ಗೊರೂರು ಶಿವೇಶ್
ಎಲ್ಲಾ ಶಾಲಾ ಕಾಲೇಜುಗಳಲ್ಲಿ (ಕಿರಿಯ ಪ್ರಾಥಮಿಕ ಶಾಲೆಗಳನ್ನುಳಿದು)ಅನಿವಾರ್ಯವೆಂಬಂತೆ ಇರುವ ಕೊಠಡಿಗಳೆಂದರೆ ಈ ಶಿಕ್ಷಕರ ಕೊಠಡಿಗಳು ಯಾನೆ ಸ್ಟಾಫ್ರೂಮ್ಗಳು. ಉಳಿದ ಕಛೇರಿಗಳಿಗಿಂತ ಭಿನ್ನವಾದ ಈ ಸ್ಟಾಫ್ ರೂಮುಗಳು ಹತ್ತು ಹಲವು ಕಾರಣಗಳಿಗಾಗಿ ವಿಶಿಷ್ಟವಾದವು.
Staff ಮತ್ತು stop ಏಕಧ್ವನಿ (homophone) ಹೊರಡಿಸುವ ಇವು ಶಿಕ್ಷಕರ ತಂಗುದಾಣಗಳು. ಬಹುತೇಕ ಶಾಲೆ ಮತ್ತು ಕಾಲೇಜುಗಳಲ್ಲಿ ಐದಾರು ಮಂದಿ ಅಧ್ಯಾಪಕರು ಬೋಧನಾ ಚಟುವಟಿಕೆಗಳಲ್ಲಿ ನಿರತರಾಗುವುದರಿಂದ ಉಳಿದ ಆರೇಳು ಅಧ್ಯಾಪಕ/ಕಿಯರ ವಿಶ್ರಾಂತಿದಾಣವೂ ಹೌದು. ಹೀಗಾಗಿ ಬಹುತೇಕ ಶಾಲೆಗಳಲ್ಲಿ ಅನಿವಾರ್ಯ ಸಂದರ್ಭದಲ್ಲಿ ಕೊಠಡಿಯ ಕೊರತೆ ಕಂಡುಬಂದರೆ ತರಗತಿಗಳನ್ನು ‘ಕಂಬೈಂಡ್’ ಮಾಡುತ್ತಾರೆಯೆ ಹೊರತು ಈ ‘ಸ್ಟಾಫ್ರೂಂ’ ತಂಟೆಗೆ ಯಾರು ಹೋಗುವುದಿಲ್ಲ.
One is alone, two is company, three is crowd ಎಂಬ ಮಾತಿನಂತೆ ಮೂವರಿಗೂ ಹೆಚ್ಚು ಜನ ಸೇರಿದಾಗ ಅಲ್ಲಿ ‘ಗುಂಪು’ ಗೂಡುವುದು ಮತ್ತು ಗುಂಪುಗಾರಿಕೆ ಸಹಜ. ನಮ್ಮ ಬಿ.ಎಡ್. ಕಾಲೇಜಿನಲ್ಲಿದ್ದಾಗ ಹೇಳುತ್ತಿದ್ದ ಈಗ ವಾಸ್ತವ ಎನಿಸುತ್ತಿರುವ ವಿಷಯವೆಂದರೆ ಒಂದು ಶಾಲೆಯಲ್ಲಿ ಹತ್ತು ಶಿಕ್ಷಕರಿದ್ದರೆ, ಅಲ್ಲಿ ಹದಿಮೂರು ಪಕ್ಷಗಳಿರುತ್ತವೆ. ಪ್ರತಿಯೊಬ್ಬರದು ಒಂದು ಪಕ್ಷ, ಎಲ್ಲರೂ ಸೇರಿ ಒಂದು, ಅವರಲ್ಲೆ ಬೇರೆ ಬೇರೆ ಎರಡು ಬಣಗಳು ಜೊತೆಗೆ ಎರಡು ಕಡೆ ಗುರುತಿಸಿಕೊಳ್ಳಲೆತ್ನಿಸುವ ಇನ್ನೂ ಕೆಲವರಿಂದಾದ ಪಕ್ಷ.
ಪ್ರತಿ ಶಾಲಾ-ಕಾಲೇಜುಗಳಲ್ಲಿರುವ ಆರರಿಂದ ಎಂಟು ಅವಧಿಗಳಲ್ಲಿ ಪ್ರತಿ ಅಧ್ಯಾಪಕರಿಗೆ ನಾಲ್ಕರಿಂದ ಐದು ತರಗತಿಗಳನ್ನು ನಿರ್ವಹಿಸಿದರೆ ಉಳಿದಂತೆ ವಿರಾಮ. ಈ ವಿರಾಮದ ಸಮಯವನ್ನು ಕಾಫಿ ಕುಡಿಯಲೊ, ಮನೆಗೆಲಸ, ಟೆಸ್ಟ್ ಪೇಪರನ್ನೊ ತಿದ್ದಲು ಬಳಸಿಕೊಳ್ಳುವವರಾದರೂ ಐದಾರು ವರ್ಷ ಕರ್ತವ್ಯ ನಿರ್ವಹಿಸಿ ಅವುಗಳಲ್ಲಿ ಪರಿಣಿತಿ ಹೊಂದಿರುವವರಿಗೆ ಹರಟೆ ಹೊಡೆಯಲು ಇದಕ್ಕಿಂತ ಒಳ್ಳೆ ಅವಕಾಶಗಳಿಲ್ಲ.
ಶಾಲೆಗೆ ಬರುವ ಒಂದೆರಡು ಪೇಪರನ್ನ ಓದಲು ಅವಲೋಕಿಸಿ ಅರೆದು ಕುಡಿದು ಅವುಗಳನ್ನು ಕುರಿತು ತಮ್ಮದೆ ವ್ಯಾಖ್ಯಾನವನ್ನು ಹರಿಯಬಿಡಲು ಸದಾವಕಾಶ ಕಲ್ಪಿಸುವ ತಾಣಗಳು ಇವು. ಮಕ್ಕಳು ಹಾದಿ ತಪ್ಪುತ್ತಿರುವ ಬಗ್ಗೆ, ದೇಶ ಭ್ರಷ್ಟಗೊಳ್ಳುತ್ತಿರುವ ಬಗ್ಗೆ, ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಪಕ್ಷಗಳು ಹೇಗೆ, ಸಕಲೆಂಟು ವಿಷಯಗಳು ಚರ್ಚೆಗೆ ಬರುತ್ತವೆ. ತಮ್ಮದೆ ರೀತಿಯಲ್ಲಿ ಅವರು ವಾದ ಮಂಡಿಸಿರುತ್ತಾರೆ ಕೂಡಾ. ಆಸಕ್ತರು ಮಾತ್ರ ಭಾಗವಹಿಸುತ್ತಾರೆ. ಆದರೆ ಇಂಥ ಸ್ಟಾಫ್ರೂಂನಲ್ಲಿ ಸಂಚಲನೆ ಮಾಡುವುದು ವೇತನ ತಾರತಮ್ಯ ಮತ್ತು ಕೇಂದ್ರ ಸರ್ಕಾರ ತುಟ್ಟಿಭತ್ಯೆ ಘೋಷಣೆ ಮಾಡಿದಾಗ ಒಡನೆ ಆಕ್ರೋಶಿತರಾಗಿ ಕೇಂದ್ರ-ರಾಜ್ಯ ಸರ್ಕಾರದ ನಡುವಿನ ತಾರತಮ್ಯವನ್ನು ಒಕ್ಕೊರಲಿನಿಂದ ಖಂಡಿಸತೊಡಗುತ್ತಾರೆ. ಅವರಲ್ಲೆ ಕೆಲವರು ಆಶಾವಾದಿಗಳು ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಇರುವುದರಿಂದ ಇಲ್ಲಿಯೂ ಅದರ ಘೋಷಣೆ ಖಂಡಿತ ಎನ್ನುತ್ತಾರೆ. ಇನ್ನೂ ಪೌಢಶಾಲಾ ವೇತನಕ್ಕೆ -ಐ.ಟಿ.ಐ ಉಪನ್ಯಾಸಕರ ವೇತನಕ್ಕೆ ಮತ್ತು ಪದವಿ ಪೂರ್ವ ಮತ್ತು ಕಾಲೇಜಿನ ಅಧ್ಯಾಪಕರ ವೇತನ ತಾರತಮ್ಯದ ಕುರಿತಾಗಿ ನಿರಂತರವಾಗಿ ಆಕ್ರೋಶಗಳು, ನಿರಾಸೆಗಳು, ವಿವಿಧ ಹೋರಾಟಗಳ ವಿವರಗಳು, ಅವುಗಳ ಕುರಿತಾಗಿ ಹತಾಶೆಗಳು ಹೊರಹೊಮ್ಮುತ್ತಲೆ ಇರುತ್ತವೆ. ಅದೆಷ್ಟೋ ಬಾರಿ ಅದೇ ವಿಷಯವನ್ನು ಚರ್ಚೆ ಮಾಡಿದೆಯಾದರೂ ಎಲ್ಲರೂ ಸಮಾನದುಃಖಿಗಳಾದ್ದರಿಂದ ಮತ್ತೆ ಮತ್ತೆ ನೋಡಬಹುದಾದ ‘ಕ್ಲಾಸಿಕ್ ಸಿನಿಮಾ’ಗಳಂತೆ ಈ ವಿಷಯ ಕುರಿತಾಗಿ ಮಾತಾಡಿ ದಣಿದವರ ಕಾಣೆ, ಕೇಳಿ ನಿಟ್ಟುಸಿರು ಬಿಡದವರ ಕಾಣೆ.

ಇನ್ನು ಶಾಲಾ ಕಾಲೇಜುಗಳಲ್ಲಿ ಬೇರೆ ಬೇರೆ ಭಾಷೆ, ವಿಷಯಗಳಿಗೆ, ಬೇರೆ ಬೇರೆ ಶಿಕ್ಷಕರು ಇರುವಷ್ಟೇ ರೀತಿಯಲ್ಲಿ ವಿಭಿನ್ನ ರೀತಿಯಲ್ಲಿ ಕೆಲಸಕ್ಕೆ ಹಾಜರಾದವರು ಇರುತ್ತಾರೆ. ಅರೆಕಾಲಿಕ, ಪೂರ್ಣಕಾಲಿಕ, ನಿಯಮ 32, ನಿಯಮ 68, ಗುತ್ತಿಗೆ ಆಧಾರ, ಸ್ಥಳೀಯ ಅಭ್ಯರ್ಥಿ, ಗೌರವಶಿಕ್ಷಕ, ಬಡ್ತಿ ಹೊಂದಿದ, ನೇರನೇಮಕಾತಿ, ಕೆ.ಪಿ.ಎಸ್.ಸಿ. ಹೀಗೆ ಎಷ್ಟ್ಟೊಂದು ಮೂಲದಿಂದ ಬಂದವರು ಈ ಶಾಲಾನದಿಯಲ್ಲಿ ಒಟ್ಟಿಗೆ ಸೇರಿ ಹರಿಯುತ್ತಿದ್ದಾರೆ. ಮೇಲೆ ಎಲ್ಲರೂ ಈ ಕುರಿತು ಮಾತನಾಡದಿದ್ದರೂ, ಅವರವರ ಗುಂಪುಗಳು ಸೇರಿದಾಗ ಇನ್ನೊಂದು ಗುಂಪಿನ ಕುರಿತು ಟೀಕೆ-ಟಿಪ್ಪಣಿಗಳು, ಬಾಣಗಳನ್ನು ಎಸೆಯುವುದು ಸಹಜ. ಬಡ್ತಿ ಹೊಂದಿ ಬಂದವರಿಗೆ ವಿಷಯಜ್ಞಾನವಿಲ್ಲವೆಂದು ಇವರು ಟೀಕಿಸಿದರೆ ಅನುಭವದ ಕೊರತೆಯ ಬಗ್ಗೆ ಅವರು ಎತ್ತಾಡುತ್ತಾರೆ. ಇನ್ನೂ ಅವರವರ ಗುಂಪಿನವರದೆ ಜಿಲ್ಲಾ, ರಾಜ್ಯಮಟ್ಟದಲ್ಲಿ ಸಂಘಗಳಿದ್ದು ಅವರೆಲ್ಲರೂ ಪ್ರತ್ಯೇಕವಾಗಿ ತಮಗೆ ದೊರಕದ ಸೌಲಭ್ಯದ ಕುರಿತಾದ ಹೋರಾಟ ನಡೆಸುವ ಚರ್ಚೆಗಳು ಸಾಗುತ್ತಿರುತ್ತಾರೆ.
ಶಾಲಾ-ಕಾಲೇಜುಗಳಲ್ಲಿಯು ಸೀನಿಯರ್, ಜೂನಿಯರ್ಗಳೆಂಬ ವರ್ಗಸಂಘರ್ಷ ಸಾಮಾನ್ಯ. ಹಳಬರ ಬಗ್ಗೆ ಹೊಸಬರಿಗೆ ಮುದುಕ, ನಿವೃತ್ತಿಯ ಅಂಚಿಗೆ ಬಂದವ ಎಂದು ಉಡಾಫೆ. ಹೊಸಬರ ಕುರಿತು ಹಳಬರ ನಿರ್ಲಕ್ಷ್ಯ ಸಾಧಾರಣವಾಗಿ ಇದ್ದದ್ದೆ. ಇನ್ನೂ ಅಲ್ಲಿಯೇ ಸೀನಿಯರ್ಗಳಲ್ಲಿ ಪ್ರತ್ಯೇಕ ಬಣಗಳು. ಆ ಬಣದ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳ್ಳಲು ಹೊಸಬರಿಗೆ ಗಾಳ ಹಾಕುವುದು ಈ ಸ್ಟಾಫ್ರೂಂನಲ್ಲಿ. ಅವರನ್ನು ಕುರಿತು ಇವರು, ಇವರನ್ನು ಕುರಿತು ಅವರು ಪರಸ್ಪರ ಕುಚೇಷ್ಟೆಯ, ಕುಚೋದ್ಯದ, ಮಾತುಗಳನ್ನು ಅವರ ಗೈರು ಹಾಜರಿಯಲ್ಲಿ ಆಡುತ್ತಿರುತ್ತಾರೆ.
ಕೆಲವೊಮ್ಮೆ ಈ ಮಾತುಗಳು ವಿರೋಧಿ ಪಾಳೆಯವನ್ನು ತಲುಪಿ ಅಲ್ಲಿ ಅಕ್ಷರಶಃ ರಣರಂಗ ಏರ್ಪಡುತ್ತದೆ. ಪರಸ್ಪರ ಮಾತುಗಳಿಂದ ಮೂದಲಿಸಿ ಕೆಲವೊಮ್ಮೆ ವಿಕೋಪಕ್ಕೆ ಹೋಗಿ ಸ್ಟಾಫ್ರೂಂನಲ್ಲಿರುವ ಚೇರುಗಳನ್ನೆ ಆಯುಧಗಳನ್ನಾಗಿ ಮಾಡಿಕೊಂಡು ಪರಸ್ಪರ ಎಸೆದಾಡುವುದಿದೆ.
ಇನ್ನೂ ತಾವಿಲ್ಲದಿದ್ದಾಗ ತಮ್ಮ ಬಗ್ಗೆ ಹರಿಯಬಿಟ್ಟಿರುವ ಟೀಕೆಗಳನ್ನು ಕೇಳುವ ತವಕ ತರಗತಿಯಲ್ಲಿದ್ದವರಿಗೆ. ಬಂದೊಡನೆ ಎರಡು ಪಾಳೆಯದಲ್ಲಿ ಗುರುತಿಸಿಕೊಂಡವರಿಗೆ ‘ಏನಂತಾನೆ ಬಾಂಡ್ಲಿ ಎಂದೋ’, ‘ಏನು ಬಹಳ ನಗಾಡ್ತ ಇದ್ದ ಆ ಕಪ್ಪೆ’ ಎಂದು ಅವರ ಅಡ್ಡ ಹೆಸರು ಹೇಳಿ ಬಾಯಿ ಚಪ್ಪರಿಸಿರುವವರು. ಹೀಗಾಗಿ ಬಹುತೇಕ ಅಧ್ಯಾಪಕರಿಗೆ ಅವರ ಹೆಸರಿಗಿಂತ ಅಡ್ಡ ಹೆಸರೆ ಹೆಚ್ಚು ಚಲಾವಣೆ.
ಇನ್ನೂ ಬೇರೆ ಶಿಕ್ಷಕರು ಹೊಸಬಟ್ಟೆ ಧರಿಸಿಬರುವುದನ್ನೇ ಕಾದು ಕೂತು ಕಾಫಿ, ಬಿಸ್ಕತ್ ಕೇಳುವುದುಂಟು. ಒಮ್ಮೊಮ್ಮೆ ಇದು ಹೊಸ ಚಪ್ಪಲಿಗೂ ಬೀಳುವುದುಂಟು. ನನ್ನ ಸಹೋದ್ಯೋಗಿ ಮಿತ್ರರೂ ಕಾಫಿ ತರಿಸಿದ್ದರು. ಕಾಫಿ ಕುಡಿಯುವಾಗ ‘ಏನ್ಸಾರ್ ವಿಷ್ಯ’ ಎಂದರೆ ‘ಇದು ನನ್ನ ಎಕ್ಕಡದ ಕಾಫಿ ಕುಡಿಯಪ್ಪ’ ಎಂದರು. ಹೀಗಾಗಿ ಸ್ಟಾಫ್ರೂಂನಲ್ಲಿ ಯಾರೇ ಯಾವುದೇ ಸಣ್ಣ ಸಂತೋಷ ಹಂಚಿಕೊಂಡರೂ, ‘ಎಲ್ಲಿ ಕಾಫಿ’ ಎನ್ನುವವರು ‘ಓಹ್, ಹಾಗಾದರೆ ಇವತ್ತು ಸಂಜೆಗೆ ಪಾರ್ಟಿ’ ಎಂದು ಕೇಳುವುದು ವಾಡಿಕೆಯಾಗಿ ಹೋಗಿದೆ.
ಇನ್ನೂ ಸ್ಟಾಫ್ರೂಂನ ಅರ್ಧಕ್ಕೂ ಹೆಚ್ಚಿರುವ ಮಹಿಳಾ ಶಿಕ್ಷಕರು ಇದ್ದು, ಅವರಲ್ಲೇ ಇತರರ ಕುರಿತು ಕೊಂಚ ಅಸೂಯೆ, ಅಸಹನೆಗಳಿದ್ದರೂ ಎಲ್ಲೆಲ್ಲಿಯೊ ಒಮ್ಮೊಮ್ಮೆ ಸ್ಫೋಟಗೊಳ್ಳುತ್ತವೆಯಾದರೂ ಅವು ಮೌನ ಜ್ವಾಲಾಮುಖಿಗಳಾಗಿರುತ್ತವೆ. ಇನ್ನೂ ಇವರ ಚರ್ಚೆಗಳು ‘ಫೋರ್ ಎಸ್’ನ ಕುರಿತಾಗಿ ಇಲ್ಲವೇ ಸ.ಸಾ.ಸಿ.ಸೀ ಮೇಲೆ ಎಂದರೆ ಸರ, ಸಾರು (ಸಾಂಬಾರು) ಮತ್ತು ಸೀರಿಯಲ್, ಸೀರೆಯ ಸುತ್ತಲೂ ಗಿರಕಿ ಹೊಡೆಯುತ್ತವೆ. ಸ್ಟಾಫ್ರೂಂನಲ್ಲಿ ಬೆಳಗಿನ ತಿಂಡಿ, ರಾತ್ರಿ ಮಾಡಬೇಕಾದ ಅಡಿಗೆಯ ಕಡೆ ತಮ್ಮ ಯೋಚನೆಗಳನ್ನು ತೊಡಗಿಸಿಕೊಂಡಿರುವ ಇವರಿಗೆ ನಾಳೆ ಹೋಗಬೇಕಾದ ಗೃಹಪ್ರವೇಶ, ಸಂಜೆಯ ಆರತಕ್ಷತೆ ಕಡೆ ಹೆಚ್ಚು ಆಸಕ್ತಿ. ಒಟ್ಟು ಕುಟುಂಬದವರಾದರೆ ಅತ್ತೆಯ ಕಿರಿಕಿರಿ, ಮಾವನ ಬಿ.ಪಿ, ನಾದಿನಿ ಮದುವೆ ಇಲ್ಲವೆ ಮಕ್ಕಳ ಪ್ರೋಗ್ರೆಸ್ ಕಾರ್ಡ್ ನ ಬಗ್ಗೆ ಮನಕರಗುವಂತೆ ಇವರು ಮಾತನಾಡಲು ಇದು ವೇದಿಕೆ. ಸಾಯಂಕಾಲ ತರಗತಿ ಮುಗಿಸಿದೊಡನೆ ಪೇಟೆಗೆ ಬರಲು ಸ್ನೇಹಿತ ಸಹೋದ್ಯೋಗಿಗಳಿಗೆ ಆಹ್ವಾನ ನೀಡುತ್ತಾ ಅಲ್ಲಿ ಖರೀದಿಸಬೇಕಾದ ಸೀರೆ, ಬಟ್ಟೆ, ಒಡವೆಗಳ ಕುರಿತಾಗಿ ಹೆಚ್ಚಿನ ಚರ್ಚೆಯಾಗುವುದು ಈ ಸ್ಟಾಫ್ರೂಂನಲ್ಲಿಯೆ.
ಹಾಗಂತ ಸ್ಟಾಫ್ರೂಂ ಎಂಬುದು ಸದಾ ಕೊತ ಕೊತ ಕುದಿಯುವ ಕಡಾಯಿ ಏನಲ್ಲ. ಒಮ್ಮೊಮ್ಮೆ ಭಾಷಾ ಶಿಕ್ಷಕರು ತಮ್ಮ ರಸಿಕ ಮಾತುಗಳಿಂದ, ಗಣಿತ, ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳ ಅನರ್ಥಕಾರಿ ಉತ್ತರಗಳನ್ನು ಹೇಳುತ್ತಾ ಸ್ಟಾಫ್ರೂಂ ಸೂರು ಹಾರಿಹೋಗುವಂತೆ ನಗಿಸುತ್ತಾರೆ. ಅಲ್ಲಿ ಏನಾದರೂ ಶಿಕ್ಷಕಿಯರು ಇಲ್ಲದಿದ್ದರಂತೂ ಅದು ಸೌಜನ್ಯದ ಗೆರೆಯನ್ನು ದಾಟಿ ಹೋಗುತ್ತದೆ.
ಅಪರಾಹ್ನ ಊಟದ ಸಮಯ. ಕೆಲವರು ಶಾಲೆಯಲ್ಲಿನ ಬಿಸಿಯೂಟ, ಇನ್ನೂ ಕೆಲವರು ಹೋಟಲಿಗೆ ಜಾರಿದರೆ, ಊಟದ ಡಬ್ಬಿಯ ಮೇಲೆ ನೀವು ಅವರ ‘ಸ್ಟೇಟಸ್’ ಅನ್ನು ಗುರುತಿಸಬಹುದು. ಚಿತ್ರಾನ್ನ, ಫಲಾವ್, ಮೊಸರನ್ನ, ಉಪ್ಪಿಟ್ಟುನಂಥಾ ‘ಸಿಂಗಲ್ ಡಬ್ಬಿ’ ಕಾಣಿಸಿಕೊಂಡರೆ ಅದು ‘ಕಪಲ್’ ಕೇಸ್. ಗಂಡಹೆಂಡತಿ ಇಬ್ಬರು ಉದ್ಯೋಗದಲ್ಲಿದ್ದ ಕಾರಣ ಬೆಳಿಗ್ಗೆ ಗಡಿಬಿಡಿಯಲ್ಲಿ ಅವರು ತಿಂಡಿಮಾಡಿ ಅದನ್ನೆ ಊಟವೆಂದು ತಂದಿದ್ದಾರೆ. ಇವರು ಪಕ್ಕದವರಿಗೆ ತಮ್ಮಲ್ಲಿದ್ದುದ್ದನ್ನೂ ಹಂಚಿ ಅವರಲ್ಲಿದ್ದದ್ದನ್ನು ಪಡೆದು ಮ್ಯಾನೇಜ್ ಮಡುತ್ತಾರೆ. ಅದೋ ಅತ್ತ ನೋಡಿ, ಮೂರು-ನಾಲ್ಕು ಬಾಕ್ಸ್ ಕ್ಯಾರಿಯರ್ ತೆಗೆಯುತ್ತಲಿದ್ದಾರೆಂದರೆ ಅವರು ಮನೆವಾರ್ತೆ ನೋಡಿಕೊಳ್ಳುವ ಗೃಹಿಣಿಯನ್ನು ಹೊಂದಿದ್ದಾರೆ. ಒಂದರಲ್ಲಿ ಪಲ್ಯ, ಚಪಾತಿ, ಅನ್ನ, ಸಾಂಬಾರ್ ಹೀಗೆ ಪುಷ್ಕಳ ಭೋಜನಕ್ಕೆ ಅಣಿಯಾಗಿ ಅಲ್ಲಿಯೆ ಶಾಶ್ವತವಾಗಿ ಇಡಲಾದ ತಟ್ಟೆಯಲ್ಲಿ ಹಾಕಿಕೊಂಡು ಪಕ್ಕದ ಸ್ನೇಹಿತರಿಗೂ ದಯಪಾಲಿಸುತ್ತಾರೆಂದರೆ ಅವರ ಮನೆಯ ಅನ್ನದಾತ ಅವರೊಬ್ಬರೆ ಎಂದರ್ಥ.
ಮಹಾಭಾರತದಂತೆ ಇಲ್ಲಿ ತೊಡೆ ತಟ್ಟಿ ಹಗೆ ಸಾಧಿಸುವ ಭೀಮ-ದುರ್ಯೋಧನರುಂಟು. ಅರ್ಜುನನಂತೆ ಪರಾಕ್ರಮ ಮೆರೆಯುವವರು, ಇಲ್ಲವೆ ತಮ್ಮ ಪಾಡಿಗೆ ಇರಲೆತ್ನಿಸುವ ವಿದುರರು, ಕೃಷ್ಣನ ಯುಕ್ತಿ ತೋರುವವರು, ಕುಯುಕ್ತಿಯ ಶಕುನಿಗಳು, ಎಂಥೆಂಥ ಕೆಲಸ, ಅವಕಾಶ ಬಿಟ್ಟ್ಟೆವೆಂದು, ತಮ್ಮ ದುರಾದೃಷ್ಟ ಅಳಿದುಕೊಳ್ಳುವ ಕರ್ಣಂದಿರು, ಕಲಾಪಗಳನ್ನು ಮೌನವಾಗಿ ಗಮನಿಸುತ್ತಾ ಗೌರವ ಸ್ವೀಕರಿಸುವ ಭೀಷ್ಮ, ದ್ರೋಣಾದಿಗಳು, ಎಲ್ಲರನ್ನೂ ಒಳಗೊಂಡ ಸ್ಟಾಫ್ರೂಂ ಒಂದು ‘ಮಿನಿ ಮಹಾಭಾರತವೇ’ ಸರಿ.






its real……chennagide lekhana