ಸೂರಿಯ ಹಳೆಯ ಚಿತ್ರಗಳ 'ಮರು ಸ್ಯಾಂಪಲ್ಲು'- ಟಗರು

ಮಂಜುನಾಥ್ ಲತಾ 
ನ್ಯೂಸ್ ಪೇಪರ್, ಚಾನೆಲ್, ಫೇಸ್ ಬುಕ್ ತಂಟೆಯೇ ಇಲ್ಲದೆ ಸೌದೆಯಲ್ಲಿ ಬೇಯಿಸಿದ ‘ಅನ್ನಭಾಗ್ಯ’ದ ‘ಸೊಸೈಟಿ ಅನ್ನ’ವನ್ನು ಉಂಡುಕೊಂಡು ಚೇತರಿಸಿಕೊಂಡವನಂತೆ ತಿಂಗಳ ನಂತರ ಮೈಸೂರಿಗೆ ಬಿದ್ದವನಿಗೆ ‘ನನ್ನ ನಿರ್ದೇಶಕ’ ಸೂರಿಯ ‘ಟಗರು’ ರಿಲೀಸಾಗಿದ್ದೇ ಗೊತ್ತಿರಲಿಲ್ಲ.
ಪಟ್ಟು ಬಿಡದವನಂತೆ ಎರಡು ಬಾರಿ ಕೂತು ನೋಡಿದೆ; ಮೊದಲಿಗೆ ನನ್ನ ಗೆಳೆಯನಂಥ ಸಹೋದರ ನಾಗನೊಂದಿಗೆ, ಮರುದಿನವೇ ಶಿವರಾಜ್ ಕುಮಾರ್ ಫ್ಯಾನ್ ಆಗಿರುವ ನನ್ನ ಮಗ ಚಿನುವಾನೊಂದಿಗೆ…
‘ಟಗರು’ ಸೂರಿಯವರ ಹಳೆಯ ಸತ್ಯಗಳನ್ನೇ ಹೊಸದಾಗಿ ಹೊಳೆಯಿಸುತ್ತಿದೆಯೇನೋ ಎನ್ನಿಸಿತು.
‘ದೊಡ್ಮನೆ ಹುಡ್ಗ’ ಚಿತ್ರದ ಸೋಲು, ‘ಕೆಂಡ ಸಂಪಿಗೆ’ಯ ‘ಭಾಗಶಃ ಗೆಲುವು’ ಸೂರಿಗೆ ಮತ್ತೆ ‘ಮತ್ತು’ ನೀಡುವಂತಿದೆ ‘ಟಗರು’.
-ಬೇಕಾ ಬೇಕಾ ಸ್ಯಾಂಪಲ್ಲು…!
ಸಿನಿಮಾದ ಈ ಸಾಲುಗಳೊಡನೆಯೇ ‘ಟಗರು’ವನ್ನು ನಿಕಷಕ್ಕೊಡ್ಡಬಹುದು. ಯಾಕೆಂದರೆ ‘ಟಗರು’ ಸೂರಿಯ ಹಳೆಯ ಚಿತ್ರಗಳ ‘ಮರು ಸ್ಯಾಂಪಲ್ಲು’!
ಇಲ್ಲಿ ‘ದುನಿಯಾ’, ‘ಜಾಕಿ’, ‘ಜಂಗ್ಲಿ’, ‘ಕೆಂಡಸಂಪಿಗೆ’ ಸಿನಿಮಾಗಳ ಜರ್ನಿ ಇದೆ. ‘ಕಡ್ಡಿಪುಡಿ’ಯ over voice ನಿರೂಪಣೆ ಇದೆ.
ಸೂರಿ ಇಲ್ಲಿ ಬಳಸಲು ಯತ್ನಿಸಿರುವುದು ‘ದೃಶ್ಯಗಳ ಮರು ನಿರೂಪಣೆ’. ಕನ್ನಡಕ್ಕೆ ಇದು ಹೊಸದಾದರೂ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಇಂತಹ ನಿರೂಪಣೆ ಇತ್ತು.
ಇದು ಮೂಲತಃ ಅಕಿರಾ ಕುರಾಸೋವಾನ ‘ರಾಶೋಮಾನ್’ (1950)ಚಿತ್ರದಿಂದ ಪ್ರೇರಣೆ ಪಡೆದ ತಂತ್ರಗಾರಿಕೆ. ಇದನ್ನು ಮಣಿರತ್ನಂ ‘ಆಯುಧೈ ಎಳತ್ತು'(2004) ಚಿತ್ರದಲ್ಲೂ, ಕಮಲಹಾಸನ್ ಸ್ವತಃ ನಟಿಸಿ, ನಿರ್ದೇಶಿಸಿದ ‘ವೀರುಮಾಂಡಿ'(2004) ಚಿತ್ರದಲ್ಲೂ ಬಳಸಿದ್ದಾರೆ.
ನನ್ನ ಫೇವರೀಟ್ ನಿರ್ದೇಶಕ ಮಿಷ್ಕಿನ್ ಇಂತಹ ತಂತ್ರಗಳನ್ನು ಬಳಸುವುದರಲ್ಲಿ ಬಹಳ ಜಾಣ (ಯುದ್ಧಂ ಸೆಯ್, ಓನಾಯುಂ ಆಟುಕ್ಕುಟ್ಟಿಯುಂ, ಪಿಸಾಸು ಇತ್ಯಾದಿ). ಸೂರಿ ಅದನ್ನು ಇಲ್ಲಿ ಮತ್ತೆ ಮತ್ತೆ ದೃಶ್ಯೀಕರಿಸಲು ಹೋಗಿದ್ದರಿಂದ ಶಿವರಾಜ್ ಫ್ಯಾನ್ ಗಳು, ಸೂರಿಯ ಅಭಿಮಾನಿಗಳು confuse ಆಗುತ್ತಾ ಹೋಗುತ್ತಾರೆ. ಈ ದೃಶ್ಯಗಳ ಮರು ನಿರೂಪಣೆ ಸಖತ್ ಗೊಂದಲಕ್ಕೀಡು ಮಾಡುವುದು ಇದೇ ಕಾರಣಕ್ಕೆ.
ಚಿತ್ರದ ಕಥೆಯಲ್ಲಿ ಹೊಸದೇನೂ ಇಲ್ಲ. ಆದರೆ ಸೂರಿ ಗೆದ್ದಿರುವುದು ಪಾತ್ರಗಳ ಆಯ್ಕೆ ನಿರೂಪಣೆ ಹಾಗೂ ತಮ್ಮ ಹಳೆಯ ಟೀಂ ಅನ್ನು ಬದಲಾಯಿಸಿರುವುದರಲ್ಲಿ. ಇಲ್ಲಿ ಅವರ ಫೇವರೀಟ್ ಹರಿಕೃಷ್ಣ, ಸತ್ಯ ಹೆಗಡೆ, ರಂಗಾಯಣ ರಘು ಇಲ್ಲ. ಸಂಕಲನಕಾರ ದೀಪು ಎಸ್. ಕುಮಾರ್ ಅವರನ್ನು ಹೊರತುಪಡಿಸಿದರೆ ಹೊಸಬರಿಗೆ ಸಾಕಷ್ಟು ಅವಕಾಶ ಕೊಟ್ಟಿದ್ದಾರೆ.
ಈವರೆಗೆ ಚಿತ್ರಕತೆಯೊಂದಿಗೆ ಸಂಭಾಷಣೆಯನ್ನೂ ಬರೆಯುತ್ತಿದ್ದ ಸೂರಿ ಮಾಸ್ತಿ ಎಂಬುವರಿಗೆ ಅವಕಾಶ ಕೊಟ್ಟಿದ್ದಾರೆ. ಒಂದು ಪಾತ್ರವನ್ನೂ ಅನಗತ್ಯವಾಗಿ ಸೃಷ್ಟಿಸದ ಸೂರಿಯ ‘ಟಗರು’ ತನ್ನ ನೈಜ ನಿರೂಪಣೆಯೊಂದಿಗೆ ಗೆಲ್ಲುತ್ತದೆ ಎಂದುಕೊಂಡರೂ ‘ಕಡ್ಡಿಪುಡಿ’ಯ ಮುಂದೆ ಪೇಲವವಾಗಿ ಕಾಣಿಸುತ್ತದೆ. ಸೂರಿಯ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಗಳು ಏನೆಂಬುದನ್ನು ಈ ಚಿತ್ರ ನಿರೂಪಿಸುತ್ತದೆ:
ಅದಕ್ಕೆ ಉದಾಹರಣೆಗಳಿವು:
* ‘ಕಡ್ಡಿಪುಡಿ’ಯಲ್ಲಿ ತಂದ ಭೂಗತ ಜಗತ್ತಿನ ನೈಜತೆ ಇಲ್ಲಿ ‘ರಕ್ತಕ್ರೌರ್ಯ’ವಾಗಿ ವಿಜೃಂಭಿಸುತ್ತದೆ. (ರಾಮ್ ಗೋಪಾಲ್ ವರ್ಮಾ ಅವರ ‘ರಕ್ತ ಚರಿತ್ರಂ’, ಅನುರಾಗ್ ಕಶ್ಯಪ್ ಅವರ ‘ಗ್ಯಾಂಗ್ ಆಫ್ ವಾಶೇಪುರ್’ ನೆನಪಾಗುತ್ತವೆ) ‘ಕಡ್ಡಿಪುಡಿ’ ಕೂಡ ಮಣಿರತ್ನಂ ಅವರ ‘ನಾಯಗನ್’ ನಿಂದ ಪ್ರೇರಣೆ ಪಡೆದ ಚಿತ್ರ ಎಂಬುದು ನೆನಪಾಗುತ್ತಿದೆ.
* ‘ದೊಡ್ಮನೆ ಹುಡ್ಗ’ದಲ್ಲಿ ಸಂಬಂಧಗಳ ಭಾವುಕತೆಯನ್ನು ನಾಟಕೀಯವಾಗಿ, ಹಳ್ಳಿಗಳ ಪೊಲಿಟಿಕಲ್ ಧಾಟಿಯಲ್ಲಿ ತೋರಿಸಿದ್ದರಿಂದ ಸೋತ ಸೂರಿ ಇಲ್ಲಿ ಭಾವನಾತ್ಮಕ ಸಂಬಂಧಗಳನ್ನು, ಪ್ರೀತಿ, ಪ್ರೇಮದ ನೆಲೆಯಲ್ಲಿ ಇನ್ನಷ್ಟು ಹೃದ್ಗತವಾಗಿ ತರಲು ಯತ್ನಿಸಿದ್ದಾರೆ (ಅದು ಮಧ್ಯಂತರದ ನಂತರ).
*’ಕಡ್ಡಿಪುಡಿ’ಯಲ್ಲಿ ‘ಏ ಮದನಾಂತಕ ಶೂಲಪಾಣೇ’ ಹಾಡಿನ ಹಿನ್ನೆಲೆಯಲ್ಲಿ ನಡೆಯುವ ಎರಡು ಕೊಲೆಗಳು ಉಂಟು ಮಾಡುವ ಗಾಢ ವಿಷಾದ ‘ಟಗರು’ವಿನಲ್ಲಿ ರಕ್ತದ ಹೊಳೆ ತೊಯ್ಯಿಸುವಾಗ (ಡಾಲಿಯ ಕ್ರೌರ್ಯ) ಉಂಟಾಗುವುದಿಲ್ಲ.
*ಕುಡಿಯುವುದನ್ನು ಬಿಟ್ಟಿದ್ದೇನೆ ಎಂದು ಎಂದೋ ಹೇಳಿಕೊಂಡಿದ್ದ ಸೂರಿ ತಮ್ಮ ಕುಡಿತದ ‘ಅಮಲನ್ನು’ ಎಲ್ಲ ಪಾತ್ರಧಾರಿಗಳಿಗೂ ಆರೋಪಿಸಿಬಿಟ್ಟಿದ್ದಾರೆ! (ಇದು ತಮಾಷೆಗಾ) ಆದ್ದರಿಂದಲೇ ಒಂದಿಲ್ಲೊಂದು ಪಾತ್ರಗಳು ಕುಡಿಯುತ್ತಲೇ ಇರುತ್ತವೆ; ಕುಡಿತಕ್ಕೆ ಹೆಣ್ಣು ಗಂಡೆಂಬ ಭೇದವಿಲ್ಲ!
* ಇಲ್ಲಿ ರಂಗಾಯಣ ರಘು, ಸಾಧು ಕೋಕಿಲಾ, ಚಿಕ್ಕಣ್ಣ ಇಂತಹವರಿಗಾಗಿ ಸೃಷ್ಟಿಸಿದ ನಾನ್ ಸೆನ್ಸ್ ಪಾತ್ರಗಳಿಲ್ಲ. ಆದರೆ ದೇವರಾಜ್ ‘ಕಡ್ಡಿಪುಡಿ’ಯ ಅನಂತ್ ನಾಗ್ ಅವರನ್ನು ನೆನಪಿಸುತ್ತಾರೆ. ಅವರ ಹಲವು ಡೈಲಾಗ್ ಗಳು ಇಲ್ಲಿ ರಿಪೀಟ್ ಆಗುತ್ತವೆ.
*ಶಿವರಾಜ್ ಕುಮಾರ್ ಅವರಿಗೆ ಕೊಟ್ಟಷ್ಟು ಎನರ್ಜಿಯನ್ನು ಧನಂಜಯ, ವಸಿಷ್ಠ ಸಿಂಹರಂತಹ ಹೊಸಬರಿಗೂ ಕೊಟ್ಟಿರುವುದು ಸೂರಿಯ ಜಾಣ್ಮೆ.
* ‘ಡಾಲಿ’ ಪಾತ್ರಧಾರಿಯ ಅಮಲು ತಮಿಳಿನ ‘ಮದ್ರಾಸ್’ ಮೂವಿಯನ್ನು ನೆನಪಿಸುತ್ತದೆ. ಚಿಟ್ಟೆ (ವಸಿಷ್ಠ ಸಿಂಹ) ಸತ್ತಾಗಿನ ದೃಶ್ಯ ಅಲ್ಲಿಂದಲೇ ಪ್ರೇರಣೆ ಪಡೆದಂತಿದೆ.
-ಒಟ್ಟಾರೆ ಈ ಎಲ್ಲ ವಿಶ್ಲೇಷಣೆಗಳ ನಡುವೆ ನನ್ನ ಸೂರಿ ಗೆದ್ದಿರುವುದು ಎಲ್ಲ ಲಿಂಕ್ ಗಳನ್ನೂ ಇಂಟರ್ ವೆಲ್ ನಂತರ ಜೋಡಿಸುತ್ತಾ ಹೋಗಿರುವುದರಲ್ಲಿ….(ಮೊದಲಿಗೆ ಯಾವುದೇ logic ಇಲ್ಲದೆ ನಡೆಯುತ್ತಾ ಹೋಗುವ ರೌಡಿಗಳ encounterಗಳಿಗೂ ನಂತರ ಅವರು ಲಾಜಿಕ್ ಕ್ರಿಯೇಟ್ ಮಾಡುತ್ತಾರೆ).
* ‘ದೇವರಿದ್ದಾನೆ ಅಂತ ನೀವು ನಂಬ್ತೀರಾ?’ ಅಂತ ಸಿನಿಮಾದ ದೃಶ್ಯವೊಂದರಲ್ಲಿ ನಾಯಕಿ ಕೇಳುತ್ತಾಳೆ. ಅದಕ್ಕೆ ನಾಯಕನ ಉತ್ತರ: ‘ನಂಬ್ತೀನಿ..ಮಕ್ಕಳು ಪ್ರಕೃತಿ ನೋಡಿದಾಗ. ಆದ್ರೆ ಅಪಘಾತಕ್ಕೊಳಗಾದ ಮಕ್ಕಳು, ಪ್ರಪಾತಕ್ಕೆ ಬಿದ್ದ ಮಕ್ಕಳನ್ನು ನೋಡಿದಾಗ ಇದನ್ನೆಲ್ಲ ದೇವರೇ ಮಾಡಿದ್ದಾ ಅನ್ನೊ ಡೌಟು ಶುರುವಾಗುತ್ತೆ’ ಎನ್ನುವ ಸಂಭಾಷಣೆ ಮೂಲಕ ಸೂರಿ ನಮ್ಮೆಲ್ಲರ ಮನ ಕಲಕುತ್ತಾರೆ.
‘ನಿನ್ನ ಭಯವೇ ನಿನ್ನ ಮದವು ಸಿಗಲಿ ಬೇಗ ಕಳೆದ ನಗುವು, ಕೂಗೋ ಕಡಲು ಮೌನ ತೀರ ಮನುಜ ನೀನು ಯಾಕೆ ಕ್ರೂರ’ ಎನ್ನುವ ಸಾಲುಗಳನ್ನು ಸೃಜಿಸಿದ ಕಾಯ್ಕಿಣಿ ಕೂಡ ಕಾಡುತ್ತಾರೆ.
ಸೂರಿಯ ಶ್ರಮಕ್ಕೆ ಇನ್ನಷ್ಟು ಶಕ್ತಿ ದೊರೆಯಲಿ.

‍ಲೇಖಕರು avadhi

March 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: