ಸ್ತ್ರೀ ಅಂದರೆ ಅಷ್ಟೆ ಸಾಕೇ?..

ನಿನಗೆ ಬೇರೆ ಹೆಸರು ಬೇಕೇ? ಸ್ತ್ರೀ ಅಂದರೆ ಅಷ್ಟೆ ಸಾಕೇ?..

ಜಿ ಎನ್ ಮೋಹನ್

ಮಿಸ್ಸಿಂಗ್- ಅಂತಾರಾಷ್ಟ್ರೀಯ ಡಾಕ್ಯುಮೆಂಟರಿ ಪಿಲಂ ಫ಼ೆಸ್ಟಿವಲ್ ಗಾಗಿ ಕೇರಳಕ್ಕೆ ಕಾಲಿಟ್ಟ ನಾನು ತಿರುವನಂತಪುರದ ಬೀದಿಗಳಲ್ಲಿ ಅಡ್ಡಾಡುತ್ತಿದ್ದೆ.  ಒಂದು ಬುಕ್ ಸ್ಟಾಲ್ ಮುಂದೆ ಹಾದು ಹೋಗುವಾಗ ಅಲ್ಲಿ ತೂಗು ಹಾಕಿದ್ದ ಮ್ಯಾಗಜೈನ್ ದಿಢೀರನೆ ನನ್ನ ಗಮನ ಸೆಳೆಯಿತು. ಮುಖಪುಟದಲ್ಲಿ ಮೂವರು ಹುಡುಗಿಯರ ಫೋಟೋ. ಅದರ ಕೆಳಗೆ ದಪ್ಪ ಅಕ್ಷರಗಳಲ್ಲಿ ಏನೋ ಮುದ್ರಿತವಾಗಿತ್ತು. ಮ್ಯಾಗಜೈನ್ನತ್ತ ಬೊಟ್ಟು ಮಾಡಿ ಏನದು? ಅಂದೆ. ಅಂಗಡಿಯಾತ ಹೇಳಿದ ಕಾಣೆಯಾಗಿದ್ದಾರೆ ಅಂತ. ಏನನ್ನಿಸಿತೋ ಭಾಷೆ ಬಾರದಿದ್ದರೂ ಆ ಪತ್ರಿಕೆಯನ್ನು ಕೊಂಡೆ. ಊರಿಗೆ ವಾಪಸಾದ ನಂತರ ಮಲಯಾಳಂ ಬರುವವರನ್ನು ಎಡತಾಕಿದೆ. ಆಗಲೇ ಇನ್ನಷ್ಟು ಗಾಬರಿ ಯಾದದ್ದು.  

ಮಲಯಾಳಂನ ಪತ್ರಿಕಾರಂಗದಿಂದ ಮೂವರು ಕಾಣೆಯಾಗಿದ್ದಾರೆ ಎನ್ನುವುದು ಲೇಖನದ ಸಾರಾಂಶ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ, ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದ , ಪ್ರಮುಖ ಮೀಡಿಯಾ ಕಛೇರಿಗಳಿದ್ದ ಈ ಮೂವರು ಪತ್ರಿಕೋದ್ಯಮಕ್ಕೆ ವಿದಾಯ ಹೇಳಿದ್ದರು. ಬೇರೆ ಎಲ್ಲೋ ಯಾವುದೋ ಕೆಲಸದಲ್ಲಿದ್ದರು. ಮಾಧ್ಯಮಮ್ ಪತ್ರಿಕೆ ಈ ಸಂಗತಿಯನ್ನು ಕೈಗೆತ್ತಿ ಕೊಂಡಿತು. ಯಾಕೆ ಅಷ್ಟು ಚುರುಕಾಗಿದ್ದ, ಒಳ್ಳೆಯ ಹೆಸರು ಮಾಡಿದ್ದ ಹುಡುಗಿಯರು ಪತ್ರಿಕೋದ್ಯಮ ಬಿಟ್ಟು ಹೋದರು? ಪತ್ರಿಕೋದ್ಯಮದ ಸ್ಥಿತಿ ಕಾರಣವೇ? ಪತ್ರಿಕಾಲಯಗಳು ಮಹಿಳಾ ಪರವಾದ ಆಮ್ಬಿಯೆನ್ಸ್ ಹೊಂದಿಲ್ಲವೇ? ಹೀಗೆ ಹತ್ತು ಹಲವು ಅಂಶಗಳತ್ತ ಮುಖ ಮಾಡಿ ನಿಂತಿತು. ಹೌದಲ್ಲಾ? ಈ ವಿಚಾರ ನಮ್ಮ ಗಮನಕ್ಕೆ ಯಾಕೆ ಬರಲಿಲ್ಲ ಅಂತ ನಾನೂ ದಂಗಾದೆ. ಮಲಯಾಳಂ ಪತ್ರಿಕೋದ್ಯಮದಲ್ಲಿ ಆಗುತ್ತಿರುವುದು ಆ ಭಾಷೆಗೆ ಮಾತ್ರ ಸಂಬಂಧಪಟ್ಟ ವಿಶೇಷ ಬೆಳವಣಿಗೆಯೇನಲ್ಲ. ಕನ್ನಡ ಪತ್ರಿಕೋದ್ಯಮ, ಯಾವುದೇ ಭಾಷೆಯ ಪತ್ರಿಕೋದ್ಯಮ, ಇ೦ಗ್ಲಿಷ್ ಜರ್ನಲಿಸಂ ಹೀಗೆ ಭಾಷೆ, ದೇಶ ಮೀರಿ ಎಲ್ಲೆಡೆ ಇದು ನಿಜ. ಪತ್ರಿಕೋದ್ಯಮದಿಂದ ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಆದರೆ ಅದು ಭ್ರೂಣಹತ್ಯೆಯಂತೆ ಸದ್ದಿಲ್ಲದೇ ಆಗಿ ಹೋಗುತ್ತಿದೆ. ಮೊನ್ನೆ CDL ಶಾಂಗನ್ ದಾಸ್ ಗುಪ್ತಾ ಫೋನಾಯಿಸಿ ಮಾಧ್ಯಮದಲ್ಲಿ ಮಹಿಳೆ ಬಗ್ಗೆ ಒಂದು ವರದಿ ಬಿಡುಗಡೆ ಮಾಡ್ತಾ ಇದ್ದೇವೆ. ಬರ್ತೀರಾ? ಅಂತ ಕೇಳಿದ್ರು. ಯಾರು ವರದಿ ತಯಾರಿಸಿದ್ದು ಅಂತ ಕೇಳಿದೆ. ಅಮ್ಮು ಜೋಸೆಫ್ ಅಂದ್ರು. ಅಮ್ಮು-ನಾನು ಬಹಳ ಕಾಲದಿಂದ ನೋಡುತ್ತಾ, ಓದುತ್ತಾ ಬಂದಿರುವ ಹೆಸರು. ಮಾಧ್ಯಮದಲ್ಲಿ ಇವತ್ತಿಗೂ ಏನಾದರು ಕಿಂಚಿತ್ ಮಹಿಳಾ ಸಂವೇದನೆ ಉಳಿದಿದೆ ಅಂದರೆ ಅದು ಅಮ್ಮು ಹಾಗೂ ಅವರಂತಹ ಬೆರಳೆಣಿಕೆಯವರಿಂದ ಅಷ್ಟೆ. ನಾನು ನ್ಯೂಸ್ ರೂಂಗೆ ಕಾಲಿಟ್ಟಾಗ ಡೈರೆಕ್ಟ್ ಶಿಷ್ಯತ್ವ ಪಡೆಯಬೇಕಾಗಿ ಬಂದದ್ದು ಎನ್. ಗಾಯತ್ರಿ ದೇವಿ ಅವರಿಂದ. ಅವರ ನೇತೃತ್ವದ ಶಿಫ್ಟ್ನಲ್ಲಿ ಹಲವು ವರ್ಷ ಕೆಲಸ ಮಾಡಿದ ನನಗೆ ಪತ್ರಿಕೋದ್ಯಮದ ಪಾಠದ ಜೊತೆಗೆ ಮಹಿಳಾವಾದ ಕೂಡಾ ಬಿಲ್ ಕುಲ್ ಮುಫ್ತ್ ಆಗಿ ಸಿಕ್ಕಿತ್ತು. ಗಾಯತ್ರಿ ದೇವಿ ರಾಜ್ಯದ ಮಹಿಳಾ ಚಳವಳಿಗೆ ಅಡಿಪಾಯ ಹಾಕಿಕೊಟ್ಟ ಮುಖ್ಯರಲ್ಲೊಬ್ಬರು. ನ್ಯೂಸ್ ರೂಂನಲ್ಲಿ ಮಹಿಳೆಯರಿಗೆ ನೈಟ್ಶಿಫ್ಟ್ ಇರಬೇಕಾ ಬೇಡವಾ? ಎಳೆ ಮಕ್ಕಳಿಗೆ ಆಫೀಸಿನಲ್ಲಿ ಕ್ರಷ್ ಇರಬೇಕು ಅನ್ನುವ ಹುಮ್ಮಸ್ಸಿನ ಮಾತುಗಳು, ಅದಕ್ಕೆ ತದ್ವಿರುದ್ಧವಾಗಿ ಹಲವರ ಗೊಣಗಾಟಗಳು ಇದ್ದ ದಿನಗಳು ಅವು. ಹೀಗಿರುವಾಗಲೇ ಕೈಗೆ ಸಿಕ್ಕಿದ್ದು ವಿಮಲ್ ಬಾಲಸುಬ್ರಹ್ಮಣ್ಯಂ ಅವರ ಪುಸ್ತಕ ಮಿರರ್ ಇಮೇಜ್ ಇದರ ಬೆನ್ನಲ್ಲೇ ಅಮ್ಮು, ಕಲ್ಪನಾ ಶರ್ಮ ಬರೆದ ಹೂಸ್ ನ್ಯೂಸ್?, ಮೇಕಿಂಗ್ ನ್ಯೂಸ್ ಹೀಗೆ ಸಾಲು ಸಾಲು ಪುಸ್ತಕಗಳು. ಯಾವುದೇ ಇಂಗಿಷ ಪತ್ರಿಕೆಗೆ speaking to newsmen ಅನ್ನುವ ಬಳಕೆ ಅತಿ ಸಾಮಾನ್ಯ ಎನ್ನುವಂತಾಗಿಹೋಗಿತ್ತು. ಆಗ ದನಿ ಎತ್ತಿದ್ದು ಇದೇ ಲೇಖಕಿಯರು. ಪುರುಷ ಪತ್ರಕರ್ತರೆ ಗಿಜಿಗುಡುತಿದ್ದ ಕಾಲ ಒ೦ದಿತ್ತು ಆದರೆ ಈಗ ಕಾಲ ಬದಲಾಗಿದೆ. ಮಹಿಳಾ ಪತಕ್ರ ರ್ತರೂ ಸಾಕಷ್ಟು ಸ೦ಖ್ಯೆಯಲ್ಲಿದ್ದಾರೆ.  ಹಾಗಿರುವಾಗ speaking to newsmen ಎಂದರೆ ಏನರ್ಥ? ಬದಲಿಗೆ speaking to newsperson ಅಂತ ಬಳಸಿ ಅನ್ನುವ ಚರ್ಚೆಗಳು  ಎದ್ದು ನಿಂತವು. ಇದನ್ನು ಓದುತ್ತಾ, ಓದುತ್ತಲೇ ನಾನು ಪತ್ರಿಕೋದ್ಯಮ ಎನ್ನುವ ಪುಸ್ತಕದ ಬದನೆಕಾಯಿಯಿಂದ ಆಚೆ ಬಂದು ನಿಜ ಪತ್ರಿಕೋದ್ಯಮದ ಅ ಆ ಇ ಈ ಕಲಿಯಲು ಆರಂಭಿಸಿದ್ದೆ. ಹುಡುಗಿಯರನ್ನ ತಗೊಳ್ಳುವಾಗ ನೋಡಿ ತಗೊಳ್ಳಿ. ಅವರು ಖಂಡಿತಾ ಬೇಕು. ಅವರು ಚೆನ್ನಾಗಿ ಕೆಲಸಾ ಕೂಡಾ ಮಾಡ್ತಾರೆ . ಆದರೆ ಅವರನ್ನ ಮೀರಿದ ಮಿತಿಗಳು ಕೆಲಸಕ್ಕೆ ಅಡ್ಡಿಯಾಗುತ್ತೆ ಅನ್ನೋ ಕಿವಿ ಮಾತನ್ನ ರಾಮೋಜಿರಾಯರು ಹೇಳಿದ್ದರು. ಮೊನ್ನೆ ಮೀಡಿಯಾ ರಿಪೋಟರ್ ಬಿಡುಗಡೆ ಮಾಡಿದ ಗೆಳತಿ, ಹಿಂದೂ ಪತ್ರಿಕೆಯ ಪಾರ್ವತಿ ಮೆನನ್ ಇದೇ ಪ್ರಶ್ನೆ ಎತ್ತಿದರು. ನ್ಯೂಸ್ ರೂಂನಿಂದ ಮಹಿಳೆಯರು ಕಣ್ಮರೆಯಾಗ್ತಿದ್ದಾರೆ ಅಂದ್ರೆ ಅದಕ್ಕೆ ನ್ಯೂಸ್ ರೂಂ ಆಚೆಗಿನ ಒತ್ತಡಗಳು ಕಾರಣ. ಹಾಗಾಗಿ ನ್ಯೂಸ್ ರೂಂನಲ್ಲಿ ಮಹಿಳೆ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ ಸಮಾಜ ಸಹಾ ಸುಧಾರಿಸಬೇಕು ಅಂತ. ಈಟಿವಿಗೆ ಕಾಲಿಟ್ಟು ಇನ್ನೂ ತಿಂಗಳುಗಳು ಕಳೆದಿರಲಿಲ್ಲ. ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ವಿಶ್ವಸಂಸ್ಥೆಯ ಭಾಗವಾದ ಯುನಿಫೆಮ್ ಒಂದು ಕರೆ ಕೊಟ್ಟಿತು. ಈ ಒಂದು ದಿನ ಮಹಿಳೆಯರಿಗೆ ಜಾಗ ಬಿಟ್ಟು ಕೊಡಿ ಅಂತ. ಅದರ ಅರ್ಥ ಇಷ್ಟೇ, ನೀವು ಪೇಪರ್ನವರಾದರೆ ಇವತ್ತಿನ ಎಡಿಷನ್ ಅನ್ನು ಮಹಿಳೆಯರಿಗೆ ಬಿಟ್ಟು ಕೊಡಿ, ಚಾನಲ್ನವರಾದರೆ ಮಹಿಳೆಯರು ಇವತ್ತಿನ ಬುಲೆಟಿನ್ ರೂಪಿಸಲಿ ಅಂತ. ಅರೆ! ಯಾಕಾಗಬಾರದು ಅನಿಸಿತು. ಮಧ್ಯಾಹ್ನದ ಡೆಸ್ಕ್ ಮೀಟಿ೦ಗ್ನಲ್ಲಿ  ಒಂದು ಹೊಸ ಯೋಚನೆ ಇದೆ. ಇವತ್ತಿನ ಪ್ರೆ ಮ್ ಬುಲೆಟಿನ್ನ ಚುಕ್ಕಾಣಿ ಮಹಿಳೆಯರು ಹಿಡೀಬೇಕು ಅಂತ, ಯಾರಾದರೂ ಸಿದ್ಧರಿದ್ದೀರ ಅಂದೆ. ಒಂದು ಕ್ಷಣ ನನ್ನನ್ನೇ ನಂಬಲಾಗಲಿಲ್ಲ. ಎಚ್.ಎಸ್. ಅಪರ್ಣ, ವಿಮಲಾಕ್ಷಿ, ಶ್ರೀದೇವಿ, ಹೀಗೇ ಎಲ್ಲರ ಕೈಗಳು ಮೇಲೇರಿದವು. ಸರಿ ಇನ್ಯಾಕೆ ತಡ ಅಂತ ಗೋ ಅಹೆಡ್ ಅಂದೆ. ಒಂದು ಕ್ಷಣದ ಹಿಂದೆ ಬಚ್ಚಾಗಳಂತೆ ಕಾಣುತ್ತಿದ್ದ ಹುಡುಗಿಯರು ಡ್ರೈವರ್ ಸೀಟಿನಲ್ಲಿ ಕುಳಿತೇ ಬಿಟ್ಟರು. ಹುಡುಗರನ್ನೂ ಬೆನ್ನಿಗಿಟ್ಟುಕೊಂಡು. ತುಂಬಾ ದೂರ ಕ್ರಮಿಸಬೇಕಾದ ರಾಜಧಾನಿ ಎಕ್ಸ್ಪ್ರೆಸ್ ಎಷ್ಟೋ ವೇಗದಿಂದ ಸಿಳ್ಳು ಹಾಕುತ್ತಾ, ಎದುರಿನ ಅಡೆ ತಡೆಗಳನ್ನೆಲ್ಲಾ ದಾಟುತ್ತಾ ದೆಹಲಿಗೆ ನುಗ್ಗೆ ಬಿಡುತ್ತದಲ್ಲಾ ಹಾಗೆ ನುಗ್ಗೆ ಬಿಟ್ಟರು. ಬುಲೆಟಿನ್ ಏರ್ ಆಗುವಾಗ ಇಡೀ ನ್ಯೂಸ್ ರೂಂನಲ್ಲಿ ಸಾಸಿವೆ ಬಿದ್ದರೂ ಸದ್ದಾಗುವ ವಾತಾವರಣ. ಕೊನೆ ಬಾಲ್ನಲ್ಲಿ ಸಿಕ್ಸರ್ ಎತ್ತಬೇಕಾದ ಅನಿವಾರ್ಯತೆ ಇರುವಾಗ ಉಸಿರುಗಟ್ಟಿ ಬಿಡುತ್ತೇವಲ್ಲಾ ಹಾಗೆ ಎಲ್ಲರೂ ಉಸಿರು ಕಟ್ಟಿ ಕೂತಿದ್ದರು. ಬುಲೆಟಿನ್ ಮುಗಿಯುತ್ತಿದ್ದಂತೆ ಜೋರು ಚಪ್ಪಾಳೆ. ಹಲವರು ಈ ಬಚ್ಚಾ ಹುಡುಗಿಯರ ಕೈ ಕುಲುಕಿ ಶುಭಾಶಯ ಹೇಳುತ್ತಿದ್ದರು. ನಾನು ಇದು ಪ್ರಯೋಗ, ಮುಂದಿನ ದಿನಗಳಲ್ಲಿ ಇದು ವಾಸ್ತವವಾಗಲಿ ಎಂದು ಮಾತ್ರ ಹೇಳಿ ಮುಗಿಸಿದೆ. ಆ ಸಂಭ್ರಮ ನನ್ನ ಕಣ್ಣು ತುಂಬಿ ಎದೆಯಾಳದಲ್ಲಿ ಒಂದು ಪರ್ಮನೆಂಟ್ ಜಾಗ ಹುಡುಕಿಕೊಳ್ಳುತ್ತಿತ್ತು. ಈ ಬುಲೆಟಿನ್ ಬಿಸಿ ನನಗೆ ಗೊತ್ತಾದದ್ದು ಮರುದಿನ. ಎರಡು ರಾಜಿನಾಮೆ ಬಂದು ಬಿತ್ತು. ಇನ್ನಷ್ಟು ಬುಲೆಟಿನ್ ಪ್ರೊಡ್ಯೂಸರ್ಗಳು ಗರಂ ಆಗಿದ್ದರು. ಮೀಟಿಂಗ್ ನಲ್ಲಿ ಒಂದೇ ಪ್ರಶ್ನೆ-ಬುಲೆಟಿನ್ ಅನ್ನೋದು ಏನು ಹುಡುಗಾಟಾನಾ? ಅದಕ್ಕೊಂದು ಟ್ರೆ ನಿಂಗ್ ಬೇಡವಾ? ನಿನ್ನೆ ಮೊನ್ನೆ ಬಂದವರೂ ಬುಲೆಟಿನ್ ಮಾಡಬಹುದು ಅನ್ನೋದಾದರೆ ನಾವ್ಯಾಕಿರಬೇಕು? ಆಗ ನನಗೆ ಅರ್ಥವಾಯಿತು ಯಾಕೆ ಯೂನಿಫೆಮ್ ಈ ಕರೆ ಕೊಟ್ಟಿತು ಅಂತ. ಬದಲಾವಣೆ ಅನ್ನೋದು ಹೂವಿನ ದಾರಿ ಅಲ್ಲ. ಬುಲೆಟಿನ್ ಅನ್ನುವುದನ್ನು ಬ್ರಹ್ಮವಿದ್ಯೆ ಮಾಡಿ ಕೂಡಿಸಿದ್ದವರು ಮಂತ್ರಕ್ಕೆ ಮಾತ್ರ ಮಾವಿನಕಾಯಿ ಉದುರುತ್ತೆ ಅಂತ ನಂ ಬಿದ್ದರು. ಈ ಹುಡುಗಿಯರು, ಇನ್ನೂ ಆಗತಾನೆ ಕಣ್ಣು ಬಿಡುತಿದ್ತ  ಹುಡುಗಿಯರು ತಮಗೆ ಸಿಕ್ಕ ಕವಣೆ ಕಲ್ಲು, ಕೋಲು ಹಿಡಿದು ಮಾವಿನಕಾಯಿ ಉದುರಿಸಿ ಹಾಕಿದ್ದರು. ಇವರು ಬರೀ ಮಾವಿನಕಾಯಿ ಉದುರಿಸಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ? ಆದರೆ ಎಷ್ಟೋ ಜನರ ಪ್ರಭಾವಳಿಯನ್ನೂ ಹುಡಿ ಮಾಡಿಹಾಕಿದ್ದರು. ಅರರೆ! ಎನ್ನಯ ಸಮನಾರು? ಈ ಧರೆಯೊಳ್ ಯಾರಿಹರು? ಅಂತ ಪ್ರಶ್ನಿಸುತ್ತಿದ್ದವರ ಮುಂದೆ ನಾವೂ ಆಟಕ್ಕಿದ್ದೇವೆ ಅಂತ ಘೋಷಿಸಿಬಿಟ್ಟಿದ್ದರು. ಆಟದಿಂದ ಆದ ಪ್ರಯೋಜನ ಮಾತ್ರ ದೊಡ್ಡದು. ಮುಂದಿನ ದಿನಗಳಲ್ಲಿ ಈ ಹುಡುಗಿಯರೇ ಪರ್ಮನೆಂಟಾಗಿ ಡ್ರೆ ವರ್ ಸೀಟಿಗೆ ಬಂದು ಕೂತರು . ಹಾಗೆ ಕೂರಲು ಈ ಆಟ ಅವರಿಗೆ ಸಾಕಷ್ಟು ಕಾನ್ಫಿಡೆನ್ಸ್ ತುಂಬಿತು.  ಬುಲೆಟಿನ್ನಲ್ಲಿ ಕಳೆದೇ ಹೋಗಿದ್ದ ಮಹಿಳಾ ಸುದ್ದಿಗಳು ಮತ್ತೆ ಕಾಣತೊಡಗಿದವು. ನ್ಯೂಸ್ ರೂಂನಲ್ಲಿ ಹುಡುಗಿಯರ ಬಗೆಗಿದ್ದ ಕೊಂಕು ಒಂದಿಷ್ಟಾದರೂ ಕಡಿಮೆಯಾಯಿತು. ರಾಜ್ಕುಮಾರ್ ಇಲ್ಲವಾದರು. ಈಟಿವಿ ಬೆಂಗಳೂರು ಚೀಫ್ ಮ್ಯಾನೇಜರ್ ಸುಬ್ಬಾನಾಯ್ಡು ಫೋನ್ ಮಾಡಿದ್ರು. ಜಾಸ್ತಿ ಲೇಡಿ ರಿಪೋರ್ಟಸ್ ತಗೊಳ್ಳಬೇಡಿ ಅಂತ ಹೇಳಿದ್ದೆ. ಈಗ ಏನು ಮಾಡ್ತಿರಾ? ಅಂದ್ರು. ರಾಜ್ ಕುಮಾರ್ ನಿಧನದ ನಂತರ ಉಂಟಾದ ದೊಡ್ಡ ಹಾಹಾಕಾರದಲ್ಲಿ ಈ ಹುಡುಗಿಯರೇನು ಮಾಡಲು ಸಾಧ್ಯ ಎನ್ನುವ ಹತಾಶೆ ಅವರ ಮಾತಲ್ಲಿತ್ತು. ಏನು ಮಾಡೋಣ ಹೇಳಿ ಸರ್ ಅಂತ ಮರು ಪ್ರಶ್ನೆ ಮುಂದಿಟ್ಟೆ. ಅವರು ಅಕ್ಕ ಪಕ್ಕದ ಡಿಸ್ಟ್ರಿಕ್ಟ್ನವರನ್ನೆಲ್ಲಾ ಕರೆಸಿಬಿಡಿ. ಇಲ್ಲಾ ಅಂದ್ರೆ ಕಷ್ಟ ಅಂದರು. ಯಾಕೆ ಕಷ್ಟ? ಅನ್ನೋ ಪ್ರಶ್ನೆ ಆಗಲೇ ನನ್ನ ಮುಂದಿತ್ತು. ಶಾರದಾ ನಾಯಕ್, ಜ್ಯೋತಿ ಇರ್ವತ್ತೂರ್, ಭುವನೇಶ್ವರಿ ಹೀಗೇ ದೊಡ್ಡ ದಂಡೇ ಇತ್ತು. ಮರುಕ್ಷಣ ಅವರು ಇದ್ದದ್ದು ಬೆಂಕಿ ಹಚ್ಚುತ್ತಿದ್ದವರ, ಗೋಲಿಬಾರ್ ಮಾಡುತ್ತಿದ್ದವರ, ಮೆರವಣಿಗೆಯ ಗೊಂದಲ, ರಾಜ್ಕುಮಾರ್ ಮನೆಯ ಜನಜಂಗುಳಿ ಮಧ್ಯೆ. ನೂರಾರು ಜನರ ತಳ್ಳಾಟದ ಮಧ್ಯೆ ಪಿಟಿಸಿ ನೀಡುತ್ತಿದ್ದ ಜ್ಯೋತಿ ಇರ್ವತ್ತೂರ್ ಮುಖ ಗಮನಿಸಿದೆ. ಬೆದರಿದ್ದಳಾ ಅಂತ. ಹಾಗೆ ಒಂದು ಕ್ಷಣ ಅಂದುಕೊಂಡಿದ್ದಕ್ಕೆ ನನಗೇ ನಾಚಿಕೆಯಾಗುವಂತೆ ಕ್ಯಾಮೆರಾ ಮ್ಯಾನ್ ಶಿವಪ್ಪ ಅವರೊಂದಿಗೆ ಗಲಭೆಯ ಸ್ಥಳದಿಂದ ಜ್ಯೋತಿ ಇರ್ವತ್ತೂರು ಅಂತ ಸೈನ್ ಆಫ್ ಮಾಡಿದಳು. ಈ ಕಡೆ ನೇರಪ್ರಸಾರಕ್ಕೆ ಬೇಕಾದ ಓಬಿ ವ್ಯಾನ್ ಇರಲಿಲ್ಲ. ಫೀಲ್ಡ್ನಲ್ಲಿ ಶೂಟ್ ಮಾಡಿದ ವಿಶುಯಲ್ಸ್ಗಳು ಆಫೀಸಿಗೆ ಬರಲಾಗುತ್ತಿಲ್ಲ. ಶಾರದಾ ನಾಯಕ್ ಹಲ್ಲು ಕಚ್ಚಿ ನಿಂತೇಬಿಟ್ಟರು. ಇದು ನೇರ ಪ್ರಸಾರ ಅಲ್ಲ ಅಂತ ಯಾರೂ ಹೇಳಲು ಸಾಧ್ಯವಾಗದಂತೆ ರಾಮೋಜಿ ಫಿಲಂ ಸಿಟಿಯ ಸ್ಟುಡಿಯೋಗೆ ವಿಶುವಲ್ಸ್ಗಳ ಮಹಾಪೂರ ಹರಿಯಿತು. ಯಾಕೋ ಗಾಂಧಿ ಹೇಳಿದ ಮಾತು ನೆನಪಾಯಿತು. ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಅಂತ. ಅದು ಪತ್ರಿಕೋದ್ಯಮಕ್ಕೂ ನಿಜವಾದ ಮಾತು. *** (ಮೀಡಿಯಾ ಮಿರ್ಚಿ ಪುಸ್ತಕದಿ೦ದ)  ]]>

‍ಲೇಖಕರು G

March 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

Sugata recommends..

Sugata recommends..

11 ಪ್ರತಿಕ್ರಿಯೆಗಳು

  1. malathi S

    thank you for the Thoughtful and timely reproduction from your book G.N. Mohanavare!! Very well written…Have to get this book!!!
    malathi S

    ಪ್ರತಿಕ್ರಿಯೆ
  2. Ramesh Hirejambur

    ಲೇಖನ ತುಂಬಾ ಚನ್ನಾಗಿದೆ ಸರ್. ಹೆಣ್ಣಾದ ಮಾತ್ರಕ್ಕೆ ಅವಳಿಂದ ಏನೂ ಆಗದು ಎನ್ನುವ “ತಪ್ಪು ಕಲ್ಪನೆ” ಸರಿಯಲ್ಲ. ಅವಳಲ್ಲೂ “ಶಕ್ತಿ” ಇದೆ. ಆದರೆ ಅದನ್ನು ಸಾಭೀತುಪಡಿಸಲು ಒಂದು “ಸಣ್ಣ ಅವಕಾಶ” ಬೇಕು ಅಷ್ಟೇ. ನೀವೇ ಹೇಳಿದ ಹಾಗೇ ನೀವು ಅವತ್ತು ಆ ಅವಕಾಶ ನೀಡಿದ್ದಕ್ಕೆ ಆ ಮೂವರು ಇಂದು ಎತ್ತರಕ್ಕೆ ಬೆಳೆದಿದ್ದಾರೆ. ಈ ದೇಶದ ಮಹಿಳೆಗೆ ಎಲ್ಲಿಯ ವರೆಗೆ ಇಂಥ ಅವಕಾಶ ಸಿಗುವುದಿಲ್ಲವೋ ಅಲ್ಲಿಯವರೆಗೆ ಅವರೆಲ್ಲ “ಹಂಗಿನ ಅರಮನೆ”ಯಲ್ಲಿಯೇ ಬದುಕುತ್ತಾರೆ. ಜೊತೆಗೆ ಅವರಲ್ಲೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಹಾಗು ಬೆಳೆಸುವ ಎರಡು ಗುಣ ಬೇಕು.. ಆಗ ಮಾತ್ರ ಸುಧಾರಣೆ ಸಾಧ್ಯ…

    ಪ್ರತಿಕ್ರಿಯೆ
  3. renuka manjunath

    mohan sir
    well written! ‘bulletin’ annodu h u d u g t a… hudugi aata alla antha andkondiddare. indu navu lekhakiyara sanghadinda hammikondidda madhyamadalli mahileya bimba hagu mahileya karya bagge ellaru matadidaru bharateeya vidya bhavanadalli. vijayalaxmi shibarur gave such a stuffed speech to be documented! she is real asset to karnataka in media field!

    ಪ್ರತಿಕ್ರಿಯೆ
  4. Sharadhi

    Isn’t this such a primitive thing!! (that women are competitive by default). oh India, wake up.

    ಪ್ರತಿಕ್ರಿಯೆ
  5. Basamma Timmapur

    Lekhana tumba chennagide sir. ‘Hennu nalku godegala madye matra layak’, kasa hodeyodu, musure tikkodu aste avala kayaka ennuvru. avalige avkasha kottare purusharaste Samartavagi kelasa Madaballalu. Nimmante Samajada ella Rangagalalli avakasha kottare ‘Tottilu Tuguva kai Idi Jagattannu Tugaballabu’ Emba matu nijavaguvu….

    ಪ್ರತಿಕ್ರಿಯೆ
  6. Utham danihalli

    Nanu ega pathrikodyamake ambe kaliduthiruva putta balaka
    Nanondige exam bareda gellathiyarige nimanthaha prothsaha niduva hiriyaridare olleyadu
    Nimma lekana chenagidhe

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: