
ಗಣಪತಿ ದಿವಾಣ
ನಿನ್ನೆ ದಿನ ನನ್ನ ಹುಡುಗಿ
ಗೊಂಬೆಯಂತೆ ಕಂಡಳು
ಕೋಪಗೊಂಡ ಕೆಂಪು ಮುಖ
ಹೊಳೆಯುತಿರುವ ಕಂಗಳು.

ಹೂವ ಹೊತ್ತು ಬಳುಕಿ ನಿಂತ
ಬಳ್ಳಿಯಂತೆ ಕಂಡಳು
ಸಿರಿಯ ಮುಡಿ ಉದ್ದ ಜಡೆಯ
ನನಗೆ ತೋರಿ ನಿಂತಳು.
ಮುಷ್ಟಿ ಬಿಗಿದು ಕೈಯ ಕೊಡವಿ
ನಡೆದಳವಳು ಜಂಭದಿ
ತಿರುಗು, ಹೋಗು ಎಲ್ಲಿ ಹೋಪೆ
ಎಂದೆ ನಾನು ಮೌನದಿ.
ಮುತ್ತಿನಂತೆ ಮಾತು ಮನಸು
ಎಂದು ಕೋಪ ಮಾಡಳು
ಮುನಿಸಿನಲ್ಲಿ ಪ್ರೀತಿ ಹೆಚ್ಚು
ನಕ್ಕು ನಾಚಿ ನುಡಿವಳು.
ಅತ್ತಲೇನು ಚಂದವುಂಟು
ಇತ್ತ ನೋಡೆ ಮೆಲ್ಲಗೆ
ಇನಿತು ತರ್ಕವೇಕೆ ಬಾಲೆ
ಮುನಿಸಿದೇಕೆ ಮಲ್ಲಿಗೆ.
ಹೃದಯ ತುಂಬಿ ಪ್ರೀತಿ ಒಸರು
ಹಾಲಿನಂತೆ ಉಕ್ಕಿತು
ಸುತ್ತಲಿರುವ ಬಣ್ಣ ಹೂವು
ಹಿಗ್ಗಿ ನಿಂತು ನಕ್ಕಿತು.
ಹತ್ತಿಯಂಥ ಮೋಡದೆಡೆಯ
ಚಂದಮಾಮ ಕರಗಿದ
ಅವಳ ಮೊಗದ ಚಿನ್ನ ನಗುವ
ಚೆಲುವ ಒಲವ ಕಾಣುತ.
ಅರಳಿ ನಿಂತ ಸುಮವ ಕೊಯ್ದು
ಅವಳ ತಲೆಗೆ ಮುಡಿಸಲು
ತಂಪು ಗಾಳಿ ಬೀಸಿ ಬಂತು
ಹನಿಗಳೆರಡು ಉದುರಿತು
ಬಾನ- ಹನಿಗಳೆರಡು ಉದುರಿತು.





0 Comments