ಸುಂದರ ಕಾರವಾರವನ್ನು ಸುತ್ತುವರಿದ ವಿಷಾದ ಗೀತೆ

ಜಿ ಪಿ ಬಸವರಾಜು

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುತ್ತು ಹೋಗಿಬಂದರೆ ಜೀವ ಉಲ್ಲಾಸಗೊಳ್ಳುತ್ತದೆ. ದಟ್ಟ ಮತ್ತು ಭಯಾನಕವಾದ ಕಾಡು ಬೆಚ್ಚಿಬೀಳಿಸುತ್ತದೆಂಬುದೂ ನಿಜ. ಚಿರತೆ ಹುಲಿಗಳೂ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಎದುರಾಗುವುದೂ ಉಂಟು. ಈ ಕಾಡುಗಳಲ್ಲಿನ ನದಿಗಳು, ಝರಿಗಳು, ಜಲಪಾತಗಳು, ತೀರ ಅಪರೂಪದ ಜೀವ ವೈವಿಧ್ಯ ಮತ್ತು ಸಸ್ಯ ವೈವಿಧ್ಯ ನಮ್ಮ ನಿರಂತರ ಬೆರಗಿಗೆ ಕಾರಣವಾಗುತ್ತವೆ. ಒಂದು ಕಡೆ ಸಹ್ಯಾದ್ರಿಯ ಸಾಲು, ಮತ್ತೊಂದು ಕಡೆ ಉದ್ದಕ್ಕೆ ಚಾಚಿಕೊಂಡ (ಅರಬ್ಬೀ ಸಮುದ್ರದ) ಕಡಲ ತೀರ. ಎಲ್ಲಿಂದ ಹೊರಟರೂ ಉಲ್ಲಾಸವೇ ಎದುರಾದಂತೆ ಭಾಸವಾಗುತ್ತದೆ. ಉರಿಯುವ ಸೂರ್ಯ ಬೇಡವೆಂದರೆ, ದಟ್ಟಕಾಡಿನ ಪ್ರದೇಶಗಳನ್ನು ಹೊಕ್ಕು ತಣ್ಣಗೆ ತಿರುಗಾಡಬಹುದು.
ಈ ಚೆಲುವನ್ನು, ಉಲ್ಲಾಸದ ಘಟ್ಟಗಳನ್ನು ದಾಟಿ ನೋಡಿದರೆ ಇಲ್ಲಿಯೂ ಒಂದು ವಿಷಾದ ಗೀತೆ ಕೇಳುವುದುಂಟು. ಆ ಎಳೆಯನ್ನೇ ಹಿಡಿದು ಹೋದರೆ ತೀವ್ರ ನೋವಿನ, ಯಾತನೆಯ, ಸಂಕಟದ ಕೊನೆಯಿಲ್ಲದ ನದಿಯೊಂದು ಹರಿದು ಹೋಗುತ್ತಿರುವುದೂ ಕಂಡುಬರುತ್ತದೆ. ವಿಸ್ತಾರವಾದ, ಕರ್ನಾಟಕದಲ್ಲಿಯೇ ದೊಡ್ಡದಾದ ಈ ಜಿಲ್ಲೆಯಲ್ಲಿ ಜನಸಂಖ್ಯೆ ತೀರ ವಿರಳ; ಅದೂ ದಟ್ಟ ಕಾಡುಗಳಿರುವ ಭಾಗದಲ್ಲಂತೂ ಜನ ತೀರ ಅಪರೂಪ. ನಿಸರ್ಗ ಸಂಪತ್ತು ತುಂಬಿ ತುಳುಕುತ್ತಿರುವಂತೆ ಕಂಡರೂ, ಆಧುನಿಕ ಮನುಷ್ಯನ ತೀರದ ಆಸೆ ಗರಿಗೆದರಿ, ಈ ಸಂಪತ್ತಿನ ಕೊಳ್ಳೆಯೂ ಆರಂಭವಾಗಿರುವುದನ್ನು ಗುರುತಿಸಬಹುದು.
ಒಂದು ಕಾಲಕ್ಕೆ ಅಂಕೋಲೆಯಿಂದ ಹೊರಟು ಕಾರವಾರದತ್ತ ಪಯಣಿಸಿದರೆ ಅದ್ಭುತ ನೋಟಗಳು ಎದುರಾಗುತ್ತಿದ್ದವು. ಅಲ್ಲಲ್ಲಿ ತಿರುವುಗಳಲ್ಲಿ, ಎತ್ತರದ ಜಾಗಗಳಲ್ಲಿ ನಿಂತು ನೋಡಿದರೆ ಕಡಲು ತನ್ನ ಮೋಹಕತೆಯ ಬಲೆಯನ್ನು ಬೀಸುತ್ತಿತ್ತು. ಮೈಮರೆತು ನೋಡಿದಷ್ಟೂ ಸೊಬಗು ಮೆರೆಯುತ್ತಿತ್ತು. ಈಗ ಅಂಥ ನೋಟಕ್ಕೆ ಎಡೆಯೇ ಇಲ್ಲ. ನೀವು ಹಟತೊಟ್ಟು ನಿಂತರೆ ‘ಸೀಬರ್ಡ್’ ರೆಕ್ಕೆಗಳು ನಿಮ್ಮ ನೋಟವನ್ನು ತಡೆಯುತ್ತವೆ. ಭಾರತದ ನೌಕಾನೆಲೆಗಾಗಿ ನಿರ್ಮಾಣವಾಗಿರುವ ಈ ಜಾಗದ ಗೌಪ್ಯವನ್ನು ಕಾಪಾಡಲು ಎತ್ತರದ ಗೋಡೆಯನ್ನು ಉದ್ದಕ್ಕೂ ಕಟ್ಟಲಾಗಿದೆ. ಎಲ್ಲಿಗೇ ಹೋದರೂ ಈ ಗೋಡೆ ಚೀನಾಗೋಡೆಯಂತೆಯೇ ನಮ್ಮ ನೋಟವನ್ನು ತಡೆಯುತ್ತದೆ.
ನೌಕಾನೆಲೆ ಒಂದು ಬೃಹತ್ ಯೋಜನೆ. 1999ರಲ್ಲಿ ಆರಂಭವಾಗಿ 2005ರಲ್ಲಿ ಮುಕ್ತಾಯವಾದ ಈ ಯೋಜನೆಯ ಮೊದಲ ಹಂತ; 2011ರಲ್ಲಿ ಆರಂಭವಾಗಿರುವ ಎರಡನೇ ಹಂತದ ಕಾರ್ಯ; ಮುಂದೆ ಆರಂಭವಾಗಲಿರುವ ಮೂರನೇ ಹಂತದ ಕಾರ್ಯ ಮುಗಿದಾಗ ಇಡೀ ಭಾರತದಲ್ಲಿಯೇ ಇದೊಂದು ಬೃಹತ್ ನೌಕಾನೆಲೆಯಾಗುತ್ತದೆ. ಇಡೀ ಯೋಜನೆಗೆ ಮೂರು ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದೆಲ್ಲ ಪೂರ್ಣವಾದರೆ (ಸುಮಾರು 2020ರ ಹೊತ್ತಿಗೆ ಸಂಪೂರ್ಣಗೊಳ್ಳುವ ನಿರೀಕ್ಷೆ) ಇಲ್ಲಿ 60 ಪ್ರಮುಖ ಯುದ್ಧ ನೌಕೆಗಳು ನಿಲ್ಲಬಹುದು. ಹೆಲಿಕಾಪ್ಟರ್ಗಳು ಬಂದಿಳಿಯುವ ನಿಲ್ದಾಣಕ್ಕೂ ಇಲ್ಲಿ ಅವಕಾಶವಿದೆ. ಇನ್ನು ಸೈನಿಕರು? ಸುಮಾರು 300 ಅಧಿಕಾರಿಗಳು, 2500 ಸಿಬ್ಬಂದಿ ಇತ್ಯಾದಿ ಅಂಕಿಅಂಶಗಳು ಬೆಳೆಯುತ್ತಲೇ ಹೋಗುತ್ತವೆ. ಅವರಿಗೆಲ್ಲ ನಿವಾಸ, ಆಸ್ಪತ್ರೆ, ಶಾಲೆ, ಕಾಲೇಜು, ಕಚೇರಿ ಇತ್ಯಾದಿ ಇತ್ಯಾದಿ ಬೇಕೇಬೇಕಲ್ಲವೇ? ಈ ಪ್ರಪಂಚವೇ ಕಡಲತೀರವನ್ನು ಆವರಿಸಿಬಿಡುತ್ತದೆ.

ಭಾರತದ ರಕ್ಷಣೆಯ ದೃಷ್ಟಿಯಿಂದ ಇದೆಲ್ಲ ಇರಬೇಕಾದದ್ದೇ. ಆದರೆ ಈ ಕಾರಣಕ್ಕಾಗಿ ಒಕ್ಕಲೆದ್ದ ಕುಟುಂಬಗಳು ಎಷ್ಟು? ಅವರ ಸ್ಥಿತಿಗತಿ? ನಮ್ಮ ವಿಷಾದ ಗೀತೆ ಆರಂಭವಾಗುವುದೇ ಇಲ್ಲಿಂದ: 23 ಕಿ.ಮೀ.ಉದ್ದದ ತೀರ, ಸುಮಾರು ಹನ್ನೊಂದು ಸಾವಿರ ಎಕರೆಯಷ್ಟು ಭೂಮಿ, ಸುಮಾರು ಐದು ಸಾವಿರ ಕುಟುಂಬಗಳು-ಇದೆಲ್ಲವನ್ನು ಈ ಸೀಬರ್ಡ್ ಯೋಜನೆ ನುಂಗಿಹಾಕಿದೆ. ವಸತಿ ಕಳೆದುಕೊಂಡವರಲ್ಲಿ ಕೃಷಿಕರು ಮತ್ತು ಮೀನುಗಾರರೂ ಇದ್ದಾರೆ. ಇವರಿಗೆಲ್ಲ ಪುನರ್ವಸತಿ ಕಲ್ಪಿಸುವ ಹೊಣೆಯೂ ಸರ್ಕಾರದ ಮೇಲಿದೆ. ಈ ಕೆಲಸ ಈಗಾಗಲೇ ನಡೆದಿದ್ದರೂ ಅದು ಅಷ್ಟು ಸಮರ್ಪಕವಾಗಿಲ್ಲ. ಈ ಕಾರಣಕ್ಕಾಗಿ ಹೊಸ ನೆಲೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದ ಕೆಲ ಕುಟುಂಬಗಳು ಗೋವಾದತ್ತ ವಲಸೆ ಹೋಗಿವೆ. ಸುಮಾರು ಹದಿಮೂರು ಹಳ್ಳಿಗಳನ್ನೂ ಈ ಯೋಜನೆ ನಿರ್ನಾಮ ಮಾಡಿದೆ.
ಇದರ ಜೊತೆಗೆ ಕೊಂಕಣ್ ರೈಲ್ವೆಯ ಹಳಿಗಳೂ ಈ ಕಡಲತೀರದುದ್ದಕ್ಕೂ ಚಾಚಿಕೊಂಡು ಇನ್ನಷ್ಟು ಕುಟುಂಬಗಳ ಎತ್ತಂಗಡಿಗೆ ಕಾರಣವಾಗಿದೆ. ಈ ಎರಡೂ ಕಾರಣಗಳಿಂದ ಒಟ್ಟು ಎಂಟು ಸಾವಿರ ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ ಎಂಬುದನ್ನು ವಿವಿಧ ಅಂಕಿ ಅಂಶಗಳು ಹೇಳುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ದುರಂತದ ಪುಟಗಳು ಇಲ್ಲಿಗೇ ಕೊನೆಯಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ದಟ್ಟ ಕಾಡಿನಲ್ಲಿ ನುಸುಳಿ, ಆಳ ಕಣಿವೆಗಳಲ್ಲಿ ಹರಿದು, ಅರಬ್ಬೀ ಸಮುದ್ರವನ್ನು ಸೇರುವ ಕಾಳಿ ನದಿ ಒಂದು ಅದ್ಭುತ ಜೀವ ಚೈತನ್ಯ. ಈ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ (ಸೂಪಾ, ನಾಗ್ಝರಿ-1,2, ಕದ್ರಾ ಮತ್ತು ಕೊಡಸಳ್ಳಿ) ಜಲವಿದ್ಯುತ್ಗೆ ದಾರಿಮಾಡಿಕೊಡಲಾಗಿದೆ. ಇದಲ್ಲದೆ ಶರಾವತಿ ನದಿಗೆ ಗೇರುಸೊಪ್ಪಾ ಬಳಿ ಅಣೆಕಟ್ಟು ಕಟ್ಟಿ ಅಲ್ಲಿಂದಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ಎಲ್ಲ ಜಲ ವಿದ್ಯುತ್ ಯೋಜನೆಗಳಿಂದ ರಾಜ್ಯಕ್ಕೆ ಸಿಕ್ಕುತ್ತಿರುವ ವಿದ್ಯುತ್ತಿನ ಪ್ರಮಾಣ 1480 ಮೆಗಾವಾಟ್. ಸುಮಾರು ಎರಡು ದಶಕಗಳ ಹಿಂದೆ ವಿವಾದವನ್ನು ಹುಟ್ಟುಹಾಕಿದ, ಶಿವರಾಮ ಕಾರಂತರ ಮುಂದಾಳುತನದಲ್ಲಿ ವಿರೋಧೀ ಹೋರಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟ ಕೈಗಾ ಅಣುವಿದ್ಯುತ್ ಸ್ಥಾವರವೂ ಈ ಜಿಲ್ಲೆಯ ಮಡಿಲಲ್ಲೇ ಮಲಗಿರುವ ಕೂಸು. ಕೈಗಾದಿಂದ 440 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ದುರಂತದ ತೂಗುಕತ್ತಿಯೊಂದು ನಿರಂತರವಾಗಿ ನೆತ್ತಿಯ ಮೇಲೆ ತೂಗುವಂತೆ ಮಾಡಿರುವ ಈ ಅಣುವಿದ್ಯುತ್ ಸ್ಥಾವರ ಜಿಲ್ಲೆಗೆ ವರವಂತೂ ಅಲ್ಲ.
ಇದು ಸಾಲದೋ ಎನ್ನುವಂತೆ ಏಳನೆಯ ಜಲ ವಿದ್ಯುತ್ ಯೋಜನೆಯೊಂದು ತಲೆ ಎತ್ತುವ ಹುನ್ನಾರದಲ್ಲಿತ್ತು. ಆದರೆ ಸ್ಥಳೀಯರ ಪ್ರತಿರೋಧ ತೀವ್ರವಾಗಿ ಆ ಯೋಜನೆಯನ್ನು ಕೈಬಿಡಲಾಯಿತು.
ಹತ್ತಾರು ಹಳ್ಳಿಗಳು ಈ ಅಣೆಕಟ್ಟುಗಳ ಕಾರಣದಿಂದ ಮುಳುಗಿರುವುದು ನಿಜ. ಈ ಹಳ್ಳಿಗಳನ್ನು ಮತ್ತೆ ರೂಪಿಸುವ, ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತೆ ನೆಲೆ ಒದಗಿಸುವ ಕಾರ್ಯಗಳೂ ನಡೆದಿವೆ. ಈ ವಿಷಾದದ ನಡುವೆಯೂ ಸಮಾಧಾನದ ಸಂಗತಿ ಎಂದರೆ ಕೆಪಿಸಿಯ ಮುಖ್ಯ ಇಂಜಿನಿಯರ್ ಆಗಿ ಸೂಪಾದಲ್ಲಿ ಕೆಲಸ ಮಾಡುತ್ತಿದ್ದ (ಈಗ ಮುಖ್ಯ ಇಂಜಿನಿಯರ್-‘ಅನ್ವೇಷಣೆ’) ಶಂಕರ್ ದೇವನೂರ್ ಅವರಂಥ ಮಾನವೀಯ ಕಾಳಜಿಯ ಅಧಿಕಾರಿಗಳು. ಈ ಶಂಕರ್ ದೇವನೂರ ಎಂಥ ಅದ್ಭುತ ವ್ಯಕ್ತಿ ಎಂದರೆ ಎಲ್ಲ ದುರಂತಗಳನ್ನೂ ಮರೆಸುವ, ನಿಜವಾದ ಮನುಷ್ಯ ಪ್ರೀತಿಯನ್ನು ಬಿತ್ತುವ, ನೊಂದವರ ಹೊಸ ನೆಲೆಗಳನ್ನು ಕಟ್ಟುವ ಚೈತನ್ಯವಿರುವ ಅಧಿಕಾರಿ. ಇಂಥವರಿದ್ದರೆ ಜನ ನೆಮ್ಮದಿಯಿಂದ ಉಸಿರಾಡುತ್ತಾರೆ; ಸರ್ಕಾರದ ಬಗೆಗಿನ ಅವರ ರೋಷ ತಣ್ಣಗಾಗುತ್ತದೆ.
ಬಹಳ ಹಿಂದೆಯೇ ಈ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಗುರುತಿಸಿದ್ದರೂ, ಸ್ಥಳೀಯರಿಗೆ ಕೈತುಂಬ ಉದ್ಯೋಗವನ್ನು ದೊರಕಿಸುವ ಸಣ್ಣ ಸಣ್ಣ ಕೈಗಾರಿಕೆಗಳು, ಮೀನುಗಾರಿಕೆಯನ್ನು ಉತ್ತೇಜಿಸುವ ಯೋಜನೆಗಳು, ಕೃಷಿ ಮತ್ತು ಹಯನುಗಾರಿಕೆಗೆ ಬೆಂಬಲವಾಗಿ ನಿಲ್ಲಬಲ್ಲ ಚಟುವಟಿಕೆಗಳು ಇಲ್ಲಿಗೆ ಬಂದೇ ಇಲ್ಲ. ಇಷ್ಟೆಲ್ಲ ವಿದ್ಯುತ್ತನ್ನು ಇಲ್ಲಿ ಉತ್ಪಾದಿಸಿದರೂ ಈ ಜಿಲ್ಲೆಯಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ತಿನ ಪ್ರಮಾಣ ಕೇವಲ 20 ಮೆಗಾವಾಟ್ ಎಂದರೆ ಇಲ್ಲಿರಬಹುದಾದ ಕೈಗಾರಿಕೆಗಳ ಅಂದಾಜು ಯಾರಿಗಾದರೂ ಸಿಕ್ಕೀತು.
ದಾಂಡೇಲಿಯಲ್ಲಿರುವ ಕಾಗದದ ಕಾಖರ್ಾನೆಯಿಂದ ಈ ಜಿಲ್ಲೆಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚಾಗಿದೆ. ಈ ಕಾಖರ್ಾನೆ ತನ್ನ ಕಶ್ಮಲವನ್ನೆಲ್ಲ ಕಾಳಿ ನದಿಗೆ ತುಂಬುತ್ತ, ನದಿನೀರನ್ನು ಹೊಲಸು ಮಾಡುತ್ತಿದೆ ಎಂಬ ದೂರು ಬಹಳ ಹಳೆಯದು. ಇದನ್ನು ತಡೆಯುವ ಹೋರಾಟವನ್ನೂ ಈ ಜಿಲ್ಲೆಯ ಜನ ಮಾಡಿದರು. ಆದರೆ ಪ್ರಯೋಜನ ಮಾತ್ರ ಆಗಿಲ್ಲ ಎನ್ನುವಂಥ ಸ್ಥಿತಿ ಮುಂದುವರಿದಿದೆ.
ಇಲ್ಲಿ ಸಿದ್ದಿ, ಕುಣಬಿ, ಹಾಲಕ್ಕಿ, ಗೊಂಡ, ಗೌಳಿ ಬುಡಕಟ್ಟುಗಳಿವೆ. 400 ವರ್ಷಗಳ ಹಿಂದೆ ಪೋತರ್ುಗೀಸರು ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಗುಲಾಮರನ್ನಾಗಿ ತಂದ ಸಿದ್ದಿಗಳು ಈಗ ಈ ನೆಲದ ಮಕ್ಕಳೇ ಆಗಿದ್ದಾರೆ. ಹಾಲಕ್ಕಿ, ಗೊಂಡ, ಗೌಳಿ, ಕುಣಬಿಗಳು ಇಲ್ಲಿರುವ ಇತರೆ ಬುಡಕಟ್ಟು ಸಮುದಾಯಗಳು. ಇವರ ಸ್ಥಿತಿಗತಿಗಳನ್ನು ಸುಧಾರಿಸುವ ದಿಕ್ಕಿನಲ್ಲಿಯೂ ನಮ್ಮ ಸಕರ್ಾರಗಳು ಮಹತ್ವದ ಯೋಜನೆಗಳನ್ನು ರೂಪಿಸಿಲ್ಲ. ಇದೆಲ್ಲ ಈ ಜಿಲ್ಲೆಯ ದುರಂತ ಕತೆಯೇ.
ಇನ್ನು ಈ ಜಿಲ್ಲೆಯಲ್ಲಿರುವ ಸಾಂಸ್ಕೃತಿ ಸಂಪತ್ತಂತೂ ಬಹಳ ದೊಡ್ಡದು. ಯಕ್ಷಗಾನ, ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ, ಜಾನಪದ, ಬುಡಕಟ್ಟು ಔಷಧ, ಬುಡಕಟ್ಟು ಜ್ಞಾನ, ಸಾಹಿತ್ಯ ಇತ್ಯಾದಿ. ಈ ಸಂಪತ್ತಿಗೆ ಎಷ್ಟೊಂದು ಮುಖ; ಎಂಥ ಆಯಾಮ. ಇದನ್ನೆಲ್ಲ ಉಳಿಸಿ, ಬೆಳಸುವ ದಿಕ್ಕಿನಲ್ಲಿಯೂ ಮಹತ್ವದ ಕೆಲಸಗಳು ಆಗಿಲ್ಲ.
ಈ ಜಿಲ್ಲೆಯಲ್ಲಿಯೇ ಸಮಾಜವಾದಿ ಚಳವಳಿಯ ದಿನಕರ ದೇಸಾಯಿ ಆಗಿ ಹೋದರು. ಅಂಕೋಲೆಯ ಸ್ವಾತಂತ್ರ್ಯ ಹೋರಾಟ ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ದೊಡ್ಡ ಅಧ್ಯಾಯ. ಇದನ್ನೆಲ್ಲ ಹೆಮ್ಮೆಯಿಂದ ನೋಡುವ ಅವಕಾಶಗಳನ್ನೂ ಇಲ್ಲಿ ಕಲ್ಪಿಸಲಾಗಿಲ್ಲ.
ಈ ಜಿಲ್ಲೆಯ ಘೋರ ದುರಂತದ ಮೇಲೆ ಮುಸುಕು ಎಳೆಯುವುದಕ್ಕಾದರೂ ಸಕರ್ಾರ ಇಂಥ ಕಾರ್ಯಗಳನ್ನು ಕೈಗೊಳ್ಳಬೇಕು.
 

‍ಲೇಖಕರು G

February 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: