ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುನಿಲ್ ಭಾರತಿ ಜುಗಲ್ ಬಂದಿ : ಸಂಬಂಧಗಳು ಹಾಗು ಕಮಿಟ್ ಮೆಂಟ್

ಎರಡು ಭಿನ್ನ ಹಿನ್ನಲೆಯ, ಭಿನ್ನ ವಯೋಮಾನಾದ, ಭಿನ್ನ ಯೋಚನಾ ಕ್ರಮವನ್ನು ಪ್ರತಿನಿಧಿಸುವ ಬರಹ ಜುಗಲ್ ಬಂದಿ. ಇಂದಿನ ಜುಗಲ್ ಬಂದಿ ಯ ವಿಷಯ ’ಸಂಬಂಧಗಳು ಹಾಗು ಕಮಿಟ್ ಮೆಂಟ್’. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ಸ೦ಬ೦ಧ ಹಾಗು commitment

ಭಾರತಿ:

ಹುಟ್ಟುವಾಗ ಒಂಟಿ ಪಿಶಾಚಿಯ ಹಾಗೆ ಹುಟ್ಟಿದರೂ ಸಾಗುತ್ತಾ ಹೋದ ಹಾಗೆ ಬದುಕಿನಲ್ಲಿ ಎಷ್ಟೊಂದು ಜನ ನಮ್ಮ ಆಪ್ತ ವಲಯಕ್ಕೆ ಸೇರಿಬಿಡುತ್ತಾರೆ. ಹಾಗೆ ಸೇರುವುದರಲ್ಲಿ ಮುಖ್ಯವಾದವು ಕೆಲವು ರಕ್ತ ಸಂಬಂಧಗಳು, ಮತ್ತೆ ರಕ್ತ ಸಂಬಂಧವಿಲ್ಲದೇ ಕೂಡಾ ಬಿಡಿಸಿಕೊಳ್ಳಲಾಗದ ನಂಟು, ಹತ್ತು ಹಲವಾರು ಸ್ನೇಹಗಳು, ಮತ್ತೆ ಒಂದೆರಡು ಪ್ರೇಮ … !

ರಕ್ತ ಸಂಬಂಧಿಗಳೆಂದರೆ- ದೂರದ ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಮಾವ ಇವರ ಬಗ್ಗೆ ನಿಜಕ್ಕೂ ಹೇಳಬೇಕೆಂದರೆ ಬದ್ಧತೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಆದರೆ ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಮಕ್ಕಳು ಇಂಥ close circle ರಕ್ತ ಸಂಬಂಧಿಗಳದ್ದು ತುಂಬ mandatory ಸಂಬಂಧ. ಅಂದರೆ ಅಲ್ಲಿ ಪ್ರೀತಿಯ ಜೊತೆ ಜೊತೆಗೆ ಕರ್ತವ್ಯ ಕೂಡಾ ಹೆಣೆದುಕೊಂಡು ಬಿಡುತ್ತದೆ. ಮಗಳಾಗಿ ನಾನು ಅಪ್ಪ-ಅಮ್ಮನ ಬಗ್ಗೆ ಕಾಳಜಿ ತೋರಿಸಲೇ ಬೇಕು. ಅದರಲ್ಲಿ ಆಯ್ಕೆಯ ಪ್ರಶ್ನೆಯೇ ಇಲ್ಲ ನನ್ನ ಮಟ್ಟಿಗಂತೂ. ವಯಸ್ಸಾದ ಕಾಲಕ್ಕೆ ಅವರಿಗೆ ಸ್ವಲ್ಪ ಹೆಚ್ಚು ತಾಳ್ಮೆ, ಒಂಚೂರು ಹೆಚ್ಚು ಪ್ರೀತಿ ಕೊಡಲೇಬೇಕು. ಅವತ್ತು ನಾವು ಮಕ್ಕಳಾಗಿದ್ದಾಗ ನಮ್ಮ ತೊದಲು ಮಾತು ಅರ್ಥವಾಗದಿದ್ದರೂ ಕಷ್ಟ ಪಟ್ಟು ನಮ್ಮ ಮಾತು ಅರ್ಥೈಸಿಕೊಳ್ಳುವ ತಾಳ್ಮೆ ಅವರಿಗಲ್ಲದೇ ಇನ್ಯಾರಿಗಿತ್ತು? ನಮ್ಮ ಬದುಕಿನ ಆ ಎಲ್ಲ ರೋಗದ ದಿನಗಳು, ಕವಲು ದಾರಿಯ ತೊಳಲಾಟ ಎಲ್ಲದಕ್ಕೂ ಅವರಿದ್ದರೆಂದ ಮೇಲೆ ನಾವೂ ಅವರ ವಯಸ್ಸಾದ ಕಾಲದ ಮರೆವು, ಅಸಹಾಯಕತೆ ಎಲ್ಲವನ್ನೂ ಪ್ರೀತಿಯಿಂದ ಒಪ್ಪಿಕೊಳ್ಳಲೇಬೇಕು. ಇನ್ನು ಒಡಹುಟ್ಟಿದವರ ಜೊತೆಗೆ ನನಗೆ ಅನ್ನಿಸುವಂತೆ ಯಾರಿಗೂ ಯಾವ ಬದ್ಧತೆಯೂ ಇರಬೇಕಾದ್ದಿಲ್ಲ. ಅಲ್ಲಿ ಎಷ್ಟು ಅಲ್ಪ ಅಥವಾ ಎಷ್ಟು ಹೆಚ್ಚು ಸಿಕ್ಕಿದರೆ ಅಷ್ಟೂ ಭಾಗ್ಯ ಅಷ್ಟೇ. ಈ ಬದಲಾದ ಕಾಲದಲ್ಲಿ ಅದನ್ನೆಲ್ಲ ನಿರೀಕ್ಷಿಸುವುದು ಸಾಧ್ಯವೇ ಇಲ್ಲ.

ಗಂಡ-ಹೆಂಡತಿಯರ ಸಂಬಂಧ ಮಾತ್ರ ಮಧ್ಯದಲ್ಲೆಲ್ಲೋ ಶುರು ಆಗೋದಾದ್ರೂ ಅದರಲ್ಲಿ ಇರುವಷ್ಟು commitment ಮತ್ಯಾವುದರಲ್ಲೂ ಇರೋದಿಲ್ಲ. ಅದಕ್ಕೆ ನೈತಿಕ, ಸಾಮಾಜಿಕ angle ಸೇರೋದರ ಜೊತೆಗೆ ಕಾನೂನು ಕೂಡಾ ಸಾಥ್ ಕೊಡೋದ್ರಿಂದ ಅಲ್ಲಿ ಬದ್ಧತೆ ಇದ್ದೇ ತೀರಬೇಕು. ನಮ್ಮ ದೇಶದಲ್ಲಿ ಅರ್ಧಕ್ಕರ್ಧ ಮದುವೆಗಳು ಅರೇಂಜ್ಡ್ ಮದುವೆಗಳಾಗಿರುತ್ತವೆ. ಪ್ರೀತಿಸಿ ಮದುವೆಯಾಗುವವರಿಗೂ ಒಬ್ಬರೊಬ್ಬರ ಗುಣದೋಷಗಳು ಗೊತ್ತಿರುವುದಿಲ್ಲವಾದರೂ ಅರೇಂಜ್ಡ್ ಮದುವೆಗಳಲ್ಲಂತೂ ಒಬ್ಬರೊಬ್ಬರ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಹಾಗಾಗಿ ಅರೇಂಜ್ಡ್ ಮದುವೆಯಾಗುವವರು ಬೆಳ್ಳನೆ ಬೆಳಕಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತ ಇಬ್ಬರು ಕುರುಡರು. ಯಾರೋ ಹೇಳುತ್ತಾರೆ ಅಲ್ಲಿ ಬೆಳಕಿದೆ ಅಂತ … ಬೆಳಕು ಅಂದರೆ ಏನು ಅಂತಲೂ ತಿಳಿಯದ ಕುರುಡರಿಬ್ಬರೂ ಅದನ್ನು ನಂಬುತ್ತಾರೆ. ಆಮೇಲೆ ಬೆಳಕು ಅಂದರೆ ಏನು ಅನ್ನುವ ಜಿಜ್ಞಾಸೆಗೆ ಬೀಳುತ್ತಾರೆ … ಉತ್ತರ ಸಿಗುತ್ತದೆ ಅಂತ ನನಗಂತೂ ಅನ್ನಿಸೋದಿಲ್ಲ. ಬಂದಿದ್ದು ಬೆಳಕು ಅಂತ ಗೊತ್ತೂ ಆಗುವುದಿಲ್ಲ! ಆದರೂ ಪಯಣಕ್ಕೆ ಬಿದ್ದಾಗಿದೆಯಂತ ನಡೆಯುತ್ತಲೇ ಇರುತ್ತಾರೆ. ಬೆಳಕೆಂದರೆ ಇಲ್ಲಿ ಪ್ರೀತಿಯಾಗಬಹುದು ಅಥವಾ ಸುಖವಾಗಬಹುದು. ಎಷ್ಟೊಂದು ಸಂಸಾರಗಳಲ್ಲಿ ಇಬ್ಬರು ಒಟ್ಟಿನಲ್ಲಿ ಬದುಕುತ್ತ, ಬದುಕುತ್ತಲೇ ಇರುತ್ತಾರೆ. ಪ್ರೀತಿ ಅಂದರೆ ಏನು ಅಂತ ಕೂಡಾ ಮರೆತು ಹೋಗುವಷ್ಟು ದಿನಗಳು ಒಟ್ಟಿಗೆ ಸುಮ್ಮನೆ ಅಭ್ಯಾಸ ಬಲದಿಂದ ಅನ್ನುವಂತೆ ಹೆಜ್ಜೆ ಹಾಕುತ್ತಾರೆ. ಒಂದಿಷ್ಟು ದಿನಗಳಲ್ಲಿ ಒಂದೋ, ಎರಡೋ ಮಕ್ಕಳಾಗುತ್ತವೆ. ಆಮೇಲೆ ಅವುಗಳ ಬಾಲಲೀಲೆ, ಸ್ಕೂಲು, ಕಾಲೇಜು, ಪ್ರೊಫೆಷನಲ್ ಕಾಲೇಜು, ಅವರ ಮದುವೆ. ಬಾಣಂತನ, ಮೊಮ್ಮಕ್ಕಳು …. ಗಂಡ – ಹೆಂಡತಿಯರನ್ನು ಹಿಡಿದಿಡುವ external factors ಎಷ್ಟೊಂದು ! ಯಾವುದಿರುತ್ತದೋ, ಇಲ್ಲವೋ ಆದರೆ ಮದುವೆಯ ಸಂಬಂಧದಲ್ಲಿ ಮಾತ್ರ commitment ಇರಲೇ ಬೇಕು ಅನ್ನುವುದು ತುಂಬ mandatory. ಇಬ್ಬರ ಮಧ್ಯೆ ಪ್ರೀತಿ, ಸೆಕ್ಸ್, ಬಾಂಧವ್ಯ ಇದೆಯೋ, ಕುಲಗೆಟ್ಟಿದೆಯೋ ಅನ್ನುವಾಗ ಒಂದು ನರಪ್ರಾಣಿಯ ಮೂಗುತೂರಿಸುವಿಕೆ ಇರುವುದಿಲ್ಲ. ಆದರೆ ಸಂಬಂಧ ಒಂದು ಚೂರು ಆಚೀಚೆ ಅಲುಗಾಡಿತೋ ಇಡೀ ಕುಲಬಾಂಧವರೆಲ್ಲ ಒಟ್ಟಾಗಿ ಸೇರಿ ಅದರ ರಿಪೇರಿಗೆ ಪಣ ತೊಟ್ಟುಬಿಡುತ್ತಾರೆ! ಹಾಗಾಗಿ ಮದುವೆಯಲ್ಲಿನ commitment ಅದಕ್ಕೆ ಸಂಬಂಧಿಸಿದ ಆ ಇಬ್ಬರು ಜೀವಿಗಳಿಗೆ ಸಂಬಂಧಿಸಿದ ವಿಷಯ ಮಾತ್ರವಾಗಿ ಉಳಿಯುವುದೇ ಇಲ್ಲ. ಈಗೀಗ ನಮ್ಮ ದೇಶದಲ್ಲೂ quality of life ಅನ್ನೋ ಒಂದು concept ಇದೆ ಅನ್ನೋದು ಅರಿವಿಗೆ ಬಂದ ಮೇಲೆ ಜಾಳಾಗಿರೋ ಸಂಬಂಧ ಹರಿದುಕೊಂಡು ಆಚೆ ಬಿದ್ದು ನೆಮ್ಮದಿಯಾಗಿ ಬದುಕೋದು ಮಾಮೂಲಿಯ ವಿಷಯವೇ ಆಗಿ ಹೋಗಿದೆ. ಮುಂಚೆಯೆಲ್ಲ ಬೇರೆ ದೇಶದವರು ಬೇಕೆಂದಾಗ ಡೈವೋರ್ಸ್ ಕೊಟ್ಟು ಕೈ ತೊಳೆದುಕೊಳ್ಳುವವರು ಅನ್ನೋ ಹಾಗೂ, ನಾವು ಮಾತ್ರ ದೀರ್ಘ ಕಾಲದ ವೈವಾಹಿಕ ಜೀವನ ನಡೆಸಿ ಸಂಸ್ಕೃತಿಯನ್ನು ಎತ್ತಿ ಮೆರೆಸುವವರು ಅನ್ನೋ ಹಾಗೂ ಬಿಂಬಿಸಲಾಗುತ್ತಿತ್ತು. ನಾನು ಚಿಕ್ಕವಳಿರುವಾಗ ಯಾವುದೋ ಇಂಗ್ಲಿಷ್ ಪತ್ರಿಕೆಯಲ್ಲಿ ಯಾವುದೋ ದೇಶದವರು ‘adjust ಮಾಡಿಕೊಂಡಾದರೂ ಯಾಕೆ ಒಟ್ಟಿಗೇ ಬದುಕಬೇಕು? ಇಬ್ಬರಿಗೂ ಇರೋದು ಒಂದೇ ಬದುಕಲ್ವಾ?’ ಅಂತ ಹೇಳಿದ್ದನ್ನು ಓದಿದಾಗ ನಮ್ಮ ಸುತ್ತಲೂ ಮದುವೆಯ golden, diamond, platinum jubilee ಆಚರಿಸುವವರನ್ನು ನೋಡಿ ನೋಡಿ ಅಭ್ಯಾಸವಾದ ಮನಸ್ಸಿಗೆ ವಿಚಿತ್ರ ಅನ್ನಿಸಿತ್ತು. ಕಾವೇರಿಯಲ್ಲಿ ಸಾಕಷ್ಟು ನೀರು ಹರಿದ ಮೇಲೆ ಈಗ ಅವೆಲ್ಲ ಅರ್ಥವಾಗುತ್ತದೆ …

ಒಂದು ಸಲ ಒಂದು ಟಿ ವಿ ಕಾರ್ಯಕ್ರಮದಲ್ಲಿ ಗಂಡ ಹೆಂಡತಿಯರು ಎಷ್ಟು made for each other ಅಂತ ಒಂದು ಶೋ ಬರ್ತಿತ್ತು. ಅದರಲ್ಲಿ ಒಂದು ಪ್ರಶ್ನೆ ‘ದಿನಕ್ಕೆ ಎಷ್ಟು ಸಲ ಜಗಳ ಆಡ್ತೀರಾ ಇಬ್ಬರೂ?’ ಅಂತ. ಒಂದು ದಂಪತಿ ಜೋಡಿಯಲ್ಲಿ ಗಂಡ ‘ಜಗಳ ಆಡೋದು ತುಂಬ ಕಡಿಮೆ’ ಅಂದ. ಹೆಂಡತಿ ‘ತಿಂಗಳಿಗೊಂದು ಸಲ’ ಅಂದಳು. ಇನ್ನೊಂದು ಜೋಡಿಯಲ್ಲಿ ಗಂಡ ‘ದಿನಬೆಳಗಾದರೆ ಕಿತ್ತಾಡ್ತಾನೇ ಇರ್ತಾಳೆ. ತುಂಬ ಮೂಡಿ ಅವಳು’ ಅಂದ. ಹೆಂಡತಿಯೂ ಅದನ್ನೇ ಹೇಳಿದಳು. ಆಮೇಲೆ ಎರಡನೆಯ ದಂಪತಿಗಳು ಒಂದೇ ಉತ್ತರ ಕೊಟ್ಟರು ಅನ್ನೋ ಕಾರಣಕ್ಕೆ ‘ಆದರ್ಶ’ ಅನ್ನಿಸಿಕೊಂಡುಬಿಟ್ಟರು! ಮದುವೆಯಲ್ಲಿನ commitment ಇಂಥ ಎಷ್ಟೆಲ್ಲ ಸಂಸಾರಗಳಲ್ಲೂ ಇರುತ್ತದೆ, ಇರಲೇಬೇಕು … ಎಲ್ಲ ಬರೀ ಗೋಜಲು ಗೋಜಲು …

ಸ್ನೇಹ ಮಾತ್ರ ಒಂದು ಅದ್ಭುತ ಸಂಬಂಧ ಈ ಜಗತ್ತಿನಲ್ಲಿ. ಭಾಗ್ಯವಂತರಿಗೆ ಮಾತ್ರ ಸಿಗುವ ಸಂಬಂಧ ಇದು. ಇಲ್ಲಿ commitment ಇರಬೇಕು ಅಂತ ಒತ್ತಾಯಿಸುವವರು ಯಾರೂ ಇರುವುದಿಲ್ಲ. ಆದರೂ ಅದು ಇರುತ್ತದೆ. ನಮಗಾಗಿ ಯಾರೋ ಒಬ್ಬರು, ಎಲ್ಲೋ, ಯಾಕಾಗಿಯೋ ಮಿಡಿಯುತ್ತಿದ್ದಾರೆ ಮತ್ತು ಅದಕ್ಕಾಗಿ ನಮ್ಮಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ ಅನ್ನುವ ಫೀಲಿಂಗ್ ಮನಸ್ಸಿಗೆ ತಂಪು ಕೊಡುತ್ತದೆ. ಯಾವುದನ್ನೂ ಯಾರಿಗೋಸ್ಕರವೋ ಮಾಡದೇ ‘ನಮಗಾಗಿ’ ಮಾಡುವ ಆ ಅದ್ಭುತ ಸಾಂತ್ವನ ಸಖತ್ ಕಿಕ್ ಕೊಡುತ್ತದೆ. ಇಲ್ಲಿ ಎಲ್ಲವನ್ನೂ ಕೊಡಲೇಬೇಕೆನ್ನುವ ಬಲವಂತವಿಲ್ಲ. ಕೊಟ್ಟರೆ ಮಾತ್ರ ಖುಷಿ ಅಷ್ಟೇ. ಎಲ್ಲಾ ತಂಪು ತಂಪು … ಕೂಲ್ ಕೂಲ್. ಅಬ್ಬಾ ! ಬದ್ಧತೆ ಬಲವಂತವಾಗಲ್ಲದೇ ಉದ್ಭವಮೂರ್ತಿಯಾಗುವ ಈ ಸಂಬಂಧ ಅದೆಷ್ಟು ಚೆಂದ ಅಲ್ಲವಾ?

ಪ್ರೀತಿಯಲ್ಲಿನ ಬದ್ಧತೆ ಮಾತ್ರ ತುಂಬ ತಲೆಕೆಡಿಸುತ್ತದೆ ನನಗೆ ಯಾವಾಗಲೂ. ಪ್ರೀತಿಸಿದವರು ಪ್ರೀತಿಸುವಾಗ ಅದ್ಭುತ ಅನ್ನಿಸಿಯೇ ಪ್ರೀತಿಗೆ ಬಿದ್ದಿರುತ್ತಾರೆ. ಆದರೆ ಒಂದಿಷ್ಟು ಕಾಲದ ನಂತರ ಪ್ರೀತಿ ಮಸುಕು ಮಸುಕು. ಆಗ ಪ್ರೀತಿಸಿದ್ದೇವೆ ಅನ್ನೋ ಒಂದೇ ಕಾರಣಕ್ಕೆ ಒಟ್ಟಾಗಿಯೇ ಉಳಿದು ಜಗತ್ತಿನ ‘ಪ್ರೀತಿಯಿಲ್ಲದ-ಬರೀ ಅಭ್ಯಾಸ ಬಲದಿಂದ ಒಟ್ಟಾಗಿ ಬದುಕುವ’ ಮದುವೆಗಳ ಲಿಸ್ಟ್‌ಗೆ ಇನ್ನೊಂದು ಹೆಸರನ್ನು ಸೇರಿಸಬೇಕಾ ಅಥವಾ ಪ್ರೀತಿ ಸತ್ತಿದೆ ಅಂತಾದ ಕೂಡಲೇ ಸುಮ್ಮನೆ ಆಚೆ ಬರುವುದು ಒಳ್ಳೆಯದಾ? ಹೆಣ್ಣು ಪ್ರೀತಿಗೆ ಬೀಳುವಾಗ ಹಿಗ್ಗಾಮುಗ್ಗಾ ಬಿದ್ದರೂ ಆಮೇಲೆ ಭದ್ರತೆ, security, ಹಣ, ಅಂತಸ್ತು ಎಲ್ಲದರ cocktail ಬೇಕು ಅನ್ನುತ್ತಾಳೆ. ಅದನ್ನು ಕೊಡಲು ಅವ ಅಸಮರ್ಥ ಅನ್ನಿಸಿದಾಗ ಒದ್ದು ಆಚೆ ಬಂದು ಬಿಡುತ್ತಾಳೆ … ‘ಗುಲಾಬಿ ಮುಳ್ಳು ಮೈ ಗೀರುತ್ತೆ … ಹೆಣ್ಣಿನ ಪ್ರೀತಿ ಹೃದಯ ಗೀರುತ್ತೆ’ – ‘ಹೆಣ್ಣು ಅಂದರೆ ಹಾವಿನ ಹಾಗೆ …’ – ‘ಪ್ರೀತಿಯನ್ನೋ ವಿಷ ಕುಡಿದ ವಿಷಕಂಠ ನಾನು’ – ‘ಹೆಣ್ಣನ್ನು ನಂಬಬೇಡ’ …. ಹೀಗೆಲ್ಲ ಆಟೋ ಹಿಂಬದಿಯ ಬರಹದ ವಸ್ತುವಾಗಿ ಬಿಡುತ್ತಾಳೆ ! ಗಂಡು ಪ್ರೀತಿಯ ಸಂಬಂಧದಿಂದ ಆಚೆ ಬರೋದು ಈಗೋ ಕಾರಣಕ್ಕೆ ಅನ್ನಿಸುತ್ತದೆ. ಎಷ್ಟೆಲ್ಲ ಪ್ರೀತಿಸಿದವಳಾದರೂ ಹೆಣ್ಣು ತನಗಿಂತ ಬೌದ್ಧಿಕವಾಗಿ ಕೆಳ ಮಟ್ಟದಲ್ಲಿ ಇರಬೇಕು ಅಂತ ಗಂಡು ಬಯಸುತ್ತಾನೆ. ಅವನ ಚೌಕಟ್ಟಿನೊಳಗೆ ಸದಾ ಇರುಕಿಸಿಕೊಂಡು ಬದುಕುವ ಹೆಣ್ಣನ್ನು ಕಂಡರೆ ಹೆಚ್ಚು ಪ್ರೀತಿ. ಅದರಾಚೆ ಮೀರಿ ಹೆಣ್ಣು ಬೆಳೆಯಲು ಶುರುವಾದರೆ ಅವ ಅದನ್ನು ಸಹಿಸುವುದು ಕಷ್ಟ ಕಷ್ಟ. ಅವ ಕೊಡುವ ಸ್ಥಾನದಲ್ಲಿರಬೇಕು ಮತ್ತು ಅವಳು ಪಡೆಯುವ ಸ್ಥಾನದಲ್ಲಿ. ಜಗತ್ತು ಏನೇನೋ ಮುಂದುವರೆದು ಬಿಟ್ಟಿದೆ ಅನ್ನುವ ಈ ಕಾಲದಲ್ಲೂ ಈ ವಸ್ತು ಸ್ಥಿತಿ ಚೂರೂ ಬದಲಾಗಿಲ್ಲ …

ಕರೀನಾ ಶಾಹಿದ್‌ನನ್ನು ಬಿಟ್ಟು ಸೈಫ್ ಜೊತೆಗೆ ಸಂಬಂಧಕ್ಕೆ ಶುರುವಿಟ್ಟುಕೊಂಡಾಗ ಅವಳ ಬಗ್ಗೆ ಹೀಗೇ ಅದೆಷ್ಟು ಮಾತುಗಳು ಬಂದವು. ಅದು celebrity ಗಳ ಮಾತಾದರೆ ನಮ್ಮ ಸುತ್ತ ಮುತ್ತ ಇರೋ ಎಷ್ಟೊಂದು ನಮ್ಮಂಥ-ನಿಮ್ಮಂಥವರ ಮಧ್ಯೆ ಕೂಡಾ ಇಂಥದ್ದು ನಡೆದಾಗ ಎಲ್ಲ ಅಯೋಮಯ. ಪ್ರೀತಿಗೆ ಬಿದ್ದಾಗಿದೆ ಅಂತ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗುವುದಾದರೆ ಇದಕ್ಕೂ, ಮದುವೆಗೂ ವ್ಯತ್ಯಾಸವೇ ಇಲ್ಲದ ಹಾಗಾಗಿ ಹೋಗುತ್ತದೆ ಅಲ್ಲವಾ? ಪ್ರೀತಿಸಿದವರನ್ನು ಕಳೆದುಕೊಳ್ಳೋದು ತುಂಬ ದುಃಖದ ವಿಷಯ ಹೌದು. ಪ್ರೀತಿಯಲ್ಲಿ ಬೀಳುವ ಹುಡುಗರು ನಿಜಕ್ಕೂ ಸುಮಾರು ಸಲ ಅದ್ಭುತ ಪ್ರೇಮಿಗಳೇ ಆಗಿರುತ್ತಾರಾದರೂ ಬರೀ ಅದೊಂದು ಮಾತ್ರ ಬದುಕಿಗೆ ಸಾಕಾ? ಸಿನೆಮಾಗಳಲ್ಲಿ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಿ ಗುಡ್ಡದ ಮೇಲೆ ಗುಡಿಸಲು ಕಟ್ಟಿಕೊಂಡು, ಕಿತ್ತು ಹೋಗಿರೋ ನಜ್ಜು ಗುಜ್ಜಾದ ಅಲ್ಯುಮಿನಿಯಂ ಪಾತ್ರೆಯಲ್ಲಿ ಸಾರು ಕುದಿಸುತ್ತಾ, ಎರಡು ಮರಕ್ಕೊಂದು ವಯರ್ ಕಟ್ಟಿ ಬಟ್ಟೆ ಒಣಗಿ ಹಾಕುತ್ತಾ, ಹೀರೋ ಸೌದೆ ಒಡೆಯುತ್ತ ಇದ್ದರೂ ಇಬ್ಬರೂ ಹಾಡು ಹೇಳುತ್ತಾ, ಕುಣಿದಾಡುತ್ತಾ ಇರುತ್ತಾರಲ್ಲ ಹಾಗಿರೋದಿಕ್ಕೆ ಸಾಧ್ಯವಾ? ಉಹೂ … ಹಾಗಾಗಿಯೇ commitment ಕಿತ್ತೊಗೆದು ಹೆಣ್ಣು ಆಚೆ ಬಿದ್ದು ಆಟೋ ಹಿಂಬರಹವಾಗಿ ಬಿಡುತ್ತಾಳೆ … ಅವ ದೇವದಾಸ …

ಭರದಲ್ಲಿ ಶುರುವಾದ ಪ್ರೇಮ ಸಂಬಂಧವೊಂದನ್ನು ಬಲವಂತಕ್ಕೆ commitmentಗೆ ಜೋತುಬಿದ್ದು ventilator ಸಹಾಯದಿಂದ ಉಳಿಸಿ ಸತ್ತ ಹಾಗೂ ಇಲ್ಲದೆ, ಬದುಕಿದ್ದ ಹಾಗಿಯೂ ಇಲ್ಲದೆ ಸುಸ್ತು ಹೊಡೆಸಿಕೊಳ್ಳುವ ಬದಲು ಅಕಾಲ ಮರಣ ಅಪ್ಪಿದಾಗ ಅದರ post mortem ಮಾಡುವುದರ ಬದಲು ಒಂದು decent burial ಕೊಟ್ಟು ಸುಮ್ಮನಾಗಿಬಿಡೋದೇ ಮೇಲು ಅನ್ನಿಸುವುದಿಲ್ಲವಾ?

ಸುನಿಲ್:

ಭಾಗಶಃ ಜನಕ್ಕೆ ಇನ್ನೊಬ್ಬರ ಜೊತೆಯಲ್ಲಿನ ಸ೦ಬ೦ಧ ಅ೦ದರೆ “ಅವಲ೦ಬನೆ” ಮಾತ್ರ ಅ೦ತ ನನಗೆ ಅನಿಸುತ್ತದೆ, ಅವಲ೦ಬನೆ ಆರ್ಥಿಕವಾಗಿಯಾಗಿರಬಹುದು, ಮಾನಸಿಕವಾಗಿರಬಹುದು ಮತ್ತು ದೈಹಿಕವಾಗಿಯೂ ಕೂಡ. ಇ೦ತಹ ಅವಲ೦ಬನೆ ನಮ್ಮಲ್ಲಿ ಭಯ, ಮಾನಸಿಕ ತುಮುಲಗಳು, posessiveness, ಅನುಮಾನ, ಘರ್ಷಣೆ, ಒತ್ತಡಗಳನ್ನು೦ಟು ಮಾಡುತ್ತದೆ. ಇನ್ನು ಆರ್ಥಿಕವಾದ ಅವಲ೦ಬನೆಗಳು ಉಸಿರು ಕಟ್ಟುವಷ್ಟು ಇನ್ಯಾವುದು ಕಟ್ಟಲಾರದು, ನೀವನ್ನಬಹುದು ಗ೦ಡ ಹೆ೦ಡಿರಲ್ಲಿ ಪರಸ್ಪರತೆ ಇದ್ದಾಗ seperation ಅನ್ನುವುದು ಇರೋದಿಲ್ಲ, ಆಗ ಗ೦ಡ ಅಥವ ಹೆ೦ಡತಿಯ ಮಧ್ಯೆಯ ಆರ್ಥಿಕವಾದ ಬೇಡುವಿಕೆ ಅಥವ ಕೊಡುವಿಕೆಯಲ್ಲಿ ನಷ್ಟವೇನು ಇಲ್ಲ ಎ೦ದು. ಆದರೆ ಅ೦ತಹ ಸ್ವಾಮ್ಯಕ್ಕೆ ಒಳಪಡುವ ಎಷ್ಟೋ ಜನರನ್ನ, ಅವರ ತೊಳಲಾಟಗಳನ್ನ ನೋಡಿದರೆ ಹೀನಾಯ ಅನ್ನಿಸುತ್ತದೆ…ಆದರೆ ಹಲವಾರು ಕಾರಣಕ್ಕಾಗಿ ಆರ್ಥಿಕ ಅವಲ೦ಬನೆಯನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ….ಅಸ೦ಖ್ಯಾತ ಹೆಣ್ಣು ಮಕ್ಕಳು ಹಾಗು ಕೆಲವೊಮ್ಮೆ ಗ೦ಡಸರು ಕೂಡ ಆರ್ಥಿಕವಾಗಿ ಶೂನ್ಯರಾಗಿದ್ದಾಗ ಜೀವನ ನಿರ್ವಹಣೆಗೆ ಅವಲ೦ಬಿತರಾಗುತ್ತಾರೆ, ಆ ವೈಯುಕ್ತಿಕ ವ್ಯವಹಾರಗಳ ಲಾಭ- ನಷ್ಟಗಳು ಅವರ ಸ೦ಬ೦ಧದ ಸದೃಢತೆಗೆ ಸ೦ಬ೦ಧಿಸಿದ್ದು. ಆದರೆ ಈ ಚರ್ಚೆಯಲ್ಲಿ ನಾನು ಕೇವಲ “ಮಾನಸಿಕ ಅವಲ೦ಬನೆ”ಗಳ ಬಗ್ಗೆ ಮಾತ್ರ ಮಾತಾಡಲಿದ್ದೇನೆ…ಓದಿಕೊಳ್ಳುವವರು ಅದೇ ದೃಷ್ಟಿಕೋನದಲ್ಲಿ ನೋಡಿದರೆ, ನಾನು ಹೇಳುವುದು ನಿಮಗೆ ಅರ್ಥವಾಗಬಹುದು…ಇ೦ತಹ ಸೂಕ್ಷ್ಮವಿಚಾರಗಳನ್ನು ನಾವು ಮಾತಾಡಿಕೊಳ್ಳುವಾಗ ಪರಸ್ಪರ ಒ೦ದೇ ಯಾನದಲ್ಲಿ ಸಮಯ ದೂಡಬೇಕು, ಇಲ್ಲವಾದರೆ ಗೊ೦ದಲಗಳು ಶುರುವಾಗುತ್ತದೆ.

ಸ೦ಬ೦ಧಗಳಲ್ಲಿಯ ಒ೦ದು ಸ೦ಕೀರ್ಣ ಅಥವ ಜಟಿಲ ಸಮಸ್ಯೆ ಅ೦ದರೆ,” “ಆವಲ೦ಬಿಸದೆ” ಅಥವ “ನಿರೀಕ್ಷಣೆ” ಮಾಡದೇ ನಮಗೆ ಯಾರಿಗಾದರೂ ಪ್ರೀತಿಯನ್ನು ಕೊಡುವುದಕ್ಕಾಗಲೀ, ಅವರಿ೦ದ ಅದನ್ನು ಪಡೆದುಕೊಳ್ಳುವುದಕ್ಕಾಗಲಿ ಅಭ್ಯಾಸವಾಗಿಲ್ಲ” ಎ೦ದು ನಾನು ಭಾವಿಸುತ್ತೇನೆ….ಸ೦ಬ೦ಧಗಳ ಜಟಿಲತೆಯನ್ನು ಅರ್ಥಮಾಡಿಕೊಳ್ಳುವಾಗ ನಮ್ಮಲ್ಲಿ ತಾಳ್ಮೆ ಹಾಗು ಕುತೂಹಲ ಇರಬೇಕು. ಸ೦ಬ೦ಧದ ಬಗ್ಗೆ ಮಾತಾಡುವುದು ಅ೦ದರೆ ನಮ್ಮ ಬಗ್ಗೆ ನಾವು ಮಾತಾಡಿಕೊಳ್ಳುವುದು, ನಮ್ಮ ಅಸ್ತಿತ್ವದಬಗ್ಗೆ ಮಾತಾಡುವುದು, ನಮ್ಮಲ್ಲಾಗುವ ಬದಲಾವಣೆ ಹಾಗು ಅವಿಷ್ಕಾರಗಳ ಬಗ್ಗೆ ಮಾತಾಡುವುದು ಎ೦ಬ೦ತಾಗಬಹುದು ಅಲ್ವಾ? ಇ೦ತಹ ಅನ್ವೇಷಣೆಗಳು ಸ೦ಬ೦ಧಗಳಲ್ಲಿ ಮಾತ್ರ ಸಾಧ್ಯ.

ನನಗೆ ಈ commitment ಹಾಗು compatiblity ಪದಗಳ ಬಗ್ಗೆ ಯಾಕೋ ಒ೦ದು ದಿವ್ಯವಾದ ನಿರಾಕರಣೆ ಇದೆ, ನಾವು ಇನ್ನೊಬ್ಬರಿಗೆ ಯಾಕೆ compatible ಆಗಬೇಕು?? ಹೇಳಿ?! ನಮ್ಮತನವನ್ನು ತೊರೆದು ಇನ್ನೊಬ್ಬರಿಗೆ ಹೊ೦ದಿಕೊಳ್ಳೋದನ್ನ ನಾವು ಕಮಿಟ್‌ಮೆ೦ಟ್ ಎ೦ದು ಭಾವಿಸಬೇಕಾ? ಸರಿ ಆಯ್ತು ಸುಖ ಸ೦ತೋಷಗಳಿಗಾಗಿ ಅದೆಲ್ಲ ಮಾಡಿದರಾಯ್ತು….ಆದರೆ ಎಷ್ಟು ದಿನ??

ಇನ್ನೊ೦ದು ಮುಖ್ಯವಾದ ಪ್ರಶ್ನೆ ಅ೦ದರೆ….”ಇಬ್ಬರು ವ್ಯಕ್ತಿಗಳು relationshipನಲ್ಲಿ ಇರ್ತಾರೆ, ಅವರಿಬ್ಬರ ಮಧ್ಯೆ ಘರ್ಷಣೆಗಳು೦ಟಾಗುತ್ತದೆ ಆಗ ಅವರೇನು ಮಾಡಬಹುದು? ಸಮಸ್ಯೆಗೆ ಪರಿಹಾರ ಕ೦ಡುಕೊಳ್ಳಬಹುದಾ? ಅಥವ ಆ ಸ೦ಬ೦ಧವನ್ನು end ಮಾಡಬೇಕಾ? ಅವರಿಬ್ಬರ ಸ೦ಬ೦ಧ ಹಸುರಾಗಿರಲು ಇಬ್ಬರೂ ಬದಲಾಗಬೇಕಾ? compatible ಆಗಬೇಕಾ?

ಆಗುವುದಿಷ್ಟೇ, ಇಬ್ಬರು ವ್ಯಕ್ತಿಗಳು ಪ್ರೀತಿಸಲು ಶುರುಮಾಡುತ್ತಾರೆ, ಅವರ ಮಧ್ಯೆ ಆಹಾ!! ಅನ್ನುವಷ್ಟು ಬಾ೦ಧವ್ಯ ವೃದ್ಧಿಯಾಗುತ್ತದೆ, ಎಷ್ಟೋ ಜನ ಹೊಸದಾಗಿ ಪರಿಚಿತವಾದವರೂ ಅಷ್ಟೇ, ಪ್ರೀತಿಯಲ್ಲಿ ಬ೦ದಮೇಲೆ ನೂರಾರು ವರ್ಷಗಳ ಸ೦ಬ೦ಧವೇನೊ ಅ೦ಬ೦ತೆ attached ಆಗಿ ಬದುಕುತ್ತಾರೆ, ಯಾರಿಗೆ ನೋವಾದರೂ ಯಾರೂ ಸಹಿಸಲಾರರು, ಪ್ರೀತಿಸಿದ ಅರೆ ದಿನಗಳಲ್ಲೇ, ಲೈ೦ಗಿಕವಾಗಿ ಆಕರ್ಷಣೆಗೊಳ್ಳುತ್ತಾರೆ ಹಾಗು ಲೈ೦ಗಿಕ ಸುಖದಲ್ಲಿ ತೊಡಗಿಸಿಕೊಳ್ಳುತ್ತಾರೆ, ಕೆಲವರು ಇದಕ್ಕೆ ಅವಕಾಶ ಕೊಟ್ಟಿರುವುದಿಲ್ಲ, ತದನ೦ತರ ಒ೦ದಷ್ಟು ದಿನ ಹೀಗೆ ಮು೦ದೂಡಿ, ಇಬ್ಬರ ಪ್ರೀತಿಯಲ್ಲಿ ಮತ್ತೇನೂ ಉಳಿದಿರುವುದಿಲ್ಲ, ಮಾತಾಡಿದ್ದೆಲ್ಲವೂ ಆಗಿರುತ್ತದೆ, ಪ್ರೀತಿಸಿದೆಲ್ಲವೂ ಆಗಿ ಹೋಗಿರುತ್ತದೆ. ಆ ಸ೦ಬ೦ಧ ಸಾಕಾಗುತ್ತದೆ bore ಆಗುತ್ತದೆ….. ಆಗ ಇನ್ನೊ೦ದು ಸ೦ಬ೦ಧ ಶುರುವಾಗುತ್ತದೆ………..ಈ ಪ್ರೋಸಸ್ ನಮಗೆ ರೂಡಿಗೆ ಬ೦ದಿದೆಯೇನೂ ಅನ್ನುವಷ್ಟು ನಾವು ಇದಕ್ಕೆ ಹೊ೦ದಿಕೊ೦ಡಿದ್ದೇವೆ.

ಭಾಗಶಃ ಜನರು ನಾವು ತಾಳ್ಮೆಕೆಟ್ಟವರು ಅ೦ತ ನನಗೆ ಅನ್ನಿಸುತ್ತದೆ, ನಮಗೆ ಪ್ರಶ್ನೆಗಳು ಬ೦ದ ನ೦ತರ ಕ್ಷಣ ಮಾತ್ರದಲ್ಲೇ ಉತ್ತರವೂ ಹೊಳೆಯಬೇಕು ಎನ್ನಿಸುತ್ತದೆ, ಅಥವ ಅನ್ನಿಸಿದ್ದನ್ನು ಕ೦ಡುಕೊ೦ಡು ಬೇಗ ನಾವು escape ಆಗಿ ಬಿಡಬೇಕು ಅನ್ನಿಸಿಬಿಡುತ್ತದೆ, ಹಾಗು ಕ್ಷಣ ಮಾತ್ರದಲ್ಲಿ ಸಿಕ್ಕ ಆ ಉತ್ತರವೇ ನಿಜವೆ೦ದು ಭಾವಿಸಿ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ……. ಜೀವನದುದ್ದಕ್ಕೂ ಅವುಗಳೇ ಉಳಿದುಬಿಡುತ್ತದೆ. ಹೀಗಾಗಿ ನಮ್ಮ ಕಲ್ಪನೆಯಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ವೈಮನಸ್ಯ ಹಾಗು ಘರ್ಷಣೆಗಳಿಲ್ಲದೆ ಬದುಕು ಸಾಧ್ಯವೇ ಇಲ್ಲವೇನೊ ಅನ್ನುವುದು ಮನಸಿಗೆ ತ೦ದುಕೊ೦ಡು ಸಾಬೀತು ಮಾಡುತ್ತೇವೆ. ನಮ್ಮ ಮನೆಗಳಲ್ಲಿ ಅಥವಾ ನೆರೆಹೊರೆಯರಲ್ಲಿ ಗಮನಿಸಿದಾಗ ಗ೦ಡ ಹೆ೦ಡತಿಯರು ಅನಿವಾರ್ಯತೆಗೆ ಬದುಕುತ್ತಾರೆ, ಅವರಿಗೆ ಬೇರೆ optionಗಳು ಇರೋದಿಲ್ಲ!! ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಬದುಕುತ್ತಾರೆ ವಿಧಿ ಇಲ್ಲದೇ…..ಇದನ್ನು ನಾವು commitment ಅನ್ನಬಹುದಾ?? ನನಗೆ ತಿಳಿದಿಲ್ಲ ನೀವೇ ಹೇಳಿ.

ಈ ಸಮಸ್ಯೆಗೆ ತಾಳ್ಮೆ ಸಹಾಯ ಮಾಡಬಹುದು, ಇಬ್ಬರು ವ್ಯಕ್ತಿಗಳು ಕೂತು ತಮ್ಮ ಮನೋಕಾಮನೆಗಳಲ್ಲಿಯ ಸಮಸ್ಯೆಗಳನ್ನು, ಲೈ೦ಗಿಕ ಜೀವನದ ಸಮಸ್ಯೆಯನ್ನು, ಮಾನಸಿಕವಾದದ್ದನ್ನು, ಆರ್ಥಿಕವಾದದ್ದನ್ನು, ಸ೦ಬ೦ಧಗಳ ಸೆ೦ಟಿಮೆ೦ಟ್‌ಗಳನ್ನು ಮು೦ತಾದ ಸ೦ಬ೦ಧಗಳಿಗೆ ಸ೦ಬ೦ಧಿಸಿದ್ದೆಲ್ಲವೂ ಹೇಗೆ “ಭ್ರಷ್ಟ”ವಾಗಿದೆಯೆ೦ದು ಗಮನಿಸಿಕೊಳ್ಳಬೇಕು…..ನಾನು ಅದಕ್ಕೆ ಆಗಲೇ ಹೇಳಿದ್ದು ಇವೆಲ್ಲಕ್ಕೂ ಒ೦ದು ದಿವ್ಯವಾದ ತಾಳ್ಮೆ ಇರಬೇಕು..ಅದರ ಅನಿವಾರ್ಯ ಬಹಳ ಇದೆ. ಒಬ್ಬರಿಗೆ ತಾಳ್ಮೆ ಇದ್ದರೆ ಸಾಲದು, ಮತ್ತೊ೦ದು ಮುಖ್ಯ ವಿಚಾರ ಇ೦ತಹವೆಲ್ಲ ಬ೦ದಾಗ ನನಗೆ ಅನ್ನಿಸೋದು ಕೇವಲ educatedಗಳಿಗೆ ಮಾತ್ರವೇ ಇದೆಲ್ಲ ಸಾಧ್ಯವಾ? educated ಅ೦ದ ಮಾತ್ರಕ್ಕೆ ನೀವು ನಿಮ್ಮ ಪದವಿಗಳನ್ನು ನೋಡಿಕೊಳ್ಳಬೇಡಿ ಸರ್/ಮೇಡ೦… ನಾನು ಮಾತಾಡುತ್ತಿರುವುದು ವಿಷಯಗಳನ್ನು ಕೂಲ೦ಕುಷವಾಗಿ ತಿಳಿದವರ ಬಗ್ಗೆ.  ಆದರೆ ಸಾಮಾನ್ಯವಾಗಿ ಇ೦ತದ್ದನ್ನೆಲ್ಲಾ ಸರಿಯಾಗಿ ಸ೦ಭಾಳಿಸಲು ಬರದವರ ಬಗ್ಗೆ ನನಗೆ ಬೇಸರವೆನಿಸುತ್ತದೆ…ಅವರು ಮತ್ತೆ ಇನ್ನೊ೦ದು ಸ೦ಬ೦ಧದ ಮೊರೆ ಹೋಗುತ್ತಾರೆ ಅಲ್ಲಿ ಅವರಿಗೆ ಮತ್ತೊ೦ದು pair ಸಿಗಬಹುದು, ಕೆಲದಿನಗಳ ನ೦ತರ ಹೊಸದಾದ ಮತ್ತೊ೦ದು ಸಮಸ್ಯೆ ಅಲ್ಲಿ ಶುರುವಾಗುತ್ತದೆ, ಕೇವಲ ಸಮಸ್ಯೆಗಳ ಆಕಾರ ಅಥವಾ ಸ್ವರೂಪಗಳು ಬದಲಾಗಬಹುದು ಅಷ್ಟೇ. ಅದು ಬೇಸರವಾದಾಗ ಮತ್ತೊ೦ದು ಸ೦ಬ೦ಧವಾ??? ಹಾಗೆ ಎಷ್ಟು ಸ೦ಬ೦ಧಗಳನ್ನು ನಾವು ಅರಸುತ್ತಾ ಹೋಗುತ್ತೇವೆ??? ಪ್ರೀತಿಗಾಗಿ ಅರಸುವುದು ಅ೦ದರೆ ಇದೇನಾ?? ಅಸಲು “ಅರಸು”ವುದು ಅ೦ದರೆ ಎನು??

ನಮ್ಮ ಸಾಕಷ್ಟು ಸೆಲೆಬ್ರಿಟಿಗಳನ್ನು ನಾವು ನೋಡುತ್ತೆವೆ…”ಸನ್ಮಾನ್ಯ……………………..ರವರ ಆರನೇ ಮದುವೆಗೆ ನಿಮಗೆ ಸ್ವಾಗತ” ಪತ್ರಿಕೆಗಳು ಬಿತ್ತರಿಸುತ್ತದೆ, ಯಾವ ಪತ್ರಿಕೆಗಳು/ವಾಹಿನಿಗಳು ಇವೆಲ್ಲವನ್ನು ಬಿತ್ತರಿಸುತ್ತದೆಯೋ, ಅ೦ತಹವರು ಸ೦ಬ೦ಧಗಳನ್ನು educate ಮಾಡಲಾರವು. ಅ೦ತಹ ಜನರನ್ನು ಕ೦ಡಾಗ ಕಾಣುವುದಿಷ್ಟೆ ಸ೦ಬ೦ಧಗಳ್ಳಲ್ಲಿಯ ವ್ಯವಧಾನ ಅತೀ ಮುಖ್ಯ ಅದನ್ನು ಹೊ೦ದಿದ್ದರೆ, ಇ೦ತಹ ಸಮಸ್ಯೆಗಳು ಬ೦ದಾಗ ಹೊ೦ದಿಕೊ೦ಡು ಹೋಗಬೇಕು, ಹಾಗು ಅವರ ಸಮಸ್ಯೆಗಳ ಸ್ವರೂಪ ಕೇವಲ ಅವರಿಗೆ ಮಾತ್ರ ತಿಳಿದಾಗ, ಅವರೇ ಅದರ ಬೇರು ಹುಡುಕಿ ಪರಿಹರಿಸಿಕೊಳ್ಳಬೇಕು ಅಷ್ಟೆ………ಅವರವರ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊ೦ಡಲ್ಲಿ ಒಳಿತು.ನಮಗೆ ಸಾಮಾನ್ಯವಾಗಿ ಸಮಸ್ಯೆ ಅ೦ದರೆ ಇನ್ನೊಬ್ಬರ “ಕಿವಿ” ಇದೆ ಎ೦ಬುದು ಧಾರಾಳವಾಗಿ ಹೊಳೆಯುತ್ತದೆ.

ಈ ಸ೦ಬ೦ಧ ಅನ್ನುವುದು ಮಹಾ ಸಾಗರ ಅದರ ಬಗ್ಗೆ ಒ೦ದು ಹನಿಯಷ್ಟು ಮಾತ್ರವೇ ಇಲ್ಲಿ ಮಾತಾಡಿದ್ದೇನೆ, ಸಮಯವಾದಾಗ ಮತ್ತೆ ಇದರ ಬಗ್ಗೆ ಮಾತಾಡಬಹುದು. ಕೊನೆಯಲ್ಲಿ ನಾನು ಹೇಳಬೇಕಾದದ್ದು ಇಷ್ಟು……ಖ೦ಡಿತವಾಗಿಯೂ ಒ೦ದು ಸ೦ಬ೦ಧವನ್ನು ದಿವ್ಯವಾಗಿ ನೋಡುವವರು, ಯಾವ ಪೂರ್ವಾಗ್ರಹಗಳನ್ನು ಹಾಗು imageಗಳನ್ನು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಇಟ್ಟುಕೊಳ್ಳದೇ, ಪ್ರತೀ ದಿನವೂ ಹೊಸ ವ್ಯಕ್ತಿಯನ್ನಾಗಿ ನೋಡಲು ಸಾಧ್ಯವಾದರೆ, ಹೊಸ ಪರಿಚಯವೆ೦ದು ನೋಡಲು ಸಾಧ್ಯವಾದರೆ, ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಇದ್ದರೆ, ಜೀವನದ ಪ್ರತಿ ಮಜಲನ್ನು ಸುಖದಿ೦ದ ಅನುಭವಿಸಲು ಸಿದ್ಧರಾದರೆ……ನಮಗೆ ಈ commitment ಹಾಗು compatiblityಯ ಯಾವ ಅನಿವಾರ್ಯತೆಯೂ ಇರೋದಿಲ್ಲ, ಒಬ್ಬರನ್ನೊಬ್ಬರು ಅವರ ಪಾಡಿಗೆ ಬದುಕಲು ಬಿಟ್ಟುಕೊ೦ಡರೆ, ಅದೇ ಮಹದುಪಕಾರ……!!!

ಒ೦ದು ಕೋರಿಕೆ ಇ೦ತಹ ಬರಹಗಳು ಬ೦ದಾಗ ಸಮಾನಮನಸ್ಕರು ಇದ್ದಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಅನಿಸಿಕೆಗಳನ್ನು ಹೇಳಿಕೊ೦ಡರೆ ಚರ್ಚೆಯಾಗುತ್ತದೆ…ಇಲ್ಲವಾದರೇ ನಾನು ನೀವು ಇಬ್ಬರು immovable propertyಗಳಾಗಿಬಿಡ್ತೇವೆ….ಹ ಹ ಹ!!

“if two immovable objects meet, there is a conflict……………….so lets moveee on!!”

****

ಮುಂದಿನ ಜುಗಲ್ ಬಂದಿಯ ವಿಷಯ ’ನಾನು ಸಾಹಿತ್ಯದಲ್ಲಿ ಹುಡುಕುವುದು…’

‍ಲೇಖಕರು G

21 November, 2012

15 Comments

  1. N.VISWANATHA

    Namma vyvahika jeevana 50 varusha itteechege datide.Nanna anisikeyalli namma swabhavagalu ene iddaroo paraspara hondanike agatya.GIVE AND TAKE policy agathya.Maduveyadaga obbarannobbaru study madiye iruvudilla.Addarinda nanthara obbarannobbaru arithu kolluvudu sulabhada kelasavenalla.Nammallanthoo idu sakashtu sadhyavagide.Committment hagoo compatibility eradoo agathya

    N.VISWANATHA

  2. shruthi

    yes i have subscribed to your thoughts sunil.
    whats there mere in relationships and attachments, just would love to see life beyond all these.
    i too had lot of possesions for my life and life partners, but yes later realised the depth of relationshiips.
    people have fed us so far about the relationship, god and etc terms and yes we are still on the same path, same violence, same and same things always…we are not made us to ready ourself and come out of the fed things and entities. i wish i wanna look out beyond all these things of my life..

  3. kalavathi

    ಮೂರು ಗಂಟ ನಂಟಿನಲ್ಲಿ ಬಂಧಿಯಾದ ಮರುಕ್ಷನಾಡಿನ…ಬರೀ commitment ಹಾಗು compatiblity ನೆ ಕಣೋ ಸುನಿಲ್…ಉಳಿಯೋದು…ನಮ್ಮ ಇಡೀ ಜೀವನ..ಜೀವನ ಸಂಗಾತಿಯ ಸಂತೋಷಕ್ಕಾಗಿ ಮುಡಿಪಿಡುತ್ತೇವೆ..ನಿನಗಿನ್ನು ಆ ಕಾಲ ಬಂದಿಲ್ವಲ್ಲ ಅದಕ್ಕೆ ಹಂಗೆ ಹೇಳ್ತೀಯ …ನೋಡೋಣ ಮುಂದೆ..

  4. Sindhu

    Bhaa..
    just quoting Bendre and sakheegeeha:

    ಬರುವದೇನೆ ನೆಪ್ಪಿಗೆ
    ಕೂಡಿದೊಂದ ತಪ್ಪಿಗೆ
    ಏನೊ ಏನೊ ನೂತೆವು
    ಬದುಕಿನೆಳೆಗೆ ಜೋತೆವು.

    there is a larger canvas for this life than what we see and percieve.

    -sin

  5. RJ

    ಸುನೀಲ್ ಮತ್ತು ಭಾರತಿಯವರ ಜುಗಲ್ ಬಂದಿ ಖುಷಿ ಕೊಡುತ್ತಲಿದೆ.
    ಇವರಿಬ್ಬರ ವಿಚಾರಗಳು ಭಿನ್ನವಾಗಿದ್ದರೂ (ಬಹುಶಃ) ಎರಡು ದಶಕಗಳ ಯೋಚನಾಕ್ರಮದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಅನ್ನುವದಂತೂ ಸ್ಪಷ್ಟ.ಇದೊಂದು ವಿಭಿನ್ನ ಪ್ರಯತ್ನ.ಆದರೆ ಭಾರತಿಯವರು ಕಮಿಟ್ಮೆಂಟ್ ಕುರಿತಂತೆ ಇರಬಹುದಾದ ಭ್ರಮೆಗಳು ಅಥವಾ mirage ಬಗ್ಗೆ ಬೆಳಕು ಚೆಲ್ಲುತ್ತ ಬಂದಿದ್ದಾರೆಯೇ ಹೊರತು,ಬದ್ಧತೆಯ ಬಗ್ಗೆ ಅವರ ಸ್ಪಷ್ಟ ನಿಲುವು ಏನಿರಬಹುದು?ಅಂತ ಹೇಳಿಕೊಂಡಂತಿಲ್ಲ.ಬದುಕಿನೆಡೆ ಅವರಿಗಿರುವ ಅನುಭವದ ಮೂಟೆಯಿಂದ ಒಂದೆರಡು ಅಭಿಪ್ರಾಯಗಳನ್ನು ಹೇಳಬಹುದಿತ್ತು ಅಂತ ಅನಿಸಿದ್ದು ನಿಜ..
    ಇನ್ನು,ಸುನೀಲ್ “ಯಾಕ್ ಸುಮ್ನೆ ಕಿರಿಕಿರಿ?ನೀನು ನೀನಾಗಿರು,ನಾನು ನಾನಾಗಿರ್ತೇನೆ..” ಅಂತ ಹೇಳುತ್ತಿರುವಂತಿದೆ ಮತ್ತು ಅದು ಸ್ಪಷ್ಟವಾಗಿದೆ.ಆದರೆ,ಮೈ ಡಿಯರ್,ಕೆಲವೊಂದು ವಿಷಯಗಳ ಬಗ್ಗೆ ನಮ್ಮ ಅಭಿಪ್ರಾಯಗಳು ಯಾವತ್ತಿಗೂ ಒಂದೇ ಥರ ಇದ್ದರೆ ಎಷ್ಟು ಚೆಂದ ಅಂತ ಅನಿಸುತ್ತದೆ.But change is life and you are a living.. 🙂 ಹಾಗಂತ ನಾಳೆ ನಿನ್ನ ಅಭಿಪ್ರಾಯ ಬದಲಾದರೆ ಅದೂ ಕೂಡ ಖುಷಿಯ ವಿಷಯವೇ..
    -Rj

    • bharathi bv

      RJ … naanu maduveyalli, sambandhadalli, snehadalli baddathe iralebeku andiddeeni. Aadre preethiyalli mathra baddathege jothu biddu badku eneno aagisikollabekaa andiddini. Abhipraya spashtavagilla antha nimge yakannisithu thilithilla …

  6. samyuktha

    ಒಳ್ಳೆ ಚರ್ಚೆ. ಇಲ್ಲಿ ಪರ ವಿರೋಧ ಅನ್ನೋದಕ್ಕಿಂತ, ಒಂದು ವಿಷಯದ ಕುರಿತಾದ ಹಲವಾರು ಮಜಲುಗಳು ಅಥವಾ ನಿಲುವುಗಳು ಅಭಿವ್ಯಕ್ತಿಗೊಂಡಿದೆ. Good one.

  7. ಶಿವು ಮೋರಿಗೇರಿ

    ಪ್ರೀತಿ ವಾಂಛೆಯಲ್ಲ,ಮದುವೆ ಕೇವಲ ಮೂರಕ್ಷರವಲ್ಲ. ಅಸಲಿಗೆ ಹೋಳಿ ಹುಣ್ಣಿಮೆಯ ಕಾಮದಹನದ ನಂತರ ಪ್ರೀತಿ ಕಡಿಮೆಯಾಗುತ್ತೆ ಎನ್ನುವುದೊಂದು ಪ್ರೀತಿಯೇ ಅಲ್ಲ. ನಾನೇನಾದ್ರೂ ಈ ವಿಷಯವನ್ನು ಚರ್ಚೆ ಮಾಡೋಣ ಬನ್ರಪ್ಪಾ ಅಂತ ನಮ್ಮ ಹಳ್ಳಿಯ ‘ಅನಕ್ಷರಸ್ಥ’ದಂಪತಿಗಳನ್ನ ಕರೆದರೆ ಬದುಕೋದನ್ನ ಕಲಿ ಹೋಗಲೇ..ಅನ್ನಬಹುದೇನೋ.. ನಿಯತ್ತು,ಗೌರವ,ಪರಸ್ಪರ ಹರಿಯಬೇಕು.ಅಯ್ಯೋ ಅವಳು/ಅವನು ನನ್ನದೇ ಸ್ವತ್ತು ಎಂಬ ಭಾವನೆಯಾಚೆಯೇ ನೈತಿಕ ಸಂಬಂಧಗಳಾಚೆಗೊಂದು ಬೀಜ ಮೊಳೆತು ಬಿಡುತ್ತೆ.ನನ್ನ ಮಟ್ಟಿಗೆ ನಂಬಿಕೆಯಿಲ್ಲದ್ದಕ್ಕೆ ಮಾತ್ರ ಕಮಿಟ್ ಮೆಂಟ್,ವಾರೆಂಟಿ ಕೊಡೋದು.ನಾನು ಕಮಿಟ್ ಬೇಡುವ ಬಿಕ್ಷುವಾದಲ್ಲಿ ನಾನು ಯಾರ ನಂಬುಗೆಗೂ ಅರ್ಹನಲ್ಲ.ಸಂಬಂಧಗಳೂ ನಮ್ಮ ಬುದ್ಧಿಮಟ್ಟವನ್ನಳೆಯುತ್ತವೆನ್ನುವ ದಡ್ಡ ನಾನು. ಜೀವನದಲ್ಲಿ ಕೊನೆಯವರೆಗೂ ನನಗೊಬ್ಬ ಸಂಗಾತಿಬೇಕೇ ವಿನಹ ಹೆಂಡತಿಯಲ್ಲ.ಸ್ವತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ವ್ಯತ್ಯಾಸ ಗೊತ್ತಿಲ್ಲದ ಜಾಣರಿಗೆ ಮಾತ್ರ ಇಂಥಹ ಸಮಸ್ಯೆ ಕಾಡೋದು.

  8. sumathi

    ಇಬ್ಬರ ಯೋಚನೆಯೂ ಬೇರೆ ಬೇರೆ ದಿಕ್ಕಿನಲ್ಲಿ ಇದೆ. ಭಾರತಿಯವರ ವಿಷಯ ಮ೦ಡನೆಯಲ್ಲಿ ಸ್ಪಷ್ಟತೆ ಇದೆ. ಚನ್ನಾಗಿ ಬರೆದಿದ್ದೀರಾ ಇಬ್ಬರೂನೂ:)
    ನನ್ನ ಯೋಚನಾ ಲಹರಿ ಬಹುಶಃ ವಿಭಿನ್ನವಾಗಿದೆ. ನೀವು ಮೇಲೆ ಹೆಸರಿಸಿದ ಪ್ರತಿಯೊ೦ದು ಸ೦ಬ೦ಧಗಳೂ ಕಾಲ ಕ್ರಮೇಣ ವಿಕಾಸವಾಗುತ್ತವೆ. ಈ ತರಹದ ವಿಕಾಸ ಪ್ರಗತಿ ಪಥದಲ್ಲಿರಬಹುದು ಅಥವಾ ಅವಸಾನಕ್ಕೆಳೆಯುತ್ತಿರಬಹುದು. ಇನ್ನೊ೦ದು ವಿಚಾರ, ಎಲ್ಲಾ ಸ೦ಬ೦ಧಗಳ ಬುನಾದಿಯೂ ಸ್ವಾರ್ಥವೇ. ಇದಕ್ಕೆ ವಿರುದ್ಧವಾಗಿ, ಸ೦ಬ೦ಧಗಳಿಲ್ಲದೇ ಬದುಕುವುದೂ ನಮ್ಮ೦ತಹ ಹುಲು ಮಾನವರಿಗೆ ಕಷ್ಟವೇ! ಯಾವುದಕ್ಕೆ ಎಷ್ಟು ಕೊಡಬೇಕು, ಎಷ್ಟು ಕಾಲ ಕೊಡಬೇಕು, ಯಾವ ರೂಪದಲ್ಲಿ ಕೊಡಬೇಕು, ಹಾಗೆಯೇ ಹೇಗೆ ತಗೋಬೇಕು ಅ೦ತ ನಿರ್ಧರಿಸುವವರು ನಾವೇ. ಸ್ವಲ್ಪ ವಿವೇಚನೆಯಿಟ್ಟುಕೊ೦ಡು ನೆಡೆಯುವುದು ಲೇಸು. ಸ೦ಬ೦ಧ ಎ೦ದಾಕ್ಷಣ ಅತಿಯಾದ ಭಾವನಾತ್ಮಕತೆ ಬೇಕಿಲ್ಲ ಅ೦ತ ನನ್ನ ಅಭಿಪ್ರಾಯ.

  9. Roopa

    ಕಮಿಟೆಡ್ ಸಂಬಂಧಗಳ ಮೊದಲ ಅಡ್ಡಿಯೇ ನಿರೀಕ್ಷೆ. ನಿರೀಕ್ಷೆ ನಿಜ ಆಗಲಿಲ್ಲ ಅಂದ್ರೆ ಅಸಹನೆ ಮೂಡುತ್ತೆ. ಈ ಅಸಹನೆ -ಜಗಳದಿಂದ ಶುರುವಾಗಿ ಪರಸ್ಪರರನ್ನ ಒಳಗೊಳಗೆ ದ್ವೇಷಿಸುವ ಮಟ್ಟಕ್ಕೆ ಬೆಳೆಸುತ್ತೆ. ಆದ್ದರಿಂದ ಸಂಬಂಧಗಳಲ್ಲಿ ನಿರೀಕ್ಷೆಗಳನ್ನ ಇಡದಿದ್ದಲ್ಲಿ ಅವು ಬಹುಕಾಲ ಬಾಳುತ್ತೆ ಅನ್ನೋದು ನನ್ನ ಅಭಿಪ್ರಾಯ

  10. Pramod

    ಬದಲಾಗುವ ನಿರೀಕ್ಷೆಗಳು, ಪದೇ ಪದೇ ಪರೀಕ್ಷೆಗಳನ್ನು ತ೦ದೊಡ್ಡುವ ಹೊಸ ಹೊಸ ಸ೦ಬ೦ಧದೊಳಗಿನ ಸವಾಲುಗಳು, ಜಾಸ್ತಿ ಪ್ರೀತಿ ಕೊಟ್ಟು ಇನ್ನೂ ಜಾಸ್ತಿ ಪ್ರೀತಿಯ ಹ೦ಬಲಿಸುವ ಹಸಿದ ಮನಸುಗಳು, ಪ್ರಾಯ ಸ೦ಬ೦ಧೀ ಸಮಸ್ಯೆಗಳ ನಡುವೆ ಪ್ರೀತಿ ವೈವಿಧ್ಯ ರೀತಿಯಾಗಿ ಹರಿದು, ಹ೦ಚಿ ವಿಚಿತ್ರ ರೂಪಗಳನ್ನು ಧರಿಸುತ್ತದೆ, ಬದ್ಧತೆ ಪ್ರೀತಿಯನ್ನು ಬ೦ಧಿಸುತ್ತದೆ.

  11. ಉಷಾಕಟ್ಟೆಮನೆ

    ಜುಗಲಬಂದಿ ಪ್ರಯೋಗ ಸಖತ್ತಾಗಿದೆ.ಇಬ್ಬರ ಬರಹಗಳೂ ಚೆನ್ನಾಗಿವೆ. ಗಂಭೀರವಾಗಿದೆ. ಮಾನವೀಯ ಸಂಬಂಧಗಳ ಬಗ್ಗೆ ಹೆಚ್ಚು ಒತ್ತು ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು

  12. Uma Prakash

    <> ಇಬ್ಬರೂನೂ ಚನ್ನಾಗಿ ಬರೆದಿದ್ದೀರಾ 🙂 Awesome

  13. Uma Prakash

    Musicnalli ‘Jugalbandi’ nodidde; EE reethi ‘jugalbandi’ article praprathama baarige Odide ! Amazing 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading