ಕುವೆಂಪು, ಕಾಪಿರೈಟ್ ಮತ್ತು ಫೋಟೋಗ್ರಫಿ!

ಖ್ಯಾತ ಛಾಯಾಗ್ರಾಹಕ  ಕೆ ಜಿ ಸೋಮಶೇಖರ್ ಇತ್ತೀಚಿಗೆ ನಿಧನರಾದರು

ಅವರ ಬಗ್ಗೆ ಒಂದು ನೋಟ ಇಲ್ಲಿದೆ

ರಾಹುಲ್ ಬೆಳಗಲಿ 

12 ವರ್ಷದ ಹಿಂದಿನ ಮಾತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಾನಾಗ ಪತ್ರಿಕೋದ್ಯಮ ವಿದ್ಯಾರ್ಥಿ. ತರಗತಿ ಆರಂಭವಾಗಬೇಕಿತ್ತು. ಕೋಣೆಯೊಳಗೆ ಪ್ರವೇಶಿಸಿದ ಬಾಲು ಸರ್ ಜೊತೆಯಲ್ಲಿದ್ದ ಇನ್ನೊಬ್ಬರನ್ನು ಪರಿಚಯಿಸಿದರು. ಅವರೇ ಕೆ.ಜಿ.ಸೋಮಶೇಖರ್. ‘ಇವರು ಹಿರಿಯ ಛಾಯಾಗ್ರಾಹಕರು. ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅವರು ನಿಮ್ಮೊಂದಿಗೆ ಒಂದು ಗಂಟೆ ಇರುತ್ತಾರೆ. ಫೋಟೋಗ್ರಫಿ ಬಗ್ಗೆ ನಿಮಗಿರುವ ಪ್ರಶ್ನೆ ಕೇಳಿ, ಸಂಶಯ ನಿವಾರಿಸಿಕೊಳ್ಳಿ’ ಎಂದು ಹೇಳಿ ನಿರ್ಗಮಿಸಿದರು.

ಎಲ್ಲರನ್ನೂ ನಮಸ್ಕರಿಸಿದ ಸೋಮಶೇಖರ್ ಸಂಕೋಚದಿಂದಲೇ ಮಾತು ಆರಂಭಿಸಿದರು. “ನಾನು ಅಂತಹದ್ದೇನೂ ಸಾಧನೆ ಮಾಡಿಲ್ಲ. ನಾನೊಬ್ಬ ಫೋಟೋಗ್ರಾಫರ್ ಅಷ್ಟೇ. ನಾಡಿನ ಕೆಲ ಪ್ರಮುಖರ ಬ್ಲ್ಯಾಕ್ ಅಂಡ್ ವೈಟ್ ಪೋರ್ಟ್ರೆಟ್ಸ್ (portraits) ಮತ್ತು ಕೆಲವಷ್ಟು ಚಿತ್ರಗಳು ಬಿಟ್ಟರೆ ನನ್ನ ಬಳಿ ಏನಿಲ್ಲ. ಕ್ಯಾಮೆರಾ ಜೊತೆಗಿದ್ದರೆ, ಸಮಾಧಾನ ಮತ್ತು ಖುಷಿ. ನನ್ನ ಭಾವನೆಗಳನ್ನು ಚಿತ್ರಗಳ ಮೂಲಕ ಹಂಚಿಕೊಳ್ಳುತ್ತೇನೆ. ಚಿತ್ರಗಳು ಕೂಡ ಒಂದರ್ಥದಲ್ಲಿ ಸಂವಹನ ನಡೆಸುತ್ತವೆಯೆಂದು ನಂಬಿದವನು ನಾನು”.

ಮಾತು ಮುಂದುವರೆಸಿದ ಅವರು ಒಂದು ಚಿತ್ರ ತೆಗೆಯುವುದೆಷ್ಟು ಕಷ್ಟ ಮತ್ತು ಎಷ್ಟೆಲ್ಲಾ ಸಾಹಸ ಪಡಬೇಕು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಕಿರಿಯ ವಯಸ್ಸಿನಿಂದಲೇ ಫೋಟೋಗ್ರಾಫಿ ಬಗ್ಗೆ ಒಲವು ಬೆಳೆಸಿಕೊಂಡ ಅವರು ಒಂದೊಂದು ಫೋಟೋಗಾಗಿ ಸುತ್ತಾಡದ ಜಾಗಗಳು ಇಲ್ಲ. ಸಾಹಿತಿಗಳು, ಸಂಗೀತಗಾರರು, ತಜ್ಞರು, ಸಾಮಾನ್ಯ ಜನರು ಮುಂತಾದವರ ಒಂದು ಫೋಟೋ ಕ್ಲಿಕ್ಕಿಸಲು ಪಟ್ಟ ಯಾತನೆಯನ್ನು ಸೊಗಸಾಗಿ ಹಂಚಿಕೊಂಡರು. ಆಫ್ ಮತ್ತು ಆನ್ ದಿ ರಿಕಾರ್ಡ್ ಕೂಡ.

ಕುವೆಂಪು, ಶಿವರಾಮ ಕಾರಂತ ಮುಂತಾದವರ ಅವರ ಮನೆಗೆ ಹೋಗುತ್ತಿದ್ದ ಸೋಮಶೇಖರ್ ಅವರದ್ದು ಒಂದೇ ಕೋರಿಕೆ: ನಿಮ್ಮದೊಂದು ಪೋರ್ಟರೇಟ್ ತೊಗೋಬೇಕು. ದಯವಿಟ್ಟು ಸಹಕರಿಸಿ. ಪ್ರಚಾರ ಮತ್ತು ಚಿತ್ರಗಳಿಂದ ದೂರವಿರಲು ಬಯಸುತ್ತಿದ್ದ ಕೆಲವರು ಅದಕ್ಕೆ ಒಪ್ಪಿಗೆಯೇ ನೀಡುತ್ತಿರಲಿಲ್ಲ. ಬರಿಗೈಯಲ್ಲಿ ನಿರಾಸೆಯಿಂದ ಅವರು ಮರಳುತ್ತಿದ್ದರು. ಆದರೂ ಪ್ರಯತ್ನ ಬಿಡುತ್ತಿರಲಿಲ್ಲ. ಮತ್ತೆ ಮಾರನೇ ದಿನ, ಅವರ ಮನೆ ಮುಂದೆ ಹಾಜರ್. ಮತ್ತದೇ ಕೋರಿಕೆ.

ಸಂಕೋಚ ಸ್ವಭಾವದ ಕುವೆಂಪು ಅವರು ಮೊದಲಿಗೆ ಚಿತ್ರ ತೆಗೆಸಿಕೊಳ್ಳಲು ಒಪ್ಪಲಿಲ್ಲ. ಆದರೆ ಕಿರಿಯ ಛಾಯಾಗ್ರಾಹಕನ
ಮನಸ್ಸು ನೋಯಿಸದಿರಲು ಅವರು ತೀರ್ಮಾನಿಸಿದರು. ಕ್ಯಾಮೆರಾಗೆ ನಗುಮೊಗದಲ್ಲಿ ಪೋಸು ನೀಡಿದರು. ಆ ಚಿತ್ರವನ್ನು ಪ್ರಿಂಟ್ ಹಾಕಿ ನೀಡಿದಾಗ, ಕುವೆಂಪು ತುಂಬಾ ಖುಷಿಪಟ್ಟರು. ನಂತರದ ದಿನಗಳಲ್ಲಿ ಕುವೆಂಪು ಅವರ ಆ ಚಿತ್ರವೇ ಐತಿಹಾಸಿಕ ದಾಖಲೆಯಾಗಿ ಉಳಿಯಿತು. ಆ ಚಿತ್ರ ಜನಪ್ರಿಯತೆ ಗಳಿಸಿ, ಎಲ್ಲಾ ಕಡೆಗಳಲ್ಲಿ ಅದೇ ಚಿತ್ರ ಬಳಕೆಯಾಗತೊಡಗಿತು.

ಇಷ್ಟು ಹೇಳಿ, ಕೆಲ ಹೊತ್ತು ಸುಮ್ಮನಾದರು. “ನಮ್ಮ ದೇಶದಲ್ಲಿ ಕಾಪಿರೈಟ್ ಕುರಿತಾದ ಮಹತ್ವ ಗೊತ್ತಿದ್ದಿದರೆ ಅದರ ಕತೆಯೇ ಬೇರೆ ಇರುತಿತ್ತು. ಕಲಾವಿದರ ಶ್ರಮಕ್ಕೆ, ಎದುರಿಸಿದ ಸವಾಲಿಗೆ, ಪಟ್ಟ ಸಂಕಷ್ಟಕ್ಕೆ ಮಾನ್ಯತೆ ಸಿಗುತಿತ್ತು. ಎಲ್ಲವೂ ನಡೆಯುತ್ತದೆ ಬಿಡು ಎಂಬ ಭಾವನೆ ಬಂದುಬಿಟ್ಟರೆ, ಪ್ರಾಮುಖ್ಯತೆಯೇ ಕಳೆದು ಹೋಗುತ್ತದೆ. ಕೆಲ ಚಿತ್ರಗಳು ಬಳಕೆ ಮತ್ತು ದುರ್ಬಳಕೆ ಆಗುತ್ತವೆಯಾದರೂ ಆ ಚಿತ್ರವನ್ನು ಸೆರೆ ಹಿಡಿದ ಛಾಯಾಗ್ರಾಹಕ ಯಾರು ಎಂಬುದನ್ನು ಯಾರೂ ನೆನಪಿಸಿಕೊಳ್ಳಲ್ಲ” ಎಂದು ನೋವಿನಿಂದ ಹೇಳಿದರು. ನಿರ್ಲಿಪ್ತವಾಗಿ ಅವರು ಹೀಗೆ ಹೇಳುವಾಗ ವಿಷಾದಭಾವ ವ್ಯಕ್ತವಾಗುತಿತ್ತು.

ಕುವೆಂಪು ಅವರ ನಗುಮೊಗದ ಪೋರ್ಟರೇಟ್ ಸೇರಿದಂತೆ ಬಹುತೇಕ ಮಹನೀಯರ ಚಿತ್ರಗಳನ್ನು ಸೆರೆ ಹಿಡಿದವರು ಕೆ.ಜಿ.ಸೋಮಶೇಖರ್. ಆದರೆ ಅವರೇ ಹೇಳುವ ಪ್ರಕಾರ, ಅವರ ಅನುಮತಿಯಿಲ್ಲದೇ ಮತ್ತು ಗಮನಕ್ಕೂ ತಾರದೇ ಕುವೆಂಪು ಸೇರಿದಂತೆ ಇತರರ ಚಿತ್ರಗಳನ್ನು ಬೇರೆ ಬೇರೆ ಬಳಸಿಕೊಳ್ಳಲಾಯಿತಂತೆ. ಸರ್ಕಾರಿ ಇಲಾಖೆಗಳು ಅಲ್ಲದೇ ಸಂಘಸಂಸ್ಥೆಗಳು ಆ ಚಿತ್ರಗಳು ಬಳಸಿಕೊಂಡವು. ಆದರೆ ಆ ಚಿತ್ರಗಳ ಕಾಪಿರೈಟ್ ಅರಿಯುವ ಗೋಜಿಗೆ ಯಾರೂ ಹೋಗಲಿಲ್ಲ. ಗೌರವ ಸಂಭಾವನೆ ನೀಡುವುದಿರಲಿ, ಆ ಚಿತ್ರವನ್ನು ಸೆರೆ ಹಿಡಿದ ಛಾಯಾಗ್ರಾಹಕನನ್ನು ಸ್ಮರಿಸುವ ಕಾರ್ಯಕ್ಕೂ ಮುಂದಾಗಲಿಲ್ಲ.

ಅಪರೂಪದ ಛಾಯಾಚಿತ್ರಗಳನ್ನು ಹೊಂದಿದ್ದರೂ ಅವರು ಎಂದಿಗೂ ಪ್ರಚಾರ ಪ್ರಿಯತೆಗೆ ಮುಂದಾಗಲಿಲ್ಲ. ಹವ್ಯಾಸ, ಬದ್ಧತೆ, ಕಾಯಕನಿಷ್ಠೆ ಮತ್ತು ಸರಳತೆಗೆ ಆದ್ಯತೆ ನೀಡಿದ ಅವರು ಅದನ್ನೇ ಜೀವನಪೂರ್ತಿ ಅನುಸರಿಸಿದರು. ಕೃತಕ ನಗು ಮತ್ತು ಅತಿ ವಿನಯದಿಂದ ದೂರವಿರಲು ಬಯಸುತ್ತಿದ್ದ ಅವರು “ಇಷ್ಟದ ಕೆಲಸ ಮಾಡುವುದರಲ್ಲಿ ಸಿಗುವ ಖುಷಿ ಇನ್ನೊಂದರಲ್ಲಿ ಇಲ್ಲ. ನಾವು ನಮ್ಮ ಪಾಡಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಕೃತಕ ನಗು ಮತ್ತು ಅತಿ ವಿನಯದ ಜರೂರತ್ತೇ ಬರಲ್ಲ” ಎಂದು ಬಲವಾಗಿ ನಂಬಿದ್ದರು. ಹೆಚ್ಚೇನೂ ಆಸೆ ಪಡದ ಅವರು ಅತ್ಯಂತ ಸಹಜವಾಗಿಯೇ ಬದುಕಿದರು.

ಪತ್ರಿಕೆಗಳಲ್ಲಿ ಕೆಲ ವರ್ಷ ಮಾಡಿದ ಅವರಿಗೆ ಏಕತಾನತೆ ಭಾವ ಮೂಡಿಸಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಬೆಳಗುವಾಗ ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಗಿ ಬೀಳುವುದು, ಅತಿಥಿಗಳು ಭಾಷಣ ಮಾಡುವ ಚಿತ್ರಗಳನ್ನು ಕ್ಲಿಕ್ಕಿಸುವುದು, ಒಂದೇ ರೀತಿಯ ಚಿತ್ರಗಳನ್ನು ಸೆರೆ ಹಿಡಿಯುವುದು ಅವರಿಗೆ ಬೇಸರ ತರಿಸಿತ್ತು. ಅಂತಹ ಚಿತ್ರಗಳನ್ನು ಸೆರೆ
ಹಿಡಿಯುವುದೇ ಬೇಡವೆಂದು ತೀರ್ಮಾನಿಸಿದ ಅವರು ಬೇರೆಯದ್ದೇ ಹಾದಿ ಹಿಡಿದರು.

ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದು: ಒಂದು ಚಿತ್ರದಿಂದ ಖ್ಯಾತರಾಗಬಿಟ್ಟರೆ, ತಜ್ಞ ಛಾಯಾಗ್ರಾಹಕರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಬಿಟ್ಟರೆ ಬೇರ್ಯಾರೂ ಇಲ್ಲ ಎಂಬಂತೆ ಹೇಳಿಕೊಳ್ಳುತ್ತಾರೆ. ಎರಡು ಸಾವಿರ ಚಿತ್ರಗಳನ್ನು ತೆಗೆದರೂ ಖ್ಯಾತಿ ಮತ್ತು ಪ್ರಚಾರದ ಗೋಜಿಗೆ ಹೋಗುವುದಿಲ್ಲ. ಹಲವು ವರ್ಷಗಳಿಂದ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರೂ ತಾನಿನ್ನೂ ವಿದ್ಯಾರ್ಥಿ. ಇನ್ನಷ್ಟು ಕಲಿಯಬೇಕಿದೆ ಎನ್ನುತ್ತಾರೆ. ಸೋಮಶೇಖರ್ ಅವರು ಎರಡನೇ ರೀತಿಯ ಜನರ ಸಾಲಿಗೆ ಸೇರುತ್ತಾರೆ.

ಸರಳ, ಸಹಜ, ನಿರ್ಲಿಪ್ತ ಬದುಕು ಕಷ್ಟ. ಅದರಲ್ಲಿಯೇ ಸಂತೃಪ್ತಿ ಪಡುವವರಲ್ಲಿ ಸೋಮಶೇಖರ್ ಕೂಡ ಒಬ್ಬರು. ನಿಮ್ಮ ಮಾತುಗಳು ಸದಾ ನೆನಪಿರುತ್ತವೆ ಸರ್.

‍ಲೇಖಕರು Admin

December 29, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಿಠ್ಠಲ ದಳವಾಯಿ

    ಒಳ್ಳೆಯ ಬರಹ ರಾಹುಲ್ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: