ಸುಬ್ರಾಯ ಚೊಕ್ಕಾಡಿ ಕಂಡಂತೆ ‘ಕುಂಟಿನಿ’ ಕಥಾಲೋಕ

ಸುಬ್ರಾಯ ಚೊಕ್ಕಾಡಿ

ಹಿಂದೊಮ್ಮೆ ಜೋಗಿಯ ಬಗ್ಗೆ ಬರೆಯುತ್ತಾ, ಅವರು ದಕ್ಷಿಣ ಕನ್ನಡದಿಂದ ಕನ್ನಡ ಕಥಾ ಲೋಕಕ್ಕೆ ಜಿಗಿದ ಪ್ರತಿಭೆ ಅಂತ ನಾನು ಹೇಳಿದ್ದೆ. ಅವರ ಜತೆಗೆ ಸುಮಾರಾಗಿ ಈ ಕುಂಟಿನಿಯನ್ನೂ ಸೇರಿಸಬಹುದು. ಯಾಕೆಂದರೆ ಈ ಚಡ್ಡಿ ದೋಸ್ತಿಗಳಲ್ಲಿ ಕೆಲವು ಸಾಮ್ಯಗಳಿವೆ. ಒಂದು ವಿಷಯದಲ್ಲಿ ಮಾತ್ರ ಇವರು ಭಿನ್ನವಾಗಿ ಕಾಣಿಸ್ತಾರೆ.

ಜೋಗಿ ವರ್ಷಕ್ಕೆ ಐದು ಪುಸ್ತಕಗಳನ್ನು ಬರೆದರೆ ಈ ಕುಂಟಿನಿ ಐದು ವರ್ಷಗಳಿಗೊಂದು ಪುಸ್ತಕ ಬರೀತಾರೆ. ಇವರ ‘ವೃತ್ತಾಂತ ಶ್ರವಣವು’ 1995 ರಲ್ಲಿ ಪ್ರಕಟವಾಗಿದ್ದು, ಆ ನಂತರ ‘ಆ ಮೇಲೆ ಇವನು’, ಅಪ್ಪನ ನೀಲಿ ಕಣ್ಣು’, ‘ಪೂರ್ಣ ತೆರೆಯದ ಪುಟಗಳು’ ಪ್ರಕಟವಾಗಿದ್ದು, ಇತ್ತೀಚೆಗೆ ‘ವಿಲೇಜ್ ವರ್ಲ್ಡು’ಎನ್ನುವ ಕೃತಿಯನ್ನು ಹೊರಹಾಕುತ್ತಿದ್ದಾರೆ. ಅಂದರೆ 25 ವರ್ಷಗಳಲ್ಲಿ ಐದು ಪುಸ್ತಕಗಳು!

ಇಪ್ಪತ್ತೈದು ವರ್ಷಗಳ ಈ ದೀರ್ಘಾವಧಿಯಲ್ಲಿ ಕುಂಟಿನಿ ನೂರಾರು ಕಥೆಗಳನ್ನು ಬರೆದಿದ್ದಾರೆ ಎಂಬುದಕ್ಕೆ ಸೂಚನೆಗಳಿವೆ. ಮೊದಲು ತೂಕಡಿಸುತ್ತಿದ್ದ ಅವರೊಳಗಿನ ಕಥೆಗಾರ ಅವರು ಕಥೆಕೂಟವನ್ನು ಆರಂಭಿಸಿದ ಮೇಲೆ ಎಚ್ಚರಗೊಂಡು ಪುಂಖಾನುಪುಂಖವಾಗಿ ಕಥೆಗಳನ್ನು ಬರೆಯತೊಡಗಿದ್ದು ವಿಶೇಷ. ಅವರ ಈ ಉತ್ಸಾಹ ಮೆಚ್ಚುವಂಥದು. ಅವು ಎಷ್ಟು ಕುತೂಹಲಕರವಾಗಿತ್ತೆಂದರೆ ಅವರ ಮನೆಯ ಪಕ್ಕದಲ್ಲಿನ-ಬಾಣ ಭಟ್ಟ ವರ್ಣಿಸಿದ ವಿಂಧ್ಯಾಟವಿಯಂತಹ ಕಾಡು, ಅಲ್ಲಿ ಕಾಣಸಿಗುವ ಸುಂದರಿಯರು, ತಿಳಿನೀರಿನ ಕೊಳ, ಬಂಗ್ಲೆ ಮನೆಯೆದುರಿನ ನದಿ,… ಇವೆಲ್ಲ ನನ್ನೊಳಗೆ ಮತ್ಸರವನ್ನು ಹುಟ್ಟಿಸಿದ್ದೂ ನಿಜ.

ಯಾಕೆಂದರೆ ನನ್ನ ಮನೆ ಪಕ್ಕದ ಕಾಡಿನಲ್ಲಿ ಸಿಗುತ್ತಿದ್ದುದು ಸೊಳ್ಳೆಗಳು ಮಾತ್ರ! ಹೆಚ್ಚೆಂದರೆ ಹಕ್ಕಿಗಳು ಹಾಗೂ ಮೊಲದಂತಹ ಚಿಕ್ಕಪುಟ್ಟ ಪ್ರಾಣಿಗಳು! ಅಂಥಾ ಕಾಡಿನ ಪಕ್ಕ ಇರುವ ಈ ಕುಂಟಿನಿ ಎಷ್ಟು ಅದೃಷ್ಟವಂತ ಅಂತ ಕರುಬಿದ್ದು ನಿಜ.! ಅವರು ನಿರಂತರವಾಗಿ ಕಥೆ ಬರೆದದ್ದಲ್ಲದೆ ಕಥೆಕೂಟದ ಮೂಲಕ ಸಚಿನ್ ರಂಥ ಹೊಸ ಕಥೆಗಾರರು ಹುಟ್ಟಿಕೊಂಡು ಬೆಳೆಯುವುದಕ್ಕೂ ಕಾರಣರಾದದ್ದು ನಿಜ. ಕೂಟವು ನಿದ್ರೆಗೆ ಸಂದಾಗ ಅವರ ಕೆಂಪು ಕಣ್ಣು ಕಾಣಿಸಿಕೊಂಡು ಕೂಟಿಗರ ನಿದ್ರೆ ಕೆಡಿಸಿದ್ದೂ ನಿಜ. ಆದರೆ ಕುಂಟಿನಿ ಅಷ್ಟು ಕಥೆಗಳನ್ನು ಬರೆದಿದ್ದರೂ ಇಷ್ಟೇ ಕಥೆಗಳನ್ನು ಪ್ರಕಟಿಸಿದ್ದರ ಹಿಂದಿನ ಕಾರಣಗಳೇನು ಅನ್ನುವುದನ್ನು ತಿಳಿಯಲು ಈ ಪ್ರಕಟಿತ ಕಥೆಗಳ ಮೂಲಕವೇ ಅವರ ಯೋಚನಾ ಕ್ರಮವನ್ನು ಅರಿಯುವ ಪ್ರಯತ್ನ ಮಾಡಬೇಕು.

ಇದನ್ನು ಮುಖ್ಯವಾಗಿ ನಾಲ್ಕು ಅಂಶಗಳ ಮೂಲಕ ನೋಡಬಹುದು.
೧. ಇಲ್ಲಿ ಬಳಕೆಯಾದ ಕಥೆಯ ಚೌಕಟ್ಟಿನಲ್ಲಿನ ಸಡಿಲಿಕೆ.
೨. ಕಥೆಯ ಸ್ವರೂಪ ಬದಲಾವಣೆ.
೩. ವಸ್ತುವಿನಲ್ಲಿನ ಬದಲಾವಣೆ.
೪. ಭಾಷಾ ಬಳಕೆಯಲ್ಲಿನ ವ್ಯತ್ಯಾಸ.
ಕುಂಟಿನಿಗೆ ಸವೆದ ಹಾದಿಯಲ್ಲೇ ನಡೆದು ಹೋಗುವುದು, ಮಾತ್ರವಲ್ಲ ತಾನು ನಡೆದುಬಂದ ದಾರಿಯಲ್ಲೇ ಮುನ್ನಡೆಯುವುದು ಕೂಡಾ ಇಷ್ಟವಿಲ್ಲ. ಅಡಿಗರ ಪದ್ಯದಂತೆ ನಡೆದು ಬಂದ ದಾರಿಯ ಕಡೆಗೆ ಕಣ್ಣು ಹೊರಳಿಸದೆ ಹೊಸ ಹಾದಿಯನ್ನು ಹುಡುಕುತ್ತಾ ಏಕಾಂಗಿಯಾಗಿ ಪಯಣ ಹೊರಟವರು ಅವರು. ಅದನ್ನು ಈ ಅಂಶಗಳ ಮೂಲಕ ನಾವು ಅರಿಯಬಹುದು.

ಅವರು ನಮ್ಮ ಸಾಂಪ್ರದಾಯಿಕ ಸಣ್ಣ ಕಥೆಗಳ ಚೌಕಟ್ಟನ್ನು ಪೂರ್ತಿಯಾಗಿ ಮುರಿಯದಿದ್ದರೂ ಅದನ್ನು ಸಡಿಲಗೊಳಿಸುವ ಪ್ರಕ್ರಿಯೆಯನ್ನು ಇಲ್ಲಿ ಕಾಣಬಹುದು. ‘ವೃತ್ತಾಂತ ಶ್ರವಣವು’ ಸಂಕಲನದ ಕೊನೆಯ ಕಥೆಗಳಿಂದ ಆರಂಭವಾಗಿ ಮುಂದಿನ ಸಂಕಲನಗಳ ಕಥೆಗಳಲ್ಲಿ ಈ ಚೌಕಟ್ಟು ಸಡಿಲವಾಗುತ್ತಾ ಹೋಗುತ್ತದೆ. ಅದರೊಂದಿಗೇ ಕಥೆಯ ಸ್ವರೂಪದಲ್ಲೂ ಬದಲಾವಣೆ ಮಾಡುತ್ತಾ ಹೋಗುವುದರಲ್ಲಿ ಅವರಿಗೆ ಆಸಕ್ತಿ.

ಕಥೆಗಾರಿಕೆಯಲ್ಲಿ ಒಂದು ಹಂತ ತಲುಪಿದೊಡನೆ ಅಲ್ಲೇ ನೆಲೆಯಾಗುವುದು ಸುಲಭ ಹಾಗೂ ಪ್ರಸಿದ್ಧಿ ಪಡೆಯುವುದೂ ಸುಲಭ.. ಆದರೆ ಹಾಗೆ ಮಾಡದೆ ಪ್ಯಾಟರ್ನ್ ಗಳನ್ನು ಬದಲಾಯಿಸುತ್ತಾ ಹೋಗುವುದು ಅಗತ್ಯ ಎನ್ನುವ ಅವರು ತಮ್ಮ ಕಥೆಗಳ ಸ್ವರೂಪವನ್ನೂ ಬದಲಾಯಿಸುತ್ತಾ ಹೋಗಿದ್ದಾರೆ. ‘ವೃತ್ತಾಂತ ಶ್ರವಣವು’ ಸಂಕಲನದ ಕೊನೆಯ ಕಥೆಗಳಲ್ಲಿ, ‘ಆಮೇಲೆ ಇವನು’ ಸಂಕಲನದ ಕೊನೆಯ ಕಥೆ ‘ಕೊಲೆಗಾರ ಗಂಗಣ್ಣ’ ‘ಹಾಗೂ ಬಾದರಾಯನ ಕೊಲೆಯ ಸುತ್ತ ಹಬ್ಬಿರುವ ‘ಆಮೇಲೆ ಇವನು’ ಕಥೆಯಲ್ಲಿ, ‘ಅಪ್ಪನ ನೀಲಿಕಣ್ಣು’ ಹಾಗೂ ‘ಪೂರ್ಣ ತೆರೆಯದ ಪುಟಗಳು’ ಸಂಕಲನದ ಕೊನೆಯ ಕಥೆಗಳಲ್ಲಿ ಈ ಬದಲಾವಣೆಯ ಸುಳಿವುಗಳನ್ನು ಕಾಣಬಹುದು.

ಕಥಾವಸ್ತುವಿನ ದೃಷ್ಟಿಯಿಂದಲೂ ಅವರು ಮಾಡಿದ ಬದಲಾವಣೆ ಗಮನಾರ್ಹ. ಮೊದಲೆರಡು ಸಂಕಲನಗಳಲ್ಲಿ ಸಾಮಾಜಿಕವಾಗಿ ದಕ್ಕುವ ಮನುಷ್ಯನ ಬದುಕನ್ನು ಅದರ ಎಲ್ಲ ಆಯಾಮಗಳೊಂದಿಗೆ ಹಿಡಿಯುವ ಯತ್ನ ಮಾಡಿದ್ದರೆ ಮುಂದಿನ ಕಥೆಗಳಲ್ಲಿ ಮನುಷ್ಯನ ಅಂತರಂಗದ ನಿಗೂಢವೂ ಅನೂಹ್ಯವೂ ಆದ ಆಳಕ್ಕಿಳಿದು ಬದುಕಿನ ಅರ್ಥವನ್ನು ಶೋಧಿಸುವ ಕಾಯಕಕ್ಕಿಳಿದರು. ಅಂದರೆ ಸಾಮಾನ್ಯವಾಗಿ ಸಾಂಪ್ರದಾಯಿಕ ಕಥೆಗಳಲ್ಲಿ ವಸ್ತುವಿನ ಮೂರ್ತ ರೂಪಕ್ಕೇ ಹೆಚ್ಚು ಒತ್ತು ಇದ್ದು ಅಮೂರ್ತದತ್ತ ನಿಧಾನಕ್ಕೆ ಚಲಿಸುವಂತಿರುತ್ತದೆ. ಆದರೆ ಕುಂಟಿನಿ ತನ್ನ ಕಥೆಗಳಲ್ಲಿ ನಿಧಾನವಾಗಿ ಮೂರ್ತವನ್ನು ಗೌಣವಾಗಿಸುತ್ತಾ ಅಮೂರ್ತಕ್ಕೇ ಹೆಚ್ಚು ಒತ್ತು ನೀಡತೊಡಗಿದರು. ‘ಪೂರ್ಣ ತೆರೆಯದ ಪುಟಗಳ’ಲ್ಲಿನ ಕಥೆಗಳಲ್ಲಿ ಮೂರ್ತ ವಸ್ತು ಇಲ್ಲವೇ ಇಲ್ಲವೆನ್ನುವಷ್ಟು ಅಲ್ಪ.

ವಸ್ತುವು ಸಾಮಾಜಿಕದಿಂದ ತೊಡಗಿ ಆಧ್ಯಾತ್ಮದತ್ತ ಚಲಿಸಿ, ದೃಷ್ಟಾಂತ ಇಲ್ಲವೇ ಝೆನ್ ಮಾದರಿಯ ಕಥೆಗಳ ರೀತಿಯಲ್ಲಿ ಬದಲಾಗುವುದನ್ನು ನಾವು ಕಾಣಬಹುದು. ಅಂದರೆ ವಸ್ತುವಿನ ಮೂರ್ತ ರೂಪವು ಗೌಣವಾಗಿ ಅಮೂರ್ತ ಅಂಶವೇ ಮುಖ್ಯವಾಗುವುದುನ್ನು ಇಲ್ಲಿ ಕಾಣಬಹುದು. ಇದು ಸವೆದ ಹಾದಿಯ ತೊರೆದು ಪಥ ಬದಲಾವಣೆ ಮಾಡುತ್ತಾ ಬಂದುದರ ಫಲ. ಇನ್ನೂ ಪ್ರಕಟವಾಗಿ ಕೈಸೇರದ ‘ವಿಲೇಜ್ ವರ್ಲ್ಡ್’ನ ಕಥೆಗಳು ಮತ್ತೆ ತಮ್ಮ ಹಳ್ಳಿಯ ಮೂರ್ತರೂಪದ ಸಾಮಾಜಿಕ ಸ್ಥಿತಿ ಗತಿಗಳಿಗೆ ಹೊರಳಿದವೇನೋ ಅನ್ನುವ ಅನುಮಾನ ನನ್ನದು. ಆ ಕಥೆಗಳನ್ನು ನಾನಿನ್ನೂ ಓದಿರದ ಕಾರಣ ಏನನ್ನೂ ಹೇಳಲು ಸಾಧ್ಯವಾಗದು. ಇದು ಕೂಡಾ ಚಲನೆಯ ಒಂದು ರೂಪವೇ.

ಭಾಷಾ ಬಳಕೆಯ ದೃಷ್ಟಿಯಿಂದಲೂ ಈ ಕಥೆಗಳನ್ನು ಅಭ್ಯಾಸಮಾಡುವುದು ಉಪಯುಕ್ತ. ಮೊದಲ ಸಂಕಲನದ ಕಥೆಗಳ ಮೇಲೆ ಒಂಚೂರು ಜೋಗಿಯ ಪ್ರಭಾವ ಇರುವಂತಿದೆ. ಜೋಗಿಯಂತೆ ಇವರೂ ಶಕ್ರ ರಾಜ, ಭವಭೂತಿ, ಬಾದರಾಯನಂತಹ ಪುರಾಣದ ಹೆಸರುಗಳನ್ನು ಬಳಸಿಕೊಳ್ಳುತ್ತಾರೆ. ಇಲ್ಲಿ ಹಾಗೂ ‘ಆ ಮೇಲೆ ಇವನು’ ಸಂಕಲನದ ಕಥೆಗಳಲ್ಲಿ ಬಳಸಿದ ಭಾಷೆ ಅಪ್ಪಟ ದಕ್ಷಿಣ ಕನ್ನಡದ ಮತ್ತು ಕುಂಟಿನಿಯೇ ರೂಪಿಸಿಕೊಂಡ ವಿಶಿಷ್ಟ ಭಾಷೆ. ಆ ಮೇಲಿನ ಸಂಕಲನದ ಕಥೆಗಳಲ್ಲಿರುವುದು ಭಾಷೆಯು ಸಾಂಪ್ರದಾಯಿಕವಾಗಿರುವ ತನ್ನ ಆಲಂಕಾರಿಕ ರೂಪವನ್ನು ನಿಧಾನವಾಗಿ ಕಳಚಿಕೊಳ್ಳುತ್ತಾ ನಿರಾಭರಣ ಹಾಗೂ ಸರಳ ರೂಪದಲ್ಲಿ ಕಾಣಿಸಿಕೊಳ್ಳುವ ಕ್ರಿಯೆ. ರೂಪಕಗಳ ಭಾಷೆಗೆ ಬದಲಾಗಿ ಇಡಿಯ ಕಥೆಯೇ ರೂಪಕವಾಗಿ ಬದಲಿಕೊಳ್ಳುವ ಕ್ರಿಯೆ.ಇದು ಭಾಷೆಯಲ್ಲಿ ಸಾಕ್ಷಾತ್ಕಾರವಾಗುವುದರ ಬದಲಾಗಿ ಭಾವವನ್ನೇ ನೆಚ್ಚಿಕೊಳ್ಳುವ ಪ್ರಯತ್ನ.

ಇವು ಕಥೆಗಳೇ? ಹೌದು ಮತ್ತು ಅಲ್ಲ ಎರಡೂ ಉತ್ತರಗಳಿವೆ ಇದಕ್ಕೆ. ಯಾಕೆಂದರೆ ಸಾಂಪ್ರದಾಯಿಕ ಕಥೆಗಳನ್ನು ಓದುವವರಿಗೆ ಇಲ್ಲಿ ಕಥೆ ಇಲ್ಲ.ಕಥೆ ಏನು ಹೇಳಹೊರಟಿದೆ ಎಂದು ಅದರ ತಾತ್ವಿಕತೆಯನ್ನು ತಿಳಿಯಬಯಸುವವರಿಗೆ ಇದರಲ್ಲಿ ಕಥೆ ಇದೆ. ಈ ಕಥೆಗಳೂ ಒಂದು ರೀತಿಯಲ್ಲಿ ಕೊಲ್ಯಾಜ್ ಕೃತಿಯಂತಹ ಕಥೆಗಳು. ಅಡುಗೆ ಸಾಮಾಗ್ರಿಗಳೆಲ್ಲವನ್ನೂ ನಿಮ್ಮ ಮುಂದಿಟ್ಟು ಅಡುಗೆ ನೀವೇ ಮಾಡಿಕೊಳ್ಳಿ ಎನ್ನುವ ರೀತಿಯಲ್ಲಿ ಚದುರಿದಂತಹ ವಿವರಗಳನ್ನೆಲ್ಲ ನಮ್ಮೆದುರಿಗಿಟ್ಟು ಕಥೆಯನ್ನು ನೀವೇ ಸೃಷ್ಟಿಸಿಕೊಳ್ಳಿ ಎನ್ನುವಂತಹ ಕಥೆಗಳು. ಅರ್ಧದಲ್ಲಿ ನಿಂತಂತೆ ಕಂಡು ಮುಂದಿನದನ್ನು ನೀವೇ ಮುಂದುವರಿಸಿ ಎಂದು ಪ್ರೆರೇಪಿಸುವ ಕಥೆಗಳು.

ಬಾಹ್ಯ ಸೌಂದರ್ಯವನ್ನು ಅಲಕ್ಷಿಸಿ ಆಂತರಿಕ ಸೌಂದರ್ಯವನ್ನು ಕಾಣಬಯಸುವವರಿಗೆ ಮಾತ್ರ ಒಲಿಯಬಹುದಾದ ಕಥೆಗಳು. ಅಥವಾ ‘ಅಪ್ಪನ ನೀಲಿ ಕಣ್ಣು’ ಕೃತಿಗೆ ಮುನ್ನುಡಿ ಬರೆದ ಎಂ.ಎಸ್.ಶ್ರೀರಾಮ್ ಹೇಳಿದಂತೆ, ಕುಂಟಿನಿ ತಮ್ಮ ಕಥೆಗಳನ್ನು ಹೇಳುತ್ತಿಲ್ಲ. ನಿಮಗೆ ನಿಮ್ಮ ಕಥೆಯನ್ನು ನಿರ್ಮಿಸಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿ ಕೊಡುತ್ತಿದ್ದಾರೆ ಅಂತ ಹೇಳಬಹುದು..

ಈ ಕಥೆಗಳ ಕುರಿತಾದ ಬಹುಮುಖ್ಯ ಆಕ್ಷೇಪವೆಂದರೆ ಇಲ್ಲಿ ಹೊಡೆದು ಕಾಣುವ ಏಕತಾನತೆ., ಹಾಗೂ ವೈವಿಧ್ಯದ ಕೊರತೆ.ದುರೂಹತೆ ಹಾಗೂ ಕೆಲವೊಮ್ಮೆ ಅವಿಶದತೆ ಕೂಡಾ. ನಡೆದ ದಾರಿಯನ್ನು ನಿರಾಕರಿಸುತ್ತಾ ನಿರಂತರ ಪ್ರಯೋಗಶೀಲರಾಗಿ ಮುನ್ನಡೆಯುತ್ತಿರುವ ಕುಂಟಿನಿ ಇದನ್ನು ನಿವಾರಿಸಿಕೊಳ್ಳುವ ದಾರಿಯನ್ನು ತಮ್ಮ ಈ ಹುಡುಕಾಟದ ನಡುವೆ ಹುಡುಕಿಕೊಳ್ಳಬೇಕು ಅಂತ ನನಗನ್ನಿಸುತ್ತದೆ. ಆಗ ನಿಜಕ್ಕೂವಿಶಿಷ್ಟವೆನ್ನಿಸುವ ಕುಂಟಿನಿ ಶೈಲಿ ಅನ್ನೋದು ತನ್ನ ನೆಲೆಕಂಡುಕೊಳ್ಳಬಹುದು.

ನಾನು ಇಲ್ಲಿ ಕಥೆಗಳನ್ನು ಉಲ್ಲೇಖಿಸಿ, ಆ ಉದಾಹರಣೆಗಳ ಮೂಲಕ ಏನನ್ನೂ ಹೇಳಿಲ್ಲ. ಅದು ಪ್ರಸ್ತುತ ನನ್ನ ಉದ್ದೇಶವೂ ಅಲ್ಲ. ಹಾಗೆ ಮಾಡಿದಲ್ಲಿ ಅದೊಂದು ಸುದೀರ್ಘ ಪ್ರಬಂಧವಾಗಬಹುದಾಗಿದ್ದು ಅದಕ್ಕೆ ಇದು ಸಂದರ್ಭವಲ್ಲ ಅಂತ ಭಾವಿಸಿ, ಕುಂಟಿನಿಯ ಕಥಾಲೋಕ ನನ್ನಲ್ಲಿ ಒಟ್ಟಾಗಿ ಮೂಡಿಸಿದ ವಿಚಾರಗಳನ್ನು ಮಾತ್ರ ಇಲ್ಲಿ ಹೇಳಲು ಯತ್ನಿಸಿದ್ದೇನೆ.. ಅವರ ಕಥಾಲೋಕಕ್ಕೆ ಹೊರಗಿನಿಂದಲೇ ಒಂದು ಸುತ್ತು ಬಂದಿದ್ದೇನೆ ಅಷ್ಟೆ.

‍ಲೇಖಕರು Avadhi

June 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: