-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 19
ಮನೆ ಮುಟ್ಟುವಷ್ಟರಲ್ಲಿ ಹೆಜ್ಜೆ ಹೆಜ್ಜೆಗೊಮ್ಮೆ ಮೊದಲು ಎಡಗೈ ಆಮೇಲೆ ಬಲಗೈಯ್ಯನ್ನು ಆಕಾಶಕ್ಕೆ ಏರಿಸುವ ಲಯಬದ್ಧವಾದ ಕಲೆಯನ್ನೂ ರೂಢಿಸಿಕೊಂಡರು. ದೂರದಿಂದ ನೋಡಿದವರಿಗೆ ಯಾರೋ ಸಿವಿಲ್ ಡ್ರೆಸ್ಸಿನಲ್ಲಿರುವ ಎನ್ಸೀಸಿ ಹುಡುಗ ರಸ್ತೆಯಲ್ಲಿ ಕವಾಯತು ಮಾಡುತ್ತಾ ನಡೆದು ಬರುತ್ತಿರುವಂತೆ ಕಾಣುತಿತ್ತು. ಆದರೆ ಹಳೇಬೀಡು ಸುಂದರರಾಯರಿಗೆ ಇದ್ಯಾವ ಪರಿವೆಯೂ ಇಲ್ಲ. ವಾಸ್ತವದಲ್ಲಿ ಅವರು ಈ ಭೂಮಿಯ ಮೇಲೆ ಇರಲೇ ಇಲ್ಲ ಎಂದರೂ ಆದೀತು.

ಗುರುವಾರ. ಹಳೇಬೀಡು ಸುಂದರರಾಯರಿಗೆ ನಿಜವಾಗಿಯೂ ನಿರಾಸೆಯಾದದ್ದು ಮಾರನೇ ದಿನ ವಕೀಲ್ ನಾಗರಾಜರಾಯರ ಆಫೀಸಿನಲ್ಲಿ. ಹೊಸ ಮದುವೆ ಗಂಡಿನಂತೆ ಇಡೀ ಆಫೀಸಿನಲ್ಲಿ ಕೆಲಸವಿಲ್ಲದೇ ಸರಭರ ಓಡಾಡಿದರೂ ಅವರ ಹೊಸ ಕೋಟನ್ನು ಯಾರೂ ಗುರುತು ಹಿಡಿಯಲಿಲ್ಲ. ಬರುಬರುತ್ತಾ ಕೋಟಿನೊಳಗೆ ಬೆವೆಯುತ್ತಿದ್ದರೂ ಕೋಟನ್ನು ಎಲ್ಲರ ಗಮನಕ್ಕೆ ತರುವ ಪ್ರಯತ್ನದಲ್ಲಿ ಭುಜಗಳನ್ನು, ಕೈಗಳನ್ನು ಕೊಂಚ ಅಗತ್ಯಕ್ಕಿಂತ ಹೆಚ್ಚೇ ಎನಿಸುವಷ್ಟು ಬೀಸಿಕೊಳ್ಳುತ್ತಾ ಓಡಾಡತೊಡಗಿದರು.
ಆದರೂ ಥೇಟ್ ಆ ಭಗವಂತನಂತೆಯೇ ಆ ಕೋಟು ಕೂಡಾ ಯಾವ ಹುಳು ಮಾನವ ಕಣ್ಣಿಗೂ ಬೀಳಲಿಲ್ಲ. ಬವಳಿ ಬಸವಳಿದ ಹಳೇಬೀಡು ಸುಂದರರಾಯರು ಎಲ್ಲ ಪ್ರಯತ್ನಗಳನ್ನೂ ಬಿಟ್ಟು, ಜವಾನನ ಪಕ್ಕ ಬೆಂಚಿನ ಮೇಲೆ ತಮ್ಮ ಜಾಗದಲ್ಲಿ ಕೂತರು. ’ವಸ್ದಾ ಕೋಟೂ’ ಅಂದ ಜವಾನನ್ನು ಒಮ್ಮೆ ಹೆಮ್ಮೆಯಿಂದ ನೋಡಿದರು. ಅವನತ್ತ ಕೃತಜ್ಞತೆಯ ಒಂದು ನಗುವನ್ನು ಬೀರಿ ತಮ್ಮ ಕೋಟನ್ನು ಸವರಿಕೊಂಡರು.
ಅಂತೂ ನಿನ್ನ ಕಣ್ಣಿಗಾದರೂ ಬಿತ್ತಲ್ಲ, ನೀನೇ ಪುಣ್ಯವಂತ ಎಂದು ಹಾರೈಸಿ ದಿನಚರಿಯ ತಮ್ಮ ಮುಂದಿನ ಕಾರ್ಯಕ್ಕೆ ಹೊರಟರು. ಕೋರ್ಟಿನ ಬಯಲಿನಲ್ಲೂ ಎಡಬಿಡದೇ ಅಡ್ಡಾಡಿದರು. ಯಾರೇ ಸಿಕ್ಕರೂ ಅವರನ್ನು ಮಾತಿಗೆಳೆಯಲು ಪ್ರಯತ್ನಿಸಿದರು. ಪೆಟಿಷನ್ ಬರೆದುಕೊಡುವಾಗ, ಗಿರಾಕಿ ಕೊಟ್ಟ ರೊಕ್ಕವನ್ನು ಪಡೆಯುವಾಗ ಬೇಕೆಂದೇ ಕೋಟನ್ನು ಸವರಿಕೊಂಡರು.ಅವರ ದುರಂತ ಅವರ ಬೆನ್ನು ಹತ್ತಿತ್ತೋ ಏನೋ, ಅಂತಹ ದೊಡ್ಡ ಕೋರ್ಟು ಬಯಲಿನಲ್ಲೂ, ಅಂತಹ ಕಿಕ್ಕಿರಿದ ಜನಜಂಗುಳಿಯಲ್ಲೂ ಇವರ ಹೊಸ ಕೋಟನ್ನು ಗುರುತು ಹಿಡಿಯುವ ಪುಣ್ಯವಂತ ಇವರಿಗೆ ಸಿಗಲಿಲ್ಲ.
ಎರಡೇ ದಿನಗಳಲ್ಲಿ ಹಳೇಬೀಡು ಸುಂದರರಾಯರು ಬೇರೆ ಅಲ್ಲ ಅವರ ಕೋಟು ಬೇರೆಯಲ್ಲ ಎನ್ನುವಂತಾಯಿತು. ಧೋ ಧೋ ಎಂದು ಬೆವರುತ್ತಿದ್ದರೂ ಹಳೇಬೀಡು ಸುಂದರರಾಯರು ಕೋಟನ್ನು ಹೆಗಲಿನಿಂದ ಇಳಿಸಲಿಲ್ಲ. ರಸ್ತೆಯುದ್ದಕ್ಕೂ ಕವಾಯತನ್ನು ತಪ್ಪಿಸಲಿಲ್ಲ. ಕೋಟಿನ ಕೀಟಲೆ ಮುಜುಗರಕ್ಕೀಡು ಮಾಡಿದ್ದು ರಾತ್ರಿ ಶ್ರೀರಾಮ ಮಂದಿರದಲ್ಲಿ ಆರತಿ-ಪ್ರಸಾದ ಸ್ವೀಕರಿಸುವಾಗ.
ಎಷ್ಟೇ ಕೈಗಳನ್ನು ಎತ್ತಿದರೂ ಆರತಿ ಸ್ವೀಕರಿಸಲು ಕೈಗಳನ್ನು ಮುಂಚಾಚುವ ಹೊತ್ತಿಗೆ ಕೋಟಿನ ತೋಳು ಪುಸಕ್ಕನೆ ಅಂಗೈ ತನಕ ಜಾರಿ ದೀಪಗಳ ಜ್ವಾಲೆಗಳತ್ತ ಧುಮುಕುತ್ತಿತ್ತು. ಹಂಗೂ ಹಿಂಗೂ ಆರತಿ ಕತೆ ಮುಗಿಯಿತೆಂಬಲ್ಲಿ ಪೂಜಾರಿ ಗುರುವಾರ ಪೂಜೆಯ ಪ್ರಸಾದದ ಡಬರಿಯನ್ನು ಮುಂದೆ ತಂದರು. ತೋಳುಗಳು ಮುನ್ನುಗ್ಗಿ ಅಂಗೈಯನ್ನೂ ಮುಚ್ಚುವ ಮತ್ತದೇ ಕತೆ. ಬೊಗಸೆಯನ್ನು ಎಷ್ಟು ಅಗಲಿಸಿದರೂ ಕೋಟಿನ ತೋಳುಗಳು ಅಂಗೈಯ್ಯನ್ನು ಮುಕ್ಕಾಲು ಮುಚ್ಚಿ ಬಿಡುತ್ತಿದ್ದವು.
ಕೊನೆಗೂ ಕೋಟಿನ ತುದಿಯಲ್ಲಿ ಕಂಡ ಒಂದಿಂಚಗಲದ ಅಂಗೈ ಜಾಗದಲ್ಲಿ ಬಿದ್ದ ಕೇವಲ ಒಂದರ್ಧ ಚಮಚೆ ಪ್ರಸಾದಕ್ಕೆ (ರವೆ ಕೇಸರಿಬಾತು) ಹಳೇಬೀಡು ಸುಂದರರಾಯರು ತೃಪ್ತಿ ಪಡಬೇಕಾಯಿತು. ಅದೆಷ್ಟೋ ತಿಂಗಳುಗಳ ನಂತರ ಹಳೇಬೀಡು ಸುಂದರರಾಯರು ಗುರುವಾರ ಅರೆ ಚಮಚ ಪ್ರಸಾದ ತಿಂದು ಅರೆ ಹೊಟ್ಟೆಯಲ್ಲಿ ಶ್ರೀರಾಮ ದೇವಸ್ಥಾನದಿಂದ ಮರಳ ಬೇಕಾಯಿತು.
ದಾವಣಗೆರೆಯನ್ನು ಉದ್ದಗಲ ಅಡ್ಡಾಡಿದ ಹಳೇಬೀಡು ಸುಂದರರಾಯರು ಕೊನೆಗೂ ಮನೆಯತ್ತ ಹೊರಳುವ ಮನಸ್ಸು ಮಾಡಿದಾಗ ರಾತ್ರಿ ಹನ್ನೊಂದಾಗಿತ್ತೋ ಏನೋ. ಇನ್ನೂ ಸೆಕೆಂಡ್ ಶೋ ಬಿಟ್ಟಿರಲಿಲ್ಲವೇನೋ. ಹೈಸ್ಕೂಲು ಮೈದಾನದ ಆ ತುದಿಯನ್ನು ಮೆಟ್ಟಿದಾಗ ಕತ್ತಲು ಬಾಯಿ ತೆರೆದು ಮೈದಾನದ ಉದ್ದಗಲ ಬಿದ್ದಿತ್ತು. ಕಾಲಿಗಡ್ಡ ಬಂದ ತಗ್ಗು-ದಿಣ್ಣೆಗಳಲ್ಲಿ ಮುಗ್ಗರಿಸುತ್ತ ಹಳೇಬೀಡು ಸುಂದರರಾಯರು ಪುಟಿಯುತ್ತಾ, ಭುಜ ಕುಣಿಸುತ್ತಾ ನಡೆಯುತ್ತಿದ್ದರು.
ಸುಮಾರು ಒಂದು ನೂರಡಿ ನಡೆದಿರಬೇಕು, ಯಾರದ್ದೋ ಚರಪರ ಹೆಜ್ಜೆ ಸದ್ದುಗಳು, ಯಾರೋ ಹಿಂಬಾಲಿಸುತ್ತಿರುವಂತೆ. ಹಿಂತಿರುಗಿ ನೋಡಿದರು. ನಾಲ್ಕು ಜನ, ಅಥವಾ ಐವರಿದ್ದರೋ, ಮಾತಿಲ್ಲದೇ ಇವರ ಹಿಂದೇ ಬರುತ್ತಿದ್ದಾರೆ. ಹಳೇಬೀಡು ಸುಂದರರಾಯರು ಹಿಂತಿರುಗಿ ನೋಡುತ್ತಿದ್ದಂತೇ ನಾಯಿಯನ್ನು ಕರೆಯುವಂತೆ ಚ್ಸು ಚ್ಸು ಸದ್ದು ಮಾಡಿದರು. ಹಳೇಬೀಡು ಸುಂದರರಾಯರು ಒಂದಕ್ಕೆರಡು ಹೆಜ್ಜೆ ಹಾಕಿದರು. ಇನ್ನೊಂದು ಹತ್ತಡಿ. ಯಾರೋ ಹೆಗಲ ಮೇಲೆ ಕೈಯ್ಯಿಟ್ಟರು. ಹಳೇಬೀಡು ಸುಂದರರಾಯರ ಜೀವ ಝಲ್ಲಂತು. ಹೆಜ್ಜೆಯನ್ನು ಒಂದಕ್ಕೆ ನಾಕರಂತೆ ಇಟ್ಟರು.’ನಿತ್ಗಳಲೇ-ಹಳೇಬೀಡು ಸುಂದರರಾಯರು ನಿಲ್ಲಲಿಲ್ಲ. ದುಡುದುಡು ಓಡಲು ತೊಡಗಿದರು. ಜಗ್ಗನೆ ಎಳೆದಂತಾಯಿತು
’ನಿತ್ಗಳಲೇ ಅಂದ್ರೆ ವೋಡ್ತನೆ, ಪಿಟ್ರೀ ಮಗಂತಂದು.’ ಹೆಗಲ ಮೇಲಿದ್ದ ಕೈ ಗಟ್ಟಿಯಾಗಿ ಹೆಗಲನ್ನು ಅಮುಕಿ ಹಿಡಿಯಿತು. ಹಳೇಬೀಡು ಸುಂದರರಾಯರಿಗೆ ನಿಲ್ಲದೇ ಬೇರೆ ದಾರಿಯಿರಲಿಲ್ಲ. ಕೋಟಿನ ಕಾಲರ್ಅನ್ನು ಗಟ್ಟಿಯಾಗಿ ಹಿಡಿದಿದ್ದ. ಕೋಟು ಅರ್ಧ ಅವನ ಕೈಲೇ ಇತ್ತು ಎಂದರೆ ತಪ್ಪಾಗಲಾರದು.ನಾಲ್ವರೂ, ಅಥವಾ ಐವರೋ, ಹಳೇಬೀಡು ಸುಂದರರಾಯರನ್ನು ಸುತ್ತುವರಿದು ನಿಂತರು.’ಎಷ್ಟದವೆ ಬಕ್ಣದಗೆ-’ಹಳೇಬೀಡು ಸುಂದರರಾಯರಿಗೆ ತಾನು ದರೋಡೆಗೆ ತುತ್ತಾಗಿದ್ದೇನೆ ಎಂದು ಈಗ ಅರಿವಾಯಿತು. ಥರಥರ ನಡುಗಿಬಿಟ್ಟರು.
’ಬಾಯಿಬಿಡಲೇ, ಎಷ್ಟದವೆ-’’ಏ-ಏ-ನಿಲ್ಲ-ದ-ಮ್ಡಿ-ಲ್ಲ’ ಅಚಾನಕವಾಗಿ ಕೈಗಳು ಕೋಟಿನ ತುದಿಯನ್ನು ಗಟ್ಟಿ ಹಿಡಿದು ಕೊಂಡವು.ಹಿಡಿದಿದ್ದ ಕೋಟಿನ ಕಾಲರ್ರನ್ನು ಅಲ್ಲಾಡಿಸುತ್ತಾ ’ಮತ್ಯಾಕೆ ಹಂಗೆ ಬೀಜ ಹಿಡ್ಕೆಂಡು ನಿತ್ಗಂತೀಯ? ಗಟ್ಯಾಗಿ ನಿತ್ಗ.’’ಯಾವಂದೋ ಕೋಟಾಕ್ಯೆಂಡು ಬಂದಿರಗದೇ? ನಿಮ್ಮಪ್ಪಂದೇನಲೇ ಕೋಟು. ಅಷ್ಟು ದೊಡ್ದೈತೆ. ತಗಿ. ನಿಂದಲ್ಲಾ ಅಂದ್ಮ್ಯಾಲೆ ಯಾಕದು ನಿಂತಾವ ಯಿರಬೇಕು. ತಗಿ. ತಗೀಯಪಾ ನನ್ರಾಜ. ಯೇನಿಲ್ಲಾ ಅನಬೇಡ, ಬೋಣ್ಗಿ ನಿಂದೇ. ಕೋಟು ತಗಿ.’
ಕೈಗಳನ್ನು ಎದೆಗೆ ಅವಚಿ, ಕೋಟನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಾ ಹಳೇಬೀಡು ಸುಂದರರಾಯರು ಅಂಗಲಾಚಿದರು ’ಬೇಡ್ರೀ, ಕೋಟ್ ಕಸ್ಗ ಬೇಡ್ರೀ. ಪ್ಲೀಸ್. ನಿಮ್ಮ ಕಾಲಿಗೆ ಬೀಳ್ತೆನಿ.’ ಅವನ ಕಾಲು ಹಿಡಿಯಲು ಮುಂದಾದರು.’ತಗಿಯಲೇ ದನಗರ್. ದಮ್ಡಿಲ್ಲ ಅಂತದಿ. ಇವತ್ತು ರಾತ್ರಿ ಮತ್ತೆ ಬೋಣ್ಗೀ ಹೆಂಗಪಾ ನಮಗೆ? ತಗಿ.’ ಬಲವಂತವಾಗಿ ಆತ ಕೋಟನ್ನು ಸೆಳೆಯತೊಡಗಿದ. ಹಳೇಬೀಡು ಸುಂದರರಾಯರು ಕೋಟನ್ನು ಬಿಡಲಿಲ್ಲ. ಉಳಿದವರಲ್ಲಿ ಒಬ್ಬ ಹಳೇಬೀಡು ಸುಂದರರಾಯರ ಕಾಲುಗಳನ್ನು ಅನಾಮತ್ತಾಗಿ ಎತ್ತಿದಲ್ಲಿ, ಇನ್ನೊಬ್ಬ ಅವರ ಕೈಗಳನ್ನು ಹಿಡಿದು ಎತ್ತಿದ.
ಹಳೇಬೀಡು ಸುಂದರರಾಯರು ನೆಲಕ್ಕೆ ಸಮಾನಾಂತರ ರೇಖೆಯಲ್ಲಿ ನೆಲದಿಂದ ಒಂದು ನಾಕಡಿ ಎತ್ತರ ತೂಗಾಡುತ್ತಿದ್ದರು. ಕೈಗಳನ್ನು ಹಿಡಿದಿದ್ದವನು ಕೋಟನ್ನು ಎಷ್ಟು ಜೋರಾಗಿ ಸೆಳೆದನೆಂದರೆ ಹಳೇಬೀಡು ಸುಂದರರಾಯರ ಚರ್ಮ ಕೂಡಾ ಕೋಟಿನ ಜತೆಗೆ ಹರಿದು ಹೋಗದೇ ಇದ್ದದ್ದು ಅವರ ಪುಣ್ಯ. ಕೋಟು ಕೈಗೆ ಬಂತೋ ಹಳೇಬೀಡು ಸುಂದರರಾಯರು ಧಡ್ಡಂತ ನೆಲದ ಮೇಲೆ ಬಿದ್ದರು.
ತಲೆಗೆ ಕಲ್ಲಿನಂತಹುದೇನೋ ಅಪ್ಪಳಿಸಿತು. ಆ ಇನ್ನೊಬ್ಬನ ಕೈಲಿ ಇನ್ನೂ ಹಳೇಬೀಡು ಸುಂದರರಾಯರ ಕಾಲುಗಳಿದ್ದವಲ್ಲಾ, ಅವನು ಒಮ್ಮೆ ಕಾಲುಗಳನ್ನು ಎತ್ತಿ ತೂಗಿ ಚಿಮ್ಮಿದ. ಹಳೇಬೀಡು ಸುಂದರರಾಯರು ಇನ್ನೂ ಒಂದಡಿ ದೂರ ಬಿದ್ದರು. ಸೊಂಟದಲ್ಲೇನೋ ಕಳಕ್ಕಂತು. ಶರೀರದ ರಕ್ತವೆಲ್ಲಾ ತಲೆಗೇರಿದಂತೆ ತಲೆ ಬೆಚ್ಚಗಾಯಿತು. ಕತ್ತಲು ಕಣ್ಣ ಸುತ್ತ ಹೆಪ್ಪುಗಟ್ಟತೊಡಗಿತು. ಅವರ ನಗು ಕೂಡಾ ಕತ್ತಲಲ್ಲಿ ಕರಗುತ್ತಿತ್ತು. ಹಳೇಬೀಡು ಸುಂದರರಾಯರ ಎಚ್ಚರ ತಪ್ಪಿತು.
ಶುಕ್ರವಾರ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಅದ್ಯಾರೋ ಕಲಾಯಿ ಬಶೀರನ್ನ ಹುಡುಕ್ಕೊಂಡು ಅಲೆದಾಡಿ, ಈಗ ಒಂದು ಹತ್ತು ನಿಮಿಷಗಳ ಹಿಂದೆ ತನ್ನ ಕುರ್ಚಿ ಮೇಲೆ ಅಯ್ಯೋ ಅಂತ ಕೂತು, ’ಒನ್ಟೀ ತಗಂಬಾರಲೇ’ ಅಂತ ಆರ್ಡರ್ ಮಾಡಿ ಇನ್ನೂ ಒಂದು ನಿಮಿಷ ಆಗಿಲ್ಲ, ತನ್ನೆದುರು ನಿಂತ ವ್ಯಕ್ತಿಯನ್ನು ನೋಡಿ ಕಾನ್ಸ್ಟೇಬಲ್ ತಿಪ್ಪೇಶಿಗೆ ಯಾವ್ದೋ ಕೇಸಿದು ಅಂತ ಗೊತ್ತಾದ ಕೂಡಲೇ ತನ್ನ ಕರ್ಮವನ್ನು ಹಳಿದುಕೊಂಡ. ಯಾವ ಬೋಸುಡಿಕೆಗೆ ಬೇಕು ಈ ಕಂಡೋರ್ ಮನೆ ಹೆಣ ಕಾಯಾ ಕೆಲಸ ಅಂತ ಗಟ್ಟಿಯಾಗೇ ಗೊಣಗಿದ.
ಎದುರು ಸೊಂಟ ಬಗ್ಗಿಸಿ ನಿಂತಿದ್ದ ವ್ಯಕ್ತಿಯನ್ನೇ ನೋಡಿದ. ತೊಟ್ಟ ಅಂಗಿ ಒಂದು ಬದಿ ಪೂರಾ ಹರಿದಿತ್ತು. ಕೊನೆಯ ಗುಂಡಿಯನ್ನು ಬಿಟ್ಟು ಉಳಿದೆಲ್ಲಾ ಗುಂಡಿಗಳು ಹರಿದು, ಒಳಗಿನ ಅದ್ಯಾವುದೋ ಬಣ್ಣದ, ಬನೀನು ಜರಡಿ ಜರಡಿಯಾಗಿ ಕಾಣುತ್ತಿತ್ತು. ಮುಂತಲೆಯಿಂದ ಇಳಿದ ರಕ್ತ ಅರ್ಧ ಅಂಗಿಗೆ ಬಣ್ಣ ಕೊಟ್ಟಿತ್ತು. ಹಳೇಬೀಡು ಸುಂದರರಾಯರ ಅವಸ್ಥೆಯನ್ನು ನೋಡಿಯೂ ತಿಪ್ಪೇಶಿ ತನ್ನ ಕುರ್ಚಿ ಬಿಟ್ಟು ಏಳಲಿಲ್ಲ.
ಅವನಿಗೆ ಇದೆಲ್ಲಾ ಮಾಮೂಲು ತಾನೆ (ಯಷ್ಟಕೊಂದು ಜನಕ್ಕೆ ತಾನೇ ಹಂಗೆ ಇಕ್ಕಿಲ್ಲ), ಕೂತಲ್ಲಿಂದಲೇ ಅಂದ ’ಯೇನಾತಪಾ, ಬೆಳಕರಿಯಂಗಿಲ್ಲ ಮಾವನ ಮನೆಗೆ ಬಂದಂಗ್ ಬಂದೀ-’’ದರೋಡೆ ಮಾಡಿದ್ರು.’ತಿಪ್ಪೇಶಿ ಒಮ್ಮೆ ಹಳೇಬೀಡು ಸುಂದರರಾಯರನ್ನು ಕಣ್ಣಿನಿಂದಲೇ ಅಳೆದ. ಯಿಂಥಾ ಮನುಶ್ಯನ್ನೂ ದರೋಡೆ ಮಾಡ್ದನು ಯಿನ್ನೆಂಥಾ ಬಿಕನಾಸಿಗಳಿರಬೇಕೂ ಅಂತೀನಿ. ’ಮದ್ಲು ಯಲ್ಲಾತು ಹೇಳಿ. ಇದೇ ಜೂರಿಡಿಕ್ಷನ್ನೆಗೆ ಯಿದ್ರೆ ಮುಂದಿನ್ಕೆಲ್ಸ.’
’ಯಿಲ್ಲೇ ಹೈಸ್ಕೂಲು ಫೀಲ್ಡ್ನೆಗೆ. ನಿನ್ನೆ ರಾತ್ರಿ ಹನ್ನೊಂದರೊತ್ತಿಗೆ.’ಅಷ್ಟೊತ್ನೆಗೆ ಅಲ್ಲಿ ಯಾಕ್ರೀ ಅಡ್ಡಾಡ್ತಿದ್ರೀ? ಯಷ್ಟು ಜನಾಯಿದ್ರು?’’ನಾಕೋ ಐದೋ ಇರಬೇಕು. ಸರಿಯಾಗಿ ನೋಡಕ್ಕಾಗ್ಲಿಲ್ಲ.’’ಹೋಗ್ಲೀ ಯೇನೇನು ಹೋಗ್ಯಾವೆ ಅಂತನ್ನದಾರ ಗೊತ್ತತೋ ಯಿಲ್ವೋ?’’ಕೋಟು ಕದ್ಕೆಂಡು ಹೋದ್ರು.’’ಕೋಟ್ನೆಗೆ ಯಷ್ಟಿತ್ತು?’’ಯೇನಿರಲಿಲ್ಲ. ಕಾಲಿಯಿತ್ತು. ಹೊಸಾ ಕೋಟು. ನಿನ್ನೆ ಹೊಲಸಿದ್ದೆ-’ ಕೋಟಿನ ನೆನಪಾದೊಡನೆ ಗಂಟಲು ಉಬ್ಬಿ ಬಂತು. ಬೇಡಾ ಬೇಡಾ ಅಂದರೂ ಅಳು ಬಂದೇ ಬಿಟ್ಟಿತು.
’ಒನ್ಕಾಲೀ ಕೋಟಿಗೆ ಯಿಲ್ತನ್ಕ ಅತ್ಗೆಂಡು ಬಂದ್ರ. ಒಂದ್ಸಾವ್ರಾನೋ ಒಂದೈನೂರೋ ಹೋಗಿದ್ರೆ ಒನ್ಕೇಸು ಅಂತ ಬರ್ಕಬೋದಿತ್ತು. ಯೇನಂತ ಕೇಸು ಬರ್ಕಳ್ಳಿ, ಕೋಟು ದರೋಡೆ ಅಂತನಾ? ಕೋಟ್ನ ಯಲ್ಲಾರ ದರೋಡೆ ಮಾಡಕ್ಕಾಕ್ತತೇನ್ಲೇ ಅಂತ ಮೆಟ್ನಗೆ ಹೊಡೀತರೆ ನನ್ನ ಸೀನಿಯರ್ಸು ನನ್ನ. ಅದೂ ಅಲ್ದೇ ರಾತ್ರಿ ಹನ್ನೊಂದೂವರೆಗೆ ಕೋಟಾಕ್ಕೆಂಡು ಏನು ಕಿಸೀತಿದ್ಯಪಾ ಹೈಸ್ಕೂಲು ಫೀಲ್ಡನೆಗೆ?’
’ರಾತ್ರಿ ಲೇಟಾಯ್ತು. ಬರ್ತಿದ್ದೆ. ಕೋಟು ಕಸ್ಗೆಂಡ್ರು.’ತಿಪ್ಪೇಶಿ ಮೊದಲ ಬಾರಿಗೆ ತನ್ನ ಭಂಗಿಯನ್ನು ಬದಲಿ ಮಾಡಿದ. ’ಯಜಾ, ಒಂದು ಪೇಪರ್ ಕೊಡ್ತೀನಿ. ಅದೇನು ಬರೀತೀಯೋ ಬರಿ. ಕೇಸು ಬರ್ಕೆಂತೀನಿ. ಹುಡುಕ್ಸಣ. ಕೋಟು ಸಿಕ್ರೆ ಬಂದು ತಗಂಡು ಹೋಗು. ಈಗ ಸದ್ಯಕ್ಕೆ ತಲಿ ಕೆಡುಸ್ಬೇಡ.’ ಟೇಬಲ್ ಮೇಲಿದ್ದ ಒಂದು ಫೈಲಿನಿಂದ ಯಾವುದೋ ಒಂದು ಪೇಪರ್ರನ್ನು ಹರಿದು ಟೇಬಲ್ ಮೇಲೆ ಬಡಿದ.
ಹಳೇಬೀಡು ಸುಂದರರಾಯರು ಹೆಜ್ಜೆ ಮುಂದೆ ಬಂದು ’ಪೆನ್ನು-’ ಅಂದರು.ಮತ್ತೆ ಟೇಬಲ್ ಡ್ರಾಯರ್ರನ್ನು ತೆಗೆದು ಒಂದು ಪೆನ್ನು ತೆಗೆದು ಟೇಬಲ್ ಮೇಲೆ ಕುಕ್ಕಿದ.ತಮ್ಮ ದೂರನ್ನು ಬರೆಯುವಾಗ ಪೇಪರ್ರಿನ ಹಿಂದೆ ಮತ್ತೇನೋ ಬರೆದಿದ್ದು ಹಳೇಬೀಡು ಸುಂದರರಾಯರ ಗಮನಕ್ಕೆ ಬಂತು. ಎತ್ತಿ ನೋಡಿದರು. ಮತ್ತೆ ತಿಪ್ಪೇಶಿಯತ್ತ ನೋಡಿದರು. ತಿಪ್ಪೇಶಿ ಕಣ್ಣು ಮುಚ್ಚಿ ಕುರ್ಚಿಗೆ ಒರಗಿ ಕೂತಿದ್ದ. ’ಇದ್ರ ಹಿಂದೆ ಯೇನೋ ಬರ್ದಂಗಿದೆ-’
’ಅದರ ಹಿಂದೆ ಮುಂದೆ ಯಾಕೆ ನೋಡಕ್ಕೋಕ್ತೀಯಪಾ? ಮುಕಳೀ ತೊಳಕಳೋ ಅಂದ್ರೆ ಮುಂದೆ ನೇತಾಡದು ಯೇನು ಅಂದ್ನಂತೆ. ಯಲ್ಲಿ ಬರಿಯಕೆ ಹೇಳಿದ್ನೋ ಅಲ್ಲಿ ಬರಿ. ಹೋಗು. ನಿಂಗೆ ವಳ್ಳೇ ಕೋರಾ ಪೇಪರ್ರೇ ಬೇಕನ್ನಂಗಿದ್ರೆ ಅಂಗ್ಡೀಗೆ ಹೋಗಿ ತಗಂಬಾ-’ ಮುಂದೆ ಅದೇನೋ ಗೊಣಗುತ್ತಾ ಮತ್ತೆ ಕಣ್ಣು ಮುಚ್ಚಿ ತಾರಸಿಗೆ ತಲೆಯೆತ್ತಿ ಮಲಗಿದ. ಹಳೇಬೀಡು ಸುಂದರರಾಯರು ತಮ್ಮ ದೂರನ್ನು ಬರೆದರು.
’ಬರ್ದಿದಾತು-’’ಸರಿ. ಯಿಟ್ಟೋಗೂ. ಬೇಕರೆ ಒನ್ಕರ್ಪೂರ ತಂದು ಆರತಿ ಮಾಡಿಟ್ಟು ಹೋಗು.’ ತಿಪ್ಪೇಶಿ ಕಣ್ಣು ತೆಗೆಯುವ ತೊಂದರೆಯನ್ನೂ ತೆಗೆದುಕೊಳ್ಳಲಿಲ್ಲ. ದನಿ ಮಾತ್ರ ಕರ್ಕಶವಾಗಿತ್ತು. ಹಳೇಬೀಡು ಸುಂದರರಾಯರಿಗೆ ಮತ್ತೆ ಮಾತನಾಡುವ ಮನಸ್ಸಾಗಲಿಲ್ಲ. ಭಾರವಾದ ಮನಸ್ಸಿನಿಂದ ಕಾಗದವನ್ನು ಟೇಬಲ್ ಮೇಲಿಟ್ಟು, ಅದರ ಮೇಲೆ ಪೆನ್ನನ್ನು ಭಾರಕ್ಕಿಟ್ಟು ಹೊರಟರು.
ಮನೆ ಗೇಟಿಗೆ ಕೈ ಹಾಕಿಲ್ಲ ಇನ್ನೂ, ಪಕ್ಕದ ಮನೆ ಮುದುಕ, ಸೊಡ್ಲಂಗಿ ಹಾಲಪ್ಪ (ಮೂರೊತ್ತೂ ತನ್ನ ಮನೆ ಮುಂದಿನ ಕಟ್ಟೇ ಮೇಲೆ ಕೂತು ಒಂದು ಸಾರಿ ತೊಡೆ ಸಂದಿ, ಮತ್ತೊಂದು ಸಾರಿ ಕಂಕುಳು, ಮತ್ತೊಂದು ಸಾರಿ ಕುತ್ತಿಗೆ ಹಿಂಭಾಗ ಹೀಗೆ ಕಂತು ಕಂತಾಗಿ ದೇಹದ ಎಲ್ಲಾ ಭಾಗಗಳನ್ನೂ ಕೆರೆದುಕೊಳ್ಳುತ್ತಾ ಒಂದು ರೀತಿ ಸ್ವರ್ಗ ಸುಖವನ್ನು ಉಣ್ಣುತ್ತಿರುತ್ತಾನೆ. ಹಾಲು ಮಾರುತ್ತಿದ್ದ. ಈಗ ಮಗ ಹಾಲು-ನೀರಿನ ದಂದೆ ನೋಡಿಕೊಳ್ಳುತ್ತಾ ಅಪ್ಪನನ್ನು ಕೆರಿಕೆ-ತುರಿಕೆಗಳ ಸ್ವರ್ಗವನ್ನು ಸೂರೆಗೈಯ್ಯಲು ಬಿಟ್ಟಿದ್ದಾನೆ.) ಕೂಗಿದ, ’ಯೇನಾತಪಾ ಸುಂದರಾ ಹಂಗೆ ಹೊಡ್ದದರೆ?’ ’ದರೋಡೆ ಮಾಡಿದ್ರು.’’ನಿನ್ನ ಯಾರು ದರೋಡೆ ಮಾಡ್ತರೋ ಮಂಗಸೂಳಾಮಕ್ಳು. ದಾವಣ್ಗೆರೆಗೇ ಹೊಸಬ್ರಿರಬೇಕು. ಯಶ್ಟೊತ್ನೆಗಾತು?’’ನಿನ್ನೆ ರಾತ್ರಿ ಹನ್ನೊಂದೂವರೆ ಯಿರಬೇಕು-’
’ಮತ್ತೆ ರಾತ್ರಿಯೆಲ್ಲಾ ಮನೆಗೇ ಬರ್ಲಿಲ್ಲಾ?’’ಹಂಗೇ ಅಲ್ಲೇ ಬಿದ್ದಿದ್ದೆ. ಬೆಳಿಗ್ಗೆ ಯಚ್ರಾತು.’’ಯೇನು ಹೋತು?’’ಕೋಟುನ್ನ ಕಸ್ಗೆಂಡು ಹೋದ್ರು.’’ಕಂಪ್ಲೇಂಟು ಕೊಟ್ಯೋಯಿಲ್ಲೋ?’’ಕೊಟ್ಟೆ. ಈಗ ಬೆಳಿಗ್ಗೆ.’’ಯಾರತ್ರ ಕೊಟ್ಟಿ?’’ಅದ್ಯಾರೋ ಕಾನ್ಸ್ಟೇಬಲ್ ಇದ್ದ.’’ಅಯ್ಯೋ ಅವ್ನೇನು ನೋಡ್ತಾನೋ ನಿನ ಶಂಟ? ನೀ ಕೊಟ್ಟಿ ಅವ್ನು ಯಿಸ್ಗಂಡ. ನಿನ್ನ ಕೋಟು ನಿಂಗೆ ಸಿಗ್ತು. ಇನುಸ್ಪೆಕ್ಟರಿಗೆ ಕೊಡಬೇಕು ಕಂಪ್ಲೇಂಟು ಯಾವಾಗ್ಲು. ಮಕಾ ಗಿಕಾ ತೊಳದೂ ಒಂದತ್ತೂವರೆಗೆ ಹೋಗು. ಇನುಸ್ಪೆಕ್ಟರು ಬಂದಿರ್ತನೆ. ನರಸಿಂಗರಾವ್ ಅಂತ. ನಾನು ಕಳುಸಿದ್ದೂ ಅಂತನ್ನು. ನಮ್ಮನೆದೇ ಹಾಲು ತಗಳದು ಅವ್ನು. ಒನ್ನಾಕು ದಿಸದಗೆ ನಿನ್ನ ಕೋಟು ಹುಡುಕುಸ್ತನೆ.’
ಹಳೇಬೀಡು ಸುಂದರರಾಯರು ತಲೆ ಹಾಕಿ ಮನೆ ಹೊಕ್ಕರು.ಸರಿಯಾಗಿ ಹತ್ತು ಗಂಟೆಗೆ ಹಳೇಬೀಡು ಸುಂದರರಾಯರು ಮತ್ತೆ ಪೋಲೀಸ್ ಸ್ಟೇಶನ್ ಹೊಕ್ರು. ತಿಪ್ಪೇಶಿ ಇರಲಿಲ್ಲ. ಡ್ಯೂಟಿ ಬದಲಾಗಿತ್ತು. ವೆಂಕಟೇಶಿನೋ ರುದ್ರೇಶೀನೋ ಇದ್ದ. ‘ಇನುಸ್ಪೆಕ್ಟರ್ ಇದಾರಾ‘ ಅಂದಿದ್ದಿಕ್ಕೆ ‘ಇನ್ನೂ ಬಂದಿಲ್ಲ‘ ಅಂತ ಉತ್ತರ ಸಿಗ್ತು. ಇನ್ನೂ ಸ್ವಲ್ಪ ಹೊತ್ತು ಬಿಟ್ಟು ವಿಚಾರಿಸಿದ್ದಕ್ಕೆ ‘ಇನ್ನೂ ಮನೇನಗೇ ಇರಬೇಕು‘ ಅಂತ ವಿವರ ಸಿಗ್ತು.
ಮನೆ ಎಲ್ಲಿ ಅಂತ ತಿಳಕೊಂಡು ಮನೆಗೆ ಹೊರಟರು. ಮನೇಲಿ ವಿಚಾರಿಸಿದ್ದಕ್ಕೆ ‘ಸಾಹೇಬ್ರೂ ಇನ್ನೂ ಸ್ನಾನ ಮಾಡ್ತಿದರೆ‘ ಅಂತಂದ್ರು. ಮತ್ತೆ ಅರ್ಧ ಗಂಟೆ ಬಿಟ್ಟು ಕೇಳಿದ್ದಕ್ಕೆ ‘ಇನ್ನೂ ಸ್ನಾನ ಮಾಡ್ತಿದರೆ‘ ಅಂತಂದ್ರು. ಹನ್ನೊಂದೂವರೆಗೆ ಮತ್ತೆ ಕೇಳಿದ್ರು. ‘ಸಾಹೇಬ್ರು ಸ್ಟೇಷನ್ನಿಗೆ ಹೋಗಾತು‘ ಅಂತಂದ್ರು. ಹಳೇಬೀಡು ಸುಂದರರಾಯರು ಸ್ಟೇಶನ್ನಿಗೆ ಬಂದ್ರು.
‘ಸಾಹೇಬ್ರು ಇನ್ನೂ ಬಂದಿಲ್ಲ, ರೌಂಡ್ಸ್ ಮೇಲಿರಬೇಕೂ‘ ಅಂತಂದ್ರು. ಒಂದೂವರೆಗೆ ಕೇಳಿದ್ದಕ್ಕೆ ‘ಸಾಹೇಬ್ರು ಊರಿಗೋದ್ರು, ಅರ್ಜಂಟ್ ಕೆಲಸದ ಮೇಲೆ‘ ಅಂದ್ರು. ಕಳೆದ ಶತಮಾನದಿಂದ ಮೊನ್ನೆ ಮೊನ್ನೆಯವರೆಗೂ ಎಂದೂ ಸಿಟ್ಟಿಗೆದ್ದಿರದಿದ್ದ ಹಳೇಬೀಡು ಸುಂದರರಾಯರೂ ಅವತ್ತು ಕೆಂಪಾದರು. ಕನಲಿದರು. ’ವಕೀಲ್ ಸುಂದರರಾಯರು ಬಂದಿದಾರೆ ಅಂತೇಳಿ.
ಯಾವುದೋ ಕೇಸೂ ಅಂತೇಳಿ’ ಅಂದರು. ಹಳೇಬೀಡು ಸುಂದರರಾಯರ ದನಿಗೆ ಮೊದಲ ಬಾರಿಗೆ ಒಂದು ಮನುಷ್ಯ ಜೀವಿ, ಅದರಲ್ಲೂ ದಾವಣಗೆರೆಯ ಪೋಲೀಸು ಕಾನ್ಸ್ಟೇಬಲ್ ಅಳುಕಿದ. ಎರಡೇ ನಿಮಿಷಗಳಲ್ಲಿ ಒಳಗಿನಿಂದ ಬುಲಾವ್ ಬಂತು. ಇನ್ಸ್ಪೆಕ್ಟರ್ ನರಸಿಂಗರಾವ್, ಎದುರು ಊಟದ ಖಾಲಿ ಎಂಜಲು ತಟ್ಟೆಯನ್ನಿಟ್ಟುಕೊಂಡು, ಹಲ್ಲಿನ ಸಂದುಗೊಂದುಗಳಲ್ಲಿ ಬೆಂಕಿಕಡ್ಡಿಯನ್ನು ಅಡ್ಡಾಡಿಸುತ್ತಾ, ಊಟದ ಶಿಲ್ಕುಗಳನ್ನು ಎಬ್ಬುತ್ತಾ, ಎಡ ಮಂಡಿಯನ್ನು ಗಡಗಡಗಡ ಅಲ್ಲಾಡಿಸುತ್ತಾ ಕೂತಿದ್ದವನು ಹಳೇಬೀಡು ಸುಂದರರಾಯರನ್ನು ಕೆಕ್ಕರಿಸಿ ನೋಡಿದ.
ಹಳೇಬೀಡು ಸುಂದರರಾಯರು ನಿನ್ನೆ ರಾತ್ರಿಯಿಂದ ನಡೆದ ದರೋಡೆಯ ಪ್ರಕರಣವನ್ನು ಮತ್ತೆ ಕಥೆ ಕಟ್ಟಿ ಹೇಳಿದರು. ಮಂಡಿಯನ್ನು ಅಲ್ಲಾಡಿಸುತ್ತಾ, ಹಲ್ಲುಗಳಿಂದ ಬೆಂಕಿಕಡ್ಡಿಯನ್ನು ನುರಿಯುತ್ತಲೇ ಕೋಟಿನ ದರೋಡೆ ಕತೆಯನ್ನು ಕೇಳಿದ ನರಸಿಂಗರಾವ್ ಕೊಂಚವೂ ವಿಚಲಿತನಾಗಲಿಲ್ಲ. ಹಲ್ಲುಗಳ ಸಂದುಗೊಂದುಗಳಲ್ಲಿ ಕಡ್ಡಿಯನ್ನು ಅಲ್ಲಾಡಿಸುವುದನ್ನೂ ನಿಲ್ಲಿಸಲಿಲ್ಲ.
ನರಸಿಂಗರಾವ್ ಬಾಯಿಯಲ್ಲಿ ಕಡ್ಡಿಯನ್ನು ಓಡಾಡಿಸುತ್ತಲೇ ಮಾತನಾಡುತ್ತಿದ್ದನಾಗಿ ಹಳೇಬೀಡು ಸುಂದರರಾಯರಿಗೆ ಅವನು ಹೇಳಿದ್ದು ಸ್ಪಷ್ಟವಾಗುತ್ತಿರಲಿಲ್ಲ. ಹಾಗಾಗಿ ಪ್ರತಿಯೊಂದನ್ನೂ ಎರಡೆರಡು ಬಾರಿ ಕೇಳಿಸಿಕೊಳ್ಳಬೇಕಾಯಿತು. ದರೋಡೆ ಯಾರು ಮಾಡಿದ್ದು, ಹೆಂಗಾಯ್ತು ಅಂತ ಕೇಳೋದನ್ನು ಬಿಟ್ಟು, ‘ಅಶ್ಟತ್ನೆಗೆ ಅಲ್ಲೇನು ಮಾಡ್ತಾಯಿದ್ರಿ, ದಿಸಾ ರಾತ್ರಿ ಇಂತಾ ಹಲ್ಕಾ ಕೆಲಸ ಮಾಡಕೆ ಹೋಗ್ತೀರೇನು, ಇಷ್ಟು ವಯಸ್ಸಾದ್ರೂ ತಮಗೇ ಬಾಳಾ ಖಯಾಲಿ ಇರಂಗಿದೆ, ದರೋಡೆ ಆಗಿದೇ ಅನ್ನಕೆ ಪ್ರೂಫ್ ಏನೈತಪಾ, ಅಸಲಿಗೆ ದರೋಡೆ ಆಯ್ತೋ ಯಿಲ್ಲೋ ಅನ್ನದು ಯೇನು ಗ್ಯಾರಂಟಿ, ಈ ಡಿಪಾರ್ಟ್ಮೆಂಟೇನು ನಿಮ್ಮ ಬಟ್ಟೇ ಬರೆ ಹುಡುಕಕ್ಕೇನ್ರೀ ಯಿರದು, ಯಿವತ್ತು ಕೋಟೋತೂಂತ ಬರ್ತೀರ, ನಾಳೇ ಚಡ್ಡೀ ಕಳ್ದೋದೂಂತ ಬರ್ರೀರಾ, ನಿಮ್ಮ ಬಟ್ಟೆ ನೀವು ಸರ್ಯಾಗೆ ಇಟ್ಗಬೇಕು, ನಾವೂ ಯೇನೇನೂ ಅಂತ ನೋಡಕ್ಕಾಗ್ತತೆ…‘
ಹಳೇಬೀಡು ಸುಂದರರಾಯರಿಗೆ ತಾವು ಇಲ್ಲಿಗೆ ಬಂದು ತಪ್ಪು ಮಾಡಿದ್ನಾ, ದರೋಡೆ ತಾವು ಮಾಡಿದ್ದೋ, ಇಲ್ಲಾ ತಮ್ಮನ್ನ ದರೋಡೆ ಮಾಡಿದ್ರೋ ಇತ್ಯಾದಿ ಅನುಮಾನಗಳು ಕಾಡತೊಡಗಿದವು. ನರಸಿಂಗರಾವ್ ಆರ್ಡರ್ ಮೇರೆಗೆ ಒಂದು ನಾಕು ಜನ ಇಡೀ ಸ್ಟೇಷನ್ ಹುಡುಕಿದ್ರೂ ಬೆಳಿಗ್ಗೆ ಹಳೇಬೀಡು ಸುಂದರರಾಯರು ಬರೆದು ಕೊಟ್ಟ ದೂರು ಸಿಗಲೇಯಿಲ್ಲ. ಹಳೇಬೀಡು ಸುಂದರರಾಯರು ಮನೆಗೆ ಹಿಂತಿರುಗಿದರು. ಸಂಜೆಯೊಳಗೆ ಹಳೇಬೀಡು ಸುಂದರರಾಯರ ಕೋಟು ದರೋಡೆಯಾದ ಪ್ರಕರಣ ಇಡೀ ದಾವಣಗೆರೆಯನ್ನು ದಹದಹಿಸಿತು.
ಹಳೇಬೀಡು ಸುಂದರರಾಯರು ಹೋದಲೆಲ್ಲಾ ಹಣೆಯ ಮೇಲಾಗಿದ್ದ ತರಚು ಗಾಯಗಳು, ಚಿಗಟೇರಿ ಜನರಲ್ ಆಸ್ಪತ್ರೆಯಲ್ಲಿ ತಲೆ ಸುತ್ತ ಬಿಗಿದ ಬ್ಯಾಂಡೇಜು, ಕೊಂಚ ಓರೆಯಾದ ಸೊಂಟ ಇತ್ಯಾದಿಗಳು ನೋಡಿದವರ ಕಣ್ಣು ಕುಕ್ಕಿ ಎಲ್ಲರಿಂದ ‘ಛೆ ಛೆ, ಹಿಂಗಾಗಬಾರದಿತ್ತು, ಯೇನು ಮಾಡಕ್ಕಾಗ್ತತೆ ಯಲ್ಲಾ ಪಡ್ಕೆಂಡು ಬಂದಂಗಿರ್ತತೆ, ಯಷ್ಟು ಕೊಟ್ಟಿದ್ರೋ ಕೋಟಿಗೆ, ಯೇನು ಒಂದಿನ್ನೂರು ಕೈಬಿಟ್ಟಂಗೆ ಹೌದಲ್ಲೋ‘ ಮೊದಲಾದ ಸಹಾನುಭೂತಿ-ಸಲಹೆಗಳನ್ನು ಗಳಿಸಿದವು. ಹಳೇಬೀಡು ಸುಂದರರಾಯರನ್ನು ನಿಲ್ಲಿಸಿ ಮಾತನಾಡಿದರು, ಹೆಗಲ ಮೇಲೆ ಕೈಯ್ಯಿಕ್ಕಿ ಮಾತನಾಡಿದರು, ಅಟ್ಟಿಸಿಕೊಂಡು ಬಂದು ಮಾತನಾಡಿದರು. ಸಲಹೆಗಳಿಗೇನು, ಮಾತಿಗೊಂದು ಸಲಹೆಯಿತ್ತು ಪುನೀತವಾಯಿತು ದಾವಣಗೆರೆ.
’ನೀವು ಹಂಗಿಂದಂಗೇ ಕಂಪ್ಲೇಂಟು ಕೊಡಬೇಕಿತ್ತು, ರಾತ್ರೆಲ್ಲಾ ಅಲ್ಲೇ ಬಿದ್ಕೆಂಡು, ಬೆಳಗಾಗತನ ಕಾದು ತಪ್ಪು ಮಾಡಿದ್ರಿ.’ ’ಯಿಂಥಾವೆಲ್ಲಾ ಹಂಗಂಗೇ ಆಗಿಬಿಡಬೇಕು. ಯಿಷ್ಟತ್ನೆಗೆ ಅವ್ರು ಸಿರಾ ದಾಟಿರ್ತಾರೇನೋ. ಬೆಂಗ್ಳೂರು ಮುಟ್ಟಿದ್ರೆ ನಿಮ್ಮ ಕೋಟು ಸಿಕ್ಕಂಗೆ.’ ’ನೀವದ್ಯಾವನಿಗೋ ಇನುಸ್ಪೆಕ್ಟರಿಗೆ ಕಂಪ್ಲೇಂಟು ಕೊಟ್ಟು ಬಂದ್ರೆ ಯೇನು ಬಂತು. ಒನ್ಕೆಲ್ಸ ಮಾಡಿ. ಡೀಸಿ ಹತ್ರ ಹೋಗಿ ಕೇಳ್ಕಳಿ.
ಅವ್ನಿಂದ ಒಂದು ಆರ್ಡರ್ ಅಂತ ಬಂದ್ಮೇಲೆ ಯಿವ್ರು ಹೆಂಗಾಡ್ತರೆ ನೋಡಿ.’ ’ಅಯ್ಯಾ, ಅದುಕ್ಕೆ ಡೀಸೀ ಪೀಸೀ ಯಲ್ಲಾ ಯಾಕೆ. ತಾಸೀಲ್ದಾರ್ರ ಆಫೀಸ್ನೆಗೆ ಒಂದು ಕಂಪ್ಲೇಂಟು ಬರ್ದು ಬಿಸಾಕಿದ್ರಾತು. ಯಲ್ಲಾ ದಾರಿಗೆ ಬರ್ತತೆ. ನಾಳೆ ಸಾಯಂಕಾಲ್ದಗೆ ನಿಮ್ಮ ಕೋಟು ಸಿಗದು ಗ್ಯಾರಂಟಿ.’ ’ಅದೂ ಕರೆಕ್ಟು. ಯಿಲ್ಲೇ ಕೆಲಸ ಆಗಂಗಿರಬೇಕರೆ ದುರ್ಗದ ಬಸ್ ಚಾರ್ಜು ಉಳೀತತೆ. ಸುಮ್ನೇ ಯಿಲ್ಲೇ ಹೋಗಿ.’
ಶನಿವಾರ. ಗಡಿಯಾರದ ಕಂಬದ ಹಿಂದಿರೋ ತಹಸೀಲ್ದಾರ್ ವೆಂಕಟಕೃಷ್ಣ ರಾಯರ ಕಚೇರಿಯನ್ನು ಹಳೇಬೀಡು ಸುಂದರರಾಯರು ತಲುಪಿದಾಗ ವೆಂಕಟಕೃಷ್ಣರಾಯರು ತಮ್ಮ ಪ್ರೈವೇಟ್ ಚೇಂಬರ್ನಲ್ಲಿ ಕೂತಿದ್ದರು. ಹಿಂದಿನ ದಿನ ಯಾವುದೋ ಕಾರ್ಯಕ್ರಮಕ್ಕೆ ದಾವಣಗೆರೆಗೆ ಬಂದಿದ್ದ ಯು ಆರ್ ಅನಂತಮೂರ್ತಿಯವರನ್ನು ತಮ್ಮ ಕಚೇರಿಗೆ ಬರಲೇಬೇಕೂಂತ ಒತ್ತಾಯ ಮಾಡಿದ್ದಕ್ಕೆ ಬಂದಿದ್ದ ಅನಂತಮೂರ್ತಿಯವರ ಜೊತೆಗೆ ವೆಂಕಟಕೃಷ್ಣರಾಯರು, ಸ್ವೀಟ್-ಖಾರಾ ಸೇವು ತಟ್ಟೆಗಳನ್ನೂ, ಥಂಣ್ಣನೆಯ ಬಾದಾಮಿ ಹಾಲಿನ ಗ್ಲಾಸುಗಳನ್ನೂ ಮಧ್ಯದಲ್ಲಿರಿಸಿಕೊಂಡು ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು.
ಸಾಮಾನ್ಯವಾಗಿ ತಹಸೀಲ್ದಾರರು ತಮ್ಮ ಪ್ರೈವೇಟ್ ಚೇಂಬರಲ್ಲಿದ್ದಾಗ, ಟೀ-ತಿಂಡಿಗಲ್ಲದೇ ಬೇರೆ ವಿಷಯಗಳಿಗೆ ಬಾಗಿಲು ತಟ್ಟುವ ಸಾಹಸ ಮಾಡುವುದಿಲ್ಲ ಅಲ್ಲಿನ ಸಿಬ್ಬಂದಿ. ಏನೇ ಘನಕಾರ್ಯವಿದ್ದರೂ ಸಾಹೇಬರು ಹೊರಬರುವ ತನಕ ಕಾಯಬೇಕು ಎನ್ನುವುದು ಅಲ್ಲಿನ ಅಲಿಖಿತ ಸಂಪ್ರದಾಯ. ವೆಂಕಟಕೃಷ್ಣರಾಯರ ಎದುರಿನ ಸ್ವೀಟ್ ತಟ್ಟೆ ಖಾಲಿಯಾಗಿತ್ತು. ಖಾರಾ ಸೇವಿನ ತಟ್ಟೆ ಇನ್ನೂ ಒಂದು ಕಾಲು ಪಾಲು ತುಂಬಿತ್ತು. ಅನಂತಮೂರ್ತಿಯವರು ಶಾಸ್ತ್ರಕ್ಕೆಂದು ಸ್ವೀಟಿನ ಒಂದು ಮೂಲೆಯನ್ನು ಮುರಿದಿದ್ದರು. ಖಾರಾ ಸೇವಿನ ತಟ್ಟೆಯನ್ನು ನಾಜೂಕಲ್ಲಿ ಕೆದರಾಡಿ ನಾಲ್ಕು ಎಸಳು ಬಾಯಿಗೆ ಹಾಕಿಕೊಂಡಿದ್ದರು. ಮಾತು ಸಾಗಿತ್ತು. ’ನಿಮ್ಮ ಮಗಳ ಮದುವೆ ಮಾಡಿದ್ರಾ?’’ನಾಲ್ಕು ವರ್ಷ ಆಯ್ತು. ನಿಮ್ಮ ಕಡೇ ಹುಡುಗನೇ. ತೀರ್ತಳ್ಳಿಯೋನು.’
ಅನಂತಮೂರ್ತಿಯವರು ನಕ್ಕರು. ಮುಂದೆ ಮಾತು ತೋಚಲಿಲ್ಲ. ಮತ್ತೆ ಒಂದೆರಡು ಎಸಳು ಬಾಯಿಗೆ ಹಾಕಿಕೊಂಡರು. ಮೌನ. ಎಲ್ಲವನ್ನೂ ಬಿಚ್ಚಿಟ್ಟ ಅಂದಿನ ವೆಂಕಟಕೃಷ್ಣರಾಯರನ್ನೂ, ಎಲ್ಲವನ್ನೂ ಚಿಪ್ಪಿನೊಳಗೆ ಬಚ್ಚಿಟ್ಟು ಕೂತಂತಿದ್ದ ಇಂದಿನ ವೆಂಕಟಕೃಷ್ಣರಾಯರನ್ನೂ ಹೋಲಿಸುತ್ತಿದ್ದರು ಅನಂತಮೂರ್ತಿಯವರು. ತೆರೆತೆರೆಯಾಗಿ ಮಾತುಗಳನ್ನು ಹೊರಳಿಸುತ್ತಿದ್ದ ಅಂದಿನ ರಾಯರೆಲ್ಲಿ, ಮಾತೇ ಮರೆತಂತೆ ಕೂತಿರುವ ಇಂದಿನ ರಾಯರೆಲ್ಲಿ ಅನಿಸಿತು.’ನಿಮ್ಮಮಗನ ಕೇಸೇನಾಯ್ತು?’
’ಅಯ್ಯೋ ಅದೊಂದು ದೊಡ್ಡ ಕತೆ.’ ವೆಂಕಟಕೃಷ್ಣರಾಯರು ಸುಮ್ಮನಾದರು. ಇನ್ನೊಮ್ಮೆ ಕೇಳಿದಲ್ಲಿ ಹೇಳಿದರಾಯಿತು ಎನ್ನುವ ಉಮೇದಿನಲ್ಲಿ ವೆಂಕಟಕೃಷ್ಣರಾಯರು. ಅವರು ಸುಮ್ಮನೆ ಕೂತದ್ದನ್ನು ನೋಡಿ ಕೇಳಿದ್ದು ತಪ್ಪಾಯಿತೇನೋ ಅನಿಸಿ ಅನಂತಮೂರ್ತಿಯವರು. ಒಟ್ಟಿನಲ್ಲಿ ಇಬ್ಬರೂ ಮಾತು ನಿಲ್ಲಿಸಿದ್ದರು. ವೆಂಕಟಕೃಷ್ಣರಾಯರೂ ಒಂದೆರಡು ಉಸಿರಿನ ಹೊತ್ತು ಕಾದು ಕೊನೆಗೆ ಬಾಯಿಬಿಟ್ಟರು. ’ಒಂದು ಲಕ್ಷ ಕೊಡಕ್ಕಾಗಲ್ಲ ಅಂತ ಅವ್ರು ಜಗ್ತಾನೇ ಹೋದ್ರು. ನಾನೂ ಬಿಡಲಿಲ್ಲ.
ಲೋಯರ್ ಕೋರ್ಟ್ನಲ್ಲೇನೋ ನನ್ನ ಕಡೆನೇ ಆಯ್ತು. ಹೈಕೋರ್ಟಿಗೆ ಅಪೀಲ್ ಮಾಡ್ಕೊಂಡ್ರು. ಇನ್ನೊಂದೈದು ವರ್ಷ ಅಡ್ಡಾಡೋದು ಗ್ಯಾರಂಟಿ ಅಂತ ಯಾವಾಗ ಅನ್ನುಸ್ತೋ ಇನ್ನು ಬೇರೆ ದಾರಿಯಿಲ್ಲ ಅಂತ ಹೇಳಿ ಎಪ್ಪತ್ತು ಸಾವಿರಕ್ಕೆ ಅಡ್ಜಸ್ಟ್ ಮಾಡಿಕೊಂಡುಬಿಟ್ಟೆ. ಒಂದು ಪೈಸಾನ್ನೂ ಬಿಡದಂಗೆ ವಸೂಲಿ ಮಾಡಿದೆ.’
ಮತ್ತೆ ಮೌನ. ಏನು ಕೇಳಿದರೆ ಏನು ಎಡವಟ್ಟಾದೀತೋ ಎಂದು ಅನಂತಮೂರ್ತಿಯವರೂ ಮಾತನ್ನು ಮೀಟಲಿಲ್ಲ. ವೆಂಕಟಕೃಷ್ಣರಾಯರೇ ಬಾಯಿಬಿಟ್ಟರು.’ನನ್ನ ಪ್ರಮೋಶನ್ನಿಂದೇ ಒಂದು ಕತೆ. ಭಾಳಾ ಕಷ್ಟ ಕೊಟ್ರು. ನನ್ನ ಗ್ರಹಚಾರಕ್ಕೆ ಒಬ್ಬಾ ಆದ್ರೂ ನಮ್ಮ ಹಳೇ ಮೈಸೂರ್ನೋನು ರೆವಿನ್ಯೂ ಮಂತ್ರಿ ಆದ್ರೆ ಕೇಳಿ. ಜಾತಿ ಬೇರೆ ನಂಗೆ ಅಗೇನ್ಸ್ಟ್ ಆಗಿತ್ತು. ನನ್ನ ಹೆಸರು ಹೇಳಿದ್ರೆ ಜಾತೀನೂ ಗೊತ್ತಾಗತ್ತಲ್ಲ, ಅದೇ ಆಗಿದ್ದು ಸಮಸ್ಯೆ. ಆದ್ರೂ ನಾನು ಬಿಡಲಿಲ್ಲ. ನಮ್ಮ ಕಡೆಯೋರೇ ಯಾರೋ ರೆವಿನ್ಯೂ ಮಂತ್ರಿ ಆದ ಮೇಲೆ ಇನ್ನಿಲ್ದಂಗೆ ಓಡಾಡಿದೆ ನೋಡಿ. ಆಮೇಲೆ ನಂಗೆ ತಹಸೀಲ್ದಾರ್ ಅಂತ ಪೋಸ್ಟ್ ಮಾಡಿದ್ದು. ಎಂಟು ವರ್ಷ ಆದ್ವು’
ಅಷ್ಟರಲ್ಲಿ ಬಾಗಿಲು ತಟ್ಟಿದರು ಯಾರೋ. ವೆಂಕಟಕೃಷ್ಣರಾಯರ ಬಿಳೀ ಹುಬ್ಬುಗಳು ಅದುರಿದವು. ಗಂಟಾದವು. ದನಿ ಕರ್ಕಶವಾಯಿತು. ’ಕಮಿನ್.’ ಸುಳಿವೇ ಕೊಡದಂತೆ ವೆಂಕಟಕೃಷ್ಣರಾಯರ ದನಿಯಲ್ಲಾದ ಬದಲಾವಣೆಗೆ ಅನಂತಮೂರ್ತಿಯವರು ಬೆಚ್ಚಿದರು. ಸಲುಗೆಯಲ್ಲಿ ಬಾಗಿದ್ದ ಬೆನ್ನು, ಅಧಿಕಾರದ ಗರ್ವದಿಂದ ನೆಟ್ಟಗೆ ಹುರಿಯೆದ್ದು ನಿಂತಿತು. ಬಾಗಿಲನ್ನು ಒಂದಿಷ್ಟೇ ಓರೆ ಮಾಡಿ, ಆ ಸೀಳಿನಲ್ಲಿ ನುಸುಳಿ ಬಂದ ಜವಾನ ಬಾಗಿಲಿಗೆ ಬೆನ್ನನ್ನು ಅಂಟಿಸಿ ನಿಂತನೇ ಹೊರತು, ಬಾಗಿಲಿಂದ ಒಂದು ಇಂಚು ಮುಂದೆ ಕಾಲಿಡುವ ಧೈರ್ಯ ಮಾಡಲಿಲ್ಲ.
’ಯಾರೋ ವಕೀಲ ಸುಂದರರಾಯರಂತೆ. ಬಂದಿದಾರೆ.’’ನೀನ್ಯಾಕೆ ಬಂದಿ. ಅವನು ಪೀಯೇ ಎಲ್ಲೋದ. ಅವ್ನುನ್ನ ಕಳ್ಸು.’ರೆಪ್ಪೆ ಬಡಿಯುವುದರಲ್ಲಿ ಜವಾನ ಮಾಯವಾಗಿದ್ದ. ತಹಸೀಲ್ದಾರ್ ವೆಂಕಟಕೃಷ್ಣರಾಯರು ಅನಂತಮೂರ್ತಿಯವರ ಕಡೆಗೆ ಒಂದು ರೀತಿಯ ಜರ್ಬಿನಲ್ಲಿ ನೋಡಿದರು. ಮತ್ತೆ ಬಾಗಿಲು ಕಟಕಟಿಸಿತು. ಪೀಯೇ ಕೊಂಚ ಧೈರ್ಯವಾಗೇ ಒಳಗೆ ಅಡಿಯಿಟ್ಟ.
ವೆಂಕಟಕೃಷ್ಣರಾಯರು ಅವನನ್ನೇ ಹುಬ್ಬೇರಿಸಿ ನೋಡಿದರು. ’ಯಾರೋ ವಕೀಲ್ ಸುಂದರರಾಯರಂತೆ. ನೋಡಕೆ ಬಂದಿದಾರೆ.’’ಹಿಂಗೆ ಮೀಟಿಂಗ್ನಲ್ಲಿದ್ದಾಗ ಡಿಸ್ಟರ್ಬ್ ಮಾಡಬೇಡಾ ಅಂತ ಎಷ್ಟು ಸಾರಿ ಹೇಳಬೇಕು ನಿಮಗೆಲ್ಲಾ. ಒಂದು ಹತ್ತು ನಿಮಿಷ ಕಾದ್ರೆ ಏನಾತ್ತೆ ನಿಮಗೆ.’ ಪೀಯೇ ಉಗುಳು ನುಂಗುತ್ತಾ ನಿಂತ.’ಏನಂತೆ?’’ಏನೋ ಅಪೀಲಂತೆ.’ ’ಪ್ರೊಸೀಜರ್ ಫಾಲೋ ಮಾಡಿದಾರಾ ನೋಡಿದ್ಯಾ?’ ’ಏನೋ ಪರ್ಸನಲ್ ಅಪೀಲಂತೆ.’
’ಪರ್ಸನಲ್ ಆದ್ರೆ ಸ್ವಲ್ಪ ಕಾಯಕೆ ಹೇಳು. ಯಾವುದೋ ಮೀಟಿಂಗ್ನಲ್ಲಿದ್ದೀನಿ ಅಂತ ಹೇಳು. ಸ್ವಲ್ಪ ಕಾಯ್ಲಿ ಪರವಾಗಿಲ್ಲ.’ ಅಂದವರೇ ಅವನೊಂದಿಗಿನ ಮಾತು ಮುರಿಯುವಂತೆ ಮತ್ತೆ ಅನಂತಮೂರ್ತಿಯವರ ಕಡೆಗೆ ತಿರುಗಿ ’ಮತ್ತೆ’ ಅಂದರು. ಪೀಯೇ ಸದ್ದಿಲ್ಲದೇ ಹೋದ. ಅವನು ಬಾಗಿಲು ಹಾಕಿದ್ದೂ ತಿಳಿಯಲಿಲ್ಲ. ವೆಂಕಟಕೃಷ್ಣರಾಯರು ಅನಂತಮೂರ್ತಿಯವರನ್ನು ಒಂದು ಗತ್ತಿನಿಂದ ನೋಡಿದರು. ತಾವು ಮಾಡಿದ್ದು ಸರಿ ತಾನೇ ಎನ್ನುವ ಭಾವವಿತ್ತೇನೋ ಅವರ ನೋಟದಲ್ಲಿ, ಅನಂತಮೂರ್ತಿಯವರು ಅವರತ್ತ ನೋಡದೇ ಸ್ವೀಟಿನ ಇನ್ನೊಂದು ಮೂಲೆ ಮುರಿದರು. ವೆಂಕಟಕೃಷ್ಣರಾಯರ ಗಂಟಲು ಮತ್ತೆ ತೆಳುವಾದದ್ದನ್ನು ಕಂಡು ಅನಂತಮೂರ್ತಿಯವರಿಗೆ ಆಶ್ಚರ್ಯವಾಯಿತು. ನಿಂತೂ ನಿಂತೂ ಮಾತು ಮುಂದುವರೆಯಿತು.
’ನಿಮ್ಮ ಮಗನ ಆಟೋಗ್ರಾಫ್ ಪುಸ್ತಕ ಮುಗೀತಾ? ನೂರು ಜನ ಸಿಕ್ರಾ-’’ಈ ತಹಸೀಲ್ದಾರ್ ಅಂತ ಆದ ಮೇಲೆ ಊರೂರು ತಿರುಗಿದ್ದಾಯ್ತು. ಕಡೂರು, ಭದ್ರಾವತಿ ಅಂತ ತಿರುಗಾಟದಲ್ಲಿ ಅದೆಲ್ಲಿ ಕಳೆದು ಹೋಯ್ತೋ ಏನೋ. ಇಲ್ಲಿಗೆ ಬಂದ ಆ ಪುಸ್ತಕದ ನೆನಪಾಗಿ ಎಲ್ಲಾ ಕಡೆ ಹುಡುಕಿದ್ದಾಯ್ತು. ಸಿಗಲಿಲ್ಲ. ನಾವೂ ಸುಮ್ಮನಾದ್ವು.’ಅಷ್ಟರಲ್ಲಿ ಮತ್ತೆ ಬಾಗಿಲು ಕಟಕಟಿಸಿ ಮತ್ತೆ ಪೀಯೇ ಮುಖ ತೂರಿಸಿದ. ತಹಸೀಲ್ದಾರ್ ಸಾಹೇಬ್ರು ಮತ್ತೆ ಹುಬ್ಬೇರಿಸಿ ನೋಡಿದರು. ’ಪ್ರೊಫೆಸರ್ ಎಂಜಿ ಈಶ್ವರಪ್ಪ ಅಂತ ಬಂದಿದಾರೆ.’ ’ಏನಂತೆ ಅಂತ ಕೇಳಿದ್ಯಾ? ಪ್ರೊಸೀಜರ್ ಎಲ್ಲಾ ಫಾಲೋ ಮಾಡಿದಾರಾ ನೋಡಿದ್ಯಾ? ಯಾರ್ಯಾರ್ನೋ ತಂದು ಎದುರಿಗೆ ನಿಲ್ಲಿಸ ಬೇಡ.’ ಅವ್ರು ಬಂದಿರದು ಸಾಹೇಬ್ರನ್ನು ಕರ್ಕೆಂಡು ಹೋಗಕಂತೆ.’ ಅನಂತಮೂರ್ತಿಯವರನ್ನು ಸೂಚಿಸಿ ಹೇಳಿದ.
’ನನ್ನನ್ನ ಕರ್ಕೊಂಡು ಹೋಗೋಕೆ ಬಂದಿರಬೇಕು.’ ಅನಂತಮೂರ್ತಿಯವರು ಎದ್ದು ನಿಂತರು. ವೆಂಕಟಕೃಷ್ಣರಾಯರು ಥಟ್ಟಂತೆ ಎದ್ದು ಪೀಯೇ ಕಡೆಗೊಮ್ಮೆ ನೋಡಿ, ಪೀಯೇ ಹೊರಗೆ ಹೋದೊಡನೇ, ಟೇಬಲ್ಲನ್ನು ದಾಟಿ ಮುಂದೆ ಬಂದು ಅನಂತಮೂರ್ತಿಯವರ ಕೈಗಳನ್ನು ಹಿಡಿದು, ’ಸಾರ್, ನನ್ನ ಮೇಲೆ ಒಂದು ಕಥೆ ಬರೆದು ನನ್ನನ್ನು ಲೋಕಪ್ರಿಯನನ್ನಾಗಿ ಮಾಡಿಬಿಟ್ಟಿದ್ದೀರಿ. ಅದಕ್ಕಾಗಿ ನಾನು ಆಜೀವ ಪರ್ಯಂತ ನಿಮ್ಮ ಆಭಾರಿಯಾಗಿರಬೇಕು. ದಯಮಾಡಿ ಬಡವನ ಈ ವಿನಮ್ರ ಅಲ್ಪ ಕಾಣಿಕೆಯನ್ನು ಸ್ವೀಕರಿಸಬೇಕು’ ಎಂದು ಪಠ್ಯ ಪುಸ್ತಕದಲ್ಲಿದ್ದಂತಹ ಮಾತು ಮುಗಿಯುವಷ್ಟರಲ್ಲೇ, ಯಾವುದೋ ನಾಟಕದ ಅಭ್ಯಾಸದ ರೀತಿಯಲ್ಲಿ ಕರಾರುವಕ್ಕಾಗಿ ಪೀಯೇ ಒಂದು ಗಂಧದಹಾರವನ್ನೂ, ಬಣ್ಣದ ಬ್ಯಾಗಡಿ ಹಾಳೆಯಲ್ಲಿ ಸುತ್ತಿದ ಒಂದು ಡಬ್ಬವನ್ನೂ ಒಳಗೆ ತಂದು ವೆಂಕಟಕೃಷ್ಣರಾಯರ ಮುಂದೆ ಹಿಡಿದು ನಿಂತ.
ವೆಂಕಟಕೃಷ್ಣರಾಯರು ಅದನ್ನು ಅನಂತಮೂರ್ತಿಯವರತ್ತ ಮುಂದು ಮಾಡಿದರು. ಅನಂತಮೂರ್ತಿಯವರು ಹಾರವನ್ನೂ, ಡಬ್ಬಿಯನ್ನೂ ಮುಟ್ಟಿದ ಶಾಸ್ತ್ರ ಮಾಡಿ, ಅವೆರಡನ್ನೂ ವೆಂಕಟಕೃಷ್ಣರಾಯರ ಕೈಗಳಲ್ಲೇ ಉಳಿಸಿ ಹೊರಗೆ ಹೋದರು. ಚೇತರಿಸಿಕೊಂಡ ವೆಂಕಟಕೃಷ್ಣರಾಯರು ಹೊರಬರುವುದರಲ್ಲಿ ಅನಂತಮೂರ್ತಿಯವರು ಹೋಗಿಯಾಗಿತ್ತು. ವೆಂಕಟಕೃಷ್ಣರಾಯರಿಗೆ ಇರುಸು ಮುರುಸಾಯಿತು. ತಮ್ಮ ಚೇರಿನ ಕಡೆಗೆ ತಿರುಗಿದಾಗಲೇ ಆ ವಕೀಲ ಕಂಡಿದ್ದು. ಗೋಡೆಗಂಟಿ ನಿಂತಿದ್ದ. ಬೆನ್ನು ಬಾಗಿತ್ತು. ತಲೆಗೊಂದು ಪಟ್ಟಿ. ಮಾಸಲು ಬಟ್ಟೆ. ಕಾಲಿಗೊಂದು ಟೈರಿನ ಚಪ್ಪಲಿ. ಬೆವರಿಗೆ ಕಲೆಕಲೆಯಾಗಿದ್ದ ಪೌಡರ್ರು ಹಚ್ಚಿದ ಮುಖ. ಎಲ್ಲಕ್ಕಿಂತಾ ಆ ದೊಡ್ಡ ದೊಡ್ಡ ಹೊಳ್ಳೆಗಳ ಮೂಗಿನಾಚೆಯೇ ಸಳಸಳಿಸುತ್ತಿದ್ದ ಒಂದೈದಾರು ಬಿಳೀ ಕೂದಲುಗಳನ್ನು ನೋಡಿದೊಡನೇ ವೆಂಕಟಕೃಷ್ಣರಾಯರು ತಮಗಾದ ಜಿಗುಪ್ಸೆಯನ್ನು ದನಿಗೆ ತಂದು ಕೊಂಡರು.
’ಏನಾಗಬೇಕಿತ್ತು?ಹಳೇಬೀಡು ಸುಂದರರಾಯರು ಒಂದೆರಡು ಹೆಜ್ಜೆ ಮುಂದೆ ಬಂದು ಕೈಲಿದ್ದ ಒಂದು ಪೇಪರ್ರನ್ನು ಮುಂದೆ ಮಾಡಿದರು. ವೆಂಕಟಕೃಷ್ಣರಾಯರು ಅದನ್ನು ನೋಡುವುದಿರಲಿ, ಮುಟ್ಟುವ ಗೋಜಿಗೂ ಹೋಗಲಿಲ್ಲ.’ಏನದು?’’ಒಂದು ಅಪೀಲು-’ಇಡೀ ಆಫೀಸು ನಿಬ್ಬೆರಗಾಗಿ, ಹೆದರಿಕೆಯಲ್ಲಿ ಉಸಿರು ಬಿಗಿಹಿಡಿದು ನಿಂತಿತು. ಹಳೇಬೀಡು ಸುಂದರರಾಯರು ನೇರವಾಗಿ ನಾಗರಹಾವಿನ ಬಾಯಿಗೇ ಕೈಯ್ಯೊಡ್ಡಿದ್ದರು. ವೆಂಕಟಕೃಷ್ಣರಾಯರು ಇಡೀ ಆಫೀಸನ್ನು ನೋಡಿ ಅಬ್ಬರಿಸಿದರು, ’ಪ್ರಾಪರ್ ಪ್ರೊಸೀಜರ್ ಫಾಲೋ ಮಾಡಿದಾನೇನ್ರೀ ಇವನು? ಹೆಂಗೆ ನನ್ನತ್ರ ಬರೋಕೆ ಬಿಟ್ರೀ ಇವ್ನನ್ನ? ಚೆಕ್ ಮಾಡಬೇಕೋ ಬೇಡವೋ? ಏನು ಹುಲ್ಲು ತಿಂತೀರೋ ಅನ್ನಾ ತಿಂತೀರೋ ನೀವು? ಒಂದು ಸಿಂಪಲ್ ರೂಲ್ ಫಾಲೋ ಮಾಡೋಕೆ ಬರಲ್ವಾ ನಿಮಗೆ?’ ಅದೇ ರಭಸದಲ್ಲಿ ಹಳೇಬೀಡು ಸುಂದರರಾಯರ ಕಡೆ ತಿರುಗಿ ’ಏನಯ್ಯಾ ದಾಸಾ, ಥ್ರೂ ದ ಪ್ರಾಪರ್ ಚಾನೆಲ್ನಿಂದ ಬರಬೇಕೂ ಅಂತ ಗೊತ್ತಿಲ್ವಾ ನಿಂಗೆ? ನೆಟ್ಟಗೆ ಹಿಂಗೆ ನನ್ನ ಮುಂದೆ ಬಂದು ನಿಂತಿದ್ದೀಯಲ್ಲಾ, ಯಾರ ಮುಂದೆ ನಿಂತಿದ್ದೀಯಾ ಅಂತ ಗೊತ್ತಾ ನಿಂಗೇ? Do you know whom are you dealing with? ಅದೇನಿದ್ಯೋ ಅದನ್ನ ಥ್ರೂ ದ ಪ್ರಾಪರ್ ಚಾನೆಲ್ ಕಳಸು. ಒಂದು ಅಪೀಲನ್ನು ಹೆಂಗೆ ಕಳುಸ್ಬೇಕೂ ಅಂತ ಗೊತ್ತಿಲ್ಲ ಅಂದ ಮೇಲೆ ವಕೀಲ ಅಂತ ಯಾಕಾದೀ. ಮೊದಲೂ ಅದನ್ನು ನನ್ನ ಆಫೀಸ್ ಕ್ಲರ್ಕ್ಗೆ ಕೊಟ್ಟು ನಂಬರ್ ತೊಗೋ. ಆಮೇಲೆ ಒಂದು ವಾರ ಬಿಟ್ಟು ನನ್ನ ಹತ್ರ ಬಾ. ಆವಾಗ ಅಪೀಲೋ ಸುಡುಗಾಡೋ ನೋಡಿ ಉತ್ರ ಕೊಡ್ತೀನಿ.’ ಅಂದವರೇ ದಾಪುಗಾಲಿಟ್ಟು ತಮ್ಮ ಚೇಂಬರ್ ಕಡೆ ಹೊರಟರು.
ಹಳೇಬೀಡು ಸುಂದರರಾಯರು ತಬ್ಬಿಬ್ಬಾದರು. ತಹಸೀಲ್ದಾರರ ಸಿಬ್ಬಂದಿಯ ಒಂದಿಬ್ಬರು ಮೂರು ಜನ ಇವರತ್ತ ಓಡಿ ಬಂದು ಇವರ ಅಪೀಲನ್ನು ಕಸಿಯಲು ನೋಡಿದರು. ಹಳೇಬೀಡು ಸುಂದರರಾಯರಿಗೆ ಅವತ್ತು ಏನಾಗಿತ್ತೋ ಏನೋ, ಅಪೀಲನ್ನು ಗಟ್ಟಿಯಾಗಿ ಕೈಲಿ ಹಿಡಿದೇ ತಹಸೀಲ್ದಾರರತ್ತ ಮುನ್ನುಗ್ಗಿದರು. ’ಮಹಾಸ್ವಾಮಿ, ಮಹಾಸ್ವಾಮಿ-’ ತಹಸೀಲ್ದಾರ್ ವೆಂಕಟಕೃಷ್ಣರಾಯರು ನಿಂತು ಹಿಂತಿರುಗಿದರು.
’ತಮ್ಮ ಸನ್ನಿಧಿಗೇ ನೇರವಾಗಿ ಯಾಕೆ ಬಂದೇ ಅಂದ್ರೆ, ನಿಮ್ಮ ಆಫೀಸಿಗೆ ಕೊಟ್ರೆ ನಿಮ್ಮತ್ರ ಬರೋ ಹೊತ್ತಿಗೆ ಒಂದು ತಿಂಗಳಾಗತ್ತೋ ಏನೋ. ಅಲ್ದೇ ವಕೀಲ್ ನಾಗಭೂಷಣ ಅವರು ಹೇಳಿದ್ರು, ತಾಸಿಲ್ದಾರ್ ಆಫೀಸಲ್ಲಿರಾ ಗುಮಾಸ್ತರೆಲ್ಲಾ ಬರೇ ನಾಲಾಯಕ್ಕು. ಅಲ್ದೇ ಕೇಸಿಗೆ ಇಷ್ಟೂ ಅಂತ ಕಸೀತಾರಂತೆ. ಅವ್ರ ಕೈಗೆ ಕೊಟ್ರೆ ನಿಮ್ಮ ಅಪೀಲು ತಹಸೀಲ್ದಾರ್ರಿಗೆ ಮುಟ್ದಂಗೇ, ಅದಕ್ಕೇ ನೆಟ್ಟಗೆ ಸಾಹೇಬ್ರಿಗೇ ಕೊಡೂ ಅಂತ. ಇವ್ರು ಕೇಳಿಕೇಳ್ದಂಗೆಲ್ಲಾ ಕೊಡಕೆ ನನತ್ರ ಅಷ್ಟು ರೊಕ್ಕ ಎಲ್ಲಿಂದ ಬರಬೇಕು. ಅದಕ್ಕೇ ನೇರವಾಗಿ ತಮ್ಮ ಸನ್ನಿಧಿಗೇ ಬಂದೆ. ತಾವು-’
ತಹಸೀಲ್ದಾರ್ ವೆಂಕಟಕೃಷ್ಣರಾಯರು ಯಾವ ಪರಿ ಹಳೇಬೀಡು ಸುಂದರರಾಯರತ್ತ ನುಗ್ಗಿದರೂ ಅಂದರೆ ಇಡೀ ಆಫೀಸೇ ಉಸಿರು ಬಿಗಿ ಹಿಡಿದು ಹಳೇಬೀಡು ಸುಂದರರಾಯರ ಅಪರಕರ್ಮಗಳಿಗೆ ತಯಾರಾಯಿತು’ಈಡಿಯಟ್, ಎಷ್ಟಯ್ಯಾ ಕೊಬ್ಬೂ ನಿನಗೇ? ಯಾವ ಲಾಯರ್ರೋ ನೀನು? ಅದೇನು ಗೀಚ್ಕೊಂಡು ತಂದಿದೀಯಾ? ನೋಡಲ್ಲಾ ಕಣಯ್ಯಾ. ನೋಡಲ್ಲ ಅದನ್ನ.’ ಹಳೇಬೀಡು ಸುಂದರರಾಯರು ನೋಡು ನೋಡುತ್ತಿದ್ದಂತೇ ಅವರ ಕೈಗಳಿಂದ ಆ ಅಪೀಲನ್ನು ವೆಂಕಟಕೃಷ್ಣರಾಯರು ಕಸಿದು ಕೊಂಡದ್ದೇ ಅಲ್ಲದೇ ಪರಪರ ಹರಿದು ಬಿಸಾಕಿ ಮತ್ತೆ ಅಬ್ಬರವನ್ನು ಮುಂದುವರೆಸಿದರು ’ನನ್ನೆದುರಿಗೇ ನನ್ನ ಆಫೀಸನ್ನ ನಾಲಾಯಕ್ಕು ಅಂತಿದೀಯಲ್ಲಾ ಯಾರ ಮುಂದೆ ನಿಂತಿದೀ ಗೊತ್ತಾ ನಿಂಗೇ? ಯಾರ ಹತ್ರ ಮಾತಾಡ್ತಾಯಿದ್ದೀಯಾ ಗೊತ್ತಾ ನಿಂಗೆ? ಇನ್ನೊಂದು ನಿಮಿಷ ಇಲ್ಲಿ ನಿಂತಿದ್ರೆ I shall punish you.
I will have you thrown you into gutters. ಇನ್ನೊಂದು ಮಾತಾಡಿದ್ರೆ ದಂಡ ಹಾಕ್ತೀನಿ. ಈ ಊರಿಂದಾನೇ ಗಡೀಪಾರು ಮಾಡ್ತೀನಿ. I will see that you never enter the court compounds…’ ವೆಂಕಟಕೃಷ್ಣರಾಯರು ಇನ್ನೂ ಏನೇನು ಅಬ್ಬರಿಸಿದರೋ, ಹಳೇಬೀಡು ಸುಂದರರಾಯರು ದೇಹದ ಪ್ರತಿ ಅಂಗಾಂಗವನ್ನೂ ಪ್ರತ್ಯೇಕವಾಗಿ ಪ್ರತ್ಯೇಕವಾಗಿ ಕಟಕಟ ಶಬ್ದದೊಂದಿಗೆ ಥರಗುಟ್ಟಿಸುತ್ತಾ ನಿಧಾನವಾಗಿ ಕುಸಿಯತೊಡಗಿದ್ದರಿಂದ ಅವರ ಕಿವಿಗೆ ಬೀಳಲಿಲ್ಲ. ಪಕ್ಕದ್ದಲ್ಲಿದ್ದವರು ಅವರನ್ನು ಹಿಡಿಯದೇ ಹೋಗಿದ್ದಲ್ಲಿ ಹಳೇಬೀಡು ಸುಂದರರಾಯರು ಬಿದ್ದೇ ಬಿಡುತ್ತಿದ್ದರೋ ಏನೋ.
ತಮ್ಮನ್ನು ಹಿಡಿದವರ ಆಧಾರದ ಮೇಲೆ ಜೋತಾಡುತ್ತಾ ನಿಂತಿದ್ದ ಹಳೇಬೀಡು ಸುಂದರರಾಯರನ್ನು ಒಮ್ಮೆ ನೋಡಿ ಅದೇ ಬೀಸಿಗೇ ಇಡೀ ಆಫೀಸನ್ನು ಅಳೆದು, ಎಲ್ಲರೂ ಭಯಗ್ರಸ್ತರಾಗಿ ನಿಂತಿದ್ದನ್ನು ಕಂಡು, ಎದೆ ತುಂಬಿ ಬಂದ ತಹಸೀಲ್ದಾರ್ ವೆಂಕಟಕೃಷ್ಣರಾಯರು ತಮ್ಮ ಚೇಂಬರನ್ನು ಪ್ರವೇಶಿಸಿದರು. ಹಳೇಬೀಡು ಸುಂದರರಾಯರಿಗೆ ಆಸರೆಯಾಗಿ ನಿಂತಿದ್ದ ಗುಮಾಸ್ತರುಗಳು ಹಳೇಬೀಡು ಸುಂದರರಾಯರನ್ನು ಆಫೀಸಿನಿಂದ ಹೊರಗೆ ಕರೆ ತಂದು, ಕಟ್ಟೆಯ ಮೇಲೆ ಕೂರಿಸಿ ನೀರು ತಟ್ಟಿ, ನೀರು ಕುಡಿಸಿ, ಮತ್ತೆ ಇಹಲೋಕಕ್ಕೆ ಕಳುಹಿಸಿದರು.
ಹಳೇಬೀಡು ಸುಂದರರಾಯರು ಹೈಸ್ಕೂಲು ಮೈದಾನಕ್ಕೆ ಕಾಲಿಟ್ಟಾಗ ಮಧ್ಯಾಹ್ನದ ಎರಡೂವರೆ. ಬಿಸಿಲು ಕೂಡಾ ಕುದಿಯುತ್ತಿತ್ತು. ಒಂದು ಒಂದೂವರೆ ಅಡಿ ದೂರದಲ್ಲಿನ ನೆಲ ಕುಣಿಯುತ್ತಿತ್ತು. ಪಶು-ಪಕ್ಷಿಗಳ ಮಾತಿರಲಿ, ಸೊಳ್ಳೆ, ನೊಣ, ನೊರಜು, ಜಿರಳೆ ಮುಂತಾದ ಕ್ರಿಮಿಗಳೂ ಕೂಡಾ ಬಿಸಿಲಿಗೆ ತಲೆಯೊಡ್ಡುವ ಧೈರ್ಯ ಮಾಡುತ್ತಿರಲಿಲ್ಲ. ಹಳೇಬೀಡು ಸುಂದರರಾಯರಿಗೆ ಬಿಸಿಲು-ಬೆಳದಿಂಗಳಿನ ಪರಿವೆಯೇ ಇದ್ದಂತಿರಲಿಲ್ಲ. ಬೆಳದಿಂಗಳಿನಲ್ಲಿ ನಡೆಯುವಂತೆ ಹೆಜ್ಜೆಯ ಮೇಲೊಂದು ಹೆಜ್ಜೆಯನ್ನಿಕ್ಕುತ್ತಾ, ಧೋ ಧೋ ಬೆವರುತ್ತಾ ನಡೆಯುತ್ತಿದ್ದರು. ಮನೆ ಮುಟ್ಟುವಷ್ಟರಲ್ಲಿ ಇಡೀ ಮೈ ಕಾದ ಹಂಚಿನಂತಾಗಿತ್ತು. ಅದು ಹೇಗೆ ಗೇಟು ತೆಗೆದರೋ, ಅದು ಹೇಗೆ ಬಾಗಿಲಿನ ಬೀಗ ತೆಗೆದರೋ, ಅದು ಹೇಗೆ ಮನೆಯೊಳಗೆ ಹೊಕ್ಕರೋ, ಅದು ಹೇಗೆ ನೆಲದ ಮೇಲೆ ಮಲಗಿದರೋ…
ಭಾನುವಾರ. ಹಳೇಬೀಡು ಸುಂದರರಾಯರ ಮೈ ಯಾವ ರೀತಿ ಕಾದಿತ್ತೂ ಅಂದರೆ ಇಡೀ ಕೋಣೆ ಬೆಚ್ಚಗಾಗಿತ್ತು. ಮೈ ಮೇಲೆ ಪ್ರಜ್ಞೆಯಿಲ್ಲದೇ, ನೆಲದ ಮೇಲೆ ಉಟ್ಟ ಉಡುಗೆಯನ್ನು ಕಳಚಿ ಬಿಸಾಕಿದಂತೆ ಬಿದ್ದಿದ್ದ ಹಳೇಬೀಡು ಸುಂದರರಾಯರ ಮುಚ್ಚಿದ ಕಣ್ಣ ಹಿಂದೆ ಹಳವಂಡಗಳು, ಸ್ವಪ್ನಗಳು, ಅರ್ಥವಿಲ್ಲದ ದೃಶ್ಯಗಳ ಮೆರವಣಿಗೆ ಸಾಗಿತ್ತು: ಈಗ ತುಕ್ಕೋಜಿಯನ್ನು ಕಂಡರು. ’ಕಳ್ರನ್ನ ಹಿಡಿಯಕೆ ಒಂದೆ ಬಲೆ ಹೊಲ್ಕೊಡೋ ತುಕ್ಕೋಜೀ ನಿಂಗೆ ಪುಣ್ಯ ಬರ್ತತೆ. ಕೋಟ್ನೆಗೆ ಯಿಟ್ಕಬೇಕು ಅಂತಾದ್ದು ಹೊಲ್ಕೊಡು.’ ತುಕ್ಕೋಜಿ ಕಾಲಿಗೆ ಬಿದ್ರು. ತಿರುಗಿ ನೋಡಿದ್ರೆ ಸೊಡ್ಲಂಗಿ ಹಾಲಪ್ಪ ತೊಡೆ ಸಂದೀಲಿ ಕೈ ಹಾಕಿ ಕೆರಕೊಂಡು ಕೂತಿದ್ದ. ’ಸೂಳೇಮಕ್ಳು ಕಳ್ರು ಇಲ್ಲೇ ನನ್ನ ಹಾಸಿಗೇ ಕೆಳಗಿದರೆ ನೋಡ್ರೀ. ಹಿಡ್ಕೊಡ್ರೀ. ಪುಣ್ಯ ಬರ್ತತೆ.’ ಸೊಡ್ಲಂಗಿ ಹಾಲಪ್ಪನ ಕಾಲಿಗೆ ಬಿದ್ದರು. ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋದ್ರೆ ನಾಗಭೂಷಣ. ’ನಿಮ್ಮಪ್ಪನ ತಿಥೀ ಜತಿಗೆ ನಮ್ಮಪ್ಪಂದೂ ಮಾಡಿಬಿಡ್ರೀ. ನಿಮ್ಮಪ್ಪೇನರ ನಂಗೆ ಸಿಕ್ರೆ ನೀವು ಚನ್ನಾಗಿದೀರ ಅಂತ ತಿಳುಸ್ತೀನಿ.’
ಇತ್ಲಗೆ ತಿರುಗಿದರೆ ಹಳೇಬೀಡು ಸುಂದರರಾಯರೇ, ಪಿಸಿದ ಹಳೇ ಕೋಟು ಹಾಕ್ಕೊಂಡು ನಿಂತಿದ್ರು. ’ಹೊಸಾ ಕೋಟು ಹೊಲಿಸಿಕೊಟ್ರೂ ಹಳೇದೇ ಹಾಕ್ಕಂತೀಯಲ್ಲೋ ಧನಗರ್, ನಿನ ಚಾಳಿ ಯತ್ಲಗೆ ಹೋಗತ್ತೆ ಹೇಳು.’ ಬಲಕ್ಕೆ ತಿರುಗಿದ್ರೆ ತಹಸೀಲ್ದಾರ್ ಸಾಹೇಬ್ರು. ’ಪ್ರಾಪರ್ ಚಾನೆಲ್ನಿಂದಾನೇ ಬರ್ತೀನಿ ತಹಸೀಲ್ದಾರ್ ಸೂಳಾಮಗನೇ. ಒಂದು ಸಾವಿರ ಪುಟದ ಅಪೀಲ್ ಬರ್ಕೆಂಡು ಬರ್ತೀನೋ.’ ಮತ್ತೆ ನೆಲ ಬಿಟ್ಟು ಒಂದು ಹತ್ತು ಅಡಿ ಮೇಲಕ್ಕೆ ಹೋದ್ರೆ ಅಲ್ಲಿ ತಮ್ಮ ಅಪ್ಪ, ಹಳೇಬೀಡು ರಾಮಕೃಷ್ಣರಾಯರು. ’ಬಡ್ಕಂಡೆ ಕೇಳಿದ್ಯಾ, ಲಾಯರ್ರಾಗಲ್ಲೋ ಅಂತ. ಈಗ್ನೋಡು.’ ಹಳೇಬೀಡು ರಾಮಕೃಷ್ಣರಾಯರು ಮಗನ ಬೆನ್ನುದಡವಿ ಸಮಾಧಾನ ಮಾಡಿದರು. ಮಗನ ಕೈ ಹಿಡಿದು ಎರಡು ಹೆಜ್ಜೆ ಇನ್ನೂ ಮೇಲೆ ಕರೆದೊಯ್ದರು. ಅವತ್ತೇ ಸಾಯಂಕಾಲ ಹಳೇಬೀಡು ಸುಂದರರಾಯರು ಇಹ ಲೋಕದ ವ್ಯಾಪಾರ ಮುಗಿಸಿದರು.
ಮಂಗಳವಾರ. ನಾಗಭೂಷಣ ಚಡಪಡಿಸಿದ. ದಿಸಾ ಬರ್ತಿದ್ರಲ್ಲ. ಮೂರು ದಿಸಾ ಆದ್ವು. ಪತ್ತೆಯಿಲ್ಲ. ಅಂದವನೇ ಜವಾನನ್ನು ಕರೆದು ’ಹಳೇಬೀಡು ಸುಂದರರಾಯರ ಮನೆ ಗೊತ್ತೇನೋ ನಿಂಗೆ’ ಅಂದ. ಜವಾನ ’ಹೂಂ’ ಅಂದಿದ್ದಕ್ಕೆ ’ಮನೆಗೆ ಹೋಗಿ ಹೇಳು, ಗುರುವಾರ ಕೇಸಂತೆ, ಬ್ರೀಫಿಂಗ್ ತಗಳಕೆ ಯಜಮಾನ್ರುನ್ನ ನೋಡಕೆ ಬರಬೇಕಂತೆ ಅಂತ.’ಹೋದ ಜವಾನ ತಾಸೂ ಎರಡು ತಾಸು ಬಿಟ್ಟು ವಾಪಸ್ಸು ಬಂದ.
’ಹೇಳಿದ್ಯೇನೋ.’’ಹೇಳಿದೆ, ಸುಂದರ್ರಾಯ್ರಿಗೆ ಬರಕ್ಕಾಗಲ್ಲ.’ ’ಯಾಕೆ?’ ’ಹೋಗಿ ಅದೆಷ್ಟು ದಿಸಾಗಿದ್ವೋ ಯೇನೋ. ನಾನೂ ಬಾಳಾ ಹೊತ್ತು ಬಾಗ್ಲು ತಟ್ತನೇ ಯಿದ್ದೆ. ಆಮೇಲೆ ಯಾಕೋ ಅನುಮಾನ ಬಂದು, ಬಾಗ್ಲು ವಡೆದು ತಗುದ ಮೇಲೇ ಗೊತ್ತಾಗಿದ್ದು.’ ಹೀಗೆ ಹಳೇಬೀಡು ಸುಂದರರಾಯರು ಲೋಕದ ವ್ಯಾಪರ ಮುಗಿಸಿದರೂ ಅಂತ ಲೋಕಕ್ಕೆ ಗೊತ್ತಾಗಿದ್ದು ಮಂಗಳವಾರ.
ಪೋಲೀಸು ಬಂದು ಮಹಜರು ಮಾಡಿ, ಮನೆಯಲ್ಲಿ ಇದ್ದ ಮೂರೂ ಮುಕ್ಕಾಲು ಸಾಮಾನನ್ನು ಒಂದು ಟಾಂಗಾ ಗಾಡೀಲಿ ತುಂಬಿ, ಮನೆಗೆ ಬೀಗ ಹಾಕಿ, ಹಳೇಬೀಡು ಸುಂದರರಾಯರ ಬಾಡೀನ್ನ ಆಸ್ಪತ್ರೆಗೆ ಸಾಗಿಸಿ, ಕೊಯ್ದ ಶಾಸ್ತ್ರ ಮಾಡಿ, ಹಳೇಬೀಡು ಸುಂದರರಾಯರ ಪಾರ್ಥಿವ ಶರೀರವನ್ನು ಅಗ್ನಿಗೆ ಅರ್ಪಿಸಿದರು. ದಾವಣಗೆರೆಯ ನೆನಪಿನಿಂದ ಹಳೇಬೀಡು ಸುಂದರರಾಯರು ಅಳಿಸಿಹೋದರು. ಯಾರಿಗೂ ಬೇಡವಾದ, ಯಾರ ಕಣ್ಣಿಗೂ ಬೀಳದ, ಯಾವುದರಲ್ಲೂ ಆಸಕ್ತಿಯಿರದ, ಯಾರಲ್ಲೂ ಆಸಕ್ತಿ ಹುಟ್ಟಿಸದ, ಯಾರನ್ನೂ ಪ್ರೀತಿಸದ, ಯಾರೂ ಪ್ರೀತಿಸದ, ತನ್ನ ನೆರಳಿಗೇ ತಾನು ಅಪರಿಚಿತನಾಗಿ ಉಳಿದ, ಜಗತ್ತಿಗೆ ಒಂದು ಅಪಹಾಸ್ಯವಾಗಿ ಕಂಡುಬಂದ, ಲೋಕದ ನಿಂದನೆಗಳನ್ನು, ಭರ್ತ್ಸನೆಗಳನ್ನು, ಮೈಗೂಡಿಸಿಕೊಂಡ, ಜೀವನದಲ್ಲಿ ಏನೂ ಮಾಡದೇ, ಏನನ್ನೂ ಸಾಧಿಸದೇ ಬೂದಿಯಾದ, ಆದರೆ ಒಂದು ಕೋಟಿನಿಂದಾಗಿ ಜೀವನದ ಕೊನೆಯ ದಿನಗಳಲ್ಲಿ ಜೀವನೋತ್ಸಾಹ ತುಂಬಿಕೊಂಡಿದ್ದ ಹಳೇಬೀಡು ಸುಂದರರಾಯ ಎಂಬ ಜೀವ ಹೀಗೆ ದಾವಣಗೆರೆಯ ಇತಿಹಾಸದ ಪುಟಗಳಿಂದ ಅಳಿಸಿ ಹೋಯಿತು ಎಂಬಲ್ಲಿಗೆ ಈ ಕಥೆ ಮುಗಿಸಬೇಕಿತ್ತು. ಆದರೆ ಸತ್ತ ಮೇಲೂ ಬದುಕಿನ ಮೇಲೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಾರೆಂದು ಯಾರಿಗೆ ಗೊತ್ತಿತ್ತು…
ಹಳೇಬೀಡು ಸುಂದರರಾಯರು ತೀರಿಕೊಂಡು ತಿಂಗಳು ಎರಡು ತಿಂಗಳು ತುಂಬುವುದರಲ್ಲಿ, ಕತ್ತಲಾದ ಕೂಡಲೇ ಹೈಸ್ಕೂಲು ಮೈದಾನದಲ್ಲಿ ಯಾರೋ ಒಬ್ಬರು ಕಳೆದ ಕೋಟೊಂದನ್ನು ಹುಡುಕುತ್ತಾ ಅಲೆಯುತ್ತಿದ್ದಾರೆ ಎನ್ನುವ ಭೀಕರ ಸುದ್ದಿ ದಾವಣಗೆರೆಯ ಉದ್ದಗಲಕ್ಕೂ ಹರಡಿತು. ಒಂದು ಹೆಣ ಕರೀ ಕೋಟನ್ನು ಹುಡುಕಿ ಅಲೆಯುತ್ತಿದೆ, ಕತ್ತಲಾದ ಮೇಲೆ ಹೈಸ್ಕೂಲು ಮೈದಾನದಲ್ಲಿ ಯಾರೇ ಅಡ್ಡಾಡಿದರೂ ‘ಕೋಟು ಕೊಡ್ರೋ, ಕೋಟು ಕೊಡ್ರೋ‘ ಅಂತ ದುಂಬಾಲು ಬೀಳುತ್ತದಂತೆ, ಅದರ ಕೈಗೆ ಸಿಕ್ಕಿದವರು ಕೋಟನ್ನೇನಾದರೂ ಹಾಕಿಕೊಂಡಿದ್ದಲ್ಲಿ ಕೋಟನ್ನೇ ಸೆಳೆಯುತ್ತದಂತೆ. ಕೊನೆಗೊಂದು ದಿನ ಕೋರ್ಟಿನ ಗುಮಾಸ್ತನೊಬ್ಬ ಆ ಹೆಣವನ್ನು ಕಣ್ಣಾರೆ ಕಂಡ ಮೇಲೆ ’ಅದೂ ಯಾರಿಲ್ಲ, ನಮ್ಮ ಕೋರ್ಟ್ನೆಗೆ ಆ ಸ್ಟಾಂಪ್ವೆಂಡರ್ರು ವೆಂಕಟ್ರಾಮಶೆಟ್ಟಿ ಮಗ್ಲಗೆ ಕುಂತು ಪೆಟಿಶನ್ನೂ ಸುಡುಗಾಡೂ ಬರ್ಕೊಡ್ತಿದ್ನಲ್ಲ ಆ ಹೊಳ್ಳೇ ಸುಂದರರಾಯ’ ಅಂತ ಗ್ಯಾರಂಟಿಯಾಯಿತು.
ಬರಬರುತ್ತಾ ಹೈಸ್ಕೂಲು ಮೈದಾನವನ್ನೂ ದಾಟಿ ಸುತ್ತಮುತ್ತಲಿನ ನಾಗರಿಕ ವಲಯಗಳಿಂದ ಈ ಕೋಟು ಸೆಳೆಯುವ ಪ್ರಕರಣಗಳ ವರದಿಗಳು ಬಂದವು. ಇವತ್ತು ’ರಾಮಂಡ್ಕೋ ಸರ್ಕಲ್ನೆಗೆ ನನ್ನ ಕೋಟು ಕಿತ್ಗಣಕೆ ಬಂದಿತ್ತು’ ಅಂತ ಸುದ್ದಿ ಬಂದಲ್ಲಿ, ಮಾರನೇ ದಿನ ’ಸೈಕಲ್ಲಿಗೆ ನೇತಾಕ್ಕೆಂಡು ಬರ್ತಿದ್ದೆ, ಹಂಗೇ ಬಂದು ಯಳ್ಕೆಂಡು ಹೋಗದಾ’ ಅಂತ ಲಾಯರ್ ಬೀದಿಯಿಂದ ವರದಿ ಬಂತು. ಇನ್ನೊಂದು ದಿನ ಸೆಕೆಂಡ್ ಶೋ ಮುಗಿಸ್ಕೆಂಡು ಬರತಿದ್ದ ವಕೀಲ ’ಗಾಂದೀ ಸರ್ಕಲ್ಲತ್ರ ಕೋಟು ಹೋತೂಂತ’ ರಿಪೋರ್ಟು ಮಾಡಿದ. ಈ ಹೆಣದ ಉಪದ್ರವದಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೇ ‘ಈ ಹೆಣಾನ್ನ, ಜಿಂದಾ ಯಾ
ಮುರ್ದಾ, ಹಿಡಕೊಟ್ಟೋರಿಗೆ ಐದು ಸಾವಿರ ರೂಪಾಯಿಗಳ ಬಹುಮಾನ‘ ಅಂತ ಪೇಪರ್ರಲ್ಲಿ ಬರೆಸಿದ್ದೂ ಅಯಿತು. ಯಾರು ಯಾರನ್ನು ಹಿಡಕೊಟ್ರೋ, ಯಾರು ಯಾರನ್ನ ಹೆಣ ಅಂತ ಗುರುತು ಹಚ್ಚಿದ್ರೋ ಯಾರಿಗ್ಗೊತ್ತು ಒಟ್ನಲ್ಲಿ ಕೋಟು ಸೆಳೆಯುವ ಪ್ರಕರಣ ಮಾತ್ರ ನಿಲ್ಲಲಿಲ್ಲ.
ಕಥೆಯ ಈ ಅಮಾನುಷ ತಿರುವಿಗೆ ಒಂದು ರೀತಿಯಲ್ಲಿ ಕಾರಣರಾದ ತಹಸೀಲ್ದಾರ್ ವೆಂಕಟೃಷ್ಣರಾಯರು ಮಾತ್ರ ಪಶ್ಚಾತ್ತಾಪದಿಂದ ಬೇಯುತ್ತಿದ್ದರು. ನಾನು ಹೇಳಿದ ಹಾಗೆ ಆತ ದುಷ್ಟರೇನಲ್ಲ. ಅವತ್ತು ಅದ್ಯಾವ ದೇವರು ಮೈಮೇಲೆ ಬಂದಿತ್ತೋ ಹಾಗೆ ಕೂಗಾಡಿದರು. ಸಾಯಂಕಾಲದ ಹೊತ್ತಿಗೆ ತಾನು ಮಾಡಿದ್ದು ಸರಿಯಲ್ಲ ಅನಿಸಿ ಹಪಹಪಿಸಿದರು. ಆ ಹೊಳ್ಳೆ ಮೂಗಿನ ವ್ಯಕ್ತಿ ಮತ್ತೆಲ್ಲಾದರೂ ಸಿಕ್ಕರೆ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎನ್ನುವವರೆಗೂ ಹೋಗಿತ್ತು ಅವರ ಯೋಚನೆ. ಆ ಹೊಳ್ಳೆ ಮೂಗಿನ ವಕೀಲನಿಗಾಗಿ ಹುಡುಕಾಡಿದರು, ಹುಡುಕಾಡಿಸಿದರು ಕೂಡಾ. ಆತ ಸಿಗಲಿಲ್ಲ. ಅದೇ ಚಿಂತೆಯಿಂದ ವೆಂಕಟಕೃಷ್ಣರಾಯರು ಸವೆಯುತ್ತಾ ಬಂದರು. ಆಫೀಸಿನಲ್ಲಿರಲಿ, ಮನೆಯಲ್ಲೂ ಮಾತು ನಿಲ್ಲಿಸಿದರು. ರಾತ್ರಿ ಅದೆಷ್ಟೋ ಹೊತ್ತಿನ ತನಕ ಆಫೀಸಿನಲ್ಲೇ ಕೂತಿರುತ್ತಿದ್ದರು. ಅವರೇ ಆಫೀಸಿನ ಬಾಗಿಲು ಹಾಕಿ, ಬೀಗ ಹಾಕಿ ಮನೆಗೆ ಹೋದ ರಾತ್ರಿಗಳೂ ಇವೆ.
ಅಂತಹ ಒಂದು ರಾತ್ರಿ, ಸುಮಾರು ಹನ್ನೊಂದೂವರೆಯಾಗಿರಬೇಕು, ಕುರ್ಚಿಯ ಬೆನ್ನಿಗೆ ಅಂಟಿಸಿದ್ದ ಕೋಟನ್ನು ಹಾಕಿಕೊಂಡು ಆಫೀಸಿಗೆ ಬೀಗ ಜಡಿದು, ಕಾಯುತ್ತಿದ್ದ ಡ್ರೈವರ್ಗೆ ’ನಡ್ಕೊಂಡೇ ಬರ್ತೀನಿ, ನೀನು ಹೋಗು’ ಅಂತ ಆಜ್ಞೆಯಿತ್ತು ಮನೆಯತ್ತ ಹೊರಟರು. ಹತ್ತು ನಿಮಿಷಗಳ ನಡಿಗೆಯಾಗಿರಬೇಕು, ಪೀಬೀ ರಸ್ತೆಯನ್ನು ದಾಟಿ ಹೈಸ್ಕೂಲು ಮೈದಾನಕ್ಕೆ ಕಾಲಿಟ್ಟರು. ಯಾವ ಹುಲುಮಾನವನ ಸುಳಿವೂ ಕಾಣದ ಬಟ್ಟಂಬಯಲು.
ಮೇಲೆ ಹುಚ್ಚು ಬೆಳದಿಂಗಳು. ಜೊತೆಗೆ ಹಾಯಾಗಿದ್ದ ತಂಗಾಳಿ. ಆಯಾಚಿತವಾಗಿ ಯಾವುದೋ ಹಾಡು ನೆನಪಿಗೆ ಬಂದು ಗುಣುಗಿದರು. ಹೈಸ್ಕೂಲು ಮೈದಾನ ಅರ್ಧ ದಾಟುವಷ್ಟರಲ್ಲಿ ಮನಸ್ಸು ಹಗುರವಾಗಿತ್ತು. ಬೆನ್ನ ಹುರಿ ನೆಟ್ಟಗಾಗುತ್ತಿತ್ತು. ಇದ್ದಕ್ಕಿದ್ದಂತೇ ’ಕೋಟ್ ಕೊಡೋ, ನನ್ ಕೋಟ್ ಕೊಡೋ’ ಅಂತ ಯಾರೋ ಅಂಗಲಾಚಿದ್ದು ಕೇಳಿತು. ಮರುಕ್ಷಣವೇ ಅವರ ಕೋಟನ್ನ ಹಿಂಬದಿಯಿಂದ ಯಾರೋ ಎತ್ತಿದ ಹಾಗಾಯಿತು. ಕೋಟನ್ನು ತಮ್ಮ ದೇಹದಿಂದ ಜಾರಿಹೋಗದಂತೆ ಗಟ್ಟಿಯಾಗಿ ಹಿಡಿದು ಹಿಂತಿರುಗಿದರು. ಅದೇ ಹೊಳ್ಳೆ ಮೂಗಿನ ವಕೀಲ. ಮೂಗಿನಿಂದ ನಾಲ್ಕಿಂಚು ಉದ್ದದ ಬಿಳೀ ಪೊದೆಗೂದಲು, ಸಳಸಳಿಸುತ್ತಿದೆ. ಆತನೂ ವೆಂಕಟಕೃಷ್ಣರಾಯರನ್ನು ನೋಡಿದ. ಇವರೂ ನೋಡಿದರು. ಒಂದರೆ ಕ್ಷಣ ನಡೆಯಿತು ದೃಷ್ಟಿಯುದ್ಧ. ಇದ್ದಕ್ಕಿದ್ದಂತೇ ಹೊಳ್ಳೆ ಮೂಗಿನ ವಕೀಲ ಕಿರುಚಿದ, ’ಸಿಕ್ಕಿದ್ಯಾ ತಾಸಿಲ್ದಾರ್ ಸೂಳೇಮಗನೇ, ನಿನ್ನೇ ಹುಡುಕ್ತಿದ್ನಲ್ಲೋ ಇಷ್ಟು ದಿಸಾ. ಅವತ್ತು ಕೋಟು ಕೊಡಸೋ ಅಂದ್ರೇ ಮುಕ್ಳೆಲ್ಲಾ ಗಾಂಚಲಿ ಮಾಡಿದ್ಯಲ್ಲಾ, ಇವತ್ತು ನಿನ್ನ ಕೋಟು ಕಸ್ಗಂಡು ಹೋಗ್ತೀನಿ. ಅದೇನು ಹರ್ಕೆಂತೀಯೋ ಹರ್ಕ. ಬಿಚ್ಚೋ. ಬಿಚ್ಚಲೇ-’ ಆ ಹೆಣಕ್ಕೆ ಅದೆಂತಹ ಶಕ್ತಿಯಿತ್ತೂ ಅಂದರೆ ಕ್ಷಣ ಮಾತ್ರದಲ್ಲಿ ತಹಸೀಲ್ದಾರ್ ವೆಂಕಟಕೃಷ್ಣರಾಯರ ಕೋಟು ಅವರಿಂದ ಕಳಚಿ ಆ ಹೊಳ್ಳೆ ಮೂಗಿನ ವಕೀಲನ ಕೈಯ್ಯಿಗೆ ಬಂತು. ಆ ಹೆಣ ಕೋಟು ಸೆಳೆದ ರಭಸಕ್ಕೆ ವೆಂಕಟಕೃಷ್ಣರಾಯರು ತತ್ತರಿಸಿ ಬೋರಲು ಬಿದ್ದರು. ಎದ್ದು ತಿರುಗಿ ನೋಡುವಷ್ಟರಲ್ಲಿ ಆ ಬಟ್ಟಂಬಯಲಿನಲ್ಲಿ ಆ ಹೊಳ್ಳೆ ಮೂಗಿನ ವಕೀಲ ಅದೆಲ್ಲಿ ಮಾಯವಾದನೋ…
ಆ ಕೋಟು ಹಳೇಬೀಡು ಸುಂದರರಾಯರಿಗೆ ಸರಿ ಹೋಯಿತೇನೋ, ಒಟ್ಟಿನಲ್ಲಿ ಹಳೇಬೀಡು ಸುಂದರರಾಯರಿಗೆ ಕೋಟು ಸಿಕ್ಕಿತು. ಆ ಮೇಲೆ ಕೋಟು ಸೆಳೆಯುವ ಪ್ರಕರಣಗಳು ಎಲ್ಲೂ ಕೇಳಿ ಬರಲಿಲ್ಲ. ‘ಕೋಟು ಕೊಡು‘ ಎಂದು ಪೀಡಿಸುವ ಆ ಹೆಣ ಕೂಡಾ ಯಾರ ಕಣ್ಣಿಗೂ ಬೀಳಲಿಲ್ಲ ಎಂಬಲ್ಲಿಗೆ ಈ ಕಥೆ ಮುಗಿಯಿತು.]]>
Like this:
Like Loading...
Related
Sir,
Could you please index it and provide a link on the main page so that it would be easy to read whenever we want? Else it is hard to keep track of the series.
Suri bareda halebeediu sundararayara katheyannu arambhada kanthininda koneyavaregoo odide. sundara shaili, badathana, adhikarashahiya darpa hagoo vyavstheya hulukugalannu suri anavaragolisuvalli saphalaragiddare. katheya nirupaneyalli suri geddiddaare, idannu pusthaka rupadalli prakatisidare ellarigoo purna odalu labhyavaguthade. athava dhaaraavaahiya ella kanthgalannu ommege oduvanthagalu avadhi vyavasthe maadidre olleyadu.