ಶನಿವಾರ ಸಂಜೆ 5:೩೦ ಕ್ಕೆ, ಕಿ. ರಂ. ನುಡಿಮನೆ, ಸುಚಿತ್ರ 36 ಬನಶಂಕರಿ 2 ನೇ ಹಂತ ಬೆಂಗಳೂರು 560070
ಹಂಸಲೇಖ ದೇಸಿ ಸಂಗೀತದ ಬಗ್ಗೆ ಮಾತನಾಡುತ್ತಾರೆ ಕನ್ನಡದ ಅಪರೂಪದ ಪ್ರತಿಭೆಗಳಲ್ಲಿ ಹಂಸಲೇಖ ಒಬ್ಬರು. ಪ್ರಜಾವಾಣಿ ಪತ್ರಿಕೆಯ ಮುದ್ರಣ ವಿಭಾಗದಲ್ಲಿ ಅಕ್ಷರ ಮೊಳೆ ಜೋಡಿಸುವವರಾಗಿ ವೃತ್ತಿ ಜೀವನ ಆರಂಭಿಸಿದ ಗಂಗರಾಜು ಅವರು ಹಂಸಲೇಖ ಆಗಿ ನಾಡಿಗೆ ಪರಿಚಿತರಾದ ಗಾಥೆಯೇ ವಿಶಿಷ್ಟವಾದದ್ದು. ಬಾಲ್ಯದಿಂದಲೂ ಲಾವಣಿಗಳು ಮತ್ತು ಭಜನಾ ಮಂಡಳಿಗಳ ಸಹವಾಸದಲ್ಲಿ ಬೆಳೆದ ಹಂಸಲೇಖ ಅವರಿಗೆ ಗೀತೆಗಳನ್ನು ಬರೆಯುವ ಹವ್ಯಾಸ ಸಣ್ಣವರಿದ್ದಾಗಲೇ ಕೈ ಹತ್ತಿತು. ಬೆಳೆದಂತೆ ಕನ್ನಡ ರಂಗಭೂಮಿಯ ನಂಟು ರೂಢಿಸಿಕೊಂಡು ತಮ್ಮದೇ ವೃತ್ತಿರಂಗ ತಂದ ಕಟ್ಟಿಕೊಂಡು ರಾಜ್ಯವನ್ನೆಲ್ಲಾ ಅಲೆದದ್ದೂ ಉಂಟು.
1970 ರ ದಶಕದಲ್ಲಿಯೇ ‘ತ್ರಿವೇಣಿ’ ಸಿನಿಮಾಗೆ ‘ನೀನಾ ಭಗವಂತಾ’ ಎಂಬ ಹಾಡು ಬರೆದರಾದರೂ ಪೂರ್ಣ ಪ್ರಮಾಣದಲ್ಲಿ ಸಿನಿಮಾ ನಂಟು ಬೆಳೆಸಿಕೊಂಡದ್ದು 1986 ರ ನಂತರ. ರವಿಚಂದ್ರನ್ ರ ಗೆಳೆತನದ ಜೊತೆಗೆ ಅವರ ಸಿನಿಮಾಗಳಿಗೆ ಹಾಡುಗಳನ್ನು ಬರೆಯುತ್ತಾ 1987 ರಲ್ಲಿ ‘ ಪ್ರೇಮಲೋಕ ‘ ಸಿನಿಮಾಗೆ ಇವರು ಆಡಿದ ಸಂಗೀತ ಸಂಯೋಜನೆ ಕನ್ನಡ ಜನ ಸಾಮಾನ್ಯರಲ್ಲಿ ಶಾಶ್ವತವಾಗಿ ಉಳಿಯಿತು. ಅಲ್ಲಿಂದ ಇಲ್ಲಿಯವರೆಗೆ ಐನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾವಿರಾರು ಗೀತೆಗಳನ್ನ ರಚಿಸಿದ್ದಾರೆ ಈ ಹಾದಿಯಲ್ಲೇ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು ಈಗ ಡಾಕ್ಟೊರಲ್ ಥೀಸೀಸ್ ಸಹ ಸಿದ್ದಪಡಿಸುತ್ತಿರುವ ಹಂಸಲೇಖ ಅವರು ಭಾರತೀಯ ಸಂಗೀತವನ್ನು ಪಾಶ್ಚಾತ್ಯ ಸಂಗೀತದ ‘ನೋಟ್ಸ್’ಗಳಿಗೆ ಹೊಂದುವಂತೆ ಬರೆದು ಶ್ರೇಷ್ಠ ಸಂಗೀತ ತಜ್ಞರನ್ನೂ ಬೆರಗುಗೊಳಿಸಿದ್ದಾರೆ.
ಈಗ ತಮ್ಮ ಎಲ್ಲಾ ಸಂಶೋಧನೆಗಳನ್ನೂ ಹೊಸ ತಲೆಮಾರಿಗೆ ಕಲಿಸಲೆಂದು ದೇಸಿ ಸಂಗೀತ ಶಾಲೆಯನ್ನು ಆರಂಭಿಸಿದ್ದಾರೆ. ದ್ರಾವಿಡ ವಿಶ್ವವಿದ್ಯಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ದೇಸಿ ಸಂಗೀತ ಶಾಲೆ ಕನ್ನಡ ಲೋಕಕ್ಕೆ ಹೊಸ ಸಂಗೀತಗಾರರನ್ನು ಶ್ರುತಿಗೊಳಿಸುತ್ತಾ ಇದ್ದಾರೆ. ಕನ್ನಡದ ಪ್ರಾಚೀನ ಕಾವ್ಯಗಳಿಗೆ ಸಹ ಸಂಗೀತ ಸಂಯೋಜನೆ ಮಾಡಿರುವ ಹಂಸಲೇಖ ರನ್ನ, ಪಂಪ ಮತ್ತು ಜನ್ನರನ್ನು ಕನ್ನಡ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ದೇಸಿ ಸಂಗೀತ ಈ ದೇಶದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಲಿಖಿತ ಇತಿಹಾಸವಿದೆ. ಆದರೆ ದೇಸಿ ಸಂಗೀತ ಪದ್ಧತಿಯನ್ನು ಜನಪದ ಎಂದು ಮೌಖಿಕ ಪರಂಪರೆಯ ಅಡಿಯಲ್ಲಿ ಗುರುತಿಸುವ ಅಭ್ಯಾಸವಿದೆ. ಆದರೆ ಈ ದೇಸಿ ನೆಲೆಗಳಿಂದಲೇ ಶಾಸ್ತ್ರೀಯ ಸಂಗೀತದ ಎಲ್ಲ ಧಾರೆಗಳು ಹುಟ್ಟಿ ಬಂದಿರುವುದು ವಿದ್ವಾಂಸರು ಬಲ್ಲ ವಿಷಯ.
ಈ ದೇಸಿ ಮಾರ್ಗಗಳ ನಡುವೆ ಕಳೆದು ಹೋಗಿರುವ ನಮ್ಮ ಜನಪದದ ಬೇರುಗಳಲ್ಲಿ ದೇಸಿ ಸಂಗೀತ ಇಂದಿಗೂ ಜೀವಂತವಾಗಿವೆ. ಈ ಚಿರಂಜೀವಿ ಸಂಗೀತದ ನೆಲೆಗಳನ್ನು ಇಂದಿನ ಪೋಶಾಕಿನಲ್ಲಿಯೇ ಹುಡುಕಿ ಉಳಿಸಬೇಕಾದ ಅಗತ್ಯವಿದೆ. ಹೀಗಾಗಿ ಈ ದೇಸಿ ಸಂಗೀತದ ಎಲ್ಲ ನೆಲೆಗಳನ್ನೂ ಆ ಸಂಗೀತದ ವಿಶ್ವ ರೂಪ ದರ್ಶನವನ್ನೂ ಮಾಡಿಕೊಳ್ಳುವುದು ಸಮಕಾಲಿನ ಸಂಧರ್ಭದ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಹಲವು ಕಾಲದಿಂದ ಸಂಶೋಧನ ನಿರತರಾಗಿರುವ ಹಂಸಲೇಖ ಅವರು ತಮ್ಮ ಸಂಶೋಧನೆಯ ಹಾದಿಯಲ್ಲಿ ಕಂಡುಕೊಂಡ ಸತ್ಯಗಳನ್ನು ಸಾದೋಹರಣವಾಗಿ ಅನಾವರನಗೊಳಿಸಿದ್ದಾರೆ. ಮೇ 28 ರಂದು ಕಿ.ರಂ. ನುಡಿಮನೆಯಲ್ಲಿ ಸಂಜೆ 5:30 ರಿಂದ ನಡೆವ ಸಾಹಿತ್ಯಸಂಜೆಯಲ್ಲಿ ತಾವೂ ಭಾಗವಹಿಸಿ ನಮ್ಮ ಮೂಲ ಬೇರುಗಳ ಅನ್ವೇಷಣೆಯಲ್ಲಿ ಸಂವಾದಿಗಳಾಗಿ ಭಾಗಿಯಾಗಬೇಕು.







0 Comments