ಸುನಿಲ್ ರಾವ್
ಕೃಪೆ : ವಾರ್ತಾ ಭಾರತಿ
ಹಿ೦ದಿನವಾರ ಅಪ್ಪನ ಬಗ್ಗೆ ಇದ್ದ ಅ೦ಕಣ ಓದಿದ ಹಿರಿಯ ಬರಹಗಾರರೊಬ್ಬರು ಏಹ್! ನಿನ್ನ ಬಾಲ್ಯದ ತು೦ಟತನದ ಬಗ್ಗೆ ಬರ್ಯಪ್ಪ ಓದಕ್ಕೆ ಚ೦ದ ಇರತ್ತೆ ಅ೦ತ ಕಾಲ್ ಮಾಡಿ ಮಾತಾಡಿದರು. ಬಾಲ್ಯದ ಕೆಲವು ನೆನಪುಗಳು ಬೇರೆ ಪತ್ರಿಕೆಗಳಲ್ಲಿ ನಾನು ಬರೆದಿದ್ದು ಓದಿ ಅವರು ಮೆಚ್ಚಿಕೊ೦ಡಿದ್ದರು ಅನಿಸುತ್ತದೆ. ಬಾಲ್ಯದ ಅಸ೦ಗತ ನೆನಪುಗಳು ಮತ್ತು ನನ್ನ ಎಡಬಿಡ೦ಗಿ ಕೆಲಸಗಳು ನಾನು ಮರೆಯಲು ಎ೦ದೂ ಸಾಧ್ಯವಿಲ್ಲ. ಆ ಕೈ೦ಕರ್ಯಕ್ಕಾಗಿ ನನ್ನ ಸ್ಮೃತಿಪಟಲಕ್ಕೆ ಬಹಳ ಅಭಾರಿ ನಾನು. ಬಾಲ್ಯದಲ್ಲಿ ನಾನೆಷ್ಟು ಪೆದ್ದನಾಗಿದ್ದೆ ಅ೦ದರೆ ಮುಚ್ಚಿಕೊಳ್ಳಬೇಕಾದ ಮರ್ಮಾ೦ಗವೊ೦ದಿರುತ್ತದೆ ನಮಗೆ ಅನ್ನುವುದು ತಿಳಿಯುವುದಕ್ಕೆ ಬಹಳ ವರ್ಷ ಹಿಡಿದವು. ಈಗ ನನ್ನ ವಯಸ್ಸು ಇಪ್ಪತ್ತ ಮೂರು, ಜೀವನದ ಬಹಳಾ ಅನುಭವಗಳಾಗಲೀ, ಸಾಕ್ಷಾತ್ಕಾರಗಳಾಗಲೀ ಎಳ್ಳಷ್ಟೂ ಆಗದಿದ್ದರೂ ಜೀವನ ಅ೦ದರೇನು, ಯಾವೆಲ್ಲ ರೀತಿ ನಿಭಾಯಿಸಬೇಕು ಅ೦ತ ಬದುಕು ಕಲಿಸಿಕೊಟ್ಟಿದೆ. ಜೊತೆಯಲ್ಲಿ ಪುಸ್ತಕಗಳು ಅದನ್ನು ಸರಾಗ ಮಾಡಿಕೊಟ್ಟಿವೆ.

ನಮ್ಮ ರಜಾ ದಿನಗಳಲ್ಲಿ ಸಾಮಾನ್ಯವಾಗಿ ಊರಿನ ಅಜ್ಜಿಯ ಮನೆಗೆ ಹೋಗುತ್ತಿದ್ದೆವಾದರೂ, ಹೆಚ್ಚುಸಲ ಅನಾನುಕೂಲಗಳಿ೦ದ ಮನೆಯಲ್ಲೇ ಕಳೆಯಬೇಕಿತ್ತು. ರಜಕ್ಕಾಗಿ ನಾವ್ಯಾವತ್ತೂ ಊರುಗಳನ್ನು ಸುತ್ತಿದ ನೆನಪಾಗಲೀ, ಮೋಜುಮಾಡಿದ ಬಗ್ಗೆ ಹೇಳಲಿಕ್ಕೆ ಯಾವ ಉದಾಹರಣೆಗಳೂ ಇಲ್ಲ. ರಜವಿದ್ದಾಗ ಯಾವುದಾದರೂ ನೆ೦ಟರ ಮದುವೆಯೋ,ತಿಥಿಯೋ ಇದ್ದು ನಾವಲ್ಲಿಗೆ ಹೋಗಿ ಬ೦ದರೇ ಅದೇ ಸಿ೦ಗಾಪೂರಿನ ಟೂರ್ ಇದ್ದ೦ಗೆ. ನನ್ನ ಸ್ನೇಹಿತರು ಮತ್ತು ನೆ೦ಟರ ಹುಡುಗರು ರಜಕ್ಕೆ ಅಲ್ಲಿ ಹೋದೆವು ಇಲ್ಲಿ ಹೋದೆವು ಎ೦ದೆಲ್ಲಾ ಹೇಳುತ್ತಿದ್ದಾಗ ಪೆಚ್ಚಾಗಿ ಕುಳಿತುಕೊಳ್ಳುತ್ತಿದ್ದೆ. ಶಾಲೆಯಲ್ಲಿ ರಜೆ ಮುಗಿದ ಮೇಲೆ ಮೊದಲ ದಿನದ ತರಗತಿಗಳಲ್ಲಿ ಎಲ್ಲೆಲ್ಲಿ ಹೋಗಿದ್ದೆವು ಅ೦ತ ಮೇಷ್ಟ್ರಗಳ ಬಳಿ ಹ೦ಚಿಕೊಳ್ಳುವಾಗ ಎಲ್ಲರೂ ಒ೦ದೊ೦ದು ಊರಿನ ಬಗ್ಗೆ ಹೇಳುವಾಗ ನಾನು ಮನೆಯಲ್ಲಿದ್ದೆ ಎ೦ದು ಹೇಳುವುದಾದರೂ ಹೇಗೆ? ಎ೦ಬ ಕಾರಣಕ್ಕೆ ಯಾವುದೋ ಒ೦ದು ಜಾಗದ ಹೆಸರನ್ನು ಪೂಸಿ ಹೊಡೆಯುತ್ತಿದ್ದೆ, ಒಮ್ಮೆ ಕಾಶ್ಮೀರಕ್ಕೆ ಹೋಗಿದ್ದೆ ಸಾರ್ ಅ೦ತ ಸುಳ್ಳು ಹೇಳಿದ್ದೆ, ಅದು ನಮ್ಮ ಭಾರತದ ಯಾವ ಮೂಲೆಯಲ್ಲಿದೆ ಅನ್ನೋದು ನನಗೆ ದೇವರಾಣೆ ಗೊತ್ತಿರಲಿಲ್ಲ. ಪುನಃ ಎನಾದರೂ ಮೇಷ್ಟ್ರು ಪ್ರಶ್ನೆ ಕೇಳಿಬಿಟ್ಟಿದ್ದರೆ ಸಿಕ್ಕಿಹಾಕ್ಕೋತಿದ್ದೆ.
ನಾಲ್ಕನೇ ಕ್ಲಾಸಿನ ಬೇಸಿಗೆ ರಜಕ್ಕೆ ನಾನು ಸೈಕಲ್ ಹೊಡೆಯೋದು ಕಲಿತದ್ದು. ಆಗೆಲ್ಲ ಸೈಕಲ್ ಶಾಪ್‌ಗಳಲ್ಲಿ ಐವತ್ತು ಪೈಸೆಗೆ ಯಾರ ಮಗ, ಎಲ್ಲಿ ಮನೆ? ಎ೦ಬಿತ್ಯಾದಿ ಬಯೊಡೇಟ ಬರೆಸಿಕೊ೦ಡು ಅರ್ಧಗ೦ಟೆ ಸುತ್ತಲು ಬಾಡಿಗೆ ಕೊಡುತ್ತಿದ್ದರು. ನಾವು ಊರಿಗೆ ಹೊಸಬರಾದ್ದರಿ೦ದ ಪರಿಚಯವಿದ್ದ ಹುಡುಗರ ಶ್ಯುರಿಟಿ ಹಾಕಿಸಬೇಕಿತ್ತು ಹಾಗೆ ಮಾಡಿಸಿಕೊಳ್ಳೊ ಮೊದಲು ಆ ಹುಡುಗರಿಗೊ೦ದು ರೌ೦ಡ್ ಕೊಡಬೇಕು ಎ೦ಬ ಶರತ್ತು ಮೊದಲೇ ಹೇಳಿಬಿಡುತ್ತಿದ್ದರು. ಮೊದಲ ಒ೦ದೆರಡು ಸಲ ಕೊಟ್ಟಿದ್ದೆನಾದರೂ ಆಮೇಲಾಮೇಲೆ ಅ೦ಗಡಿಯವನನ್ನು ಅನಾವಷ್ಯಕ ದಾರಿಯಲ್ಲಿ ಹೋಗುವಾಗ ಬರುವಾಗ ಮಾತಾಡಿಸಿ ಮಾತಾಡಿಸಿ ಅವನು ನನಗೆ ಪರಿಚಿತನಾಗುವ೦ತೆ ಮಾಡಿಕೊಳ್ಳಲು ಯತ್ನಿಸಿ ಸಫಲನಾಗಿದ್ದೆ. ಆ ದಾರಿ ನನ್ನ ಶಾಲೆಯದ್ದಲ್ಲವಾದರೂ ಸುತ್ತಿ ಸುತ್ತಿ ಅಲ್ಲೇ ಓಡಾಡುತ್ತಿದ್ದೆ, ಕೊನೆಗೂ ನನ್ನ ಶ್ರಮವ್ಯಾವುದೂ ವೇಸ್ಟ್ ಆಗಲಿಲ್ಲ. ಸೈಕಲ್ಲು ಕೊಡುವ ಮೊದಲು ಆತ ನಿಯಮ ನಿಬ೦ಧನೆಗಳನ್ನು ಜೋರಾಗಿ ಗೊಣಗುತ್ತಿದ್ದ.

ಆ ಸೈಕಲ್ಲುಗಳು ಮೊದಲೇ ಕುಲಗೆಟ್ಟಿರುತ್ತಿದ್ದವು, ಚೈನು ಕಡಿದಿದ್ದು ಸುಮ್ಮನೆ ಜೋಡಿಸಿರುತ್ತಿದ್ದರು, ಇಲ್ಲವಾದರೇ ಚಕ್ರದ ಸ್ಪೋಕ್ಸುಗಳು ಮುರಿದಿರುತ್ತಿದ್ದವು. ನಾನು ಬಹಳ ಜಾಣತನದಿ೦ದ ಮೊದಲೇ ಆ ಸೈಕಲ್ಲಿನ ಊನಗಳನ್ನು ಅ೦ಗಡಿಯವನಿಗೆ ತಿಳಿಸಿ ಮು೦ದಾಗುತ್ತಿದ್ದ ತೊ೦ದರೆಗಳನ್ನು ತಪ್ಪಿಸಿಕೊಳ್ಳುತ್ತಿದ್ದೆ. ಆಗೆಲ್ಲ ನನ್ನ ಜಾಣತನದ ಬಗ್ಗೆ ಬಹಳ ಹೆಮ್ಮೆಯಾಗುತ್ತಿತ್ತು!. ಕೆ೦ಪು ಬಣ್ಣದ ಚಿಕ್ಕ ಸೈಕಲ್ಲುಗಳು, ಅದರ ಸೀಟುಗಳು ಎಷ್ಟು ಚಿಕ್ಕದಾಗಿರುತ್ತಿದ್ದವು ಅ೦ದರೇ ತಿ೦ದು ಎಮ್ಮೆಯ ಹಾಗೆ ಊದಿಕೊ೦ಡಿದ್ದ ನನ್ನ ಪೃಷ್ಠದ ಗಾತ್ರಕ್ಕೆ ಸಾಲುತ್ತಿರಲೇ ಇಲ್ಲ. ಹಾಗೋ ಹೀಗೋ ಮಾಡಿ ಓಡಿಸುವ ದುರಾಸೆಗೆ ಚುಚ್ಚಿಸಿಕೊ೦ಡಾದರೂ ತುಳಿಯಲೇ ಬೇಕಿತ್ತು. ಆದರೇ ಮೂಲ ಪ್ರಶ್ನೆ ಏನೆ೦ದರೇ ನನಗೆ ಅದನ್ನು ತುಳಿಯಲೇ ಬರುತ್ತಿರಲಿಲ್ಲ. ಬಾಡಿಗೆ ತಗೊ೦ಡ ಸೈಕಲ್ಲುಗಳನ್ನ ಅರ್ಧಗ೦ಟೆ ಓಡಿಸಲೇ ಬೇಕಿತ್ತಾದ್ದರಿ೦ದ ಅದರ ಮೇಲೆ ಕೂತು ಪೆಡಲ್ ಹೊಡೆಯೋದನ್ನ ಟ್ರೈ ಮಾಡುತ್ತಿದ್ದೆ ಆದರೇ ಆಗುತ್ತಿರಲಿಲ್ಲ. ಕೆಲವೊಮ್ಮೆ ಸುಡುಗಾಡು ಪೆಡಲ್ ತಾಕಿ ಹಿಮ್ಮಡಿ ಚರ್ಮ ಹರಿದು ರಕ್ತ ಬರುತ್ತಿತ್ತು. ಆದರೂ ಬಿಡುತ್ತಿರಲಿಲ್ಲ ಆ ಧೂಳಿನಲ್ಲಿ ನನ್ನ ಜೀವನದ ಪರಮಾರ್ಥ ಅ೦ದರೇ ಸೈಕಲ್ ಹೊಡೆಯುವುದೇ ಎ೦ದು ನ೦ಬಿಕೊ೦ಡಿದ್ದೆ.
ನನ್ನ ಅಪ್ಪನ ಬಳಿಯಲ್ಲೊ೦ದು ಅಟ್ಲಾಸ್ ಸೈಕಲ್ಲಿತ್ತು ಆದರೇ ನಾವೆಲ್ಲಾ ಅದನ್ನ ಮುಟ್ಟುವುದು ಕಾನೂನು ಬಾಹಿರ. ಒಮ್ಮೆ ಯಾವತ್ತೋ ಅಣ್ಣನ ಜೊತೆ ಜಗಳವಾಡಿಕೊ೦ಡು ಸೈಕಲ್ಲಿನ ಮೇಲೆ ಬಿದ್ದು ಅದನ್ನೂ ಬೀಳಿಸಿ ಅದ್ವಾನ ಮಾಡಿದ್ದೆ. ಮತ್ತು ನನ್ನ ವಯಸ್ಸು ಚಿಕ್ಕದ್ದಾದ್ದರಿ೦ದ ಅಟ್ಲಾಸ್ ಥರದ ದೊಡ್ದ ಸೈಕಲ್ಲುಗಳು ಹೊಡೆಯಲು ಸಾಧ್ಯವೂ ಆಗುತ್ತಿರಲಿಲ್ಲ. ಅಪ್ಪ ಮನೆಯಲ್ಲಿ ಬಿಟ್ಟು ಹೋಗಿದ್ದಾಗ ಅದರ ಮೇಲಿನ ಹಳೆಯ ಪ೦ಚೆಯ ಕವರನ್ನು ತೆಗೆದು, ಸೈಕಲ್ಲಿನ ಆಕಾರಗಳನ್ನು ಸ್ಟಡಿ ಮಾಡಿ, ನಾನು ಅದನ್ನು ಓಡಿಸುವ ಕನಸನ್ನು ಊಹಿಸಿಕೊ೦ಡು ಇನ್ನೂ ಮಾಗದ ವಯಸ್ಸನ್ನು ಶಪಿಸುತ್ತಾ ಇದ್ದೆ. ಆದರೇ ಆ ಸಲ ಬೇಸಿಗೆ ರಜೆಯಲ್ಲಿ ಸೆಖೆಯಾದ್ದರಿ೦ದ ಅಪ್ಪ ಸೈಕಲ್ ತೊಗೊ೦ಡು ಹೋಗುತ್ತಿರಲಿಲ್ಲ. ಹೇಗಾದರೂ ಮಾಡಿ ವಠಾರದ ಆಚೆಗೆ ಅದನ್ನು ಕೊ೦ಡು ಹೋಗಿ ಸೈಕಲ್ ಹೊಡೆಯಲೇ ಬೇಕೆ೦ದು ದೃಢ ನಿರ್ಧಾರ ಮಾಡಿಯಾಗಿತ್ತು. ಆದರೇ ಸೈಕಲ್ ಬೀಗ ಅದೆಲ್ಲೋ ಮುಚ್ಚಿಟ್ಟು ಹೋಗಿದ್ದ ನನ್ನ ಅಪ್ಪ. ಆಗ ಹೊಳೆದ ಉಪಾಯವು ಮಹತ್ವವಾದದ್ದು. ಸೈಕಲ್ಲಿನ ಬೀಗಕ್ಕೆ ಎರಡೂ ಕಡೆ ಅದುಮುವ ಸ್ಟೀಲಿನ ಕ್ಲಿಪ್ಪಿನ೦ತೆ ಇರುತ್ತಿತ್ತು. ಬೀಗ ಹಾಕುವಾಗ ಆ ಎಡಭಾಗದ ಕ್ಲಿಪ್ಪನ್ನು ಒತ್ತಿ ಲಾಕ್ ಮಾಡಬೇಕು ಮತ್ತು ತೆಗೆಯುವಾಗ ಬಲಭಾಗಗ ಕ್ಲಿಪ್ಪು ಒತ್ತಬೇಕಿತ್ತು. ಬೀಗದ ಕೈ ಇರದ ಕಾರಣ್ ಸೈಕಲ್ಲನ್ನು ವಠಾರದ ಆಚೆಗೆ ತಳ್ಳಿಕೊ೦ಡು, ಎಳೆದಾಡಿಕೂ೦ಡು ಹೋಗಿ ಮೋರಿಯ ಪಕ್ಕ ಬಿದ್ದಿರುತ್ತಿದ್ದ ಸಣ್ಣ ಕಲ್ಲೊ೦ದು ತೆಗೆದುಕೊ೦ಡು ಬಲಬಾಗದ ಕ್ಲಿಪ್ಪಿಗೆ ಜೋರಾಗಿ ಹೊಡೆದು ಲಾಕ್ ಓಪನ್ ಮಾಡುತ್ತಿದ್ದೆ. ಈ ಮನೆಹಾಳ ಐಡಿಯಾ ಹೇಳಿಕೊಟ್ಟಿದ್ದು ನನ್ನ ಚಿಕ್ಕಪ್ಪನ ಮಗ, ಅವನು ಮನೆಯಲ್ಲಿ ಸೈಕಲ್ ಆಚೆಗೆ ತರುತ್ತಿದ್ದ ಬಗೆಯೇ ಹಾಗೆ. ಅವನಿ೦ದ ಬ೦ದ ಜ್ಞಾನ ಉಪಯೋಗವಾಗದೇ ಇರಲಿಲ್ಲ. ಆವತ್ತು ಅವನು ನನ್ನ ಪ್ರಾತಃ ಸ್ಮರಣೀಯ.
ಹಾಗೆ ಬೀಗ ಬಿಡಿಸಿ ಗಲ್ಲಿಯಲ್ಲಿ ಓಡಿಸಲು ಶುರು ಮಾಡಬೇಕಿತ್ತು. ನಾನು ಬಹಳ ಕುಳ್ಳಕ್ಕಿದ್ದೆ ಸೈಕಲ್ ಹತ್ತಲು ಆಗುತ್ತಲೇ ಇರಲಿಲ್ಲ, ಮೊದಲು ಕತ್ರಿ ಹೊಡೆಯುವುದನ್ನು ಕಲಿತಿದ್ದರೂ ಆಗಿರುತ್ತಿತ್ತು ಆದರೆ ನನ್ನ ದೌಲಿಗೆ ಸೀಟು ಮೇಲೆಯೇ ಕೂತು ಸೈಕಲ್ ಹೊಡೆಯಬೇಕೆ೦ಬ ಇರಾದೆ. ಸೈಕಲ್ ಹತ್ತುವಾಗ ಯವುದಾದರೂ ದಿಣ್ಣೆಯ ಮೇಲೆ ಹತ್ತಿ ದೇವರ ಮೇಲೆ ಭಾರ ಹಾಕಿ ಪೆಡಲ್ ಹೊಡೆಯುತ್ತಿದ್ದೆ. ಎರಡು ಹೆಜ್ಜೆ ಮು೦ದು ಹೋಗುವಷ್ಟರಲ್ಲಿ ಸೈಕಲ್ಲು ಧೊಪ್ ಎ೦ದು ಬೀಳುತ್ತಿತ್ತು. ಹಾಗೆ ಅದೆಷ್ಟು ಸಾವಿರ ಸಲ ಮಾಡುತ್ತಿದ್ದೆನೋ…ಪೆಡಲ್ ಹೊಡೆಯಲು ಬ೦ದಮೇಲೆ ಬ್ಯಾಲೆನ್ಸ್ ಮಾಡಲು ಕಲಿಯಬೇಕಿತ್ತಲ್ಲ ಅದು ಕೂಡ ಸಿಕ್ಕಾಪಟ್ಟೆ ಬಾಧೆ ಕೊಟ್ಟಿತು. ಇಳಿಯಲು ಕಾಲು ನೆಲಕ್ಕೆ ಎಟುಕುತ್ತಿರಲಿಲ್ಲ ಮತ್ತು ಬ್ರೇಕ್ ಹಾಕಲು ಕೈ ಬಲ ಸಾಲುತ್ತಿರಲಿಲ್ಲವಾದ್ದರಿ೦ದ ನೆಲಕ್ಕೆ ಸೈಕಲ್ಲನ್ನು ಬೀಳಿಸಿ, ನಾನು ಲೀಲಾಜಾಲವಾಗಿ ಜ೦ಪ್ ಮಾಡಿ ಸೈಕಲ್ ಮಾತ್ರ ಬೀಳುವ೦ತೆ ನೋಡಿಕೊ೦ಡಿದ್ದರಿ೦ದ ನನ್ನ ಸೈಕಲ್ಲಿನ ಆರೋಗ್ಯ ಬಹಳ ಹದಗೆಟ್ಟಿತು. ಥತ್ ಥೇರಿ ಯಾವನಿಗ್ ಬೇಕು ಈ ಸುಡುಗಾಡು ಸೈಕಲ್ಲು ಅ೦ತೆಲ್ಲಾ ಅ೦ದು ಕೊ೦ಡರು ಭವಿಷ್ಯದ ಧ್ಯೇಯೋದ್ದೇಶಗಳು ಕಣ್ಣ ಮು೦ದೆ ಹಾಯ್ದು ಹೋಗುತ್ತಿದ್ದಾಗ ಜಿಗುಪ್ಸೆಯ ಮಧ್ಯೆ ಅನಿವಾರ್ಯವಾಗಿ ಸೈಕಲ್ ಹೊಡೆಯೋದು ಕಲಿಯಲೇ ಬೇಕಿತ್ತು. ಸೈಕಲ್ ಬರದಿದ್ದರೆ ಹೆಣ್ಣು ಕೊಡಲ್ವ೦ತೆ ಕಣ್ರೊ ಅ೦ತ ನಮ್ಮ ಹುಡುಗರು ಮಾತಾಡಿಕೊಳ್ಳುತ್ತಿದ್ದದು ನೆನಪಿಗೆ ಬ೦ದು ನನ್ನ ರೋಮ ರೋಮಗಳು ಜಾಗೃತವಾಗಿಬಿಡುತ್ತಿದ್ದವು.
ಕದ್ದು ಸೈಕಲ್ ಹೊಡೆಯೋದು ಒಮ್ಮೆ ಅಪ್ಪ ನೋಡಿಬಿಟ್ಟಿದ್ದ, ಇನ್ನು ಕೈಮೀರಿದ ಹುಡುಗ ಅ೦ತ ಹೇಳಿ ತಕರಾರು ಮಾಡುತ್ತಿರಲಿಲ್ಲ. ಜಾಗರೂಕನಾಗಿ ಅದ್ವಾನ ಮಾಡದ೦ತೆ ಓಡಿಸಿಕೋ ಎ೦ಬ ಧಾರಳದ ಪರ್ಮಿಷನ್ ಸಿಕ್ಕಿತ್ತು. ಸೈಕಲ್ ರಜೆಯಲ್ಲಿ ಮಾತ್ರ ಸೀಮಿತವಾಗಿತ್ತು. ಸುಮಾರು ಎ೦ಟನೇ ಕ್ಲಾಸಿಗೆ ಕ೦ಕುಳ ಕೆಳಗೆ ಬೆಳದ ಕೂದಲನ್ನು ಗಮನಿಸಿ ಅಪ್ಪ ನಾನು ದೊಡ್ದವನಾದೆನೆ೦ದು ಭಾವಿಸಿ ಸೈಕಲ್ ನನ್ನನಗೇ ಕೊಟ್ಟುಬಿಟ್ಟ. ಅಲ್ಲಿ೦ದ ಆದ ಅಧ್ಯಾಯಗಳೇ ಬೇರೆ. ಸೈಕಲ್ಲನ್ನು ಹೊಸ ಹೊಸದರಲ್ಲಿ ದಿನಕ್ಕೊಮ್ಮೆ ಸ್ಕೂಲಿ೦ದ ಬ೦ದಮೇಲೆ ನೀಟಾಗಿ ತೊಳೆದು, ಒರೆಸಿಡುತ್ತಿದ್ದೆ. ಅದು ಬಹಳ ದಿನ ಉಳಿಯುವುದಿಲ್ಲವೆ೦ದು ಮನೆಯವರಿಗೆ ಗೊತ್ತಿತ್ತು. ಕೊತ್ತ೦ಬರೀ ಸೊಪ್ಪು, ಮೆಣಸಿನಕಾಯಿ,ಹಾಲು, ಕಾಫೀ ಪುಡಿ ತರಲು ಮತ್ತು ಎಲ್ಲಿಗೆ ಹೋದರೂ ಸೈಕಲ್ಲೇ…!!.
ನಮ್ಮ ಸ್ಕೂಲಿಗೆ ಸ೦ದೀಪ ಅನ್ನೋ ಹುಡುಗ ಅವನ ಸೈಕಲ್ಲನ್ನು ವಿಚಿತ್ರವಾಗಿ ಅಲ೦ಕಾರ ಮಾಡಿಕೊ೦ಡು ತರುತ್ತಿದ್ದ. ನಾವೆಲ್ಲ ಅದನ್ನು ಬಾಯ್ಬಾಯಿ ಬಿಟ್ಟುಕೊ೦ಡು ನೋಡಿ ಬೆರಗಾಗುತ್ತಿದ್ದೆವು. ನಾನು ನನ್ನ ಸೈಕಲ್ಲಿಗೆ ಅವೆಲ್ಲ ಮಾಡಬೇಕು ಅ೦ತ ಗಟ್ಟಿ ನಿರ್ಧಾರ ಮಾಡಿ ದುಡ್ಡು ಹೊ೦ದಿಸಿಕೊ೦ಡು ಹೊರಟೇ ಬಿಟ್ಟೆ. ಆಕ್ಚುಲಿ ಸ೦ದೀಪನದ್ದೆ ಅ೦ಗಡಿಯಾದ್ದರಿ೦ದ ಅಷ್ಟೆಲ್ಲಾ ದೌಲು ಮಾಡುತ್ತಿದ್ದ ಅ೦ತ ಆಮೇಲೆ ಗೊತ್ತಾಯ್ತು. ಕೈಲಿದ್ದ ಕಾಸಿನಲ್ಲಿ; ರಿಮ್ಮಿಗೆ ರಿಬ್ಬನ್ನು, ಚಕ್ರದ ಸ್ಪೋಕ್ಸಿಗೆ ಕಲರ್ ಕಲರ್ ಮಣಿಗಳು, ಪೆಡಲ್ ಕವರ್, ಹ್ಯಾ೦ಡೆಲ್ ಕವರ್, ಎರಡು ಕನ್ನಡಿಗಳು, ಹ್ಯಾ೦ಡೆಲ್ಲಿಗೆ ಬಾಗಿಲ ತೋರಣ ಹೋಲುವ ಒ೦ದು ಹಾರ, ಸೀಟು ಮತ್ತು ಹ್ಯಾ೦ಡೆಲ್‌ಗೆ ಹೊ೦ದಿಕೊಡಿದ್ದ ಬಾರ್‌ಗೆ ಒ೦ದು ಕವಚ ಹೊದೆಸಿ ಮನೆಗೆ ತ೦ದಿದ್ದೆ. ಅಬ್ಭಾ!! ಅದನ್ನ ನೋಡಿದರೇ ನವ ವಧುವಿನ೦ತೆ ಕ೦ಗೊಳಿಸುತ್ತಿತ್ತು. ಬೀದಿಯಲ್ಲೆಲ್ಲಾ ನನ್ನ ಮತ್ತು ನನ್ನ ಸೈಕಲ್ಲನ್ನೇ ನೋಡುತ್ತಿದ್ದರು ಜನ. ವೀಲು ತಿರುಗುವಾಗ ಸ್ಪೋಕ್ಸಿನ ಮಣಿಗಳು ಸದ್ದು ಮಾಡಿ ಸಪ್ಪಳ ಮಾಡುತ್ತಿತ್ತು. ನಾನು ಬೇಕ೦ತೆಲೇ ಸ್ಟೈಲ್ ಮಾಡಿಕೊ೦ಡು ನಿಧಾನಕ್ಕೆ ತಳ್ಳುತ್ತಿದ್ದೆ. ಮನೆಯ ಮು೦ದೆ ತ೦ದ ನನ್ನ ಸೈಕಲ್ಲನ್ನು ನೋಡಿ ಮನೆಯವರು ಕ೦ಡಿತ ಖುಷಿಯಾಗುತ್ತಾರೆ ಮತ್ತು ಅಪ್ಪನ ಒ೦ದೇ ಒ೦ದು ಆಸ್ತಿಯಾದ ಅದನ್ನು ನಾನು ಕಾಯ್ಕೊ೦ಡ ರೀತಿಯನ್ನು ಅಪ್ಪ ನೋಡಿ ಹೊಗಳಿ ಹೊಗಳಿ ಬಿಸಾಕುವನೆ೦ದು ಆನ೦ದಗೊ೦ಡಿದ್ದೆ. ಆಗ ತಾನೆ ಸ್ನಾನ ಮಾಡಿ ತಲೆ ಓಣಗಿಸಿಕೊಳ್ಳುತ್ತಿದ್ದ ನನ್ನ ಅಮ್ಮ ಸೈಕಲ್ಲಿನ ಅಲ೦ಕಾರವನ್ನು ನೋಡಿ…”ಏನೋ ಒಳ್ಳೆ ಸೂಳೆ ಅಲ೦ಕಾರ ಇದ್ದಾ೦ಗಿದೆ!” ಎ೦ದುಬಿಟ್ಟಳು. ಅಷ್ಟು ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ತಣ್ಣೀರೆರಚಿ ನನ್ನ ಕಣ್ಣಲ್ಲಿ ಕಣ್ಣೀರು ತರಿಸಿಬಿಟ್ಟಳು.
ಒ೦ದಷ್ಟು ದಿನ ಅದನ್ನು ಇಟ್ಟು ಮೆರೆದೆ ಆಮೇಲೆ ಅದು ಬೋರಾಯಿತು. ಅಪ್ಪ ಸೆಕೆ೦ಡ್ ಹ್ಯಾ೦ಡ್ ಹೀರೋ ರೇ೦ಜರ್ ಸೈಕಲ್ಲು ನನಗೆ ಮತ್ತು ಅಣ್ಣನಿಗೆ ಜ೦ಟಿಯಾಗಿ ತ೦ದುಕೊಟ್ಟ. ಅದನ್ನು ಯಾರು ಯಾವಗ ಓಡ್ಸಬೇಕು ಎ೦ಬ ಗೊ೦ದಲ. ಒ೦ದು ವಾರ ಅವನು ಮತ್ತು ಮು೦ದಿನವಾರ ನಾನು ಓಡಿಸೋದು ಎ೦ದು ಮೆಮೊರ೦ಡಮ್ ಆಫ್ ಅ೦ಡರ್‌ಸ್ಟಾ೦ಡಿಗ್ ಆಗಿತ್ತು. ಆದರೇ ನನ್ನ ಸರದಿ ಬ೦ದಾಗೆಲ್ಲ ಸುಸ್ತು, ಹುಷಾರಿಲ್ಲ, ನಡೆಯಲು ಆಗಲ್ಲ, ನಾಳೆ ಕೊಡ್ತೀನೋ ಕುಳ್ಳಾ! ಅ೦ತೆಲ್ಲಾ ನಾಟಕವಾಡಿ ಕೊಡುತ್ತಲೇ ಇರಲಿಲ್ಲ. ನಾನು ಹೀನಾಯದ ಶೋಷಿತನಾಗಿಬಿಡುತ್ತಿದ್ದೆ. ಬಾಲ್ಯಕ್ಕೆ ನೈಜ್ಯವಾದ ಮತ್ತು ನವಿರಾದ ರಾಗವಿರುತ್ತದೆ ಅಲ್ಲಿ ಆಗುವ ಬದಲಾವಣೆಗಳು, ಕುತೂಹಲ ಮತ್ತು ಆಶ್ಚರ್ಯಗಳು ಇವತ್ತಿನ ಬದುಕಿಗೆ ಉತ್ತಮ ನಾ೦ದಿಯಿದ್ದ೦ತೆ. ಅದಕ್ಕೆ ಅಲ್ಲವಾ ಬಾಲ್ಯಕ್ಕೆ ಹೋಗಲು ಸಾಯುವಷ್ಟು ಆಸೆಯಾಗೋದು!







ನನ್ನ ಬರಹಕ್ಕಿನ್ನ
ನೀವು ಹಾಕಿರುವ ಚಿತ್ರಗಳು ಬಹಳ ಇಷ್ಟವಾಯ್ತು ಅವಧಿ
ಚಂದದ ಆಪ್ತವೆನಿಸುವಂತಹ ಬರಹ ತಮ್ಮ!! liked it
🙂
ಮಾಲತಿ ಎಸ್.