ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ -15: ಕತ್ತಲಿನ ದೇವರ ಮನೆಯಲ್ಲೂ ಝಗ್ಗನೆ ಬೆಳಕು…

-ಸೂರಿ ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 15

 

‘ಹತ್ತೂ-ಹತ್ತು-ಇಪ್ಪತ್ತೂ-ಹತ್ತು-ಮೂವತ್ತೂ-ಯಿನ್ನಿಲ್ದಂಗೆ ಬಡ್ಕೆಂಡೆ. ಸೈನ್ಸ್ ಓತ್ತೀನಿ. ಯಲ್ಲರ ವಂದು ಕೆಲಸ ಸಿಕ್ಕೇ ಸಿಕ್ತೆತೆ. ಕೇಳಿದ್ರಾ. ವಂದೇ ಹಟ. ಲಾಯರ್ರೋದೂ, ಲಾಯರ್ರೋದು. ಊಟ ಬಿಟ್ಟು ಹಟಕ್ಕೆ ಬಿದ್ರು. ತಾವೂ ಉಪ್ವಾಸ ಬಿದ್ರು, ನನ್ನೂ ಹಳ್ಳಕ್ಕಾಕಿದ್ರು. ಯೇನೂ ಬೇಡ, ಪೀಯೂಸಿ ಮಾಡಿ, ಬೀಡಿ ಅಂಗ್ಡೀನ್ನೇ ನೋಡ್ಕೆಂಡಿದ್ರೆ ಯಿಷ್ಟತ್ತಿಗೆ ಒಂದು ಸಣ್ಣ ಕಾಪಿ ಹೋಟ್ಲಾದ್ರೂ ತಗೀಬೋದಿತ್ತೋ ಯೇನೋ. ಅದೂ ಯಿಲ್ಲ.
ಯೀಗ ವಂದು ಕೋಟಿರಲಿ, ವಂದೊತ್ತಿನ ಊಟಕ್ಕೇ-‘ ಯಾಕೋ ತಮ್ಮ ಬಗ್ಗೆಯೇ ವಿಚಿತ್ರ ಅನುಕಂಪ ಹುಟ್ಟಿ ಕಣ್ಣುಗಳು ಒದ್ದೆಯಾದವು. ಕೈಲಿದ್ದ ಚಿಲ್ಲರೆಯನ್ನು ಟವೆಲ್ಲಿನ ಮೇಲೆ ಒಗೆದು ಸುಮ್ಮನೆ ದಿಟ್ಟಿಸುತ್ತಾ ಕೂತರು. ಲೆಕ್ಕ ಮತ್ತೆ ತಪ್ಪಿತ್ತು. ಒಂದು ಹತ್ತೋ ಹನ್ನೆರಡು ಸಾರಿಯೋ ಲೆಕ್ಕ ತಪ್ಪಿ, ರಾತ್ರಿ ಕಳೆದು ಬೆಳಕು ಮೂಡುವ ಹೊತ್ತಿಗೆ ಹಂಗೂ ಹಿಂಗೂ ಟವೆಲ್ಲಿನ ಮೇಲೆ ಹರಡಿದ್ದ ಚಿಲ್ಲರೆಗಳ ಲೆಕ್ಕ ಸಿಕ್ಕಿತ್ತು.
ಮೂವತ್ತಾರು ರೂಪಾಯಿ ಅರುವತ್ತು ಪೈಸೆ. ಒಂದೆರಡು ಮೂರು ಪೈಸೆಗಳು, ಒಂದೆರಡು ಎರಡು ಪೈಸೆಗಳು ಯಾವ ಲೆಕ್ಕಕ್ಕೂ ಸಿಗದೆ ಹಾಗೇ ಬಿದ್ದಿದ್ದವು. ಚಿಲ್ಲರೆಯ ಲೆಕ್ಕ ಸಿಕ್ಕ ಮೇಲೆ ಮನಸ್ಸಿನ ತಳಮಳ ಇನ್ನೂ ಹೆಚ್ಚಾಯಿತು. ಭಾರೀ ಆಸ್ತಿ ದೊರಕುವ ಆಸೆಯಿಂದ ಹುಂಡಿಯನ್ನು ಒಡೆದಿದ್ದೇನೋ ನಿಜ. ಆದರೆ ಇನ್ನೂರು ರೂಪಾಯಿ ಲೆಕ್ಕದ ಪ್ರಕಾರ ಇನ್ನೂ ನೂರಾ ಅರವತ್ನಾಕು ರೂಪಾಯಿ ಬೇಕು.
ಬುಧವಾರ. ಸ್ನಾನವಾದ ಕೂಡಲೇ, ಒದ್ದೆಯಾದ ನೀರುಪಂಚೆ ಹನಿಯಿಡುವುದನ್ನು ನಿಲ್ಲಿಸುವದಕ್ಕೂ ಮೊದಲು ಹಳೇಬೀಡು ಸುಂದರರಾಯರು ಮಾಡಿದ ಕೆಲಸವೆಂದರೆ ದೇವರ ಮುಂದಿದ್ದ ಒಂದು ತಾಮ್ರದ ತಂಬಿಗೆಯನ್ನು ನಡಗುವ ಕೈಗಳಿಂದ ಎತ್ತಿಕೊಂಡು, ತಂಬಿಗೆಯ ಒಳಗಿನ ಅರೆಗತ್ತಲಲ್ಲಿ ಇಣುಕಿದ್ದು. ಒಳಗಿನ ಹೂರಣವನ್ನು ಅಂಗೈಗೆ ಸುರಿದುಕೊಂಡಲ್ಲಿ ಅಂಗೈ ತುಂಬಿತು. ಅದೇ ನಡುಗುವ ಕೈಗಳಿಂದ ಲೆಕ್ಕ ಹಾಕಿದರು.
ಸುಮಾರು ಐವತ್ತೂ ಚಿಲ್ಲರೆ ರೂಪಾಯಿಗಳು. ತಂದೆಯ ಶ್ರಾದ್ಧಕ್ಕೆಂದೇ ವರ್ಷವಿಡೀ ಅಷ್ಟಷ್ಟು ಮುಡಿಪಿಟ್ಟಿದ್ದು. ತಂದೆ ಹೋದಾಗಿನಿಂದ ಮನೆಯಲ್ಲಿ ಯಾವುದೇ ಹಬ್ಬ-ಹರಿದಿನ ತಪ್ಪಿದರೂ, ಶ್ರಾವಣ ಮಾಸದ ದ್ವಾದಶಿಯಂದು ಕೂಡಿಬರುವ ತಂದೆಯ ಶ್ರಾದ್ಧ ತಪ್ಪಿದ್ದಿಲ್ಲ. ಅಂಥಾದ್ರಗೆ ಯಿರಾ ಐವತ್ತನ್ನೂ ಕೋಟಿಗೆ ಸುರಿದರೆ ತಂದೆಯ ತಿಥಿದೇನು ಗತಿ? ಆ ತಂದೆಯ ಆತ್ಮಕ್ಕೆ ಶಾಂತಿ ಸಿಗದಂಗಾಗಿ ನಟ್ಟ ನಡೂಬರಕೆ ಆಕಾಶದಗೆ ನೇತಾಡೋ ಹಂಗಾದರೆ? ಮುಂದಿನ ಕ್ಷಣದಲ್ಲೇ ಕೋಟಿಲ್ಲದ ತಮ್ಮ ಬದುಕಿನ ಉಳಿದ ಭಾಗವನ್ನೂ, ಪ್ರತಿ ದಿನ ಕೋರ್ಟಿನ ಕಾಂಪೋಂಡಿನಲ್ಲಿ ತಾವು ಬೇಡಿ ತಿನ್ನುವುದಕ್ಕಿಂತಲೂ ಹೀನವಾಗಿ ಬದುಕಬೇಕಾದ ಬವಣೆಯನ್ನೂ ಕಣ್ಣ ಮುಂದೆ ತಂದು ಕೊಂಡರು.
ಒಂದು ವರ್ಷ ತಪ್ಪಿದರೇನಂತೆ, ಹೇಗೂ ಮತ್ತೊಂದು ವರ್ಷ ಬಂದೇ ಬರುತ್ತದಲ್ಲಾ?  ಪುಡಿನೋಟುಗಳನ್ನು ಅಂಗೈಯ್ಯಲ್ಲಿ ತುಂಬಿಕೊಂಡು ಖಾಲಿ ತಂಬಿಗೆಯನ್ನು ದೇವರ ಮುಂದಿಟ್ಟು ಕೈ ಮುಗಿದರು. ಥಟ್ಟನೇ ಕತ್ತಲಿನ ದೇವರ ಮನೆಯಲ್ಲೂ ಝಗ್ಗನೆ ಬೆಳಕು ಮಿಂಚಿ, ಆ ಬೆಳಕಿನಲ್ಲಿ ತಮ್ಮ ತಂದೆ ಎದುರು ಬಂದು ನಿಂತಂತಾಯಿತು.
ಮುಂದುವರೆಯುವುದು….
]]>

‍ಲೇಖಕರು G

3 December, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading