ಸುಧಾ ಆಡುಕಳ ಕಂಡಂತೆ ಸಾವಿತ್ರಿಬಾಯಿ ಫುಲೆ…

ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಸುಧಾ ಆಡುಕಳ

ಚಲನೆಯಿಲ್ಲದ ಯಾವುದೇ ಸಮಾಜ ನಿಂತ ನೀರಿನಂತೆ ಕೊಳೆತು ಕ್ರಮೇಣ ನಾರತೊಡಗುತ್ತದೆ. ಕಾಲದೊಂದಿಗೆ ಮೌಲ್ಯಗಳೂ ಬದಲಾವಣೆಗೊಂಡು ಸಮಾಸವಾಗುತ್ತ ನಡೆದಾಗ ಆರೋಗ್ಯಕರವಾದ ಸಮಾಜ ನಿರ್ಮಾಣವಾಗುತ್ತದೆ. ಸಂಪ್ರದಾಯಗಳ ಹೆಸರಿನಲ್ಲಿ ವಿಧಿಸಲಾದ ಕಟ್ಟೆಳೆಗಳನ್ನು ಮುರಿದು, ಹೊಸ ಬೆಳಕಿನೆಡೆಗೆ ಸಾಗುವ ಮಾರ್ಗ ತೋರಿಸಿದವರೆಲ್ಲ ಸಮಾಜಸುಧಾರಕರೆಂಬ ಗೌರವಕ್ಕೆ ಪಾತ್ರರಾಗುತ್ತಾರೆ.

ಸಾಮಾನ್ಯವಾಗಿ ಸಮಾಜಸುಧಾರಕರು ಅವರ ಆಸಕ್ತಿಯ ಒಂದೊಂದು ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆಯನ್ನು ತರಲು ಹೋರಾಡಿದರೆ, ದೂರದರ್ಶಿತ್ವವುಳ್ಳ ಕೆಲವರು ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಅಂತಹ ವಿರಳ ಗುಂಪಿಗೆ ಸೇರಿದವರಲ್ಲಿ ಫುಲೆ ದಂಪತಿಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.

ಪುರುಷರು ಸಮಾಜಸುಧಾರಣೆಯ ಹರಿಕಾರರಾಗುವುದು ಸಾಮಾನ್ಯವಾದರೂ, ಸಾವಿತ್ರಿಬಾಯಿ ಫುಲೆ ತನ್ನ ಸಂಗಾತಿ ಜ್ಯೋತಿಬಾರೊಂದಿಗೆ ಸರಿಸಮಾನವಾಗಿ ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡದ್ದು ನಿಜಕ್ಕೂ ಆದರ್ಶಪ್ರಾಯವಾಗಿದೆ. ಹಿಂದುಳಿದವರು, ದಲಿತರು ಮತ್ತು ಸ್ತ್ರೀಯರ ಅಭ್ಯುದಯಕ್ಕಾಗಿ ಈ ದಂಪತಿಗಳು ನಡೆಸಿದ ಹೋರಾಟ ಅವಿಸ್ಮರಣೀಯವಾದ್ದದ್ದು.

ದೇಶದ ಮೊದಲ ಮಹಿಳಾ ಶಿಕ್ಷಕಿ ಎಂಬ ಗೌರವಕ್ಕೆ ಪಾತ್ರರಾದ ಸಾವಿತ್ರಿಬಾಯಿಯವರು ಮಹಾರಾಷ್ಟçದ ಸತಾರಾ ಜಿಲ್ಲೆಯಲ್ಲಿ ೧೮೩೧ ಜನವರಿ ೩ರಂದು ಜನಿಸಿದರು. ಒಂಭತ್ತನೆಯ ವಯಸ್ಸಿನಲ್ಲಿ ಅವರ ವಿವಾಹವು ಜ್ಯೋತಿಬಾರೊಂದಿಗೆ ನಡೆಯಿತು. ಮದುವೆಯಲ್ಲಿ ಮಿಷನರಿಯೊಬ್ಬರಿಂದ ಉಡುಗೊರೆಯಾಗಿ ಬಂದ ಪುಸ್ತಕವನ್ನು ಆಸೆಗಣ್ಣಿನಿಂದ ನೋಡುತ್ತಿದ್ದ ಪತ್ನಿಯ ಓದುವ ಆಸಕ್ತಿಯನ್ನು ಗುರುತಿಸಿದ ಜ್ಯೋತಿಬಾ ತಾವೇ ಅವರಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು.

ಪುಣೆಯಲ್ಲಿ ಸಿಂಥಿಯಾ ಪರೇರಾ ಅವರು ನಡೆಸುತ್ತಿದ್ದ ಮಿಷನರಿ ಶಾಲೆಯಲ್ಲಿ ಸಾವಿತ್ರಿಬಾಯಿಯವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸರಕಾರಿ ಕಾಲೇಜಿನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದುಕೊಂಡರು. ತಮ್ಮ ಊರಿನಲ್ಲಿ ಜಾತಿ, ಲಿಂಗ, ಧರ್ಮಬೇಧವಿಲ್ಲದೇ ಎಲ್ಲರಿಗೂ ಪ್ರವೇಶ ನೀಡುವ ಶಾಲೆಯನ್ನು ಕೇವಲ ಒಂಭತ್ತು ವಿದ್ಯಾರ್ಥಿಗಳೊಂದಿಗೆ ಆರಂಭಿಸಿದರು.

ಆಂಗ್ಲಭಾಷಾ ಶಿಕ್ಷಣದ ಅಗತ್ಯವನ್ನು ಮನಗಂಡಿದ್ದ ಅವರು ಇದರೊಂದಿಗೆ ತಮ್ಮ ಶಾಲೆಯಲ್ಲಿ ವಿಜ್ಞಾನ, ಗಣಿತ ಮತ್ತು ಇತಿಹಾಸ ಬೋಧನೆಗೆ ವಿನೂತನವಾದ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡರು. ಇದರಿಂದಾಗಿ ಅವರ ಶಾಲೆಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ೧೫೦ರಷ್ಟಾಯಿತಲ್ಲದೇ ಹುಡುಗಿಯರ ಸಂಖ್ಯೆಯೇ ಹೆಚ್ಚಾಗುತ್ತ ಸಾಗಿತು.

ಇದು ಅಂದಿನ ಸಂಪ್ರದಾಯವಾದಿಗಳ ಕಣ್ಣನ್ನು ಕೆಂಪಾಗಿಸಿತು. ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರೆ ಅವರು ಅಪರಿಚಿತ ಗಂಡುಗಳಿಗೆ ಪತ್ರವನ್ನು ಬರೆಯುತ್ತಾರೆಂಬ ಸುದ್ದಿಯನ್ನು ಹಬ್ಬಿಸಿದರೂ, ಸಾವಿತ್ರಿಬಾಯಿಯವರ ಜನಪ್ರಿಯತೆ ಮಾತ್ರ ಕುಗ್ಗಲಿಲ್ಲ. ಇದರಿಂದ ಕ್ರುದ್ಧಗೊಂಡ ಮೇಲ್ವರ್ಗದವರು ಅವರ ಶಾಲೆಯನ್ನು ಮುಚ್ಚಿಸುವ ಹುನ್ನಾರ ಮಾಡಿದರು. ದಾರಿಯಲ್ಲಿ ಸಾವಿತ್ರಿಬಾಯಿ ನಡೆದುಕೊಂಡು ಹೋಗುವಾಗ ಅವರ ಮೈಮೇಲೆ ಸಗಣಿ ಮತ್ತು ಕೊಳೆತ ಹಣ್ಣುಗಳನ್ನು ಎಸೆದರು.

ಸಾವಿತ್ರಿಬಾಯಿ ಇದನ್ನು ತನಗೆ ಸಿಕ್ಕಿದ ಬಹುಮಾನವೆಂದು ಭಾವಿಸುವುದಾಗಿ ಹೇಳಿ, ಶಾಲೆಯಲ್ಲಿ ಬದಲಾಯಿಸಲು ಇನ್ನೊಂದು ಸೀರೆಯನ್ನು ಒಯ್ಯತೊಡಗಿದರು. ಶಾಲೆಯನ್ನು ಮುಚ್ಚಿಸುವ ತಮ್ಮ ಎಲ್ಲ ಪ್ರಯತ್ನಗಳೂ ವಿಫಲವಾದಾಗ ಊರಿನ ಮುಂದಾಳುಗಳೆಲ್ಲ ಸೇರಿ ಜ್ಯೋತಿಬಾ ಅವರ ತಂದೆಯನ್ನು ಬೆದರಿಸಿ ದಂಪತಿಗಳನ್ನು ಮನೆಯಿಂದ ಹೊರಹಾಕುವಲ್ಲಿ ಸಫಲರಾದರು.

ದಿಕ್ಕುಗಾಣದೇ ನಿಂತ ದಂಪತಿಗಳಿಗೆ ಆಶ್ರಯ ನೀಡಿದ್ದು ಗೆಳೆಯರಾದ ಉಸ್ಮಾನ್ ಶೇಖ್. ಅವರ ತಂಗಿ ಫಾತಿಮಾ ಶೇಖ್ ಶಿಕ್ಷಕ ತರಬೇತಿಯಲ್ಲಿ ಸಾವಿತ್ರಿಬಾಯಿಯವರ ಸಹಪಾಠಿಯಾಗಿದ್ದರು. ಗೆಳತಿಯರಿಬ್ಬರು ಸೇರಿಕೊಂಡು ತಮ್ಮ ಮನೆಯಲ್ಲಿಯೇ ಹುಡುಗಿಯರಿಗಾಗಿ ಶಾಲೆಯನ್ನು ತೆರೆದರು. ಫಾತಿಮಾ ಶೇಖ್ ಮುಸ್ಲಿಂ ಸಮಾಜದ ಮೊದಲ ಶಿಕ್ಷಕಿಯಾಗಿ ಹೊರಹೊಮ್ಮಿದರು. ಜ್ಯೋತಿಬಾ ಅವರು ಪ್ರಗತಿಪರ ಗೆಳೆಯರೊಂದಿಗೆ ಸೇರಿಕೊಂಡು ಶಿಕ್ಷಣಸೇವಾ ಸಂಸ್ಥೆಯೊಂದನ್ನು ಪ್ರಾರಂಭಿಸಿದರು.

ಇದರಿಂದಾಗಿ ಅವರು ಪುಣೆಯ ಸುತ್ತಮುತ್ತಲೂ ಹೆಣ್ಣುಮಕ್ಕಳಿಗಾಗಿ ೧೮ ಶಾಲೆಗಳನ್ನು ತೆರೆದರು. ಅವರ ಶಾಲೆಗಳಲ್ಲಿ ವಿಧವೆಯರಿಗೆ, ಹಿಂದುಳಿದವರಿಗೆ, ಬಡವರಿಗೆ ಪ್ರವೇಶವಿತ್ತು. ಜೊತೆಯಲ್ಲಿ ಎಲ್ಲರಿಗೂ ಆಂಗ್ಲಭಾಷೆಯ ಶಿಕ್ಷಣವನ್ನು ನೀಡುಲಾಗುತ್ತಿತ್ತು. ಇವರ ಕಾರ್ಯವೈಖರಿಯಿಂದ ಮತ್ಸರಗೊಂದ ಸಂಪ್ರದಾಯವಾದಿಗಳು ಅವರನ್ನು ಸಮಾಜದಿಂದ ಬಹಿಷ್ಕರಿಸಿದರೂ ಫುಲೆ ದಂಪತಿಗಳು ಅವರ ಬೆದರಿಕೆಗೆ ಸೊಪ್ಪು ಹಾಕಲಿಲ್ಲ. ಸಾವಿತ್ರಿಬಾಯಿಯವರು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸಲು “ನಡೆ, ಶಿಕ್ಷಣ ಪಡೆ” ಎಂಬ ಕ್ರಾಂತಿಗೀತೆಯನ್ನು ರಚಿಸಿದರು.

ಆ ಕಾಲದಲ್ಲಿ ವಿಧವೆಯರು ಮತ್ತು ಅತ್ಯಾಚಾರಕ್ಕೊಳಗಾದ ಹುಡುಗಿಯರ ಬಾಳು ತೀರ ಶೋಚನೀಯವಾಗಿತ್ತು. ಸತಿಪದ್ಧತಿ, ಕೇಶಮುಂಡನ, ಬಹಿಷ್ಕಾರ ಹೀಗೆ ನಾನಾ ವಿಧದ ಹಿಂಸೆಯನ್ನು ಅವರು ಅನುಭವಿಸಬೇಕಿತ್ತು. ಸಮಾಜದ ಕಟ್ಟಳೆಗಳನ್ನು ಮೀರಿ ಗರ್ಭಿಣಿಯರಾದ ಹುಡುಗಿಯರಿಗೆ, ವಿಧವೆಯರಿಗೆ ಗುಟ್ಟಾಗಿ ಹೆರಿಗೆ ಮಾಡಿಸಿ ಮಗುವನ್ನು ಸಾಯಿಸಲಾಗುತ್ತಿತ್ತು. ಇವೆಲ್ಲವನ್ನೂ ಕಂಡು ನೊಂದ ಪುಲೆ ದಂಪತಿಗಳು ಅಂತವರಿಗಾಗಿ ಬಾಲಹತ್ಯಾ ಪ್ರತಿಬಂಧಕ ಗೃಹಗಳನ್ನು ತೆರೆದರು.

ವಿಧವೆಯರಿಗಾಗಿ ವಸತಿನಿಲಯಗಳನ್ನು ತೆರೆದರಲ್ಲದೇ ಅಲ್ಲಿ ಕೇಶಮುಂಡನವನ್ನು ನಿಷೇಧಿಸಿದರು. ವಿಧವೆಯರಿಗೆ, ಅತ್ಯಾಚಾರಕ್ಕೊಳಗಾದವರಿಗೆ ಮದುವೆಗಳನ್ನು ಮಾಡಿಸತೊಡಗಿದರು. ಸಾವಿತ್ರಿಬಾಯಿಯವರು ಅನಾರೋಗ್ಯದಿಂದಾಗಿ ತವರಿನಲ್ಲಿರುವಾಗ ಆ ಊರಿನ ಮೇಲ್ಜಾತಿಯ ಯುವಕನೊಬ್ಬ ಕೆಳವರ್ಗದ ಹುಡುಗಿಯನ್ನು ಪ್ರೇಮಿಸಿ ಗರ್ಭಿಣಿಯಾಗಿಸಿದ್ದ. ಇದರಿಂದ ಕೋಪಗೊಂಡ ಊರಿನವರು ಅವರನ್ನು ಊರಿನ ತುಂಬ ಮೆರವಣಿಗೆ ಮಾಡಿಸಿ, ಕೊಲ್ಲಿಸುವ ತೀರ್ಮಾನ ಮಾಡಿದರು.

ವಿಷಯ ತಿಳಿದೊಡನೆ ಸ್ಥಳಕ್ಕೆ ದೌಡಾಯಿಸಿದ ಸಾವಿತ್ರಿಬಾಯಿಯವರು ಪ್ರೇಮಿಗಳ ಹತ್ಯೆಗೆ ಬ್ರಿಟಿಷ್ ಸರಕಾರ ನೀಡುವ ಕಠಿಣ ಶಿಕ್ಷೆಯನ್ನು ಜನರ ಗಮನಕ್ಕೆ ತಂದು ಪ್ರೇಮಿಗಳನ್ನು ಅವರಿಂದ ಪಾರುಮಾಡಿದರು. ಆದರೆ ನಾಗರಿಕ ಮದುವೆಯ ರಿವಾಜುಗಳಿಲ್ಲದ ಆ ಕಾಲದಲ್ಲಿ ಪ್ರೇಮವಿವಾಹವನ್ನು ಮಾಡಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಇದನ್ನರಿತ ಫುಲೆ ದಂಪತಿಗಳು ಸರಳ ಮದುವೆಯ ವಿಧಾನವನ್ನು ಬೋಧಿಸಿದರು.

ಈ ಮದುವೆಯಲ್ಲಿ ವಧುವರರಿಗೆ ಪರಸ್ಪರ ಗೌರವಿಸುವ ಮತ್ತು ಕಡ್ಡಾಯವಾಗಿ ಶಿಕ್ಷಣವನ್ನು ಪಡೆದುಕೊಳ್ಳುವ ಪ್ರತಿಜ್ಞೆಗಳನ್ನು ಬೋಧಿಸಲಾಗುತ್ತಿತ್ತು. ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಅವರು ಸತ್ಯಶೋಧಕ ಸಮಾಜ ಎಂಬ ಸೇವಾಸಂಸ್ಥೆಯನ್ನು ಕಟ್ಟಿದರು. ಸಾವಿತ್ರಿಬಾಯಿಯವರ ಸೇವಾಕಾರ್ಯಗಳನ್ನು ಮನಗಂಡ ಬ್ರಿಟಿಷ್ ಸರಕಾರವು ಅವರಿಗೆ ೧೮೫೨ರಲ್ಲಿ ‘ರಾಜ್ಯಮಟ್ಟದ ಉತ್ತಮ ಶಿಕ್ಷಕಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಮಕ್ಕಳಿಲ್ಲದ ಫುಲೆ ದಂಪತಿಗಳು ವಿಧವೆ ತಾಯಿಯ ಮಗುವೊಂದನ್ನು ದತ್ತು ಪಡೆದು ಯಶವಂತನೆಂದು ಹೆಸರಿಟ್ಟು ಓದಿಸಿದರು. ವೈದ್ಯಪದವಿಯನ್ನು ಪಡೆದ ಯಶವಂತ ತಂದೆ-ತಾಯಿಯರಂತೆ ದೀನ-ದಲಿತರ ಆರೋಗ್ಯಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ಹೆಣ್ಣು ಗಂಡುಗಳ ನಡುವಿನ ಬೇಧಭಾವಗಳು ಇಲ್ಲವಾಗಬೇಕೆಂದು ಬೋಧಿಸಿದ ದಂಪತಿಗಳು ಅದನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದರು.

ಜ್ಯೋತಿಬಾ ತೀರಿಕೊಂಡಾಗ ಅವರ ಆಸೆಯಂತೆಯೇ ಚಿತೆಗೆ ಸಾವಿತ್ರಿಬಾಯಿಯವರೇ ಅಗ್ನಿಸ್ಪರ್ಶ ಮಾಡಿದರು. ಪತಿಯ ನಿಧನದ ನಂತರವೂ ಸೇವಾಕಾರ್ಯಗಳನ್ನು ಎಂದಿನಂತೆಯೇ ಮುಂದುವರೆಸಿದರು. ಮಹಾರಾಷ್ಟ್ರದಲ್ಲಿ ಪ್ಲೇಗು ಕಾಣಿಸಿಕೊಂಡಾಗ ಮಗನೊಂದಿಗೆ ಸೇರಿಕೊಂಡು ಬಡಜನರ ಶುಶ್ರೂಷೆಯನ್ನು ಮಾಡಿದರು. ಪ್ರತಿದಿನವೂ ಸಾವಿರಾರು ಮಕ್ಕಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಿದರು. ಹತ್ತುವರ್ಷದ ಬಾಲಕನೊಬ್ಬನಿಗೆ ಪ್ಲೇಗು ತಗುಲಿದಾಗ ಅವನನ್ನು ತನ್ನ ಹೆಗಲಮೇಲೆ ಹೊತ್ತುತಂದು ಆಸ್ಪತ್ರೆಗೆ ಸೇರಿಸಿದರು. ಆಗಲೇ ಅವರಿಗೂ ಪ್ಲೇಗ್ ತಗುಲಿ ೧೦ ಮಾರ್ಚ ೧೮೯೭ರಂದು ಕೊನೆಯುಸಿರೆಳೆದರು.

ಸಾವಿತ್ರಿಬಾಯಿ ಪುಲೆ ಉತ್ತಮ ಕವಯತ್ರಿಯೂ ಹೌದು. ‘ಕಾವ್ಯಪುಲೆ’, ‘ನಡೆ, ಶಿಕ್ಷಣ ಪಡೆ’ ಮೊದಲಾದ ಕವನ ಸಂಕಲನಗಳಲ್ಲದೇ ಅನೇಕ ಲೇಖನಗಳನ್ನೂ ಅವರು ಬರೆದಿದ್ದರು. ಅವರು ತಮ್ಮ ಪತಿಗೆ ಬರೆದ ಮೂರು ಪತ್ರಗಳಿಂದ ಅವರಿಬ್ಬರ ವಿಚಾರಧಾರೆಗಳ ಅರಿವನ್ನು ನಾವು ಪಡೆಯಬಹುದಾಗಿದೆ. ಅವರ ಸಮಗ್ರ ಸಾಹಿತ್ಯವನ್ನು ‘ಸಾವಿತ್ರಿ ಸಮಗ್ರ ವಾಙ್ಮಯ’ ಎಂಬ ಗ್ರಂಥವಾಗಿ ಪ್ರಕಟಿಸಲಾಗಿದೆ.

ದೇಶದಲ್ಲಿಯೇ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ತೆರೆದು, ಎಲ್ಲ ವರ್ಗಗಳ ಹುಡುಗಿಯರ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಜೀವನವನ್ನು ಮುಡಿಪಾಗಿಟ್ಟ ಅವರ ಗೌರವಾರ್ಥ ಮಹಾರಾಷ್ಟ್ರ ಸರಕಾರವು ಅವರ ಜನ್ಮದಿನವನ್ನು ‘ಬಾಲಿಕಾದಿನ’ ವಾಗಿ ಘೋಷಿಸಿದೆ. ಭಾರತದಲ್ಲಿ ದಲಿತ ಅಭಿವೃದ್ಧಿಯ ಹರಿಕಾರರಾದ ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರು ಫುಲೆ ದಂಪತಿಗಳನ್ನು ತಮ್ಮ ಗುರುವೆಂದು ಪರಿಗಣಿಸಿ ಗೌರವ ಸೂಚಿಸಿದ್ದಾರೆ.

‍ಲೇಖಕರು Admin

January 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: