ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋ  ಮೆನಿ ಮ್ಯಾರೇಜಸ್ ಅರ್ ಡಿಸೈಡೆಡ್ ಇನ್…!

ರಾಜೇಶ್ವರಿ ಹುಲ್ಲೇನಹಳ್ಳಿ

“ಇದೇನಿದು ಸಂತೇನಾ?. ಈ ಜನಗಳೋ ಸಂತೇಲಿ ತುಂಬ್ಕೊಂಡಂಗೆ ತುಂಬ್ಕೊತಾರೆ”  ಎಂದು ರೇಗುವ  ಮಾತುಗಳನ್ನು  ನಾವು ಎಂದಾದರೂ, ಎಲ್ಲಿಯಾದರೂ,  ಒಮ್ಮೆಯಾದರೂ ಕೇಳಿಯೇ ಕೇಳಿರುತ್ತೇವೆ. ಸಂತೆ ಎಂಬ ಪದ ಇಂಗ್ಲೀಷಿನಲ್ಲಿ Market.  ಈ Market ಎಂಬ ಇಂಗ್ಲಿಷ್‌ ಪದವೇ ಕನ್ನಡದಲ್ಲಿ  ಮಾರುಕಟ್ಟೆಯೆಂದು ಕರೆಯಲ್ಪಡುತ್ತಿದೆ. ಹೆಚ್ಚು ಜನ ಸೇರಿರುವೆಡೆ  ಹೆಚ್ಚು ಗದ್ದಲ ಕೇಳಿ ಬರುವೆಡೆ “ಇದೇನು Fish  ಮಾರ್ಕೆಟ್ಟಾ?” ಎನ್ನುವುದನ್ನು ನೀವು ಕೇಳಿರಬಹುದಲ್ಲವೇ? ಯಾಕಂದ್ರೆ ಸಂತೆಯ ಲಕ್ಷಣವೇ ಹಾಗೆ.  ಗಿಜಿ ಗಿಜಿ ಸದ್ದುಗದ್ದಲ, ಜನಸಂದಣಿ. ಸಂತೆಯ ಮೂಲ ಪದ ಸಂಸ್ಕೃತದ “ಸಂಸ್ಥೆ” ಎಂಬ ಪದವಾಗಿದ್ದು, ವಿದ್ಯೆಯನ್ನು ನೀಡುವ ಸಂಸ್ಥೆಗಳು ಶಿಕ್ಷಣ ಸಂಸ್ಥೆಯಾದರೆ, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ  ಸ್ಥಳವನ್ನು ಕೂಡ “ಸಂಸ್ಥೆ” ಎಂದು ಕರೆಯುತ್ತಾ ಕಾಲಕ್ರಮೇಣ ಅದು ಸಂಸ್ಥಾ ಆಗಿ ಬರುಬರುತ್ತಾ ಆಡು ಭಾಷೆಯಲ್ಲಿ ಸಂತೆಯಾಗಿದೆ. ಇನ್ನು ಇಂಗ್ಲೀಷಿನ Market ಕನ್ನಡದ ಮಾರುಕಟ್ಟೆ ಅಂದರೆ “ಮಾರುವ ಕಟ್ಟೆ” ಮಾರುಕಟ್ಟೆಯಾಗಿದೆ. ಸಂತೆಯ ಹುಟ್ಟು, ನಮ್ಮ ಪೂರ್ವಜರ ಸಾಟಿ ಪದ್ಧತಿ ಅಥವಾ ವಸ್ತು ವಿನಿಮಯ (Barter System) ಪದ್ಧತಿಯ ನಂತರ ಹುಟ್ಟಿಕೊಂಡದ್ದು. ಹಿಂದಿನ ಜನರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳುವಾಗ ಹಣದ ಚಲಾವಣೆ ಬರುವ ಮುನ್ನ ತಾನು ಬೆಳೆದ ಬೆಳೆಯನ್ನು, ಉತ್ಪನ್ನವನ್ನು ಬೇರೆಯವರಿಗೆ ಕೊಟ್ಟು ಇತರರ ಬಳಿ ಇರುವ ತನಗೆ ಅಗತ್ಯವಾದ ವಸ್ತು ಇಲ್ಲವೇ ಉತ್ಪನ್ನಗಳನ್ನು ಪಡೆಯುತ್ತಿದ್ದ ಪದ್ಧತಿಎಯೇ “ಸಾಟಿ ಪದ್ಧತಿ” ಇಲ್ಲವೆ, “ವಸ್ತು ವಿನಿಮಯ ಪದ್ಧತಿ. (Barter System)”. 

ಈ ವಸ್ತು ವಿನಿಮಯ ಪದ್ಧತಿಯು ಮುಂದೆ ಒಂದೇ ಒಂದು ಊರು ಅಥವಾ ಹಳ್ಳಿಗೆ ಸೀಮಿತವಾಗದೆ ಅಕ್ಕಪಕ್ಕದ ಹಳ್ಳಿಗಳಿಗೆ ಹೋಗಿ ವಸ್ತು ವಿನಿಮಯ ಮಾಡಿಕೊಳ್ಳುವುದು ರೂಢಿಗೆ ಬಂದು ಕೊನೆಗೊಮ್ಮೆ ಹಣದ ಚಲಾವಣೆ ಬಂದಾಗ ಎಲ್ಲರೂ ತಾವು ಬೆಳೆದ ಇಲ್ಲವೆ ಉತ್ಪಾದಿಸಿದ ಪದಾರ್ಥಗಳನ್ನು ತಮ್ಮ ತಮ್ಮ ಅಗತ್ಯಕ್ಕೆ ಬೇಕಾದಷ್ಟು ಇಟ್ಟುಕೊಂಡು ಉಳಿದುದನ್ನು ಬೇರೆಯವರಿಗೆ ಮಾರಾಟ ಮಾಡಿ ಇತರರ ಬಳಿ ಇರುವ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕೊಳ್ಳುವ ಪದ್ಧತಿಯು ನಿಗದಿತವಾದ ಒಂದು ಪ್ರದೇಶದಲ್ಲಿ ನಿಗದಿತವಾದ ದಿನ, ವಾರ, ಸಮಯದಲ್ಲಿ ಒಗ್ಗೂಡುವಂತೆ ಮಾಡಿಕೊಂಡ ವ್ಯವಸ್ಥೆಯೇ ಸಂತೆಯಾಯಿತು ಎನ್ನಬಹುದು. ಹಳ್ಳಿಗರು ತಮ್ಮ ಸುತ್ತಮುತ್ತಲ ಹಳ್ಳಿಗಳಿಗೆ ಹತ್ತಿರವಾದ ಒಂದು ನಿರ್ದಿಷ್ಟ ಜಾಗ, ದಿನ, ಸಮಯದಲ್ಲಿ ತಮ್ಮ ಕೊಡು ಕೊಳ್ಳುವಿಕೆಯ ವಾಣಿಜ್ಯ, ವ್ಯವಹಾರದ ವಹಿವಾಟಿನ ಪರಿಕಲ್ಪನೆಯೇ ಸಂತೆ. ವ್ಯಾಪಾರ ವಹಿವಾಟಿನ ಈ ಪದ್ಧತಿಯೇ ಸಂತೆಯ ಉಗಮಕ್ಕೆ ನಾಂದಿಯೆನ್ನಬಹುದು.

ಮೊದಲಿಗೆ ನಾಲ್ಕಾರು ಹಳ್ಳಿಗಳು ಸೇರುವೆಡೆ ಸಣ್ಣದಾಗಿ ನಡೆಯುತ್ತಿದ್ದ ಸಂತೆಗಳು, ಹೋಬಳಿ ಮಟ್ಟದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುತ್ತಿದ್ದುದುಂಟು. ಹಾಗೆಯೇ ಒಂದೊಂದು ಊರಿನ ಸಂತೆಯೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ಹಲವು ಸಂತೆಗಳಂತೂ ಹಲವೊಂದು ವಿಶೇಷ  ವಸ್ತುಗಳಿಂದ ಕೂಡಿದ್ದು ನಿರ್ದಿಷ್ಟವಾದ ವಸ್ತುವಿಗೆ ಪ್ರಸಿದ್ಧಿಯಾಗಿರುತ್ತವೆ. ನಿರ್ದಿಷ್ಟವಾದ ವಸ್ತುವನ್ನು ಕೊಳ್ಳಲು ನಿರ್ದಿಷ್ಟವಾದ ಸಂತೆಗೇ ಹೋಗುವ ಪರಿಪಾಠ ಇಂದಿಗೂ ಉಂಟು. ಹೊಳೇನರಸೀಪುರದ ಬೆಣ್ಣೆ, ಸೌತೆಕಾಯಿ, ಹಲಸಿನಹಣ್ಣಿನ ರುಚಿಯಂತೆ, ಒಂದು ಸ್ಥಳೀಯ ನೆಲೆಗಟ್ಟಿನ ಮಣ್ಣಿನಲ್ಲಿ ಬೆಳೆದ ಬೆಳೆಗೆ ಅದರದೇ ಆದ ವಿಶೇಷ ಸತ್ವ, ರುಚಿಯಿರುವುದು ಅಚ್ಚರಿಯಲ್ಲ. ಒಮ್ಮೆ ನಾವು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ತಿರುವು ರಸ್ತೆಯ ಪ್ರಯಾಣದಿಂದ ವಾಂತಿಯಾಗಿ ಗಂಟಲೆಲ್ಲಾ ಉರಿಯುತ್ತಿತ್ತು. ಅತೀವ ದಾಹವಾಗಿ ನೀರು ಕುಡಿದರೆ ಅದು ಕೂಡ ವಾಂತಿಯಾಗಿ ತೀರಾ ಸುಸ್ತಾಗಿದ್ದಾಗ ಅಲ್ಲೆಲ್ಲೋ ಬೀದಿಬದಿಯ ಮೂಲೆಯಲ್ಲಿ ಸೌತೆಕಾಯಿ ಕಣ್ಣಿಗೆ ಬಿತ್ತು. ಥಟ್ಟನೆ ಹೋಗಿ ಸೌತೆಕಾಯಿ ಕೊಂಡು ಗಬಗಬನೆ ತಿಂದೆ. ಅದೆಷ್ಟು ರುಚಿಯಾಗಿತ್ತೆಂದರೆ ಗಂಟಲೆಲ್ಲ ತಣ್ಣಗಾಗಿ ಆಯಾಸವೆಲ್ಲ ಪರಿಹಾರವಾಯ್ತು. “ತುಂಬಾ ರುಚಿಯಾಗಿದೆ ನೀವೇ ಬೆಳೆದದ್ದಾ?” ಎಂದೆ. ಆತ “ಇಲ್ಲ  ಹೊಳೇನರಸೀಪುರದಿಂದ ಕೊಂಡು ತಂದದ್ದು” ಎಂದಾಗ ಹೌದು ಈ ರುಚಿ ಅಲ್ಲಿಯದೇ ಸರಿ ಇಲ್ಲಿ ಆ ರುಚಿ ಬರಲು ಹೇಗೆ ಸಾಧ್ಯ?! ಇಲ್ಲೇನಿದ್ದರೂ ಮಂಗಳೂರು ಸೌತೆ,  ಸಾಂಬಾರ್ ಸೌತೆ ವಿಶೇಷವಲ್ಲವೇ. ಇದು ಈ ಮಣ್ಣಿನ ಗುಣ, ಅದು ಆ ಮಣ್ಣಿನ ಗುಣ ಎನಿಸಿತು. ಹೌದು ಆಯಾ ನೆಲದ ಮಣ್ಣಿನ ಗುಣದ ವಿಶೇಷತೆಯೇ ಅದು!

ತಾಲ್ಲೂಕು ಕೇಂದ್ರಗಳಾದ ನಮ್ಮ ಹಾಸನ, ಸಕಲೇಶಪುರ,  ಚನ್ನರಾಯಪಟ್ಟಣ, ಹೊಳೇನರಸೀಪುರ, ಅರಕಲಗೂಡು, ಆಲೂರು, ಬೇಲೂರು, ಅರಸೀಕೆರೆ ಇವು ನಮ್ಮ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವ ಸಂತೆಗಳಾದರೆ ಅಂತೆಯೇ ಶನಿವಾರದ ದುದ್ದದ ಸಂತೆ, ಗುರುವಾರದ ಗಂಡಸಿಯ ಸಂತೆ ಶಾಂತಿ ಗ್ರಾಮದ ಭಾನುವಾರದ ಸಂತೆ ಹೀಗೆ  ಹಲವಾರು ಹೋಬಳಿಮಟ್ಟದ ಸಂತೆಗಳನ್ನು ಕೂಡ ಕಾಣಬಹುದು. ವಾರವಿಡೀ ಒಂದೊಂದು ದಿನ ಒಂದೊಂದು ಊರಿನಲ್ಲಿ ಸಂತೆ ನಡೆಯುತ್ತಲೇ ಇರುತ್ತವೆ. ಹಲವು ಸಂತೆಗಳಂತೂ ನಿರ್ದಿಷ್ಟವಾದ ಹಲವೊಂದು ವಸ್ತುಗಳಿಗೆ ಬ್ರ್ಯಾಂಡ್ ಎಂದೇ  ಹೇಳಬಹುದು. ನಿರ್ದಿಷ್ಟವಾದ ವಸ್ತುವನ್ನು ಕೊಳ್ಳಲು ನಿರ್ದಿಷ್ಟವಾದ ಸಂತೆಗೇ ಹೋಗುವ ಪರಿಪಾಠ ಇಂದಿಗೂ ಉಂಟು. ಹೊಳೇನರಸೀಪುರದ ಬೆಣ್ಣೆ, ಸೌತೇಕಾಯಿ, ಗಂಡಸಿ ಸಂತೆಯ ತೆಂಗಿನಕಾಯಿ, ಕುರಿ ಕೋಳಿ, ಹೋರಿ, ದನ. ದುದ್ದ ಸಂತೆಯ ಬೆಣ್ಣೆ, ನಾಟಿಕೋಳಿ ಮೊಟ್ಟೆ, ದೆಹಲಿ, ಬಾಂಬೆ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆಯಿದ್ದ ಕೆಬ್ಬೆ ಮಣ್ಣಿನಲ್ಲಿ ಬೆಳೆದ ದುದ್ದ ಹೋಬಳಿಯ ಆಲೂಗೆಡ್ಡೆ, ಹಳೆಬೀಡಿನ ತರಕಾರಿ ಹೀಗೆ ಒಂದೊಂದು ವಸ್ತುವಿಗೂ ಒಂದೊಂದು ಸಂತೆ ಹೆಸರುವಾಸಿಯಾಗಿರುತ್ತದೆ.

ಈ ಸಂತೆಯೊಂದಿಗೆ ಅಂಟಿಕೊಂಡ  ಹಲವಾರು ಗ್ರಾಮೀಣ ಗಾದೆಮಾತುಗಳೂ ಉಂಟು. ಅವುಗಳೆಂದರೆ ಗದ್ದಲದಲ್ಲೂ ನಿದ್ರಿಸುವವನನ್ನು “ಚಿಂತೆಯಿಲ್ಲದ ಮುಕ್ಕಂಗೆ ಸಂತೇಲಿ ನಿದ್ದೆ ಬಂತಂತೆ” ಎನ್ನುವ ಗಾದೆಮಾತಾದರೆ, ಶ್ರದ್ಧೆಯಿಲ್ಲದೆ ಕಾಟಾಚಾರಕ್ಕೆ ಕೆಲಸ ಮಾಡುವವರ ಕುರಿತು ಹೇಳುವ ಮಾತು “ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ”. ತುಂಬಾ ಜನಸಂದಣಿ ಗಿಜಿಗಿಜಿಯಿಂದ ತುಂಬಿರುವ ಸಂತೆಯಲ್ಲಿ ಮೋಸಗಾರರ ಕಳ್ಳರ ಗುಂಪು ಕೂಡ ಮೊದಲೇ ಹಾಜರಿರುತ್ತದೆ ಎಂಬುದನ್ನು “ಸಂತೆಗಿನ್ನ ಮುನ್ನ ಗಂಟು ಕಳ್ಳರು ಸೇರಿದ್ರು” ಎನ್ನುವ ಗಾದೆಮಾತು ಸೂಚಿಸುತ್ತದೆ. ಮದುವೆ ಸಂಬಂಧ ಮಾಡುವಾಗಿನ ಮತ್ತೊಂದು ಗಾದೆಯೆಂದರೆ “ಸಂತೇಲಿ ಅವ್ವನ್ನ ನೋಡಿದ್ಮೇಲೆ ಮನೆಗ್ಹೋಗಿ ಮಗ್ಳನ್ನ ನೋಡೋದ್ ಬ್ಯಾಡ”  ಅಂತ. ಅಂದರೆ “ನೂಲಿನಂತೆ ಸೀರೆ ತಾಯಿಯಂತೆ ಮಗಳು” ಎನ್ನುವ ಹಾಗೆ ತಾಯಿಯನ್ನು ನೋಡಿದ ಮೇಲೆ ಮಗಳನ್ನು ನೋಡುವ ಅಗತ್ಯವಾದರೂ ಏನು? ತಾಯಿಯಂತೆಯೇ ಮಗಳು ಕೂಡ ಇರುತ್ತಾಳೆ ಎನ್ನುವ ನಂಬಿಕೆ.  “ಸಂತೆಯೊಳಗೊಂದು ಮನೆಯ ಮಾಡಿ ಶಬ್ಧಕ್ಕೆ ನಾಚಿದಡೆಂತಯ್ಯಾ” ಎಂಬ ಅಕ್ಕನ ವಚನದ ಸಾಲಿನಲ್ಲಿ ಕೂಡ ಸಂತೆಯ ಗದ್ದಲ ಎಷ್ಟಿರಬಹುದೆಂದು ತಿಳಿಯಬಹುದು.

ಸಂತೆಯೆಂದರೇ ಕೊಡು ಕೊಳ್ಳುವವರ ಗಿಜಿಗಿಜಿ  ಗದ್ದಲ! ಅಂತೆಡೆ ಮನೆಯ ಮಾಡಿ ಶಬ್ಧಕ್ಕೆ ನಾಚಿದರೆ ಹೇಗೆ? ಎನ್ನುತ್ತಾ ಅಕ್ಕ ಬದುಕಿನ ಸಂತೆಯ ವಾಸ್ತವತೆಯ ಗೂಢಾರ್ಥವನ್ನು ಅರುಹಿದ್ದಾಳೆ. “ಈ ಬದುಕು ಮೂರು ದಿನದ ಸಂತೆ” ಎಂದು ಹೇಳುವುದು ಕೂಡ ಉಂಟು. 

‌ಈ ಸಂತೆಯ ಇನ್ನೊಂದು ಬಹು ಮುಖ್ಯವಾದ ಸಂಗತಿ ಏನು ಗೊತ್ತಾ ನಿಮಗೆ? ನಮ್ಮ ಹಳ್ಳಿ ಕಡೆಯ ಅದೆಷ್ಟೋ ಮದುವೆಗಳ ಮಾತುಕತೆ, ಕೊಡು ಕೊಳ್ಳುವಿಕೆ ಸಂತೆಗಳಲ್ಲೇ, ಅದರಲ್ಲೂ ಕೆಲವಂತೂ ಎಣ್ಣೆ ಅಂಗಡಿಗಳಲ್ಲಿ ಮದಿರೆಯ ಸಾಕ್ಷಿಯಲ್ಲಿ ಮದ್ಯಪಾನ ಸೇವನೆಯ ಸಮಯದಲ್ಲೇ ಆಗುತ್ತಿದ್ದುದುಂಟು! ಏನಂತೀರಾ?

“Marriages are made in heaven” ಎಂಬಂತೆ ನಮ್ಮ ಗ್ರಾಮೀಣ ಜನರ “So many Marriages are decided in ಸಂತೆ!! ” ಎನ್ನುವಂತಹ ನೈಜ ಉದಾಹರಣೆಗಳು ನೂರೆಂಟು ಉಂಟು. ಹೀಗೆ ಸಂತೆಗಳು ನಮ್ಮ ಗ್ರಾಮೀಣ ಜನರ ಅದೆಷ್ಟೋ ಮದುವೆಗೆ ಸಾಕ್ಷೀಭೂತವಾಗಿವೆ. “ಹೇ ಭಾವ ನಿನ್ನ ಕಿರೇ ಮಗ್ನಿಗೆ ನನ್ನ ತಮ್ಮುನ್ ಮಗ್ಳ ಕೊಡ್ತಿನಿ. ನಡೀ ಐನಾರ್ ತಕೋಗಿ ಲಗ್ನುದ ದಿನ ಕೇಳ್ಕ್ಯಂಬರನ,  ಬಸವ್ನಬ್ಬ ಕಳೀತಿದ್ದಂಗೆ ಮದ್ವೆ ಮಾಡ್ಬುಡನ”. ಹೆಣ್ಣು ಗಂಡಿಗಿರಲಿ, ಕುಟುಂಬದ ಯಾರ ಸಲಹೆ ಸೂಚನೆಯೂ ಇಲ್ಲದಂತೆ ಸಂತೆಯಲ್ಲಿಯೇ ಮದುವೆ ನಿಶ್ಚಯವಾಗಿ ಬಿಡುತ್ತಿದ್ದುದು ವಿಶೇಷ! ಅಂತಹ ಹೆಗ್ಗಳಿಕೆ ಈ ಸಂತೆಗಳಿಗಿತ್ತು ಅಂದು. ಸಂತೆಯಲ್ಲಿ ಮದುವೆ ಮಾತಾದ ಮೇಲೆ ಹೆಣ್ಣು ನೋಡುವ ಶಾಸ್ತ್ರ! ಹೆಂಗೇ ನಮ್  ಹಳ್ಳಿ ಹಿರಿಯರು? ಒಬ್ಬರ ಮುಖವನ್ಮೊಬ್ಬರು ನೋಡದೆಯೇ ಮದುವೆಯಾದರೂ Divorce  ಅಗುತ್ತಿರಲಿಲ್ಲ. “ಬಾರೆ ಸಂತೆಗೆ ಹೋಗೋಣ ಬಾ, ಸಿನಿಮಾ ಟೆಂಟಲ್ಲಿ ಕೂರೋಣ ಬಾ”  ಹಾಗೂ “ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ನಲ್ಲಿ ಹಿಂದ್ಹಿಂದೆ ಬಂದೋಳು ನೀನ್ ತಾನೆ ನಿನ್ನ ನೋಡಿ ನಕ್ಕೋಳು ನಾನ್ ತಾನೇ” ಹಾಗೇ ಹಂಸಲೇಖರವರ “ಸಂತೆಗೊಗಬೇಕೇ? ಕಂತೇ ತರಬೇಕೆ” ಎಂಬ ಸಿನೆಮಾ ಹಾಡುಗಳನ್ನು ಕೇಳಿದಾಗ ಈ ಸಂತೆಗಳು ಪ್ರೇಮಿಗಳ ಭೇಟಿಯ ತಾಣ ಕೂಡ ಆಗಿದ್ದವೆನ್ನಬಹುದು. ಸಂತೆಗೆ ಹಿರಿಯರೊಂದಿಗೆ ಬಂದ ಹೆಣ್ಣುಮಕ್ಕಳನ್ನು ಪಡ್ಡೆ ಹುಡುಗರು ತಿರುತಿರುಗಿ ನೋಡುವಾಗ ಜನರ ನಡುವೆ ಇರುವೆವೆಂಬ ಪರಿವಿರದೆ ಹೆಣ್ಣುಮಕ್ಕಳು ಅವರೆಡೆಗೇ  ಕಣ್ಣುಹಾಯಿಸುತ್ತಾ ಮೈಮರೆತು ಕೈಲಿದ್ದ ಮಡಕೆಯನ್ನೋ ಚೀಲವನ್ನೋ ಬೀಳಿಸಿದ್ದೂ ಉಂಟೆನಿಸುತ್ತದೆ!!

ಇನ್ನು, ಕೆಲವು ಊರುಗಳ ಹೆಸರುಗಳು  ಆರಂಭ ಇಲ್ಲವೆ ಅಂತ್ಯದಲ್ಲಿ “ಸಂತೆ” ಎಂಬ ಪದದಿಂದಲೇ ಕೂಡಿರುವುದನ್ನು ಕಾಣಬಹುದು. ಸಂತೆ ಮರೂರು, ಸಂತೆ ಚಾಚಳ್ಳಿ, ಸಂತೆ ಶಿವರ, ಸಂತೆ ಕೊಪ್ಪಲು, ಸಂತೆಬೆನ್ನೂರು , ಶನಿವಾರಸಂತೆ, ಹೀಗೆ ಹತ್ತು ಹಲವು. ಸಂತೆ ಶಿವರ ಎಂದೊಡನೆ ಥಟ್ಟನೆ ನಮಗೆಲ್ಲಾ ನೆನಪಿಗೆ ಬರುವವರು ಹಾಸನ ಜಿಲ್ಲೆಯ ಹೆಸರಾಂತ ಸಾಹಿತಿ ಸರಸ್ವತಿ ಸಮ್ಮಾನ್ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಸಂತೆಶಿವರದ ನಮ್ಮ ಹೆಮ್ಮೆಯ S.L. ಭೈರಪ್ಪನವರಲ್ಲವೇ?

ಇನ್ನು  ಸಂತೆಯಲ್ಲಿ ಸಿಗುವ ವಸ್ತುಗಳಿಗೆ ಲೆಕ್ಕವಿಲ್ಲ. ಸೂಜಿದಾರದಿಂದ ಹಿಡಿದು ಸುಣ್ಣ ಬೆಣ್ಣೆಯವರೆಗೂ ಎಲ್ಲವೂ ದೊರೆಯುವ ತಾಣ ಸಂತೆಯಾಗಿತ್ತು. ದವಸಧಾನ್ಯ̧, ದಿನಸಿ, ಕಿರಾಣಿ ಸಾಮಾನು, ಹಾಗೇ ಇಡೀ ಹಬ್ಬ, ಮದುವೆಗೆ ಬೇಕಾದ, ಸಾಮಾನು ಸರಂಜಾಮು, ಮದುವೆಗೆ  ಬೇಕಾದ ಪೂಜಾ  ಸಲಕರಣೆಗಳು, ಶಾಸ್ತ್ರಗಳಿಗೆ ಬೇಕಾದ ಪರಿಕರಗಳಾದ ಮಣ್ಣಿನ ಹರಿಣೆ, ಗಡಿಗೆ, ಕುಡಿಕೆ, ಮಡಕೆ, ಹಿಟ್ಟಿನ ಮಡಕೆ, ಹಾಲು ಕಾಯಿಸೋ ಹಳಗೆ, ರೊಟ್ಟಿ ಹಿಟ್ಟು ಕಲೆಸೋ ಹರಿವಾಣ, ಗುಡಾಣ, ದೋಸೆಕಲ್ಲು ಮುಚ್ಚಳ, ಹಣತೆ, ಇನ್ನು ಬಿದಿರಿನ ಮೊರ, ಕುಕ್ಕೆ, ಚಿಬ್ಲು, ಬುಟ್ಟಿ, ವನೆಯೋ ಕುಕ್ಕೆ ಬಿದಿರಿನ ಮುಚ್ಚುಳ, ಬಂಗಾರ ಪೆಟ್ಟಿಗೆ, ಗಾಡಿಯ ತಡಿಕೆ, ಬೀಜ ಬಿತ್ತನೆಗೆ ಬಳಸುವ ಸಡ್ಡೆ, ಹಿತ್ತಿಲ ತದ್ದಲು, ವಡಕೆ ಚಾಪೆ, ಈಚಲು ಗರಿ ಚಾಪೆ, ಈಚಲ ಪೊರಕೆ.  ಕೃಷಿಸಲಕರಣೆಗಳಾದ, ನೇಗಿಲು, ಕುಂಟೆ, ಕೂರಿಗೆ ಮೇಣಿ, ಬಾರುಕೋಲು, ಕುಡ್ಲು, ಮಚ್ಚು, ಕಳೆಕುಡ್ಲು, ಗುದ್ಲಿ ಪಿಕಾಸಿ, ಹಾರೆ, ಚಾಕು, ಚೂರಿ, ಕಾಯಿ ತುರಿಯೋ ಮಣೆ, ಮೊರ, ವಂದರಿ, ಸೇರು, ಅಚ್ಚೇರು, ಪಾವು, ಚಟಾಕು, ಗಿಟಾಕು, ಕಬ್ಬಿಣದ ಬೆಣ್ಣೆ ತೂಗೋ ತಕ್ಕಡಿ, ಕಬ್ಬಿಣದ ರೊಟ್ಟಿ ಹೆಂಚು, ಎರಕದ ರೊಟ್ಟಿ ಹೆಂಚು, ದೋಸೆ ಹೆಂಚು, ಎರಕದ ಸೌಟು, ಕಬ್ಬಿಣದ ಮಗಚುವ ಕೈ, ಮರದ ಸೌಟು, ತೆಂಗಿನಚಿಪ್ಪಿನಿಂದ ಮಾಡಿದ ಸೌಟು, ಹಿಟ್ಟಿನ ಕೋಲು, ಮರದ ರೊಟ್ಟಿ ಮಣೆ, ಲಟ್ಟಣಿಗೆ. ಪಾತ್ರೆಗಳಾದ ಹಂಡೆ, ಬಿಂದಿಗೆ ಕೊಳಗ ಚೊಂಬು ಚೌರಿಗೆ, ಮೊದಲಿಗೆಮಣ್ಣು, ಹಿತ್ತಾಳೆ, ತಾಮ್ರವಾದರೆ, ನಂತರ ಕಬ್ಬಿಣ, ಸಿಲ್ವರ್, ಅಲ್ಯುಮಿನಿಯಂ ಇಂಡಾಲಿಯಂ ಸ್ಟೀಲ್ ಪಾತ್ರೆಗಳು. ಇದೀಗ ಜಗವನ್ನೆಲ್ಲಾ ತನ್ನ ಕಬಂಧಬಾಹುಗಳಿಂದ ಅಪ್ಪಿಕೊಂಡು ಮಾರಕವಾಗಿರುವ ಪ್ಲಾಸ್ಟಿಕ್! ಹಾಗೇ ಸಂತೇಲಿ ಸೀರೆ ಪಂಚೆ ಟವೆಲ್ಲು ಹೊಲಿದ ಅಂಗಿ ಚಡ್ಡಿ ಹೆಣ್ಣುಮಕ್ಕಳ ಲಂಗ ರವಿಕೆ,  ಎಲೆಅಡಿಕೆ ಚೀಲ, ಎಳೆಯ ಮಕ್ಕಳಿಗೆ ಕುಲಾವಿಗಳನ್ನು ಸಹ ಮಾರಾಟ ಮಾಡುತ್ತಿದ್ದರು. ಇವುಗಳನ್ನು ನಮ್ಮ ಬೀದಿಯ ಆಸುಪಾಸಿನಲ್ಲಿದ್ದ ದರ್ಜಿಗಳು ಹೊಲಿದು ಮಾರಾಟ ಮಾಡುತ್ತಿದ್ದರು. ಅವರಲ್ಲಿ ಲಭ್ಯವಿದ್ದ ಬಟ್ಟೆಯಲ್ಲಿ ಹೊಲಿಯಬಹುದಾದ ಅಳತೆಯಲ್ಲಿ ಹೊಲಿದಿರುತ್ತಿದ್ದ ಅಂಗಿಗಳನ್ನು ನಮ್ಮ ಹಳ್ಳಿಗಳಲ್ಲಿ ಮಾರ್ನಾಮಿ, ಉಗಾದಿ ಹಬ್ಬಗಳಲ್ಲಿ ಕೊಂಡು ತಂದು ಮನೆ ಮಂದಿಯೆಲ್ಲಾ ಧರಿಸುತ್ತಿದ್ದರು. ಮೈಯಳತೆಗೆ ಸರಿಹೊಂದದ ಈ ಅಂಗಿ ಚಡ್ಡಿಗಳು ಮನೆಯ ಮಕ್ಕಳಿಗೆಲ್ಲಾ ಒಂದೇ ತೆರನಾದ ಒಂದೇ ಅಳತೆ. ಹಬ್ಬ ಹುಣ್ಣಿಮೆಗೆಲ್ಲಾ ಇವೇ ಸಂತೆ ಅಂಗಿಗಳು! ಈಗಲೂ ಮಕ್ಕಳು ಮೈಯ್ಯಳತೆಗೆ ಸರಿಯಾಗದ ಯಾವುದಾದರೂ ಬಟ್ಟೆ ತೊಟ್ಟರೆ ಇದೇನು ಸಂತೇ ಅಂಗಿನಾ? ಎಂದು ಅಣಕಿಸುವುದುಂಟು!

ಇಂದು ಆಧುನಿಕತೆ ಬೆಳೆದಂತೆ ಹಲವಾರು ವಸ್ತುಗಳು ದಿನನಿತ್ಯ ಎಲ್ಲ ಊರುಗಳ ಮಾರುಕಟ್ಟೆಯಲ್ಲೇ ಸಿಗುತ್ತವೆ. ಸಂತೆಯನ್ನು ಹಿಂದಿಯಲ್ಲಿ ಬಜಾರ್ ಎನ್ನುವಂತೆ, ಮುಂದುವರೆದಂತೆ ಬಜಾರ್, ಮಾಲ್ ಎಂಬ “ಪರಿಕಲ್ಪನೆ”ಯಲ್ಲಿ ಹಿಂದೆ ಒಂದೇ ನಿಗದಿತ ಸ್ಥಳದಲ್ಲಿ ನಡೆಯುವ ಸಂತೆಯಲ್ಲಿ ಸಿಗುತ್ತಿದ್ದ ಎಲ್ಲ ವಸ್ತುಗಳು “ಒಂದೇ ಸೂರಿನಡಿ” ಸಿಗುತ್ತಿವೆ. ಇದೊಂದು Modified ಸಂತೆ ಎನ್ನಬಹುದು. ಅವುಗಳೆಂದರೆ Smart Bazar, Big Bazar, super Bazar, mini Bazar ಎಂಬ ಹತ್ತು ಹಲವು. ಇವುಗಳು ಜಿಲ್ಲಾ ಕೇಂದ್ರಕ್ಕಷ್ಟೇ ಅಲ್ಲದೆ ತಾಲ್ಲೂಕು ಕೇಂದ್ರಗಳಲ್ಲೂ ತಲೆಯೆತ್ತಿವೆ. ಇದು ಹಣಕ್ಕೆ ಬೆಲೆಯಿಲ್ಲದ ಸಮಯಕ್ಕೆ ಕೊರತೆಯಿರುವ ಕಾಲ. ಹಣದ ಗಣಿಗಳು ಧಣಿಗಳೂ ಆಗಿರುವ ಇಂದಿನ ಜನ ಸಾಧ್ಯವಾಗಿದ್ದಿದ್ದರೆ ಸಮಯವನ್ನೂ ಕೊಳ್ಳುತ್ತಿದ್ದರು. ಆದರೇನು ಮಾಡುವುದು? ಆ ಸಮಯವೆಂಬ ಸಮಯ ಯಾರ ಮಾರುವಿಕೆಗೂ ಕೊಳ್ಳುವಿಕೆಗೂ ದಕ್ಕದ್ದು! ಸಮಯದ ಅಭಾವದಿಂದ ಒಂದೇ ಸೂರಿನಡಿ ಸಿಗುವ ವಸ್ತುಗಳನ್ನು ಮಾರಾಟ ಮಾಡುವ ಬೃಹತ್ ಮಳಿಗೆಗಳಲ್ಲಿ ಜನ ರೋಬೋಗಳಂತೆ ಗಾಲಿಯ ಬುಟ್ಟಿಗಳಲ್ಲಿ ವಸ್ತುಗಳನ್ನು ಆಯ್ಕೆ ಮಾಡಿ ತುಂಬಿಕೊಂಡು ಪ್ರತಿಷ್ಠೆಯ ಪರಾಕಾಷ್ಠೆಯಲ್ಲಿ ಸಾಗುತ್ತಾರೆ. ಪರಿಚಿತರು ಎದಿರು ಸಿಕ್ಕರೂ ಒಂದು ಮಾತಿಲ್ಲ ಕತೆಯಿಲ್ಲ ತುಟಿಯಂಚಿನಲ್ಲಿ ಒಲ್ಲದ ಸಲ್ಲದ ಜುಗ್ಗುತನದ ಒಂದು ಕಿರುನಗೆ. ಅದು ನಿಜ ನಗೆಯೋ ಅಹಮಿಕೆಯೋ ಏನೋ ತಿಳಿಯದಂತದ್ದು. ಒಬ್ಬರನ್ನೊಬ್ಬರು ಮಾತನಾಡಿಸುವ ಸೌಜನ್ಯ ಬಾಂಧವ್ಯ ಇಲ್ಲಿ ಈಗಾಗಲೇ ಮಾಯವಾಗಿ, ಮಾತನಾಡಿಸಿದರೆ ತಮ್ಮ ಘನತೆ ಗೌರವಕ್ಕೆ ಕುಂದೇನೋ ಎಂಬಂತೆ ನಡೆಯುತ್ತಾರೆ. ಗ್ರಂಥಾಲಯಗಳಲ್ಲಿ ನಿಶ್ಯಬ್ಧವನ್ನು ಕಾಪಾಡುವಂತೆ ನಿಶ್ಯಬ್ಧವಾಗಿ ಬಿಡುತ್ತಾರೆ! ಗಿಜಿಗಿಜಿ ಜನಸಂದಣಿ ಸಂಬಂಧಗಳ ಬಾಂಧವ್ಯ ಯಾವುದೂ ಇಲ್ಲಿಲ್ಲ.

ಬರಿದೆ ಹಣ ಪ್ರತಿಷ್ಠೆ. ಕೊಡು ಕೊಳ್ಳುವವರ ನಡುವೆ ಯಾವುದೇ ಮಾತಿಲ್ಲದೆ ಚೌಕಾಸಿಯಿಲ್ಲದೆ “ಕೊಡುವವನು ಹೊಗಳಿ ಕೊಳ್ಳುವವನು ತೆಗಳಿ” ಹಿಂದೆ ಮಾಡುತ್ತಿದ್ದಂತೆ ವ್ಯಾಪಾರವನ್ನು ಮಾಡುವ ಗೋಜೇ ಇಲ್ಲಿಲ್ಲ. ಹಿಂದಿನ ಸಂತೆಗಳಿಗೆ ನಮ್ಮ ಗ್ರಾಮೀಣ ಹೆಂಗಸರು ಕೂಡ ಬೆಣ್ಣೆ, ನಾಟಿ ಕೋಳಿ, ಕೋಳಿಮೊಟ್ಟೆ ಮಾರಲು, ಹಾಗೇ ಬೇರೆ ವಸ್ತುಗಳನ್ನು ಕೊಳ್ಳಲು ಒಟ್ಟಾಗಿ ಹೋಗುತ್ತಿದ್ದರು. “ನಂಜಕ್ಕ ಸಂತಿಗೋಗನ ಬತ್ತಿಯೇನೆ. ಸಣಕ್ಕ ನೀನ ಬತ್ತಿಯೇನೆ” ಅಂತವ ಒಬ್ರಿಗೊಬ್ರು ಮಾತಾಡ್ಕಂಡು ಓಯ್ತಿದ್ರು. ಬೆಣ್ಣೆ ಉಂಡೆಗಳನ್ನು ಮಜ್ಜಿಗೆಯ ತಪ್ಲೆಯೊಳಗೆ ಹಾಕಿಕೊಂಡು “ಅಂಕೆಯಲ್ಲಿರುವ ಹೆಣ್ಣು ಮಜ್ಜಿಗೆಯಲ್ಲಿರುವ ಬೆಣ್ಣೆ ಎಂದೂ ಕೆಡದಂತೆ” ಎಂಬ ಗಾದೆಯಂತೆ. ಅದರ ಮೇಲೆ ಬಿಳಿಯ ಒದ್ದೆ ಬಟ್ಟೆ, ತಂಪಾಗಿರಲೆಂದು ಮೇಲೊಂದು ಹರಳುಕಾಯಿ ಎಲೆಯನ್ನು ಹಾಕಿ ಬೆಣ್ಣೆ ಕರಗಿ ಹೋಗದಂತೆ ಜೋಪಾನವಾಗಿ ತಲೆಯ ಮೇಲೆ ಹೊತ್ತು ಕೊಂಡು ಹೋಗುತ್ತಿದ್ದರು. ಸಂತೆಗೆ ಬಂದ ನೆರೆಯೂರಿನ ಸಂಬಂಧಿಕರ ಉಭಯಕುಶಲೋಪರಿ ಕೂಡ ಭಾವುಕತೆಯಿಂದ ನಡೆಯುತ್ತಿತ್ತು. “ಚಿಗವ್ವ ಹೆಂಗವ್ಳೆ? ಕೆಂದ ಹಸ ಕರ ಆಕ್ತಾ? ಎಂತಾ ಕರ? ಬಿಳಿಯ ಹೆಂಗವ್ನೆ? (ಸಾಕುನಾಯಿ)  ” ದೊಡಪ್ಪರ್ಮನೆ ಕರಿಯಣ್ಣನುಡ್ಗಿ ಎಣ್ಣಾಗ್ಯವ್ಳಂತೆ? ಎಂದು ತವರಿನೂರಿನವರು ಸಿಕ್ಕರೆ ತವರನ್ನೇ ಕಂಡಷ್ಟು ಸಂಭ್ರಮಿಸುವ ನೆಂಟರಿಷ್ಟರ ಕುರಿತು ಕೇಳುವ ಹೆಂಗಸರೆಲ್ಲಿ? ಹಣ ಕೊಟ್ಟು ಹರಿದ ಬಟ್ಟೆಗಳನ್ನು ತೊಟ್ಟು ತುಟಿಗೊಂದಿಷ್ಟು ಬಣ್ಣ ಹಚ್ಚಿಕೊಂಡು ತುಟಿ ಬಿಚ್ಚದೆ ಪರಿಚಯವಿದ್ದರೂ ಅಪರಿಚಿತರಂತೆ ತುಟಿಯಂಚಿನಲಿ ಓರೆಯಾಗಿ ತುಸು ನಕ್ಕು ಪ್ರತಿಷ್ಠೆಯ ಪ್ರದರ್ಶನಕ್ಕಾಗಿ ಖರೀದಿಸುತ್ತಾ ಮಾಲ್‌ಗಳಲ್ಲಿ ಶಿಸ್ತಾಗಿ ಮುಂದೆ ಸಾಗುವ ಇಂದಿನ ಜನರೆಲ್ಲಿ? ಅಂದಿನ ಸಂತೆಗಳಲ್ಲಿ ಅಗತ್ಯತೆಯ ಖರೀದಿಯಿತ್ತು. ಇಂದು ತೋರಿಕೆಗಾಗಿ ಖರೀದಿಸುವ ಹುಚ್ಚೇ ಹೆಚ್ಚಾಗಿದೆ.

ಹಿಂದಿನ ಸಂತೆ ಕೇವಲ ಬಿಕರಿ ಮತ್ತು ಖರೀದಿದಾರರ ಒಂದು ತಾಣವಷ್ಟೇ ಆಗಿರದೆ ಒಂದು ಬಾಂಧವ್ಯದ ಕುರುಹಾಗಿತ್ತು. ಈ ವಾರ ಬಂದು ಖರೀದಿಸಿದವರು ಮುಂದಿನ ವಾರ ಹೋಗದೆ ಮತ್ತೊಂದು ವಾರ ಅದೇ ಆಸರಕ್ಕೆ ಹೋದರೆ ಆತ ಕೇಳುತ್ತಿದ್ದುದು “ಓದ್ವಾರ ಬರ್ಲಿಲ್ವಲ್ಲಾ ಯಾಕವ್ವಾ?” ಎಂದರೆ “ಇಲ್ಲ ಕಣಣ್ಣಾ ಯಾಕೋ ಮೈಕೈ ಆಲಾಸಾದಂಗಾಗಿತ್ತು ಅದ್ಕೆ ಬರ್ಲುಲ್ಲ”.  “ಮಕ್ಳೆಂಗವೆ,  ಮದ್ವಿಗ್ಬಂದವ್ರಾ?  (ಅಂದ್ರೆ ಮದುವೆ ಮಾಡುವ ವಯಸ್ಸಾ ಎಂದರ್ಥ). ಈ ಎಲ್ಲ ಸಂಭಾಷಣೆ ಕೊಳ್ಳುವವರು ಮಾರುವವರ ನಡುವಿನ  ಸಂವಹನ ವ್ಯಾಪಾರಕ್ಕಷ್ಟೇ ಸೀಮಿತವಾಗದೆ ಬಾಂಧವ್ಯದ ಎಳೆಯನ್ನು ಹೆಣೆಯುತ್ತಿತ್ತು. ಭಾವನೆಗಳ ಬಂಧ ಇರುತ್ತಿತ್ತು. “ಅಕ್ಕ ಇಲ್ಲಿ ಬಾರಕ್ಕ ನಮ್ಮಿತ್ಲವು ಹಾಗಲಕಾಯಿ ಎಂಗವೆ ಗೊತ್ತಾ? ತಗಾ” ಎಂದು ಪ್ರೀತಿಯಿಂದ ಕರೆದು ಒಂದೆರಡು ಹೆಚ್ಚಾಗಿ ಕೊಡುತ್ತಿದ್ದ, ಅವರೆಲ್ಲಿ?  ಒಂದು ಗ್ರಾಂ ಹೆಚ್ಚು ತೂಗಿದರೂ ಅದರ ಹಣವನ್ನು ಮಾತೇ ಬಾರದ ಯಂತ್ರವೊಂದು ಲೆಕ್ಕಿಸಿ ತೋರಿಸುವ ಮಾಲ್, ಬಜಾರ್‌ಗಳೆಲ್ಲಿ? ಇಂದಿನ ಬಜಾರ್ ಮಾಲ್‌ಗಳಲ್ಲಿ ಮಾರುವವ ಒಬ್ಬನೇ ಕೊಳ್ಳುವವರೇ ಎಲ್ಲ! ಮಾಲ್‌ಗಳಲ್ಲಿ ಎಲ್ಲ ಮಾಲೂ ಸಿಗುತ್ತದೆ. ಆದರೆ ಮಾರುವವ ಮಾತ್ರ ಕೊಳ್ಳುವವನಿಗೆ ಸಿಗುವುದೇ ಇಲ್ಲ! ಕೊಳ್ಳುವವರ ಮಾರುವವರ ನಡುವಿನ ಭಾವನೆಗಳಿಗಿಲ್ಲಿ ತಾವಿಲ್ಲ! ಮಾಲ್ಗಳದು ಏಕಮುಖಿ ಪಾತ್ರ. ಇಲ್ಲಿ ಮಾರುವವನದೇ ಅಧಿಪತ್ಯ ಅವನ ತೀರ್ಮಾನವೇ ಅಂತಿಮ. ಮಾರುವವನಿಗೂ ಕೊಳ್ಳುವವನಿಗೂ ಯಾವುದೇ ತರದ ಮುಖಾಮುಖಿ ಸಂಬಂಧವಿಲ್ಲ. ಅವನದು ನೇಪಥ್ಯ. ಕೊಳ್ಳುವ ವಸ್ತುವಿನ ಕುರಿತು ಮಾರುವವನನ್ನು ಕೇಳುವಂತೆಯೇ ಇಲ್ಲ. ಅಂದು ಮಾರುವವನಷ್ಟೇ ಕೊಳ್ಳುವವನ ಪಾತ್ರವೂ ಇರುತ್ತಿತ್ತು. ಮಾರುವವ ಮತ್ತು ಕೊಳ್ಳುವವನ ನಡುವೆ ಒಂದು ಮುಖಾ ಮುಖಿ ಸಂಬಂಧ ಇರುತ್ತಿತ್ತು. ಅಂದು ಗ್ರಾಹಕರೇ ದೇವರು. ಇಂದು ಮಾರುವವನೇ ದೈವ! 

ಹಾಸನದಲ್ಲಿ ನಡೆಯುತ್ತಿದ್ದ ಮಂಗಳವಾರ ಸಂತೆ ನಮ್ಮ ಮನೆಗೆ ಹತ್ತಿರವೇ ಇದ್ದುದರಿಂದ ಬಾಲ್ಯದಲ್ಲಿ ಹಿರಿಯರೊಂದಿಗೆ ನಾವೂ ಕೂಡ ಸಂತೆಗೆ ಹೋಗಿದ್ದುಂಟು. ನಮ್ಮ ಹಳ್ಳಿಗಳಿಂದ ಕೂಡ ಮಂಗ್ಳಾರ ಸಂತಿಗೆ ಬತ್ತಿದ್ರು. ಪ್ರತಿ ವಾರ ಸಂತೆಮಾಳದಲ್ಲಿ ನಡೆಯುತ್ತಿದ್ದ ಹಾಸನದ ಸಂತೆಯನ್ನು ಡಿಸೆಂಬರ್ ಅಂತ್ಯದಿಂದ ಜನವರಿಯಲ್ಲಿ ಅದೇ ಜಾಗದಲ್ಲಿ ದನದ ಜಾತ್ರೆ, ನೆಡೆಯುವ ಕಾರಣ ಆ ಸಮಯದಲ್ಲಿ ಸ್ಥಳಾಂತರಿಸಲಾಗುತ್ತಿತ್ತು. ಆ ಸಮಯದಲ್ಲಿ ಜ್ಯೂಬ್ಲಿ ಮೈದಾನದಿಂದ ನಮ್ಮ ಮನೆಯ ಬೀದಿಯಲ್ಲಿದ್ದ ಪಾಂಡುರಂಗ ದೇವಸ್ಥಾನದವರೆಗೂ ಬೀದಿಯ ಇಕ್ಕೆಲಗಳಲ್ಲಿ ನೆಲದ ಮೇಲೆ ಅಂಗಡಿ ಹಾಕುತ್ತಿದ್ದರು. ನಮ್ಮ ಬೀದಿಯ  ಹಿರಿಯ ಹೆಂಗಸರೆಲ್ಲಾ  ಒಟ್ಟಾಗಿ ಸೇರಿ ಸಂತೆಗೆ ಹೋಗಿ  ಅಗತ್ಯವಸ್ತುಗಳನ್ನು ಖರೀದಿಸುವುದು ರೂಢಿಯಲ್ಲಿತ್ತು. ದನಕರುಗಳನ್ನು ಸಾಕಿದ್ದವರೆಲ್ಲ ಒಣ ಹುಲ್ಲು ಖರೀದಿಸಲು, ಹಾಗೂ ಇನ್ನಿತರೆ ದಿನನಿತ್ಯ ಬಳಕೆಯ ವಸ್ತುಗಳನ್ನು ಸಂತೆಯಲ್ಲಿ ಕೊಳ್ಳುವ ಪರಿಪಾಠವಿತ್ತು.     

ಸಂತೆಯಲ್ಲಿ ಕೂಡ ಒಂದೊಂದು ವಸ್ತುವಿನ ಅಂಗಡಿಗಳು ಒಂದೊಂದು ಕಡೆ ಇರುತ್ತಿದ್ದವು. ಅದನ್ನು ಆಸ್ರ ಎನ್ನುತ್ತಿದ್ದರು. ತರಕಾರಿ ಆಸರ, ಹಣ್ಣಿನ ಆಸರ, ಹೂವಿನ ಆಸರ, ಈರುಳ್ಳಿ ಬೆಳ್ಳುಳ್ಳಿ ಆಸರ, ದನಿನ ಆಸರ, ಮಡಕೆ ಆಸರ, ಹೀಗೆ ಇಂದಿನ Departmental storeನಂತೆ ಒಂದೊಂದು ಕಡೆ ಇರುತ್ತಿದ್ದುದು ಗ್ರಾಹಕನಿಗೆ ಅನುವಾಗುತ್ತಿತ್ತು. ಯಾರಿಗೆ ಯಾವ ವಸ್ತು ಬೇಕು ಅದನ್ನು ಆಯಾ ಆಸರದಲ್ಲಿ ಖರೀದಿಸುತ್ತಿದ್ದರು. ಬೆಲ್ಲ, ಮಣ್ಣಿನ ಮಡಕೆ, ವಾರಕ್ಕಾಗುವಷ್ಟು ಈರುಳ್ಳಿ ಬೆಳ್ಳುಳ್ಳಿ, ಎಲ್ಲಕೂ ಮಿಗಿಲಾಗಿ ಉಪ್ಪು. ಅದೇನೋ ತಿಳಿಯದು ಸಾಮಾನ್ಯವಾಗಿ ಎಲ್ಲರೂ ಉಪ್ಪನ್ನು ಮಾತ್ರ ಸಂತೆಯಿಂದಲೇ ಕೊಂಡು ತರುತ್ತಿದ್ದರು. ಅಂದು ಉಪ್ಪನ್ನು ತೂಗುತ್ತಿರಲಿಲ್ಲ ಸೇರಿನಲ್ಲಿ ಅಳೆಯುತ್ತಿದ್ದರು! ಆಗೆಲ್ಲಾ ಪ್ಯಾಕೆಟ್‌ನಲ್ಲಿ ಬರುತ್ತಿದ್ದ  Tata  salt ಇರಲಿಲ್ಲ. ಅಸಲಿಗೆ ಆಗ ಪ್ಲಾಸ್ಟಿಕ್ ಬಳಕೆಯೇ ಇರಲಿಲ್ಲ! ಕೆಲವೊಮ್ಮೆ ಸಂತೆಯಲ್ಲಿ ಹೊಸದಾಗಿ ಕೊಂಡ ಮಡಕೆಯೊಳಗೇ ಉಪ್ಪನ್ನು ತುಂಬಿಸಿಕೊಂಡು ಬರುತ್ತಿದ್ದರು. ಆಗೆಲ್ಲಾ ಉಪ್ಪು ಈಗಿನಂತೆ ಬೆಳ್ಳಗಿರುತ್ತಿರಲಿಲ್ಲ. ಅಲ್ಲಿ ಸಿಗುತ್ತಿದ್ದುದು ಹರಳುಪ್ಪು ಮಾತ್ರ!  

ಸಂತೆಯಲ್ಲಿ ಕೊಂಡ ಹಣ್ಣು ತರಕಾರಿ ಎಲ್ಲವನ್ನೂ ಬಟ್ಟೆಯ ಬ್ಯಾಗುಗಳಲ್ಲಿ ತುಂಬಿಸಿಕೊಂಡು ಸೊಂಟದ ಮೇಲೋ ತಲೆಯ ಮೇಲೋ ಹೊತ್ತು  ನಡೆದುಕೊಂಡೇ ಬರುತ್ತಿದ್ದರು. ಕೆಲವು ವಸ್ತುಗಳನ್ನು ಪೇಪರ್ ಕವರಿನಲ್ಲಿ ಕಟ್ಟಿ ಕೊಡುತ್ತಿದ್ದರು. ಇಲ್ಲವೇ ಸುತ್ತಿ ಕೊಡುತ್ತಿದ್ದರು. ಅದು ಪೇಪರ್ ಕವರಿನ ಜಮಾನ. ಪೇಪರ್ ಕವರನ್ನು ಮಾಡಿ ಎಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿದ್ದರು ಕೂಡ!

ಹಲವೊಮ್ಮೆ ಯಾರಿಗಾದರೂ ಸಂತೆಗೆ ಹೋಗಲಾಗದಿದ್ದರೆ ಸಂತೆಗೆ ಹೋಗುವ ಅಕ್ಕಪಕ್ಕದ ಮನೆಯವರಿಗೆ ಹೇಳಿ ಒಂದೆರಡು ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದರು. ಹೀಗೆ ಒಮ್ಮೆ ನಮ್ಮಮ್ಮ ನೆರೆಮನೆಯವರಿಗೆ ಗೆಣಸಿನ ಸೀಸನ್‌ನಲ್ಲಿ ಗೆಣಸು ತರಲು ಹೇಳಿದ್ದರೂ ಅವರು ಮರೆತು ಬಂದಿದ್ದರು. ಸಂಜೆ ಐದು ಗಂಟೆಗೆ ಸ್ಕೂಲಿನಿಂದ ಬಂದಾಗ ಗೆಣಸು ತಂದಿಲ್ಲವೆಂದು ತಿಳಿದಾಕ್ಷಣ ಗೆಣಸು ಬೇಕೇ ಬೇಕೆಂದು ಸಂತೆ ಮುಗಿದು ಹೋಗಬಹುದೆಂದು ನಾನೇ ಸಂತೆಗೆ  ಓಡೋಡಿ ಹೋಗಿ ಗೆಣಸು ತಂದದ್ದು ನೆನಪಿದೆ. ಅಂದು ಬಿಟ್ಟರೆ ಮುಂದಿನ ವಾರದವರೆಗೆ ಕಾಯಬೇಕಿತ್ತು ನಾವು ಗೆಣಸಿಗಾಗಿ! ಎಂದಿನಂತೆ ಎಲ್ಲಾ ಕಾಲದಲ್ಲಿ ಎಲ್ಲ ವಸ್ತುಗಳು ಎಲ್ಲೆಡೆ ಸಿಗುತ್ತಿರಲಿಲ್ಲ. ಎಲ್ಲದಕ್ಕೂ ಒಂದು ಸಮಯ ಕಾಲ ದಿನ ಎಂದಿತ್ತು. ಎಲ್ಲ ವಸ್ತುಗಳು ಎಲ್ಲಾ ಕಾಲದಲ್ಲೂ ಸಿಕ್ಕು ಆ ವಸ್ತುವಿನ ರುಚಿಯನ್ನು ಕಳೆದುಕೊಂಡಿರಲಿಲ್ಲ. ಹಾಗೇ ಘನತೆಯನ್ನು ಪ್ರಾಶಸ್ತ್ಯವನ್ನು ಕೂಡ ಕಳೆದುಕೊಂಡಿರಲಿಲ್ಲ! ಮಾಗಿಯ ಕಾಲದಲ್ಲಿ ಸಿಗುವ ಅವರೆಯ ಸೊಗಡಿಗೂ ಮಿಕ್ಕುಳಿದ ಸೀಸನ್‌ಗಳಲ್ಲಿ ಸಿಗುವ ಅವರೆಕಾಯಿಯ ರುಚಿಗೂ ಅದೆಷ್ಟು ವೆತ್ಯಾಸವಲ್ಲವೇ? ಹಾಗೇ  ಗೆಣಸಿನ ಕಾಲದಲ್ಲಿ ಸಂತೆಯಲ್ಲಿ ಮಾತ್ರ ಸಿಗುತ್ತಿದ್ದ ಗೆಣಸನ್ನು ತಿಂದರೆ ಅದರ ರುಚಿ,  ಆ ತೃಪ್ತಿಯೇ  ಬೇರೆ! ಅದಕ್ಕಾಗಿಯೇ ಬಹುಶಃ ಐದು ಆರನೆ ತರಗತಿಯಲ್ಲಿದ್ದಾಗ ಖುದ್ದು ನಾನೇ ಸಂತೆಗೆ ಹೋಗಿದ್ದು ಗೆಣಸಿಗಾಗಿ! 

ಸಂತೆಯ ಇನ್ನೊಂದು ವಿಶೇಷವೆಂದರೆ ಅದು ಕಡ್ಳೆಪುರಿ ಅಥವಾ ಪುರಿ ಕಾರದ್ದು! ಎಲ್ಲಾ ದಿನಗಳಲ್ಲೂ ಮನೆಯ ಬಳಿಯ ಅಂಗಡಿಗಳಲ್ಲಿ ಸಿಗುತ್ತಿದ್ದರೂ ಸಹ “ಸಂತೆ ಪುರಿ”ಯ ರುಚಿಯೇ ಬೇರೆಯೆನಿಸುತ್ತಿತ್ತು ಯಾಕೋ ಕಾಣೆ! ಪ್ರತಿದಿನ ಸಂಜೆಯ ಹೊತ್ತು ಸ್ಕೂಲಿನಿಂದ ಬಂದಾಗ ಸಂಜೆ ಮಕ್ಕಳಿಗೆ ಏನಾದರೂ ಮನೆಯಲ್ಲಿ ಮಾಡಿದ ತಿಂಡಿಗಳನ್ನು  ಕೊಡುತ್ತಿದ್ದರು. ಆದರೆ ಮಂಗಳವಾರ ಮಾತ್ರ ಸಂತೆಯ ಪುರಿ ಕಾರ ಕಾಫಿಯೊಂದಿಗೆ ಗ್ಯಾರಂಟಿ. ಇನ್ನು ರಜಾದಿನಗಳಲ್ಲಿ ನಮ್ಮ ಹಳ್ಳಿಗಳಿಗೆ ಹೋದರೆ ಹತ್ತಿರದ ದುದ್ದ ಶನಿವಾರ ಸಂತೆ, ಗಂಡಸಿಯ ಬೇಸ್ತ್ವಾರ ಸಂತೆಗೆ ಹೋದ ಮಾವ ವಲ್ಲಿಯಲ್ಲಿ ಕಟ್ಟಿಕೊಂಡು ಬರುವ ಪುರಿಗಾಗಿ ಮನೆಯ ಜಗಲಿಯ ಮೇಲೆ ಕಾದು ಕುಳಿತಿರುತ್ತಿದ್ದೆವು. ಸಂತೆಯ ಪುರಿಗೆ  ಬೇರೆಯದೇ ಆದ ಸಂಭ್ರಮವಿತ್ತು!

ಏನೇ ಮಾಲುಗಳು Big, smart, super Bazarಗಳು ಬಂದರೂ ದನ, ಕರು, ಹುಲ್ಲು, ಎಲೆ ಅಡಿಕೆ ಚೀಲ ಇಂತವನ್ನು ಕೊಳ್ಳಲಾದರೂ ಸಂತೆ ಬೇಕಲ್ಲವೆ? ಸಧ್ಯಕ್ಕೆ ಸಂತೆಗೆ ಅಳಿವಿಲ್ಲ̤  ಸದಾಕಾಲ ತನ್ನದೇ ಆದ ಗುರುತಿಸುವಿಕೆಯೊಂದಿಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬರುತ್ತಿರಲಿ, ಸಾಮಾನ್ಯ ವರ್ಗದ ಜನರ ಕೈಕೆಟುಕುವ ದರದಲ್ಲಿ ಸರಕುಗಳು ದೊರಕಲಿ ವ್ಯಾಪಾರ ವಹಿವಾಟಿನ ಮಾರುವವರ ಕೊಳ್ಳುವವನ ಬಾಂಧವ್ಯ ಉಳಿಯದಿಬೇಕೆಂದರೆ ಈ ಸಂತೆಗಳು ಉಳಿಯಬೇಕು. ಮುಂದಿನ ಪೀಳಿಗೆಗೆ ಬಾಯಿ ಬಿಟ್ಟು ಏನು ಬೇಕೆಂದು ಕೇಳುವ  “ಹೊಗಳಿ ಮಾರುವ ತೆಗಳಿ ಕೊಳ್ಳುವ”  ಸಂತೆ ಕಣ್ಮರೆಯಾಗದಿರಲಿ. ಕಂಡದ್ದನ್ನೆಲ್ಲಾ ಕೊಳ್ಳುವ ಕೊಳ್ಳುಬಾಕ ಸಂಸ್ಕೃತಿ ಅಳಿದು ಅಗತ್ಯವಾದುದನ್ನು ಮಾತ್ರ ಕೊಳ್ಳುವ ಸಂಸ್ಕೃತಿ ಉಳಿಯಲಿ. ಏನಾದರಾಗಲಿ ಸಂತೆ ಒಂದು ಸಂಸ್ಕೃತಿಯ ಬೆಸುಗೆ ಹಾಗೂ ವಿನಿಮಯ ಕೇಂದ್ರ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗೂ ಸಂತೆಯಲ್ಲಿನ ವಸ್ತುಗಳು ಆಯಾ ಸ್ಥಳೀಯ ಬದುಕಿನ ಸಂಸ್ಕೃತಿಯ ಕನ್ನಡಿಯೇ ಸರಿ!

-ರಾಜೇಶ್ವರಿ. ಹುಲ್ಲೇನಹಳ್ಳಿ.

‍ಲೇಖಕರು avadhi

2 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading