ಮತ್ತೆ ಕಾಡಿದ ಕಾಡು…

ಸುಧಾ ಆಡುಕಳ
ದಟ್ಟ ಕಾಡಿನ ನಡುವೆ ಇರುವ ಪುಟ್ಟ ಊರಿನಿಂದ ಬಂದ ನನಗೆ ಕಾಡೇ ಮರೆತುಹೋಗುವಷ್ಟು ವರ್ಷಗಳಾದವು. ಇದೊಂದು ಪುಸ್ತಕ ಮತ್ತೆ ಬಾಲ್ಯಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ಆದರೆ ಬಾಲ್ಯಕಾಲದಲ್ಲಿ ನಮ್ಮೂರಿನ ಅನುಭವದಲ್ಲಿ ಕಾಡುಪ್ರಾಣಿಗಳೆಂದರೆ ಮನುಷ್ಯರು ಬೇಟೆಯಾಡಲು ಇರುವ ಸರಕುಗಳು ಎಂಬುದಷ್ಟೇ ನಮ್ಮ ಅರಿವಾಗಿತ್ತು. ಅದರಾಚೆಗೆ ಆ ಪ್ರಾಣಿಗಳಲ್ಲಿರುವ ಸೂಕ್ಷ್ಮ ಮನಸ್ಸು, ಅವುಗಳ ಆವಾಸಸ್ಥಾನದ ಮಿತಿಗಳು, ಬವಣೆಗಳು, ಅವುಗಳ ಬದುಕಿನ ಚಹರೆಗಳು… ಎಲ್ಲವನ್ನೂ ಸಂಜಯ್ ಗುಬ್ಬಿಯವರು ಕಥೆಗಳ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಮಾನವನ ಕಿರುಹಸ್ತಕ್ಷೇಪ ಅವುಗಳ ಜೀವನವನ್ನೇ ಅಲ್ಲಾಡಿಸಿಬಿಡುವ ದುರಂತವನ್ನು ಸಾಕ್ಷಿಸಮೇತವಾಗಿ ವಿವರಿಸುತ್ತಾ ಹೋಗುತ್ತಾರೆ.
ನಡುರಾತ್ರಿಯಲಿ ನಮಗೆ ಕೆಲವೊಮ್ಮೆ ಭೂಮಿ ಕಂಪಿಸುವಂತೆ ಕೂಗುವ ದನಿಯೊಂದು ಕೇಳುತ್ತಿತ್ತು. ಭಯದಿಂದ ಎಚ್ಚರಗೊಂಡಾಗ ಅಪ್ಪ ಅದು ಹೆಬ್ಬುಲಿಯ ಕೂಗೆಂದೂ, ಅದು ನೆಲಕ್ಕೆ ಬಾಯಿಕೊಟ್ಟು ಕೂಗುವುದರಿಂದ ನೆಲ ಕಂಪಿಸುತ್ತದೆಯೆಂದೂ ಕತೆ ಹೇಳುತ್ತಿದ್ದರು. ಬಾಗಿಲೇ ಇಲ್ಲದ ನಮ್ಮ ಮನೆಯೊಳಗೆ ಬಂದರೆ… ಎಂದರೆ ಹುಲಿಗಿರ್ತಿಗೆ ಬಾಳೆಕೊನೆ ಪೂಜೆ ಕೊಟ್ಟಿದ್ದರಿಂದ ಅದು ಬರಲಾಗದು ಎಂದು ಧೈರ್ಯ ತುಂಬುತ್ತಿದ್ದರು. ಮನೆಯ ಹಟ್ಟಿಯಿಂದ ಕರುಗಳನ್ನು ಕದ್ದೊಯ್ದ ಹುಲಿಗಳ ಸಾಲು, ಸಾಲು ಕಥೆಗಳು ನಮ್ಮೂರಿನಲ್ಲಿದ್ದವು. ಮರದ ಮೇಲೆ ಅಟ್ಟೆ ಕಟ್ಟಿ ಅಥವಾ ಬಂದೂಕನ್ನು ಉಳ್ಳದಲ್ಲಿ ಕಟ್ಟಿ ಹುಲಿಹೊಡೆಯುವ ಕ್ರಮವಿತ್ತು. ಕೊನೆಕೊನೆಗೆ ಅವೆಲ್ಲವೂ ಅಪಾಯವೆನಿಸಿ ವಿಷವಿಟ್ಟು ಸಾಯಿಸುತ್ತಿದ್ದರು.

ಪಟ್ಟೆಹುಲಿಯೊಂದನ್ನು ಬಂದೂಕಿನಿಂದ ಸಾಯಿಸಿ ಎರಡೆರಡು ದಿನ ಮನೆಯೆದುರು ನಿಲ್ಲಿಸಿಟ್ಟ ನಮ್ಮೂರ ಶೂರರು ನೆನಪಾದರು. ನೂರಾರು ಸಲ ಅದರೆದುರು ನಿಂತರೂ ಅದು ಪಾಪವೆಂಬ ಕನಿಕರ ಬಾಲ್ಯದಲ್ಲಿ ಬಂದಿರಲೇ ಇಲ್ಲ. ನನ್ನ ಪ್ರೀತಿಯ ಹಂಡಕರುವನ್ನು ಹೊತ್ತೊಯ್ದ ಹುಲಿಗೆ ಹಾಗೇ ಆಗಬೇಕು ಅನಿಸಿಬಿಟ್ಟಿತ್ತು. ಆದರೆ ಇಲ್ಲಿ ಲೇಖಕರು ಇಬ್ಬನಿಯ ಹುಲಿ ಎದುರು ಬಂದ ಕಥೆಯನ್ನು ಹೇಳುವಾಗ ಯಾಕೋ ಕಾಟಿಯೊಂದು ಆ ಹುಲಿಗೆ ಸಿಗಬೇಕಿತ್ತು ಅನಿಸಿತಲ್ಲದೇ ಬಾಲ್ಯದಲ್ಲಿ ಕಂಡ ಹುಲಿಯ ಸಾವು ಎಂಥ ಅನ್ಯಾಯವೆನಿಸಿ ಕಣ್ಣಂಚು ಒದ್ದೆಯಾಯಿತು. ನಿಜಕ್ಕೂ ಹುಲಿ ಅದೆಷ್ಡು ಮುದ್ದಾದ ಪ್ರಾಣಿ!
ತಾನು ದಾರಿಗಡ್ಡ ನಿಂತು ಮರಿಯನ್ನು ರಸ್ತೆ ದಾಟಿಸುವ ಆನೆ, ಮೂರು ಮರಿಗಳನ್ನು ಪ್ರಯಾಸದಿಂದ ಬೆಳೆಸುವ ಚಿರತೆ, ಬಾಳೆಮಂಡಿಯೊಳಗೆ ನುಗ್ಗಿ ಸೆರೆವಾಸದ ಶಿಕ್ಷೆ ಪಡೆಯುವ ಚಿರತೆ, ಬೆಂಕಿ, ಪಿಂಕಿ… ಅವುಗಳ ಸಾವು, ಕಾರ್ಯ, ಕಾರಣ, ಹೂರಣ… ಹೀಗೆ ಅವುಗಳ ಲೋಕದಲ್ಲೂ ಬರೆದು ಮುಗಿಸಲಾಗದಷ್ಟು ಕಥೆಗಳಿವೆ. ಚಿರತೆ ಶಾಲೆಗೆ ಬರುವುದು ಅಕ್ಷರ ಕಲಿಯಲೇನೂ ಅಲ್ಲ! ಆದರೆ ನಮ್ಮನ್ನು ಶಿಕ್ಷಿತರಾಗಿಸಲಿಕ್ಕಂತೂ ಹೌದು.

ವೀಕ್ಷಕ ಕ್ಯಾಮರಾಗಳ ಮೇಲೆ ವಿವಿಧ ಪ್ರಾಣಿಗಳು ಮಾಡುವ ಪ್ರಯೋಗಗಳು, ಪ್ರಹಾರಗಳ ಕಥೆಯಂತೂ ಬಿದ್ದೂ, ಬಿದ್ದು ನಗುವಷ್ಟು ಚೇತೋಹಾರಿಯಾಗಿವೆ. ಲದ್ದಿ ತಿಂದು ಬದುಕುವ ಪ್ರಾಣಿಗಳೂ ಇವೆ! ನಮ್ಮೂರ ಕಾಡಿನಲ್ಲಿದ್ದ ಬಸರಿಮರ ಇಷ್ಟೊಂದು ಜೋರಿದೆಯೆಂದು ಇಲ್ಲಿ ಓದಿಯೇ ಅರಿವಾದದ್ದು.
ಕಾಡೆಂದರೆ ಟಿ.ವಿ.ಯಲ್ಲಿ ಬರುವ ವೈಲ್ಡ್ ಲೈಫ್ ಚಾನೆಲ್ ಮತ್ತು ಅದರಲ್ಲಿ ಸಾಹಸಿಗರು ನಡೆಸುವ ಕಸರತ್ತುಗಳು ಎಂದಷ್ಟೇ ತಿಳಿದಿರುವ ನಮ್ಮ ಮಕ್ಕಳ ಕೈಗೆ ಅವಶ್ಯವಾಗಿ ಈ ಪುಸ್ತಕವನ್ನು ಹಿಡಿಸಬೇಕಾಗಿದೆ. ನವಕರ್ನಾಟಕ ಪುಸ್ತಕ ಪ್ರಕಟಿಸಿ ಪರಿಸರ ವಿಜ್ಞಾನಕ್ಕೆ ಕಾಣಿಕೆ ನೀಡಿದೆ






0 Comments