ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ, ಗುಲ್ಜಾರ್ ಮತ್ತು ಸಿ ಅಶ್ವಥ್

ಆತ್ಮ ಅರಿವಾಗುವ ಪರಿ

ಸೂರಿ

ಗುಲ್ಝಾರ್ ಸಾಬ್ ಕೇಳುತ್ತಾರೆ:
ಆತ್ಮವನ್ನು ನೋಡಿದ್ದೀರೇನು? ಅದರ ಅರಿವಾಗಿದೆಯೇನು? ಮುಖ ನೋಡಿಕೊಳ್ಳಬಹುದು ಕನ್ನಡಿಯಲ್ಲಿ. ಆತ್ಮ? ಅದರ ಚಿಂತೆ ಯಾರಿಗಿದೆ?
ಆತ್ಮದ ಅರಿವಾಗುವುದು ಎಂದರೇನು? ಮಣ್ಣು, ಕಾಗದದ ತುಂಡು, ನೀರು, ಇತ್ಯಾದಿಗಳು ಮುಷ್ಟಿಗೆ ದಕ್ಕಬಹುದು. ಮುಷ್ಟಿಗೆ ದಕ್ಕಿದ್ದರಿಂದ ಅರಿವಿಗೂ ದಕ್ಕಬಹುದು. ಆದರೆ ಬೆಳಕು ಮುಷ್ಟಿಗೆ ದಕ್ಕೀತೇನು? ಬೆಳಕು ಅರಿವಿಗೆ ಬರುವಂಥಾದ್ದು. ಆತ್ಮವೂ ಹಾಗೆ ಅರಿವಿಗೆ ಮಾತ್ರ ದಕ್ಕುವಂಥಾದ್ದೇ? ಮೂರ್ತವಾದದ್ದು ಕೈಗೆ ಸಿಗಬಹುದು, ಸ್ಪರ್ಷಕ್ಕೆ ಸಿಗಬಹುದು. ಅಮೂರ್ತವಾದದ್ದು ಕೈಲಿ ಹಿಡಿಯುವುದು, ಬೊಗಸೆ ತುಂಬಿಕೊಳ್ಳುವುದು ಹೇಗೆ.
ಹಜರತ್ ಜಹೀನ್ ಷಾ ತಾಜಿ ಹೇಳುತ್ತಾರೆ:
ಮೌಲಾ ಮೌಲಾ ಅಂತ ಜಪ ಮಾಡಿದರೆ ಮೌಲಾ ಸಿಗುವುದಿಲ್ಲ
ಶಬ್ದಗಳೊಂದಿಗೆ ಆಡಿದರೆ ನಮಗೆ ಅರ್ಥ ಸಿಗುವುದಿಲ್ಲ.
ಬೆಂಕಿ ಬೆಂಕಿ ಅಂತ ಹಲುಬಿದರೆ ಅರಿವಾಗುವುದಿಲ್ಲ ಬೆಂಕಿ.
ಕಿಡಿಯೊಂದು ತುಟಿಗೆ ತಗುಲಿದರೆ ತುಟಿ ಹೇಗೆ ಸುಡತ್ತೆ ನೋಡಿ.
ಮೌಲಾ ಅಥವಾ ದೇವರು ಅಥವಾ ಆತ್ಮ ಒಂದು ಶಬ್ದ ಅಷ್ಟೇ. ಮೌಲಾ ಮೌಲಾ ಅಥವಾ ರಾಮಾ ರಾಮಾ ಅಂದರೆ ಶಬ್ದ ನಮ್ಮ ಪಾಲಿಗೆ ದಕ್ಕೀತೇ ಹೊರತು, ಮೌಲಾ ಅಲ್ಲ. ಅತ್ಮವಲ್ಲ. ಸಾವಿರ ಸಾರಿ ಬೆಂಕಿ ಬೆಂಕಿ ಅಂದರೂ ಬೆಂಕಿ ನಮ್ಮ ಅರಿವಿಗೇ ಬರುವುದಿಲ್ಲ. ಬೆಂಕಿಯನ್ನು ಮುಟ್ಟಿ ನೋಡಿದಲ್ಲಿ ಬೆಂಕಿಯ ಅರಿವಾಗುತ್ತದೆ. ಆತ್ಮ (ಅಥವಾ ದೇವರು) ನಮಗೆ ಹಾಗೆ ಅರಿವಾಗಬೇಕೂ ಅನ್ನುತ್ತಾರೆ. ಆದರೆ ಆತ್ಮವನ್ನು ಮುಟ್ಟಿ ಬೊಗಸೆ ತುಂಬಿಕೊಳ್ಳಲು ಸಾಧ್ಯವೇ?

ಹೈದರಾಬಾದಿನ ನನ್ನ ಈಟೀವಿ ದಿನಗಳು ಅವು. ಮೇಲಿನ ಮಹಡಿಯಲ್ಲಿ ಒಂದು ದೊಡ್ಡ ಅಪಾರ್ಟ್‌ಮೆಂಟಿನಲ್ಲಿ ಒಂಟಿ ಜೀವನ. ಚಾನೆಲ್ಲಿನ ಆಫೀಸಿನಲ್ಲಿ ಮಾತ್ರ ಅಕ್ಕಿ ಕಾಳು ಉದುರಿಸಿದಂತೆ ಕನ್ನಡ. ಉಳಿದಂತೆ ಹೈದರಾಬಾದು ದಖನಿ ಅಥವಾ ತೆಲುಗು. ಅಂತಹ ಭಾಷಾ ತುಟ್ಟಿ ಕಾಲದಲ್ಲಿ ಬೆಂಗಳೂರಿನಿಂದ ಯಾರಾದರೂ ಗೆಳೆಯರು ಬಂದರಂತೂ ಒಂದೆರಡು ದಿನ ಇದ್ದು ಹೋಗಿ ಅಂತ ದುಂಬಾಲು ಬೀಳುತ್ತಿದ್ದೆ. ನನ್ನ ಸ್ಥಿತಿಯನ್ನು ನೋಡಿ ಮನಃಕರಗಿ ಕೆಲವರು ಇದ್ದೂ ಬಿಡುತ್ತಿದ್ದರು. ರೇಖಾರಾಣಿ ಮತ್ತು ಆಕೆಯ ಪತಿ ಅಶೋಕ್ ಕಶ್ಯಪ್, ಗೆಳೆಯ ಟಿ ಎನ್ ಸೀತಾರಾಮ್, ಧಾರಾವಾಹಿ ನಿರ್ದೇಶಕ ಮತ್ತು ನಿರ್ಮಾಪಕ ರವಿಕಿರಣ್, ಸಿಹಿಕಹಿ ಚಂದ್ರು ಈ ದಿನಗಳಲ್ಲಿ ಜೊತೆ ಕೊಟ್ಟ ಗೆಳೆಯರು. ಎರಡು ತಿಂಗಳಿಗೆ ಒಮ್ಮೆಯಾದರೂ ಬರಲೇಬೇಕು. ಹೆಚ್ಚೂ ಕಡಿಮೆ ಎಲ್ಲಾ ಇರುತ್ತಿದ್ದುದು ನನ್ನ ಮನೆಯಲ್ಲಿ. ಸಂಜೆಯೆಂದರೆ ಜಲಸಾ ಮನೆಯಲ್ಲಿ.

ಹೀಗಿರುತ್ತಿರಲಾಗಿ, ಒಂದು ಸಾರಿ ನಾನು ಮಾಡಬೇಕಾಗಿದ್ದ ಒಂದು ಟೀವಿ ಸಿನೆಮಾದ ಹಾಡಿಗೆ ರಾಗ ಹಾಕಲು ಬಂದಿದ್ದ ಸಿ ಅಶ್ವತ್ಥ್ ಬಂದರು. ಈಟೀವಿಯ ಮೊದಲ ಸಂಗೀತ ಕಾರ್ಯಕ್ರಮದ ನಿರ್ದೇಶನ ಮತ್ತು ಹೊಣೆಗಾರಿಕೆ ಅಶ್ವತ್ಥ್ ಅವರದ್ದೇ. ಕನ್ನಡದ ಎಲ್ಲಾ ಭಾವಗೀತೆ ಗಾಯಕರು ಒಂದೊಂದು ಅಧ್ಯಾಯದಲ್ಲಿ ಒಬ್ಬೊಬ್ಬರಾಗಿ ಹಾಡಿದ ಒಂದು ಅಪೂರ್ವ ಕಾರ್ಯಕ್ರಮ ಅದು. ಹಾಗಾಗಿ ಅಶ್ವತ್ಥ್ ಅವರಿಗೆ ಹೈದರಾಬಾದು ಅಥವಾ ಈಟೀವಿ ಅಥವಾ ರಾಮೋಜಿ ಫಿಲ್ಮ್ ಸಿಟಿ ಹೊಸದೇನೂ ಆಗಿರಲಿಲ್ಲ. ಆದರೆ ಮೊದಲ ಬಾರಿಗೆ ನನ್ನ ಮನೆಯಲ್ಲಿ ಉಳಿದುಕೊಂಡಿದ್ದೇ ಹೊಸತು. ಅದೂ ಅವರಾಗೇ ಕೇಳಿ ಬಂದರು. ರಾತ್ರಿ ಎಂಟರ ತನಕ ಹಾಡುಗಳ ರೆಕಾರ್ಡಿಂಗ್ ಆದ ಮೇಲೆ ಮನೆಯತ್ತು ಪಯಣ. ಇನ್ನು ರಾತ್ರಿಯ ಕಾರ್ಯಕ್ರಮಕ್ಕೆ ತಯಾರಿ ಮಾಡಬೇಕಲ್ಲ…ಅಲ್ಲಲ್ಲೇ ಕಾರನ್ನು ನಿಲ್ಲಿಸ ಅವರ ಫರಮಾಯಿಶಿ ತಿಂಡಿ-ತೀರ್ಥಗಳನ್ನು ಖರೀದಿ ಮಾಡಿದ್ದಾಯಿತು. ಎಲ್ಲದರಲ್ಲೂ ಅಶ್ವತ್ಥ್ ಅವರದ್ದು ನಿಖರವಾದ ರುಚಿ. ತಮಗೇನು ಬೇಕು ಅನ್ನುವುದು ಅವರಿಗೆ ಗೊತ್ತಿದ್ದಷ್ಟು ಸ್ಪಷ್ಟವಾಗಿ ನಮಗೇನು ಬೇಕು ಅನ್ನುವುದು ನಮಗೇ ಗೊತ್ತಿದೆಯೋ ಇಲ್ಲವೋ. ತಮಗೆ ಬೇಕಾದ್ದು ಸಿಗದೇ ಹೋದರೆ ಹೋಗಲಿ, ಅದರ ಬದಲಿಗೆ ಇನ್ನೊಂದೋ ಮತ್ತೊಂದೋ ಸಾಧ್ಯವಿಲ್ಲ. (ಒಂದು ಸಾರಿ ಅಶ್ವತ್ಥ್ ಅವರನ್ನು ಬೆಂಗಳೂರಿನ ನಮ್ಮ ಮನೆಗೆ ಊಟಕ್ಕೆ ಕರೆದಿದ್ದೆವು. ಅವರಿಗೆ ಏನು ಇಷ್ಟವೋ ಅದೇ ಅಡಿಗೆಯನ್ನೇ ಮಾಡಿಸಿದರಾಯಿತು ಅಂತ ಅವರನ್ನೇ ಕೇಳಿದೆವು. ಒಂದಿಷ್ಟು ಊಟದ ಪದಾರ್ಥಗಳ ಪಟ್ಟಿಯನ್ನು ಕೊಟ್ಟು ಪ್ರತಿ ಪದಾರ್ಥ ಹೇಗಿರಬೇಕು ಅನ್ನುವುದನ್ನೂ ವಿವರಿಸಿ, ಕೊನೆಗೆ ಮೊಸರನ್ನ ಹೇಗಿರಬೇಕೂ ಅನ್ನುವುದನ್ನು ವಿವರಿಸಿದ್ದು ಇನ್ನೂ ನನಗೆ ನೆನಪಿದೆ .’ಅವನಿಗೆ (ಅಂದರೆ ಅಡಿಗೆಯವನಿಗೆ) ಹೇಳಪ್ಪಾ ಮೊಸರನ್ನ ಮೊಸರನ್ನ ಇದ್ದ ಹಾಗಿರಲಿ. ದ್ರಾಕ್ಷಿ, ಗೋಡಂಬಿ, ದಾಳಿಂಬೆ, ಕಿತ್ತಳೆ, ಅನಾನಸ್ ಅದೇನೇನೆಲ್ಲಾ ಹಾಕಿ ಫ್ರೂಟ್ಸ್ ಸಾಲಾಡ್ ಮಾಡಬೇಡ’ ಅಂತ.)
ಮನೆಗೆ ಬಂದು ಶುಚೀರ್ಭೂತರಾಗಿ, ತಂದ ಬಾಟಲಿಯನ್ನು ಎದುರಿಗಿಟ್ಟು ಕೊಂಡು ರಾತ್ರಿಯನ್ನು ಎದುರಿಸಲು ತಯಾರಾಗಿ ಕೂತೆವು, ಇಬ್ಬರೇ… ಲೋಕನಿಂದನೆಯನ್ನೂ, ಪರನಿಂದನೆಯನ್ನೂ ಮಾಡುತ್ತಾ, ಹಳೆಯ ದಿನಗಳನ್ನು ಮಗುಚಿ ಹಾಕುತ್ತಾ, ನಂನಮ್ಮ ಬೆನ್ನುಗಳನ್ನು ನಾವು ನಾವೇ ಚಪ್ಪರಿಸಿಕೊಳ್ಳುತ್ತಾ ರಾತ್ರಿಯ ಯಾವುದೋ ಜಾಮದಲ್ಲಿ ನೋಡಿದಾಗ ಏನಿದೆ, ಇಡೀ ಒಂದು ಬಾಟಲಿಯನ್ನು ನಾವಿಬ್ಬರೂ ಮುಗಿಸಿದ್ದೆವು. `ಚೆನ್ನಾಗಿದೆಯಲ್ಲಾ ಗುಂಡು, ತಲೆನೋವೇ ಬರಲ್ಲ ನೋಡ್ತಾಯಿರು. ನಾನಂತೂ ಹಾಕದು ಇದನ್ನೇ` ಅಂತ ತಮ್ಮ ಖ್ವಾಯಿಶ್ಗೆ ಬೆನ್ನು ತಟ್ಟಿಕೊಂಡರು. ನೆಲದ ಮೇಲಿನ ಒಂದೆರಡು ತಟ್ಟೆಗಳಲ್ಲಿ ನಾವು ತಿಂದು ಉಳಿಸಿದ ಕುರುಕಲು ತಿಂಡಿಗಳು ಇನ್ನೂ ಒಂದಿಷ್ಟು ಉಳಿದಿದ್ದವು. ನೆಲದ ಮೇಲೆ ಬಾಯಿಗೂ ದಕ್ಕದೇ, ಕೈಗೂ ದಕ್ಕದೆ ಉದುರಿದ್ದ ಪುಡಿಗಳು ಕಸದಂತೆ ಕಾಣುತ್ತಿದ್ದವು. ಇನ್ನೂ ಊಟ ಮಾಡಿರಲಿಲ್ಲ, ಹಾಗಾಗಿ ಅಷ್ಟರ ಮಟ್ಟಿಗೆ ರೂಮು ಸ್ವಚ್ಛವಾಗಿತ್ತು. ಯಾವುದೋ ಬಾರಿನ ಗಿರಾಕಿಗಳಂತೆ, ನೆಲದ ಮೇಲೆ ಎದರುಬದುರಾಗಿ ಕೂತಿದ್ದ ನಾವಿಬ್ಬರೂ ಅದ್ಯಾವುದೋ ಒಂದು ಹೊತ್ತಿನಲ್ಲಿ ನೆಲದ ಮೇಲೆ ಕಾಲು ಚಾಚಿಕೊಂಡು, ಗೋಡೆಗೆ ಒರಗಿಕೊಂಡು ಅಕ್ಕಪಕ್ಕ ಕೂತಿದ್ದೆವು. ರಾತ್ರಿಯ ಯಾವುದೋ ಹೊತ್ತು. ಗೋಡೆಗೆ ತಲೆಯಾನಿಸಿ ಕಾಲು ಚಾಚಿಕೊಂಡು ಕೂತಿದ್ದ ಅಶ್ವತ್ಥ್ ಇದ್ದಕ್ಕಿದ್ದಂತೇ ಸಣ್ಣದಾಗಿ ಆಲಾಪ ಶುರುಮಾಡಿದರು. ಅಲ್ಲೀವರೆಗೂ ಸಂಗೀತದ ಬಗ್ಗೆ ಮಾತನಾಡುತ್ತಿದ್ದರಲ್ಲಾ, ಒಮ್ಮಿಗಿಲೇ ಹಾಡುವ ಹುಕಿ ಹೊಕ್ಕಿರಬೇಕು. ನಾನು ಮೆಲ್ಲನೆದ್ದು ಎಲ್ಲಾ ದೀಪಗಳನ್ನು ಆರಿಸಿ, ಯಾವುದಕ್ಕೂ ಇರಲಿ ಅಂತ ನೆಪಕ್ಕೆ ಒಂದು ದೀಪವನ್ನುಳಿಸಿ ಹತ್ತಿರದಲ್ಲಿ ಕೂತೆ. ಯಾವುದೋ ರಾಗವನ್ನು ಗುಣುಗುತ್ತಾ ಗುಣುಗುತ್ತಾ ಅಶ್ವತ್ಥ್ ಮೆಲ್ಲಗೆ ತಮ್ಮದೇ ಲೋಕದ ಆಳಕ್ಕಿಳಿಯುತ್ತಿದ್ದರು. ಸುಮಾರು ಒಂದೈದು ನಿಮಿಷದ ಆಲಾಪ ಗುಣುಗಿದ ನಂತರ ಆಲಾಪಕ್ಕೆ ದನಿ ಬಂತು. ದನಿ ಬಂದು ಕತ್ತಲಿದ್ದ ಆ ರೂಮಿನಲ್ಲಿ ಹರಿಯತೊಡಗಿತು. ಸುರುಳಿ ಸುರುಳಿಯಾಗಿ ಬಿಚ್ಚಿ ಕೊಳ್ಳತೊಡಗಿತು. ಅಲ್ಲಿದ್ದ ಗಾಳಿಗೂ ಸದ್ದು ಮಾಡಲು ಅಪ್ಪಣೆಯಿರಲಿಲ್ಲ ಅನ್ನುವಂತೆ ಆಲಾಪ ಇಡೀ ಕೋಣೆಯನ್ನು ತುಂಬತೊಡಗಿತ್ತು. ಕತ್ತಲಲ್ಲಿ ಕೈಚಾಚಿದರೆ ಆ ಆಲಾಪವನ್ನು ಕೈಯಿಂದ ಮುಟ್ಟ ಬಹುದೇನೋ ಅನಿಸುವಂತಿತ್ತು. ಇದ್ದಕ್ಕಿದ್ದಂತೇ ಆಲಾಪಕ್ಕೆ ಪದಗಳನ್ನಿತ್ತರು. ‘ಮನಸೇ ಮನಸಿನ ಮನಸಾ ನಿಲ್ಲಿಸುವುದು. ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೇ’ ಹಾಡು ಬೆಳೆಯತೊಡಗಿತು. ಇಳಿಯತೊಡಗಿತು. ಹರಿಯತೊಡಗಿತು.
ಮೆಲುದನಿಯಲ್ಲಿ ರಾಗದ ಯಾವುದೇ ಛಾಯೆಯನ್ನು ಬಿಡದೆ ಹಾಡನ್ನು, ಹಾಡಿನ ರಾಗವನ್ನು ತೀಡುತ್ತಿದ್ದರು, ಸಾವರಿಸುತ್ತಿದ್ದರು, ನೇವರಿಸುತ್ತಿದ್ದರು, ತೊಡೆಯ ಮೇಲೆ ಮಲಗಿಸಿ ಮುದ್ದು ಮಾಡುತ್ತಿದ್ದರು, ರಾಗದ ಸಂದು ಗೊಂದುಗಳನ್ನು ಪ್ರೀತಿಯಿಂದ ಬಿಡಿಸುತ್ತಿದ್ದರು. ಯಾವುದೇ ಪಕ್ಕವಾದ್ಯದ ಅಬ್ಬರವಿಲ್ಲ, ಯಾವ ಅಡಚಣೆಯೂ ಇಲ್ಲ, ಯಾವ ತಾಳವೂ ಇಲ್ಲ, ಯಾವ ಧಾವಂತವೂ ಇಲ್ಲ. ಹಾಡು ಆ ಕತ್ತಲಿನ ಕೋಣೆಯಲ್ಲಿ ತನಗೆ ತಾನೇ ಉಸಿರಾಡಹತ್ತಿತ್ತು, ಅಲ್ಲಿದ್ದ ಗಾಳಿಯಲ್ಲಿ ಸರಿದಾಡಹತ್ತಿತ್ತು. ಅಶ್ವತ್ಥ್ ಅವರನ್ನೇ ದಿಟ್ಟಿಸಿ ನೋಡುತ್ತಿದ್ದೆ. ಕಣ್ಣು ಮುಚ್ಚಿ ಹಾಡುತ್ತಿದ್ದರು. ಬರಬರುತ್ತಾ ಹಾಡು ಗಾಳಿಯಲ್ಲಿ ಆಡಿದಂತೆಲ್ಲಾ ಅಶ್ವತ್ಥ್ ನನ್ನ ಕಣ್ಣುಗಳಿಂದ ಮರೆಯಾಗತ್ತಾ ಹೋದರು. ಕೇವಲ ಅವರ ಧ್ವನಿಯೊಂದೇ ಕೇಳುತ್ತಿತ್ತು. ಕತ್ತಲು, ಕತ್ತಲಲ್ಲಿ ನಾನೂ, ನನ್ನ ಸುತ್ತಲ ಗಾಳಿ, ನನ್ನ ರೂಮೂ ಎಲ್ಲ ಒಂದಾದಂತೆ. ಇದ್ದಕ್ಕಿದ್ದಂತೇ ಹಾಡು ನಿಂತಿತು. ಸುಮಾರು ಹೊತ್ತು ಇಬ್ಬರೂ ಮಾತನಾಡಲಿಲ್ಲ. ಮಾತಿಗೆ ಅಲ್ಲಿ ಅವಕಾಶವೂ ಇರಲಿಲ್ಲ. ಎಷ್ಟೋ ಹೊತ್ತು ಹಾಗೇ ಕುಳಿತಿದ್ದೆವು. ಅವರ ಮುಖವನ್ನು ನೋಡುವ ಧೈರ್ಯವಾಗಲಿಲ್ಲ ನನಗೆ. ಅದೆಷ್ಟೋ ಹೊತ್ತಿನ ನಂತರ `ಹ್ಹ` ಅಂತ ಉದ್ಗರಿಸಿದರು. ‘ಯಾಕೋ ಊಟ ಬೇಡಪಾ ನಂಗೆ’ ಅಂದರು. ಬಿಟ್ಟರೆ ಹಾಗೇ ಮಲಗಿಬಿಡುತ್ತಾರೆ ಅನಿಸಿ, ‘ಸ್ವಲ್ಪ ಮೊಸರನ್ನ ಆದರೂ ತಿನ್ನಿ’ ಅಂತ ಹೇಳಿ ಎದ್ದು ದೀಪ ಹಾಕಿದೆ. ನನ್ನನ್ನೇ ನೋಡುತ್ತಿದ್ದರು. ಕಣ್ಣೀರಿಟ್ಟ ಹಾಗಿತ್ತು. ಹೃದಯ ತಟ್ಟದೇ ಕಣ್ಣಲ್ಲಿ ನೀರುಕ್ಕುವುದು ಸಾಧ್ಯವೇ? ನನ್ನ ಕಣ್ಣಲ್ಲೂ ನೀರಿತ್ತೇ, ಗೊತ್ತಿಲ್ಲ.
ಅಂದು ನನಗೆ ಆತ್ಮ ಕೈಗೆ ಸಿಕ್ಕಿದಂತಾಗಿತ್ತು. ಅಂದಿನ ರಾತ್ರಿಯ ಅನುಭವ ದಕ್ಕಿದ್ದು ನನ್ನ ಆತ್ಮಕ್ಕೆ. ಸಂತೋಷಪಟ್ಟಿದ್ದು ನನ್ನ ಆತ್ಮ. ಗುಲ್ಝಾರ್ ಸಾಬ್ ಹೇಳಿದ್ದು ಅರಿವಾಗಿತ್ತು.
 

‍ಲೇಖಕರು G

15 September, 2014

3 Comments

  1. ಲಕ್ಷ್ಮೀಕಾಂತ ಇಟ್ನಾಳ

    ಹೌದು, ಗುಲ್ಜಾರ್ ರ ಸಾಲುಗಳು ಅರ್ಥವಾದಾಗ ಮೈಯೆಲ್ಲ ಪುಳಕ, ರೋಮಾಂಚನ ಹಲವಾರು ಬಾರಿ ಅನುಭವಿಸಿರುವೆ. ಒಮ್ಮೆ ‘ಬೋಸ್ಕಿಯಾನಾ’ದಲ್ಲಿ ಇದೆಲ್ಲ ವರ್ಣಿಸಿ, ಇಂಥದೆಲ್ಲ ಬರೆಯಲು ಹೇಗೆ ಸಾಧ್ಯವಾಯಿತು ಸರ್. ಎಂದದ್ದಕ್ಕೆ, ಸುಮ್ಮನೆ ನಕ್ಕರು…..ಕ್ಷಣ ಮೌನವಾದರು……ಕಿವಿ ಮೇಲೆ ಬಲಗೈಯಿಟ್ಟು….ಮತ್ತೆ ಮೇಲೆ ಮುಖ ಮಾಡಿ ಕೈತೋರಿ….ನನ್ನೊಡನೆ ನಕ್ಕು …ಬೆನ್ನು ಚಪ್ಪರಿಸಿದರು. ಕೆಲ ಕ್ಷಣ ನಾನೂ ಮೌನವಾಗಿದ್ದೆ. ….. ‘ರೂಹ್ ದೇಖೀ ಹೈ’ ಕವನವನ್ನು ಓದಿದಾಗ ಎನೂ ಅನ್ನಿಸದು, ಅರ್ಥವಾದರೆ ಮಾತ್ರ, ಎಟರ್ನಿಟಿ ನಿಲುಕುತ್ತೆ. ಅವರ ಬಹುತೇಕ ಸಾಲುಗಳು ಹಾಗೆಯೇ…..ಅಶ್ವಥ್ ಕೂಡ ಮಹಾನ್ ಕಲಾವಿದ. ಅಂತಹ ಕಲಾವಿದರ ಸಾಂಗತ್ಯ ಪಡೆದವರು ನಿಜಕ್ಕೂ ಋಷಿಗಳು ನನ್ನ ಕಣ್ಣಲ್ಲಿ….

  2. ಡಾ.ಶಿವಾನಂದ ಕುಬಸದ

    ಎಂಥ ಅದ್ಬುತ ವರ್ಣನೆ….ಅಶ್ವಥ್ ರವರ ಆತ್ಮ ಇಲ್ಲೆಲ್ಲೋ ನನ್ನ ಬದಿಯಲ್ಲೇ ಸರಿದಾಡಿದಂತಾಯಿತು.

  3. mmshaik

    sooooooooooooooo..nice.!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading