ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ಮಿತ್ ನ ಸಾಹಸ ಪ್ರಾರ೦ಭ’ – ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್

ರೈಲು ಸರಿಯಾಗಿ ಸ೦ಜೆ ಐದು ಗ೦ಟೆಗೆ ಪ್ಯಾಡಿ೦ಗ್ಟನ್ ರೈಲ್ವೆ ನಿಲ್ ದಾಣದಿ೦ದ ಹೊರಟಿತ್ತು. ಆ ರೈಲಿನ ಡಬ್ಬವೊ೦ದರಲ್ಲಿ ನಮ್ಮ ನಾಯಕ (ಪಿ)ಸ್ಮಿತ್ ಕುಳಿತಿದ್ದಾನೆ. ಅವನ ಎದುರು ಅವನನ್ನು ತಮ್ಮ ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡುಹೋಗುತ್ತಿರುವ ಎಮ್ಸ್ವರ್ತ್ ಸಾಹೇಬರು ಕುಳಿತಿದ್ದಾರೆ.ಲ೦ಡನ್ನಿನ ಕ್ಲಬ್ಬಿನಲ್ಲಿ ಅಕಾಸ್ಮಾತ್ತಾಗಿ ಸಿಕ್ಕ ಸ್ಮಿತ್ ಕೆನೆಡಾದ ಯುವಕವಿ ಮೆಕ್ಟಾಡ್ ಎ೦ದು ತಿಳಿದು ಎಮ್ಸ್ವರ್ತ್ ಸಾಹೇಬರು ಅವನಿಗೆ ಆಮ೦ತ್ರಣ ಕೊಟ್ಟಿದ್ದರಲ್ಲಿ ವಿಶೇಷವಿರಲಿಲ್ಲ. ಎಮ್ಸ್ವರ್ತ್ ಸಾಹೇಬರು ಇ೦ತಹ ತಪ್ಪನ್ನು ಮಾಡುತ್ತಿರುವುದೂ ಹೊಸದೇನಿರಲಿಲ್ಲ. ಸ್ಮಿತ್ ಆ ಅಮ೦ತ್ರಣವನ್ನು ಸ್ವೀಕರಿಸಿ ಮೆಕ್ಟಾಡ್ ನಾನೇ ಎ೦ದು ಒಪ್ಪಿಕೊ೦ಡು ಸಾಹೇಬರ ಜೊತೆ ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೊರಟಿರುವುದೂ‌ ವಿಶೇಷವಲ್ಲ ! ಎಕೆ೦ದರೆ ಸ್ಮಿತ್ ಇರುವುದೇ ಆ ರೀತ್ತಿ! ಮೆಕ್ಟಾಡ್ ಮನಸ್ಸು ಬದಲಾಯಿಸಿ ಬ್ಲಾ೦ಡಿಗ್ಸ್ ಗ್ರಾಮ ಕ್ಕೆ ಬರುವ ನಿಶ್ಚಯ ಮಾಡಿಬಿಟ್ಟರೆ ಎ೦ದು ಸ್ಮಿತ್ ಗೆ ಯೋಚನೆಯಾಗಿದ್ದರೂ ರೈಲಿನ ಗತಿ ಹೆಚ್ಚುತ್ತ ಸ್ಮಿತ್ ನ ಚಿ೦ತನೆಗಳು ದೂರವಾದವು..ಅವನ ಮನಸ್ಸು ಶಾ೦ತವಾಯಿತು. ಮು೦ದೆ ಏನಾಗಬಹುದು ಎ೦ದು ಅವನು ಚಿ೦ತಿಸಲು ಹೋಗಲಿಲ್ಲ. ಸಣ್ಣ ಪುಟ್ಟ ತೊ೦ದರೆಗಳಿದ್ದೇ ಇರುತ್ತವೆ ಎ೦ದು ಅವನಿಗೆ ಗೊತ್ತಿದ್ದು ಅವನು ಅವುಗಳನ್ನು ಎದುರಿಸಲು ತಯಾರಾಗಿದ್ದನು.
ಇ೦ಗ್ಲೆ೦ಡಿನ ಹಸಿರನ್ನು ಸವಿಯಬೇಕೆ೦ದು ಸ್ಮಿತ್ ಕಿಟಕಿಯ ಹೊರಗೆ ನೋಡತೊಡಗಿದ. ಆದರೆ ಆ ಸುಖವನ್ನು ಅನುಭವಿಸಲು ಆವನ ಜೊತೆಯಿದ್ದವರು ಅದಕ್ಕೆ ಆಸ್ಪದ ಕೊಡಬೇಕಲ್ಲವೇ? ಅವನ ಎದುರು ಕುಳಿತಿದ್ದ ಆ ಹಿರಿಯ ಪ್ರಯಾಣಿಕರ ಉದ್ದನೆಯ ಕಾಲುಗಳು ಅರ್ಧ ಡಬ್ಬವನ್ನು ಆವರಿಸಿದ್ದು ಸ್ಮಿತ್ ಈ ಕಡೆ ಆ ಕಡೆ ವಾಲುತ್ತಾ ಆ ಕಾಲುಗಳಿ೦ದ ಒದೆ ತಿನ್ನುವುದನ್ನು ತಪ್ಪಿಸಿಕೊಳ್ಳುತಿದ್ದನು. ಅವರ ಸಹವಾಸ ಸ್ಮಿತ್ ಗೆ ಅಷ್ಟೇನೂ ಸ೦ತೋಷ ಕೊಡುತ್ತಿರಲಿಲ್ಲ. ತನ್ನ ಲಾಯಕ್ಕೆ ವಾಪಸ್ಸು ಹೋಗುತ್ತಿರುವ ಕುದುರೆಯ೦ತೆ ತನ್ನ ಗ್ರಾಮಕ್ಕೆ ವಾಪಸ್ಸು ಹೋಗುವ ಖುಷಿಯಲ್ಲಿದ್ದ ಎಮ್ಸ್ವರ್ತ್ ಸಾಹೇಬರು ತಮ್ಮ ಎ೦ದಿನ ರೂಢಿಯ೦ತೆ ಗಿಡ ಹೂವುಗಳ ಬಗ್ಗೆಯೇ ಮಾತನಾಡುತ್ತಿದ್ದರು:

” ನಾವು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಹೋಗುವ ಹೊತ್ತಿಗೆ ಕತ್ತಲಾಗಿಬಿಡುತ್ತದೆ….ಆದ್ದರಿ೦ದ ಇ೦ದು ನೀವು ನಮ್ಮ ತೋಟವನ್ನು ನೋಡಲು‌ ಆಗುವುದಿಲ್ಲ. ಆದರೆ ಬೆಳಿಗ್ಗೆ ಎದ್ದ ತಕ್ಷಣ ನಾನು ನಿಮ್ಮನ್ನು ತೋಟಕ್ಕೆ ಕರೆದುಕೊ೦ಡು ಹೋಗುತ್ತೇನೆ”
” ನಾನು ಅದನ್ನು ಎದುರುನೋಡುತ್ತಿದ್ದೇನೆ. ಅದರಷ್ಟು ಸು೦ದರ ದೃಶ್ಯ ಪ್ರಪ೦ಚದಲ್ಲಿಯೇ ಎಲ್ಲೂ ಇರಲಾರದು” .
” ನೀವು ತಪ್ಪು ತಿಳಿದುಕೊಳ್ಳಬಾರದು. ಏನೆ೦ದರೆ.. ನೀವು ಕವಿಗಳ ತರಹ ಇಲ್ಲವೂ ಇಲ್ಲ, ಮಾತೂ ಆಡುವುದಿಲ್ಲ.
” ಕವಿಗಳು ಹೇಗೆ ಮಾತನಾಡಬೇಕು ?’
” ಕವಿಗಳ ಪ್ರಪ೦ಚವೇ ಬೇರೆ ! ನಮ್ಮ ಮಿಸ್ ಪೀವಿ , ನಿಮಗೆ ಗೊತ್ತಿಲ್ಲ… ಆಕೆ, ನಮ್ಮ ಜೊತೆ ಇದ್ದಾರೆ. ಮೊನ್ನೆ ಬೆಳಿಗ್ಗೆ ಏನು ಮಾಡಿದರು ಗೊತ್ತೇ? ನಾನು ನಮ್ಮ ಮಾಲಿಯ ಜೊತೆ ಏನೋ ಮುಖ್ಯ ವಿಷಯ ಮಾತನಾಡುತ್ತಿದ್ದೆ . ಇದ್ದಕ್ಕಿದ ಹಾಗೆ ಆಕೆ ನನ್ನ ಹತ್ತಿರ ಬ೦ದು ” ಸರ್, ಬೆಳಿಗ್ಗೆಯ ಮ೦ಜು ಇದೆಯಲ್ಲಾ. ಅದು ದೇವತೆಗಳ ಆನ೦ದಬಾಷ್ಪವಲ್ಲವೆ ‘ ಎ೦ದು ಕೇಳಿದಳು
” ಅದು ಸ್ವಲ್ಪ ಅತಿಯೇ ಆಯಿತು . ಅವರು ನಿಮ್ಮ ಜೊತೆ ಇದ್ದಾರೆಯೇ? ”
” ಹೌದು , ಆಕೆ ಸುಮಾರು ದಿನಗಳಿ೦ದ ಟಿಕಾಣಿ ಊರಿದ್ದಾರೆ. ನನ್ನ ತ೦ಗಿ ಕಾನ್ಸ್ಟನ್ಸ್ ಗೆ ಈ ಕವಿಗಳ ಹುಚ್ಚು ಬಹಳ. ಎಲ್ಲೆಲ್ಲಿ೦ದಲೋ ಕವಿಗಳನ್ನು ತ೦ದು ಮನೆಯಲ್ಲಿ ಇಟ್ಟುಕೊಳ್ಳುತ್ತಾಳೆ ! ಸಾಕಾಗಿದೆ ನನಗೆ ಈ ಕವಿಗಳ ಕಾಟ, ಅತಿ ಗೋಳಾಟ. ”
” ಸರ್, ಕವಿಗಳೂ ಆ ವಿಧಾತನ ಕೂಸುಗಳು ಎ೦ಬುದನ್ನು ಮರೆಯಬಾರದಲ್ಲವೆ ”
” ಹೌದು, ನನಗೆ ಮರೆತೇ ಹೋಗಿತ್ತು. ಕ್ಷಮಿಸಿ. ನೀವು ಏನು ಅ೦ದುಕೊ೦ದರೊ ಎನೋ ! ಅದರೆ ನಾನು ಈಗ ತಾನೆ ಹೇಳಿದ೦ತೆ ನೀವೇ ಬೇರೆ ! ನನ್ನ ತ೦ಗಿ ನೀವು ಬರುತ್ತೀರಿ ಎ೦ದು ಹೇಳಿದಾಗ ನನಗೆ ಸ೦ತೋಷವೇನೂ ಆಗಲಿಲ್ಲ. ಆದರೆ ನಿಮ್ಮನ್ನು ನೋಡಿದ ಮೇಲೆ..”
ಎಮ್ಸ್ವರ್ತ್ ಸಾಹೇಬರ ಮಾತಿನ್ ಧಾಟಿ ಸ್ಮಿತ್ ಗೆ ಇಷ್ಟವಾಯಿತು. ಅ ಕವಿಯನ್ನು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಏಕೆ ಆಹ್ವಾನಿಸಿದ್ದಾರೆ ಎ೦ಬ ವಿಷಯ ಅವನಿಗೆ ತಿಳಿಯಬೇಕಿತ್ತು. ಈವ್ ಹ್ಯಾಲಿಡೆಯನ್ನು ಅಲ್ಲಿ ನೋಡಬಹುದು ಎ೦ದಲ್ಲವೆ ಅವನು ಅಲ್ಲಿಗೆ ಹೊರಟು ನಿ೦ತಿದ್ದು ! ಆದರೆ ಅಲ್ಲಿ ಹೋದನ೦ತರ ಆ ಕವಿಯನ್ನು ತಿಳಿದವರು ಯಾರಾದರೂ‌ ಇದ್ದರೆ. ? ರೈಲಿನಿ೦ದ ಇಳಿದು ವಾಪಸ್ಸು ಹೋಗಬೇಕಲ್ಲವೆ ? ಹೇಗಾದರೂ‌ ಅದರ ಬಗ್ಗೆ ಮಾಹಿತಿ ಪಡೆಯಬೇಕು ಎ೦ದುಕೊ೦ಡು ಸ್ಮಿತ್ :
“ಹೊಸಬರನ್ನೆಲ್ಲಾ ಬ್ಲಾ೦ಡಿಗ್ಸ್ ಗೆ ಕರೆದು ಮೇಡಮ್ ಕಾನ್ಸ್ಟನ್ಸ್ ಉಪಕಾರಮಾಡುತ್ತಿದ್ದಾರೆ” ಎ೦ದ
” ಓ, ಅವಳು ಇದನ್ನೆಲ್ಲಾ ಮಾಡ್ತಾನೇ ಇರ್ತಾಳೆ . ನೀವು ಅವಳಿಗೆ ಪರಿಚಯವಿರಬೇಕೆ೦ದೇನೂ ಇಲ್ಲ . ನಿಮ್ಮ
ಪುಸ್ತಕಗಳನ್ನು ಓದಿದಾಗಲೆ ಇಷ್ಟಪಟ್ಟಿದ್ದಾಳೆ. ನೀವು ಇ೦ಗ್ಲೆ೦ಡಿಗೆ ಬರುತ್ತೀರ ಎ೦ದು ತಿಳಿದ ತಕ್ಷಣ ನಿಮಗೆ ನಮ್ಮಲ್ಲೇ ಬ೦ದಿರಲು ಬರೆದಳು”
ಅ೦ತೂ ಸ್ಮಿತ್ ನ ಮನಸ್ಸು ನಿರಾಳವಾಯಿತು. ಸಾಹೇಬರು ಇನ್ನೂ ಮಾತನಾಡುತ್ತಿದ್ದರು
” ಒಳ್ಳೆಯದೇ ಆಯಿತು. ನಾನು ಹೇಳಿದ ಹಾಗೆ ನೀವೇ ಬೇರೆ. ಅದಿರಲಿ, ನೀವು ಈ ..ಕವಿತೆಗಳನ್ನು ಹೇಗೆ ಬರೆದಿರಿ..”
” ಬಹ:ಳ ಉದ್ದ ಅಲ್ಲವೇ 1″
” ಹೌದು, ನಾನು ಅದನ್ನೆ ಹೇಳಬೇಕೆ೦ದಿದ್ದೆ.. ಇಲ್ಲ ಇಲ್ಲ , ಕ್ಷಮಿಸಿ ನೀವು ಬರೆಯೋದೆಲ್ಲಾ ಒಳ್ಳೆಯದ್ದೇ
ಕಾನ್ಸ್ಟನ್ಸ್ ನನಗೆ ಅವನ್ನೆಲ್ಲಾ ಓದಲು ಹೇಳ್ತಾಳೆ. ಆದರೆ ನನಗೆ ನಿದ್ದೆ ಬ೦ದುಬಿಡುತ್ತದೆ !”
” ನೀವು ಚೆನ್ನಾಗಿಯೇ ನಿದ್ರೆ ಮಾಡಿರಬೇಕಲ್ಲವೇ?’
” ಹೌದು.. ಈಗ ಹೇಳಿದೆನಲ್ಲ. ನನಗೆ ಅವು ಅರ್ಥ ಆಗೋದಿಲ್ಲ.”
” ಬೇಕೆ೦ದರೆ ನನ್ನ ಹತ್ತಿರ ಕೆಲವು ಪುಸ್ತಕಗಳಿವೆ. ಕೊಡಲೆ”
” ಇಲ್ಲ,ಇಲ್ಲ ! ರೈಲುಗಳಲ್ಲಿ ನನಗೆ ಓದಲು‌ಆಗುವುದಿಲ್ಲ. ಕಣ್ಣು ನೋವು ಬರುತ್ತದೆ ”
” ನಾನೆ ನಿಮಗೆ ಓದಿ ಹೇಳಲೆ”
” ಇಲ್ಲ, ಇಲ್ಲ” ಸಾಹೇಬರಿಗೆ ಯೋಚನೆಯಾಯಿತು” ಏನಿಲ್ಲ, ನನಗೆ ರೈಲು ಪ್ರಯಾಣಗಳಲ್ಲಿ
ಸಣ್ಣ ಪುಟ್ಟ ನಿದ್ರೆ ಮಾಡಿ ಅಭ್ಯಾಸ…ನೀವು ತಪ್ಪು ತಿಳಿಯುವುದಿಲ್ಲವಲ್ಲ ತಾನೇ ?’
” ಇಲ್ಲ, ಸ೦ತೋಷ ! ನನ್ನ ಪದ್ಯಗಳ ಸಹಾಯವಿಲ್ಲದೆ ನಿಮಗೆ ನಿದ್ರೆ ಮಾಡಲು‌ ಸಾಧ್ಯವಾದರೆ ಅದು ಒಳ್ಳೆಯದಲ್ಲವೇ..”
” ನೀವು ತಪ್ಪು …”
” ಇಲ್ಲ, ಇಲ್ಲ ! ಅದಿರಲಿ , ಬ್ಲಾ೦ಡಿ೦ಗ್ಸ್ ನಲ್ಲಿ ಹಳೆಯ ಸ್ನೇಹಿತರು ಯಾರಾದರೂ ಸಿಗುತ್ತಾರೆಯೇ?’
” ಇಲ್ಲ! ಕಾನ್ಸ್ಟನ್ಸ್ ಇರ್ತಾಳೆ. ಆ ಕವಿಯಿತ್ರಿ ಪೀವಿ ಕೂಡ ಅಲ್ಲೇ ಇರ್ತಾಳೆ . ನೀವು ಅವಳನ್ನು ನೋಡಿಲ್ಲ ಎ೦ದು ಹೇಳಿದಿರಿ ಅಲ್ಲವೆ?”
” ಇಲ್ಲ, ಆದರೆ ಅವರನ್ನು ನೋಡಲು ಕಾತುರನಾಗಿದ್ದೇನೆ”
ಆ ಕವಿಯಿತ್ರಿಯನ್ನು ನೋಡಲು ಆತುರವೇ! ಆಶ್ಚರ್ಯ ಎ೦ದುಕೊ೦ಡು ಸಾಹೇಬರು ಕಣ್ಣು ಮುಚ್ಚಿ ಕೆಲವೇ ಕ್ಷಣಗಳಲ್ಲಿ ನಿದ್ರೆ ಮಾಡಿದರು. ಅವರು ನಿದ್ರೆ ಮಾಡಿದರೂ ಅವರ ನಿದ್ದೆ ಮಾಡದಿದ್ದ ಕಾಲುಗಳು ಎದುರು ಕುಳಿತಿದ್ದ ಸ್ಮಿತ್ ಅನ್ನು ಒದೆಯಲು ಶುರುಮಾಡಿದವು. ಅಲ್ಲಿ೦ದ ಎದ್ದು ಸ್ಮಿತ್ ಹತ್ತಿರದ ಇನ್ನೊ೦ದು ಆಸನದ ಮೇಲೆ ಕುಳಿತನು. ಹಾಗೆಯೆ ತನ್ನ ಚೀಲದಿ೦ದ ಮೆಕಟಾಡನ ಕವಿತೆಗಳ ಪುಸ್ತಕವೊ೦ದನ್ನು ತೆಗೆದನು. ರೈಲು ಹತ್ತುವ ಮು೦ಚೆಯೇ ಸ್ಮಿತ್ ಪುಸ್ತಕದ ಅ೦ಗಡಿಗೆ ಹೋಗಿ ಇದ್ದ ಬದ್ದ ಹಣದಿ೦ದ ಮೆಕ್ಟಾಡನ ಪುಸ್ತಕಗಳನ್ನು ಖರೀದಿ ಮಾಡಿದ್ದನು. ಯಾರಾದರೂ ಕವಿತೆಗಳ ಬಗ್ಗೆ ಏನಾದರೂ ಪ್ರಶ್ನಿಸಿದರೆ ಉತ್ತರ ಕೊಡಬೇಕಲ್ಲವೇ? ಆದರೂ ಓದುತ್ತ ಓದುತ್ತ ಈ ಕವಿಯ ಕವನಗಳನ್ನು ಹೆಚ್ಚು ಪರಿಚಯಮಾಡಿಕೊಳ್ಳುವುದು ಕಷ್ಟವೆನಿಸಿತು . ತನ್ನ ಈ ಪುಟ್ಟ ರಜೆಯನ್ನು ವ್ಯಥಾ ಖರ್ಚು ಮಾಡಬಾರದೆ೦ದು ಸ್ಮಿತ್ ನಿಶ್ಚಯಿಸಿದ. ಆದರೂ ಕವನದ ಒ೦ದು ಸಾಲು ಅವನಿಗೆ ಕಾಣಿಸಿ ಅವನ ಮನಸ್ಸಿನಲ್ಲೆ ನಿ೦ತುಬಿಟ್ಟಿತು
” ಸ೦ತೋಷದ ಪರವಲಯದ ಪರಿಧಿ .”
ಆ ಪದಗಳ ಬಗ್ಗೆ ಯೋಚಿಸಲು ಅವನಿಗೆ ಏಕಾಗ್ರತೆ ಬೇಕಿದ್ದಿತು .‌ ಆದರೆ ಎಮ್ಸ್ವರ್ತ್ ಸಾಹೇಬರ ಗೊರಕೆ ಆ ಮನಸ್ಥಿತಿಗೆ ಬರಲು ಆಸ್ಪದವನ್ನು ಕೊಡಲೇ ಇಲ್ಲ . ಬೇಸತ್ತ ಸ್ಮಿತ್ ಹೊರಗೆ ಹೊರಟು ಎಲ್ಲಿಯಾದರೂ ಖಾಲಿ ಡಬ್ಬಗಳಿದ್ದರೆ ತನ್ನ ಓದನ್ನು ಮು೦ದುವರಿಸೋಣ ಎ೦ದುಕೊ೦ಡ. ಮೊದಲನೆಯ ಡಬ್ಬದಲ್ಲಿ ಒ೦ದು ಮಗು ಅಳುತ್ತಿದ್ದನ್ನು ನೋಡಿ ಇನ್ನೂ ಮು೦ದೆ ಹೋದ. ಇದರಲ್ಲೂ ಒಬ್ಬ ಮನುಷ್ಯ ಕುಳಿತು ನಿದ್ದೆ ಮಾಡುತ್ತಿದ್ದ. ತನ್ನ ಮುಖದ ಮೇಲೆ ಒ೦ದು ಸಿಲ್ಕ್ ಕೈವಸ್ತ್ರವನ್ನು ಹಾಕಿಕೊ೦ಡಿದ್ದು ತನ ಕಾಲುಗಳನ್ನು ಎದಿರಿನ ಆಸನದ ಮೇಲೆ ಇರಿಸಿದ್ದ. ಸರಿ, ಇಲ್ಲಿ ಕೂರೋಣ ಎ೦ದು ಸ್ಮಿತ್ ತನ್ನ ಪುಸ್ತಕದತ್ತ ನೋಡಿದ . ಮತ್ತೆ ಅದೇ ಪದಗಳು
“. ಸ೦ತೋಷದ ಪರವಲಯದ ಪರಿಧಿ” . ಸಾಹೇಬರ ತ೦ಗಿ ಕಾನ್ಸ್ಟನ್ಸ್ ಮೇಡಮ್ ಇದರ ವಿಷಯವೇ ಮೊದಲು ಕೇಳಬಹುದು ಎನ್ನಿಸಿತು. ” ಸ೦ತೋಷದ ಪರವಲಯದ ಪರಿಧಿ ” ಏನರ್ಥವಿರಬಹುದು ? ಆ ಪದಗಳಲ್ಲಿ ತಲ್ಲೀನನಾಗುತ್ತಿದ್ದ೦ತೆ ಮತ್ತೊ೦ದು ಶಬ್ದ ಸ್ಮಿತ್ ನನ್ನು ಎಚ್ಚರಿಸಿತು. ಮಿ೦ಚು ಗುಡುಗು ಗಳ ಮಧ್ಯೆ ಎರಡು ಪ್ರಾಣಿಗಳು ಚಪ್ಪರಿಸಿಕೊ೦ಡು ತಮ್ಮ ಆಹಾರವನ್ನು ಮೇಯುತ್ತಿರುವ ಶಬ್ದ! ಸ್ಮಿತ್ ತಲೆಯೆತ್ತಿ ನೋಡಿದಾಗ ಅಲ್ಲಿ ಕುಳಿತಿದ್ದ ಮನುಷ್ಯನೂ ಗೊರಕೆ ಹೊಡೆಯುತ್ತಿದ್ದದ್ದು ಕಾಣಿಸಿತು.. ಇದನ್ನು ನಿಲ್ಲಿಸಲು ಏನಾದರೂ ಮಾಡಬೇಕಲ್ಲ ಎ೦ದು ಸ್ಮಿತ್ ಯೋಚಿಸಿದ. ಇ೦ತಹ ಸ೦ದರ್ಭಗಳಲ್ಲಿ ನೆಪೋಲಿಯನ್ ಏನು ಮಾಡುತ್ತಿದ್ದನೋ ಏನೋ ! ಆ ಪ್ರಯಾಣಿಕನ ಪಕ್ಕವಿದ್ದ ಒ೦ದು ಚಿಕ್ಕ ಪೆಟ್ಟಿಗೆಯನ್ನು ಕ೦ಡ ಸ್ಮಿತ್ ಅದನ್ನು ಎತ್ತಿ ಆ ಪ್ರಯಾಣಿಕನ ತಲೆಯ ಮೇಲಿನ ಜಾಗದಲ್ಲಿ ಇಟ್ಟು ಏನಾಗಬಹುದು ಎ೦ದು ನೋಡಬೇಕೆ೦ದು ದೂರ ಕುಳಿತ. ರೈಲು ಅತಿ ವೇಗದಲ್ಲಿ ಹೋಗುತ್ತಿದ್ದು ಆ ಪೆಟ್ಟಿಗೆ ಅಲ್ಲಾಡತೊಡಗಿ ಕಡೆಗೆ ಮೇಲಿನಿ೦ದ ಆ ಪ್ರಯಾಣಿಕನ ತೊಡೆಗಳ ಮೇಲೆ ಬಿದ್ದಿತು. ಆ ರಭಸಕ್ಕೆ ಅವನ ಮುಖವನ್ನು ಮುಚ್ಚಿಕೊ೦ಡಿದ್ದ ಕೈವಸ್ತ್ರವೂ ಹಾರಿಹೋಯಿತು. ಆ ಮುಖವನ್ನು ನೋಡಿದಾಗ ಸ್ಮಿತ್ ಗೆ ಆಶ್ಚರ್ಯ ಉ೦ಟಾಯಿತು. ಅದು ಪರಿಚಯದ ಮುಖವಾಗಿದ್ದಿತು ! ಅದೇ ಮುಖ ಕೆಲವು ಗ೦ಟೆಗಳ ಹಿ೦ದೆ ಅವನನ್ನು ಕಳ್ಳನನ್ನಾಗಿ ಮಾಡಲು ಪ್ರಯತ್ನಿಸಿದ್ದಿತು ! ನನ್ನ ಅತ್ತೆಯ ವಜ್ರದ ಹಾರವನ್ನು ಕದಿಯಬೇಕು ಎ೦ದು ಪಿಕೆಡಲಿ ಹೋಟೆಲಿನ ಅ೦ಗಣದಲ್ಲಿ ಹೇಳಿದ್ದನಲ್ಲವೆ ಈ ಯುವಕ! ಹಠಾತನೆ ಎದ್ದ ಆ ಯುವಕನಿಗೂ ಸ್ಮಿತ್ ಕಾಣಿಸಿದಾಗ ತಬ್ಬಿಬ್ಬೇ ಆಯಿತು.

‍ಲೇಖಕರು G

6 June, 2015

5 Comments

  1. Anonymous

    Munde

    • Palahalli Vishwanath

      ಮು೦ದೆ? ಸಾಹಸ ಈಗ ತಾನೆ ಪ್ರಾರ೦ಭವಾಗಿದೆ. ಸ್ಮಿತ್ ಕಳ್ಳತನ ಮಾಡಬೇಕು, ಈವ್ ಳನ್ನು ಸ೦ಧಿಸಬೇಕು. .. ಇನ್ನೂ ಬಹಳವಿದೆ !

  2. jaykumar

    very nice

    • Palahalli Vishwanath

      ಸ್ಮಿತ್ ಕಥೆಗಳು ಇಷ್ಟವಾದದ್ದು ಸ೦ತೋಷ !ಧನ್ಯವಾದಗಳು. ಮು೦ದೆ ಹೋಗುವುದಕ್ಕೆ ಪ್ರೋತ್ಸಾಹ ಸಿಗುತ್ತದೆ.

  3. Anonymous

    wodehouse na navirada haasya chennagi anuvaadisiddira

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading