ಸೂರಿ -9:ಕೋಟು ಪರಿತ್ಯಕ್ತ ಅಪ್ಸರೆಯಂತೆ ನೆಲದ ಮೇಲೆ ಬಿತ್ತು

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 9

 

ತುಕ್ಕೋಜಿ ಚೀಲವನ್ನು ಕೈಗೆತ್ತಿಕೊಂಡ. ಒಳಗಿದ್ದ ಪ್ರಜಾಮತದ ಹಾಳೆಗಳ ಮಧ್ಯೆಯಿದ್ದ ಕರೀಬಟ್ಟೆಯ ಮುದ್ದೆಯನ್ನು ಈಚೆಗೆ ಸೆಳೆದ. ಪ್ರಜಾಮತದ ಹಾಳೆಗಳನ್ನು ರಪರಪ ಹರಿದು ಮುದ್ದೆ ಮಾಡಿ, ಮೂಲೆಗೆಸೆದು, ಕೋಟನ್ನು ಕೈಲಿ ಎತ್ತಿ ಹಿಡಿದು ನೋಡಿದ. ಏನೂ ಹೊಳೆಯಲಿಲ್ಲ. ಹಳೇಬೀಡು ಸುಂದರರಾಯರತ್ತ ನೋಡಿದ.
’ಸೊಲೂಪ ಹರ‍್ದಂಗಿದೆ. ರಿಪೇರಿ ಮಾಡಬೇಕೂ-’
ತುಕ್ಕೋಜಿಗೆ ಒಮ್ಮೆಲೇ ಅರ್ಥವಾಗಲಿಲ್ಲ. ತಾನು ಯಾವುದನ್ನು ರಿಪೇರಿ ಮಾಡಬೇಕು, ಯಾವುದು ಸೊಲೂಪ ಹರಿದಿದೆ ಅಂತ. ಕೋಟನ್ನೇ ಮತ್ತೆ ಕೈಲಿ ಹಿಡಿದು ಬಿಚ್ಚಿ ನೋಡಿದ. ಹಿಂದೆ ಮುಂದೆ ಮಾಡಿ ನೋಡಿದ. ಮತ್ತೆ ಅದೇ ಸಮಸ್ಯೆ ಕಾಡಿತು. ಯಾವ ದಿಕ್ಕಿನಿಂದ ನೋಡಿದರೂ ಈ ಕೋಟು ಅನ್ನುವ ವಸ್ತು ರಿಪೇರಿಗೆ ಹೇಗೆ ಲಾಯಕ್ಕು ಎಂದು ಹೊಳೆಯಲಿಲ್ಲ. ಇದುನ್ನ ಕೋಟು ಅಂತ ಯಾವ ಸೂಳಾಮಗ ಕರೀತಾನೆ. ಅದನ್ನೇ ಬಾಯಿಬಿಟ್ಟು ಕೇಳಿದ.
’ಯದನ್ನ ರಿಪೇರಿ ಮಾಡಬೇಕ್ರೀ?’
’ಕೋಟ್ನ. ಸೊಲೂಪ ಹರ‍್ದಂಗಿದೆ.’
’ಏನಿದು, ಕೋಟಾ?’
ಹಳೇಬೀಡು ಸುಂದರರಾಯರು ‘ಹ್ಹೀ ಹ್ಹೀ‘ ನಕ್ಕರೇ ಹೊರತು ಉತ್ತರಿಸುವ ಬಾಬತ್ತಿಗೆ ಹೋಗಲಿಲ್ಲ.
’ಯಿದ್ನ ಯಲ್ಲಿ ರಿಪೇರೀ ಮಾಡಬೇಕ್ರೀ?’
’ತೋಳೂ, ಬುಜಾ ಸೊಲ್ಪ ಹರ‍್ದಿದೆ. ಗುಂಡಿಗಳು ಬಿಚ್ಕೆಂಡಿದವೆ.’
ತುಕ್ಕೋಜಿ ಕೋಟಿನ ತೋಳೂ ಭುಜ ನೋಡಿದ.
’ಯಿದುನ್ನ ಹೆಂಗೆ ರಿಪೇರೀ ಮಾಡದ್ರೀ. ಯಲ್ಲಾ ಪಿಸ್ದದೆ.’
’ವಳಾಗಿಂದ ವಂದು ಬಟ್ಟೆ ಕೊಟ್ಟ್ ಪ್ಯಾಚ್ ಹಾಕ್‌ಬೋದಲ್ವಾ-’
’ವಳಗಿಂದ ಪ್ಯಾಚ್ ಹೆಂಗೆ ಕೊಡಕಾಗ್ತತೆ. ಯಲ್ಲಾ ಹರುದು ಜೀರ್ಣ ಆಗೋಗೆದೆ. ಪ್ಯಾಚ್ ಬಟ್ಟೇನ್ನ ಯದಕ್ಕೆ ಹೊಲೀಬೇಕು. ಯೇನರಾ ಒಂದು ಗಟ್ಟಿ ಬುಡ ಬೇಕಲ್ಲಾ ಹೊಲಿಯಕೆ. ಯಿಲ್ಲೇನಿದೆ. ಬರೇ ತೂತು. ತೂತಿಗೆ ಯೇನರಾ ಹೊಲಗೆ ನಿಲ್ತತೇನ್ರೀ-’
’ಅಲ್ಲಾ, ವಳಾಗಿಂದ ವಂದು ಬಟ್ಟೆ ಕೊಟ್ರೆ-’
’ಮತ್ತದೇ ಅಂತೀರಿ. ಯದಕ್ಕೆ ಬಟ್ಟೆ ಕೊಡಬೇಕು. ಅದುನ್ನ ಯದಕ್ಕೆ ಹೊಲೀಬೇಕ್ರೀ. ತೂತಿಗೆ ಹೊಲಿಗೆ ಹಾಕದು ಯಿನ್ನೂ ನಾನು ಕಲ್ತಿಲ್ಲ.’
’ನೀನು ಮನಸ್ಸು ಮಾಡಿದ್ರೆ ಯೇನಾಗಲ್ಲ ಹೇಳು. ನಿನ್ನಂತಾ ಯಕ್ಸಪರ್ಟೇ ಹಿಂಗಂದ್ರೆ ಹೆಂಗೆ. ಯೇನಾರಾ ಮಾಡಬೇಕಪಾ.’ ಹಳೇಬೀಡು ಸುಂದರರಾಯರು ಗೋಗರೆದರು.
ತುಕ್ಕೋಜಿಗೆ ಇಂಚಿಂಚಾಗಿ ವ್ಯವಧಾನ ಕರಗುತ್ತಿತ್ತು. ಮೊದಲೇ ಹೆಣ್ತೀ ಮೇಲೆ ಸಿಟ್ಟು. ಅದರ ಮೇಲೆ ಇದ್ಯಾವುದೋ ಚಿಂದಿ ರಿಪೇರಿ ಗೋಳು. ನಾಳೆ ಸಾಯಂಕಾಲದಗೆ ಆ ಪಲ್ಲಾಗಟ್ಟಿ ಫ್ಯಾಮಿಲಿ ಮದುವೆ ಬಟ್ಟೆ ಮುಗುಸ್ಬೇಕು. ತಥ್, ಈ ಟೈಲರ್ ಕೆಲ್ಸಾನೇ ಬೇಡ.
ಸಿಟ್ಟಿನಲ್ಲೋ ಬೇಸರದಲ್ಲೋ ಕೋಟನ್ನು ಮುದ್ದೆ ಮಾಡಿ ಯಂತ್ರದ ಮೇಲೆ ಬಿಸಾಕಿದ.
’ಇದುನ್ನ ರಿಪೇರಿ ಮಾಡದೂ ಒಂದೇ, ಶ್ಯಾಟಕ್ಕಾಕ್ಕೆಂಡಿರ ಗಂಟು ಬಿಚ್ಚದೂ ವಂದೇ.’
ಆ ಕೋಟು ಪರಿತ್ಯಕ್ತ ಅಪ್ಸರೆಯಂತೆ ಳೋಯ್ ಎಂದು ಬಾಯಿ ತೆಗೆದು ನೆಲದ ಮೇಲೆ, ಬಟ್ಟೆ ತುಂಡುಗಳ ನಡುವೆ ಅಂಗತ್ತ ಬಿತ್ತು. ಹಳೇಬೀಡು ಸುಂದರರಾಯರಿಗೆ ಎದೆಗೇ ಕೊಳ್ಳಿಯಿಟ್ಟಂತಾಯಿತು. ಹೊಟ್ಟೆಯಲ್ಲಿ ಉರಿಯೆದ್ದ ಕರುಳಿನ ಯಾವುದೋ ಭಾಗ ಚುರ್ರೆಂದಿತು.
ತನ್ನ ಕೋಟನ್ನು ಹೀಯಾಳಿಸಿದ್ದೂ ಅಲ್ಲದೇ ಅದನ್ನು ಇಶಿ ವರೆಸಿದ ಕಾಗದದಂತೆ ಮುದುಡಿ ಎಸೆದದ್ದನ್ನು ನೋಡಿದರೆ ಯಾವನಿಗಾದರೂ ಸ್ವಲ್ಪವಾದರೂ ಸಿಟ್ಟು ಬರಬೇಕಿತ್ತು. ಆದರೆ ದಾವಣಗೆರೆಯ ಚರಿತ್ರೆಯನ್ನು ಬಲ್ಲವರಾರಿಗೂ ಹಳೇಬೀಡು ಸುಂದರರಾಯರು ಸಿಟ್ಟಿಗೆದ್ದ ಯಾವ ಕ್ಷಣವೂ ನೆನಪಿಲ್ಲ.
ಹಾಗಾಗಿ ಹಳೇಬೀಡು ಸುಂದರರಾಯರು ಸಾವಧಾನದಿಂದ ನೆಲದ ಮೇಲೆ ಬಿದ್ದಿದ್ದ ಕೋಟನ್ನು ಕೈಗೆತ್ತಿಕೊಂಡು, ’ಹಿಂಗೆ ಒಂದೇಟಿಗೇ ಯಿಲ್ಲಾಂದ್ರೆ ಹೆಂಗೆ ಮತ್ತೆ. ಒನ್ಕೈ ನೋಡಬೇಕಪಾ. ಯಲ್ಲಾರೂ ಹೊಸಾ ಬಟ್ಟೇನೆ ಹೊಲ್ಕೊಡೂ ಅಂತ ಬರ‍್ತರೇನು? ಒನ್ಸರ್ತಿ ನಿನ್ ಕೈ ಚಳಕಾ ತೋರ‍್ಸು’ ಎಂದು ಆ ಕೋಟನ್ನು ಮತ್ತೆ ತುಕ್ಕೋಜಿಯ ಹೊಲಿಗೆ ಯಂತ್ರದ ಮೇಲಿಟ್ಟರು.
ಮುಂದುವರೆಯುವುದು…

‍ಲೇಖಕರು avadhi

November 27, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: