ಸಿ ಎಂ ಹುದ್ದೆಯ ಮೇಲೆ ಪರಮೇಶ್ವರ್‌ ಬದಲು ಧರ್ಮಸಿಂಗ್‌ ಬಂದು ಕುಳಿತ ಕತೆ

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಇದು ೨೦೦೪ ರಲ್ಲಿ ನಡೆದ ಘಟನೆ.

ಅವತ್ತು ಜೆಡಿಎಸ್‌ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿ ಅವರ ಜತೆ ಮಾತನಾಡುತ್ತಾ ಕುಳಿತಿದ್ದರು. ಅಷ್ಟೊತ್ತಿಗಾಗಲೇ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಿತ್ತು. ಅಧಿಕಾರಾರೂಢ ಕಾಂಗ್ರೆಸ್‌ ನೆಲ ಕಚ್ಚಿತ್ತು. ಅದೇ ರೀತಿ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳಿಗೆ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಯಾವುದೇ ಎರಡು ಪಕ್ಷಗಳು ಪರಸ್ಪರ ಕೈಗೂಡಿಸಿದರೆ ಮಾತ್ರ ಸರ್ಕಾರ ರಚಿಸಲು ಸಾಧ್ಯ ಎಂಬ ಪರಿಸ್ಥಿತಿ ಇತ್ತಲ್ಲ? ಈ ಸಂದರ್ಭದಲ್ಲಿ ಜೆಡಿಎಸ್‌ ಜತೆ ಕೈಗೂಡಿಸಿ ಸರ್ಕಾರ ರಚಿಸಲು ಬಿಜೆಪಿ ಬಯಸಿತು.

ಆದರೆ ರಾಷ್ಟ್ರ ರಾಜಕಾರಣದಲ್ಲಿ ಕಮ್ಯೂನಿಸ್ಟರ ಜತೆಗಿನ ಸ್ನೇಹ ಕಳೆದುಕೊಳ್ಳಲು ಇಚ್ಚಿಸದ ದೇವೇಗೌಡರು ಕಾಂಗ್ರೆಸ್‌ ಜತೆ ಕೈ ಜೋಡಿಸಲು ಬಯಸಿದರು. ಹೀಗಾಗಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಜತೆ ಮಾತುಕತೆ ನಡೆಸಿದರು. ಅಂತಿಮವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ, ಜೆಡಿಎಸ್‌ಗೆ ಉಪಮುಖ್ಯಮಂತ್ರಿ ಹುದ್ದೆ ಎಂಬುದು ನಿಕ್ಕಿಯಾಯಿತು. ಈ ಮಧ್ಯೆ ಕಾಂಗ್ರೆಸ್‌ನ ಯಾವ ನಾಯಕರ ಬಗ್ಗೆ ಜೆಡಿಎಸ್‌ ಸಹಮತ ವ್ಯಕ್ತಪಡಿಸುತ್ತದೋ? ಅವರನ್ನೇ ಸಿಎಂ ಹುದ್ದೆಗೆ ತರುವುದಾಗಿ ಸೋನಿಯಾ ಭರವಸೆ ನೀಡಿದರು.

ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ತಮ್ಮನ್ನು ಸಿಎಂ ಹುದ್ದೆಗೇರಿಸಲು ನೆರವು ನೀಡಿ ಎಂದು ದೇವೇಗೌಡರನ್ನು ಕೋರಿದವರು ಎಸ್.ಎಂ.ಕೃಷ್ಣ. ಹೀಗೆ ಕೃಷ್ಣ ಅವರಿಗೆ ಇನ್ನೊಂದು ರೌಂಡು ಸಿಎಂ ಆಗಲು, ಅದಕ್ಕೆ ಪೂರಕವಾಗಿ ದೇವೇಗೌಡರನ್ನು ಭೇಟಿ ಮಾಡಲು ಒತ್ತಾಸೆ ನೀಡಿದವರು ಅವರಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ.

ಅಳಿಯನ ಮಾತು ಕೇಳಿ ಕೃಷ್ಣ ಅವರು ದೇವೇಗೌಡರನ್ನು ಭೇಟಿ ಮಾಡಿದರು. ನಾನು ಮರಳಿ ಸಿಎಂ ಆಗಲು ನಿಮ್ಮ ಬೆಂಬಲ ಬೇಕು ಎಂದು ಕೇಳಿಕೊಂಡರು. ಆದರೆ ಕೃಷ್ಣ ಅವರನ್ನು ಸಿಎಂ ಹುದ್ದೆಯಲ್ಲಿ ನೋಡಲು ದೇವೇಗೌಡರು ಬಯಸಲಿಲ್ಲ. ಹಾಗಂತಲೇ, ನೀವು ಅಧಿಕಾರದಲ್ಲಿದ್ದಾಗ ನಮಗೆ ಮಾಡಿದ ಉಪಕಾರಗಳು ನೆನಪಿನಲ್ಲಿವೆ ಕೃಷ್ಣ ಅವರೇ. ಹೋಗಿ ಬನ್ನಿ ಎಂದು ವಾಪಸ್‌ ಕಳಿಸಿಬಿಟ್ಟರು.

ಯಾವಾಗ ಎಸ್.ಎಂ.ಕೃಷ್ಣ ಅವರ ಹೆಸರು ದೇವೇಗೌಡರ ಪಟ್ಟಿಯಿಂದ ಹೊರಬಿತ್ತೋ? ಇದಾದ ನಂತರ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂದೆ ಬಂತು. ಯಸ್‌, ಮಲ್ಲಿಕಾರ್ಜುನ ಖರ್ಗೆ ಅತ್ಯಂತ ದಕ್ಷ, ಬಿಗಿಯಾದ ಆಡಳಿತ ನೀಡುತ್ತಾರೆ. ಆದರೆ ಈಗ ರಚನೆಯಾಗುತ್ತಿರುವುದು ಮೈತ್ರಿಕೂಟ ಸರ್ಕಾರ. ಹೀಗಾಗಿ ಉಭಯ ಪಕ್ಷಗಳ ಹಿತಾಸಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಹೆಜ್ಜೆ ಇಡಬೇಕಾಗುತ್ತದೆ. ಆದರೆ ಮೈತ್ರಿ ಸರ್ಕಾರವನ್ನು ಹೊಂದಾಣಿಕೆಯಿಂದ ನಡೆಸಿಕೊಂಡು ಹೋಗುವುದು ಖರ್ಗೆ ಅವರಿಗೆ ಕಷ್ಟ ಅಂತ ದೇವೇಗೌಡರು ಷರಾ ಬರೆದುಬಿಟ್ಟರು.

ಈ ಹಂತದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್‌ ಪಕ್ಷದ ಯಾವ ನಾಯಕನನ್ನು ತಂದು ಕೂರಿಸಬೇಕು ಎಂಬ ವಿಷಯ ದೇವೇಗೌಡರನ್ನು ಕಾಡತೊಡಗಿತು. ಇದೇ ಕಾಲಕ್ಕೆ ಸರಿಯಾಗಿ ಅವರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಹುದ್ದೆಗೆ ಸೂಟಬಲ್‌ ಆಗುವ ಒಂದು ಹೆಸರನ್ನು ತಂದೆಯ ಮುಂದೆ ಪ್ರಸ್ತಾಪಿಸಿದರು. ಅವರ ಹೆಸರು- ಜಿ.ಪರಮೇಶ್ವರ್.‌

ಆ ಹೊತ್ತಿಗಾಗಲೇ ಹಲವು ಬಾರಿ ಮಂತ್ರಿ ಹುದ್ದೆಯನ್ನು ನಿರ್ವಹಿಸಿ, ದಕ್ಷ ಆಡಳಿತಗಾರ ಅಂತ ಹೆಸರು ಪಡೆದಿದ್ದ ಪರಮೇಶ್ವರ್‌ ಅವರ ಹೆಸರನ್ನು ಪರಿಗಣಿಸಿದರೆ ಮೈತ್ರಿ ಧರ್ಮ ಪಾಲನೆಯಲ್ಲಿ ಯಾವ ತೊಂದರೆಯೂ ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರ ಕಿವಿ ತುಂಬಿದವರು ತುರುವೆಕೆರೆಯ ನಾಯಕ ಎಂ.ಟಿ.ಕೃಷ್ಣಪ್ಪ.

ಅಂದ ಹಾಗೆ ಎಂ.ಟಿ.ಕೃಷ್ಣಪ್ಪ ಅವರಿಗೆ ಪರಮೇಶ್ವರ್‌ ಆಪ್ತರು. ಹೀಗಾಗಿ ಅವರು ಮೈತ್ರಿ ಕೂಟ ಸರ್ಕಾರವನ್ನು ಪರಮೇಶ್ವರ್‌ ಅವರು ಮುನ್ನಡೆಸುವಂತಾಗಲಿ ಅಂತ ಬಯಸಿದ್ದು ಸಹಜವೂ ಆಗಿತ್ತು. ಯಾವಾಗ ಎಂ.ಟಿ.ಕೃಷ್ಣಪ್ಪ ಅವರು ಪರಮೇಶ್ವರ್‌ ಅವರ ಹೆಸರು ಹೇಳಿದರೋ? ಆಗ ಕುಮಾರಸ್ವಾಮಿ ಅವರು ತಮ್ಮ ತಂದೆ ದೇವೇಗೌಡರ ಜತೆಗಿನ ಚರ್ಚೆ ಸಂದರ್ಭದಲ್ಲಿ ಈ ಹೆಸರನ್ನು ಪ್ರಸ್ತಾಪಿಸಿದರು.

ಅಂದ ಹಾಗೆ ದೇವೇಗೌಡರಿಗೂ ಈ ಪ್ರಪೋಸಲ್ಲು ಒಪ್ಪಿಗೆಯಾಯಿತು. ಯಾಕೆಂದರೆ ತಾವು ಸಿಎಂ ಹುದ್ದೆಗೆ ಆರಿಸುವ ನಾಯಕರು ಕಾಂಗ್ರೆಸ್‌ ಹೈಕಮಾಂಡ್‌ಗೂ ಒಪ್ಪಿಗೆಯಾಗಬೇಕಲ್ಲ? ಈ ವಿಷಯ ಬಂದಾಗ ಪರಮೇಶ್ವರ್‌ ಅವರ ಹೆಸರನ್ನು ಮೇಡಂ ಸೋನಿಯಾಗಾಂಧಿ ಒಪ್ಪುತ್ತಾರೆ ಎಂಬುದು ಅವರ ಲೆಕ್ಕಾಚಾರ.

ಯಾಕೆಂದರೆ ಪರಮೇಶ್ವರ್‌ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಸಪೋರ್ಟು ಕೊಡುತ್ತಿದ್ದವರು ಹಿರಿಯ ನಾಯಕರಾದ ಮೊಹ್ಸಿನಾ ಕಿದ್ವಾಯಿ. ಅದೇ ರೀತಿ ಮೊಹ್ಸಿನಾ ಕಿದ್ವಾಯಿ ಅವರನ್ನು ಕಂಡರೆ ಸೋನಿಯಾಗಾಂಧಿ ಅವರಿಗೆ ಅಪಾರ ವಿಶ್ವಾಸ.

ಹೀಗಾಗಿ ಪರಮೇಶ್ವರ್‌ ಹೆಸರನ್ನು ಸಿಎಂ ಹುದ್ದೆಗೆ ಸೂಚಿಸಿದರೆ ಮೊಹ್ಸಿನಾ ಕಿದ್ವಾಯಿ ಎಂಟ್ರಿ ಕೊಡುತ್ತಾರೆ. ಸೋನಿಯಾಗಾಂಧಿ ಗ್ರೀನ್‌ ಸಿಗ್ನಲ್‌ ಕೊಡುವಂತೆ ನೋಡಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬಂದ ದೇವೇಗೌಡರು ತಮ್ಮ ಪುತ್ರನ ಪ್ರಪೋಸಲ್ಲಿಗೆ ಒಪ್ಪಿಗೆ ನೀಡಿದರು.

ಇದಾದ ನಂತರ ಪರಮೇಶ್ವರ್‌ ಅವರಿಗೆ ಫೋನ್‌ ಕರೆ ಹೋಯಿತು. ಕಂಗ್ರಾಚ್ಯುಲೇಶನ್‌ ಪರಮೇಶ್ವರ್‌ ಅವರೇ. ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ಹೊರಲು ರೆಡಿ ಆಗಿ, ಹಾಗೆಯೇ ಹೈಕಮಾಂಡ್‌ ಮಟ್ಟದಲ್ಲಿ ನಿಮಗಿರುವ ಲಿಂಕುಗಳ ಮೂಲಕ ಸೋನಿಯಾಗಾಂಧಿ ಅವರಿಗೆ ಹೇಳಿಸಿ ಎಂದು ದೇವೇಗೌಡರು ಸೂಚಿಸಿದರು. ಹಾಗೆಯೇ ಮುಂದುವರಿದು: ಸ್ವಲ್ಪ ಹೊತ್ತಿನಲ್ಲಿ ನಾನು ಮೇಡಂ ಅವರಿಗೆ ಫೋನು ಮಾಡಿ ವಿಷಯ ತಿಳಿಸುತ್ತೇನೆ. ಅದಕ್ಕವರು ಒಪ್ಪಿಗೆ ನೀಡುವಂತೆ ನೀವು ನೋಡಿಕೊಳ್ಳಿ ಎಂದರು.

ಯಾವಾಗ ದೇವೇಗೌಡರೇ ಈ ಸೂಚನೆ ನೀಡಿದರೋ? ಆಗ ತಕ್ಷಣವೇ ಪರಮೇಶ್ವರ್‌ ಅವರು ವರಿಷ್ಟರನ್ನು ಸಂಪರ್ಕಿಸಲು ಮುಂದಾದರು.

ಇಷ್ಟಕ್ಕೆ ಎಲ್ಲ ಇತ್ಯರ್ಥವಾಗಿದ್ದರೆ ಜಿ.ಪರಮೇಶ್ವರ್‌ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರುತ್ತಿದ್ದರು. ಆದರೆ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದಂತೆಯೇ ದೇವೇಗೌಡರ ನಿವಾಸಕ್ಕೆ ಆ ಹಿರಿಯ ನಾಯಕರು ಬಂದರು. ಅವರ ಹೆಸರು -ಸಿ.ಎಂ.ಇಬ್ರಾಹಿಂ.

ಯಾವ ಪಕ್ಷದಲ್ಲಿದ್ದರೂ ಎಲ್ಲ ಪಕ್ಷಗಳ ನಾಯಕರಿಗೂ ಆಪ್ತರಾಗಿರುವ ಇಬ್ರಾಹಿಂ ಬಂದವರೇ ದೇವೇಗೌಡರ ಜತೆ ಕುಶಲೋಪರಿಗಿಳಿದರು. ಹಾಗೆಯೇ: ಮುಖ್ಯಮಂತ್ರಿ ಹುದ್ದೆಗೆ ನಿಮ್ಮ ಕ್ಯಾಂಡಿಡೇಟ್‌ ಯಾರು ಗೌಡರೇ? ಎಂದು ಕೇಳಿದರು.

ಅಯ್ಯೋ,ಆ ಎಸ್.ಎಂ.ಕೃಷ್ಣ ಬಂದು ಸಪೋರ್ಟು ಕೇಳಿದರು. ಆದರೆ ಅಧಿಕಾರದಲ್ಲಿದ್ದಾಗ ಅವರು ನಮಗೆಷ್ಟು ಕಿರುಕುಳ ನೀಡಿದರು ಅಂತ ನಿಮಗೆ ಗೊತಲ್ಲ ಇಬ್ರಾಹಿಂ? ಹೀಗಾಗಿ ಅವರನ್ನು ನಾವೇ ಒಪ್ಪಲಿಲ್ಲ.

ಇನ್ನು ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಅವರು ಅತ್ಯಂತ ಬಿಗಿ ಆಡಳಿತ ನೀಡುವುದೇನೋ ಸರಿ. ಆದರೆ ನಡೆಯಬೇಕಿರುವುದು ಒಂದು ಪಕ್ಷದ ಸರ್ಕಾರ ಅಲ್ಲವಲ್ಲ ಇಬ್ರಾಹಿಂ? ಹೀಗಾಗಿ ತುಂಬ ಬಿಗಿ ಆಡಳಿತ ನೀಡಲು ಹೋದರೆ ಮೈತ್ರಿ ಕೂಟ ಸರ್ಕಾರ ನಡೆಯುವುದು ಕಷ್ಟ.

ಹೀಗಾಗಿ ಉಭಯ ಪಕ್ಷಗಳಿಗೂ ಸಮ್ಮತವಾಗಬಲ್ಲ ಜಿ.ಪರಮೇಶ್ವರ್‌ ಇದ್ದಾರಲ್ಲ? ಅವರನ್ನು ಸಿಎಂ ಹುದ್ದೆಯ ಮೇಲೆ ಕೂರಿಸುವುದು ಬೆಸ್ಟು ಅಂತ ಯೋಚಿಸಿದ್ದೇವೆ ಎಂದು ದೇವೇಗೌಡರು ವಿವರಿಸಿದಾಗ ಇಬ್ರಾಹಿಂ ವಿಸ್ಮಯದಿಂದ ಅವರನ್ನೇ ನೋಡತೊಡಗಿದರು.

ಇದನ್ನು ನೋಡಿದ ದೇವೇಗೌಡರು ಯಾಕೆ ಇಬ್ರಾಹಿಂ? ಸಿಎಂ ಹುದ್ದೆಗೆ ಪರಮೇಶ್ವರ್‌ ಬೆಸ್ಟ್‌ ಕ್ಯಾಂಡಿಡೇಟು ಅಂತ ಅನ್ನಿಸಲ್ವಾ? ಅಂತ ಪ್ರಶ್ನಿಸಿದರು. ಅದಕ್ಕುತ್ತರವಾಗಿ ಇಬ್ರಾಹಿಂ: ಹಾಗೇನಿಲ್ಲ ಗೌಡರೇ,ಸಿಎಂ ಹುದ್ದೆಗೆ ಪರಮೇಶ್ವರ್‌ ಬೆಸ್ಟ್‌ ಕ್ಯಾಂಡಿಡೇಟು. ಆದರೆ ಒಂದು ಟೆಕ್ನಿಕಲ್‌ ಪ್ರಾಬ್ಲಂ ಇದೆ ಎಂದರು.

ಅವರ ಮಾತು ಕೇಳಿ ದೇವೇಗೌಡರಿಗೆ ಅಚ್ಚರಿಯಾಯಿತು. ಹಾಗಂತಲೇ: ಏನು ಇಬ್ರಾಹಿಮ್ಮು, ಅದೇನು ಟೆಕ್ನಿಕಲ್‌ ಪ್ರಾಬ್ಲಮ್ಮು? ಅಂತ ಕೇಳಿದರು. ಆಗ ಇಬ್ರಾಹಿಂ ಹೇಳತೊಡಗಿದರು.

ಅಲ್ಲ ಗೌಡರೇ, ನೀವೇ ಯೋಚಿಸಿ, ಪರಮೇಶ್ವರ್‌ ಯಾವ ಸಮುದಾಯಕ್ಕೆ ಸೇರಿದವರು? ಪ್ರಬಲ ದಲಿತ ಸಮುದಾಯಕ್ಕೆ ಸೇರಿದವರು. ಅವರನ್ನು ನೀವು ಸಿಎಂ ಮಾಡಿದರೆ ನಾಳೆ ಜೆಡಿಎಸ್‌ ಪಕ್ಷದ ಬಗ್ಗೆ ದಲಿತರಿಗೆ ವಿಶ್ವಾಸ ಬೆಳೆಯುತ್ತದೆ, ಅದೇ ರೀತಿ ನಿಮ್ಮ ಪಕ್ಷದ ವೋಟ್‌ ಬ್ಯಾಂಕೂ ಗಟ್ಟಿಯಾಗುತ್ತದೆ.

ಆದರೆ ಮೈತ್ರಿಕೂಟ ಸರ್ಕಾರ ಐದು ವರ್ಷಗಳ ಕಾಲ ನಡೆಯುತ್ತದೆ ಎಂಬ ವಿಶ್ವಾಸ ನಿಮಗಿದೆಯೇ? ಸ್ವಲ್ಪ ಹೆಚ್ಚು ಕಡಿಮೆಯಾಗಿ ಸರ್ಕಾರ ಉರುಳಿದರೆ, ಪರಮೇಶ್ವರ್‌ ಕೆಳಗಿಳಿದರೆ ದಲಿತರಿಗೆ ಏನು ಮೆಸೇಜ್‌ ಹೋಗುತ್ತದೆ? ತಮ್ಮ ಸಮುದಾಯದ ಒಬ್ಬ ನಾಯಕ ಐದು ವರ್ಷ ಸಿಎಂ ಆಗಿರುವುದನ್ನು ನೋಡಲು ದೇವೇಗೌಡರ ಕೈಲಿ ಆಗಲಿಲ್ಲ ಎಂಬ ಆಕ್ರೋಶ ಮೇಲೇಳುವುದಿಲ್ಲವೇ? ಹಾಗೇನಾದರೂ ಆಗಿ ದಲಿತ ವಿರೋಧಿ ಎಂಬ ಹಣೆ ಪಟ್ಟಿ ನಿಮಗೆ ತಗಲಿಕೊಂಡರೆ ನಾಳೆ ನೆಮ್ಮದಿಯಾಗಿ ರಾಜಕೀಯ ಮಾಡಲು ಸಾಧ್ಯ ಅನ್ನಿಸುತ್ತದೆಯಾ ಗೌಡರೇ?

ಹಾಗಂತ ಇಬ್ರಾಹಿಂ ಕೇಳಿದಾಗ ವಿಸ್ಮಿತರಾದ ದೇವೇಗೌಡರು: ಹಾಗಿದ್ದರೆ ಈಗೇನು ಮಾಡುವುದು? ಯಾರನ್ನು ಸಿಎಂ ಹುದ್ದೆಗೆ ತಂದು ಕೂರಿಸುವುದು? ಅಂತ ಚರ್ಚೆ ಶುರುವಿಟ್ಟುಕೊಂಡರು.

ಅವರ ಮಾತು ಕೇಳಿದ ಇಬ್ರಾಹಿಂ: ಇವತ್ತಿನ ಸ್ಥಿತಿಯಲ್ಲಿ ಮೈತ್ರಿಕೂಟ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವ ನಾಯಕರಿಗೆ ಜಾತಿಬಲ ಇರಬಾರದು ಗೌಡರೇ. ಅದೇ ರೀತಿ ಎಲ್ಲರ ಜತೆಗೂ ಹೊಂದಿಕೊಂಡು ಹೋಗುವ ಗುಣವಿರಬೇಕು. ಸಧ್ಯದ ಸ್ಥಿತಿ ನೋಡಿದರೆ ಕಾಂಗ್ರೆಸ್‌ ನಾಯಕ ಧರ್ಮಸಿಂಗ್‌ ಇದಕ್ಕೆ ಸೂಟ್‌ ಆಗುತ್ತಾರೆ ಎಂದರು.

ಈ ಅಂಶವನ್ನು ಮುಂದಿಟ್ಟುಕೊಂಡು ಇಬ್ರಾಹಿಂ, ಕುಮಾರಸ್ವಾಮಿ ಅವರ ಬಳಿ ಚರ್ಚಿಸಿದ ದೇವೇಗೌಡರು ಅಂತಿಮವಾಗಿ ಕಾಂಗ್ರೆಸ್‌ ನಾಯಕ ಧರ್ಮಸಿಂಗ್‌ ಅವರ ಹೆಸರನ್ನು ಸಿಎಂ ಹುದ್ದೆಗೆ ಕ್ಲಿಯರ್‌ ಮಾಡಿದರು.

ಹೇಳಿ ಕೇಳಿ ಧರ್ಮಸಿಂಗ್‌ ಅವರು ರಜಪೂತರು. ಅವರ ಸ್ವಕ್ಷೇತ್ರ ಜೇವರ್ಗಿಯಲ್ಲಿರಲಿ, ಕರ್ನಾಟಕದ ರಾಜಕಾರಣದಲ್ಲೂ ಅವರು ಪವರ್‌ಫುಲ್‌ ಮತದಾರರಲ್ಲ, ಹೀಗಾಗಿ ನಾಳೆ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ಪ್ರತಿಭಟಿಸುವವರು ಯಾರು? ಎಂಬುದು ಚರ್ಚೆಯ ಮುಖ್ಯ ವಿಷಯವಾಗಿತ್ತು.

ಸರಿ, ಇದಾದ ನಂತರ ದೇವೇಗೌಡರು ಫೋನಿನಲ್ಲೇ ಧರ್ಮಸಿಂಗ್‌ ಅವರನ್ನು ಸಂಪರ್ಕಿಸಿ ಮುಖ್ಯಮಂತ್ರಿ ಹುದ್ದೆಗೇರಲು ರೆಡಿ ಆಗಿ, ಹಾಗೆಯೇ ನಾವು ಮೇಡಂ ಅವರಿಗೆ ಮೆಸೇಜು ಕೊಡುವ ಮುನ್ನ ದಿಲ್ಲಿಯಲ್ಲಿ ನಿಮಗಿರುವ ಸಂಪರ್ಕಗಳನ್ನು ಬಳಸಿಕೊಂಡು ನಿಮ್ಮ ಹೆಸರಿಗೆ ಅವರು ಒಪ್ಪಿಗೆ ಕೊಡುವಂತೆ ನೋಡಿಕೊಳ್ಳಿ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು.

ಆದರೆ ಇದ್ಯಾವುದರ ಅರಿವಿಲ್ಲದ ಪರಮೇಶ್ವರ್‌ ಅವರು ಮೊಹ್ಸಿನಾ ಕಿದ್ವಾಯಿ ಮೂಲಕ ಎಐಸಿಸಿ ಅಧ್ಯಕ್ಷರಿಗೆ ಸಂದೇಶ ಕಳಿಸಿ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿದ್ದರೆ, ಅತ್ತ ದೇವೇಗೌಡರು ಅದೇ ಎಐಸಿಸಿ ಅಧ್ಯಕ್ಷರಿಗೆ ಫೋನು ಮಾಡಿ: ಧರ್ಮಸಿಂಗ್‌ ಸಿಎಂ ಆಗಲಿ ಎಂಬ ಮೆಸೇಜು ನೀಡಿದರು.

ಅಲ್ಲಿಗೆ ಸಿಎಂ ಹುದ್ದೆ ಪರಮೇಶ್ವರ್‌ ಅವರ ಮನೆ ಬಾಗಿಲು ತಟ್ಟಿ, ಧರ್ಮಸಿಂಗ್‌ ಅವರ ಮನೆಗೆ ನುಗ್ಗಿ ವಿರಾಜಮಾನವಾದಂತಾಯಿತು.

October 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: