ಸೆದಕಲಲ್ಲೊಂದು ಮನೆಯ ಮಾಡಿ…

ಸಮತಾ ಆರ್

ಒಂದು ಭಾನುವಾರ ಮಧ್ಯಾಹ್ನ ಮನೆಗೆಲಸವನ್ನೆಲ್ಲಾ ಮುಗಿಸಿ, ಹಣ್ಣಾಗುತ್ತಿರುವ ತಲೆಗೆ ಬೆಳಿಗ್ಗೆಯಿಂದಲೇ ಮೆತ್ತಿಕೊಂಡಿದ್ದ ಮೆಹಂದಿಯಿಂದ ಮುಕ್ತಿ ಕಾಣಿಸಲು ನೀರುಮನೆಗೆ ಹೋಗುವಷ್ಟರಲ್ಲಿ, ‘ಅಮ್ಮ! ಇಲ್ನೋಡು ಬಾ, ಮನೆ ಹತ್ತಿರ ಯ್ಯಾರ್ ಬಂದವ್ರೆ ಅಂತ!’ ಎಂದು ಮನೆ ಹೊರಗೆ ಆಡುತ್ತಿದ್ದ ಮಕ್ಕಳಿಬ್ಬರೂ ಕಿರುಚಿದರು.

‘ಅಯ್ಯೋ, ನನ್ನ ಈ ಅವತಾರದಲ್ಲಿ ಹೊರಗೆ ಹೋಗಬೇಕಲ್ಲ’ ಎಂದುಕೊಳ್ಳುತ್ತಾ,’ ಯಾರಿರಬಹುದು’ ಎಂಬ ಕುತೂಹಲದಿಂದಾಗಿ, ಹೊರಗೆ ಹೋದೆ. ಹೋಗಿ ನೋಡಿದರೆ, ಮೊಳದುದ್ದವೂ ಇರದ, ಹೆಬ್ಬೆರಳ ಗಾತ್ರದ ನಾಗರ ಹಾವಿನ ಮರಿಯೊಂದು, ಹೆಡೆ ಬಿಚ್ಚಿ, ಭುಸುಗುಡುತ್ತಾ ಮಕ್ಕಳಿಬ್ಬರನ್ನೂ ಹೆದರಿಸುತ್ತಿದೆ!. ಅಷ್ಟರಲ್ಲಿ ಹಿಡಿಗಲಿಡಿದು ಬಂದ ನನ್ನ ಗಂಡ ಅದನ್ನು ಹೆದರಿಸಿ ಓಡಿಸಲು ಯತ್ನಿಸಿದರು. ಅದು ಹೆದರದೆ ಇನ್ನಷ್ಟು ರೋಷದಿಂದ ಭುಸುಗುಟ್ಟುತ್ತಾ ನೆಲಕ್ಕೆ ಹೆಡೆಯಪ್ಪಳಿಸಿತು.

‘ಚೋಟುದ್ದ ಇಲ್ಲ, ನಿನ್ನ ಕ್ಯಾಣ ನೋಡು!’ ಎನ್ನುತ್ತಾ ಇವರು ಉದ್ದನೆಯ ಕೋಲೊಂದನ್ನು ತಂದು ಅದನ್ನೆತ್ತಿ ಮನೆಯೆದುರಿನ ಚರಂಡಿಯೊಂದಕ್ಕೆ ಇಳಿಸಿದರು. ತಕ್ಷಣ ಅದು ಸರಸರನೆ ಹರಿದು ಬಿಲವೊಂದನ್ನು ಹೊಕ್ಕಿ ಕ್ಷಣದಲ್ಲಿ ಮಾಯವಾಯಿತು.

‘ಛೇ.. ಯಾಕಾದರೂ ಈ ಕಾಡಲ್ಲಿ ಮನೆ ಮಾಡಿದೆವೋ ಕಾಣೆ. ದಿನಾ ಹಾವು, ಚೇಳು, ನಾಯಿ, ನರಿಗೆಲ್ಲಾ ಹೆದರಿಕೊಂಡು ಬದುಕೋದಾಯಿತು. ಹಿತ್ತಲ ಬಾಗ್ಲಿಗೆಲ್ಲ ಆಗ್ಲೇ ಗೆದ್ದಲು ಹಿಡಿತಾಯಿದೆ, ಏನ್ ಮಾಡೋದು ಹೇಳು, ಬಂದಿದ್ದೆಲ್ಲ ಅನುಭವಿಸಬೇಕು’ ಎನ್ನುತ್ತಾ ಕೊರಗಿಕೊಂಡು ಇವರು ಒಳಹೋದರು.

ಅನುಭವಿಸುತ್ತಿರುವುದು ಏನನ್ನಾ! ಕಷ್ಟವೇ? ಸುಖವೇ?

ಮನುಷ್ಯರಲ್ಲದೆ ಬೇರೆ ಯಾವುದೇ ಜೀವರಾಶಿಯ ಗಂಧ ಗಾಳಿಯೂ ಸೋಕದ, ಕಿಕ್ಕಿರಿದು ತುಂಬಿದ್ದ ಮನೆಗಳ ಸಂಧಿಯಲ್ಲಿದ್ದ ನಮ್ಮ ಹಳೆಯ ಮನೆಯ ಸಹವಾಸ ಸಾಕು ಸಾಕಾಗಿತ್ತು. ಸ್ವಂತ ಮನೆಯಂತಾದರೆ ಈ ಕಿಷ್ಕಿಂಧೆಯಿಂದ ಬಿಡುಗಡೆಯಾಗಬಹುದೆಂಬ ಆಸೆಯಿಂದ, ನಗರದ ಸದ್ದು ಗದ್ದಲಗಳಿಂದ ದೂರ, ವಿರಳ ಮನೆಗಳಿರುವ ಈ ಬಡಾವಣೆಯಲ್ಲಿ ಮನೆ ಕಟ್ಟಿದ್ದು ಸ್ವಲ್ಪ ಮೌನ ಮತ್ತು ಏಕಾಂತ ಬಯಸಿಯಲ್ಲವೆ?

ಇಲ್ಲಿ ಮನೆ ಕಟ್ಟುವುದಕ್ಕಿಂತ, ಹಣತೊಡಗಿಸಲು ಎಂದೇ ಸೈಟು ಖರೀದಿಸಿರುವವರು ಬಹಳ ಜನ. ಹಾಗಾಗಿ ಖಾಲಿಖಾಲಿ ಸೈಟುಗಳ ಸಮುದ್ರದಲ್ಲಿ ಅಲ್ಲೊಂದು ಇಲ್ಲೊಂದು ದ್ವೀಪಗಳಂತೆ ಮನೆಗಳಿವೆ. ಇರುವುದು ಕಡಿಮೆ ಮನೆಗಳಾದರೂ, ಮನೆ ಕಟ್ಟಿರುವವರೆಲ್ಲ ತಮ್ಮ ಸೈಟ್ ಗಳನ್ನು ಸಂಪೂರ್ಣವಾಗಿ ಬಳಸಿಕೊಂಡು,ಸ್ವಲ್ಪ ಜಾಗವನ್ನೂ ಕೂಡ ಕೈತೋಟಕ್ಕೆ ಅಂತೇನೂ ಬಿಡದೆ ಮನೆ ಕಟ್ಟಿಬಿಟ್ಟಿದ್ದಾರೆ.

ಆಶ್ಚರ್ಯವೆಂದರೆ ಒಂದೂ ಗಿಡ ಮನೆಯೆದುರು ಇರದ ಮನೆಗಳು ಇಲ್ಲವೇ ಇಲ್ಲ. ತಮ್ಮ ಸೈಟ್ ಒಳಗೆ ಬೆಳೆಸದಿದ್ದರೂ, ಮನೆ ಎದುರು, ರಸ್ತೆಯಂಚಲ್ಲಿ ಯಾವುದಾದರೊಂದು ಗಿಡವೊ ಇಲ್ಲವೇ ಮರವನ್ನು ಬೆಳೆಸಿಕೊಂಡಿದ್ದಾರೆ. ಒಂದು ಕಣಿಗಲ ಗಿಡವನ್ನೋ, ಇಲ್ಲವೇ ತಮ್ಮ ಕಾರಿಗೆ ನೆರಳಾಗಿರಲೆಂದು ಹೊಂಗೆ, ಸಿಂಗಪೂರ್ ಚೆರ್ರಿ, ಇಲ್ಲವೇ ಕಾಡು ಬಾದಾಮಿ ಮರವನ್ನೋ ಬೆಳೆಸಿಕೊಂಡಿದ್ದಾರೆ.

ಬಹುತೇಕ ಮನೆಗಳು ಎರಡು,ಮೂರು ಅಂತಸ್ತಿನವುಗಳು. ಆದರೆ ಎಷ್ಟೇ ದೊಡ್ಡ ಮನೆಗಳಾದರೂ ಅವುಗಳಲ್ಲಿ ವಾಸ ಮಾಡುವ ಜನರ ಸಂಖ್ಯೆ ಕಡಿಮೆಯೇ.ಹೆಚ್ಚಿಗೆ ಅಂದ್ರೆ ಐದರಿಂದ ಆರು ಜನರಿದ್ದರೆ ಹೆಚ್ಚು. ಎರಡರಿಂದ ನಾಲ್ಕು ಜನರಿರುವ ಮನೆಗಳೇ ಹೆಚ್ಚು. ಎಷ್ಟೊಂದು ಮನೆಗಳನ್ನು ದೂರದ ನಗರ, ಇಲ್ಲವೇ ದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳು ತಮ್ಮ ಅಪ್ಪ ಅಮ್ಮಂದಿರಿಗಾಗಿ ಕಟ್ಟಿಸಿಕೊಟ್ಟಿದ್ದು, ಆ ದೊಡ್ಡ ದೊಡ್ಡ ಮನೆಗಳಲ್ಲಿ ವಯಸ್ಸಾದ ಅಜ್ಜ, ಅಜ್ಜಿ ತಮ್ಮ ಮಕ್ಕಳಿಗಾಗಿ ಕಾಯ್ದುಕೊಂಡು, ಅವರನ್ನು ಕಾಯಲು ಇರುವ ಒಂದು ನಾಯಿಮರಿ ಮತ್ತು ಮನೆಕೆಲಸದ ಸಹಾಯದವರೊಂದಿಗೆ ಹೊತ್ತು ನೂಕುತ್ತಿದ್ದಾರೆ.

ಹಲವಾರು ವರ್ಷಗಳ ಹಿಂದೆ ನಗರದ ಅಂಚಿನ ಹಳ್ಳಿಯೊಂದಕ್ಕೆ ಸೇರಿದ್ದ ಹೊಲಗಳಾಗಿದ್ದ ಜಮೀನುಗಳನ್ನೇ ನಗರಪಾಲಿಕೆಯವರು ಸಾರಾಸಗಟಾಗಿ ಖರೀದಿಸಿ ಬಡಾವಣೆಯನ್ನಾಗಿ ಬದಲಾಯಿಸಿ ಬಿಟ್ಟಿದ್ದಾರೆ. ಆದರೂ ಇಲ್ಲಿಯ ಖಾಲಿಸೈಟುಗಳ ಮಣ್ಣು ಇನ್ನೂ ತನ್ನ ಕೆಂಪು ಕಳೆದುಕೊಂಡಿಲ್ಲ. ಒಂದೆರಡು ಸಣ್ಣ ಮಳೆಗೇ ಗರಿಕೆ ಚಿಗುರಿಸಿ, ಬಿಳಿ ಪೊರಕೆ ಕಡ್ಡಿ ಹುಲ್ಲು ಹುಲುಸಾಗಿಸಿ, ಉಗಣಿ ಹಂಬು ಹಬ್ಬಿಸತೊಡಗುತ್ತದೆ.

ಇಲ್ಲಿಯೊಂದು ಹಳ್ಳಿಯಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ, ಬಡಾವಣೆಯ ಅಂಚಿನಲ್ಲಿ, ಒಂದು ವಿಶಾಲ, ನೂರಾರು ಬಿಳಲುಗಳ ಬಿಟ್ಟ, ಅದೆಷ್ಟೋ ವರ್ಷ ವಯಸ್ಸಾಗಿರುವ ಒಂದು ಆಲದ ಮರ, ಮತ್ತದರ ಕೆಳಗೆ ಒಂದು ಅಮ್ಮನ ಗುಡಿ ಮೂಕವಾಗಿ ನಿಂತಿವೆ. ಯಾರಾದರೂ ಹೊಸದಾಗಿ ಮನೆ ಕಟ್ಟುವವರು ಅಡಿಪಾಯಕ್ಕೆ ಎಂದು ಈ ಮಣ್ಣನ್ನು ಅಗೆಸುವಾಗ ದೊಸಕಿಕೊಳ್ಳುವ ಬಿಲಗಳೆಷ್ಟೋ! ಸೋಸಿ ಸೋಸಿ ರಾಶಿ ಮಾಡಿರುವ ತೆಂಗಿನಬೇರುಗಳ ಗುಡ್ಡೆಗಳದೆಷ್ಟೋ! ಮಳೆಬಿದ್ದ ತಿಂಗಳೊಳಗೆ ಮಂಡಿಯುದ್ದ ಬೆಳೆದು ನಿಲ್ಲುವ ಹುಲ್ಲು ಅದೆಷ್ಟು ಜೀವಜಂತುಗಳನ್ನು ತನ್ನ ಒಡಲಲ್ಲಿ ಅಡಗಿಸಿಟ್ಟುಕೊಳ್ಳುತ್ತದೋ? ಎಣಿಸಿ ಇರುವವರು ಯಾರು?

ಎದುರುಮನೆ ಗೆಳತಿಯೊಂದಿಗೆ ದಿನಾ ಸಂಜೆ ವಾಕ್ ಹೋಗುವಾಗ,ಎಷ್ಟೊಂದು ಖಾಲಿಸೈಟ್ ಗಳ ಹುಲ್ಲಿನ ಮಧ್ಯೆ ಬೆಳೆದಿರುವ ಕನ್ನೆ, ಕೊಮ್ಮೆ, ಕೀರೆ, ಮುಳ್ಳುಗೀರೆ, ಗಣಿಕೆ, ಹೊನಗೊನೆ, ಎಂದೆಲ್ಲಾ ಬೆರೆಕೆ ಸೊಪ್ಪುಗಳ ಕಂಡಾಗ ಕುಯ್ದುಕೊಳ್ಳೋಣ ಎನಿಸುತ್ತದೆ. ಆದರೆ ತಮ್ಮ ತಮ್ಮ ಎಲ್ಲೆಗಳನ್ನು ಗುರುತಿಸಿಕೊಳ್ಳಲು ಎಲ್ಲೆಂದರಲ್ಲಿ ಉಚ್ಚೆ ಹೊಯ್ದುಕೊಂಡು ತಿರುಗುವ ಬೀದಿನಾಯಿಗಳ ನೆನಪಾಗಿ ಕೈ ಹಿಂದೆಗೆಯುತ್ತದೆ.

ಅಲ್ಲಲ್ಲಿ ಕಂಡುಬರುವ ಖಾಲಿ ಸೈಟುಗಳಲ್ಲಿ ದಟ್ಟವಾಗಿ ಬೆಳೆದಿರುವ, ತರಹೇವಾರಿ ಮರಗಳು, ಗಿಡಗಂಟೆಗಳು, ಗೊಬ್ಬಳಿ ಮರಗಳ ಗುಂಪು ,ಉಣ್ಣೆ ಮೆಳೆಗಳು ಸೆದಕಲ ಮಾಡಿಬಿಟ್ಟಿವೆ. ಇವುಗಳು ಹೊಸದಾಗಿ ಮನೆಗಳನ್ನು ಕಟ್ಟುತ್ತಿರುವಲ್ಲಿ ಕೆಲಸಮಾಡಲು ಬಂದಿರುವ ಕಟ್ಟಡ ಕಾರ್ಮಿಕರ ನಿಸರ್ಗದ ಕರೆಗಳ ಮರೆಗಳಾಗಿ ಬಿಟ್ಟಿವೆ. ಕಟ್ಟುತ್ತಿರುವ ಮನೆಗಳ ಎದುರಿಗೆ ಒಂದು ಚಿಕ್ಕಷೆಡ್ ನಲ್ಲಿ ಆ ಮನೆಯ ವಾಚ್ಮನ್ ಮತ್ತು ಆತನ ಇಡೀ ಸಂಸಾರದ ವಾಸ. ಒಂದು ಹತ್ತು ಬೈ ಹತ್ತರ ಅಳತೆಯ ಷೆಡ್,ಅದರ ಹಿಂದೆಯೇ ಪ್ಲಾಸ್ಟಿಕ್ ಹಾಳೆಗಳಿಂದ ಮರೆ ಮಾಡಿರುವ ಬಚ್ಚಲು. ಆದರೆ ಶೌಚಾಲಯ ಮಾತ್ರ ಗಿಡಮರಗಳ ಸೆದಕಲೇ. ಬಹುತೇಕ ಜನ ಸಮೀಪದ ಹಳ್ಳಿಗಳಿಂದ ಬಂದು ಸೇರಿಕೊಂಡು ‘ಬೇಸಾಯದಲ್ಲಿ ಬರೀ ಲಾಸಾಯ್ತು ಕಣಕ್ಕಾ, ಊರಲ್ಲಿ ಕೂಲಿ ಕೆಲ್ಸ ಸಿಗೋದು ಕಮ್ಮೀ, ವಸಿ ಸಾಲಾನಾದ್ರು ತೀರ್ಲಿ ಅಂತ ಇಲ್ಲಿಗೆ ಬಂದೋ’ ಅನ್ನೋರೇ ಹೆಚ್ಚು.

ಆ ಷೆಡ್ಗಳಲ್ಲಿ ವಾಸ ಮಾಡುವವರಲ್ಲಿ ಗಂಡ ವಾಚ್ ಮನ್ ಕೆಲಸ ಮಾಡಿದರೆ,ಹೆಂಡತಿ ಅಕ್ಕ ಪಕ್ಕ ಜನ ವಾಸವಿರುವ ಮನೆಗಳಲ್ಲಿ, ಮನೆಕೆಲಸ ಮಾಡಿಕೊಂಡು, ಇಲ್ಲವೇ ವಾಸದ ಷೆಡ್ ನ ಪಕ್ಕದಲ್ಲೇ ಇನ್ನೊಂದು ಷೆಡ್ ನಲ್ಲಿ ಹಸು ಸಾಕಿಕೊಂಡು, ಹಾಲು ಮಾರಿಕೊಂಡು ಇದ್ದಾರೆ.ಅವರ ಗಂಡು ಮಕ್ಕಳು ದೊಡ್ಡವರಾಗಿದ್ದರೆ ಗಾರೇ ಕೆಲಸಕ್ಕೆ, ಹೆಣ್ಣುಮಕ್ಕಳು ತಮ್ಮ ಅಮ್ಮನೊಟ್ಟಿಗೆ ಮನೆಕೆಲಸಕ್ಕೆ ಹೋಗುತ್ತಾರೆ. ಚಿಕ್ಕವರಾಗಿದ್ದರೆ ಹತ್ತಿರದಲ್ಲಿ ಯಾವುದಾದ್ರೂ ಸರ್ಕಾರಿ ಶಾಲೆ ಇದೆಯೇ ನೋಡಿಕೊಂಡು, ಸೇರಿಕೊಂಡು ನಡೆದುಕೊಂಡೇ ಹೋಗಿ ಬರಬೇಕು.

ಇವರೆಲ್ಲಾ ಒಂದು ಹೊಸಮನೆ ಕೆಲಸ ಮುಗಿದು ಗೃಹಪ್ರವೇಶ ಆದ ನಂತರ ತಮ್ಮ ಷೆಡ್ ಬೀಳಿಸಿ ಇನ್ನೊಂದು ಹೊಸಮನೆ ಕಟ್ಟುವ ಕಡೆ ಪಯಣ ಬೆಳೆಸುತ್ತಾರೆ. ಇಡೀ ಬಡಾವಣೆಯ ಸೈಟ್ ಗಳೆಲ್ಲ ಮನೆಗಳಿಂದ ತುಂಬಿ ಹೋಗುವ ತನಕ ಕೆಲಸಕ್ಕೇನೂ ಬರವಿಲ್ಲ. ನಂತರ?

ಇಲ್ಲೆಲ್ಲಾ ದೊಡ್ಡ ಮನೆ ಇಲ್ಲವೇ ಕಟ್ಟಡಗಳ ಕಟ್ಟಿಸುವವರು ಎಷ್ಟೋ ಬಂಡವಾಳ ಸುರಿದು ಕಟ್ಟಿಸುತ್ತಿದ್ದರೂ, ತಮ್ಮ ಕಾರ್ಮಿಕರಿಗೆ ಶೌಚಾಲಯದಂತಹ ಕನಿಷ್ಟ ಮೂಲಭೂತ ಸೌಲಭ್ಯ ಒದಗಿಸುವುದಿಲ್ಲ. ಶೌಚಾಲಯ ಬಿಡಿ ಬಹಳ ದೂರದ ಮಾತು, ಶುದ್ಧ ಕುಡಿಯುವ ನೀರು ಒದಗಿಸಿದರೆ ಸಾಕು.ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮನೆಗೆ ಅಂತ ತೆಗೆಸೋ ಬೋರ್ವೆಲ್ ನೀರಾದ್ರು ಸಿಗುತ್ತೆ ಆದರೆ ಕೆಲವೊಮ್ಮೆ ಕೆಲವು ರಸ್ತೆ ಕಾಮಗಾರಿ ಹೆಂಗಸರು ಬಂದು ‘ಅಕ್ಕಾ, ಒಂದೆರಡು ಬಿಂದಿಗೆ ಕುಡಿಯುವ ನೀರು ಕೊಡಿ’ ಎಂದು ಕೇಳಿ ತೆಗೆದುಕೊಳ್ಳುವಾಗ ಕನಿಕರವೆನಿಸುತ್ತದೆ. ‘ಯಾಕೆ,ನಿಮ್ಮ ಕಂಟ್ರಾಕ್ಟರ್ ನೀರು ಕೊಡೋದಿಲ್ಲವಾ?’ ಎಂದು ವಿಚಾರಿಸಿದರೆ, ‘ಅದು ಡ್ರಮ್ಗಳಲ್ಲಿ ಎಲ್ಲಿಂದಲೋ ತರೋ ನೀರು, ಕುಡಿಯೋಕ್ಕಾಗಲ್ಲ,ಬೇರೆ ಕೆಲಸಕ್ಕೆ ಅದು ಬಳಸಿಕೊಳ್ಳುತ್ತೇವೆ, ಕುಡಿಯಲು ಹೀಗೆ ಅಲ್ಲಿ,ಇಲ್ಲಿ ಕೇಳಿಕೊಳ್ತೆವೆ’ ಅಂದರು.

ಬಡಾವಣೆಯನ್ನು ಚಂದಗೊಳಿಸಲು ನಗರ ಪಾಲಿಕೆಯವರು ರಸ್ತೆಗಳ ಇಕ್ಕೆಲಗಳಲ್ಲಿ ನೆಟ್ಟಿರುವ ಹೊಂಗೆ, ಬೇವು, ಬೀಟೆ, ಹಲಸು, ಮಾವು, ಕಾಡು ಬಾದಾಮಿ ಇತ್ಯಾದಿಗಳ ಸಸಿಗಳು ತೆವಳಿ ತೆವಳಿ ಸಾಗಿದಂತೆ ನಿಧಾನವಾಗಿ ಬೆಳೆಯುತ್ತಿವೆ.

ಇನ್ನು ಸೆದಕಲುಗಳಲ್ಲಿ, ಸಂದಿಗೊಂದಿಗಳಲ್ಲಿ,ನೆಲದಾಳದ ಬಿಲಗಳಲ್ಲಿ, ಫರ್ಲಾಂಗುಗಟ್ಟಲೆ ಹರಡಿರುವ ಚರಂಡಿಗಳ ಜಾಲದಲ್ಲಿ ಬದುಕುತ್ತಿರುವ ಚಿಕ್ಕಪುಟ್ಟ ಪ್ರಾಣಿಗಳ ಕಥೆಯೇ ಬೇರೆ.

ಬೆಳಬೆಳಗ್ಗೆಯೇ ಕೆಲಸಕ್ಕೆಂದು ನುಗ್ಗುತ್ತಾ ಸಾಗುತ್ತಿರುವಾಗ ರಸ್ತೆಯಗಲಕ್ಕೂ ಚಂಗೆಂದು ಹಾರಿ ಸ್ಕೂಟಿಗೆ ಬ್ರೇಕ್ ಹಾಕಿಸುವ ಮೊಲಗಳು, ಜೂಲು ನಾಯಿಯ ಮರಿಗಳಂತೆ ಮೈಯೆಲ್ಲಾ ರೋಮ ಬೆಳೆಸಿಕೊಂಡು ಚರಂಡಿಯುದ್ದಕ್ಕೂ ಓಡುವ ಮುಂಗುಸಿಗಳು, ನೋಡಿದ ತಕ್ಷಣ ನಾಯಿಯಿರಬಹುದು ಅನ್ನೋ ಭ್ರಮೆ ಹುಟ್ಟಿಸಿದ ನರಿಗಳು, ತನ್ನ ಮೂರು ಮರಿಗಳನ್ನು ಕಟ್ಟಿಕೊಂಡು, ನಮ್ಮ ಮನೆಯ ಬಳಿಯ ಪಾಳು ಬಿದ್ದಿರುವ ಷೆಡ್ ಒಂದರಲ್ಲಿ ವಾಸಿಸುತ್ತಾ, ರಾತ್ರಿ ಮಾತ್ರ ಎಲ್ಲೋ ಸ್ವಲ್ಪಹೊತ್ತು ರಸ್ತೆಯಲ್ಲಿ ಕಂಡು ಮಾಯವಾಗುವ ಒಂದು ಮುಳ್ಳುಹಂದಿ, ರಸ್ತೆಯ ಬದಿಯಲ್ಲಿ ಹರಿಯುತ್ತ, ಕುತ್ತಿಗೆ ಕುಣಿಸುತ್ತಾ

ಅಣಕಿಸುವ ಹಾವುರಾಣಿ, ಓತಿಕ್ಯಾತಗಳು, ನನ್ನ ಮಗನ ಬೈಸಿಕಲ್ ಮೇಲೆ ಯಾವಾಗಲೂ ಕುಳಿತು ಅವನ ಹೆದರಿಸುವ ಒಂದು ಗೋಸುಂಬೆ, ನನ್ನ ಕುಂಡದ ಮಣ್ಣನ್ನೆಲ್ಲಾ, ತೋಡಿ ತೋಡಿ ಗುಡ್ಡೆ ಹಾಕುವ ಹೆಗ್ಗಣಗಳು, ಕೇಬಲ್ ವೈರ್ ಗಳಲ್ಲಿ, ಬಾಲ್ಕನಿಯ ರೇಲಿಂಗ್ ಗಳಲ್ಲಿ ಮರದ ರೆಂಬೆ ಕೊಂಬೆಗಳಲ್ಲಿ, ಏರುತ್ತ ಜಾರುತ್ತ ಓಡುವ ಅಳಿಲುಗಳು, ನಮ್ಮ ಕಾರ್ ಅಡಿಯಲ್ಲಿ ಮಲಗಿ ರಾತ್ರಿ ಕಳೆದು ಬೆಳಗ್ಗೆ ಎದ್ದು ಹೋಗುವ ಒಂದು ಕರಿ ಬೆಕ್ಕು, ಸಂಜೆಗತ್ತಲಾಗತೊಡಗಿದಂತೆ ರಸ್ತೆಯಲ್ಲಿ ಓಡಾಡದಂತೆ ಹೆದರಿಸುವ ಹಾವು, ಚೇಳು, ಜರಿಗಳು, ನೂರೆಂಟು ಆಕಾರ, ಬಣ್ಣ, ಗಾತ್ರ, ವಾಸನೆಯ ಕೀಟಗಳು ಎಲ್ಲವನ್ನೂ ಕಂಡದ್ದಾಯಿತು.

ಒಮ್ಮೆಯಂತೂ ದಾರಿಗಡ್ಡವಾಗಿ ಬಿದ್ದಿದ್ದ ಕೊಂಬೆಯೊಂದ ಕಂಡು, ಸ್ಕೂಟಿ ಅದರ ಮೇಲೆ ಹತ್ತಿಸಿದರೆ ಬಿದ್ದೇನೆಂದು ಅನಿಸಿತು. ಹಾಗಾಗಿ ಅದನ್ನು ಸುತ್ತುವರಿದು ಹೋಗೋಣ ಎನ್ನುವಷ್ಟರಲ್ಲಿ ಅದಕ್ಕೆ ಜೀವ ಬಂದು ಕೇರೆಹಾವಾಗಿ ಹರಿದು ಹೋಯಿತು!

 ಈ ಸೆದಕಲಲ್ಲಿ ಮನೆಯಾಗಿ, ಯಾವಾಗ ಯಾವ ಜೀವ ಬಂದು ಬಾಗಿಲ ಕಾಯುವುದೋ ಹೇಳಲಾಗದು. ಒಮ್ಮೆ ಹೊಸ್ತಿಲ ಬಳಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಎಡಪಾದದ ಬೆರಳುಗಳು ತಣ್ಣಗಾದಂತಾಯಿತು. ಬಗ್ಗಿ ನೋಡಿದರೆ ಉಡದಮರಿಯಂತಹ ಕರಿಯ ಹಲ್ಲಿಯೊಂದು ಬೆರಳುಗಳನ್ನು ನೆಕ್ಕುತ್ತಿದೆ. ಹೆದರಿ ಅಪ್ಪಳಿಸಿ ಹೋಗಿ ಕಾಲು ಕೊಡವಿ ಅಲ್ಲಿಂದ ಓಡಿದ್ದಾಯಿತು. ಒಮ್ಮೆ ಮೆಟ್ಟಿಲ ಬಳಿ ಬಿದ್ದಿದ್ದ ಕಪ್ಪು, ಕಿತ್ತಳೆ ಪಟ್ಟಿಗಳ ಹೇರ್ ಬ್ಯಾಂಡ್ ಒಂದನ್ನು ಕಂಡು ‘ಎಲ್ಲೋ ಮಗಳು ಎಸೆದಿರಬೇಕು, ಎತ್ತಿಡುವ’ ಎಂದು ಇನ್ನೇನು ಕೈ ಹಾಕಬೇಕು ಅಷ್ಟರಲ್ಲಿ ಹೇರ್ ಬ್ಯಾಂಡ್ ನ ಸುರುಳಿ ನಿಧಾನವಾಗಿ ಬಿಚ್ಚಿಕೊಂಡು ಕಟ್ಟು ಹಾವಿನ ಮರಿಯಾಗ ಬೇಕೆ!

ಹೊರಗೆ ಕಾರ್ ಷೆಡ್ನಲ್ಲಿರುವ ಚಪ್ಪಲಿ ಸ್ಟ್ಯಾಂಡ್ ಕದಗಳನ್ನು ತೆರೆಯುವಾಗಲಂತೂ ಮೈಯೆಲ್ಲಾ ಕಣ್ಣಾಗಿರಬೇಕು. ಕದಗಳಲ್ಲಿ ಗೂಡು ಕಟ್ಟಿರುವ ಕಡಜದ ಕಡಿತ ನಾವೆಲ್ಲ ಅನುಭವಿಸಿದ್ದೇವೆ. ಮಕ್ಕಳು ಷೂಗಳ ಚೆನ್ನಾಗಿ ಕೊಡವಿ ನಂತರವೇ ಧರಿಸಬೇಕು. ಒಮ್ಮೆಯಂತೂ ಅಂಗೈ ಅಗಲದ ಚೇಳೊಂದು ಮಗನ ಷೂ ಮೇಲೆ ಹತ್ತಿ ಕುಳಿತಿತ್ತು. ಒಮ್ಮೊಮ್ಮೆಯಂತೂ ಬೆಳಗಿನ ವಾಕ್ ಗೆ ಹೋದ ಕೆಲವರಿಗೆ ಯಾವುದೋ ಪೊದೆಯಲ್ಲಿ ಚಿರತೆ ಕಂಡ ಹಾಗಾಯಿತಂತೆ ಎನ್ನುವ ಪುಕಾರು ಕೇಳಿ ಮೈ ಜುಮ್ಮೆಂದ್ದಿತ್ತು.

‘ಮನೆಯ ಸುತ್ತ ಇರುವ ಸೆದಕಲು ಸಾಲದೆ? ಮನೆಯೊಳಗೆ ಗಿಡ ಪಡ ಇಟ್ಟುಕೊಂಡು ಯಾವುದಾದರೂ ಒಂದು ಪ್ರಾಣಿಯನ್ನು ಬಿಟ್ಟುಕೊಳ್ಳಬೇಡ’ ಎನ್ನುವ ಗಂಡನ ಎಚ್ಚರಿಕೆಯನ್ನು ಮೀರಿ ಕುಂಡಗಳನ್ನು ಇಟ್ಟು ಗಿಡಗಳನ್ನು ಬೆಳೆಸಿದ್ದಾಯಿತು. ಅವುಗಳಲ್ಲಿ ಒಂದು ಚಿಕ್ಕ ನಿಂಬೆ ಸಸಿ ಇರುವ ಕುಂಡವೊಂದಕ್ಕೆ ದಿನಾ ರಾತ್ರಿ ಕಮ್ಮಿಯೆಂದರೂ ಒಂದು ಕೆಜಿ ತೂಗುವ ಮಂಡರಗಪ್ಪೆಯೊಂದು ಬಂದು, ನೆಗೆದು ಹತ್ತಿ, ಅಲ್ಲೇ ಮಲಗಿ ರಾತ್ರಿ ಕಳೆದು, ಬೆಳಿಗ್ಗೆ ಎದ್ದು ತನ್ನ ಪಾಡಿಗೆ ತಾನು ಹೊರಟುಹೋಗುತ್ತದೆ.

ಇನ್ನು ನೂರೆಂಟು ತರಹದ ಹಕ್ಕಿ ಪಕ್ಷಿಗಳಿಗೇನು ಬರವಿಲ್ಲ. ಕುವೆಂಪು ಪುಸ್ತಕಗಳ ಕಾಜಾಣಗಳನ್ನು ಮೊದಲು ಇಲ್ಲೇ ನೋಡಿದ್ದು. ಅದೃಷ್ಟ ಚೆನ್ನಾಗಿದ್ದರೆ ದೂರದ ಖಾಲಿ ಸೈಟುಗಳಲ್ಲಿ ಮೇಯಲು ಬರುವ ನವಿಲುಗಳನ್ನು, ಬೆಳ ಬೆಳಗ್ಗೆಯೇ ಏಳುವ ಅಭ್ಯಾಸ ವಿದ್ದರೆ ನೋಡಬಹುದು. ಗೊಬ್ಬಳಿ ಮರಗಳಲ್ಲಿ ಮುಳ್ಳುಗಳೇ ಹಸಿರು ಹಣ್ಣುಗಳ ಬಿಟ್ಟಂತೆ ತುಂಬಿ ಕೊಂಡು, ಸಂಜೆ ಹೊತ್ತು ಗಿಳಿಗಳು ಅವಿತು ಕುಳಿತು ರಾತ್ರಿ ಕಳೆಯುತ್ತವೆ.

ಪಾರಿವಾಳಗಳ ಜೋಡಿಯೊಂದು ನಮ್ಮ ಮನೆಯ ಬಾತ್ರೂಮ್ ನ ವೆಂಟಿಲೇಟರ್ ನಲ್ಲಿ ದಿನವೂ ಹುಲ್ಲು ಕಡ್ಡಿಗಳ ಒಟ್ಟಿ ಒಟ್ಟಿ ಹೋಗುತ್ತದೆ. ನನ್ನ ರೂಮಿನ ಕಿಟಕಿಯ ಗಾಜಿನಲ್ಲಿ ಕಾಣುವ ತನ್ನದೇ ಪ್ರತಿಬಿಂಬದ ಜೊತೆಗೆ ಕೊಕ್ಕಿನಲ್ಲೇ ಕುಕ್ಕಿ ಕುಕ್ಕಿ ಒಂದು ಬುಲ್ಬುಲ್ ದಿನವೂ ಜಗಳ ಕಾಯ್ದರೂ ಅದರ ಶತ್ರುವನ್ನು ಹೆದರಿಸ ಲಾಗಿಲ್ಲಾ.ನಮ್ಮ ಕಿಟಕಿ ಗಾಜು ಸೀಳಿದ್ದೇ ಅದರ ಪರಾಕ್ರಮದ ಫಲ.

ಬೆಳಿಗ್ಗೆ, ಸಂಜೆ, ಮರಗಳ ಮೇಲೆ, ವಿದ್ಯುತ್ ತಂತಿಗಳ ಮೇಲೆ ಕುಳಿತಿರುವ, ಖಾಲಿ ಜಾಗಗಳಲ್ಲಿ ಕುಪ್ಪಳಿಸಿ ಹಾರುವ, ತರಹಾವರಿ ಬಣ್ಣ, ಆಕಾರ, ಗಾತ್ರ, ರೆಕ್ಕೆ ಪುಕ್ಕ ಕೊಕ್ಕುಗಳ ಹಕ್ಕಿಗಳನ್ನು ಕಂಡಾಗಲೆಲ್ಲಾ ಪ್ರಾಣಿಗಳನ್ನು ಗುರುತಿಸುವಷ್ಟು ಸುಲಭದಲ್ಲಿ ಪಕ್ಷಿಗಳನ್ನು ಗುರುತಿಸಲಾಗದ ಬಗ್ಗೆ ಬೇಸರವೆನಿಸುತ್ತದೆ. ಎಲ್ಲೋ ಒಂದಷ್ಟು ಗುಬ್ಬಚ್ಚಿ, ಬುಲ್ಬುಲ್, ಮೈನಾ, ಕೋಗಿಲೆ, ಮರಕುಟಿಕ, ಪಾರಿವಾಳ, ಗಿಳಿ, ಕೆಂಬೂತ, ನವಿಲು, ಹದ್ದು, ಗರುಡ, ಕಾಜಾಣ, ಮಿಂಚುಳ್ಳಿ, ನವಿಲು, ಬೆಳ್ಳಕ್ಕಿಗಳ ಬಿಟ್ಟರೆ ಬೇರೆ ಪಕ್ಷಿಗಳ ಹೆಸರೇ ಗೊತ್ತಾಗಿಲ್ಲ.

ಅಕ್ಕಪಕ್ಕದ ಮನೆಗಳೆಲ್ಲವೂ ದೂರ ದೂರವಿದ್ದರೂ ನೆರೆಹೊರೆಯ ಎಲ್ಲರೂ ಎಲ್ಲರಿಗೂ ಪರಿಚಿತರು. ಒಂಟಿ ಒಂಟಿ ಮನೆಗಳಾಗಿರುವುದರಿಂದ, ಯಾರಿಗೆ ಯಾವಾಗ ಯಾರ ನೆರವು ಬೇಕಾಗುವುದೋ ಹೇಳಲಾಗದು. ಹಾಗಾಗಿ ಪ್ರತಿಯೊಂದು ಮನೆಯವರೂ ತಮ್ಮ ಅಕ್ಕಪಕ್ಕದ ಮನೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಮಕ್ಕಳಿಬ್ಬರನ್ನೇ ಮನೆಯಲ್ಲಿ ಬಿಟ್ಟು ಹೊರಗೆ ಹೋದರೂ ಯಾವುದೇ ಭಯವಿಲ್ಲ.

ಅಂಗಡಿ ಮುಂಗಟ್ಟುಗಳು ಕೂಡ ಏನೂ ಹತ್ತಿರವಿಲ್ಲ.ಸಮೀಪದಲ್ಲಿರುವ ಬಸ್ ಸ್ಟಾಪಿಗೆ, ದಿನದಲ್ಲಿ, ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಈಮೂರು ಬಾರಿ ಮಾತ್ರ ನಿಗದಿತ ಸಮಯಕ್ಕೆ ನಗರ ಸಾರಿಗೆ ಬಸ್ಸೊಂದು ಬಹುತೇಕ ಖಾಲಿಯಾಗಿಯೇ ಬಂದು ಖಾಲಿಯಾಗಿಯೇ ಹೋಗುತ್ತದೆ. ನಗರದ ಹೊರವಲಯದ ಬಡಾವಣೆಯಾದ್ದರಿಂದ ಬಹುತೇಕ ಎಲ್ಲರೂ ಮನೆಯಲ್ಲಿ ಕಾರು, ಬೈಕ್ ಅಂತ ಇಟ್ಟುಕೊಂಡಿರೋದರಿಂದ ಬಸ್ ಬಳಕೆ ಬಹಳ ಕಮ್ಮಿ.

ಓಡಾಡುವ ವಾಹನಗಳ ಸಂಖ್ಯೆಯೂ ಕಡಿಮೆಯೇ ಹಾಗಾಗಿ ಯಾವಾಗ್ಲೂ ಪರಿಸರ ಯಾವುದೇ ಸದ್ದು ಗದ್ದಲವಿಲ್ಲದೆ ತಣ್ಣಗಿರುತ್ತದೆ. ಸಂಜೆ ಆರೇಳುಗಂಟೆಗೆಲ್ಲ ಎಲ್ಲರೂ ತಮ್ಮ ತಮ್ಮ ಕೆಲಸ,ವಾಕ್ ಗೀಕ್ ಎಲ್ಲಾ ಮುಗಿಸಿಕೊಂಡು, ಮನೆಯೊಳಗೆ ಸೇರಿಕೊಂಡು ಕದವಿಕ್ಕಿಕೊಂಡು, ಜನಸಂಚಾರ ಸ್ತಬ್ಧಗೊಳ್ಳುತ್ತದೆ. ಮೌನ ಹೆಪ್ಪುಗಟ್ಟುತ್ತಾ, ಡಾರ್ಕ್ ಚಾಕಲೇಟ್ ಸಿರಪ್ ನಂತಹ ರಾತ್ರಿ ಎಲ್ಲವನ್ನೂ ಆವರಿಸಿಕೊಂಡು ಬಿಡುತ್ತದೆ.

ನಮಗೆಲ್ಲಾ ಈ ನಿಶ್ಯಬ್ಧ ವಾತಾವರಣ ರೂಢಿಯಾಗಿ ಬಿಟ್ಟಿದೆ. ಆದರೆ ಬೆಂಗಳೂರಿನಿಂದ ಬರುವ ನನ್ನ ಅಣ್ಣಮತ್ತು ತಮ್ಮನಿಗೆ ‘ಇಷ್ಟೊಂದು ತಣ್ಣಗೆ ಹೇಗಿರಲು ಸಾಧ್ಯ’ ಎಂದು ಅಚ್ಚರಿಯೋ ಅಚ್ಚರಿ. ಇಲ್ಲಿ ನಾನಾ ಬಗೆಯ ವೃತ್ತಿ, ವ್ಯಾಪಾರ, ವ್ಯವಹಾರಗಳಿರುವ ಮಂದಿಯಿದ್ದಾರೆ. ಜೊತೆಗೆ ತಮ್ಮ ಹೊಲಗಳನ್ನು ಸೈಟುಗಳಾಗಿ ಮಾಡಿಕೊಳ್ಳಲು ಬಿಟ್ಟುಕೊಟ್ಟು, ಬಂದ ಹಣದಲ್ಲಿ ಚಂದದ ಮನೆ ಕಟ್ಟಿಕೊಂಡು, ಕಾರ್ ಗೀರ್ ತೆಗೆದುಕೊಂಡು ಬದುಕುತ್ತಿರುವವರೂ ಇದ್ದಾರೆ. ಆದರೂ ಅವರಲ್ಲಿ ಕೆಲವು ಹಿರಿಯರು ತಮ್ಮ ದನಕರ, ಆಡು ಕುರಿಗಳನ್ನು ಬಿಟ್ಟುಕೊಡದೆ, ಅವುಗಳನ್ನು ಹೊಡೆದುಕೊಂಡು ಬಂದು ಖಾಲಿ ಸೈಟುಗಳ ಹುಲ್ಲನ್ನು ಮೇಯಿಸುತ್ತಿರುತ್ತಾರೆ.

ಅಂತಹವರಲ್ಲಿ ಒಂದು ಅಜ್ಜಿ ಕೊರಳಿಗೆ ಒಂದೆಳೆ ಚಿನ್ನದ ಸರ ಹಾಕಿಕೊಂಡು ನಾಲ್ಕೈದು ದನಗಳನ್ನು ಹೊಡೆದುಕೊಂಡು ಬಂದು ಮೇಯಿಸುತ್ತಿರುತ್ತದೆ. ಬಿಸಿಲಿದ್ದಾಗ ನಮ್ಮ ಮನೆಯ ಪಕ್ಕದಲ್ಲಿ ದನಕರುಗಳನ್ನು ಬಿಟ್ಟುಕೊಂಡು, ನಮ್ಮ ಕಂಪೌಂಡ್ ನ ನೆರಳಿನಲ್ಲಿ ಕುಳಿತಿದ್ದಾಗ ಒಮ್ಮೊಮ್ಮೆ ಮಾತಿಗೆಳೆಯುತ್ತೇನೆ.

‘ಅಲ್ಲ ಕಣಮ್ಮ, ನೀವು ಹೀಗೆ ಚಿನ್ನ ಹೇರಿಕೊಂಡು ಒಬ್ಬೊಬ್ರೆ ತಿರುಗುತ್ತಿರುವಾಗ, ಯಾವನಾದ್ರು ಅಡ್ಡ ಹಾಕ್ಕೊಂಡು ನಿಮ್ಮ ಚಿನ್ನವನ್ನೆಲ್ಲ ಬಿಚ್ಚಿಕೊಂಡರೆ ಏನ್ ಮಾಡ್ತೀರಾ’ ಅಂತ ಒಂದು ದಿನ ಕೇಳಿದೆ. ‘ಹೋದ್ರೆ ಹೋಯ್ತದೆ ಬಿಡವ್ವ, ಚಿನ್ನಕ್ಕೆ ಹೆದ್ರುಕ್ಕೊಂಡು ಮನೇಲಿ ಕೂತ್ಕೊಳ್ಳೋಕೆ ಆಯ್ತದಾ?. ಮನ್ಷ್ಯ ಆದ್ಮೇಲೆ ಕೈಕಾಲ್ ಆಡ್ದೆ ಹೋದ್ರೆ ಬದುಕ್ಕಕಾದದ? ಕೈಲಿ ಹರಿಯೋ ಗಂಟ ಮೇಯಿಸ್ತಿನಿ ಬುಡವ್ವ’ ಅಂತು.

ಅದ್ಯಾವ ಹಾಳುಗಳಿಗೆಲಿ ನಾನು ಆ ಮಾತು ಹೇಳಿದೆನೋ, ಬರುವ ವಾರದಲ್ಲೇ ಒಬ್ಬ ಸರಗಳ್ಳ ಆ ಅಜ್ಜಿಯ ಸರ ಕಿತ್ತುಕೊಂಡು ಹೋದ. ಆದರೆ ಆ ಗಟ್ಟಿಗಿತ್ತಿ ಅಜ್ಜಿ ಅದಕ್ಕೆ ಜಗ್ಗದೇ, ತಿಂಗೊಳಪ್ಪತ್ತಿನಲ್ಲೇ ಇನ್ನೊಂದು ಸರ ಮಾಡಿಸಿ ಹಾಕ್ಕೊಂಡು ಮತ್ತೆ ದನ ಮೇಯಿಸುತ್ತಿದೆ. ಹಂಗೆ ಕುರಿ ಮೇಯಿಸಿಕೊಂಡು ಬರುತ್ತಿದ್ದ ಒಬ್ಬ ತಾತ ಒಂದಿನ ಅಕ್ಕ ಪಕ್ಕದ ಮನೆಯವರಿಗೆಲ್ಲ ಮೊಮ್ಮಗನ ಮದುವೆಯ ಲಗ್ನ ಪತ್ರಿಕೆ ಕೊಟ್ಟು ‘ಮನೆ ಜನೆಲ್ಲಾ ಬಂದ್ ಬುಡ್ರವ್ವಾ’ ಎಂದು ಕರೆದು ಹೋಯಿತು.ಛತ್ರದ ವಿಳಾಸ ನೋಡಿದರೆ ಅದೊಂದು ನಗರದ ದುಬಾರಿ ಛತ್ರ!

ಖಾಲಿಸೈಟುಗಳು ದನ,ಕುರಿ ಮೇಯಿಸುವುದಕ್ಕೆ ಮಾತ್ರ ಸೀಮಿತವಲ್ಲ. ಕೆಲವು ಮನೆಯವರು ತಮ್ಮ ಮನೆಯ ಪಕ್ಕದ ಖಾಲಿ ಜಾಗಗಳಲ್ಲಿ ಮುಳ್ಳು ಬೇಲಿ ಹಾಕಿಕೊಂಡು ತಾತ್ಕಾಲಿಕ ಕೈತೋಟಗಳನ್ನು ಮಾಡಿಕೊಂಡಿದ್ದಾರೆ. ದಾಸವಾಳ, ನುಗ್ಗೆ, ಕರಿಬೇವು, ಸೇವಂತಿಗೆ, ಪಪ್ಪಾಯ ಮುಂತಾಗಿ ದಿನಬಳಕೆಗೆ ಸಿಗುವ ಹೂ, ಹಣ್ಣು, ತರಕಾರಿಗಳನ್ನು ಬೆಳೆದುಕೊಂಡಿದ್ದಾರೆ.

ಈ ರೀತಿ ಕೈತೋಟ ಮಾಡಿಕೊಂಡಿರುವ ನಮ್ಮ ನೆರೆ ಮನೆಯವರನ್ನು ‘ನಿಮ್ಮ ಕೈತೋಟದ ಸೈಟ್ ನವರು ಬಂದು ಇದನ್ನೆಲ್ಲ ತೆಗೆಯಿರಿ ಎಂದರೆ ಏನ್ ಮಾಡ್ತೀರಾ?’ ಎಂದಿದ್ದಕ್ಕೆ ಅವರು ‘ಅರೆ, ಬಂದಾಗ ನೋಡಿಕೊಂಡರಾಯಿತು, ಅಲ್ಲಿ ತನಕ ಹೂ, ಹಣ್ಣು, ನೋಡಿಕೊಂಡು, ಸೊಪ್ಪು ತರಕಾರಿ ಬೆಳೆದುಕೊಂಡು ಖುಷಿಪಟ್ಟರಾಯಿತು ಬಿಡಿ’ ಎಂದು ನಕ್ಕರು.

ಇತ್ತೀಚೆಗೆ ಸಿಮೆಂಟ್ ಕಬ್ಬಿಣಗಳ ಬೆಲೆ ಗಗನಕ್ಕೇರಿ, ಮರಳು ಸಿಗುವುದು ದುಸ್ತರವಾಗಿರುವಾಗ ನಮ್ಮ ಬಡಾವಣೆಯಲ್ಲಿ ಮನೆಗಳು ಏಳುತ್ತಿರುವ ದರ ಕಡಿಮೆಯಾಗಿದೆ. ಹಾಗಾಗಿ ಈ ತಾತ್ಕಾಲಿಕ ತೋಟಗಳಿಗೆ ಸದ್ಯಕ್ಕಂತೂ ಯಾವುದೇ ಅಪಾಯವಿಲ್ಲ. ಮನೆಯ ಸುತ್ತಮುತ್ತ ದೊಡ್ಡ ದೊಡ್ಡ ಕಟ್ಟಡಗಳೇನೂ ಇಲ್ಲ. ಹಾಗಾಗಿ ವಿಶಾಲ ನೀಲಾಕಾಶ ಕಣ್ಮನ ತುಂಬುತ್ತದೆ. ಹಗಲು ರಾತ್ರಿ, ಸೂರ್ಯಚಂದ್ರರು ಮನೆಯ ಕಿಟಕಿಗಳಿಂದ ಇಣುಕಿ ನೋಡಿ ಮುಂದೆ ಸಾಗುತ್ತಾರೆ. ಚಂದ್ರಗ್ರಹಣವನ್ನು ಸಂಪೂರ್ಣವಾಗಿ ನೋಡಿದ ಖುಷಿಯಿದೆ. ರಾತ್ರಿ ಟೆರೇಸ್ ನಿಂದ ಕಾಣುವ ನಕ್ಷತ್ರಲೋಕದ ವೈಭವ ಯಾವ ಹೆಚ್ ಡಿ ಟಿವಿಯೂ ತೋರದು.

ಗೃಹಪ್ರವೇಶ ಆದಾಗಿನಿಂದ ಇಲ್ಲಿಯವರೆಗೂ ಹೀಗೆ ನಾನಾ ತರಹದ ಅನುಭವಗಳಾಗಿ ನಿಧ ನಿಧಾನವಾಗಿ ಇಲ್ಲಿಯ ಪರಿಸರ ನನ್ನೊಳಗೆ ಇಳಿಯುತ್ತಿದೆ. ಅಂದಿನಿಂದ ಇಂದಿನವರೆಗೂ ಕಂಡ, ಕಾಣುತ್ತಿರುವ ಜೀವಸಂಕುಲ ಮೊದಮೊದಲು ತಲ್ಲಣ ಉಂಟುಮಾಡಿದರೂ ಈಗೀಗ ರೂಢಿಯಾಗಿ ಹೋಗಿದೆ. ತನ್ನ ಕುಂಡದ ಮನೆ ಹುಡುಕಿಕೊಂಡು ಪ್ರತಿರಾತ್ರಿ ವಟಗುಟ್ಟುತ್ತ ನಮ್ಮ ಕಪ್ಪೆರಾಯ ಬಂದಾಗ ನನ್ನ ಮಗಳು ‘ಅಮ್ಮ ನೋಡು, ನಿನ್ನ ಕಿರಿಮಗ ಬಂದ’ ಎಂದು ನಗುತ್ತಾಳೆ.

ಬಡಾವಣೆಯಲ್ಲಿ ಹೀಗೆ ಮಳೆಗಾಲ ಕಳೆದು ಸೊಪ್ಪು ಸೆದೆ, ಹುಲ್ಲು ಕಡ್ಡಿ, ಗಿಡ ಪೊದೆಗಳೆಲ್ಲ ಬೆಳೆದು ನಿಂತಿರುವಾಗ, ಯಾರಾದರೂ ಕೆಲವರು ನಗರ ಪಾಲಿಕೆಯವರಿಗೆ ಹೇಳಿ ತಮ್ಮ ಮನೆಯ ಅಕ್ಕ ಪಕ್ಕದ ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡಿಸುತ್ತಾರೆ. ಇಲ್ಲದೇ ಹೋದರೆ ತಾವೇ ಒಣಗಿ ನಿಂತಿರುವ ಹುಲ್ಲಿನ ರಾಶಿಗೆ ಬೆಂಕಿ ಕೊಟ್ಟು, ಉರಿದು ಹೋಗುವ ತನಕ ಕಾವಲು ಕಾದು ನಂದಿಸುತ್ತಾರೆ.

ಆಗ ಕೆಲದಿನ ಬಡಾವಣೆಯಲ್ಲಿ ಓಡಾಡುವಾಗ ನೆಲ ನೋಡಲು ಆಗದು. ಅಲ್ಲಲ್ಲೇ ಕಪ್ಪು ಕಪ್ಪು ಸುಟ್ಟ ಗಾಯದ ಕಲೆಗಳಂತೆ ಕಾಣುವ ಭೂಮಿಯ ನೋಡಲು ಬೇಸರವಾಗುತ್ತದೆ. ಆದರೆ ಮನೆಗಳ ಸುತ್ತ ಮುತ್ತ ಸೆದಕಲು ಇರದಂತೆ ನೋಡಿಕೊಳ್ಳುವುದು ಕೂಡ ಅನಿವಾರ್ಯ. ಆದರೆ ಒಂದೆರಡು ತಿಂಗಳು ಮಾತ್ರ ಈ ದೃಶ್ಯ, ಮತ್ತೆ ನಿಧ ನಿಧಾನವಾಗಿ ನೆಲ ಹಸಿರಾಗಲು ಶುರುವಾಗುತ್ತದೆ.

ಕೆಲಸದಿಂದ ಸಾಕಾಗಿ ಬಂದು ಸುಧಾರಿಸಿಕೊಳ್ಳುತ್ತಾ ಕಿಟಕಿಯಿಂದಾಚೆ ನೋಡಿದಾಗ ಕಾಣುವ ಹೂ, ಹಸಿರು ಹುಲ್ಲಿನ ನಡುವೆ ಮೇಯುವ ದನಕರು, ಆಡು ಕುರಿಗಳು ಅವುಗಳನ್ನು ಅಟ್ಟಿಕೊಂಡು ಬಂದು ಮೇಯಲು ಬಿಟ್ಟು ಅಲ್ಲೇ ರಸ್ತೆ ಬದಿಯಲ್ಲಿ ಬೆಳೆದು ಹರಡಿರುವ ಹುಲ್ಲು ಹಾಸಿನ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಇರುವ ಅಜ್ಜಿಯಂದಿರು, ಪಂಚೆ ಎತ್ತಿ ಕಟ್ಟುತ್ತಾ, ಆಡು, ಕುರಿಗಳ ಅದ್ದಲಿಸುತ್ತ ಸಾಗುವವರು, ಕುರಿಗಳ ಹಿಂದೆ ಕಾವಲಿನ, ತೋಳದಂತಹ ನಾಯಿಗಳು, ಅವುಗಳ ಸುತ್ತಲೂ ಓಡಾಡಿ, ಹಾರಾಡಿಕೊಂಡಿರುವ ಬೆಳ್ಳಕ್ಕಿಗಳ ಹಿಂಡುಗಳ ಕಂಡಾಗಲೆಲ್ಲ ಊರಿನ ನೆನಪಾಗಿ, ಈ ಬಡಾವಣೆ ಯಾವತ್ತೂ ಹೀಗೆ ಇರಲಿ, ಇಲ್ಲಿ ಹೆಚ್ಚಿನ ಮನೆಗಳಾಗದಿರಲಿ, ಮನೆಗಳಿಂದ ಮುಚ್ಚಿಹೋಗುವ ಮುನ್ನ ರಸ್ತೆಯಂಚಿನ ಗಿಡಗಳು ಸೊಕ್ಕಿ ಬೆಳೆದು ನಿಂತು ಇದನ್ನೊಂದು ವನವನ್ನಾಗಿಸಲಿ ಎಂದು ನನ್ನ ಮನಸ್ಸು ಕನಸು ಕಾಣುತ್ತದೆ.

‍ಲೇಖಕರು Admin

June 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: