ಸ್ವಚ್ಚ ಭಾರತ ಅಭಿಯಾನ – ಎತ್ತ ಸಾಗಲಿದೆ ಮಹಾಯಾನ
ಸಂಗ್ರಹಾನುವಾದ : ನಾ ದಿವಾಕರ
ಮೂಲ : ನಿತ್ಯಾನಂದ ಜಯರಾಮನ್
ಭಾರತವನ್ನು ಸ್ವಚ್ಚಗೊಳಿಸಿ ಸ್ವಚ್ಚವಾಗಿರಿಸುವ ಪ್ರಧಾನಿ ನರೇಂದ್ರ ಮೋದಿಯ ಆಂದೋಲನ ಮೇಲ್ನೋಟಕ್ಕೆ ಸರಳತೆಯ ಸಾಕಾರವಾಗಿ ಕಂಡರೂ ಆಂದೋಲನ ಅಷ್ಟೇ ಸಮಸ್ಯಾತ್ಮಕವೂ ಆಗಿದೆ. ನರೇಂದ್ರ ಮೋದಿಯ ಅಭಿವೃದ್ಧಿಯ ಕಾರ್ಯಸೂಚಿಗೂ ಮತ್ತು ಸ್ವಚ್ಚ ಭಾರತದ ಆಶಯಗಳಿಗೂ ನಡುವೆ ಇರುವ ವೈರುಧ್ಯಗಳು ಹಲವು ಪ್ರಶ್ನೆಗಳನ್ನು ಸೃಷ್ಟಿಸುತ್ತವೆ. ಭಾರತದ ಯಾವ ಭಾಗವನ್ನು ಸ್ವಚ್ಚಗೊಳಿಸಲಾಗುತ್ತದೆ, ಯಾವುದನ್ನು ಸ್ವಚ್ಚಗೊಳಿಸಲಾಗುವುದಿಲ್ಲ, ಏಕೆ ಸ್ವಚ್ಚಗೊಳಿಸಲಾಗುವುದಿಲ್ಲ, ತ್ಯಾಜ್ಯವನ್ನು ಕೊನೆಗೊಳಿಸುವ ಬಗೆ ಹೇಗೆ , ತ್ಯಾಜ್ಯವನ್ನು ಎಲ್ಲಿಗೆ ರವಾನಿಸಲಾಗುತ್ತದೆ ಹೀಗೆ ಹತ್ತುಹಲವು ಪ್ರಶ್ನೆಗಳು ಮೂಡುತ್ತವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸ್ವಚ್ಚತೆಯ ಪರಿಕಲ್ಪನೆ ಶುದ್ಧ ಮತ್ತು ಅಶುದ್ಧ ಅಥವಾ ಪವಿತ್ರ ಮತ್ತು ಅಪವಿತ್ರದ ಪರಿಕಲ್ಪನೆಯ ಸುತ್ತ ಹೆಣೆಯಲಾಗಿದೆ. ಈ ಸನ್ನಿವೇಶದಲ್ಲಿ ಶುದ್ಧತೆಯನ್ನು ಕಾಪಾಡಿಕೊಳ್ಳಲು ಶುದ್ಧ ಮತ್ತು ಅಶುದ್ಧವನ್ನು ಪ್ರತ್ಯೇಕವಾಗಿರಿಸುವುದು ಸಾಮಾಜಿಕ ಅನಿವಾರ್ಯತೆಯಾಗಿ ಪರಿಣಮಿಸುತ್ತದೆ.
ಸ್ವಚ್ಚ ಭಾರತ ಅಭಿಯಾನದ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತುದೇಶದ ಸಮಸ್ತ ಜನತೆ ಸ್ವೀಕರಿಸಿದ ಪ್ರಮಾಣ ವಚನ ಇಂತಿದೆ ಈಗ ಭಾರತ ಮಾತೆಯ ಸೇವೆಯಲ್ಲಿ ನಾವು ತ್ಯಾಜ್ಯವನ್ನು ಹೊಡೆದೋಡಿಸಿ ಸ್ವಚ್ಚತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ . ನಿಜ. ತ್ಯಾಜ್ಯವನ್ನು ತೆಗೆದುಹಾಕುತ್ತೇವೆ. ಆದರೆ ಎಲ್ಲಿಗೆ ಸಾಗಿಸುತ್ತೇವೆ ? ಎಲ್ಲ ಆಧುನಿಕ ಸಂಸ್ಕೃತಿಗಳಲ್ಲೂ ತ್ಯಾಜ್ಯವನ್ನು ತೆಗೆದುಹಾಕುವುದೆಂದರೆ ಕಸವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸುವುದೇ ಆಗಿದೆ. ಕೆಲವು ದಶಕಗಳ ಹಿಂದೆ ತ್ಯಾಜ್ಯ ವಿಲೇವಾರಿ ಅಥವಾ ಸ್ವಚ್ಚತಾ ಕಾರ್ಯ ಸುಲಭವಾಗಿತ್ತು. ಎಲ್ಲ ಜೈವಿಕ ಮತ್ತು ಗೊಬ್ಬರ ಮಾಡುವಂತಹ ತ್ಯಾಜ್ಯವನ್ನು ಮಣ್ಣಿನಲ್ಲಿ ಹಾಕಲಾಗುತ್ತಿತ್ತು . ಅದು ಕ್ರಮೇಣ ಗೊಬ್ಬರವಾಗಿ ಮಾಪರ್ಾಡಾಗುತ್ತಿತ್ತು. ಕಳೆದ ಎರಡು ದಶಕಗಳಲ್ಲಿ ಭಾರತ ಒಂದು ಗ್ರಾಮೀಣ ದೇಶದ ಪ್ರಭಾವಳಿಯಿಂದ ಹೊರಬಂದು ನಗರೀಕೃತ ದೇಶವಾಗಿ ಬೆಳೆದಿದೆ. ನಾವು ಇಂದಿಗೂ ಸಹ ನಿಸರ್ಗವನ್ನು ಪೂಜಿಸುತ್ತೇವೆ, ನಿಸರ್ಗದೊಡನೆ ನಮ್ ಅವಿನಾಭಾವ ದೈವೀಕ ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದಂತೆ ಎದೆ ತಟ್ಟಿ ಹೇಳಬಹುದು. ಆದರೆ ಭಾರತೀಯರಾಗಲಿ, ಅಮೆರಿಕನ್ನರಾಗಲಿ, ಹಿಂದೂ ಅಥವಾ ಮುಸ್ಲಿಮರಾಗಲಿ ನಾವೆಲ್ಲರೂ ಗ್ರಾಹಕ ಸಂಸ್ಕೃತಿಯ ಆರಾಧಕರಾಗಿರುವುದು ಸುಸ್ಪಷ್ಟ.

ಹೊಲಸು- ಒಂದು ರೂಪಕವಾಗಿ
ಚೆನ್ನೈ ನಗರದಿಂದ ಪ್ರತಿದಿನವೂ 6000 ಟನ್ಗಳಷ್ಟು ಮಿಶ್ರಿತ ತ್ಯಾಜ್ಯ ಕೊಡುಂಗೈಯ್ಯೂರನ್ನು ತಲುಪುತ್ತದೆ. ಈ ತ್ಯಾಜ್ಯ ಸಂಗ್ರಹಾಲಯದಿಂದ ಹೊರಸೂಸುವ ದುರ್ಗಂಧ ಮನುಕುಲದ ತಾಳ್ಮೆ, ಸೈರಣೆಗೆ ಒಂದು ಸವಾಲೇ ಸರಿ. ತ್ಯಾಜ್ಯದ ಗುಡ್ಡಗಳು ಸುತ್ತಲಿನ ಗಗನ ಚುಂಬಿ ಕಟ್ಟಡಗಳಿಗಿಂತಲೂ ಎತ್ತರ ಬೆಳೆದಿವೆ. ಈ ಪ್ರದೇಶವನ್ನು ತ್ಯಜಿಸಿ ಬೇರೆಡೆ ನೆಮ್ಮದಿಯಿಂದ ಜೀವಿಸುವ ಅವಕಾಶ ಮತ್ತು ಅನುಕೂಲತೆ ಇರುವವರೆಲ್ಲರೂ ಇಲ್ಲಿಂದ ಕಾಲು ಕಿತ್ತಿದ್ದಾರೆ. ಅನ್ಯ ಮಾರ್ಗ ಇಲ್ಲದ ಅಮಾಯಕರು ಇಲ್ಲಿಯೇ ಜೀವನ ಸವೆಸುತ್ತಿದ್ದಾರೆ. ಒಂದು ಕಾಲದಲ್ಲಿ ಕ್ಯಾಪ್ಟನ್ ಕಾಟನ್ ಕೆನಾಲ್ ಎಂದು ಕರೆಯಲ್ಪಡುತ್ತಿದ್ದ ಕಾಲುವೆ ಇಂದು ತ್ಯಾಜ್ಯ ಸಂಗ್ರಹಾಲಯವಾಗಿದೆ. ಕಸ ಆಯುವವರು ಮತ್ತು ಸ್ಥಳೀಯ ನಿವಾಸಿಗಳು ಈ ಕಾಲುವೆಯ ಮೇಲೆ ಹಾದು ಹೋಗುವ ಸೇತುವೆಯ ಮೂಲಕವೇ ತಮ್ಮಮ ಮನೆಗಳಿಗೆ ತೆರಳಬೇಕು. ಈ ಕಸದ ಗುಡ್ಡದ ನಡುವೆಯೇ ಅನೇಕರು ತಮ್ಮ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಗುಡಿಸಲುಗಳ ನಿರ್ಮಾಣಕ್ಕೆ ಬಳಸಿರುವ ವಸ್ತುಗಳೆಲ್ಲವೂ ಕಸದ ಗುಡ್ಡಗಳಿಂದಲೇ ಆಯ್ದುಕೊಂಡಿದ್ದಾಗಿರುತ್ತವೆ. ಈ ಮನೆಗಳ ಇಪ್ಪತ್ತು ಅಡಿ ಎದುರಿನಲ್ಲೇ ದುರ್ವಾಸನೆ ಬೀರುವ ಕೆಂಪು-ಆರೆಂಜ್ ಬಣ್ಣದ ದ್ರವ್ಯ ಕಾಲುವೆಯಂತೆ ಹರಿಯುತ್ತದೆ. ಮನೆಯ ಸುತ್ತಲೂ ಇರುವ ಕೊಳೆಯುವ ಕಸದ ಗುಡ್ಡೆಯಿಂದ ಹರಿದುಬರುವ ಈ ದ್ರವ್ಯ ನದಿಯಂತೆ ಹರಿಯುತ್ತದೆ. ಈ ನದಿಯ ತೀರದಲ್ಲೇ ಅತ್ತ ಕಡೆಯಲ್ಲಿ ಮುರುಗನ ದೇವಾಲಯವೂ ಇದೆ.
ಬೀಸುವ ಗಾಳಿಯ ದಿಕ್ಕು ಏನೇ ಇರಲಿ ಇಲ್ಲಿರುವ ಹತ್ತು ಹದಿನೈದು ಗುಡಿಸಲುಗಳಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಕಸದ ಬೆಟ್ಟದಿಂದ ಬೀಸುವ ದುವರ್ಾಸನೆಯನ್ನು ಅನುಭವಿಸುವುದು ಅನಿವಾರ್ಯ. ವಿಡಂಬನೆ ಎಂದರೆ ಈ ಬಡಾವಣೆಗೆ ಪಣಕ್ಕಾರ ನಗರ ಎಂದು ಹೆಸರಿಸಲಾಗಿದೆ, ಅಂದರೆ ಶ್ರೀಮಂತರ ಬಡಾವಣೆ ಎಂದರ್ಥ ???? ಕಸ ಆಯುವವರನ್ನೂ ಸೇರಿದಂತೆ ಸಾವಿರಾರು ಜನರು ಈ ಕಸದ ಪರ್ವತಗಳಿಂದ ಶೇಖರಿಸಿದ ತ್ಯಾಜ್ಯಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರತ್ಯೇಕಿಸಿ ಹೊಟ್ಟೆ ಹೊರೆಯುತ್ತಿದ್ದಾರೆ. ಕಸದ ಪರ್ವತದ ಮತ್ತೊಂದು ಬದಿಯಲ್ಲಿ 1500 ಕುಟುಂಬಗಳು ವಾಸಿಸುವ ಬಡಾವಣೆಯೊಂದಿದೆ. 1990ರಲ್ಲಿ ತಮಿಳುನಾಡು ಕೊಳೆಗೇರಿ ನಿರ್ಮೂಲನಾ ಮಂಡಲಿಯ ವತಿಯಿಂದ ಆರ್ಆರ್ ನಗರದಲ್ಲಿ ಈ ಮನೆಗಳನ್ನು ಸಫಾಯಿ ಕರ್ಮಚಾರಿಗಳಿಗಾಗಿಯೇ ನಿರ್ಮಿಸಲಾಗಿತ್ತು. ಆರಂಭದಲ್ಲಿ ಕರ್ಮಚಾರಿಗಳು ಈ ಕಸದ ಗುಡ್ಡೆಯ ಎದುರಿನಲ್ಲಿ ವಾಸಿಸಲು ನಿರಾಕರಿಸಿದ್ದರು ಆದರೆ ನಗರ ಬೆಳೆಯುತ್ತಿದ್ದಂತೆ ಈ ಕುಟುಂಬಗಳನ್ನು ಕಸ ರವಾನೆ ಮಾಡುವಂತೆಯೇ ಆರ್ಆರ್ ನಗರಕ್ಕೆ ರವಾನೆ ಮಾಡಲಾಯಿತು. ಈ ಎರಡೂ ಬಡಾವಣೆಗಳಲ್ಲಿ ವಾಸಿಸುವ ಬಹುತೇಕ ಜನರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಕೊಡುಂಗೈಯ್ಯೂರ್ ಮೀಸಲು ಕ್ಷೇತ್ರವಾಗಿದೆ. ಈ ತ್ಯಾಜ್ಯ ನಿರ್ವಹಣೆಯನ್ನು ಆಧುನಿಕೀಕರಣಗೊಳಿಸುವ ಪ್ರಸ್ತಾಪ ಮಾಡಿದಾಗ ಚೆನ್ನೈನ ಮೇಯರ್ , ಮನೆಗೊಂದು ಶೌಚಾಲಯ ಇರುವಂತೆಯೇ ನಗರಕ್ಕೂ ಒಂದು ಶೌಚಾಲಯ ಅಗತ್ಯ ಹಾಗಾಗಿ ಈ ಕಸದ ಪರ್ವತವೂ ಅನಿವಾರ್ಯ ಎಂದು ಹೇಳಿದ್ದರು !!!!
ಹೆಚ್ಚುತ್ತಿರುವ ತ್ಯಾಜ್ಯ ಮತ್ತು ಸಮಸ್ಯೆಗಳು
ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ಅನುಸರಿಸಲಾಗುತ್ತಿರುವ ಪದ್ಧತಿ ಒಂದು ಸಾಮಾಜಿಕ ಸಮಸ್ಯೆಯಾಗಿ ತೋರುತ್ತದೆ. ಈ ಸಮಸ್ಯೆಗೆ ಯಾವುದೇ ಪರಿಹಾರ ಸೂಚಿಸಿದರೂ ಅದು ಸ್ಥಾಪಿತ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ. ಹಾಗಾಗಿಯೇ ಸ್ಥಳೀಯ ಸಂಸ್ಥೆಗಳು, ರಾಜಕಾರಣಿಗಳು ಸಾಮಾಜಿಕ ಸಮಸ್ಯೆಯನ್ನು ಬದಿಗಿಟ್ಟು ಕಾರ್ಯ ನಿರ್ವಹಿಸುತ್ತವೆ. ತ್ಯಾಜ್ಯ ನಿರ್ವಹಣಾ ಸೌಕರ್ಯಗಳನ್ನು ಆಧುನಿಕ ರೀತಿಯಲ್ಲಿ ಕಲ್ಪಿಸಲು ಗಣ್ಯ ಇಂಜಿನಿಯರುಗಳನ್ನು ಆಹ್ವಾನಿಸಲಾಗುತ್ತದೆ. ಇವರ ಸಲಹೆಗಳು ಕಸವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿ ನೆಲದಲ್ಲಿ ಹೂತುಹಾಕುವುದೋ ಅಥವಾ ಸುಟ್ಟು ಹಾಕುವುದೋ ಪರಿಹಾರ ಎಂದು ಸೂಚಿಸುತ್ತಾರೆ. ಪರಿಹಾರ ಮಾರ್ಗ ಯಾವುದೇ ಆಗಿರಲಿ ಒಂದು ಮಾತಂತೂ ಸತ್ಯ. ಜಾತಿ ಪೀಡಿತ, ಜನಾಂಗೀಯತೆ ಪೀಡಿತ ಭಾರತ, ಅಮೆರಿಕದಂತಹ ದೇಶಗಳಲ್ಲಿ ಈ ಪರಿಹಾರ ಮಾರ್ಗದಲ್ಲಿ ಸೂಚಿಸಲಾಗುವ ಸ್ಥಳಗಳು ಮೇಲ್ವರ್ಗದ ಜನರು ವಾಸಿಸುವ ಪ್ರದೇಶಗಳಿಂದ ದೂರವೇ ಇರುತ್ತವೆ. ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಜನರ ನಡುವೆಯೇ ತ್ಯಾಜ್ಯವೂ ರಾರಾಜಿಸುತ್ತಿರುತ್ತದೆ.
ಅಮೆರಿಕದ ಸಮಾಜಶಾಸ್ತ್ರಜ್ಞ ಮರ್ರೇ ಮಿಲ್ನರ್ ಹೇಳುವಂತೆ ಭಾರತದಂತಹ ಸಮಾಜಗಳಲ್ಲಿ ಒಂದು ಹಂತದವರೆಗೆ ತ್ಯಾಜ್ಯ, ಹೊಲಸು ಮತ್ತು ಅಶುದ್ಧತೆ ಅನಿವಾರ್ಯ ಎಂದೇ ನಂಬಲಾಗುತ್ತದೆ. ಇಲ್ಲಿ ತ್ಯಾಜ್ಯವನ್ನು ಮರುವಿತರಣೆ ಮಾಡಲಾಗುವುದೇ ಹೊರತು ನಾಶ ಮಾಡಲಾಗುವುದಿಲ್ಲ. ಜಾತಿ ಪೀಡಿತವಲ್ಲದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತ್ಯಾಜ್ಯವನ್ನು ನಾಶಪಡಿಸಬಹುದು ಎಂಬ ವಿಶ್ವಾಸ ವ್ಯಕ್ತವಾಗುತ್ತದೆ ಎನ್ನುತ್ತಾರೆ ಮಿಲ್ನರ್. ಆರ್ಥಿಕ ಅಭಿವೃದ್ಧಿ ಎಂದರೆ ಉತ್ಪಾದನೆ ಮತ್ತು ಬಳಕೆಯಲ್ಲಿನ ಹೆಚ್ಚಳ ಮತ್ತು ಸೇವಾಕ್ಷೇತ್ರದ ವಿಸ್ತರಣೆ ಎಂದರ್ಥ. ನೈಸರ್ಗಿಕ ಸಂಪನ್ಮೂಲಗಳನ್ನು ಹೊರತೆಗೆದು, ಗ್ರಾಹಕ ವಸ್ತುಗಳನ್ನಾಗಿ ಪರಿವರ್ತಿಸಿ, ಅದನ್ನು ಬಳಸಿ ಬಿಸಾಡುವ ಪ್ರಕ್ರಿಯೆಯೇ ಆರ್ಥಿಕತೆ ಪ್ರಗತಿಯ ಸೂಚಕವಾಗಿರುತ್ತದೆ. ಅಭಿವೃದ್ಧಿ ಹೆಚ್ಚಾದಂತೆಲ್ಲಾ ತ್ಯಾಜ್ಯವೂ ಹೆಚ್ಚಾಗುತ್ತದೆ. ಇಂದು ಸ್ವಚ್ಚತಾ ಅಭಿಯಾನದ ನೆಪದಲ್ಲಿ ಪೊರಕೆ ಹಿಡಿದು ಬೀದಿ ಗುಡಿಸುತ್ತಿರುವ ಬೂಷ್ವರ್ಾಗಳು ಬಳಸಿ ಬಿಸಾಡುವ ತ್ಯಾಜ್ಯ ವಸ್ತುಗಳು ಹಿಮಗಡ್ಡೆಯ ತುದಿಯಷ್ಟೆ. ಆದರೆ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಭೂಮಿಯೊಳಗೆ, ಜಲ ಸಂಪನ್ಮೂಲಗಳೊಳಗೆ ಮತ್ತು ಗಾಳಿಯಲ್ಲಿ ಬೆರೆಯುವ ತ್ಯಾಜ್ಯ ವಸ್ತುಗಳನ್ನು ಪರಿಗಣಿಸುವವರಾರು ?
ಇದು ಸ್ವಚ್ಚ ಭಾರತ ಅಭಿಯಾನದ ಮುಂದಿರುವ ಬೃಹತ್ ಸಮಸ್ಯೆ.






ಚಿಂತನೆಗೆ ಹಚ್ಚುವ ಲೇಖನ ಸರ್…….
Nice Article…………….