ಕಲಿಕೆ

ಪ್ರಕಾಶ ಕಡಮೆ
ಕೈ ಮೇಲೆ ಕೈ ಯಿಟ್ಟು
ಮೌಸ್ ಹಿಡಿದು
ಕಂಪ್ಯೂಟರ್ ಕಲಿಸಿದಾಕೆ
ಅವನ ಹೃದಯದ ಮೇಲೆಯೇ
ಬೆರಳಾಡಿಸಿ
ಲಗ್ಗೆಯಿಟ್ಟಳು ಬದುಕಿಗೆ.
ಆ ಕ್ಷಣವೆಲ್ಲ ರೋಮಾಂಚನ!
ಅನುದಿನ ಉಂಡುಟ್ಟು
ಜೀವಿಸುವಾಗ ಕ್ಷಣ ಕ್ಷಣವೂ ಜೊತೆ
ಸೇತುವೆಯಾಗಲೇ ಇಲ್ಲ ಕಂಪ್ಯೂಟರ್
ಕೈ ಕೈ ಹಿಡಿದು ನಡೆವಾಗ
ಬದುಕಿನ ತರಂಗಗಳು
ಡಿಕ್ಕಿ ಹೊಡೆದವು ಒಂದಕ್ಕೊಂದು
ಓಡಾಡಿತು
ಮೌಸ್ ಈಗ ಮನೆ ತುಂಬ
ಕಚ್ಚಿ ತಿಂದಿತು ಇದ್ದ ಬಿದ್ದ ವಸ್ತುಗಳ
ಮೂಲೆ ಹಿಡಿಯಿತು
ಟೈಪಿಸುವ ಕೀಬೋರ್ಡು
ಮುಂದುವರೆಯದೇ ಕಲಿಕೆ
ಜಡವಾಯಿತು ಜೋಡಿ ಮನಸು
ನಿಲುಕಲೇ ಇಲ್ಲ
ಒಬ್ಬರ ಜಾಲತಾಣ ಇನ್ನೊಬ್ಬರಿಗೆ
ಸತ್ತಿತು ರೋಮಾಂಚನ
ಮಾನಿಟರ್ ನಲ್ಲಿ ಬದುಕು ನರಳಿತು
ಬಿರುಕು ಮೂಡಿಸಿಕೊಂಡು
ಕಂಪ್ಯೂಟರ್ ಕ್ಲಾಸಿಗೆ ಈಗ
ಎಡ್ಮಿಷನ್ ಆಗಿದೆ ಹೊಸದಾಗಿ
ಮುಂದುವರೆದಿದೆ ಕಲಿಕೆ!





Thanks a Lot Avadhi mag Balaga.
Its beautiful Dad, keep writing:)
ನಿಜ, ಸೇತುವೆಯಾಗುವಲ್ಲಿ ಕಂಪ್ಯೂಟರ್ ಸೋಲುತ್ತಿದೆ.
ಸಮಯ ಉಳಿಸಬೇಕಾದದ್ದು ಸಮಯ ತಿಂದುಹಾಕುತ್ತಿದೆ
ಜಾಲದಲ್ಲಿ ಹೆಣೆದುಕೊಳ್ಳಬೇಕಿತ್ತು ಹೊಲಿಗೆ ತಪ್ಪಿದೆ
ತಾಣವಾಗದೆ ಕೇವಲ ಹುಡುಕಾಟದ ತಲ್ಲಣ
ಕಣ್ಣಲ್ಲಿ ಕಣ್ಣಿಟ್ಟರೂ ಕಾಣದ ಪ್ರತಿಬಿಂಬವೆ ಕಾಣೆ
ಬಿಂಬಕೆ ಒಂದು ಸ್ಪರ್ಷದ ಕೊರತೆಯಾಗಿದೆ
ಎದುರಿಗಿದ್ದರೂ ಮುಖಾಮುಖಿಯಾಗದೆ
ಕೊರಳಸೆರೆಯುಬ್ಬಿದ್ದೂ ಕಾಣದಾಗಿದೆ….
ಹೊಸಕಲಿಕೆಯದೂ ಅಂತ್ಯಕಾಣದ ಗುಮಾನಿ
ಹಳೆಯ ಒಡಂಬಡಿಕೆ ಮರುಕಳಿಸದೆ ಏಕಿದೆ..?!