ಸೌಮ್ಯ ದಯಾನಂದ
ಕೂತಲ್ಲೇ ಕೂತುಬಿಟ್ಟೆ ನಾನು
ನೀನು
ಹುಡುಕಿದರೆ ಸಿಗುವವನಾ
ಹೇಳು?!
ನೀನೇ ಹಚ್ಚಿಟ್ಟ
ದೀಪದ ಬೆಳಕಲ್ಲಿ
ನಿನ್ನನ್ನೇ ನೋಡುತ್ತಾ
ಬೆಳದಿಂಗಳನ್ನೂ
ಮರೆತವಳಂತೆ…
ಎಲ್ಲ ಬಣ್ಣಗಳ ಮೂಲ
ಕಪ್ಪು ಬಿಳುಪು…
ಬದುಕಲ್ಲಿ ಬಣ್ಣ ತುಂಬುತ್ತಾ
ನಿನ್ನಲ್ಲಿ ಲೀನವಾಗಿರುವ
ಬಣ್ಣಗಳ ಗುರುತಿಸಬಲ್ಲೆ..
ನಿನ್ನ ನೆರಳು ನಾನು
ನೀ ನನ್ನ ಬೆಳಕು..
ನಾವಿಬ್ಬರೂ ಕಪ್ಪು ಬಿಳುಪು..

ನಿನ್ನೊಂದಿಗಿನ ನೋವಿಗೂ
ಸುಖದ ರುಚಿಯುಂಟು!
ಇನ್ನು ನಲಿವೊಂದು ಆನಂದ
ಅಧ್ಯಾತ್ಮದ ಆದಿ ಅಂತ್ಯ
ಪ್ರೀತಿ
ನಿನ್ನಲ್ಲಿ ತಲ್ಲೀನ ನಾನು..
ಗಗನದಾಚೆಯ ಗಮನಕ್ಕೆ
ನಿನ್ನ ಬೆರಳು ಹಿಡಿದೇ ಬರುವೆ
ನಕ್ಷತ್ರಗಳ ಸರಿಸಿ
ದಾರಿ ಮಾಡು
ಕತ್ತಲೆದೆಯ ಮೇಲೆ
ನಮ್ಮ
ಜೋಡಿಹೆಜ್ಜೆಯನಿಡೋಣ..!
ಯಾವ ಸ್ವರವೂ
ನುಡಿಯಲಾರದು
ಯಾವ ರಾಗವೂ
ಹಾಡಲಾರದು
ಯಾವ ವೀಣೆಯೂ
ನುಡಿಸಲಾರದು!
ಪ್ರೇಮದ ದನಿಯು
ಹಿಡಿತಕ್ಕೆ ನಿಲುಕದಂಥದ್ದು!
ಪ್ರೀತಿ
ಕೊಳೆಯದ ಹಣ್ಣು..
ಅದು ಮುಗಿಯದ ರಸವಂತಿ!
ಮನದ ಕೈತೋಟದಲ್ಲಿ
ಪ್ರತಿ ಸಂಜೆ ಅರಳುವ ಮಲ್ಲಿಗೆ!
ಮನದ ಪೇಟೆಯ ತುಂಬಾ
ದಿಂಡು ಹಾರದ ಸಂತೆ
ಪ್ರೀತಿಕಾಸಿಗೆ ಎಂದೂ
ಮೋಸವಿಲ್ಲ!
ಬದುಕು
ಸಂಜೆ ಐದರ ಸಂತೆ
ಎಂಟಕ್ಕೆ
ಸುರುಳಿ ಸುತ್ತಿದ ಬೊಂತೆ
ಆ ನಡುವೆ ಬಂದುಬಿಡು
ಕೊಟ್ಟು ಕೊಳ್ಳೋಣ..!






0 Comments