ಸುಮಿತ್ರಾ ನಡೆದ ‘ದಾರಿ’

ಗದ್ದೆಯಂಚಿನ ದಾರಿ

ನಾನು ನಾಲ್ಕನೇ ಕ್ಲಾಸ್ ಇದ್ದಾಗಿನ ಕಥೆ ಇದು. ಊರಲ್ಲಿದ್ದ ಗಂಡು ಮಕ್ಕಳೆಲ್ಲ ಗದ್ದೆ ಬಯಲಿನಲ್ಲಿ ಆಟ ಆಡುತ್ತಿದ್ದರು. ಅಣ್ಣ ಮತ್ತು ಅವನ ಸಹಪಾಠಿಗಳು ಹಾಗೂ ಅವನದ್ದೇ ವಯಸ್ಸಿನ ಆಸುಪಾಸಿನವರೆಲ್ಲ ಮೇಲಿನ ಗದ್ದೆ ಬಯಲಿನಲ್ಲಿ ಕ್ರಿಕೆಟ್ ಆಡುತ್ತಿದ್ದರೆ ನನಗೆ ಮತ್ತು ನನ್ನ ಕ್ಲಾಸಿನ ಮತ್ತು ಅದರ ಆಸುಪಾಸಿನ ಮಕ್ಕಳಿಗೆ ಸೈಕಲ್ ಟೈಯರ್ ಹಿಡಿದುಕೊಂಡು ಚಕ್ರದ ತರಹ ಉರುಳಿಸುತ್ತ ಓಡುವುದೇ ಒಂದು ಆಟವಾಗಿತ್ತು.

ಯಾರು ಜೋರಾಗಿ  ಟೈಯರ್ ಬೀಳಿಸದಂತೆ ಓಡಿಸ್ತಾರೆ ಎನ್ನುವುದು ಮೊದಲ ಪಂದ್ಯವಾದರೆ, ಗದ್ದೆಯ ಸಪೂರದ ಹಾಳಿ (ಪಾಳಿ) ಮೇಲೆ  ಟೈಯರ್ ಓಡಿಸುತ್ತ ದೊಡ್ಡ ಗದ್ದೆಯ ಒಂದು ಸುತ್ತು ಬರುವ ಛಾಲೆಂಜ್ ಇನ್ನೊಂದು ಆಟ. ನನ್ನೊಟ್ಟಿಗೆ ನನ್ನದೇ ಕ್ಲಾಸಿನಲ್ಲಿದ್ದ ನಮ್ಮ ಎದುರು ಮನೆಯ ಗಣೇಶ, ಅಲ್ಲಿಯೇ ಹತ್ತಿರದಲ್ಲಿ ಶಿಕ್ಷಕಿ ಆಗಿದ್ದ ನನ್ನ ಅತ್ತೆಯ ಮಗ ಗೋಪು, ಹಾಗೂ ಮತ್ತೆ ಕೆಲವರು. ನನ್ನ ಹಾಗೂ ಅಣ್ಣನ ಯಾವ ಗುಂಪಿಗೂ ಸೇರದ ಕೆಲವರಿದ್ದರು ಮಧ್ಯದವರು. ಅವರು ಅತ್ಲಾಗೆ ಕ್ರಿಕೇಟ್ ಆಡುವವರಿಗೂ ತೊಂದರೆ ಕೊಡುತ್ತ, ಇತ್ಲಾಗೆ ಟೈಯರ್ ಹೊಡೆಯೋ ನಮಗೂ ಕೀಟಲೆ ಮಾಡುತ್ತ ವಿಘ್ನ ಸಂತೋಷ ಅನುಭವಿಸುತ್ತಿದ್ದವರು.

ನಮ್ಮ ಸ್ಪೀಡಾಗಿ ಟೈಯರ್ ಹೊಡೆಯುವ ಆಟ ಮುಗಿದು, ಗದ್ದೆ ಹಾಳಿಯ ಮೇಲಿನ ಸವಾರಿ ಪ್ರಾರಂಭವಾಗಿತ್ತು. ಎದುರುಗಡೆಯಿಂದ ಜೋರಾಗಿ ಓಡಿ ಬಂದ ವಿಘ್ನ ಸಂತೋಷಿಯೊಬ್ಬ  ನನ್ನ ಬುಜಕ್ಕೆ ಡಿಕ್ಕಿ ಹೊಡೆದು ಓಡಿ ಹೋಗಿದ್ದ. ಸಪೂರದ ಗದ್ದೆ ಹಾಳೆಯ ಮೇಲೆ ನನ್ನನ್ನು ನಾನು ನಿಯಂತ್ರಿಸಿಕೊಳ್ಳಲಾಗದೇ ಎತ್ತರದ ಗದ್ದೆಯಿಂದ ಕೆಳಗಡೆ ಮುಖ ಅಡಿಯಾಗಿ ಜಾರಿ ಬಿದ್ದಿದ್ದೆ. ಮುಖ ಮೂಗು ಕಣ್ಣಿಗೆಲ್ಲ ಮಣ್ಣು ಮೆತ್ತಿಕೊಂಡಿದ್ದರೆ ಅದೆಲ್ಲಿಯೋ ಕಲ್ಲಿಗೆ ತಾಗಿ ಕಾಲಿನ ಮಂಡಿ ಒಡೆದು ರಕ್ತ ಸುರಿಯಲಾರಂಭಿಸಿತ್ತು. ಜೊತೆಗಿದ್ದ ಅತ್ತೆಯ ಮಗ ಗೋಪು ಕಿರುಚಾಡಲಾರಂಭಿಸಿದ್ದ. ರಕ್ತ ಹರಿಯುವುದು ನಿಲ್ಲದೇ ಮನೆಗೆ ಹೋಗುವಂತಿಲ್ಲ. ಆದರೆಆ ಗಾಯವೋ ನನ್ನ ಪುಟ್ಟ ದೇಹದಲ್ಲಿದ್ದ ಎಲ್ಲಾ ರಕ್ತವನ್ನೂ ಬಸಿದು ಬಿಡುವಂತೆ ಉಕ್ಕುಕ್ಕಿ ಸುರಿಸುತ್ತಿತ್ತು.

ಅಂತೂ ಸ್ನೇಹಿತರೆಲ್ಲ ಸೇರಿ ನಾಚಿಕೆಮುಳ್ಳಿನ ಗಿಡದ ಎಲೆಯ ರಸವನ್ನು ತಂದು ಕಾಲಿನ ಗಾಯಕ್ಕೆ ಒತ್ತಿ ಹಿಡಿದಿದ್ದರು. ಅಷ್ಟರಲ್ಲೆ ಒಂದಿಷ್ಟು ದೂರದಲ್ಲಿ ಆಡುತ್ತಿದ್ದ ಅಣ್ಣ ಹಾಗೂ ಆತನ ಪಟಾಲಂಗೆ ಸುದ್ದಿ ತಲುಪಿತ್ತು. ಆಡುತ್ತಿದ್ದ ಅಣ್ಣ ಹಾಗೂ ಅವನ ಸ್ನೇಹಿತರಾದ ಪ್ರಮೋದ, ರತ್ನಾಕರ, ಪ್ರಶಾಂತ, ಮಾರುತಿ  ಎಲ್ಲರೂ ಓಡಿ ಬಂದಿದ್ದರು. ಅಂತೂ ನನ್ನನ್ನು ಎತ್ತಿಕೊಂಡು ಮನೆ ತಲುಪಿಸಿದರು.  ಗಾಯ ಹಾಗೂ ರಕ್ತದಿಂದ ಒದ್ದೆ ಆಗಿ ಕೆಂಬಣ್ಣಕ್ಕೆ ತಿರುಗಿದ  ನನ್ನ ಸ್ಕರ್ಟ್ ನೋಡಿ ಅಮ್ಮ ಎಚ್ಚರ ತಪ್ಪುವುದೊಂದೇ ಬಾಕಿ. ನಾನು ನನಗೆ ಬೇಕಂತಲೇ ಡಿಕ್ಕಿ ಹೊಡೆದವನ ವಿರುದ್ಧ ಚಾಡಿ ಹೇಳಲಾರಂಭಿಸಿದ್ದೆ. “ನಾಳೆ ಶಾಲೆಗೆ ಹೋದ ಮೇಲೆ ಅವನಿಗೆ ನೀನು ಸರಿಯಾಗಿ ಹೊಡೆಯಬೇಕು…” ಎಂದು ಅಮ್ಮನಿಗೇ ತಾಕೀತು ಮಾಡುತ್ತ.

ಆದರೆ ಅಮ್ಮ ಅದಾವುದನ್ನೂ ಕಿವಿಗೇ ಹಾಕಿಕೊಳ್ಳದೇ “ನಿನಗೆ ಎಷ್ಟು ಸಲ ಆ ಗಂಡು ಮಕ್ಕಳ ಸಂಗಡ ಆಟಕ್ಕೆ ಹೋಗೋದು ಬೇಡ ಅಂದಿದ್ದೆ ನಾನು… ನನ್ನ ಮಾತು ಎಲ್ಲಿ ಕಿವಿ ಮೇಲೆ ಹಾಕಿಕೊಳ್ತಿ? ಬರೀ ಟೈಯರ್ ಆಟ, ಕ್ರಿಕೆಟ್ಟು, ಸೈಕಲ್ ರೇಸು ಇದೇ ಆಗೋಯ್ತು ಗಂಡು ಹುಡುಗರ ಹಾಗೆ” ಎಂದು ಇತ್ತ ಗಾಯ ಮಾಡಿಕೊಂಡು ಬಂದ ಮಗಳಿಗೆ ಬೈಯ್ಯಲೂ ಆಗದ, ಬೈಯ್ಯದಿರಲೂ ಆಗದ ವಿಚಿತ್ರ ಸಂಕಟದಲ್ಲಿ ಮುಖ ಸಣ್ಣಗೆ ಮಾಡಿಕೊಂಡು ಹೇಳುತ್ತಿದ್ದರೆ ನಾನು “ಗಂಡು ಹುಡುಗರಲ್ಲದೇ ಹೆಣ್ಣು ಹುಡುಗರೂ ಇರ್ತಾರಾ ಅಮ್ಮಾ…?” ಎಂದು ನನ್ನ ಮಾಮೂಲಿ ಮಂಗಚೇಷ್ಟೆ ಪ್ರಾರಂಭಿಸಿದ್ದೆ.

“ನೀನಿದ್ದಿಯಲ್ಲ, ಹೆಣ್ಣು ಹುಡುಗ. ನೀನೊಬ್ಬಳಿದ್ದರೆ ಸಾಕು, ಇಡೀ ಊರು ಹಾಳು ಮಾಡ್ತಿ.” ಎಂದೂ ರೇಗದ, ಕೊನೆಗೆ ಗಟ್ಟಿಯಾಗಿ ಮಾತೂ ಆಡದ ಅಣ್ಣ ಜೋರಾಗಿ ರೇಗಿ ಬಿಟ್ಟಿದ್ದ. ಮೊದಲ ಸಲ ಅಣ್ಣನಿಂದ ಬೈಯ್ಯಿಸಿಕೊಂಡ ಸಂಕಟದಲ್ಲಿ ನಾಲ್ಕು ದಿನ ಗದ್ದೆ ಬಯಲ ಕಡೆ ತಲೆ ಹಾಕಿರಲಿಲ್ಲ. ಆದರೆ ಎಷ್ಟೆಂದು ಹೊರಗೆ ಗದ್ದೆಯಲ್ಲಿ ಆಡುವ ಸುಖವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ? ಐದನೆ ದಿನ ಯಾರು ಏನು ಹೇಳಿದರೂ ಕೇಳದೆ ಮತ್ತೆ ಗದ್ದೆಗೆ ಓಡಿದ್ದು ನನಗೆ ಮತ್ತೆ ನೆನಪಾಗಿದ್ದು ಎಲ್ ಸಿ ಸುಮಿತ್ರಾರವರ ಗದ್ದೆಯಂಚಿನ ದಾರಿ ಎನ್ನುವ ಪುಸ್ತಕ ಕೈ ಸೇರಿದಾಗ.

ನಾನು ಚಹಾ ಕವನಗಳನ್ನು ಬರೆಯುತ್ತಿದ್ದ ಸಮಯ ಅದು. ಪ್ರತಿ ದಿನ ಹೆಣ್ಣಿನ ತುಮುಲ ಮತ್ತು ಚಹಾವನ್ನು ಹೋಲಿಸಿ ಕವನ ಬರೆದು ಒಂದಿಷ್ಟು ಆತ್ಮೀಯರಿಗೆ ಕಳುಹಿಸುತ್ತಿದ್ದೆ. ಅದರಲ್ಲಿ ಎಲ್ ಸಿ ಸುಮಿತ್ರಾ ಮೇಡಂ ಕೂಡ ಒಬ್ಬರು. ಪ್ರತಿ ದಿನ ಬೆಳ್ಳಂಬೆಳಿಗ್ಗೆಯೇ ಚಹಾ ಕವನ ಓದುವುದು ಬಹುಶಃ ಅವರಿಗೆ ವಿಪರೀತ ಹಿಂಸೆಯಾಗಿರಬೇಕು. ಅದರ ಅರಿವಾದ ನಂತರ ನಾನು ಅವರಿಗೆ ಚಹಾಕವಿತೆಗಳು ಕಳಿಸುವುದನ್ನು ಬಿಟ್ಟು ಅವರ ತಲೆನೋವನ್ನೊಂದಿಷ್ಟು ಕಡಿಮೆ ಮಾಡಿದೆ ಎಂದೇ ಹೇಳಬೇಕು.

ಇಲ್ಲಿನ ಹೆಚ್ಚಿನ ಲೇಖನಗಳು ಬಾಲ್ಯಕ್ಕೆ ಸಂಬಂಧ ಪಟ್ಟ ಲೇಖನಗಳು, ಉಳಿದ ಹೆಚ್ಚಿನ ಲೇಖನಗಳಲ್ಲಿ ಸರಕಾರಿ ಕನ್ನಢ ಶಾಲೆಯ ಅನುಭವಗಳು, ಸರಕಾರಿ ಶಾಲೆಯ ಉಳಿವಿಗೆ ಮಾಡಬೇಕಾದ ಕೆಲಸಗಳು, ಮತ್ತೊಂದೆರಡು ಲೇಖನಗಳು ಅಜ್ಜಿ ಮನೆಯ ಅನುಭವಗಳು, ಅಜ್ಜಿಯೊಂದಿಗಿನ ಒಡನಾಟದ ಕುರಿತು ಇದ್ದಿರುವುದರಿಂದ  ಇಡೀ ಪುಸ್ತಕ ನಮ್ಮ ಸುತ್ತಲೇ ನಡೆಯುತ್ತಿರುವ ಅಥವಾ ನಾವು ಬಾಲ್ಯದಲ್ಲಿ ಅನುಭವಿಸಿದ  ಅನುಭವಗಳ ಕುರಿತು ಆತ್ಮೀಯವಾಗಿ ಹೇಳುತ್ತ ಹೋಗುತ್ತದೆ.

ನಿಮ್ಮ ವಿಳಾಸ ಕೊಡಿ ಎಂದು ಎಲ್ ಸಿ ಸುಮಿತ್ರಾರವರು ವ್ಯಾಟ್ಸ್ ಆಪ್ ಮಾಡಿದಾಗ ಸಹಜವಾಗಿಯೇ ಯಾಕೆ ಎಂದು ಕೇಳಿದ್ದೆ. ಅದಕ್ಕೂ ಮೊದಲು ಅಪ್ಪ- ಅಮ್ಮ ಓದುತ್ತ ಕುಳಿತ ಫೋಟೊ ಒಂದನ್ನು ಅಪ್ ಲೋಡ್ ಮಾಡಿದ್ದೆ. ನನಗೆ ಯಾವುದೇ ಪುಸ್ತಕ ಕೈಗೆ ಸಿಕ್ಕರೂ ಅದರ ಮೊದಲ ಓದುಗರು ಅಪ್ಪಾ ಮತ್ತು ಅಮ್ಮಾನೇ. ಎಂಬ ಒಕ್ಕಣಿಕೆಯೊಂದಿಗೆ  ಹೀಗಾಗಿ “ನನ್ನ ಪುಸ್ತಕ ಕಳಿಸುವೆ. ನಿಮ್ಮ ಅಪ್ಪ ಅಮ್ಮನಿಗೂ ಇಷ್ಟವಾಗಬಹುದು.” ಎಂದಿದ್ದರು ಅವರು. ಹೇಳಿದಂತೆ ಎರಡು ಮೂರೇ ದಿನಕ್ಕೆ ಪುಸ್ತಕವೂ ಕೈಸೇರಿತು. ಅದಕ್ಕೆ ಸರಿಯಾಗಿ ನನ್ನ ಚಿಕ್ಕ ಮಗ ಜ್ವರ ಬಂದು, ಮೇಲೇಳಲಾಗದೇ, ಎಚ್ಚರ ತಪ್ಪುವ ಹಂತಕ್ಕೆ ತಲುಪಿದ್ದ. ಮೊಮ್ಮಗನ ಅನಾರೋಗ್ಯದ ಬಗ್ಗೆ ಕೇಳಿದವರೇ ಇದ್ದ ಕೆಲಸ ಇದ್ದಲ್ಲಿಯೇ ಬಿಟ್ಟು ನಾನಿದ್ದಲ್ಲಿಗೆ ಬಂದಿದ್ದರು.

ಪೋಸ್ಟ್ ಮ್ಯಾನ್ ಪುಸ್ತಕ  ತಂದು ಕೊಟ್ಟಾಗ ಮಗನನ್ನು ಕಾಲ ಮೇಲೆ ಮಲಗಿಸಿಕೊಂಡಿದ್ದ ಅಮ್ಮ  “ಯಾವ ಪುಸ್ತಕ? ಕೊಡಿಲ್ಲಿ ನೋಡ್ತೀನಿ” ಎಂದು ಓದಲು ಪ್ರಾರಂಭಿಸಿದ್ದರು. ಅವರಿಗೆ ಪುಸ್ತಕ ಕೊಟ್ಟು ಶಾಲೆಗೆ ಹೋದ ನಾನು ಸಂಜೆ ತಿರುಗಿ ಬರುವಷ್ಟರಲ್ಲಿ ಇಡೀ ಪುಸ್ತಕವನ್ನು ಓದಿ ಮುಗಿಸಿದ್ದರು.. ಒಂದು ಪುಸ್ತಕವನ್ನು ಓದಲು ಕುಳಿತರೆ ಕನಿಷ್ಟ ಎರಡು ದಿನವಾದರೂ ತೆಗೆದುಕೊಳ್ಳುವ ಅಮ್ಮ ಈ ಪುಸ್ತಕವನ್ನು ಒಂದೇ ದಿನದಲ್ಲಿ ಓದಿ ಮುಗಿಸಿದ್ದು ನಿಜಕ್ಕೂ ಅಚ್ಚರಿ ಎನ್ನಿಸಿಬಿಟ್ಟಿತ್ತು. “ಚಂದ ಇದೆ ಈ ಪುಸ್ತಕ. ನನಗಂತೂ ನಮ್ಮೂರು ಶಿರಗುಂಜಿ, ಗಂಗಾವಳಿ ನದಿ ಎಲ್ಲ ನೆನಪಾಯ್ತು” ಎಂದು ಹೊಗಳಿಸಿಕೊಂಡ ಗದ್ದೆಯಂಚಿನ ದಾರಿ ಈ ವಾರ ನಾನು ನಿಮಗೆ ಓದಲೇ ಬೇಕೆಂದು ರೆಕಮಂಡ್ ಮಾಡುವ ಪುಸ್ತಕ.

ನಾನು ಕಲಿತಿದ್ದು ಶಿರಸಿ ತಾಲೂಕಿನ ಜಾನ್ಮನೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಆದರೆ ನಮ್ಮ ಬಾಡಿಗೆ ಮನೆ ಇದ್ದದ್ದು ಅಮ್ಮಿನಳ್ಳಿ ಎಂಬ ಶಾಲೆಯಿಂದ ಮೈಲು ದೂರದಲ್ಲಿರುವ ಹಳ್ಳಿಯಲ್ಲಿ. ಜಾನ್ಮನೆ ಎಂಬುದು ತೀರಾ ಚಿಕ್ಕ, ನಾಲ್ಕಾರು ಮನೆಗಳಿರುವ ಊರಿನಲ್ಲಿ. ಅಮ್ಮಿನಳ್ಳಿ ಕೂಡ ಚಿಕ್ಕ ಊರಾದರೂ ಅದು ಸುತ್ತ ಮುತ್ತ ಇರುವ ಹತ್ತಾರು  ಚಿಕ್ಕ ಪುಟ್ಟ ಹಳ್ಳಿಗಳಿಗೆ ಕೇಂದ್ರದಂತಿತ್ತು. ಅಮ್ಮಿನಳ್ಳಿಯ ಸುತ್ತ ಮುತ್ತ ಎಲ್ಲಾ ದಿಕ್ಕುಗಳಲ್ಲಿಯೂ ಕಾಲ್ನಡಿಗೆಯಿಂದ ಹೋಗಬೇಕಾದ ಹಳ್ಳಿಗಳು ಇದ್ದು, ಅವರು ಶಿರಸಿ ಪೇಟೆಗೆ ಹೋಗಬೇಕೆಂದರೆ ಅಮ್ಮಿನಳ್ಳಿಗೇ ಬಂದು ಬಸ್ ಹತ್ತ ಬೇಕಿತ್ತು. ಅದರಲ್ಲೂ ನಾವು ಬಾಡಿಗೆಗೆ ಇದ್ದ ಮನೆಯ ಬಗ್ಗೋಣ ಭಟ್ಟರ ಅಂಗಡಿ ಎಂದರೆ ಸುತ್ತಲಿನ ಹಳ್ಳಿಗಳಿಗೆ ಈಗಿನ ಸುಪರ್ ಮಾರ್ಕೆಟ್ ಇದ್ದ ಹಾಗೆ. ಹೀಗಾಗಿ ಭಟ್ಟರ ಅಂಗಡಿಲಿ ಸಿಗ್ತದೆ ಎನ್ನುತ್ತ್ ಬರುವವರು “ಇಲ್ಲಿ ಸಿಕ್ಕಲಿಲ್ಲ ಅಂದ್ರೆ ಸಿರ್ಸಿಲೂ ಸಿಕ್ಕೂದು ಡೌಟೇ….” ಎನ್ನುವಷ್ಟು.

ಮನೆಯಿಂದ ಸರಿ ಸುಮಾರು ಒಂದು ಮೈಲಿ ದೂರದಲ್ಲಿ ನಮ್ಮ ಕನ್ನಡ ಶಾಲೆ. (ಅಂದರೆ ಈಗಿನ ಪ್ರಾಥಮಿಕ ಶಾಲೆ.) ಅಪ್ಪ ಅದೇ ಶಾಲೆಯ ಹೆಡ್ ಮಾಸ್ತರ್ರು. ಅಮ್ಮ ಅದೇ ಶಾಲೆಯಲ್ಲಿ ಅಕ್ಕೋರು. ಮೇಲೆ ಹೇಳಿದ ನನ್ನ ಸೋದರತ್ತೆಯ ಗಂಡ, ಅಂದರೆ ಗೋಪುವಿನ ಅಪ್ಪ  ಕೂಡ ಅದೇ ಶಾಲೆಯಲ್ಲಿ  ಮಾಸ್ತರ್ರಾಗಿದ್ದರು. ನಮ್ಮ ಊರಿನವರೇ ಆಗಿದ್ದೇ ಸುಶಿಲಕ್ಕೋರು ಕೂಡ ಅಲ್ಲಿಯೇ ಇದ್ದರು. ಹೀಗಾಗಿ ನನಗೆ ಶಾಲೆ ಎಂಬುದು ಬಲು ಕಷ್ಟ ಎಂದು ಎಂದಿಗೂ ಅನ್ನಿಸಲಿಲ್ಲ.

ಅಪ್ಪ ಆ ಶಾಲೆಗೇ ಹೆಡ್ ಮಾಸ್ಟರ್ ಆಗುವ ಮೊದಲು ಜಯಂತಿ ಭದ್ರಯ್ಯ ಎನ್ನುವ ಹೆಡ್ಡಕ್ಕೋರು ಒಬ್ಬರು ಇದ್ದರು. ನನ್ನ  ಪ್ರೀತಿಯ ಅಕ್ಕೋರಾಗಿದ್ದ ಅವರಿಗೂ ನಾನು ಅಂದರೆ ಪಂಚಪ್ರಾಣ. ಯಾಕೆಂದರೆ ಇನ್ನೂ ಐದು ವರ್ಷವೂ ಆಗದ ನಾನು ನೀಟಾಗಿ ಯುನಿಫಾರ್ಮ  ಹಾಕಿಕೊಂಡು ಅಪ್ಪನ ಸೈಕಲ್ ನಲ್ಲಿ ಹಿಂದಿನ ಕ್ಯಾರಿಯರ್ ಮೇಲೆ ಚಕ್ಕಂಬಕ್ಕಳ ಹಾಕಿ ಕುಳಿತುಕೊಂಡು ಹೋಗುತ್ತಿದ್ದೆ. ಶಾಲೆಯಲ್ಲಿ ಯಾರಾದರೂ ಯುನಿಫಾರ್ಮ ಹಾಕದೇ ಬಂದರೆ ಪ್ರಾರ್ಥನೆಯ ವೇಳೆಗೆ ಹೆಡ್ಡಕ್ಕೋರು ನನ್ನನ್ನು ಮುಂದೆ ಕರೆಯಿಸಿ, ನಾಗವೇಣಿ ಅಕ್ಕೋರ ಮಗಳನ್ನುನೋಡಿ ಕಲಿಯಿರಿ. ಇವಳು ಇನ್ನೂ  ಒಂದನೇ ಕ್ಲಾಸೂ ಅಲ್ಲ. ಆದರು ಎಷ್ಟು ಚಂದವಾಗಿ ಯುನಿಫಾರ್ಮ ಹಾಕಿಕೊಂಡು ಬರ್ತಾಳೆ. ಇಸ್ತ್ರಿ ಎಲ್ಲ ಹೊಡೆದು. ನೀವೂ ಇದ್ದಿರಿ. ಯುನಿಫಾರ್ಮೂ ಹಾಕೋದಿಲ್ಲ. ಹಾಕಿದರೂ ಮುದಿಡಿ ಆದ ಯುನಿಫಾರ್ಮ. ಒಂದು ನೀಟಾಗಿ ಇಸ್ತ್ರಿ ಹಾಕಿಕೊಂಡು ಬರಬೇಕು ಅಂತಿಲ್ವಾ? ಎನ್ನುತ್ತ ತಮ್ಮ ಮಂಗಳೂರು ಕನ್ನಡದ ಗ್ರಾಂಥಿಕ ಭಾಷೆಯಲ್ಲಿ ಹೇಳುತ್ತಿದ್ದರೆ ಅವರು ಮಾತನಾಡುವುದನ್ನು ಕೇಳುತ್ತಲೇ ಇರಬೇಕು ಎನ್ನಿಸುತ್ತಿತ್ತು.

ಆದರೆ ನಾನು ಸೈಕಲ್ ಮೇಲೆ ಕುಳಿತಾಗ ಎರಡೂ ಕೈ ಬಿಟ್ಟುಕೊಂಡು ಗಾಳಿಯಲ್ಲಿ ಹಾರಿದಂತೆ ಮಾಡುತ್ತ ಆಟ ಆಡುವುದು ಮಾತ್ರ ಅವರಿಗೆ ಸ್ವಲ್ಪವೂ ಇಷ್ಟ ಆಗುತ್ತಿರಲಿಲ್ಲ. “ಮೇಸ್ಟ್ರೆ ಇವಳಿಗೆ ಗಟ್ಟಿಯಾಗಿ ಹಿಡ್ಕೊಂಡು ಕೂತ್ಕೊಳ್ಳೋಕೆ ಹೇಳಿ. ಬಿದ್ದರೆ ಡಾಂಬರ್ ರಸ್ತೆಗೆ ತಲೆಯೇ ಹೊಡಿತದೆ” ಎನ್ನುತ್ತ ತಮ್ಮ ದೊಡ್ಡ ಕಣ್ಣನ್ನು ಮತ್ತಿಷ್ಟು ಅಗಲಿಸಿ ಹೇಳುತ್ತಿದ್ದರು. ನಂತರದ ದಿನಗಳಲ್ಲಿ ಕೆಲವೊಮ್ಮೆ ಅವರು ಅಮ್ಮಿನಳ್ಳಿಯಲ್ಲಿ ಬಸ್ ಇಳಿದು ನಡೆದುಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ಎಲ್ಲಾದರೂ ಸಿಕ್ಕರೆ ನಾನೂ ಅಪ್ಪನ ಸೈಕಲ್ ಇಳಿದು ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದೆ. ಮಳೆಗಾಲದಲ್ಲಿ  ಓಡಾಡುವ ವಾಹನಗಳಿಂದ ಎಲ್ಲಿಯಾದರೂ ಒಂದು ಹನಿ ಪೆಟ್ರೋಲ್ ರಸ್ತೆಯ ಮೇಲೆ ಇಳಿದು ಅದು ಬಣ್ಣಬಣ್ಣದ ಕಾಮನಬಿಲ್ಲಿನಂತಾಗುವುದನ್ನು ಮೊದಲು  ತೋರಿಸಿದವರೇ ಅವರು.

ಅದನ್ನು ಕಂಡ ತಕ್ಷಣ ತಮ್ಮ ಚಪ್ಪಲ್ ತೆಗೆದು ತಮ್ಮ ಪಾದವನ್ನೂ ಹಿಂಗಾಲನ್ನು ಅದರ ಮೇಲೆ ತಿಕ್ಕುತ್ತ ಮಳೆಗಾಲದಲ್ಲಾಗುವ ನೀರಿನ ನಂಜು ಗಾಯಕ್ಕೆ, ಹಿಮ್ಮಡಿಯ ಬಿರುಕಿಗೆ  ಅದು ಒಳ್ಳೆಯ ಔಷಧ  ಎಂದು ಹೇಳುತ್ತಿದ್ದರು. ಎಲ್ ಸಿ ಸುಮಿತ್ರಾರವರು   ತಮ್ಮ ಪ್ರಾಥಮಿಕ ಶಾಲೆಗೆ ಹೋಗುವ ಅನುಭವದ ಬಗ್ಗೆ ಬರೆದ್ದನ್ನು ಓದಿದಾಗ ಖಂಡಿತವಾಗಿಯೂ ನಿಮಗೂ ಇಂತಹುದ್ದೊಂದು ಆಗದೇ ಇರದು.

ನಾನು ಎರಡನೇ ಕ್ಲಾಸ್ ಗೆ ಹೋಗುವಷ್ಟರಲ್ಲಿ ನಮ್ಮ ಹೆಡ್ಡಕ್ಕೋರು ಅವರ ಊರಿನ ಕಡೆ ಎಂದು ಬ್ರಹ್ಮಾವರಕ್ಕೆ ವರ್ಗ ಮಾಡಿಸಿಕೊಂಡಿದ್ದರು. ಅದರ ನಂತರ ಅಪ್ಪನೇ ಶಾಲೆಯ ಇನ್ ಚಾರ್ಜ್ ಹೆಡ್ ಮಾಸ್ಟರ್. ನಂತರ ಇನ್ನೊಬ್ಬ  ಮುಖ್ಯೋಪಾಧ್ಯಾಯರು ಬಂದರು. ನನಗೂ ಅವರಿಗೂ ಆಷ್ಟೊಂದು ಆಗಿ ಬರುತ್ತಿರಲಿಲ್ಲ. ಅವರು ನಮ್ಮ ಶಾಲೆಯಲ್ಲಿ ಇದ್ದ ಎರಡು ವರ್ಷವೂ ಅವರೇ ನನಗೆ ಕ್ಲಾಸ್ ಟೀಚರ್. ನನಗೋ ಅವರು ನನ್ನನ್ನು ಹೊಡೆಯುವ ಸಲುವಾಗಿಯೇ ನನ್ನ ಕ್ಲಾಸ್ ಟೀಚರ್ ಆಗಿದ್ದಾರೆ ಎನ್ನಿಸುತ್ತಿತ್ತು, ಆದರೆ ಅಷ್ಟರಲ್ಲಿಯೇ ನಾನು ಒಂದು ಎಡವಟ್ಟು ಮಾಡಿಕೊಂಡು ಬಿಟ್ಟಿದ್ದೆ.

ನಾನು ಮನೆಯಿಂದ ಶಾಲೆಗೆ ಹೋಗುವ ಹಾದಿಯಲ್ಲಿ ಸಿಗುವುದು ಬೆಟ್ಟ ಬ್ಯಾಣಗಳೇ. ಅಲ್ಲಿ ಬಿಕ್ಕೆ ಹಣ್ಣು ಎನ್ನುವ ವಿಶಿಷ್ಟ ರುಚಿಯ ಹಣ್ಣು ಸಿಗುತ್ತಿತ್ತು. ತೆಂಗಿನ ಗರಟೆಯಂತಹ ಗಟ್ಟಿಯಾದ ಚಿಪ್ಪು ಮತ್ತು ಅದನ್ನು ಕುಟುಂ ಎಂದು ಒಡೆದರೆ ಒಳಗೆ ಹೋಳಿಗೆ ಮಾಡಲು ಕಡಲೆಬೇಳೆ ಮತ್ತು ಬೆಲ್ಲದ ಮಿಶ್ರಣ ಮಾಡಿದಂತಹ ಸಿಹಿಯಾದ ಹೂರಣ. ನಾಲಿಗೆಯ ತುದಿಯಷ್ಟೇ ಒಳಹೋಗುವಂತಿರುವ ಆ ಚಿಕ್ಕ ಹಣ್ಣಿ ಒಳಗಡೆ ನಾಲಿಗೆ ಒಳಗೆ ಆಡಿಸಿ ಸಿಹಿಯನ್ನೆಲ್ಲ ನೆಕ್ಕುತ್ತಿದ್ದರೆ ಸ್ವರ್ಗವೇ ಕಾಲು ಬುಡದಲ್ಲಿ ಬಂದು ಬಿದ್ದಂತೆ.

ಅಪ್ಪ ಅಮ್ಮ ಅದೇ ಶಾಲೆಗೆ ಹೋಗುತ್ತಿದ್ದರೂ ನಾನು ಈಗ ಅವರೊಟ್ಟಿಗೆ ಹೋಗೋದನ್ನು ಬಿಟ್ಟು ಬಿಟ್ಟಿದ್ದೆ.  ಅಪ್ಪ ಆಗಿನ ಕಾಲದ ಲಕ್ಸುರಿ ವಾಹನವಾದ ಸೈಕಲ್ ಮೇಲೆ ಹೋಗುತ್ತಿದ್ದರೆ ಅಮ್ಮ ಮತ್ತು ಸುಶೀಲಕ್ಕೋರು ನಡೆದು ಹೋಗುತ್ತಿದ್ದರು. ನಾನು ಇವರೆಲ್ಲರಿಗಿಂತ ತಾಸು ಮೊದಲೇ ಮನೆ ಬಿಡುತ್ತಿದ್ದೆ. ಶಾಲೆಯ ಖೋ ಖೋ ಆಟದ ಪ್ರಾಕ್ಟೀಸ್ ನ ನೆಪ ಹೇಳಿ ನಾನು ಮೊದಲೇ ಹೋಗುತ್ತಿದ್ದರೂ, ಆ ಆಟವನ್ನು ಆಡಿಸಲು ಅಪ್ಪನೇ ಬರಬೇಕಿತ್ತು ಎನ್ನುವುದು ಗೊತ್ತಿದ್ದರೂ, ಅಮ್ಮನ ಕುಸುಕುಸು ವಿರೋಧದ ನಡುವೆಯೂ ನನಗೆ ನಾನು ನನ್ನ ಸ್ನೇಹಿತರ ಜೊತೆ ಹೋಗುವುದನ್ನೇ ಅಪ್ಪ ಹೆಚ್ಚು ಇಷ್ಟ ಪಡುತ್ತಿದ್ದರು.

“ಅವಳನ್ನು ಅವಳ ಪಾಡಿಗೆ ಬಿಟ್ಟು ಬಿಡು. ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತಾಳೆ” ಎಂದು ಅಪ್ಪ ಹೇಳಿದರೂ, ಮೈಲು ದೂರದ ಶಾಲೆಗೆ ಹೇಗೆ  ದೊಡ್ಡವರು ಯಾರೂ ಜೊತೆಗಿಲ್ಲದೇ ಗೆಳತಿಯರ ಜೊತೆ ಹೋಗ್ತಾಳೆ ಎಂಬುದು ಅಮ್ಮನ ಆತಂಕ. ಅದರಲ್ಲೂ ಒಮ್ಮೆ ಯಾವುದೋ ಟ್ರಕ್ ನವನು ಗಾಡಿ ನಿಲ್ಲಿಸಿ, “ಬರ್ತೀರಾ?” ಎಂದು ಕೇಳಿದ್ದ , ಅದಕ್ಕೆ ತನ್ನ ಮಗಳು ಅಪ್ಪಟ ಅಂಕೋಲಾ ಭಾಷೆಯಲ್ಲಿ  “ಬೋ… ಮಗನೆ ಕಲ್ಲಲ್ಲಿ ಹೊಡಿತೇನೆ ನೋಡು ಎಂದು ಕತ್ತು ಎತ್ತಿ ಒನಕೆ ಓಬವ್ವಳ ತರಹ ಬೈಯ್ದಿದ್ದಳು ಎಂಬುದು ತಿಳಿದ ನಂತರವಂತೂ ಅಮ್ಮ  ಕಂಗಾಲಾಗಿದ್ದಳು. ಆದರೂ ಅಪ್ಪ ಮಾತ್ರ ನಾನು ಗೆಳತಿಯರೊಟ್ಟಿಗೇ ಹೋಗಲಿ, ಎಲ್ಲರೊಡನೆ ಬೆರೆಯಲಿ,  ಎಂದು ಬಿಡುತ್ತಿದ್ದರು.

ನಾನು ಹೋಗುವ ದಾರಿಯಲ್ಲಿ ನನಗಿಂತ ಸ್ವಲ್ಪ ದೂರದಿಂದ ಬರುವ ವೀಣಾ, ದಾರಿಯ ಮಧ್ಯದಲ್ಲಿ ಗೆಳತಿ ರೇಖಾ ಹಾಗೂ ಅವಳ ಚಿಕ್ಕಪ್ಪನ ಮಗ ಜಗದೀಶ ಜೊತೆಯಾಗುತ್ತಿದ್ದರು. ಹತ್ತು ಹೆಜ್ಜೆ ಮುಂದೆ ಹೋಗುವಷ್ಟರಲ್ಲಿ ತನ್ನ ಮನೆಯಿಂದ ಶಾಲೆಗೆ ಹೋಗುವ ದಾರಿಯ ಬದಲು ನಮ್ಮ ಮನೆ ಕಡೆಗೆ ಬರುವ ಮಧುರಾ ಸಿಗುತ್ತಿದ್ದಳು. ಎಲ್ಲರೂ ಸೇರಿ ರಸ್ತೆ ಬದಿಯ ಬೆಟ್ಟ ಬ್ಯಾಣ ಹೋಕ್ಕು ಬಿಕ್ಕೆ ಹಣ್ಣು ಆರಿಸುತ್ತಿದ್ದೆವು. ಜೂನ್ ತಿಂಗಳ ಹೀಚು ಕಾಯಿ ಒಂದಿಷ್ಟು ಒಗರಾಗಿದ್ದರೆ, ಜುಲೈ ತಿಂಗಳ ಬೆಳೆದ ಕಾಯಿ ಸಿಹಿ ಒಗರಿಗೆ ತಿರುಗುತ್ತಿತ್ತು. ಅಗಷ್ಟ ತಿಂಗಳಲ್ಲಿ ಬಿಕ್ಕೆ ಹಣ್ಣು ಸಿಹಿಸಿಹಿ. ಅಂತೂ ಬೆಟ್ಟ ಬ್ಯಾನ ತಿರುಗಿ ಶಾಲೆಗೆ ಹೋಗುವಷ್ಟರಲ್ಲಿ ಪ್ರಾರ್ಥನೆ ಮುಗಿದಿರುತ್ತಿತ್ತು. ಅದನ್ನೆಲ್ಲ ಗಮನಿಸುತ್ತಿದ್ದ ನಮ್ಮ ಹೊಸ ಹೆಡ್ಮಾಸ್ಟರ್ರು ನಮ್ಮನ್ನು ಪದೇ ಪದೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರಲ್ಲದೇ ಮಂಗ ತಾನು ಹಾಳಾಗೋದಲ್ಲದೇ ಕಾಡನ್ನೂ ಹಾಳು ಮಾಡುತ್ತದಂತೆ. ಈ ಶ್ರೀದೇವಿನೂ ಹಾಗೇನೇ ಎನ್ನುತ್ತಿದ್ದರು.

ನಾನು ಹಾಗೇನಾದರೂ ಹೇಳಿದರೆ ಅಪ್ಪನೇ ನನಗೆ ಏನೂ ಹೇಳೋದಿಲ್ಲ, ನೀವ್ಯಾರು ಹೇಳೋದಕ್ಕೆ ಎಂಬಂತಹ ಧಿಮಾಕಿನ ಮಾತನಾಡುತ್ತಿದ್ದೆ. ಈಗ ನೆನಪಿಸಿಕೊಂಡರೆ ನಾನು ಮಾಡಿದ್ದು ಅದೆಷ್ಟು ಅಕ್ಷಮ್ಯ ಅಪರಾಧ ಎನ್ನಿಸುತ್ತಿದೆ. ಆದರೆ ಶಾಲೆಗೆ ಬಂದ ಮೇಲಾಧಿಕಾರಿಗಳು, ಇನ್ಸಫೆಕ್ಟರ್ ಎಲ್ಲರೂ ಕೆರೆಮನೆ ಸರ್ ಗೆ ಎಲ್ಲವೂ ಗೊತ್ತು, ಅವರು ಈ ಶಾಲೆಯಲ್ಲಿ ಹದಿನೈದು ವರ್ಷಗಳಿಂದ ಇದ್ದಾರೆ ಎನ್ನುತ್ತ ಎಲ್ಲದಕ್ಕೂ ಅಪ್ಪನ ಸಲಹೆಯನ್ನೇ ಕೇಳುತ್ತಿದ್ದುದೂ, ಶಿರಸಿಯ ಎ ಇ ಒ ಕೂಡ ನಮ್ಮ ಶಾಲೆಯ ವಿಷಯಕ್ಕೆ ಹೆಡ್ ಮಾಷ್ಟರ್ ಬದಲಿಗೆ ಅಪ್ಪನನ್ನೇ ಹೆಚ್ಚಾಗಿ ಕರೆಸುತ್ತಿದ್ದುದೂ  ನಮ್ಮ ಹೊಸ ಹೆಡ್ಮಾಷ್ಟರ್ ರಿಗೆ ಬೇಸರವಾಗುತ್ತಿತ್ತು, ಹೀಗಾಗಿ ಅವರು ಆ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದರು ಎಂಬುದು ನಂತರ ನನಗೆ ಗೊತ್ತಾದ ವಿಷಯ.

ಅಂತಹ ಸಮಯದಲ್ಲೇ ಅಗಷ್ಟ ಹದಿನೈದರಂದು ಶಾಲೆಯಲ್ಲಿ ಧ್ವಜ ವಂದನೆ ಮುಗಿಸಿ ಗ್ರಾಮ ಪಂಚಾಯತ್ ಗೆ ನಂತರ ಅಮ್ಮಿನಳ್ಳಿಯ ತುತ್ತ ತುದಿಯಲ್ಲಿರುವ ಅರಣ್ಯ ಇಲಾಖೆಯ ಆಫೀಸ್ ಗೆ ಹೋಗಿ, ನಂತರ ಶಾಲೆಗೆ ಹಿಂದಿರುಗಿ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ನಾವು ಒಂದಿಷ್ಟು ಗೆಳತಿಯರು ವೀಣಾ, ರೇಖಾ, ಮಧುರಾ ಎಲ್ಲರೂ ಸೇರಿ ಪ್ರಭಾತ್ ಪೇರಿಯ ಮಧ್ಯದಲ್ಲಿ ತಪ್ಪಿಸಿಕೊಂಡು ರೇಖಾನ ಮನೆಯ ಬ್ಯಾಣಕ್ಕೆ ಹೊಕ್ಕಿದ್ದೆವು. ಬಿಕ್ಕೆ ಹಣ್ಣು ಕೊಯ್ಯುತ್ತ ನಾವು ಒಂದಿಷ್ಟು ಮುಂದೆ ಹೋಗಿ ಬಿಟ್ಟಿದ್ದು, ಪ್ರಭಾತ್ ಪೇರಿ ಹಿಂದುರಿಗಿ ಬಂದ ಬ್ಯಾಂಡ್ ವಾದ್ಯ ನಮಗೆ ಕೇಳಿಸಲೇ ಇಲ್ಲ.

ಆದರೆ  ಪ್ರಭಾತ್ ಪೇರಿ ಹಿಂದಿರುಗುವಾಗ ನಾವು ತಪ್ಪಿಸಿಕೊಂಡಿದ್ದು ಅಪ್ಪ ಅಮ್ಮನಿಗೆ ತಿಳಿದಿತ್ತಾದರೂ ಮಗಳ ಗುಣ ಗೊತ್ತಿದ್ದ ಅವರು ಎಲ್ಲೋ ಇರಬಹುದು ಎಂದು ಅಷ್ಟೊಂದು ತಲೆ ತೆಗೆಸಿಕೊಂಡಿರಲಿಲ್ಲ. ಆದರೆ  ಶಾಲೆಗೆ ಹೋಗಿ ತಲುಪಿದರೂ ನಾನು ಇಲ್ಲ ಎನ್ನುವುದು ಹೆಡ್ಮಾಷ್ಟರಿಗೂ ತಿಳಿದು ದೊಡ್ಡ ರಾದ್ಧಾಂತ ಆಗಿದ್ದು, ಎಂದೂ ಹೊಡೆಯದ ಅಪ್ಪ ಸರಿಯಾಗಿ ಹೊಡೆದದ್ದು ನಾನು ಆ ಹೆಡ್ಮಾಷ್ಟರ್ರೇ  ಇದಕ್ಕೆಲ್ಲ ಕಾರಣ ಎಂದು ತಿಳಿದು ಕೊಂಡು ಅವರನ್ನು ಮತ್ತಿಷ್ಟು ದ್ವೇಷಿಸತೊಡಗಿದ್ದೆ.

ಯಾಕೋ ಎಲ್ ಸಿ ಸುಮಿತ್ರಾರವರ ಲೇಖನಗಳು ನನ್ನನ್ನು ನನ್ನ ಬಾಲ್ಯದ ನೆನಪುಗಳಿಂದ ಹೊರಬರಲೇ ಬಿಡುತ್ತಿಲ್ಲ ಎಂದು ನಾನು  ಅಂದುಕೊಳ್ಳುವಷ್ಟರಲ್ಲಿ ನಾನು ಆ ಪುಸ್ತಕ ಓದುತ್ತಿರುವುದನ್ನು ಗಮನಿಸಿದ ಅಮ್ಮ  “ಈ ಪುಸ್ತಕದ ಬರೆಹದ ಶೈಲಿ ನೀನು ಬರೆದಂತೆಯೇ ಅನ್ನಿಸ್ತದೆ.” ಎಂದಿದ್ದರು.

ಮೊದಲ ಲೇಖನ ಹೊತ್ತು ಮಾರುವವರು ಅಂದು ನಮ್ಮ ಚಿಕ್ಕಂದಿನಲ್ಲಿ ಮನೆಮನೆಗೆ ಸಾಮಾನು ಮಾರಲು ಬರುವವರ ಕುರಿತಾಗಿ ಇದೆ. ಬಳೆ ಕ್ಲಿಪ್ಪು, ರಿಬ್ಬನ್ನು, ಗಜ್ಜುಗ ಎಲ್ಲವನ್ನೂ ಹೊತ್ತು ತರುತ್ತಿದ್ದವರಿಂದ ಹಿಡಿದು ಇತ್ತೀಚಿನ ದಿನಗಳಲ್ಲಿ ಚೂಡಿದಾರ ಸೆಟ್, ಸೀರೆ, ಕೊನೆಗೆ ಒನ್ ಗ್ರಾಂ ಗೋಲ್ಡ್ ನ ಆಭರಣಗಳನ್ನು ಮಾರುವವು ನೆನಪಾಗದಿದ್ದರೆ ಹೇಳಿ. ತಾವು ಬಿಸಿನೆಸ್ ಮ್ಯಾನೆಜ್ ಮೆಂಟ್ ನ ವಿದ್ಯಾರ್ಥಿಗಳು ಎನ್ನುತ್ತ ಬರುವ ಮಕ್ಕಳು, ಬೀದೀ ಬಾಗಿಲಿಗೆ ಬಂದು ಮಾರಾಟದ ನೆಪದಲ್ಲಿ ಮನೆಯನ್ನೆಲ್ಲ ವೀಕ್ಷಿಸಿ ಕೊನೆಗೆ ರಾತ್ರಿ ಕದ್ದುಕೊಂಡು ಹೋಗುವವರು ಎಲ್ಲರೂ ಹೋಲ್ ಸೇಲ್ ಆಗಿ ನೆನಪಾದರೆ, ಮಲೆನಾಡಿನ ಅಡಿಕೆ ಕೊಯ್ಲಿನ ಕಥೆಯನ್ನು  ಹೇಳುವ ಅಡಿಕೆ ಚಪ್ಪರ ಕೂಡ ಆಪ್ಯಾಯಮಾನ ಎನ್ನಿಸುತ್ತದೆ. ಟಿ ವಿ ಇಲ್ಲದೇ ಇದ್ದುದರಿಂದ ಮನುಷ್ಯ ಸಂಬಂಧಗಳು ಸಮೀಪವಾಗಿದ್ದವು ಎನ್ನುತ್ತಾರೆ.

ಮಲೆನಾಡಿನ ಅಡಕೆಯ ಹುಟಾವಳಿಯ ಕಥೆಗಳು ನಿಜಕ್ಕೂ ಆಕರ್ಷಣೀಯ. ಊರವರ ಚರ್ಚೆಗಳು, ದೊಡ್ಡವರ ಪಂಚಾಯತಿಗಳು, ಊರಿನ ಗಾಸಿಪ್ ಗಳು ಎಲ್ಲದಕ್ಕೂ ಒದಗುವ ಅಡಿಕೆ ಚಪ್ಪರ ಲೇಖನ ತನ್ನ ನಿರೂಪಣಾ ಶೈಲಿಯಿಂದಲೇ ಗಮನ ಸೆಳೆಯುತ್ತದೆ. ತಮ್ಮ ಮೈಸೂರು ವಿಶ್ವವಿದ್ಯಾಲಯವನ್ನು ನೆನಪಿಸಿಕೊಳ್ಳುವ ನೆನಪಿನ ಗಂಗೋತ್ರಿ ಮತ್ತು ಚಿರಂತನ ಕಾಳಜಿಯ ಜಿ ಎಚ್ ನಾಯಕರು ತನ್ನ ವಿಶಿಷ್ಟತನದಿಂದ ನಮ್ಮ ಗಮನ ಸೆಳೆಯುತ್ತದೆ. ಅದರಲ್ಲೂ ನನಗಷ್ಟೇ ಅಲ್ಲ ಮನೆ ಮಂದಿಗೆಲ್ಲ ಜಿ ಎಚ್ ನಾಯಕರ ಕುರಿತು ಬರೆದ ಲೇಖನ ತುಂಬಾ ಇಷ್ಟವಾಗಿದ್ದು ಅವರು ನನ್ನ ದೊಡ್ಡಪ್ಪನ ಮಗ ಮದನನ ಮಾವ ಎಂಬ ಕಾರಣಕ್ಕಷ್ಟೇ ಅಲ್ಲ. ಅವರ ತೀರಾ ಮುಗ್ಧತೆ ಮತ್ತು ಮಾನವೀಯ ಕಳಕಳಿಗಾಗಿಯೂ ಕೂಡ.

ನಾನು ಮೈಸೂರಿಗೆ ಹೋಗುವ ಪ್ರಸಂಗ ಬಂದರೆ ಮೊದಲು ಫೋನಾಯಿಸುವುದು ಅಣ್ಣ ಮದನನಿಗೆ. ಎಂತಹುದ್ದೇ ಕೆಲಸ ಇದ್ದರೂ ಬಿಟ್ಟು ಬರುವ  ಆ ಹೆಸರಿನ ದೊಡ್ಡಪ್ಪನ  ಮಗ ಒಬ್ಬ ಇದ್ದಾನೆ ಎಂಬುದು ನನಗೆ ಗೊತ್ತಾಗಿದ್ದೇ  ನಾನು ಹತ್ತನೇ ತರಗತಿಯಲ್ಲಿದ್ದಾಗ. ನನ್ನ ಅಪ್ಪ ಮತ್ತು ಅವನ ಅಪ್ಪ ಕೆರೆಮನೆಯವರೇ. ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು. ಆದರೆ ಆ ದೊಡ್ಡಪ್ಪ ಅವರ ಅಜ್ಜಿಯ ಮನೆಯಲ್ಲೇ ಇರುತ್ತಿದ್ದುದರಿಂದ ಹಾಗೂ ಮದನಣ್ನ ನಮಗಿಂತ ತೀರಾ ದೊಡ್ಡವನಾಗಿದ್ದು ಮೈಸೂರಿನಲ್ಲಿಯೇ ಉಳಿದು ಬಿಟ್ಟವನಾದ್ದರಿಂದ ನನಗೆ ಆ ಹೆಸರಿನವನೊಬ್ಬ ಇದ್ದಾನೆ ಎಂದು ಗೊತ್ತಿದ್ದರೂ ಮುಖ ಪರಿಚಯವೇ ಇರಲಿಲ್ಲ.

ಹತ್ತನೇ ತರಗತಿಯಲ್ಲಿದ್ದಾಗ ಯಾರದ್ದೋ ಮದುವೆಗೆ ಬಂದವನು ನನ್ನ ತೋಳು ಬಳಸಿ ಅಪ್ಪಿಕೊಳ್ಳುತ್ತ ‘ಇವರೆಲ್ಲ ಯಾವಾಗ ಹುಟ್ಟಿ ಯಾವಾಗ ಇಷ್ಟು ದೊಡ್ಡವರಾದರು…’  ಎಂದು ಅಚ್ಚರಿ ಪಟ್ಟಿದ್ದ.  ನಂತರ ಮೈಸೂರು ಎಂದರೆ ಮದನಣ್ಣ ಎಂಬಂತಾಗಿದೆ ನನಗೆ. ಹಾಗೆ ಮೈಸೂರಿಗೆ ಹೋದಾಗಲೆಲ್ಲ ಬೆಳ್ಳಂಬೆಳಿಗೆ ನನ್ನನ್ನು ಬಸ್ ನಿಂದ ಇಳಿಸಿಕೊಂಡು ಪ್ರೆಶ್ ಅಪ್ ಆಗಿ ನಾನು ತಲುಪಬೇಕಾದ ಜಾಗಕ್ಕೆ ಸೇರಿಸುವುದು ಅವನೇ. ಕೆಲಸ ಮುಗಿದ ಮೇಲೆ ನನ್ನನ್ನು ಪಿಕ್ ಅಪ್ ಮಾಡಿ ಮನೆಗೆ ಕರೆದೊಯ್ದು ರಾತ್ರಿ ಬಸ್ ಹತ್ತಿಸುವುದು ಕೂಡ ಅವನೆ.  ಈ ನಡುವೆ ಮನೆಗೆ ಹೋದಾಗ ಜಿ ಎಚ್ ನಾಯಕರು ಸುದೀರ್ಘ ಮಾತಿಗೆ ನಿಲುಕುತ್ತಾರೆ. ಮೀರಕ್ಕನವರಿಗಂತೂ ನಾನು ಮಗಳಷ್ಟೇ ಪ್ರೀತಿ. ಅದರಲ್ಲು ಜಿ ಎಚ್ ನಾಯಕರು ನನ್ನ ಗಂಡ ಪ್ರವೀರ್ ಇಬ್ಬರೂ ಒಂದೇ ಮನೆಯವರು. ಕೇವಲ ಹದಿನೈದರಿಂದ ಇಪ್ಪತ್ತು ಮನೆ ಇರುವ ಸೂರ್ವೆ ಎಂಬ ಪುಟ್ಟ ಹಳ್ಳಿಯಲ್ಲಿ ಇರುವುದು ಹೆಚ್ಚು ಕಡಿಮೆ ಒಂದೇ ಮನೆತನ. ಎಲ್ಲೋ ಮೂರ್ನಾಲ್ಕು ಮನೆಗಳು ಮಾತ್ರ ಬೇರೆ. ಹೀಗಾಗಿ ಮದುವೆ ಆದ ನಂತರ ಜಿ ಎಚ್ ನಾಯಕರನ್ನು ಮಾತನಾಡಿಸಿಕೊಂಡು ಬರಲೇ ಬೇಕು ಎನ್ನುವ ನನ್ನ ಗಂಡನ ಹಕ್ಕೊತ್ತಾಯದಿಂದಾಗಿಯೂ ಅವರ ಮನೆಗೆ ಹೋಗುವುದು ಹೆಚ್ಚಾಗಿದೆ.

ಇಷ್ಟೇ ಅಲ್ಲದೇ ಅವರು ತಮ್ಮ  ಆತ್ಮ ಕಥೆ “ಬಾಳು”ನಲ್ಲಿ ವಿವರಿಸಿದ ಅವರ ಅಕ್ಕನ ಮೊಮ್ಮಗ ನನ್ನ ನಾದಿನಿಯ ಗಂಡನೂ ಹೌದು. ಹೀಗಾಗಿ ಸುರಳಿ ಸುತ್ತಿ ಸುತ್ತಿ ಬರುವ ಸಂಬಂಧದ ಹಸಿರು ಬಳ್ಳಿ ನನ್ನನ್ನು  ಅವರಿಗೆ ಇನ್ನೂ ಹೆಚ್ಚಾಗಿ ಆತುಕೊಳ್ಳುವಂತೆ ಮಾಡಿದೆ.  ಸೂರ್ವೆಯ ಇತಿಹಾಸ, ಸ್ವಾತಂತ್ರ್ಯ ಪೂರ್ವದಲ್ಲಿ ಸೂರ್ವೆ ಎಂಬ ಹಳ್ಳಿ ತೊಡಗಿಸಿಕೊಂಡ ರೀತಿ ಎಲ್ಲವನ್ನೂ ತೀರಾ ಮೆಲು ಧ್ವನಿಯಲ್ಲಿ ತುಂಬು ಪ್ರೀತಿ ಮತ್ತು ಉತ್ಸಾಹದಿಂದ ಹೇಳುವುದನ್ನು ಕೇಳುವುದೇ ಒಂದು ಭಾಗ್ಯ ನನಗೆ. ಸೌಜನ್ಯಪೂರ್ಣ ನಡವಳಿಕೆ. ಅದೆಲ್ಲಕ್ಕಿಂತ ಹೆಚ್ಚಾಗಿ ಅವರ ಪ್ರೀತಿ ಮತ್ತು ಪ್ರೋತ್ಸಾಹದ ಮಾತುಗಳು ಮೈಸೂರಿಗೆ ಹೋದಾಗಲೆಲ್ಲ ನನ್ನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಅಂತಹ ಪ್ರೀತಿಯ ಜೀವವೊಂದನ್ನು ಇಷ್ಟು ಅನನ್ಯವಾಗಿ ಕಟ್ಟಿಕೊಟ್ಟ ಎಲ್ ಸಿ ಸುಮಿತ್ರಾರವರನ್ನು ನಾನು ಎಷ್ಟು ಅಭಿನಂದಿಸಿದರೂ ಕಡಿಮೆಯೇ.

ಇದೆಲ್ಲದರೊಟ್ಟಿಗೆ ಹೆಚ್ಚಿನ ಲೇಖನಗಳಲ್ಲಿ ಎಲ್ ಸಿ ಸುಮಿತ್ರಾರವರು ಸರಕಾರಿ ಕನ್ನಡ ಶಾಲೆ ಮತ್ತು ಅದು ಎದುರಿಸಬೇಕಾದ ಸವಾಲುಗಳು ಹಾಗು ಅದನ್ನು ಉಳಿಸಿಕೊಳ್ಳ ಬೇಕಾದ ಅನಿವಾರ್ಯತೆಯ ಬಗ್ಗೆ  ಒತ್ತಿ ಒತ್ತಿ ಹೇಳಿದ್ದಾರೆ. ಸರಕಾರಿ ಶಾಲೆಯ ಉಳಿವಿನ ಬಗ್ಗೆ ಮಾತನಾಡುವವರು, ಸರಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಬದ್ಧತೆಗೆ ಬದ್ಧರಾದವರು, ಎ ಸಿ ರೂಂ ನಲ್ಲಿ ಕುಳಿತು ಅನವಶ್ಯಕವಾಗಿ ಸಲಹೆ ನೀಡುತ್ತ  ಸರಕಾರಿ ಶಾಲೆಯನ್ನು ಮತ್ತಿಷ್ಟು ಹಾಳು ಮಾಡುವ ಬಿಳಿ ಕಾಲರ್ ನ ಆಫೀಸರ್ ಗಳು ಇದನ್ನು ಓದಲೇ ಬೇಕು.

ಇನ್ನು ಸುಮ್ಮನೇ ಓದುವ ಸುಖ ಬಯಸುವ ಸಹೃದಯರು, ಸಾಹಿತ್ಯಾಸಕ್ತರಂತೂ ಇಂತಹ ಒಂದು ಅನನ್ಯ ಅನುಭೂತಿ ನೀರುವ, ನವಿರು ಬರಹಗಳನ್ನು ತಪ್ಪಿಸಿಕೊಳ್ಳುವಂತೆಯೇ ಇಲ್ಲ

‍ಲೇಖಕರು avadhi

September 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. Nagaraj Nayak

    Superb Siri…I am fan of ur articles .. It took me back to my childhood…..Thanks

    ಪ್ರತಿಕ್ರಿಯೆ
  2. shyla Hk

    ಲೇಖನ ತುಂಬಾ ಚೆನ್ನಾಗಿದೆ ನನ್ನ ಬಾಲ್ಯವನ್ನ ನೆನಪಿಸುವುದರೊಂದಿಗೆ ನನ್ನೂರಿನ ಅಪ್ರತಿಮ ಲೆೇಖಕಿಯವರಾದ ಸುಮಿತ್ರಾರವರ ಗದ್ದೆಯಂಚಿನದಾರಿ ಪುಸ್ತಕವನ್ನು ಓದಬೇಕು ಅನಿಸಿದೆ ನನಗೆ ಆ ಪುಸ್ತಕ ಎಲ್ಲಿ ಸಿಗುತ್ತೆ ದಯವಿಟ್ಟು ತಿಳಿಸಿ

    ಪ್ರತಿಕ್ರಿಯೆ
  3. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಶ್ರೀದೇವಿ ರೆಕಮೆಂಡ್ಸ ಅಂಕಣ ಓದಿದೆ…ಅಂಕಣ ಬರಹ ತುಂಬಾ ಚೆನ್ನಾಗಿದೆ… ನಿಮ್ಮ ಬಾಲ್ಯದ ಆಟ ಪಾಠಗಳ ಕುರಿತು ತಿಳಿಯಿತು ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  4. ಸುಜಾತ ಲಕ್ಷೀಪುರ

    ಶ್ರೀ ದೇವಿಯವರೇ ಈ ವಾರದ ಅಂಕಣದ ಹೆಸರನ್ನು “ಶ್ರೀದೇವಿ ಬಾಲ್ಯದ ನೆನಪು” ಎಂದೆನಿಸುವಷ್ಟೂ ನಿಮ್ಮ ಅನುಭವದ ಸವಿಸ್ತಾರ ವಿವರ ಓದಿ,ನಾನೂ ಬಾಲ್ಯಕ್ಕೆ ಹೋಗಿಬಂದೆ.ಸುಮಿತ್ರ ಅವರ ಗದ್ದೆಯಂಚಿನ ದಾರಿ ಶೈಲಿ ನಿಮ್ಮದೇ ಶೈಲಿಯೆಂದು ಕೇಳಿಮತ್ತೊಮ್ಮೆ ಖುಷಿ.
    ಲೇಖನ ಚನ್ನಾಗಿದೆ…. ಹೆಚ್ಚಿನ ಲೇಖನ ಗಳು ಸರ್ಕಾರಿ ಶಾಲೆ ಉಳಿವಿನ ಬಗ್ಗೆ ಎಂದಿರುವಿರಿ,ನಾವೂ ಸರ್ಕಾರಿ ಶಾಲೆಯ ಮಕ್ಕಳಾಗಿದ್ದವರೆ..ಉತ್ತಮ ,ಸಮರ್ಥ ಬದಲಾವಣೆಗಳೊಂದಿಗೆ ಸರ್ಕಾರಿ ಶಾಲೆಗಳನ್ನು ಪುನಶ್ಚೇತನ ಗೊಳಿಸಬೇಕಾಗಿದೆ. ಧನ್ಯವಾದಗಳು ಲೇಖಕಿ ಮತ್ತು ಶ್ರೀ ಅವರಿಗೂ..

    ಪ್ರತಿಕ್ರಿಯೆ
  5. Lalitha Siddabasavaiah

    ಈ ಪುಸ್ತಕ ಓದಿಲ್ಲ, ನಿಮ್ಮ ಲೇಖನ ಓದಿದ ಮೇಲೆ ಪುಸ್ತಕ ಓದಲೇ ಬೇಕೆನ್ನಿಸಿದೆ ಶ್ರೀ . ಪುಸ್ತಕ ಪರಿಚಯ ಎನ್ನುವುದು ಆ ಪುಸ್ತಕವನ್ನು ಎಲ್ಲಿದ್ದರೂ ಹುಡುಕ
    ಬೇಕು ಎಂದು ಪ್ರಚೋದಿಸಬೇಕಂತೆ ಓದಿನ ಹಂಬಲಿಗರಿಗೆ . ಧನ್ಯವಾದಗಳು ನಿಮಗೆ, ಹಾಗೇ ಸುಮಿತ್ರ ಅವರಿಗೂ .

    ಪ್ರತಿಕ್ರಿಯೆ
  6. ಜೋಗಿ

    ಎಲ್ ಸಿ ಸುಮಿತ್ರಾರವರ ಪ್ರಬಂಧಗಳು ನನಗೂ ಇಷ್ಟ. ಅವುಗಳು ಪ್ರಬಂಧದ ವಿಸ್ತರಣೆಯಂತೆ ನನಗೆ ತೋರಿವೆ. ಒಂದು ಪ್ರಬಂಧ ಕೊಡುವ ಸಂತೋಷವನ್ನೂ ಒಂದು ಬರಹ ಕೊಡಬೇಕಾದ ತಿಳಿವಳಿಕೆಯನ್ನೂ ಸುಮಿತ್ರಾರ ಬರಹಗಳು ನೀಡುತ್ತವಾದ್ದರಿಂದ ಅವು ಆಪ್ತವಾಗುತ್ತವೆ. ನಿಮ್ಮ ವಿಶ್ಲೇಷಣೆ ಸೊಗಸಾಗಿದೆ.

    ಪ್ರತಿಕ್ರಿಯೆ
  7. Ruta Ooshma

    Halligaadina badukina saviyannu nenapisutta pustakada parivhayavannu maaduva nimma ee baraha bahala aatmiyavaagide. Khandita Gaddeyanchina daariyannu oduve. Thank you mam.

    ಪ್ರತಿಕ್ರಿಯೆ
  8. Shyamala Madhav

    ಸುಮಿತ್ರಾ ನಡೆದ ದಾರಿಯನ್ನು ಆಪ್ಯಾಯಮಾನವಾಗಿ ಪರಿಚಯಿಸಿದ್ದೀರಿ. ಅಭಿನಂದನೆ, ಶ್ರೀದೇವಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: