ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಘೋಷ್ ಬರೆದ ಕಥೆ: ಎರಡೂ ಕಾಲು ಅಡಿ

ಸುಘೋಷ್ ಎಸ್ ನಿಗಳೆ ವೃತ್ತಿ ಆರಂಭಿಸಿದ್ದು ಪತ್ರಕರ್ತನಾಗಿ. ರಂಗಭೂಮಿ ಹವ್ಯಾಸವಾಗಿತ್ತು. ಆದರೆ ಕೆಲವೊಮ್ಮೆ  ಮುಖ್ಯ ಗಾಯಕನ ಬದಲಾಗಿ ಪಕ್ಕ ವಾದ್ಯದವರೇ ಮಿಂಚುವಂತೆ ಇವರ ಹವ್ಯಾಸ ವೃತ್ತಿಯನ್ನೂ ಮೀರಿ ನಿಂತಿದೆ.
ಈಗ ಅವರು ನಾಟಕದಲ್ಲಿ ನಟಿಸುವುದಷ್ಟೇ ಅಲ್ಲ, ಸೆಟ್, ಲೈಟಿಂಗ್ ಎಲ್ಲಕ್ಕೂ ಕೈ ಹಾಕುತ್ತಾರೆ. ಪರಿಣಾಮ ಕಿರುತೆರೆಗೂ ಎಂಟ್ರಿ ಪಡೆದಿದ್ದಾರೆ. ಟಿ ಎನ್ ಸೀತಾರಾಂ ಅವರ ‘ಮುಕ್ತ, ಮುಕ್ತ’ ದಲ್ಲಿ ಇವರು ಈಗಾಗಲೇ ಸಾಕಷ್ಟು ಪಾಪ್ಯುಲರ್.
ಅವರು ಲೇಖನ ಬರೆದಿದ್ದು ಗೊತ್ತು, ಚಾನಲ್ ಗೆ ಪಿ ಟಿ ಸಿ ಮಾಡಿದ್ದು ಗೊತ್ತಿತ್ತು. ಆದರೆ ಕಥೆ ಬರೆದಿದ್ದು..? ಬಿಲ್ ಕುಲ್ ಗೊತ್ತಿರಲಿಲ್ಲ.ಅದನ್ನು ಗೊತ್ತು ಮಾಡಿಕೊಟ್ಟದ್ದು ಈ ಬಾರಿ ತರಂಗ ಯುಗಾದಿ ವಿಶೇಷಾಂಕ.
ಅವರದ್ದೇ ತಮಾಷೆ, ಗಂಭೀರತೆ ಬೆರತ ಶೈಲಿಯಲ್ಲಿರುವ ಈ ‘ಎರಡೂಕಾಲು ಅಡಿ’ ಓದಿ.

ಎರಡೂಕಾಲು ಅಡಿ
-ಸುಘೋಷ್ ಎಸ್. ನಿಗಳೆ
ಅದು ಕೇವಲ ಆಕಸ್ಮಿಕವೇ ಗೊತ್ತಿಲ್ಲ. ಹೀಗೇಕೆ ಎಂದು ಮಂಜುನಾಥ ತನ್ನನ್ನು ತಾನೇ ಲಕ್ಷ ಬಾರಿಯಾದರೂ ಕೇಳಿಕೊಂಡಿದ್ದಾನೆ. ನಿಟ್ಟುಸಿರಿನ ಹೊರತು ಬೇರೇನೂ ಹೊಳೆದಿಲ್ಲ ಆತನಿಗೆ. ಆದರೆ ಪ್ರತಿಕ್ಷಣ, ಪ್ರತಿದಿನ ಆಗುವ ಅವಮಾನ ಸಹಿಸುವುದಂತೂ ಶಕ್ಯವೇ ಇರಲಿಲ್ಲ. ಅಲ್ಲೇ ಮೆಜೆಸ್ಟಿಕ್ಕಿನಲ್ಲಿ ಕೂರುವ ಗಿಣಿಶಾಸ್ತ್ರದವ ಹೇಳಿದ್ದ, “ಚಿಂತೆ ಮಾಡಬೇಡ. ನೀನು ಕುಳ್ಳನಾಗಿ ಹುಟ್ಟಿರುವುದು ನಿನ್ನ ಪೂರ್ವ ಸಂಚಿತ ಕರ್ಮ. ನೀನು ಸರ್ಕಸ್ ನಲ್ಲಿ ಜೋಕರ್ ಆಗಿರಬಹುದು. ಆದರೆ ಮುಂದೊಂದು ದಿನ ಜಗತ್ತಿನ ಸುಂದರಿಯೊಬ್ಬಳು ನಿನಗೆ ಒಲಿಯಲಿದ್ದಾಳೆ” ಎಂದು. ಈ ಗಿಣಿ ಶಾಸ್ತ್ರದವನ ತಲೆ ಅರ್ಧಮರ್ಧವಲ್ಲ, ಸಂಪೂರ್ಣ ಕೆಟ್ಟಿದೆ. ಈತನಿಗಿಂತ ಟಿವಿಯಲ್ಲಿ ಬರುವ, ಕಾರ್ಯಕ್ರಮ ಆರಂಭವಾಗುತ್ತಲೇ ಸಂಸ್ಕೃತ ಶ್ಲೋಕಗಳಿಂದ ವೀಕ್ಷಕರನ್ನು ನಿಬ್ಬೆರಗಾಗಿಸುವ ಜ್ಯೋತಿಷಿಗಳ ಬಳಿ ತನ್ನ ಸಂಕಟ ತೋಡಿಕೊಂಡಿದ್ದರೆ ಪರಿಹಾರವಾದರೂ ಸೂಚಿಸುತ್ತಿದ್ದರೇನೋ ಎಂದು ಅನಿಸಿತ್ತು ಮಂಜುನಾಥನಿಗೆ. ಆದರೆ ಅವರಿಗೆ ನೀಡುವಷ್ಟು ದಕ್ಷಿಣೆ ಸದಾ ತೂತು ಬಿದ್ದಿರುತ್ತಿದ್ದ ಜೇಬಿನಲ್ಲಿ ಇರಲಿಲ್ಲವಾಗಿ ಸುಮ್ಮನಾಗಿದ್ದ. ತನ್ನಂಥ ಕುಳ್ಳರ ಸಮಸ್ಯೆಯನ್ನು ಯಾರಾದರೂ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳುತ್ತಾರೇನೋ ಎಂದು ಕಾದೇ ಕಾದ. ಅಂತಹ ಅಮೃತ ಘಳಿಗೆ ಮಾತ್ರ ಎಂದೂ ಬರಲೇ ಇಲ್ಲ. ನಸೀಬು ತೆರೆಯಲೇ ಇಲ್ಲ.
ಮಂಜುನಾಥನ ಸಮಸ್ಯೆಯೆಂದರೆ ಆತನ ಎತ್ತರ. ವಯಸ್ಸು ಮೂವತ್ತು ತುಂಬುತ್ತಿದ್ದರೂ ಬರೋಬ್ಬರಿ ಎರಡೂಕಾಲು ಅಡಿ ಮಾತ್ರವಿದ್ದ. ಹೀಗಾಗಿ ಚಿಕ್ಕವನಾಗಿದ್ದನಿಂದಲೂ ಒಂದು ರೀತಿಯ ಕೀಳರಿಮೆಯನ್ನು ಸಹಜವೆಂಬಂತೆ ಬೆಳೆಸಿಕೊಂಡೇ ಬಂದಿದ್ದ. ಪ್ಯಾಂಟ್ ಕೊಳ್ಳಲೆಂದು ಅಂಗಡಿಗೆ ಹೋದರೆ, ಅಂಗಡಿಯವರು ಬೇಬಿ ಸೆಕ್ಷನ್ನಿಗೆ ಕಳಿಸುತ್ತಿದ್ದರು. ಅಲ್ಲಿದ್ದ ಸೇಲ್ಸ್ ಹುಡುಗಿಯರು ಈತ ಪ್ಯಾಂಟ್ ಆಯ್ದುಕೊಳ್ಳುವುದನ್ನು ವಾರೆಗಣ್ಣಿನಲ್ಲಿ ನೋಡಿ ಕಿಸ-ಕಿಸ-ಪಿಸ-ಪಿಸ ಎಂದು ನಗುತ್ತಿದ್ದರು. ಆದರೆ ಏನೂ ಮಾಡುವ ಹಾಗಿರಲಿಲ್ಲ. ರೇಲ್ವೆ ನಿಲ್ಧಾಣದ ಒಳಗೆ ಹೋಗಬೇಕೆಂದರೆ ಪ್ಲಾಟ್ ಫಾರ್ಮ್ ಟಿಕೆಟ್ ವೆಂಡಿಂಗ್ ಮಷಿನ್ ನಿಲುಕತ್ತಲೇ ಇರಲಿಲ್ಲ. ಸಾರ್ವಜನಿಕ ಶೌಚಾಲಯಗಳಲ್ಲಂತೂ ಪ್ಯಾನ್ ತಲುಪದೇ ಹೇಗ್ಹೋಗೋ ಕಾರ್ಯ ಮುಗಿಸಬೇಕಾಗುತ್ತಿತ್ತು. ಕಿರಾಣಿ ಅಂಗಡಿ, ಹೋಟೆಲ್, ಸಿನಿಮಾ ಥಿಯೇಟರ್ –  ಹೀಗೆ ಎಲ್ಲೇ ಹೋದರೂ ಕೌಂಟರ್ ನಲ್ಲಿರುವವರಿಗೆ ಶ್ರೀ ಮಂಜುನಾಥೇಶ್ವರ ದರ್ಶನ ಆಗುತ್ತಲೇ ಇರಲಿಲ್ಲ. ದೂರದಿಂದ ಅವರ ಗಮನ ಸೆಳೆದು ನಂತರ ಸಾಮಾನು ಕೊಳ್ಳಬೇಕಿತ್ತು. ಒಂದೆರಡಲ್ಲ ರಗಳೆ.
ಭೌತಿಕ ತೊಂದರೆಗಳನ್ನು, ಅವಮಾನಗಳನ್ನು ಹೇಗೋ ಮರೆಯಬಹುದಾಗಿತ್ತು. ಆದರೆ ಆಂತರಿಕವಾಗಿ ಮಾತ್ರ ಕುಗ್ಗಿಹೋಗುತ್ತಿದ್ದ. ಎತ್ತರ, ಆತನನ್ನು ಪ್ರತಿಕ್ಷಣವೂ ಚುಚ್ಚಿ ಮಾನಸಿಕವಾಗಿ ಮತ್ತಷ್ಟು ಕುಬ್ಜನನ್ನಾಗಿ ಮಾಡುತ್ತಿತ್ತು. ಆದಿನ ಇನ್ನೂ ಚೆನ್ನಾಗಿ ನೆನಪಿದೆ. ಗಾಯದ ಮೇಲೆ ನಿಂಬೆಹಣ್ಣು ಹಿಂಡಿ, ಹುಣಿಸೆ ಹಣ್ಣಿನ ರಸ ಸೋರಿಸಿ, ಉಪ್ಪು ಹಾಕಿ ತಿಕ್ಕಿದ ದಿನವನ್ನೂ ಜೀವಮಾನವಿಡಿ ಮರೆಯಲು ಸಾಧ್ಯವಿಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈತನಿಗೆ, ಇದೀಗಷ್ಟೇ ಕತ್ತರಿಗಾಲು ಹಾಕಿ ಸೈಕಲ್ ಹೊಡೆಯಲು ಕಲಿಯಲಾರಂಭಿಸಿದ್ದ ಹುಡುಗನೊಬ್ಬ ನೇರವಾಗಿ ಬಂದು ಡಿಕ್ಕಿ ಹೊಡೆದಿದ್ದ. ಒಂಬತ್ತು ಹತ್ತು ವರ್ಷದ ಹುಡುಗನಿರಬಹುದು. ಮಂಜುನಾಥ ಸರಿಯಾಗೇ ನಡೆದುಕೊಂಡು ಹೋಗುತ್ತಿದ್ದರೂ, ಹುಡುಗನೇ ತಪ್ಪಿ ಬಂದು ಗುದ್ದಿದ್ದ. ಬಿದ್ದ ಹೊಡೆತಕ್ಕೆ, ಈತನ ಶರೀರದ ಸುಮಾರು ಅರ್ಧದಷ್ಟಿದ್ದ ಈತನ ತಲೆ ರಸ್ತೆಯಲ್ಲಿ ಬಿದ್ದಿದ್ದ ಕಲ್ಲಿಗೆ ಸರಿಯಾಗಿ ಜಪ್ಪಿತು. ಒಂದು ಕ್ಷಣ ತಲೆ ದಿಂ ಎಂದಿತು. ಕೊಂಚ ಸಾವರಿಸಿಕೊಂಡ ನಂತರ ನಖಶಿಖಾಂತ ಕೋಪ ಉಕ್ಕುಕ್ಕಿ ಬಂತು. ಸಾಧ್ಯವೇ ಇರಲಿಲ್ಲ ಕೋಪದ ಸುನಾಮಿಯನ್ನು ತಡೆಯಲು. ಎದ್ದವನೇ ನೇರವಾಗಿ ಹೋಗಿ ಕಷ್ಟಪಟ್ಟು ತುದಿಗಾಲ ಮೇಲೆ ನಿಂತು ಹುಡುಗನ ಕಪಾಳಕ್ಕೆ ಸರಿಯಾಗಿ ಬಿಗಿದ.
‘ಸಾರಿ ಅಂಕಲ್’ ಎಂದು ಹೇಳಲು ಹೊರಟಿದ್ದ ಹುಡುಗ, ಈ ಪ್ರತಿಕ್ರಿಯೆಯಿಂದ ಅವಾಕ್ಕಾದ. ಆತನಿಗೂ ಕೋಪ ಉಕ್ಕುಕ್ಕುಕ್ಕುಕ್ಕಿ ಬಂತು. ಚೋಟುದ್ದ ಇರುವ ಈತನಿಗೇ ಇಷ್ಟು ಕೊಬ್ಬಿರಬೇಕಾದರೆ ತನಗೆಷ್ಟಿರಬೇಡ ಎಂದುಕೊಂಡು ಮಂಜುನಾಥನ್ನು ಅಂಗಾತ ಕೆಡವಿ ಆತನ ಎದೆಯ ಮೇಲೆ ಕುಳಿತು ಕೆನ್ನೆಗೆ ಹೊಡೆಯಲಾರಂಭಿಸಿದ. “ಯೂ ಬಾಸ್ಟರ್ಡ್….ವಾಟ್ ಡು ಯೂ ಥಿಂಕ್ ಆಫ್ ಯುವರ್ ಸೆಲ್ಫ್…ಇಷ್ಟು ಕುಳ್ಳಗಿದ್ದೀಯಾ, ಆದರೂ ಹೊಡೆಯಲು ಬರುತ್ತೀಯಾ” ಎನ್ನುತ್ತಾ ನಿರಂತರವಾಗಿ ಎರಡೂ ಕೆನ್ನೆಗಳಿಗೆ ಛಟೀರನೇ ಬಾರಿಸತೊಡಗಿದ. ನಿರ್ಜನ ಪ್ರದೇಶವಾದ್ದರಿಂದ ನಿರಂತರವಾಗಿ ಏಟುಗಳು ಬೀಳತೊಡಗಿದವು. ದೂರದಿಂದ ನೋಡಿದ ಒಂದಿಬ್ಬರು ಕೂಡ, ಮಕ್ಕಳು ಆಟವಾಡುತ್ತಿದ್ದಾರೆ ಎಂದು ತಮ್ಮ ಪಾಡಿಗೆ ತಾವು ಹಾದಿ ಸವೆಸಿದರು. ಇನ್ನು ಹೀಗೇ ಸುಮ್ಮನಿದ್ದರೆ ಏಟುಗಳು ನಿಲ್ಲುವುದಿಲ್ಲ ಎಂದು ಕೊಂಡು ಜೋರಾಗಿ ಬೊಬ್ಬಿಡತೊಡಗಿದ. ಬೊಬ್ಬೆ ಕೇಳಿ ಸುತ್ತಮುತ್ತಲಿನ ಮನೆಯವರು ಬಾಗಿಲು ತೆರೆದು ಹೊರಬರಲಾರಂಭಿಸಿದರು. ಇದರಿಂದ ಹೆದರಿದ ಹುಡುಗ ತಕ್ಷಣ ಸೈಕಲ್ ಏರಿ ಓಡಿಹೋದ. ಜನ ಬಂದು ಮಂಜುನಾಥನನ್ನು ಎದ್ದು ಕೂಡಿಸಿ ನೀರು ಕುಡಿಸಿದರು. ಏನಾಯಿತು ಎಂದು ವಿಚಾರಿಸಿದರು. ಸತ್ಯವೇ ನಮ್ಮ ತಾಯಿ ತಂದೆ ಎಂದು ಚಿಕ್ಕಂದಿನಿಂದ ಕಲಿಯುತ್ತ ಬಂದಿದ್ದರಿಂದ, ಅಳುಕುತ್ತಲೇ ಸತ್ಯವನ್ನಲ್ಲದೇ ಬೇರೆನನ್ನೂ ಹೇಳಲಿಲ್ಲ. “ಅಲ್ಲಯ್ಯ, ವಾಮನ ಮೂರ್ತಿ. ನಿನಗಾದ್ರೂ ಬುದ್ಧಿ ಬೇಡ್ವ, ಚೋಟುದ್ದ ಇದೀಯ ನಾಯಿ ಕುನ್ನಿ ಬಂದು ಸವರಿಕೊಂಡು ಹೊದ್ರೂ ಬೀಳುತ್ತೀಯ. ಅಂತಹುದರಲ್ಲಿ ಆ ಹುಡುಗನಿಗೆ ಏಕೆ ಹೊಡೆಯಲು ಹೋದೆ?” ಎಂದು ಜರಿ ಪಂಚೆ, ಶಲ್ಯ, ನಾಮಗಳಲ್ಲಿ ಕಂಗೊಳಿಸುತ್ತಿದ್ದ ವ್ಯಕ್ತಿ ಮಂಜುನಾಥನನ್ನೇ ತರಾಟೆಗೆ ತೆಗೆದುಕೊಂಡಿತು. ಮತ್ತೊಬ್ಬ ಮಹಿಳೆ, ಸ್ವಲ್ಪ ಉದಾರತೆಯಿಂದ ಬಹುವಚನ ಬಳಸಿ, “ಅಲ್ರೀ ಮಿಸ್ಟರ್, ಹೊಡೆಯುವ ಮೊದಲು ಪರ್ಸನಾಲಿಟಿ ನೋಡಬೇಕ್ರಿ. ನಿಮ್ಮಂತವರು ಯಾವಾಗಲೂ ಡಿಫೆನ್ಸಿವ್ ಆಗಿರಬೇಕ್ರಿ. ಅದು ಬಿಟ್ಟು ಚಿಕ್ಕಮಗು ಅಂತ ಹೊಡೆಯೋಕಾಗತ್ತ…” ಎಂದು ಆಕ್ಷೇಪ ಭರಿತ ಧ್ವನಿಯಲ್ಲಿ ಸಲಹೆ ನೀಡಿತು. ಆ ಹುಡುಗ ಪ್ರಚಂಡ ಪುಂಡನಾದ ತನ್ನ ಮಗನೇ ಎಂಬುದರಲ್ಲಿ ಆ ಮಹಿಳೆಗೆ ಯಾವುದೇ ಸಂಶಯವರಲಿಲ್ಲ. ಮಾಡಿದ್ದುಣ್ಣೋ ಮಹಾರಾಯ ಎಂದುಕೊಂಡು, ಹೆಚ್ಚು ಮಾತನಾಡಿದರೆ ಈ ಸುಶಿಕ್ಷಿತರಿಂದ ಕೂಡ ಏಟು ಬೀಳಬಹುದೆಂದು ಹೆದರಿ ಜಾಗದಿಂದ ತನ್ನ ಪ್ರಷ್ಠಭಾಗವನ್ನು ಕದಲಿಸಿದ.
ಕೆನ್ನೆಗೆ ಬಿದ್ದ ಏಟಿಗಿಂತ ಮನಸ್ಸಿಗೆ ಬಿದ್ದ ಹೊಡೆತಗಳು ಹೆಚ್ಚು ಘಾಸಿಯನ್ನುಂಟುಮಾಡಿದ್ದವು. ಅಲ್ಲ, ತಾನು ಏನೋ ಒಂದು ಕಾರಣಕ್ಕೆ ಕುಳ್ಳನಾಗಿ ಹುಟ್ಟಿರಬಹುದು. ಆದರೆ, ತನ್ನ ಮೇಲೆ ಕರುಣೆ ಹೋಗಲಿ, ಕನಿಷ್ಟ ಮಾನವೀಯತೆಯನ್ನು ತೋರಿಸದಷ್ಟು ನಿರ್ಲಜ್ಜವಾಯಿತೆ ಸಮಾಜ ಎಂದು ಯೋಚಿಸಿದ. ಮತ್ತೆ ಮತ್ತೆ ಆ ಹುಡುಗನ ಮುಖ, ಆತ ನೀಡಿದ ಏಟುಗಳೇ ಹಲವು ವರ್ಷ ಕಾಡಿದ್ದವು.
ಮಂಜುನಾಥನ ತಂದೆ-ತಾಯಿ ಆತ ಹುಟ್ಟುತ್ತಲೇ ಕೈಬಿಟ್ಟಿದ್ದರು. (ಮೋರಿಯಲ್ಲೋ, ತಿಪ್ಪೆಯಲ್ಲೋ ಎಸೆದಿರಲಿಲ್ಲ ಎಂಬುದೇ ಹೆಮ್ಮೆಯ ಸಂಗತಿ). ಹೀಗಾಗಿ ಮಠವೊಂದರಲ್ಲಿ ಉಳಿದುಕೊಂಡು ಹತ್ತನೆ ತರಗತಿಯವರೆಗೆ ಚೆನ್ನಾಗಿ ಓದಿದ್ದ. ನಂತರ ಗೆಳೆಯರು ಒತ್ತಾಯಿಸಿದರೂ, ತನ್ನ ಕುಳ್ಳತನದಿಂದ ಕುಗ್ಗಿಹೋಗಿದ್ದ ಆತ, ಕರೆಸ್ಪಾಂಡೆನ್ಸ್ ಮೂಲಕವೇ ಪಿಯುಸಿ ಮುಗಿಸಿದ್ದ. ಈ ಹಂತದಲ್ಲೇ ಆತನ ಬದುಕಿನ ದಿಕ್ಕು ಬದಲಾಗಿದ್ದು.
ಪಿಯುಸಿ ಮುಗಿಸಿಕೊಂಡು ಕೆಲಸಕ್ಕಾಗಿ ಅಲೆಯುತ್ತಿದ್ದ ಆತನ ಕಣ್ಣಿಗೆ ಸಮೀಪದ ಊರಿಗೆ ಸರ್ಕಸ್ ಬಂದಿರುವ ವಿಚಾರ ತಿಳಿಯಿತು. ಸರ್ಕಸ್ ನಲ್ಲಿ ಕುಳ್ಳಗಿರುವವರು ಜೋಕರ್ ಆಗಬಹುದು ಎಂದು ಕೇಳಿದ್ದ. ಅದೃಷ್ಟ ಪರೀಕ್ಷೆಗೆಂದು ಸರ್ಕಸ್ ಟೆಂಟ್ ಒಳಗೆ ಹೊಕ್ಕ. ಮಾಲೀಕರನ್ನು ಭೇಟಿಯಾದ. ಈತನ ಕುಳ್ಳತನದಿಂದ ಅತ್ಯಂತ ಸಂತಸಗೊಂಡ ಸರ್ಕಸ್ ಮಾಲೀಕ ತಕ್ಷಣ ಮಂಜುನಾಥನನ್ನು ಕೆಲಸಕ್ಕೆ ನೇಮಿಸಿಕೊಂಡ. ತನ್ನ ಕುಳ್ಳತನದಿಂದ ನಿಜವಾಗಿಯೂ ಸಂತಸಪಟ್ಟ ಜಗತ್ತಿನ ಮೊಟ್ಟ ಮೊದಲ ವ್ಯಕ್ತಿಯನ್ನು ಮಂಜುನಾಥ ನೋಡಿದ್ದ. ಇದರಿಂದ ಖುಷಿಪಡಬೇಕೆ ಬೇಸರಿಸಬೇಕೆ ಎಂಬುದು ಮಾತ್ರ ಆತನಿಗೆ ತಿಳಿಯಲಿಲ್ಲ.
ಮೊದಮೊದಲು ಚಿತ್ರವಿಚಿತ್ರ ಬಟ್ಟೆ ಧರಿಸಿ, ಮುಖಕ್ಕೆ ಬಣ್ಣ ಹಾಕಿಕೊಂಡು, ಮೂಗಿಗೆ ಬಾಲ್ ಕಟ್ಟಿಕೊಂಡು ಜನರ ಮುಂದೆ ಹುಚ್ಚನಂತೆ ಪೆಕರುಪೆಕರಾಗಿ ಆಡುವುದು ಸಾಧ್ಯವಾಗಲೇ ಇಲ್ಲ. ಆದರೆ, ನಿಧಾನವಾಗಿ ಸರ್ಕಸ್ ಬದುಕಿಗೆ, ಜೋಕರ್ ಪಾತ್ರಕ್ಕೆ, ಜೀವನದ ಹಾಸ್ಯಕ್ಕೆ ಒಗ್ಗಿಕೊಂಡ.
ಸರ್ಕಸ್ ನಲ್ಲಿದ್ದ ಕೆಲ ಜೋಕರ್ ಗಳು ಈತನಿಗಿಂತಲೂ ಕುಳ್ಳಗಿದ್ದರು ಎಂಬ ಒಂದೇ ಒಂದು ವಿಚಾರ ಈತನಿಗೆ ಸಮಾಧಾನ, ಥ್ರಿಲ್ ನೀಡಿತ್ತು. ತನಗಿಂತ ವಯಸ್ಸಿನಲ್ಲಿ ಹಿರಿಯರಿದ್ದರೂ, ದೈಹಿಕವಾಗಿ ಕುಳ್ಳರಿದ್ದುದರಿಂದ ಕೀಳರಿಮೆ ಕಾಡಿದಾಗಲೆಲ್ಲ ಅವರ ಬಳಿ ಹೋಗಿ ಮಾತನಾಡುವ ನೆಪದಲ್ಲಿ ಅವರ ಹೆಗಲ ಮೇಲೆ ಕೈಹಾಕಿ ತಾನು ಅವರಿಗಿಂತ ಎತ್ತರವಾಗದ್ದೇನೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದ.
ಸರ್ಕಸ್ ನಲ್ಲಿ ಅತ್ಯಂತ ಹಿಂಸೆ ಕೊಡುತ್ತಿದ್ದ ಆಟವೆಂದರೆ ಜಾದೂಗಾರ ಫ್ರಾನ್ಸಿಸ್ ನದ್ದು. ಏಳಡಿ ಎತ್ತರವಿದ್ದ ಯೂಸೂಫ್ ನನ್ನು ಫ್ರಾನ್ಸಿಸ್ ದೊಡ್ಡದಾದ ಪೆಟ್ಟಿಗೆಯೊಂದರಲ್ಲಿ ಹಾಕಿ ಬೃಹತ್ತಾದ ಸುತ್ತಿಗೆಯಿಂದ ಪೆಟ್ಟಿಗೆಯ ಮೇಲ್ಭಾಗದಲ್ಲಿ ಹೊಡೆಯುತ್ತ, ಅದನ್ನು ಚಿಕ್ಕದಾಗಿ ಮಾಡುತ್ತ ಬರುತ್ತಿದ್ದ. ಡಬ್ಬ ಒಂದು ಹಂತದಲ್ಲಿ ತುಂಬ ಚಿಕ್ಕದಾದ ಕೂಡಲೇ ಅದರೊಳಗಿನಿಂದ ಮಂಜುನಾಥ ಹೊರಬಂದು ಜನರೆದುರು ನಿಲ್ಲುತ್ತಿದ್ದ. ಫ್ರಾನ್ಸಿಸ್ ತನ್ನ ಪಿರ್ರೆಯನ್ನು ಹಿಂದಕ್ಕೆ ಮಾಡಿ ಕೈಯನ್ನು ಹೊಟ್ಟೆಗೆ ಅಡ್ಡ ಹಿಡಿದು ಜನರ ಚಪ್ಪಾಳೆ ಗಿಟ್ಟಿಸುತ್ತಿದ್ದ. ಪೆಟ್ಟಿಗೆಯಲ್ಲಿ ಕೂರಬೇಕಾದರೆ ಮಂಜುನಾಥನಿಗೆ ತೀರ ದುಃಖವಾಗುತ್ತಿತ್ತು. ವಿಧಿ ಸುತ್ತಿಗೆಯ ರೂಪದಲ್ಲಿ ತನ್ನ ವ್ಯಕ್ತಿತ್ವವನ್ನೇ ನುಚ್ಚುನೂರು ಮಾಡುತ್ತಿದೆ ಎನಿಸುತ್ತಿತ್ತು. ಮತ್ತೇ ಅದೇ ಪೆಟ್ಟಿಗೆಯಲ್ಲಿ ಹೋಗಿ ಮಂಜುನಾಥ ಬಾಗಿಲು ಹಾಕಿಕೊಂಡ ಬಳಿಕ ಫ್ರಾನ್ಸಿಸ್ ಉದ್ದವಾದ ಹಗ್ಗದಿಂದ ಪೆಟ್ಟಿಗೆಯನ್ನು ಜಗ್ಗಿ ದೊಡ್ಡದಾಗಿ ಮಾಡುತ್ತಿದ್ದ. ಬಾಗಿಲು ತೆರೆದು ಯೂಸೂಫ್ ಹೊರಬರುತ್ತಿದ್ದ. ಮತ್ತೆ ಫ್ರಾನ್ಸಿಸ್ ನ ಪಿರ್ರೆ ಹಿಂದೆ ಹೋಗುತ್ತಿತ್ತು. ಯಾವಾಗಲಾದರೊಮ್ಮೆ ದೇವರ ಜಾದೂವಿನಿಂದ ಈ ಮಾನವನ ಈ ಜಾದೂ ನಿಜವಾಗಿ ಯೂಸೂಫ್ ನ ಎತ್ತರ ತನಗೆ ಬರಬಾರದೇ ಎಂದು ಮಂಜುನಾಥ ನೂರಾರು ಬಾರಿ ಅಂದುಕೊಂಡದ್ದುಂಟು.
ಸರ್ಕಸ್ ಊರಿನಿಂದ ಊರಿಗೆ ತಿರುಗುತ್ತಿತ್ತು. ಮಂಜುನಾಥನ ಬದುಕಿನ ಚಕ್ರ ಕೂಡ ಸುತ್ತಿ, ಸುತ್ತಿ 10 ವರ್ಷ ಕಳೆಯಿತು. ಆದರೆ, ಅತನ ಆರ್ಥಿಕ ಸ್ಥಿತಿ ಮತ್ತು ಎತ್ತರದಲ್ಲಿ ಯಾವುದೇ ವೃದ್ಧಿಯಾಗಲಿಲ್ಲ. ಬರಬರುತ್ತ ಪ್ರಾಣಿದಯಾಸಂಘಗಳ ಕಾಟದಿಂದ ಸರ್ಕಸ್ ನಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಪ್ರಾಣಿಗಳ ಸಂಖ್ಯೆ ಕಡಿಮೆಯಾದಂತೆ ಜೋಕರ್ ಗಳ ಮೇಲಿನ ಕೆಲಸದ ಒತ್ತಡ ಹೆಚ್ಚುತ್ತ ಹೋಯಿತು. ಒಮ್ಮೆಯಂತೂ ಚಿಂಪಾಂಜಿಗಳ ಸಂಖ್ಯೆ ಕಡಿಮೆಯಾದಾಗ ಕುಳ್ಳ ಜೋಕರ್ ಗಳನ್ನೇ ಚಿಂಪಾಂಜಿ ವೇಷ ಹಾಕಿ ರಿಂಗ್ ಮಧ್ಯೆ ಚಿಕ್ಕ ಸೈಕಲ್ ತುಳಿಯಲು ಬಿಟ್ಟರು. ಈ ಹಂತದಲ್ಲಿ ನಿಜವಾದ ಚಿಂಪಾಂಜಿಗಳು ಮಂಜುನಾಥನನ್ನು ಬೆದರಿಸಿ, ಪರಚುತ್ತಿದ್ದವು. ಆದರೆ, ವಯಸ್ಸು ಹೆಚ್ಚುತ್ತ ಹೋದಂತೆ ಎಂತಹುದೇ ಸನ್ನಿವೇಶಕ್ಕೂ ಒಗ್ಗಿಕೊಳ್ಳುವುದನ್ನು ಕಲಿತುಬಿಟ್ಟಿದ್ದ. ಶೋಷಣೆಗೆ ಒಳಗಾಗುವುದು ಆತನಿಗೆ ಅಭ್ಯಾಸವಾಗಿಬಿಟ್ಟಿತ್ತು.
ಶರೀರ ಎಷ್ಟೇ ಚಿಕ್ಕದಾಗಿದ್ದರೂ, ಶರೀರವೆಂಬುದು ಶರೀರ ತಾನೆ? ಮದುವೆಯಾಗಬೇಕೆಂದು ಹಲವು ಬಾರಿ ಅನ್ನಿಸುತ್ತಿತ್ತು. ಗಿಡ್ಡ ವ್ಯಕ್ತಿಯೊಬ್ಬ ಉದ್ದನೆಯ ಹುಡುಗಿಯನ್ನು ಮದುವೆಯಾದ ಎಂಬಂತಹ ಸುದ್ದಿಗಳನ್ನು ಪತ್ರಿಕೆಯಲ್ಲಿ ಓದುತ್ತಿದ್ದಾಗ ತಾನೇಕೆ ಮದುವೆಯಾಗಬಾರದು ಎಂದೂ ಅನಿಸುತ್ತಿತ್ತು. ಆದರೆ ಮದುವೆಯ ಪ್ರಯತ್ನ ಎಲ್ಲಿಂದ ಆರಂಭಿಸುವುದು ಎಂಬುದು ತಿಳಿಯದೇ ತಬ್ಬಿಬ್ಬಾಗುತ್ತಿದ್ದ.
ಈ ಮಧ್ಯೆ ಸರ್ಕಸ್ ನ ಆರ್ಥಿಕ ಸ್ಥಿತಿ ಕೂಡ ಹಡಾಲೆದ್ದು, ಇಡೀ ಕಂಪನಿಯನ್ನು ಮನುಷ್ಯರು, ಪ್ರಾಣಿಗಳ ಸಮೇತ ಸರ್ಕಸ್ ಮಾಲೀಕ, ರಷ್ಯಾದ ಸರ್ಕಸ್ ಕಂಪನಿಯೊಂದಕ್ಕೆ ಮಾರಿಬಿಟ್ಟ. ಎಲ್ಲರೂ ಇದರಿಂದ ತೀರ ದುಃಖದಲ್ಲಿದ್ದರೆ, ತನ್ನ ಮೋಟು ಕಾಲುಗಳನ್ನು ಕುಣಿಸಿ ಸಂತಸ ಪಟ್ಟವನು ಈತನೊಬ್ಬನೇ.
ಕಾರಣ ಸ್ಪಷ್ಟವಿತ್ತು. ರಷ್ಯನ್ ಸರ್ಕಸ್ ನಲ್ಲಿರುವ ಖ್ಯಾತ ಜಿಮ್ಯ್ನಾಸ್ಟಿಕ್ ತಾರೆ, ಯೂಲಿಯಾ ಕಲಾಷ್ಕಿಯನ್ನು ನೋಡಲು ಸಿಗುತ್ತದೆ ಎಂಬುದೇ ಮಹದಾನಂದಕ್ಕೆ ಕಾರಣವಾಗಿತ್ತು. ನಿಜ ಸಂಗತಿಯೆಂದರೆ, (ಅಯ್ಯಯ್ಯೋ..ಎಂಥಾ ನಾಚಿಕೆ…) ಯೂಲಿಯಾಳನ್ನು ಮಂಜುನಾಥ ಒಳಗೊಳಗೇ ಪ್ರೀತಿಸುತ್ತಿದ್ದ. ಯೂಲಿಯಾಳೊಡನೆ ಮಂಜುನಾಥನ ವಿವಾಹವೂ ಶೇ. 50 ರಷ್ಟು ನಿಶ್ಚಯವಾಗಿಹೋಗಿತ್ತು. ಅಂದರೆ, ಮದುವೆಗೆ ಈತ ಮನದಲ್ಲೇ ಒಪ್ಪಿದ್ದ. ಆಕೆ ಒಪ್ಪಬೇಕಿತ್ತಷ್ಟೇ.
ಕೊಕ್ಕರೆ ಬಣ್ಣ, ಕಾಡುಕೋಣದ ಸ್ನಾಯುಗಳಷ್ಟೇ ಬಿಗಿಯಾದ ಆದರೆ ಮೃದುವಾದ ಶರೀರ, ಗಿಣಿ ಮೂಗು, ಸಿಂಹ ಕಟಿ, ಮೊಲದ ಕಣ್ಣುಗಳ ಯಜಮಾನಿಯಾಗಿದ್ದ ಯೂಲಿಯಾ, ಸರ್ಕಸ್ ನಲ್ಲಿನ ಪ್ರತಿಯೊಬ್ಬರ ನಿದ್ದೆ ಗೆಡಿಸಿದ್ದಳು. ಅವಳನ್ನು ಪಡೆಯಲು ರಷ್ಯನ್ ಸರ್ಕಸ್ ನಲ್ಲಿ ವಿಶ್ವಯುದ್ಧಗಳೇ ನಡೆದು ಹೋಗಿದ್ದವು. ಗಡ್ಡ, ಕೆಲಸ ಎರಡೂ ಬಿಟ್ಟು ಹುಚ್ಚರಾದವರಿದ್ದರು. ಯೂಲಿಯಾಳ ಸೌಂದರ್ಯ ನೋಡಿ ಪ್ರಾಣಿಗಳೂ ಮೂರ್ಛೆ ಹೋಗುತ್ತವೆ ಎಂಬ ರೂಮರ್ ರಷ್ಯನ್ ಸರ್ಕಸ್ ನಲ್ಲಿ ಪ್ರಚಲಿತವಾಗಿತ್ತು.
ಇಂತಹ ಯೂಲಿಯಾಳೊಂದಿಗೆ ಪ್ರದರ್ಶನವನ್ನು ನೀಡುವ ಅದೃಷ್ಟ ಮಂಜುನಾಥನಿಗೆ ಒಲಿದಿತ್ತು. ಯೂಲಿಯಾ ತನ್ನ ಸಿಂಹಕಟಿಯಿಂದ ರಿಂಗ್ಸ್ ಗಳನ್ನು ಸುತ್ತಿಸುವಾಗ ಕೆಳಗೆ ಇಡಲಾಗುತ್ತಿದ್ದ ರಿಂಗ್ ಗಳನ್ನು ಆಕೆಗೆ ಎತ್ತಿ ಕೊಡುವ ಕೆಲಸ ಬಂದಿತ್ತು. ರಿಂಗ್ ಗಳನ್ನು ನೀಡುವ ನೆಪದಲ್ಲಿ ಅವಳ ಕಣ್ಣುಗಳಿಗೆ ಕಣ್ಣು ಕೂಡಿಸಲು ಪ್ರಯತ್ನ ನಡೆಸಲಾರಂಭಿಸಿದ. ಆದರೆ ತನ್ನ ಭಾಷೆ, ಸಂಸ್ಕೃತಿ ಏನೂ ಗೊತ್ತಿರದಿದ್ದ ಯೂಲಿಯಾ ತನ್ನನ್ನು ಮದುವೆಯಾಗುವುದು, ರಾಜಕಾರಣಿಯೊಬ್ಬ ಭ್ರಷ್ಟಾಚಾರ ಬಿಟ್ಟು ಪ್ರಾಮಾಣಿಕವಾಗುವಷ್ಟೇ ಅಸಂಭವವಾಗಿದೆ ಎಂಬುದು ಮಂಜುನಾಥನಿಗೆ ಗೊತ್ತಿತ್ತು. ಅದನ್ನು ಕೇಳುವ ಸ್ಥಿತಿಯಲ್ಲಿ ಮಾತ್ರ ಆತ ಇರಲಿಲ್ಲ. ಅದೂ ಅಲ್ಲದೇ ತನ್ನ ಎರಡೂ ಕಾಲು ಅಡಿ ದೇಹಕ್ಕೆ ಐದೂ ಮುಕ್ಕಾಲು ಅಡಿಯ ಯೂಲಿಯಾ ಮೆಚ್ಚಬಹುದೇ ಎಂಬ ಪ್ರಶ್ನೆ ಕೂಡ ಆತನ ಮನಸ್ಸಿನಲ್ಲಿ ಎದ್ದಿರಲಿಲ್ಲ.
“ಪ್ರೇಮ ಬ್ಲೈಂಡ್ ಎಂಬುದಷ್ಟೇ ಗೊತ್ತಿತ್ತು. ನಿನ್ನನ್ನು ನೋಡಿದ ಕೂಡಲೇ ಅದಕ್ಕೆ ಹೈಟೂ ಇಲ್ಲ ಎಂದು ತಿಳಿಯಿತು ನೋಡು” ಎಂದು ಇತರ ಕುಳ್ಳರು ಗೋಳುಹೊಯ್ದುಕೊಳ್ಳುತ್ತಿದ್ದರು. ಯಾರು ಏನೇ ಅಂದರೂ ನೇತ್ರ ದರ್ಶನ ಮತ್ತು ನೇತ್ರ ಸಂಪರ್ಕದ ಪ್ರಯತ್ನ ಮಾತ್ರ ಮುಂದುವರೆಯುತ್ತಿತ್ತು.
ಆದರೆ ಕೆಲವೇ ದಿನಗಳಲ್ಲಿ ಅಸಂಭವವಾದುದು ಸಂಭವಿಸಿಯೇ ಬಿಟ್ಟಿತು. ಕಂಬದಿಂದ ನರಸಿಂಹ ಪ್ರತ್ಯಕ್ಷನಾದ. ಹುಲಿ ಹುಲ್ಲು ತಿಂದಿತು. ಅಮೇರಿಕ ಆರ್ಥಿಕ ಭಯೋತ್ಪಾದನೆ ನಿಲ್ಲಿಸಿತು. ಮೆಜೆಸ್ಟಿಕ್ಕಿನಲ್ಲಿ ಹಸಿರು ಗಿಳಿ ಕೂರಿಸಿಕೊಂಡು ಭವಿಷ್ಯ ಹೇಳಿದ್ದವನ ಜ್ಯೋತಿಷ್ಯ ನಿಜವಾಯಿತು. ಸರ್ಕಸ್ ನ ಬೃಹತ್ ಪೆಂಡಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಖ್ಯಾತ ಜಿಮ್ಯ್ನಾಸ್ಟಿಕ್ ತಾರೆ ಮೊಲದ ಕಣ್ಣು ಸಿಂಹ ಕಟಿ ಇತ್ಯಾದಿ ಇತ್ಯಾದಿಗಳ ಯಜಮಾನಿ ಐದೂ ಮೂಕ್ಕಾಲು ಅಡಿಯ ಯೂಲಿಯಾ ಕಲಾಷ್ಕಿ ಎರಡೂ ಕಾಲು ಅಡಿಯ ಮಂಜುನಾಥನ್ನು ವರಿಸಿದಳು. ಈ ಸರಳ ಸಮಾರಂಭವನ್ನು ವೀಕ್ಷಿಸಿದ ಪ್ರಾಣಿಗಳು ಮೂರ್ಛೆ ತಪ್ಪಿದವು. ಮಂಜುನಾಥನ್ನು ಗೋಳು ಹೊಯ್ದು ಕೊಳ್ಳುತ್ತಿದ ಇತರ ಜೋಕರ್ ಗಳು ಪ್ರೀತಿಗೆ ಹೈಟಿಲ್ಲ ಎಂಬುದನ್ನು ಬಲವಂತವಾಗಿ ಅರಗಿಸಿಕೊಂಡರು. ಸರ್ಕಸ್ ತಂಡದ ಇತರ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಗಳು ಸೀದಾ ಬಾರ್ ಗಳಿಗೆ ನುಗ್ಗಿ ಸೋಡಾ ಮಿಕ್ಸ್ ಮಾಡಿಕೊಳ್ಳದೆ ರಾ ಕುಡಿದು ವ್ಯಾಕ್ ವ್ಯಾಕ್ ಮಾಡಿ ಕೊಂಡು ಫುಲ್ ಸುಸ್ತಾದರು.
ಕೆಲದಿನಗಳ ಬಳಿಕ ರಾಷ್ಟ್ರಮಟ್ಟದ ಇಂಗ್ಲೀಷ್ ಪತ್ರಿಕೆಯಲ್ಲಿ ಮಂಜುನಾಥ್ ಹಾಗೂ ಯೂಲಿಯಾ ಮಂಜುನಾಥ್ ವಿವಾಹ ಕುರಿತ ಸುದ್ದಿ ಫೋಟೋ ಸಹಿತ ಬಾಟಮ್ ಸ್ಟೋರಿಯಾಗಿ ಪ್ರಕಟಗೊಂಡಿತ್ತು. ಅಷ್ಟೇ ಅಲ್ಲ, ಒಳಪುಟದಲ್ಲಿ ಯೂಲಿಯಾಳ ಸಂದರ್ಶನವೂ ಇತ್ತು. “ನಿಮಗಿರುವ ಸೌಂದರ್ಯ, ಪ್ರತಿಭೆ, ವಯಸ್ಸಿಗೆ ಸುರಸುಂದರಾಂಗರನ್ನು ವರಿಸುವ ಆಯ್ಕೆ ಇದ್ದರೂ, ಮಂಜುನಾಥನನ್ನು ವರಿಸಿದ್ದೇಕೆ?” ಎಂಬ ಮೊದಲ ಪ್ರಶ್ನೆಗೆ ಯೂಲಿಯಾ ಉತ್ತರದ ಸಹಿತ.

‍ಲೇಖಕರು avadhi

17 March, 2010

9 Comments

  1. umesh desai

    ನಿಗಳೆಯವರೆ ಕಥೆ ಚೆನ್ನಾಗಿದೆ ಕುಳ್ಳ ವ್ಯಕ್ತಿ ನಿಜಜೀವನದಲ್ಲೂ ನಮ್ಮ ಬೆಳ್ಳಿತೆರೆಯಲ್ಲೂ ಯಾವಾಗಲೂ ನಗೆಪಾಟಲೀಗೀಡಾದ ವ್ಯಕ್ತಿ.
    ಒಳ್ಳೇ ನಿರೂಪಣೆ ಇದೆ. ಅಭಿನಂದನೆಗಳು..

    • bavivekrai

      ಮಾರ್ಮಿಕ ಮತ್ತು ಮಾನವೀಯ.ಸರ್ಕಸ್ ಬದುಕಿನ ವಿಷಾದವೂ ಹೌದು, ಈಗ ಸುಘೋಷ್ ಕತೆಯ ಮೂಲಕ ಸಾಧ್ಯತೆಯೂ ಹೌದು.ತೋರುವ ಮತ್ತು ತೋರಿಸುವ ಇಂದಿನ ಜಗತ್ತಿನಲ್ಲಿ ಸೇರುವಿಕೆಯ ಸಾಹಸ ರೋಮಾಂಚಕ.

  2. H. Anandarama Shastry

    ಉದ್ದನೆಯವರ ಎರಡೂ ಕಾಲು ಅಡಿ ಸಿಕ್ಕಿ ನರಳುವ ಎರಡೂಕಾಲು ಅಡಿಯವರ ಸುಖ-ದುಃಖದ ಅಂದವಾದ ಚಿತ್ರಣ.

  3. Madhu

    kathe poorthi agalillavalla… ulida bhaga?

  4. Ramesh Rao

    Kathe tumba chennagide.Abhinandanegalu.”Mukta Mukta” serialnallina Devanandana patradhari neeve taane,Abhinaya bahala chennagide

  5. chetana Teerthahalli

    Sughosh, kathe chenaagide.

  6. ಸುಘೋಷ್ ಎಸ್. ನಿಗಳೆ

    ಕಥೆಯನ್ನು ಓದಿದ-ಮೆಚ್ಚಿದ, ಓದಿರದ-ಮೆಚ್ಚಿರದ, ಓದಿದ-ಮೆಚ್ಚಿರದ, ಓದಿರದ-ಮೆಚ್ಚಿದ ಎಲ್ಲರಿಗೂ ಧನ್ಯವಾದ…..

  7. pratijna bhat

    kathe tumba chennagide…. heege bareyutta iri….

  8. K.VITTAL SHETTY

    olleya kathe. innu mugidillavenisitu. Bahala chennagi barediddiri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading