ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸ್ಪರ್ಶವನ್ನು ಆಲಿಸುವ ಹೃದಯಬೇಕು…’ – ರೇಣುಕಾ ನಿಡಗುಂದಿ ಬರೀತಾರೆ

ಭಾವ ಸ್ಪರ್ಶದ ಕವಲಿನಲ್ಲಿ

ರೇಣುಕಾ ನಿಡಗುಂದಿ

ಒಂದು ಹನಿ ಬೆಚ್ಚಗಿನ ಕಣ್ಣಿರು ಸೋಕಿದ ಬಿಸಿ ಸ್ಪರ್ಶವೂ ಕೂಡ ಒಂದು ಹಿತವಾದ ಅಪ್ಪುಗೆಯ ಸ್ಪರ್ಶದಷ್ಟೇ ಬಹುಕಾಲ ಬಾಳಿ ಒಳಗೊಳಗೇ ಅಂತರಂಗವನ್ನು ಕನಲಿಸುತ್ತಿರುತ್ತದೆ. ಸ್ಪರ್ಶವನ್ನು ಆಲಿಸುವ ಹೃದಯಬೇಕು. ಆಗಾಗ ನವಿರಾಗಿ ಎಲೆಯ ಸ್ಪರ್ಶದಷ್ಟೇ ಮೆಲ್ಲ ಮೆಲ್ಲನೇ ಸುಳಿವ ಸುಳಿಗಾಳಿಯ ಸ್ಪರ್ಶವೂ ಸುಖದ ಅನುಭೂತಿಯನ್ನು ಚಿರವಾಗಿಸುತ್ತದೆ. ತುದಿ ಬೆರಳಿನಿಂದ ಜಾರಿಹೋದ ಸ್ಪರ್ಶದ ಪರ್ವವೊಂದು ವರ್ತಮಾನದ ಪಥವನ್ನು ಬದಲಿಸಿದಂತೆ, ಋತುವೊಂದನ್ನು ಮೆಲ್ಲಗೆ ಚಿಟ್ಟೆಯನ್ನು ಬೆರಳಲ್ಲಿ ಹಿಡಿಯುವಂತೆ ಹಿಡಿದುನಿಲ್ಲಿಸಿದ ಹಾಗೆ ಎಲ್ಲವೂ ಬದಲಾಗುತ್ತದೆ. ನಾವು ನೀವು ಎಲ್ಲ ಹಾದಿ ಗೊತ್ತಿಲ್ಲದ ಪಥಿಕರು. ಯಾವ ಸ್ಪರ್ಶದ ತಂತುಗಳು ಎಲ್ಲಿಗೆ ಕೊಂಡೊಯ್ಯುತ್ತವೋ ಗೊತ್ತಿಲ್ಲ. ಎಲ್ಲಿ ಹಿಡಿದು ನಿಲ್ಲಿಸುತ್ತದೋ, ಎಲ್ಲಿ ಕೊನೆಗೊಳ್ಳುತವೋ ಅದೂ ಗೊತ್ತಿರುವುದಿಲ್ಲ. ಸ್ಪರ್ಶದ ಅನುಭೂತಿಯ ಕ್ಷಣ ಮಾತ್ರ ನಮ್ಮದು.
ಈ ಯಮುನೆಯನ್ನು ದಿನಾ ನೋಡುತ್ತೇನೆ. ಒಂದೊಂದಾಗಿ ಏನನ್ನಾದರೂ ನೆನಪಿಸಿಕೊಡುತ್ತಿರುತ್ತಾಳೆ. ಬೇಸಿಗೆಯಲ್ಲಿ ಇದ್ದೂ ಸತ್ತಂತೆ ಸೊರಗಿ ನಾರುತ್ತ ಬಿದ್ದಿದ್ದರೆ, ಮಳೆಗಾಲದಲ್ಲಿ ತುಂಬಿ ಹರಿಯುವ ಕಾಲಿಂದಿ ಎದೆಯಲ್ಲಿ ತಲ್ಲಣ ಹುಟ್ಟಿಸುತ್ತಾಳೆ. ಪ್ರಶಾಂತವಾಗಿದ್ದಾಗ ಪಾದರಸದಂತೆ ಮಿರುಗುವ ಮೈ ಹೊಳಪಿನಿಂದ ಚೆಲುವಾಗಿ ಕಾಣುತ್ತಾಳೆ. ರಾಧೆಯ ಮೌನ-ಧ್ಯಾನ, ಭಕ್ತಿ-ಮೋಹ ಎಲ್ಲವೂ ವಿಲೀನಗೊಂಡಿರಬಹುದಾದ ತಾಣ. ಯಮುನೆಯನ್ನು ಸ್ಪರ್ಶಿಸಿ ನನ್ನ ತಾಗುವ ಮತ್ಸ್ಯಗಂಧ ಗಾಳಿಯೂ ಮೈ ಮನಗಳನ್ನು ಕ್ಷಣ ನಿಲ್ಲಿಸಿ ರಾಧಾ-ಮಾಧವರನ್ನು ನೆನಪಿಗೆ ತರುತ್ತವೆ. ರಾಧೆಯನ್ನು ಬಿಟ್ಟುಹೋದ ಕೃಷ್ಣನ ಹೆಜ್ಜೆ ಸ್ಪರ್ಶ ಅವಳೆದೆಯಲ್ಲಿ ಮೂಡಿಹೋಗಿರುವಂತಿರುವ ಈ ಒದ್ದೆ ಮರಳಿನಲ್ಲಿ ಯುಗದ ನೆನೆಕೆ ಇರಬಹುದು. ಮುರಳಿಯ ನಾದವೂ, ನವಿಲು ಮುಕುಟದ ನವಿರು ಸ್ಪರ್ಶವೂ ರಾಧೆಯ ಉಸಿರ ಬೆರಳಿನಲ್ಲೆ ಉಳಿದುಹೋಗಿರಬಹುದು. ಸದಾ ಹರಿಯುವ ನದಿ ಬೀಸುವ ಗಾಳಿ ಸ್ಪರ್ಶಕ್ಕೆ ನಡುಗಿ ನಲುಗುವ , ಮುಲುಕುವ ಯಮುನೆಯನ್ನು ಎದೆಯಲ್ಲಿ ತಬ್ಬಿಕೊಳ್ಳುವ ತವಕ ಚಿರಕಾಲವೂ ಕಾಡಬಹುದು. ಹೆಜ್ಜೆ ಮೂಡದ ಹುಲ್ಲುಗಾವಲಿನಲ್ಲಿ ಕುಳಿತು ಜಗವನ್ನೆ ಮರೆತು ಮುರಳಿಯ ಗಾನವನ್ನು ಆಲಿಸಬಹುದು, ಹೃದಯ ತೆರೆದಿದ್ದರೆ ಮಾತ್ರ.

ಕಾಲ ಯುಗದ ಪರಿಮಿತಿಯಿಲ್ಲದ ಚಿರವಿರಹಿ ರಾಧೆ ಕೃಷ್ಣನಿಗಾಗಿ ದುಃಖಪಡಬೇಕಿಲ್ಲ. ಅವನ ವಿರಹವೂ ಮಧುರವೇ. ತನಗಿರದ ಕೃಷ್ಣ ಸತ್ಯಭಾಮೆ, ರುಕ್ಮಿಣಿಯರ ಪತಿಯೆಂದು ಎಂದೂ ಕೊರಗಬೇಕಿಲ್ಲ. ರಾಧೆಯನ್ನು ತನ್ನ ಹೃದಯದಲ್ಲಿಟ್ಟುಕೊಂಡ ಕೃಷ್ಣನ ಪಾಂಚಜನ್ಯದಲ್ಲಿ ಆಕೆ ಉಸಿರು. ಕೄಷ್ಣ ದೇಹವಾದರೆ ರಾಧೆ ಆತ್ಮ. ರಾಧೆಯೇ ಅವನ ಕೃಷ್ಣತ್ವ. ಅದಕ್ಕಾಗಿಯೇ ಈ ಭವದ ಎಲ್ಲಾ ದೋಷ, ದ್ವೇಷ, ಅಸೂಯೆ, ರಾಗ, ವಿರಹ ಯಾವವೂ ಅವಳನ್ನು ಸ್ಪರ್ಶಿಸುವುದೇ ಇಲ್ಲ. ಹಾಗೆ ಹಾಯ್ದುಹೋಗುತ್ತವೆ ರಾಧೆಯನ್ನು. ವೃಂದಾವನವನ್ನು ತೊರೆದು ಮಧುರೆಗೆ ಹೊರಟಾಗ ಅವನು ಹತ್ತು ವರ್ಷ ಏಳು ತಿಂಗಳ ಬಾಲಕನಂತೆ. ನಂತರದ ಇಡೀ ಜನ್ಮದುದ್ದಕ್ಕೂ ಧರ್ಮ- ಕರ್ತವ್ಯ, ರಾಜ್ಯ -ರಾಜಕಾರಣ, ನ್ಯಾಯ-ನೀತಿ, ಯುದ್ಧ -ಸಂಧಾನ, ಪಾಂಡವರ ಸಾಂಗತ್ಯ, ಕುರುಕ್ಷೇತ್ರ – ಧರ್ಮಶಾಸ್ತ್ರಗಳಲ್ಲಿ ಮುಳುಗಿದವನ ಕತೆಯಲ್ಲಿ ಮತ್ತೆಲ್ಲೂ ರಾಧೆ ಸುಳಿಯುವುದಿಲ್ಲ. ಯಮುನೆಯ ಚಲನೆಯೊಂದಿಗೆ ಸದಾ ರಾಧತ್ವ ಪ್ರವಹಿಸುತ್ತದೆ ಜೀವನಮುಖಿ ಧಾರೆಯಾಗಿ. ರಾಧೆಯ ಪ್ರೇಮದ ಸ್ಪರ್ಶವಿರದೇ ಕೃಷ್ಣ ಜಗದ್ವಂದಿತ ಕೃಷ್ಣನಾಗುತ್ತಿರಲಿಲ್ಲ. ಕೃಷ್ಣನ ಪರಿಪೂರ್ಣತೆ ರಾಧೆ. ಆತ್ಮವೂ ಆತ್ಮದ ನೆರಳೂ ಅವಳೇ. ಉತ್ಕೃಷ್ಟ ಪ್ರೇಮದ ಪ್ರತಿಮೆ-ರೂಪಕ ರಾಧಾ-ಕೃಷ್ಣ. ಯಮುನೆಯನ್ನು ನೋಡುವಾಗೆಲ್ಲ ನನ್ನೊಳಗೆ ರಾಧೆ ಕಾಡುತ್ತಾಳೆ. ಬರಸಾನಾ, ಮಥುರೆಯಲ್ಲಿ ಹೋಳಿ ಹಬ್ಬದ ಗುಲಾಲು ಚಿಮ್ಮುವಾಗೆಲ್ಲ ರಾಧೆ ನೆನಪಾಗುತ್ತಾಳೆ. ಅಲ್ಲಿನ ಜನ ’ರಾಧೆ ರಾಧೆ’ ಎಂದು ಪರಸ್ಪರ ಅಭಿವಂದಿಸುವಾಗೆಲ್ಲ ಮತ್ತೆ ಕೃಷ್ಣ ನೆನಪಾಗುತ್ತಾನೆ. ಯಮುನೆಯ ಸಂಸ್ಕಾರ, ಸಂಸ್ಕೃತಿಯಲ್ಲಿ ಹರಿವುಗೊಂಡ ಜನಪದರ ’ ಠಾಕೂರ ಜೀ’ ಅಯೋಮಯ ಸಾಕ್ಷಿ. ೨೪ ಮೈಲು ಸುತ್ತಳತೆಯ ಗೋವರ್ಧನ ಗಿರಿಯ ಪ್ರದಕ್ಷಣೆಯನ್ನು ಹಾಕುವ ಹುಮ್ಮಸ್ಸು ಕೃಷ್ಣನಿಗಾಗೇ. ಹೀಗೆ ನೆನಪು ಮರೆವಿನ ಆಟ. ನೆರಳು ಬಿಸಿಲಿನ ಕೂಟ.
ಈ ರಾಧೆ ಕೃಷ್ಣನ ಹಗಲುಗನಸಿನಲ್ಲೆ ಬಿಸಿಲು, ಜನಜಂಗುಳಿ, ಟ್ರ್ಯಾಫಿಕ್ಕು, ಶಹರಿನ ಎಲ್ಲ ವಾಸನೆಯನ್ನೂ ತಮ್ಮೊಳಗೆ ಹೀರಿ, ನೀರು ಗಾಳಿಯನ್ನು ಅಗಿದು, ಬೆಳೆದ ಹೂ ಮರಗಳಿಂದ ಸೂಸುವ ಎಂಥದೋ ಪರಿಮಳ ಜನ್ಮಾಂತರದ ವಾಸನೆಯನ್ನು ಮರುಕಳಿಸುವಂತಿತ್ತು. ಬದುಕಿನ ಅಂಚಲ್ಲಿ ಮತ್ತೆಲ್ಲೋ ಕ್ಷಿತಿಜದ ತುಂಬೆಲ್ಲ ಹೊಂಬೆಳಕು ಪಸರಿಸಿದಂತೆ ಇವ ಹರಡಿಕೊಂಡಿದ್ದೆ ಗೊತ್ತಾಗಲಿಲ್ಲ. ಇಬ್ಬರೂ ಕೈ ಕೈ ಹಿಡಿದು, ಬೆರಳ ಬಿಗಿ ಹಿಡಿದುಕೊಂಡು ಮಜಲು ಮಜಲುಗಳನ್ನು ಹತ್ತಿದ್ದು ಗೊತ್ತಾಗಿದ್ದು ಅವೇ ಮೆಟ್ಟಲುಗಳನ್ನು ಒಂಟಿಯಾಗಿ ಇಳಿಯುವಾಗ. ಕಟಾಂಜನವೇ ಇಲ್ಲದ ತಿರುವಿನಲ್ಲಿ ಬೀಳದಂತೆ ಹಿಡಿದುದು ಅದೇ ಸ್ಪರ್ಶ. ಬಿದ್ದಿದ್ದರೆ ಕಾಲು ಮುರಿದುಕೊಳ್ಳುವ ಎಲ್ಲ ಸಾಧ್ಯತೆಗಳೂ ಮನಸ್ಸಿಗೆ ತೋರಿ, ಅರೆಕ್ಷಣ ಭಯ ಆವರಿಸಿತು. ಯಾಕೆ ಮೊದಲು ಇದನ್ನು ಗಮನಿಸಲಿಲ್ಲ. ನಾನಿದ್ದೇನೆ ಎನ್ನುವ ಬೆಚ್ಚಗಿನ ಸ್ಪರ್ಶ ಎಲ್ಲವನ್ನೂ ಮರೆಸಿಬಿಡುತ್ತಾ? ಮತ್ತದೇ ಅಭ್ಯಾಸ ಹೇಗಾಯಿತು? ಮೆಟ್ಟಲುಗಳ ಸ್ಥಾನಕ್ಕೆ ಬರುತ್ತಿದ್ದಂತೆ ಅವ ಮುಂದಾಗಿ ಕೈ ತಾನಾಗಿ ಹಿಂದೆ ಸರಿದು ಅವಳ ಬೆರಳನ್ನು ಹಿಡಿದುಕೊಳ್ಳುತ್ತವೆ. ಜನ್ಮಾಂತರದಿಂದಲೂ ಈ ಕ್ರಿಯೆ ರೂಢಿಬದ್ಧವಾಗಿ ನಡೆಯುತ್ತಿದ್ದಂತೆ. ತನ್ನ ಬೆರಳು ಆ ಕೈ ಸೇರುತ್ತಲೆ ಎಲ್ಲ ಭಾರವನ್ನೂ ಆ ಕೊಗೊಪ್ಪಿಸಿಬಿಡುವಂತೆ ದುಡುದುಡು ಹೆಜ್ಜೆ ಹಾಕುವ ತನ್ನ ಮೇಲೆ ತಾನೇ ಮರುಕಪಡುತ್ತಿರುವುದು ಯಾಕೆ? ಅದು ಅಸಹಾಯಕ ಸ್ಥಿತಿಯಲ್ಲ. ಭದ್ರತೆ ಮಾತ್ರ. ನಾನಿದ್ದೇನೆ, ಅವನಿದ್ದಾನೆ ಎನ್ನುವ ಭರವಸೆಯ ಸ್ಪರ್ಶ ಅದು. ಅದೇ ಬೀಳೂತ್ತೀ ಹುಷಾರು ಎಂದು ಎಚ್ಚರಿಸಿದ್ದು. ! ನಮ್ಮೊಳಗಿನ ದೇವರು ನಮ್ಮನ್ನು ಎಚ್ಚರಿಸುತ್ತಲೇ ಇರುತ್ತಾನೆ.
ಇದನ್ನೆಲ್ಲ ಅವನಿಗೆ ಹೇಳಿದರೆ ಎಲ್ಲೋ ಹುಚ್ಚು ಅಂದುಕೊಳ್ಳುತ್ತಾನೆ. ಭಾವನೆಗಳು ಅರ್ಥವಾಗುತ್ತವೆ, ಆದರೆ ಭಾವುಕತೆಯನ್ನು ಹೇಗೆ ಅರ್ಥಮಾಡೊಳ್ಳಬಹುದು. ಭಾವವನ್ನು ಶಬ್ದಕ್ಕೆ ಇಳಿಸಬಹುದು. ಭಾವುಕತೆಯನ್ನು ಅನುಭವಿಸಬಹುದಷ್ಟೇ. ಕನಸನ್ನು ಮನಸಿನಿಂದ ಸ್ಪರ್ಶಿಸಬಹುದು ಹಾಗೇ ತೆರೆದ ಕಣ್ಣಿಂದ ಹಿಡಿಯಬಹುದೆ ?
ಮಡಿಲಲ್ಲಿ ತಲೆಯಿಟ್ಟಾಗ ತಾಯಿಯಾಗಿ ಬಿಡುವ ಸ್ಪರ್ಶ ಚಳಿಗಾಲದ ಹಿತವಾದ ಹೂಬಿಸಿಲಿನಷ್ಟೇ ಆಪ್ಯಾಯವೆನಿಸುತ್ತದೆ. ಊಟ ಆಯಿತ? ಏನು ತಿಂದೆ ? ಹಣ್ಣು ತಿನ್ನು – ಎನ್ನುವಾಗೆಲ್ಲ ಕೋಲು ಪಕ್ಕದಲಿಟ್ಟುಕೊಂಡೇ ಕುಳಿತು ಉಣಿಸುತ್ತಿದ್ದ ಅಪ್ಪನ ದನಿಯ ಕರಗುವ ಸ್ಪರ್ಶ…… ! ಕೆಂಪಿ ಕರುವಿನ ಬೆಚ್ಚಗಿನ ಮೃದುವಾದ ನಾಲಿಗೆ, ಜೊಲ್ಲು ಎರಡೂ ಕೆನ್ನೆಗೆ ತಾಗಿದಾಗಿನ ಪುಳಕ. ಇಬ್ಬರ ನಡುವಿನ ಈ ಖಾಲಿತನವನ್ನೂ ತುಂಬಿಕೊಳ್ಳುವಂತೆ ತಬ್ಬಿಕೊಳ್ಳುವ ಬೆಚ್ಚಗಿನ ಅಪ್ಪುಗೆಯಲ್ಲಿ ’ದ್ವೈತ’ ದ ಅಹಂ ’ಅದ್ವೈತ’ದಲ್ಲಿ ಕ್ಷಯಿಸಿಬಿಡುವ ಮಿಡಿತ. ಮತ್ತೊಂದು ಮನ್ವಂತರದ ಕರೆಗೆ ಓಗೊಡುವ ದನಿಗೆ ಸೋರಿಹೋಗುವ ಕ್ಷಣಗಳನ್ನು ಮುಷ್ಟಿಯಲ್ಲಿ ಭದ್ರವಾಗಿಸಿ ಬಿಡುತ್ತೇನೆ. ಒಂಟಿ ನಕ್ಷತ್ರಗಳ ನಿಟ್ಟುಸಿರ ಯಾತ್ರೆ ಮುಗಿದು ಮುಂಬೆಳಕಿನ ಹೊಂಬಣ್ಣದಲ್ಲಿ ಚಂದ್ರಕಲೆ ಕ್ಷಯಿಸುವಾಗ ಮೂಡಲದಲ್ಲಿ ರವಿ ಉದಯಿಸಿರುತ್ತಾನೆ.
 

‍ಲೇಖಕರು avadhi

30 November, 2013

2 Comments

  1. Raghunandan K

    ಹೃದಯ ಸ್ಪರ್ಶಿಸಿದ ಪಿಸುಮಾತಿನಂತ ಬರಹ..

  2. ರಮೇಶ್ ಹಿರೇಜಂಬೂರು

    ತನಗಿರದ ಕೃಷ್ಣ ಸತ್ಯಭಾಮೆ, ರುಕ್ಮಿಣಿಯರ ಪತಿಯೆಂದು ಎಂದೂ ಕೊರಗಬೇಕಿಲ್ಲ. ರಾಧೆಯನ್ನು ತನ್ನ ಹೃದಯದಲ್ಲಿಟ್ಟುಕೊಂಡ ಕೃಷ್ಣನ ಪಾಂಚಜನ್ಯದಲ್ಲಿ ಆಕೆ ಉಸಿರು. ಎನ್ನುವುದು ತುಂಬಾ ಇಷ್ಟವಾಯಿತು. ಇಡೀ ಲಹರಿ ಆಪ್ತವಾಗಿದೆ. ನಿಜಕ್ಕೂ ಹೃದಯವಿರುವವರಿಗೆ ನಾಟುವ ಬರಹ… 🙂
    -ರಮೇಶ್‌ ಹಿರೇಜಂಬೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading