ಸ್ಪರ್ಧೆಯ ಹೊರಗಿನ ಕತೆಗಾರ 

ಕ್ಷಿತಿಜ್ ಬೀದರ್ 

೨೦೦೮ ಜುಲೈ ೨೩ ರಂದು ಕನ್ನಡ ಕತೆಗಾರ ಎಂ. ವ್ಯಾಸರು ಕೊನೆ ಉಸಿರನ್ನೆಳೆದು ಇದೇ ಜುಲೈ ೨೩ ಕ್ಕೆ ಹನ್ನೊಂದುವರ್ಷವಾಯಿತಲ್ಲವೇ…? ಹನ್ನೊಂದು ಅಧ್ಯಾಯಗಳಲ್ಲಿ ಬಿಚ್ಚಿಕೊಳ್ಳುವ ಕತೆಗಾರ್ತಿ ಅನುಪಮಾ  ಪ್ರಸಾದ್ ರ ‘ಅರ್ಧ ಕಥಾನಕ ‘ಕೃತಿಯ ಮರು ಓದು ಎಂ.ವ್ಯಾಸರ ಸ್ಮರಣಾರ್ಥ…!

ಎಂ.ವ್ಯಾಸರು ತೀರಿಕೊಂಡಾಗ ಅವರ ವಯಸ್ಸು ೬೮ ಮಾತ್ರ…! ‘ಮಗ ತೇಜಸ್ವಿ ನೆನಪಿನಲ್ಲಿ ಹುಟ್ಟಿದ ಎಂ. ವ್ಯಾಸ ಕನ್ನಡ ಸಾಹಿತ್ಯಲೋಕದಲ್ಲಿ ಆತ್ಮಕಥೆಯ ಸ್ವರೂಪವಾಗಿ ‘ಅರ್ಧ ಕಥಾನಕ ‘ ಕೃತಿ ನಿರೂಪಿಸಿದ್ದಾರೆ. ಅರ್ಧ ಯಾಕೆ ಎಂದು ಲೇಖಕಿ ಸ್ಪಷ್ಟೀಕರಣ ನೀಡಿದರೂ ಬಹುತೇಕ  ಅದು ಪೂರ್ಣ ಜೀವನಗಾಥೆಯಾಗಿಯೇ ಓದುಗರಿಗೆ ಕುತೂಹಲ ಮೂಡಿಸುತ್ತದೆ.

ಎಷ್ಟೋ ಓದುಗರಿಗೆ ಎಂ. ವ್ಯಾಸರ ಹೆಸರಿನಲ್ಲಿರುವ ಎಂ ಬಗ್ಗೆ ತಿಳಿದಿರುವುದಿಲ್ಲ. ಕಾಸರಗೋಡಿನ ‘ಮನ್ನಿಪಾಡಿ’ ಊರು ಕರ್ನಾಟಕಕ್ಕೆಸೇರಿದರಲ್ಲವೇ…? ಎಂ. ವ್ಯಾಸರು ಕನ್ನಡದ ಖ್ಯಾತ ಕತೆಗಾರರಾದರೂ ನಿರ್ಲಕ್ಷಿತರಾಗಿದ್ದು ಹೇಗೆ..? ಗಡಿನಾಡಿನ ಕನ್ನಡಿಗರ ಹೃದಯ ಸಂವೇದನೆ, ಭಾಷಾ ನೋವು, ಕಂಬನಿ ಅರ್ಥೈಸುವುದಾದರೂ ಹೇಗೆ…?

“ಒಂದು ಬರಹದಿಂದಾಗಿ ಋಣಾತ್ಮಕವಾಗಿ ವಿಪರೀತ ಘಾಸಿಗೊಂಡ ಮನಸ್ಸು ಮತ್ತೆ ಇನ್ನೊಂದು ಬರವಣಿಗೆಯ ಪ್ರಕ್ರಿಯೆಯಿಂದವಾಸಿಯಾಗಬೇಕು” ಎಂದು ಹೇಳಿದ ಲೇಖಕಿ ಘಾಸಿಗೊಳಿಸಿದ ಬರಹದ ಬಗ್ಗೆ ಅನಗತ್ಯ ವಿವರಣೆಗೆ ಹೋಗದೆ ಎಂ. ವ್ಯಾಸರ ಮಗತೇಜಸ್ವಿಯ ಸಂಕಟ, ದುಗುಡ, ದುಃಖ ಆತಂಕವನ್ನು ಈ ಬರವಣಿಗೆಯಲ್ಲಿ ತೆರೆದಿಡುತ್ತಾರೆ.

“ನಾನೀಗ ಸಾಯುತ್ತೇನೆ ಮಗಾ” ಎಂಬ ಪೂರ್ಣ ಪ್ರಜ್ಞೆಯ ಎಂ. ವ್ಯಾಸರ ಮಾತುಗಳು ಮಗ ತೇಜಸ್ವಿಗೆ ಎಂಥ ಕಿರಿಕಿರಿಯುಂಟು ಮಾಡಿರಬೇಕು…!? ದುಃಖತಪ್ತರಾದವರು ಸಾಮಾನ್ಯವಾಗಿ ಗಜಲ್ ಗಳಿಗೆ ಮೊರೆ ಹೋಗುವುದು ಸಹಜವೇ… ‘ಜಾನೆ ಕ್ಯಾ ತೂನೇ ಕಹಿ , ಜಾನೇ ಕ್ಯಾ ಮೈನೇ ಸುನೀ…’ ಪ್ಯಾಸಾ ಚಿತ್ರದ ಗೀತಾ ದತ್ತಳ ಹಾಡು ವ್ಯಾಸರ ಅಚ್ಚುಮೆಚ್ಚು … ಆದರೆ ‘ ಜಿಂದಗಿಕೆ ಸಫರ್ ಮೆ ಜೋ ಗುಜರ್ ಜಾತೆ ಹೈ…ವೋ ಫಿರ್ ನಹಿಆತೆ…ಎಂಬ ಹಾಡು ನನ್ನಲ್ಲಿ ಮಾತ್ರ ಸದಾ ರಿಂಗಣಿಸುತ್ತದೆ.

ಇನ್ನೊಂದು ಅಧ್ಯಾಯದಲ್ಲಿ, ಎಂ. ವ್ಯಾಸರ ತಂದೆಯವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿಯೇ ಕೊಚ್ಚಿಹಾಕುತ್ತಾರೆ. ಅವರ ಕೊನೆಯ ಮಾತುಗಳು “ಆಚು…ಉಬ್ಭ…” ಆಚು ಅಂದರೆ ಎಂ. ವ್ಯಾಸರೇ…! ಎಂಥ ಹೃದಯ ವಿದ್ರಾವಕ ಧ್ವನಿ…! ವ್ಯಾಸರು ಹೇಳುತ್ತಾರೆ “ನಾನು ಆ ಸ್ಥಳಕ್ಕೆ ಹೋಗುವಾಗ ಅಪ್ಪ ಮಳೆಗೆ ಅಂಗಾತ ಬಿದ್ದುಕೊಂಡಿದ್ದರು. ಅಪ್ಪನ ಶರೀರದಿಂದ ನೆತ್ತರು ಹರಿಯುವುದು ನಿಂತಿತು. ಬಸಿದು ಹೋದ ನೆತ್ತರು. ಮಳೆ ನೀರಿನೊಂದಿಗೆ ಕಲೆಸಿ ಹೋಗುತ್ತಾ ಇತ್ತು. ನಾನು ಅಪ್ಪನ ಶವದ ಸಮೀಪ ಮಳೆಗೆ ನೆನೆಯುತ್ತಾ ಒಂದರ್ಧ ರಾತ್ರಿ ಹಾಗು ಒಂದರ್ಧ ಹಗಲು ಕುಕ್ಕರಗಾಲಿನಲ್ಲಿ ಕುಳಿತಿದ್ದೆ. ನನಗೆ ತಲೆಯೆತ್ತಿ ಅಪ್ಪನತ್ತ ನೋಡುವ ಧೈರ್ಯವಿರಲಿಲ್ಲ….

“ಭೀಕರ ಕೊಲೆಯ ಸಾವಿನ ಹಿನ್ನೆಲೆಯಲ್ಲಿ ಎಂ.ವ್ಯಾಸರ ಮನಸ್ಸು ಕಲ್ಪನಾತೀತ…! ಅವರನ್ನು ‘ ವಿಕ್ಷಿಪ್ತ ಬರಹಗಾರರು ‘ ಎಂದುತಪ್ಪಾಗಿ ಗುರುತಿಸುವವರೇ ಹೆಚ್ಚು.

ಅಸಹಾಯಕ ಪರಿಸ್ಥಿತಿಯನ್ನು ಎದುರಿಸಿದ ಎಂ. ವ್ಯಾಸರಿಗೆ ಕಾರಿನ ವ್ಯಾಮೋಹ, ಸಿಗರೇಟ್ ನ ಚಟವಿದ್ದುದನ್ನು ಬೇರೆ ಅಧ್ಯಾಯಗಳಲ್ಲಿ ಪರಿಚಯಿಸುತ್ತಾರೆ. ‘ ಮೇ ಜಿಂದಗೀ ಕೆ ಸಾತ್ ನಿಭಾತಾ ಚಲಾ ಗಯಾ , ಹರ್ ಫಿಕ್ರ್ ಕೊ ದುವೆ ಮೆ ಉಡಾತಾ ಚಲಾಗಯಾ… ಎಂದು ಹಾಡುತ್ತಾ ವ್ಯಾಸರು ಎದ್ದು ನಡೆದುಬಿಟ್ಟರೆ…..?

‘ಪೂಜೆ ‘ ಕತೆಯನ್ನು ಸಿನೆಮಾ ಮಾಡುವುದಾಗಿ ಹೇಳಿ ಪೂರ್ಣಗೊಳಿಸದೆ ಇರುವವರು, ಕತೆಯ ಮೂಲ ಹಸ್ತಪ್ರತಿಯನ್ನು  ಓದಲು ತೆಗೆದುಕೊಂಡವರು ಕಳೆದುಹಾಕುವುದು… ಎಂಥ ನಿರಾಸೆ ಮೂಡಿಸುವ ಪ್ರಸಂಗಗಳಲ್ಲವೇ…?

ಇಂಥವುಗಳನ್ನು ಮೊದಲೇ ಊಹಿಸುವ ಎಂ. ವ್ಯಾಸರು ಮನವನ್ನು ಹದಗೊಳಿಸಿ ಸ್ಥಿತಪ್ರಜ್ಞೆ ಸಾಧಿಸುವ ಸಂತನಂತಿರುವ ಸಂಗತಿ ಇನ್ನುಳಿದ ಅಧ್ಯಾಯಗಳಿಂದ ತಿಳಿದುಬರುತ್ತದೆ. ಮಂಗಳೂರು ಮತ್ತು ಕಣ್ಣೂರು ವಿಶ್ವವಿದ್ಯಾಲಯಗಳಲ್ಲಿ  ಅವರ ‘ಕೃತ ‘ ಕಥಾ ಸಂಕಲನ ಪಠ್ಯವಾದಾಗ , “ಈ ಖುಷಿಗೆ ನಂಗೆ ಎಂತ ಮಾಡಬೇಕು ಅಂತ ಗೊತ್ತಾಗುವುದಿಲ್ಲ ಮಗಾ ” ಎಂದಿದ್ದರಂತೆ. ಇವರ ಕಾಲವಾದ ನಂತರ ಸಂಬಂಧಿ ವರದರಾಜ ಚಂದ್ರಗಿರಿ, ವ್ಯಾಸರ ಮಗ ತೇಜಸ್ವಿ ವ್ಯಾಸ ಹಾಗು ಮನೆಯವರು ಹಲವು ಪುಸ್ತಕ ಪ್ರಕಟಣೆಗೆ ಮುತುವರ್ಜಿ ವಹಿಸಿ ಉಪಕರಿಸಿದ್ದಾರೆ.

“ನಾನು ಸತ್ತಾಗ ಯಾವ ಪುರೋಹಿತರನ್ನು ಕರೆಯದೆ, ಯಾವ ಧಾರ್ಮಿಕ ಕ್ರಿಯಾ ವಿಧಿಗಳನ್ನು ಮಾಡದೆ ನೀನು ಮತ್ತು ಗೋಪಾಲಕೃಷ್ಣ ತೇಜನಿಗೆ ಹೇಳಿ ನನ್ನ ಶವವನ್ನು ದಹನ ಮಾಡಿಸಬೇಕು.” ಎಂದಿದ್ದರಂತೆ. ಶ್ರಾದ್ಧ ಹಾಕಿಸುವುದು, ತರ್ಪಣಕೊಡುವುದು ಅರ್ಥವಿಲ್ಲದ್ದು ಎಂಬ ಮನೋಭಾವ ಎಂ.ವ್ಯಾಸರದು.

‘ಸ್ನಾನ’ ಕಾದಂಬರಿ  ಬರೆದು ಮುಗಿಸಿದ ಮೇಲೆ , “ಸಂಸಾರಿಗೆ ಸನ್ಯಾಸಿಯಾಗುವುದು ಸುಲಭ ಆದರೆ ಸನ್ಯಾಸಿ ಮತ್ತೆ ಸಂಸಾರಿಯಾಗುವುದು ಕಷ್ಟ ….” ಎಂದಿದ್ದರಂತೆ. ಬಾಹುಬಲಿಗೆ ಬಟ್ಟೆ ಹೊದಿಸಿದ ಚಿತ್ರ ಗಮನಿಸಿ ‘ಸ್ನಾನ’ ಕಾದಂಬರಿ ಬರೆದೆ ಎಂದರಂತೆ.

‘ಮಡಿ ಮೈಲಿಗೆಯಿಂದ ಮುಕ್ತಗೊಂಡ ‘ಸ್ನಾನ’  ಎಂದು ಕುಂಡಲಿನಿ ಅರ್ಥ ಕಲ್ಪಿಸಿ ನಾನು ಈ ಹಿಂದೆ ವಿಮರ್ಶೆ ಬರೆದಿದ್ದೆ. ಅವರು ಸಿದ್ಧಪಡಿಸಿದ ಮೊದಲ ಪತ್ರಿಕೆ ‘ಪತಂಗ’ ನಂತರದು ‘ಅಜಂತ ‘ ಎನ್ನುವುದನ್ನೂ ಉಲ್ಲೇಖಿಸಿದ್ದಾರೆ.

ಮಗ ತೇಜಸ್ವಿಯನ್ನುದ್ದೇಶಿಸಿ ಬರೆದ ಕೊನೆಯ ಅಪೂರ್ಣ ಪತ್ರವನ್ನು ನೆನೆದು ಕಣ್ಣೀರಿಡುವ ಮಗ ಅಪ್ಪನಿಗೆ  ‘ಅಣ್ಣ’ ಎಂದುಸಂಬೋಧಿಸುತ್ತಿದ್ದದ್ದು ವಿಶೇಷ. ಆ ಪತ್ರದ ಕೊನೆಯಲ್ಲಿ ,  ‘ನಾನು ಏನೂ ಆಗದಿದ್ದುದರಿಂದ – ಅಥವಾ ನನಗೆ ಏನೂ ಆಗಬೇಕೆಂಬ ಆಸೆ ಇಲ್ಲದಿದ್ದುದರಿಂದ ನನ್ನ ಮಗ ನೀನೂ ಏನಾದರೂ ಆಗಬೇಕೆನ್ನುವ ಕನಸೂ ನನಗಿದ್ದಿರಲಿಲ್ಲ…’ ಎಂಥ ಅದ್ಭುತ ಮಾತುಗಳು.

ಸಂತನ ಈ ಮಾತುಗಳಿಗೆ ನಾನೆಂದೋ ಕೊಚ್ಚಿಹೋಗಿದ್ದೆ…! ಈ ವಿರಕ್ತತೆ ಕನ್ನಡ ಕಥಾ ಲೋಕದ ಸ್ಥಿತಿಗತಿಗೆ ಕನ್ನಡಿ ಹಿಡಿದಂತಿದೆ. ಪ್ರಚಾರ, ರಾಜಕೀಯ ಸ್ಪರ್ಧೆಯ ಹೊರಗಿದ್ದ  ಎಂ. ವ್ಯಾಸರನ್ನು ನಾಡು ಆದರಿಸದಿದ್ದರೆ ಕ್ಷಮೆಯೇ ಇಲ್ಲ ಎಂದೆನಿಸುತ್ತದೆ ನನಗೆ.

‍ಲೇಖಕರು avadhi

July 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: