ಸೂರಿ -18: ವಕೀಲಿ ಕೋಟು ತಯಾರಾಗಿತ್ತು.

-ಸೂರಿ ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 18 ಗುರುವಾರದಿಂದ ಬುಧವಾರ. ಇಕ್ಕುವ ಹೆಜ್ಜೆಯ ಸದ್ದಾಗದಂತೆ ನಡೆದು ತುಕ್ಕೋಜಿಯ ಅಂಗಡಿಯ ಬಾಗಿಲಲ್ಲಿ ಓರೆ ನಿಂತು ಹಳೇಬೀಡು ಸುಂದರರಾಯರು ಒಳಗೆ ಇಣುಕಿದರು. ತುಕ್ಕೋಜಿ ಹೊಲಿಗೆಯಲ್ಲಿ ಮಗ್ನನಾಗಿದ್ದ. ಸರೋಜ ಎಲ್ಲೂ ಕಾಣಲಿಲ್ಲ. ಹಾಗೇ ಇಣುಕಿ ನೋಡುತ್ತಾ ತುಕ್ಕೋಜಿ ತಮ್ಮ ಕಡೆ ಒಂದು ದೃಷ್ಟಿ ಹಾಯಿಸುವುದನ್ನೇ ಕಾಯುತ್ತಾ ನಿಂತರು. ಯಾವುದೋ ಒಂದು ಶುಭ ಮುಹೂರ್ತದಲ್ಲಿ ತುಕ್ಕೋಜಿ ಇವರತ್ತ ನೋಡಿದ. ಹಳೇಬೀಡು ಸುಂದರರಾಯರು ಒಂದು ನಗೆ ಮಲ್ಲಿಗೆಯನ್ನು ಅತ್ತ ಚೆಲ್ಲಿದರು. ದೇಹವನ್ನು ಗೋಡೆಯ ಹಿಂದೆ ಬಚ್ಚಿಟ್ಟು ಕಿಸಿಯುತ್ತಿದ್ದ ಮುಖವನ್ನು ಮಾತ್ರ ಮುಂದೂಡಿ ನಿಂತಿದ್ದ ಹಳೇಬೀಡು ಸುಂದರರಾಯರನ್ನು ನೋಡಿ ತುಕ್ಕೋಜಿಗೆ

ಯಾಕೋ ನಗು ಬಂತು. ಅವನೂ ಕಿಸಕ್ಕನೆ ನಕ್ಕ. ಹಳೇಬೀಡು ಸುಂದರರಾಯರು ಸಂಕೋಚದ ಹೆಜ್ಜೆಗಳನ್ನಿಕ್ಕುತ್ತಾ ತುಕ್ಕೋಜಿಯ ಬಳಿ ಸಾಗಿದರು. ತುಕ್ಕೋಜಿ ಹೊಲೆಯುವುದನ್ನು ನಿಲ್ಲಿಸದೇ ಒಂದು ದಿಕ್ಕನ್ನು ಗಲ್ಲದಿಂದ ಸೂಚಿಸಿದ. ಹಳೇಬೀಡು ಸುಂದರರಾಯರು ಅತ್ತ ನೋಡಿದರು. ಗೋಡೆಯಿಂದ ಗೋಡೆಗೆ ತೂಗಿಬಿದ್ದ ಹಗ್ಗದ ಮೇಲೆ ಕಪ್ಪು ಕೋಟಿನ ಬಟ್ಟೆ ನೇತಾಡುತ್ತಿತ್ತು. ಹಳೇಬೀಡು ಸುಂದರರಾಯರು ಅದರತ್ತ ಸಾಗಿ ಅದನ್ನು ಮುಟ್ಟಿ ನೋಡಿದರು. ತುಕ್ಕೋಜಿಯತ್ತ ತಿರುಗಿ ಅವನನ್ನೇ ನೋಡಿದರು, ಅನುಮಾನದಿಂದ. ತುಕ್ಕೋಜಿ ನಗುತ್ತಲೇ ತಲೆ ಹಾಕಿ ಅದು ತಮ್ಮದೇ ಎನ್ನುವ ಭಾವ ಬೀರಿದ. ಹಳೇಬೀಡು ಸುಂದರರಾಯರು ಆನಂದತುಂದಿಲರಾಗಿ ಆ ಕಪ್ಪು ಕೋಟಿನ ಬಟ್ಟೆಯನ್ನು ಸವರುತ್ತಾ ಒಂದರೆ ಕ್ಷಣ ಮೈಮರೆತು ನಿಂತರು. ನಂತರ ಏನೊಂದೂ ಮಾತನಾಡದೇ, ಭಕ್ತನ ಮೈ ಮೇಲೆ ಬಂದಿದ್ದ ದೇವರು ಹೋಗುವಂತೆ ಸದ್ದಿಲ್ಲದೇ ಹೊರಟು ಬಿಟ್ಟರು. ತುಕ್ಕೋಜಿ ನಗುತ್ತಿದ್ದ. ಹೊಲೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆ ಒಂದು ಆಪ್ತ ಸಂದರ್ಭದಲ್ಲಿ ಇಬ್ಬರಿಗೂ ಮಾತೇ ಬೇಡವಾಗಿತ್ತು. ಗಿರಾಕಿ-ವ್ಯಾಪಾರಿಯ ಕ್ಷುದ್ರ ಸಂಬಂಧವನ್ನು ಮೀರಿ ನಿಂತಿತ್ತು ಇಬ್ಬರ ಗೆಳೆತನ. ಹಳೇಬೀಡು ಸುಂದರರಾಯರ ಉಳಿತಾಯ- ಉಪವಾಸದ ನಿರ್ಧಾರ ಅವರನ್ನು ಕಠಿಣ ಪರೀಕ್ಷೆಗೆ ಈಡು ಮಾಡಿದ್ದು ಸಂಜೆಯ ಹೊತ್ತಿಗೆ. ಐದೂವರೆ ಆರಕ್ಕೆಲ್ಲಾ ಒಂದೆರಡು ಚಟಾಕು ಹುರಿದ ಶೇಂಗಾ, ರವಿ ಹೋಟೆಲಿನ ಕಾಫಿ ಬೇಡುತ್ತಿದ್ದ ಹೊಟ್ಟೆ ಇಂದೂ ಬೇಡಿತು. ಆರೂವರೆ ಹೊತ್ತಿಗೆ ಹೊಟ್ಟೆ ರುದ್ರ ತಾಂಡವವಾಡ ತೊಡಗಿತ್ತು. ಅದನ್ನು ಶಾಂತವಾಗಿರಿಸುವುದರಲ್ಲಿ ಹಳೇಬೀಡು ಸುಂದರರಾಯರಿಗೆ ತಲೆ ಸುತ್ತಿ ಬಂತು. ಸುಮಾರು ಒಂದರ್ಧ ಗಂಟೆ ಉರಿಯೆದ್ದ ಹೊಟ್ಟೆ ತನ್ನಷ್ಟಕ್ಕೆ ತಾನೇ ಶಾಂತವಾಯಿತು. ಮಾರನೇ ದಿನ ವಕೀಲ್ ನಾಗರಾಜರಾಯರ ಆಫೀಸಿನಿಂದ ಹೊರಟು ನೇರ ತುಕ್ಕೋಜಿಯ ಅಂಗಡಿ ತಲುಪಿ ಇಣುಕಿದರು. ಬಟ್ಟೆ ಹಾಗೇ ನೇತಾಡುತ್ತಿತ್ತು. ಮುಂದೊಂದು ದಿನ ತಮ್ಮ ಅಳತೆಗೆ ತೋಳು, ಎದೆ ಇತ್ಯಾದಿ ಆಕಾರಗಳಲ್ಲಿ ಕತ್ತರಿಸಲ್ಪಟ್ಟ ಬಟ್ಟೆ ಟೇಬಲ್ಲಿನ ಮೇಲೆ ಒರಗಿತ್ತು. ಎಂದಿನಂತೆ ಹಳೇಬೀಡು ಸುಂದರರಾಯರು ಅದನ್ನು ಮುಟ್ಟಿ ನೇವರಿಸಿದ್ದೇ ಅಲ್ಲದೆ ಒಂದು ತುಂಡನ್ನು ಕೈಗೆತ್ತಿಕೊಂಡು ಎದೆಯ ಮೇಲೆ ಹರಡಿಕೊಂಡರು. ಇನ್ನೆರಡು ದಿನಕ್ಕೆ, ವಾರದ ಒಂದು ದಿನದ, (ಯಾವ ದಿನವೋ ಯಾರಿಗೆ ಗೊತ್ತು, ಹಳೇಬೀಡು ಸುಂದರರಾಯರ ಪಾಲಿಗೆ ಮಾತ್ರ ಅಂದು ಶುಭ ದಿನ) ಮಧ್ಯಾಹ್ನದ ಒಂದು ಹೊತ್ತಿನಲ್ಲಿ, (ಯಾವ ಹೊತ್ತೋ ಯಾರಿಗೆ ಗೊತ್ತು, ಹಳೇಬೀಡು ಸುಂದರರಾಯರ ಪಾಲಿಗೆ ಮಾತ್ರ ಅದು ಶುಭ ಮುಹೂರ್ತ) ಹಳೇಬೀಡು ಸುಂದರರಾಯರ ಹೊಸ ವಕೀಲಿ ಕೋಟು ತಯಾರಾಗಿತ್ತು. ಬುಧವಾರ. ಕೋಟನ್ನು ಹಳೇಬೀಡು ಸುಂದರರಾಯರ ಮುಂದೆ ಹರಡುತ್ತಾ ’ಹಾಕ್ಕೆಂಡೋಕ್ತೀರೋ ಪೇಪರ‍್ನೆಗೆ ಸುತ್ತಿ ಕೊಡ್ಲೋ’ ಅಂದ ತುಕ್ಕೋಜಿ. ಕೋಟನ್ನು ಕೈಯ್ಯಿಂದ ಸವರುತ್ತಾ ನಾಚುತ್ತಾ ’ಹಾಕ್ಕೆಂಡೇ ಹೋಕ್ತೀನಿ’ ಅಂದರು ಹಳೇಬೀಡು ಸುಂದರರಾಯರು. ಕೋಟನ್ನು ಅವರ ಕೈಗಿತ್ತು ತುಕ್ಕೋಜಿ ತನ್ನ ಯಂತ್ರದ ಮುಂದೆ ಕೂತು ಅವರನ್ನೇ ನೋಡಿದ. ಬಹಳ ನಾಜೂಕಿನಿಂದ, ಕೋಟಿಗೆ ನೋವಾಗದಂತೆ ಹಳೇಬೀಡು ಸುಂದರರಾಯರು ಮೊದಲು ಬಲಗೈಯ್ಯನ್ನು ಕೋಟಿನೊಳಗೆ ತೂರಿಸಿ ನಂತರ ಅಷ್ಟೇ ನಾಜೂಕಿನಿಂದ ಎಡಗೈಯ್ಯನ್ನು ಸೇರಿಸಿ, ಎದೆಯ ಮೇಲೆ ಕೋಟನ್ನು ಎಳೆದು ಕೊಂಡು, ಕಾಲರ್ ಬಳಿ ಸರಿ ಮಾಡಿಕೊಂಡು ಒಮ್ಮೆ ತಮ್ಮನ್ನೇ ನೋಡಿಕೊಂಡು ನಾಚಿದರು. ಈ ಸಂಭ್ರಮದಲ್ಲಿ ಕೋಟು ಅವರ ಅಳತೆಗಿಂತ ಸ್ವಲ್ಪ ದೊಗಳೆಯಾಗಿದ್ದು ಅವರ ಗಮನಕ್ಕೆ ಬರಲಿಲ್ಲ. ದುಡಮ್ಮನೆ ತುಕ್ಕೋಜಿಯ ಕಾಲಿಗೆ ಬಿದ್ದು ಹೊರಟರು. ತುಕ್ಕೋಜಿಗೆ ಅಭ್ಯಾಸವಾಗಿತ್ತಲ್ಲಾ, ಹಾಗಾಗಿ ಸುಮ್ಮನಿದ್ದ. ಮೇ ತಿಂಗಳ ಮಧ್ಯಾಹ್ನದ ಬಿರುಬಿಸಿಲು. ಇಡೀ ದಾವಣಗೆರೆ ಇರುವುದೆಲ್ಲವ ಬಿಚ್ಚಿ ಹಗುರಾಗಲು ಯತ್ನಿಸುತ್ತಿದ್ದಲ್ಲಿ ಹಳೇಬೀಡು ಸುಂದರರಾಯರು ಹೊಸ ಕೋಟನ್ನು ಧರಿಸಿ ಧಾರಾಕಾರವಾಗಿ ಬೆವೆಯುತ್ತಿದ್ದರೂ ಒಂದು ವಿಚಿತ್ರ ಹುಮ್ಮಸ್ಸಿನಲ್ಲಿದ್ದರು. ಕೋಟು ಭುಜದ ಅಳತೆಗಿಂತ ಒಂದೈದಾರು ನೂಲು ಜಾಸ್ತಿಯಾಗಿ ಭುಜವನ್ನು ಬಿಟ್ಟು ಇಳಿದಿತ್ತು. ಕೋಟಿನ ಕೈಗಳೂ ಕೂಡ ಅಂಗೈಗಳನ್ನು ಮುಕ್ಕಾಲು ಮುಚ್ಚುವಷ್ಟು ಉದ್ದವಾಗಿದ್ದವು. ಆಗಾಗ್ಗೆ ಭುಜ ಎತ್ತಿ ಸರಿ ಮಾಡಿಕೊಳ್ಳಬೇಕಿತ್ತು. ಒಂದೈದಾರು ಹೆಜ್ಜೆಗಳಿಗೆ ಎಡ ಭುಜ ಎತ್ತಿ ಅತ್ತಲಿನದನ್ನು ಸರಿ ಮಾಡಿಕೊಂಡಲ್ಲಿ ಮತ್ತಿನ್ನಾರು ಹೆಜ್ಜೆಗಳಿಗೆ ಬಲ ಭುಜವನ್ನೆತ್ತಿ ಇತ್ತಲಿನದನ್ನು ಸರಿ ಮಾಡಿಕೊಳ್ಳಬೇಕಿತ್ತು. ಕೈಗಳನ್ನು ಮೇಲೆತ್ತಿ ತೋಳುಗಳನ್ನು ಹಿಂದೆ ಸರಿಸಿಕೊಳ್ಳಬೇಕಿತ್ತು. ಕೈಗಳನ್ನು ಎತ್ತಿದಾಗ ಹಿಂದೆ ಜಾರಿಕೊಳ್ಳುವ ಕೋಟಿನ ತೋಳುಗಳು ಕೈಗಳನ್ನು ಇಳಿಸಿದೊಡನೆಯೇ ಮತ್ತೆ ಅಂಗೈಗಳನ್ನು ದಾಟುತ್ತಿತ್ತು. ಹಳೇಬೀಡು ಸುಂದರರಾಯರು ಹೈಸ್ಕೂಲು ಮೈದಾನ ಮುಟ್ಟುವುಷ್ಟರಲ್ಲಿ ಹತ್ತೋ ಹನ್ನೆರಡು ಹೆಜ್ಜೆಗಳಿಗೊಮ್ಮೆ ಲಯಬದ್ಧವಾಗಿ ಮೊದಲು ಎಡ ಆಮೇಲೆ ಬಲ ಭುಜಗಳನ್ನು ಕುಣಿಸುತ್ತಾ ನಡೆಯುವ ಕಲೆ ಅವರಿಗೆ ಕರಗತವಾಯಿತು. ಮುಂದುವರೆಯುವುದು….]]>

‍ಲೇಖಕರು G

December 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: