ಸೆಟ್ ದೋಸೆ ತಿಂದು, ಕಾಫಿ ಕುಡಿದುಕೊಂಡು ಇದ್ದವರಿಗೆ ಬೆಚ್ಚಿಬೀಳಿಸಿದ ಚಿತ್ರಗಳು..

ಕಣ್ಣೆದುರು ಬಿಚ್ಚಿಕೊಂಡ ನಮ್ಮ ಜಗತ್ತು

g p basavaraju

ಜಿ.ಪಿ.ಬಸವರಾಜು

ಜಗತ್ತು ಈಗ ನಮ್ಮ ಅಂಗೈಯಲ್ಲಿದೆ ಎನ್ನುವ ಮಾತು ಹಳೆಯದು. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಅಗಾಧ ಬೆಳವಣಿಗೆಗಳನ್ನು ಹೇಳಲು ಈ ಮಾತನ್ನು ಬಳಸುತ್ತಾರೆ. ಜಗತ್ತು ಎಷ್ಟು ಜನರ ಅಂಗೈಯಲ್ಲಿದೆ; ಈ ಜಗತ್ತನ್ನು ಎಷ್ಟು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ? ಈ ಜಗತ್ತಿನ ಉಸಿರಾಟದ ಏರಿಳಿತವನ್ನು ಎಷ್ಟು ಜನ ಅನುಭವಿಸಿದ್ದಾರೆ? ಹೋಗಲಿ ಅದರ ಹೊರಗಿನ ರೂಪದ

film fst5ಅರಿವಾದರೂ ನಮಗೆ ಇದೆಯೇ? ಪಕ್ಕದ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ನೇಪಾಳ ಮೊದಲಾದ ರಾಷ್ಟ್ರಗಳಲ್ಲಿ ಜನ ಹೇಗೆ ಬದುಕುತ್ತಿದ್ದಾರೆ, ಅವರ ಆಹಾರ, ಉಡುಪು, ರುಚಿ, ಅಭಿರುಚಿ ಇತ್ಯಾದಿ ಎಲ್ಲವೂ ನಮಗೆ ಗೊತ್ತೇ? ಇಂಥ ಪ್ರಶ್ನೆಗಳನ್ನು ಎತ್ತಿದರೆ ಉತ್ತರ ಸಿಕ್ಕುವುದೇ ಇಲ್ಲ. ವಿಮಾನದಲ್ಲಿ ಹಾರಾಡಿ ಬಂದವರು ಚೂರುಪಾರು ವಿವರಗಳನ್ನು ನೀಡಬಹುದು. ಅವೆಲ್ಲ ಹಕ್ಕಿನೋಟದಲ್ಲಿ ಕಂಡಂಥ ಸಂಗತಿಗಳು. ಇಲ್ಲವಾದರೆ ಅಲ್ಲಿ ಇಲ್ಲಿ ಓದಿದ, ಗೂಗಲ್ ಗುರು ಹೇಳಿದ ಸಂಗತಿಗಳು. ಅದರಾಚೆಗಿನ ಸೂಕ್ಷ್ಮಗಳು ನಮಗೆ ಗೊತ್ತಿರುವುದೇ ಇಲ್ಲ.

ಕಳೆದ ವಾರ ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿದ್ದ ಕೆಲವರಿಗಾದರೂ ‘ಜಗತ್ತನ್ನು’ ನೋಡುವ, ಕೇಳುವ, ತಿಳಿಯುವ ಬಹುದೊಡ್ಡ ಅವಕಾಶ ತಾನಾಗಿಯೇ ಒದಗಿಬಂತು. 8ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಚಿತ್ರಪ್ರೇಮಿಗಳು ನೋಡಿದ ಚಿತ್ರಗಳು ಎಷ್ಟು ಎನ್ನುವುದು ಮುಖ್ಯವಲ್ಲ. ಅವರ ಮುಂದಿದ್ದ ಚಿತ್ರಗಳು ಜಗತ್ತಿನ ಅನೇಕ ರಾಷ್ಟ್ರಗಳ ಪ್ರತಿಭಾವಂತರನ್ನು ತೋರಿಸಿದವು; ಅನೇಕ ರಾಷ್ಟ್ರಗಳ ಸಾಮಾಜಿಕ ಸನ್ನಿವೇಶವನ್ನು ತೆರೆದಿಟ್ಟವು; ಸೂಕ್ಷ್ಮವಾಗಿ ರಾಜಕೀಯ ಪರಿಸ್ಥಿತಿಯನ್ನು ಧ್ವನಿಸಿದವು. ಹೇಳಲಾಗದ ಮಾತುಗಳು ಕ್ಯಾಮೆರಾದಲ್ಲಿ ಕಾಣಿಸಿಕೊಂಡವು. ಸೆಟ್ದೋಸೆ ತಿಂದು, ಕಾಫಿ ಕುಡಿದು ಸಂಜೆಯ ಹವೆಯನ್ನು ಆಳವಾಗಿ ಒಳಗೆ ಎಳೆದುಕೊಂಡು, ಹೊರಗೆ ಬಿಡುತ್ತ ಬಿಡುಬೀಸಾಗಿ ಹೆಜ್ಜೆ ಹಾಕುತ್ತ ನೆಮ್ಮದಿಯಲ್ಲಿದ್ದ ಜನರನ್ನು, ವಿಶೇಷವಾಗಿ ಮೈಸೂರಿಗರನ್ನು ಬೆಚ್ಚಿಬೀಳಿಸಿದ ಚಿತ್ರಗಳೂ ಈ ಉತ್ಸವದಲ್ಲಿ ಪ್ರದರ್ಶನಗೊಂಡವು.

ಅನೇಕ ರಾಷ್ಟ್ರಗಳಲ್ಲಿ ಇವತ್ತಿಗೂ ಪ್ರಜಾಪ್ರಭುತ್ವವಾಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿ ಇನ್ನೂ ಕನಸಿನ ಗಂಟೆ. ಉಸಿರುಕಟ್ಟಿಸುವ ರಾಜಕೀಯ, ಮುಕ್ತವಾಗಿ ಬದುಕಲು ಸಾಧ್ಯವಾಗದ ಧಾರ್ಮಿಕ ಕಟ್ಟುಪಾಡುಗಳು, ಸಾಮಾಜಿಕ ನಿಷೇಧಗಳು, ಬಾಲ್ಯ ವಿವಾಹಗಳು, ಹೆಣ್ಣನ್ನು ಗುಲಾಮಳನ್ನಾಗಿ ಕಾಣುವ ಮನೋಧರ್ಮದ ಪುರುಷ ದಬ್ಬಾಳಿಕೆ ಸಮಾಜಗಳು; ಭಾರತೀಯ ಬದುಕನ್ನೇ ಇನ್ನೊಂದು ರೀತಿಯಲ್ಲಿ ಬಿಂಬಿಸುವ ಮುಸ್ಲಿಂ ರಾಷ್ಟ್ರಗಳು; ಅಲ್ಲಿನ ಬಡತನ, ಮೌಢ್ಯಗಳು, ನಿರುದ್ಯೋಗ, ಹಸಿವು; ಇದೆಲ್ಲದರ ಮೇಲೆ ಮುಸುಕು film fest3ಎಳೆದು ಪ್ರತಿಯೊಂದು ರಾಷ್ಟ್ರವೂ ತನ್ನ ‘ಪ್ರಗತಿ’ಯನ್ನು ತೋರಿಸುವ ಜಾಹೀರಾತುಗಳನ್ನೇ ಟಾಂಟಾಂ ಮಾಡುತ್ತಿರುತ್ತದೆ. ಈ ಜಾಹೀರಾತು ನೋಡಿ, ಮರುಳಾಗಿ, ಸುಂದರ ಮುಖಗಳನ್ನೇ ಕಾಣಲು ಹೊರಡುವ ಜಗತ್ ಯಾತ್ರಿಗಳು; ಪ್ರವಾಸೋದ್ಯಮದ ಮೂಲಕ ವಿದೇಶೀ ವಿನಿಮಯಗಳಿಸಲು ತುದಿಗಾಲಲ್ಲಿ ನಿಂತ ರಾಷ್ಟ್ರಗಳು. ಹಾಗಾದರೆ ಅಲ್ಲಿನ ನಿಜವಾದ ಸ್ಥಿತಿಗತಿಗಳನ್ನು ಹೇಳುವವರು ಯಾರು? ತೋರಿಸುವವರು ಯಾರು? ಇಂಥವರೂ ಇದ್ದಾರೆ, ನಿಜಸ್ಥಿತಿಯ ಮೇಲೆ ಕ್ಯಾಮರಾ ಓಡಿಸಿದವರು. ಅಂಥವರನ್ನು ಈ ಚಿತ್ರೋತ್ಸವ ನಮ್ಮೆದುರಿಗೆ ತಂದು ನಿಲ್ಲಿಸಿತು.

ಹಳ್ಳಿಗಾಡಿನ ದೃಶ್ಯಗಳು, ಭೂವಿನ್ಯಾಸಗಳು, ಬೆಟ್ಟಗುಡ್ಡಗಳು, ಕಾಡು ಕಣಿವೆಗಳು, ನಗರದ ಸುಂದರ ಮುಖದಂತೆಯೇ ಜೋಪಡಿಪಟ್ಟಿಗಳು; ಸ್ವರ್ಗವೂ ಅಲ್ಲಿಯೇ; ನರಕವೂ ಅಲ್ಲಿಯೇ. ಅನೇಕ ಚಿತ್ರಗಳು ಈ ಹೊರ ರೂಪಗಳನ್ನು ತೋರಿಸಿದವು. ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರ ಎಷ್ಟೊಂದು ಭಿನ್ನ; ಎಂಥ ವೈವಿಧ್ಯ. ನಗುವ ಹಸಿರಿನಂತೆಯೇ, ಮೈತೆರೆದು ನಿಂತ ಮರಳುಗಾಡು, ಸಾಲುಸಾಲು ಶಿಖರಗಳು, ಬಿಕೋ ಎನ್ನುವ ಬಯಲುಗಳು. ಹೊರ ರೂಪ ನೋಡುತ್ತ ನೋಡುತ್ತ, ಆಹಾ ನಮ್ಮ ಜಗತ್ತು ಎಷ್ಟೊಂದು ವಿಚಿತ್ರಗಳನ್ನು ಹೊತ್ತುಕೊಂಡಿದೆಯಲ್ಲಾ ಎಂದು ಸೋಜಿಗವಾಗುತ್ತಿತ್ತು. ಮನುಷ್ಯ ಜಗತ್ತಿನ ಯಾವುದೇ ಭಾಗದಲ್ಲಿರಲಿ, ಯಾವುದೇ ರಾಷ್ಟ್ರದಲ್ಲಿರಲಿ, ಅವನ ಒಳಗಿನ ಕುದಿತಗಳು ಮೂಲದಲ್ಲಿ ಒಂದೇ ತೆರನಾಗಿರುತ್ತವೆ. ಪ್ರೀತಿ, ದ್ವೇಷ, ಅಸೂಯೆ, ಸಣ್ಣತನ, ದೊಡ್ಡತನ ಇತ್ಯಾದಿ ಚರ್ಮಕ್ಕಂಟಿಕೊಂಡ ಅಪ್ಪಟ ಮನುಷ್ಯ ಗುಣಗಳು ಇತ್ಯಾದಿ. ಮನುಷ್ಯನ ಒಳಗಿನ ಆಳವನ್ನು ಹಿಡಿಯುವುದು ಎಂಥ ಸವಾಲಿನ ಕೆಲಸ. ಒಳ ಮತ್ತು ಹೊರಗಿನ ಈ ಮುಖಗಳನ್ನು ಹಿಡಿದ ಚಿತ್ರಗಳು ಧ್ವನಿಸಿದ ಸಂಗತಿಗಳು ನೂರಾರು.

ನಾಗರಿಕತೆಯ ತುಟ್ಟತುದಿಯಲ್ಲಿ ಇವತ್ತು ಮನುಷ್ಯ ಇದ್ದಂತೆ ಕಾಣಿಸುತ್ತಿದ್ದರೂ, ಇನ್ನೂ ನಾಗರಿಕ ಜಗತ್ತಿಗೆ ಮುಖವನ್ನೇ ತೋರಿಸದೆ ಅಮೆಜಾನ್ ಕಾಡುಗಳಂಥ ಕಾಡುಗಳಲ್ಲಿ ಬದುಕುತ್ತಿರುವ ಬುಡಕಟ್ಟುಗಳು, ಅವುಗಳ ನಂಬಿಕೆಗಳು, ಬದುಕಿನ ವಿಧಾನಗಳು, ಬಂಡೆಗಳ ಮೇಲೆ ಚಿತ್ರಗಳನ್ನು ರಚಿಸುವ ಮೂಲಕ ತಮ್ಮ ಕಲೆಯನ್ನು ಮೆರೆಯುವ ಈ ಬುಡಕಟ್ಟುಗಳ ಅಭಿರುಚಿಗಳು ಇಂಥ ಹಲವಾರು ಸಂಗತಿಗಳನ್ನು ಹಿಡಿದಿಟ್ಟ ಅಪರೂಪದ ಚಿತ್ರಗಳು.

film fest1ಎಲ್ಲರನ್ನೂ ಮುಟ್ಟುವ ಉದ್ದೇಶದಿಂದ ಬೇರೆಬೇರೆ ಭಾಷೆಯ ಚಿತ್ರಗಳಿಗೆ ಇಂಗ್ಲಿಷ್ ಸಬ್ ಟೈಟಲ್ ಗಳು ಇರುತ್ತಿದ್ದವು. ಇದು ಸಹಜ ಕೂಡಾ. ಆದರೆ ಒಂದು ಭಾಷೆಯ ಒಡಲಲ್ಲಿ ಅಡಗಿರುವ ಸಂಗೀತವನ್ನು ಕೇಳಬೇಕೆಂದರೆ ಆ ಭಾಷೆಗೆ ಕಿವಿಕೊಡಬೇಕು. ಫ್ರೆಂಚ್, ಜರ್ಮನಿ, ಸ್ಪ್ಯಾನಿಷ್, ಉರ್ದು, ಚೀನಿ, ಜಪಾನಿ ಇತ್ಯಾದಿ ಭಾಷೆಗಳನ್ನು ಕೇಳುವ ಅವಕಾಶ ಈ ಚಿತ್ರಗಳಲ್ಲಿ ಇರುತ್ತದೆ. ಅನೇಕ ಜನ ಪ್ರತಿಭಾವಂತರು ತಮ್ಮ ರಾಷ್ಟ್ರಗಳ ವಾದ್ಯಗಳನ್ನೇ ಬಳಸಿಕೊಂಡು ಸಂಗೀತವನ್ನು ಸಿದ್ಧಗೊಳಿಸಿದ್ದರು. ಮತ್ತೆ ಕೆಲವರು ಉಡುಗೆ ತೊಡುಗೆಗಳಲ್ಲಿ ತಮ್ಮತನವನ್ನು ತೋರಿಸಲು ಪ್ರಯತ್ನಿಸಿದರು. ಜಾನಪದ ನೃತ್ಯಗಳು, ಆಚರಣೆಯ ಅಂಗವಾಗಿ ಕಾಣಿಸಿದ ಕುಣಿತಗಳು, ಮದುವೆಗಳು, ಸಂಭ್ರಮಗಳು ಎಲ್ಲ ದೃಶ್ಯಗಳ ಹಿಂದೆಯೂ ಒಂದು ದೇಶದ ಸಾಂಸ್ಕೃತಿಕ ಸೊಗಡು ಇದ್ದೇ ಇರುತ್ತಿತ್ತು. ಅಂತರ ರಾಷ್ಟ್ರೀಯ ಚಿತ್ರೋತ್ಸವ ಎಂಥ ಅದ್ಭುತ!

ಇವತ್ತಿಗೂ ಕೆಲವು ರಾಷ್ಟ್ರಗಳು ಭಯೋತ್ಪಾದಕರ ಭೀತಿಯ ನೆರಳಿನಲ್ಲಿಯೇ ಬದುಕುತ್ತಿವೆ. ಅಲ್ಲಿನ ಸಾಮಾನ್ಯ ಜನರ ಬದುಕು ಎಷ್ಟೊಂದು ಅಸಹನೀಯ. ಇಂಥ ಪರಿಸ್ಥಿತಿಯನ್ನೂ ದಿಟ್ಟವಾಗಿ ಹೇಳಿದ ಕೆಲವು ಚಿತ್ರಗಳು ಶಾಂತಿಯ, ನೆಮ್ಮದಿಯ ಬದುಕಿಗೆ ಜನ ಹಾತೊರೆಯುತ್ತಿರುವುದನ್ನು ತೋರಿಸಿದವು. ಯುದ್ಧ ಮತ್ತು ಹಿಂಸೆಯನ್ನು ಮನುಷ್ಯನೇ ಹುಟ್ಟುಹಾಕಿದ್ದರೂ, ಅದನ್ನು ಯಾವ ಸಮಾಜವೂ ಓಲೈಸುವುದಿಲ್ಲ; ನಿತ್ಯದ ಬದುಕಿಗೆ ಬೇಕಾಗಿರುವುದು ನೆಮ್ಮದಿ; ಶಾಂತಿ. ಈ ಹಂಬಲದಲ್ಲೇ ಶಾಂತಿಯನ್ನು ಧ್ಯಾನಿಸಿದಂಥ ಚಿತ್ರಗಳೂ ಈ ಉತ್ಸವದಲ್ಲಿದ್ದವು.

ಇನ್ನೊಂದು ಮಹತ್ವದ ಅಂಶವೂ ಇಲ್ಲಿ ಕಾಣುತ್ತಿತ್ತು. ಕೆಲವು ಚಿತ್ರಗಳ ನಿಮರ್ಾಣ, ಎರಡು ಮೂರು ರಾಷ್ಟ್ರಗಳ ಜಂಟಿ ನಿರ್ಮಾಣವಾಗಿತ್ತು. ಒಂದು ರಾಷ್ಟ್ರದ ಜೊತೆ ಇನ್ನೊಂದು ರಾಷ್ಟ್ರ ಕೈಜೋಡಿಸುವುದಕ್ಕೆ ಎಷ್ಟೊ ಅಡ್ಡಿ ಆತಂಕಗಳು; ಆದರೆ ಚಿತ್ರ ನಿರ್ಮಾಣ ಒಂದು ಘನ ಉದ್ದೇಶಕ್ಕೆ, ಮನುಷ್ಯನ ಒಳಿತಿನ ಕಡೆಗೆ ಮುಖಮಾಡಿದ್ದರೆ ಅದನ್ನು ಬೆಂಬಲಿಸಲು ಜನ ಇರುತ್ತಾರೆ; ಅವರಿಗೆ ರಾಷ್ಟ್ರಗಳು ಮುಖ್ಯವಾಗುವುದಿಲ್ಲ.

ಕಲೆ ಎನ್ನುವುದು ನಿರಂತರ ಸವಾಲಿನ ಕೆಲಸ. ಇರುವುದನ್ನು ಇರುವಂತೆಯೇ ಹೇಳಬೇಕು; ಹಾಗೆಯೇ ತೋರಿಸಬೇಕು ಎಂದಾಗ ಕಲೆಯ ನಿಜವಾದ ಸವಾಲು ಎದುರಾಗುತ್ತದೆ. ಅಂತರಂಗದ ದನಿಗೆ ಓಗೊಟ್ಟು ಕೆಲಸ ಮಾಡುವವನು ಸತ್ಯದ ಮೇಲೆ ಮುಸುಕೆಳೆದು ಮಾತನಾಡಲಾರ. ಕಲಾತ್ಮಕತೆ ಎನ್ನುವುದು ಕಲೆಯ ಜೊತೆಗೇ ಇರುವಂಥದ್ದು ಎಂಬುದು ನಿಜವಾದರೂ, ಇವತ್ತಿನ ಕಲಾವಿದ film fest4ಕಲಾತ್ಮಕತೆಗಷ್ಟೇ ತೃಪ್ತಿಪಡಲಾರ. ಅವನನ್ನೇ ಸುತ್ತುವರಿದ ಸಾವಿರಾರು ಸಮಸ್ಯೆಗಳಿವೆ. ಸಮಕಾಲೀನ ಜಗತ್ತು ಎನ್ನುವುದು ನಿರಂತರ ಕಾಡುವ ಜಗತ್ತು. ನಿರಂತರ ಸೆಣಸಾಟದ ಜಗತ್ತು. ತಮ್ಮ ರಾಷ್ಟ್ರಗಳಲ್ಲಿರುವ ರಾಜಕೀಯ ವ್ಯವಸ್ಥೆಯಲ್ಲಿ, ಮುಕ್ತವಾಗಿ ಹೇಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಹೇಳುವ ಹಟದಲ್ಲಿ, ಸೂಕ್ಷ್ಮಾತಿಸೂಕ್ಷ್ಮ ಸಾಧ್ಯತೆಗಳನ್ನು ಹುಡುಕಿ ಹೊರಟ ಚಿತ್ರಗಳು. ಇವೆಲ್ಲ ಕಲಾತ್ಮಕ ಸಾಧ್ಯತೆಯನ್ನು ಹೆಚ್ಚಿಸುವ, ಶೋಧಿಸುವ ದಾರಿಗಳೇ. ನಮ್ಮ ಸುತ್ತಲಿನ ಜಗತ್ತು ಹೇಗಿದೆ?

ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಜಂಟಿಯಾಗಿ ವ್ಯವಸ್ಥೆ ಮಾಡಿದ್ದ ಈ ಚಿತ್ರೋತ್ಸವ ಮೊದಲ ಬಾರಿಗೆ ಮೈಸೂರನ್ನು ಮುಟ್ಟಿತು. ಇದು ಮೆಚ್ಚುವ ಅಂಶವೇ. ಆದರೆ ಇನ್ನಷ್ಟು ಜನರ ಹತ್ತಿರ ಹೋಗಲು ಸಾಧ್ಯವಾಗಿದ್ದರೆ, ಅದರ ಪ್ರಯೋಜನ ಇನ್ನೂ ಹೆಚ್ಚಿನದಾಗಿರುತ್ತಿತ್ತು.

‍ಲೇಖಕರು Admin

February 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಸಂತ

    The role of Mysore Film Society in bringing BiFFES to mysore is very notable. Manu and Muddukrishana sir needs a special mention here.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: