ಸೂರಿ -11:ಕಣ್ಣುಗಳಲ್ಲಿ ನಿಧಾನವಾಗಿ ನೀರೂರುತ್ತಿತ್ತು

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 11

ತುಕ್ಕೋಜಿ ಒಮ್ಮೆ ಹಳೇಬೀಡು ಸುಂದರರಾಯರನ್ನೂ, ಮತ್ತೊಮ್ಮೆ ತನ್ನ ಹೊಲಿಗೆ ಯಂತ್ರದ ತುದಿಯಲ್ಲಿ ಮಲಗಿದ್ದ ಕೋಟನ್ನೂ ನೋಡಿದ. ಇದು ಸುಲಭಕ್ಕೆ ಬಗ್ಗುವ ಗಿರಾಕಿಯಲ್ಲ ಅನಿಸಿತು ತುಕ್ಕೋಜಿಗೆ. ಅತ್ಯಂತ ನಾಟಕೀಯವಾದ ಸಾವಧಾನದಿಂದ ಕೋಟನ್ನು ಕೈಗೆತ್ತಿಕೊಂಡು, ಅಷ್ಟೇ ನಾಟಕೀಯವಾದ ಗಂಭೀರತೆಯಿಂದ ಅದನ್ನು ತನ್ನ ಎದೆ ಮುಂದೆ ಹರಡಿ, ಇನ್ನೂ ನಾಟಕೀಯವಾದ ದನಿಯಲ್ಲಿ ’ಯಜಮಾನ್, ಇದುನ್ನ ಕೋಟೂಂತ ಯತ್ಲಗಿಂದ ಕರೀಬೇಕೂ ಅದುನ್ನೊನ್ಸರ್ತಿ ಹೇಳಿಬಿಡು.

(ತುಕ್ಕೋಜಿಯ ಭಾಷೆ ಒಮ್ಮೆಗೇ ಏಕವಚನಕ್ಕೆ ಇಳಿದಿದ್ದು ಹಳೇಬೀಡು ಸುಂದರರಾಯರ ಗಮನಕ್ಕೆ ಬರಲಿಲ್ಲ. ಅವರ ಗಮನವೆಲ್ಲಾ ಕೋಟಿನ ಮೇಲೇ ಇತ್ತು.) ಇದುನ್ನ ರಿಪೇರಿಗೆ ಅಂತ ವಪ್ಗೆಂಡ್ರೆ ಹೇಲ್ತಿನ್ನಾ ಕೆಲಸ ವಪ್ಗೆಂಡಂಗೆ. ಇಂಥಾ ನ್ನಾಕು ಕೆಲಸ ಹಿಡುದ್ರೆ ಅಂಗಡೀ ಬಾಗಿಲಾಕಿ ಹೆಣ್ತೀ ಮಕ್ಳಿಗೆ ವಿಷಾ ಕೊಡಬೇಕು. ಅಲ್ಲಾ ಯಾವ ಸೂಳಾಮಗನ ಕೈನಗೆ ಇದುನ್ನ ರಿಪೇರಿ ಮಾಡಕ್ಕಾಕ್ತತೆ? ಒಂದು ಗಟ್ಟಿ ಬಟ್ಟೆಯಿದ್ಯಾ? ಇಲ್ಲ.

ಒಂದು ಗಟ್ಟಿ ಹೊಲಿಗೆಯಿದ್ಯಾ? ಇಲ್ಲ. ಯಲ್ಲಿ ಮುಟ್ಟಿದ್ರೂ ಅಲ್ಲಿ ಪಿಸ್ದು ಕೈಗೆ ಬರಕ್ಕತ್ತಿದೆ. ನೋಡು’ ಅಂದವನೇ ಕೋಟನ್ನು ಮತ್ತೆ ಹೊಲಿಗೆ ಯಂತ್ರದ ಮೇಲೆ ಅಂಗತ್ತ ಮಲಗಿಸಿ, ಗೋವರ್ಧನಗಿರಿಯನ್ನು ಎತ್ತಿದ ಶ್ರೀಕೃಷ್ಣನ ತೆರದಿ ಕೋಟಿನ ಭುಜ ಪಿಸಿದ ಸಂದಿಯಲ್ಲಿ ತನ್ನ ಬಲಗೈನ ನಡು ಬೆರಳು ತೂರಿಸಿ ಸುಮ್ಮನೆ ಹಗೂರಕ್ಕೆ ಗೋವರ್ಧನಗಿರಿಯನ್ನು ಮೀಟಿದ. ಅದ್ಯಾವುದೋ ಮಾಯೆಯಿಂದೆಂಬಂತೆ ಕೋಟು ಈ ಕಡೆ ಸುಮಾರು ಮೊಣಕೈನವರೆಗೂ ಆಕಡೆ ಕಾಲರ್‌ವರೆಗೂ ಸಲೀಸಾಗಿ ಹರಿದು ಒಳಗಿದ್ದ ಗುಂಜು ಗುಂಜಾಗಿದ್ದ ಮಾಸಲು ಲೈನಿಂಗ್ ಬಟ್ಟೆ ಹೊರ ಚೆಲ್ಲಿಕೊಂಡಿತು.

ಕೋಟು ಹಾಗೆ ಹರಿದಿದ್ದು ಕಂಡು ತುಕ್ಕೋಜಿಯ ಎದೆ ಒಡೆಯಿತು. ಕೋಟಿನ ಬಟ್ಟೆ ಅಷ್ಟು ಲಡ್ಡಾಗಿದೆ ಎನ್ನುವ ಅರಿವಿಲ್ಲದೇ ಡೆಮಾನ್ಸ್‌ಟ್ರೇಷನ್ನಿಗೇ ಅಂತ ಪ್ರಯತ್ನಿಸಿದ್ದನೇ ಹೊರತು ಅದನ್ನು ಹರಿಯಬೇಕೆಂಬ ಉಮೇದಿನಿಂದೇನೂ ಅಲ್ಲ. ಈಗ ಕೋಟನ್ನು ರಿಪೇರಿ ಮಾಡುವುದಿರಲಿ ಬದಲಿಗೆ ಹೊಸಾ ಕೋಟು ಕೊಡಬೇಕಾದ ಸನ್ನಿವೇಷವನ್ನು ಮೈಮೇಲೆ ಎಳಕೊಂಡಿದ್ದ. ಮಾತನಾಡದೇ ಹಳೇಬೀಡು ಸುಂದರರಾಯರತ್ತ ನೋಡಿ ಹ್ಯಾಪು ನಗೆ ನಕ್ಕ.

ಹಳೇಬೀಡು ಸುಂದರರಾಯರು ಪ್ರಸ್ತುತದಲ್ಲಿ ಈ ಲೋಕವನ್ನೇ ತ್ಯಜಿಸಿದ್ದರು ಎಂದರೂ ತಪ್ಪೇನಿಲ್ಲ. ಇಹದ ಎಲ್ಲಾ ಜುಜುಬಿ ನೋವು, ನಲಿವು, ಸಂಕಟಗಳನ್ನೂ ಮೀರಿ ತುಕ್ಕೋಜಿಯ ಅಂಗಡಿಯಲ್ಲಿ ಹಿಡಿಗಾತ್ರದಲ್ಲಿ ನಿಂತಿದ್ದರು. ಕಣ್ಣಿಗೆ ಕತ್ತಲೆ ಕವಿದಂತಾಗಿತ್ತು. ಕಣ್ಣುಗಳಲ್ಲಿ ನಿಧಾನವಾಗಿ ನೀರೂರುತ್ತಿತ್ತು. ಮೂಗಿನ ಹೊರಗೆ ಜೋತಾಡಿಕೊಂಡಿದ್ದ ಆ ನಾಲ್ಕಾರು ಬಿಳೀ ಕೂದಲುಗಳು ಉಸಿರಿನ ಜೊತೆಗೇ ಸಳಸಳ ಹೊಯ್ದಾಡುತ್ತಿದ್ದುದರಿಂದ ಹಳೇಬೀಡು ಸುಂದರಾಯರು ತಮ್ಮ ಅಳುವನ್ನು ಹತ್ತಿಕ್ಕಲು ಮಾಡುತ್ತಿದ್ದ ಪ್ರಯತ್ನ ಜಗಜ್ಜಾಹೀರಾಗುತ್ತಿತ್ತು.

ಇಲ್ಲಿಗೆ ಬರುವ ಮೊದಲು ಆ ಕೋಟನ್ನು ಹೇಗೋ ತಗುಲಿ ಹಾಕಿಕೊಂಡು ಕೋರ್ಟಿನಲ್ಲಿ ನಿಲ್ಲಬಹುದಿತ್ತು. ಈಗ ಈ ಕೋಟನ್ನು ಹೆಗಲಿಗೆ ಹಾಕುವುದಿರಲಿ, ಗೋಡೆಯ ಮೇಲಿನ ಗೂಟಕ್ಕೂ ನೇತು ಹಾಕಲಾರದ ಸ್ಥಿತಿ ತಲುಪಿದೆ. ತಮ್ಮ ಬಾಳಿನಲ್ಲಿ ಪುನಃ ಚಿಗುರಬಹುದಾಗಿದ್ದ ವಕೀಲಿ ವೃತ್ತಿ ತುಕ್ಕೋಜಿ ಎಂಬ ಟೈಲರ್ ಕೈಯ್ಯಲ್ಲಿ ನಾಶವಾಯಿತಲ್ಲಾ ಎಂಬ ಅರಿವಾದೊಡನೇ ಕಣ್ಣುಗಳಿಂದ ದಳದಳ ನೀರು ಹರಿದು ಕಪಾಳವನ್ನು ಒದ್ದೆ ಮಾಡಿತು.

ಮುಂದುವರೆಯುವುದು…

‍ಲೇಖಕರು avadhi

November 29, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: