ಸೂರಿ -12: ಇನ್ನೂರೈವತ್ತು ಎನ್ನುವ ಮಣಮಣ ಕೇಳುತ್ತಿತ್ತು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 12

 

ತುಕ್ಕೋಜಿಗೂ ತಾನು ಹೀಗೆ ಮಾಡಬಾರದಿತ್ತು ಅನಿಸಿತು. ಕೋಟನ್ನು ಜೋಪಾನವಾಗಿ ಹೊಲಿಗೆ ಯಂತ್ರದ ಮೇಲಿಟ್ಟು ಕೈಕಟ್ಟಿ ಕೂತುಬಿಟ್ಟ. ಹಳೇಬೀಡು ಸುಂದರರಾಯರು ‘ಖೊಖ್ಖ್‘ ಎಂದು ಬಿಕ್ಕಿದ ಸದ್ದು ಕೇಳಿತು. ಯಾಕೋ ಎಲ್ಲವೂ ಕೈ ಮೀರುತ್ತಿದೆ ಅನಿಸಿತು ತುಕ್ಕೋಜಿಗೆ.
ಗಾಂಚಾಲಿ ಮುಂಡೆ ಹಠ ಮಾಡದೇ ಹೋಗಿದ್ರೆ ಇಷ್ಟತ್ತಿಗೆ ಎಲ್ಲಾ ಸರಿಯಾಗಿರದು ಎಂದು ಹೆಂಡತಿಯನ್ನು ವಿನಾಕಾರಣ ಶಪಿಸಿದ.
ನಿಧಾನವಾಗಿ ಎದ್ದು, ಹಳೇಬೀಡು ಸುಂದರರಾಯರತ್ತ ನಡೆದು, ಅವರ ಭುಜ ಹಿಡಿದು ’ಒನ್ಕೆಲ್ಸ ಮಾಡಿ. ಬಟ್ಟೆ ರೊಕ್ಕ ಕೊಡಿ ಸಾಕು. ಲೇಬರ್ ಕರ್ಚು ನಂಗೇನು ಬೇಡ. ಫ್ರೀನಗೇ ಹೊಲ್ಕೊಡ್ತೀನಿ. ಇನ್ನೂರ್ರೂಪಾಯಿ ಆಗ್ತತೆ. ವಂದೆಂಟು ದಿಸಾ ಬಿಟ್ಟು ಬನ್ನಿ. ನೀವು ಹಿರೀರು ಹಿಂಗೆ ಕಣ್ಣೀರು ಹಾಕಬಾರದು.
ಹೋಗಿ ಬರ್ರಿ. ಕೋಟು ರೆಡಿ ಮಾಡಿರ‍್ತೀನಿ. ಇದೇ ಅಳತೆ ಸರಿಯಾಗಿದೆ ತಾನೆ? ಅದೇ ಅಳತೆಗೆ ಹೊಲಿದಿಡ್ತೀನಿ.’ ಅವನು ಹೇಳಿದ್ದು ಹಳೇಬೀಡು ಸುಂದರರಾಯರಿಗೆ ಅದೆಷ್ಟು ಅರ್ಥವಾಯಿತೋ, ಅದೆಷ್ಟು ಗಾಳಿಗೆ ತೂರಿ ಹೋಯಿತೋ, ಒಟ್ಟಿನಲ್ಲಿ ಶರ್ಟಿನ ಮುಂಗೈಯ್ಯಿಂದ ಕಣ್ಣನ್ನು ಒರೆಸಿಕೊಂಡು, ತಲೆ ಹಾಕುತ್ತಾ, ನಿಧಾನವಾಗಿ ಹಿಂತಿರುಗಿದರು. ಅವರು ಬಾಗಿಲಾಚೆ ಕಣ್ಮರೆಯಾಗುವವರೆಗೂ ತುಕ್ಕೋಜಿ ನಿಂತೇಯಿದ್ದ. ಮುಂದೆ ಕೆಲಸ ಮಾಡಲು ಮನಸ್ಸಿಲ್ಲದಂತಾಗಿ ಅವತ್ತಿನ ಮಟ್ಟಿಗೆ ಅಂಗಡಿ ಬಾಗಿಲು ಮುಚ್ಚಿಬಿಟ್ಟ.
ದಾವಣಗೆರೆಯ ಬೀದಿಗಳಲ್ಲಿ ಹಳೇಬೀಡು ಸುಂದರರಾಯರು ಕನಸಿನಲ್ಲಿ ನಡೆದವರಂತೆ ನಡೆಯುತ್ತಿದ್ದರು. ಅಲ್ಲಿ ಒಂದಿಬ್ಬರ ಭುಜಕ್ಕೆ ಢಿಕ್ಕಿ ಹೊಡೆದರೋ, ಇಲ್ಲಿ ಇನ್ನೊಂದಿಬ್ಬರ ಕಾಲಲ್ಲಿ ತುಳಿಸಿಕೊಂಡರು. ಮುಂದೆ ಇನ್ನೊಂದಿಬ್ಬರ ದಾರಿಗೆ ಅಡ್ಡಬಂದದ್ದಕ್ಕೆ ಅತ್ತ ನೂಕಿಸಿಕೊಂಡರು. ಅದಾವುದರ ಪರಿವೆಯೂ ಇರಲಿಲ್ಲ. ಬಾಯಿ ಏನೋ ವಟಗುಟ್ಟುತ್ತಿತ್ತು. ಹತ್ತಿರ ಸುಳಿದಾಡಿದವರಿಗೆ ಮಾತ್ರ ಅದೇನೋ ಇನ್ನೂರೈವತ್ತು ಇನ್ನೂರೈವತ್ತು ಎನ್ನುವ ಮಣಮಣ ಕೇಳುತ್ತಿತ್ತು.
ರಾತ್ರಿಯ ಹತ್ತು ದಾಟಿತ್ತು. ದಾವಣಗೆರೆ ಕ್ಲಬ್ ಗೇಟಿನ ಎದುರು ಪ್ರತಿಷ್ಠಾಪಿಸಿಕೊಂಡಿದ್ದ ಹಳೇಬೀಡು ಸುಂದರರಾಯರು ಗೇಟಿನತ್ತಲೇ ಒಂದು ಕಣ್ಣು ಹರಿಯ ಬಿಟ್ಟು ಅತ್ತಿಂದಿತ್ತ ಇತ್ತಿಂದತ್ತ ಅಲೆಯುತ್ತಿದ್ದರು. ಆರರ ಸುಮಾರಿಗೆ ಬಂದು ವಿಚಾರಿಸಿದ್ದಕ್ಕೆ ಅಂದಾನಿ ಬಸವರಾಜಪ್ಪ ಒಳಗೆ ಕಾರ್ಡ್ಸ್ ರೂಮಲ್ಲಿದ್ದಾರೆ ಅಂತ ತಿಳಿದು ಆ ಕ್ಷಣದಿಂದ ಗೇಟೆದುರಿನ ಆ ಕಡೆ ಫುಟ್‌ಪಾತ್ ಮೇಲೆ ಪಂಢರಪುರದ ವಿಠೋಬನಂತೆ ಒಂಟಿ ಕಾಲಲ್ಲಿ ಬಸವರಾಜಪ್ಪ ಹೊರಗೆ ಬರುವುದನ್ನೇ ಕಾಯುತ್ತಿದ್ದಾರೆ.
ಮುಂದುವರೆಯುವುದು…

‍ಲೇಖಕರು avadhi

November 30, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: