜಕೀಯ ವ್ಯಕ್ತಿಗಳಾದರೆ ಅದು ಒಂದಿಷ್ಟು ಅನಿವಾರ್ಯ ಕೂಡ. ಅಲ್ಲಿ ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳದೇ ಹೋದರೆ ಯಾರೂ ಗಮನಿಸುವುದಿಲ್ಲ. ತನ್ನ ಬಗ್ಗೆ ಇಲ್ಲದ ಗುಣಗಳನ್ನೂ ಆರೋಪಿಸಿಕೊಂಡು ಜನರೆದುರು ನಿಂತರೆ ಮಾತ್ರ ಪಾಪದ ಜನರನ್ನು ಬಕರಾಗಳನ್ನಾಗಿಸಲು ಸಾಧ್ಯ. ತಮ್ಮ ಒಂದು ಒಳ್ಳೆಯ ಗುಣವನ್ನು ನೂರಕ್ಕೆ ಹೆಚ್ಚಿಸಿ ಹೇಳದಿದ್ದರೆ ಅವರಿಗೆ ಉಳಿಗಾಲವಿಲ್ಲ. ಇನ್ನು ಸಿನೇಮಾ ನಟರಂತು ಸರಿಯೇ. ಅವರಲ್ಲಿ ಇಲ್ಲದ ಗುಣಗಳನ್ನು ನಾವೇ ಅವರ ಮೇಲೆ ಬಲವಂತವಾಗಿ ಹೇರಿ ಮುಲಾಜೇ ಇಲ್ಲದೇ ಅವರ ಬೆನ್ನು ಮುರಿದು ಹೋಗುವಷ್ಟು ಚಪ್ಪರಿಸಿಬಿಡುತ್ತೇವೆ. ಅವರ ಸಿನೇಮಾಗಳಲ್ಲಿರುವ ಒಳ್ಳೆಯತನವನ್ನೆಲ್ಲ ವೈಯಕ್ತಿಕವಾಗಿ ಅವರಲ್ಲಿಯೇ ಇದೆ ಎಂಬುದನ್ನು ಅವರು ಹೇಳದೆಯೇ ಬಿಂಬಿಸಿ ಬಿಡುತ್ತೇವೆ. ಇನ್ನು ಸಾಮಾಜಿಕ ಕಾರ್ಯಕರ್ತರು ಕೂಡ ಕೆಲವೊಮ್ಮೆ ಯಾವುದೋ ರಾಜಕೀಯ ಉದ್ದೇಶ ಇದ್ದಾಗ ಜನರೆದುರು ತಮ್ಮನ್ನು ತಾವು ಸುಬಗ ಎಂದು ಬಿಂಬಿಸಿಕೊಂಡು ತಮ್ಮ ಬೆನ್ನ ಮೇಲೆ ತಾವೇ ಕೈಯ್ಯಾಡಿಸಿಕೊಳ್ಳುತ್ತಾರೆ. ಆದರೆ ಯಾವುದು ಯಾವತ್ತಿಗೂ ಆಗಬಾರದಿತ್ತೋ ಅದು ಈಗ ಹೆಚ್ಚಾಗಿ ಆಗುತ್ತಿದೆ. ಅದು ಸಾಹಿತಿಗಳು ತಮ್ಮ ಬೆನ್ನನ್ನು ತಾವು ಚಪ್ಪರಿಸಿಕೊಳ್ಳುವುದು. ಹಿಂದೆ ಕೂಡ ಸಾಹಿತಿಗಳಲ್ಲಿ ಸ್ವಯಂರತಿ ಇರಲಿಲ್ಲವೆಂದಲ್ಲ. ತಮ್ಮನ್ನು ತಾವೇ ಹೊಗಳಿಕೊಳ್ಳುವುದಿತ್ತು. ಸಾಹಿತ್ಯಲೋಕದಲ್ಲಿ ತಮ್ಮ ಸ್ಥಾನ ಕಡಿಮೆ ಆಗುತ್ತದೆ ಎಂಬ ಪ್ರಜ್ಞೆ ಇತ್ತು. ಹೀಗಾಗಿ ಅದು ಈಗಿನಷ್ಟು ತೀವೃವಾಗಿ ವ್ಯಾಧಿಯಂತೆ ಹಬ್ಬಿರಲಿಲ್ಲ. ಅದಕ್ಕೊಂದು ಕಡಿವಾಣವಿತ್ತು. ಆದರೆ ಈಗ ಹಾಗಿಲ್ಲ. ಏನೇ ಆಗಲಿ ಮೊದಲು ಹೆಸರು ಗಳಿಸಬೇಕು ಎನ್ನುವ ಹಪಾಹಪಿತನ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಪ್ರೇರೇಪಿಸುತ್ತಿದೆ. ಕೆಲವೊಮ್ಮೆ ಅದು ಸಾಮಾನ್ಯ ವ್ಯಕ್ತಿಗಳಲ್ಲೂ ಕಾಣಿಸಿಕೊಂಡು ಗೊಂದಲಕ್ಕೀಡು ಮಾಡಬಹುದು. ತಾನು ಮಾಡದ ಕೆಲಸವನ್ನು ತಾನೆ ಮಾಡಿದ್ದು ಎಂದು ಹೊಗಳಿಸಿಕೊಳ್ಳುವುದಕ್ಕೋಸ್ಕರ ಇಂತಹ ಬೆನ್ನು ತಟ್ಟಿಕೊಳ್ಳುವ ಕಾರ್ಯ ನಡೆಯುತ್ತಿರುತ್ತದೆ..
ಆದರೆ ಈ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಕ್ರೀಯೆ ಹೆಚ್ಚು ತೊಂದರೆ ಕೊಡುವುದು ಸಂಬಂಧಗಳ ನಡುವೆ. ತಾವೇ ಮಾಡಿದ್ದು ಎಂದು ಎಲ್ಲದಕ್ಕೂ ತಮ್ಮದೇ ಕ್ರೆಡಿಟ್ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಅರಿವಾಗದಂತೆ ಸಂಬಂಧಗಳ ನಡುವೆ ಬಿರುಕು ಮೂಡಲಾರಂಭಿಸುತ್ತದೆ. ಸರಾಗವಾಗಿದ್ದ ಸಂಬಂಧದಲ್ಲಿ ತಾನೆ ಹೆಚ್ಚು ಎಂದು ಒಂದು ವ್ಯಕ್ತಿ ಸ್ಕೋಪ್ ತೆಗೆದುಕೊಳ್ಳುವುದರಿಂದ ಇಡೀ ಸಂಬಂಧದ ಬಾಂಧವ್ಯ ಸಡಿಲವಾಗತೊಡಗುತ್ತದೆ. ಅದು ಗಂಡ ಹೆಂಡತಿಯರ ನಡುವಣ ಸಂಬಂಧ ಇರಬಹುದು, ಅಥವಾ ಇಬ್ಬರು ಸಹೋದರ- ಸಹೋದರಿಯರ ನಡುವಣ ಸಂಬಂಧ ಇರಬಹುದು. ಅಥವಾ ಸ್ನೇಹಿರ ನಡುವೆ ಇರಬಹುದು. ತಾನೇ ಹೆಚ್ಚು ಎಂದು ಒಂದು ವ್ಯಕ್ತಿ ಮೂಗು ಮೇಲೆ ಮಾಡಲು ಪ್ರಾರಂಭಿಸಿದರೋ ಅಲ್ಲಿಗೆ ಆ ಸಂಬಂಧ ಮುಕ್ಕಾಗಲು ಪ್ರಾರಂಭವಾಯಿತೆಂದೇ ಲೆಕ್ಕ. ಅದರಲ್ಲೂ ಇಬ್ಬರು ವ್ಯಕ್ತಿಗಳು ಸೇರಿ ನಡೆಸುವ ವ್ಯವಹಾರವಿದ್ದಲ್ಲಿ ಇಂತಹ ಬೆನ್ನು ತಟ್ಟಿಕೊಳ್ಳುವ ಪ್ರಕ್ರೀಯೆ ಆ ವ್ಯವಹಾರವನ್ನೇ ಹಾಳು ಮಾಡುತ್ತದೆಯಲ್ಲದೇ ಬದ್ಧ ವೈರತ್ವವನ್ನೇ ತಂದಿಡುತ್ತದೆ.
ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವುದು ಕೆಲವೊಮ್ಮೆ ಆ ವ್ಯಕ್ತಿಯಲ್ಲಿ ಕೆಲಸವನ್ನು ಮಾಡಬಲ್ಲ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದು ತನ್ನ ಮೇಲೆ ತನಗಿರುವ ನಂಬಿಕೆಯನ್ನು ಹೆಚ್ಚಿಸುತ್ತದೆ. ಕೆಲಸ ಮಾಡಲು ಪ್ರೇರೇಪಿಸುತ್ತದೆ. ಆದರೆ ಅದೇ ಸಮಯದಲ್ಲಿ ಇಂತಹ ಮನಸ್ಥಿತಿ ಆ ವ್ಯಕ್ತಿಯಲ್ಲಿ ಬ್ರಾಮುಕತೆಯನ್ನು ಸೃಷ್ಟಿಸಿ ಆತ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ ಎಂಬುದನ್ನೂ ಮರೆಯಬಾರದು ಎಂದು ವಿಜ್ಞಾನಿಗಳು ಎಚ್ಚರಿಸಿರುವುದನ್ನೂ ಮರೆಯಬಾರದು.
 

‍ಲೇಖಕರು G

24 September, 2014

4 Comments

  1. ಅಕ್ಕಿಮಂಗಲ ಮಂಜುನಾಥ

    ಮಿತವಾದ ಆತ್ಮ ಪ್ರಶಂಸೆಯಿಂದ ಹಿತವಾದ ಆನಂದ,ಆರೋಗ್ಯ,ಆಹ್ಲದಕತೆ ಬರುವುದಾದರೆ , ಬೇರೆಯವರು ಬೆನ್ನು ತಟ್ಟುವ ಸೋಗಿನಲ್ಲಿ ಬೆನ್ನನ್ನೇ ಮುರಿಯುವುದಾದರೆ……..ನನ್ನ ಬೆನ್ನ ನಾನೇ ಸವರಿಕೊಳ್ಳುತ್ತೇನೆ.

  2. nagraj.harapanahalli

    ಶ್ರೀದೇವಿ, ಆತ್ಮರತಿ ಬರಹಗಾರನಿಗೆ ಇರಬೇಕು. ಅದು ಲಂಕೇಶರ ಮಾದರಿಯದ್ದಾಗಿರಬೇಕು. ಡಾ.ಎಂ.ಎಂ. ಕಲಬುರ್ಗಿ ಸರ್ ಮಾದರಿಯದ್ದಾಗಿರಬೇಕು. ನಿಷ್ಠುರ ಮತ್ತು ಜ್ಞಾನದ ಆತ್ಮರತಿ ನಮಗೆ ಬೇಕು. ಇವತ್ತು ಬಲಪಂಥೀಯ ರಾಜಕಾರಣದ ಆತ್ಮರತಿ,ಕೆಲ ಪೀಠಾಧೀಪತಿಗಳ ಆತ್ಮರತಿ ಮತ್ತು ಕೆಲ ದೃಶ್ಯ ಮಾದ್ಯಮಗಳ, ಕೆಲ ಮುದ್ರಣ ಮಾದ್ಯಮಗಳ ಸಂಪಾದಕರ ಆತ್ಮರತಿ ಇದೆಯಲ್ಲಾ ಅದು ತುಂಬಾ ಅಪಾಯಕಾರಿ. ಇನ್ನು ನಮ್ಮ ಸಮಕಾಲೀನ ಕೆಲ ಬರಹಗಾರರಿದ್ದಾರೆ. ಅವರು ಪ್ರಶಸ್ತಿಗಾಗಿಯೇ ಬರೆಯುವವರು ಇದ್ದಾರೆ. ಆ ಪ್ರಕಾರದ ಆತ್ಮರತಿ ಇನ್ನು ಅಪಾಯಕಾರಿ. ನಿಮ್ಮ ಲೇಖನಕ್ಕೆ ಇದನ್ನೆಲ್ಲಾ ಪೂರಕವಾಗಿ ಸೇರಿಸಿದ್ದೇನೆ….

  3. Kiran

    It is not wrong to praise oneself – especially, when the opposite person just knows you but does not know anything about your achievements.
    Like in any other phases of life, there are some rules:
    1. Never say untrue things; never blow your achievements out of proportion.
    2. Avoid adjectives and comparisons
    3. Be brief; dont be a bore!
    4. One should know when to stop; an idea of body language helps. Stop when the impact has began!
    5. Dont do it infront of unworthy person
    6. Dont do it infront of a crowd
    7. Dont raise your level by belittling others; there is no need to stamp on others body to show your superiority
    8. Dont argue if the opposite person objects – it is a quagmire; try to get out safe! Never raise your voice!
    Please feel free to add!!

  4. Anonymous

    ಪ್ರಚಾರ ಪ್ರಿಯ ಸಾಹಿತ್ಯ ರಾಜಕಾರಣಿಗಳನ್ನು ಕಂಡರೆ ಬೆಚ್ಚುವಂತಾಗುತ್ತದೆ. ನಮಗೇ ಗೊತ್ತಿಲ್ಲದಂತೆ ನಾವೆಲ್ಲಿ ಅವರ ಅಜೆಂಡಾಗಳ ಹತಾರುಗಳಾಗಿಬಿಡುತ್ತೇವೋ ಎಂದು ಆತಂಕವಾಗುತ್ತದೆ.
    – ಅಮರೇಂದ್ರ ಶೆಟ್ಟಿ ಆರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading