-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 14
ಕಾರಿನಿಂದ ಒಂದು ಭಯಂಕರ ನಗು ಹಳೇಬೀಡು ಸುಂದರರಾಯರನ್ನು ಅಪ್ಪಳಿಸಿತು. ಅವರು ಯಾಕೆ ನಕ್ಕಿದ್ದು ಎಂದು ಊಹಿಸುವ ಅಗತ್ಯವೇ ಇರಲಿಲ್ಲ ಹಳೇಬೀಡು ಸುಂದರರಾಯರಿಗೆ.
ದುರಂತವೆಂದರೆ ಮಾರನೇ ದಿನ ಕೋರ್ಟು ಬಯಲಿಗೆ ಕಾಲಿಡುತ್ತಿದ್ದಂತೇ, ಹಳೇಬೀಡು ಸುಂದರರಾಯರು ಕೇಳದೇ ಹೋದರೂ ಪುಡಿ ವಕೀಲರೆಲ್ಲಾ ‘ಸುಂದರರಾಯರೇ ನನತ್ರ ಕೋಟಿಲ್ಲ‘ ಎಂದು ಹೇಳತೊಡಗಿದರು.
ಕೆಲವರಂತೂ ಕೋಟನ್ನು ಅವರ ಕಣ್ಣೆದುರೇ ತೆಗೆದು ಬೆನ್ನ ಹಿಂದೆ ಮುಚ್ಚಿಟ್ಟು ಗೇಲಿ ಮಾಡಿದರು. ಹಳೇಬೀಡು ಸುಂದರರಾಯರು ಮುಂದಿನ ಅರ್ಧ ಗಂಟೆಗೆಲ್ಲಾ ಕೋರ್ಟಿನ ಬಯಲಿನಿಂದ ಹೊರಟು ಊರ ಹೊರಗಿನ ಹೊಸ ಟ್ಯಾಂಕ್ ಪಾರ್ಕಿನ ಕಟ್ಟೆಯ ಮೇಲೆ ಕೂತು ಬಿಕ್ಕೀ ಬಿಕ್ಕೀ ಅತ್ತರು.
‘ಎಂಬತ್ತೂ-ಹತ್ತು-ತೊಂಬತ್ತೂ-ಹತ್ತು-ಒಂದ್ರೂಪಾಯಿ-ಹತ್ತೂ-ಹತ್ತು-ಇಪ್ಪತ್ತೂ-ಇಪ್ಪತ್ತೂ- ನಲವತ್ತೂ…‘ ಒಂದು ಟವೆಲ್ಲನ್ನು ಹಾಸಿ ಅದರಲ್ಲಿ ಸುರುವಿಕೊಂಡಿದ್ದ ಚಿಲ್ಲರೆಯನ್ನು ರಾತ್ರಿ ಒಂದೂವರೆ ಎರಡರ ಸುಮಾರಿನಲ್ಲಿ ಹಳೇಬೀಡು ಸುಂದರರಾಯರು ಎಣಿಸುತ್ತಿದ್ದರು. ರಾತ್ರಿ ಒಂದು ಹೊತ್ತಿನಲ್ಲಿ ನೆಲದ ಥಂಡಿಗೆ ಎಚ್ಚರವಾಯಿತೋ, ಬೆವರಿನ ನೀರು ಬೆನ್ನಿನ ಅಡಿಯಲ್ಲಿ ಮಡುಗಟ್ಟಿದ ತೇವದಿಂದ ಎಚ್ಚರವಾಯಿತೋ, ಒಟ್ಟಿನಲ್ಲಿ ಕೆಟ್ಟ ಕನಸು ಬಿದ್ದವರಂತೆ ಬೆಚ್ಚಿ ಧಡಕ್ಕನೆ ಎದ್ದು, ಟ್ರಂಕಿನಿಂದ ಆ ಹುಂಡಿ ಡಬ್ಬಿಯನ್ನು ತೆಗೆದು ಅದರಲ್ಲಿದ್ದ ಸಕಲವನ್ನೂ ಎದುರು ಸುರಿದುಕೊಂಡು ಕೂತಿದ್ದರು.
ಎದುರು ಹಾಸಿದ್ದ ಟವೆಲ್ಲಿನ ಮೇಲೆ ಐದು-ಹತ್ತು-ಇಪ್ಪತ್ತು ಪೈಸೆ, ನಾಕಾಣೆ-ಎಂಟಾಣೆಗಳ ಒಂದಿಷ್ಟು ನಾಣ್ಯಗಳು ಚದುರಿಕೊಂಡಿದ್ದವು. ಜೊತೆಯಲ್ಲೇ ಎಂಟು ಮಡಿಕೆಯ, ನಾಕು ಮಡಿಕೆಯ ಒಂದು ರೂಪಾಯಿನ ಕೆಲವು ನೋಟುಗಳು. ಚಿಲ್ಲರೆ ಒಂದು ರೂಪಾಯಿ ಆಯಿತೋ ಪಕ್ಕದ ಒಂದು ಪುಟ್ಟ ಗುಡ್ಡೆಗೆ ಸೇರಿಸುತ್ತಿದ್ದರು.
‘ಅರವತ್ತೂ-ಐದೂ-ಅರವತ್ತೈದೂ-ಐದೂ-ಎಪ್ಪತ್ತೂ-ಅಣ್ಣ ಅಂಗಡೀ ವಂದು ಮಾರದೇ ಹೋಗಿದ್ರೆ ನಂಗೂ ವಂದು ದಾರಿ ಕಂಡಿರದು ಯಿಷ್ಟತ್ತಿಗೆ.
ದಿಸಕ್ಕೆ ಒಂದು ಹದಿನೈದೋ ಯಿಪ್ಪತ್ತೋ ಗ್ಯಾರಂಟಿ ಬರ‍್ತಿತ್ತೋ ಏನೋ. ಮಾರಾಂತದ್ದು ಏನಾಗಿತ್ತು ಅಂತ. ವಕೀಲನ ಅಪ್ಪ ಬೀಡಿ ಅಂಗಡೀ ಯಿಟ್ಗ ಬಾರದೂ ಅಂತೇನರ ರೂಲ್ಸಿದ್ಯಾ. ಯಿವತ್ತು ಆ ಸುಬ್ರಾಮ ಹೆಂಗಿದಾನೆ? ಏನು ಕಮ್ಮಿಯಾಗಿದೆ ಅವ್ನಿಗೆ? ಅದೇ ಅಂಗಡಿ, ಅದೇ ಮೋತಿ ರೆಸ್ಟೋರೆಂಟು, ಅದೇ ಮೋತಿ ಟಾಕೀಸು. ಕಮ್ಮೀ ಅಂದ್ರೂ ದಿಸಕ್ಕೆ ನೂರು ರೂಪಾಯಿ ಗ್ಯಾರಂಟಿ ಯಣುಸ್ತನೆ.
ಎಂಬತ್ತಾಗಿತ್ತೋ, ಯಪ್ಪತ್ತೈದಾಗಿತ್ತೋ. ತಥ್ಥ್… ‘ ಮತ್ತೆ ಟವಲ್ಲಿನ ಮೇಲೆ ಹರಡಿ ಮೊದಲಿಂದ ಶುರುಮಾಡಿದರು. ‘ಹತ್ತೂ-ಹತ್ತು-ಇಪ್ಪತ್ತೂ-ಹತ್ತು-ಮೂವತ್ತೂ-ಹತ್ತು-ನಲವತ್ತು-ಪುಣ್ಯಕ್ಕೆ ಮದುವೆ ಅಂತ ವಂದು ಮಾಡದೇ ಪುಣ್ಯ ಕಟ್ಗೆಂಡ್ರು. ಯಾವ ಸುಕಕ್ಕೆ ಮದುವೆಯಾಗಬೇಕಿತ್ತೋ ಯೇನೋ. ಒನ್ನಾಕು ವರ್ಶ ಯಂಜಲು ನುಂಗಿದ್ದು ಕಮ್ಮಿ, ಮದುವೆಗೆ ಓಡಾಡಿದ್ದು ಜಾಸ್ತಿ ಅನ್ನಂಗೆ ಓಡಾಡಿದ್ರು. ಬೀಡಿ ಅಂಗಡಿ ಮುಚ್ಚಿದ್ದೊಂದೇ ಅಲ್ಲ, ಆ ಊರಿಂದ ಈ ಊರಿಗೆ ಅಂತ ತಿರಗಾಡಕ್ಕೆ ಯಷ್ಟು ಕರ್ಚು ಮಾಡಿದ್ದೂಂತ.
ಆ ರೊಕ್ಕನೆಲ್ಲಾ ಉಳುಸಿದ್ರೆ ಯಿಷ್ಟತ್ತಿಗೆ ಒನ್ನಾಕು ಕೋಟು ಹೊಲುಸ್ಕೆಂಬೋದಿತ್ತು. ವಬ್ಬಂದೇ ಮುಚ್ಗಳಕೆ ರಾಮರಾಮಾ ಅಂತಿದೆಯಿಲ್ಲಿ. ಯಿನ್ನು ಮದುವೆಯಾಗಿ, ಯಲ್ಲೋ ಯತ್ಲಗೋ ಹೆಚ್ಚೂಕಮ್ಮಿಯಾಗಿ ಒಂದೆರಡು ಮಕ್ಳಾಗಿದ್ರೆ-‘ ಯೋಚನೆಯಿಂದಲೇ ಹಳೇಬೀಡು ಸುಂದರರಾಯರು ಒಮ್ಮೆ ಮೈ ಎತ್ತಿ ಹಾಕಿದರು. ಮತ್ತೆ ಲೆಕ್ಕ ತಪ್ಪಿತ್ತು.
ಮುಂದುವರೆಯುವುದು…..
]]>






0 Comments