ಸಿದ್ರಾಮಯ್ಯ ಏರಿದ್ರಾ ಕೊಟ್ಟ ಕುದುರೆ?

ಪ್ರತಿಪಕ್ಷಗಳಿಗೆ ಟ್ರೆಷರಿ ಬೆಂಚುಗಳನ್ನು ಅಳೆಯುವುದು ಯಾವತ್ತಿಗೂ ಸುಲಭದ ಕೆಲಸ. ಗುಡಿಸಿಹಾಕಿಬಿಟ್ಟರೆ ಮುಗಿಯಿತು. ಕರ್ನಾಟಕದಲ್ಲಿ ಕೂಡ ಸಿದ್ಧರಾಮಯ್ಯ ಸರಕಾರದ ಸಾಧನೆಯನ್ನು ಒಂದು ಹೂಬ್ಲೊ ವಾಚಿನ ಆಧಾರದಲ್ಲಿ ಗುಡಿಸಿಹಾಕಲಾಗುತ್ತಿದೆ. ಅವರವರ ಅನುಕೂಲ ಸೂತ್ರಗಳಿಗನುಗುಣವಾಗಿ ಚುನಾವಣೆಯ ನಳ್ಳಿಯನ್ನು ಬೇಗನೇ ತೆರೆದಿರುವುದರಿಂದ ಒಳ್ಳೇ ನೀರು, ಕೆಸರು ಎಲ್ಲವೂ ಒಟ್ಟೊಟ್ಟಿಗೇ ಹರಿದು ನೀರು ಕಳುಕಾಗಿ ಕಂಡರೆ ಅಚ್ಚರಿ ಇಲ್ಲ.

ಸಾಮಾನ್ಯವಾಗಿ ಯಾವುದೇ ಸರಕಾರದ ಸಾಧನೆಯ ಹೋಲಿಕೆಯನ್ನು “ಝೀರೋ” ಗ್ರೌಂಡಿನಿಂದ ಮಾಡುವುದು ಪ್ರಾಯೋಗಿಕ ಅಲ್ಲ. ಪ್ಲಸ್ಸೋ-ಮೈನಸ್ಸೋ ಒಂದು ಬೇಸ್ ಲೈನ್ ನಿರ್ಧಾರ ಆಗಬೇಕಾಗುತ್ತದೆ. ಸಿದ್ಧರಾಮಯ್ಯ ಸರಕಾರಕ್ಕೆ ಆ ಬೇಸ್ ಲೈನ್ ಯಾವುದು? ಇದಕ್ಕೆ ನನ್ನ ಎದುರು ಎರಡು ಬೇಸ್ ಲೈನ್ ಆಯ್ಕೆಗಳಿವೆ. ಒಂದು ಸಿದ್ಧರಾಮಯ್ಯ ಅವರು ಯಾರಿಂದ ಅಧಿಕಾರ ಸ್ವೀಕರಿಸಿದರೋ ಆ ಸರಕಾರ; ಇನ್ನೊಂದು ಸಿದ್ಧರಾಮಯ್ಯ ಪ್ರತಿನಿಧಿಸುವ ರಾಜಕಾರಣದ ಮಾದರಿಯನ್ನು ಅನುಸರಿಸಿದ ಈ ಹಿಂದಿನ ಸರಕಾರಗಳು.

ಮೊದಲ ಬೇಸ್ ಲೈನ್ ಆಯ್ಕೆ ಮಾಡಿಕೊಂಡರೆ, ಸಿದ್ಧರಾಮಯ್ಯ ತಮ್ಮ 4 ವರ್ಷಗಳಲ್ಲಿ ನಿಜಕ್ಕೂ ಗೆದ್ದಿದ್ದಾರೆ. ಬಳ್ಳಾರಿ ರಿಪಬ್ಲಿಕ್, ಭ್ರಷ್ಟಾಚಾರ, ಒಳಜಗಳ… ಒಟ್ಟಿನಲ್ಲಿ ಸ್ವತಃ ಯಡಿಯೂರಪ್ಪನವರೇ ಒಂದು ಹಂತದಲ್ಲಿ ಹೇಳಿಕೊಂಡಂತೆ ಕೊಟ್ಟ ಕುದುರೆ ಏರದ ಸರಕಾರವೊಂದನ್ನು ತಿರಸ್ಕರಿಸಿದ ಕರ್ನಾಟಕದ ಜನತೆ ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿತ್ತು. ಆ ಐದು ವರ್ಷಗಳಿಗೆ ಹೋಲಿಸಿದರೆ, ಕಳೆದ 4 ವರ್ಷಗಳನ್ನು ಕರ್ನಾಟಕ ಬಹುತೇಕ ಸಮಾಧಾನದಿಂದಲೇ ಪೂರೈಸಿದೆ.

ಇನ್ನೊಂದು ಬೇಸ್ ಲೈನ್ ಆಯ್ಕೆ ಮಾಡಿಕೊಂಡರೆ, ನಮ್ಮೆದುರು ಬರುವುದು ಕರ್ನಾಟಕದಲ್ಲಿ ಆಗಿಹೋದ ದೇವರಾಜ ಅರಸು ಮತ್ತು ಬಂಗಾರಪ್ಪ ಅವರ ಸರಕಾರಗಳು. ಈ ನಿಟ್ಟಿನಲ್ಲಿ ನೋಡಿದರೆ, ಸಿದ್ಧರಾಮಯ್ಯ ದೇವರಾಜ ಅರಸರಷ್ಟು ರಾಡಿಕಲ್ ಅಲ್ಲದಿದ್ದರೂ, ಆ ಹಾದಿಯಲ್ಲಿ ಕೆಲವು ದೂರ ಸಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಬಂಗಾರಪ್ಪ ಅವರ ಸರಕಾರಕ್ಕೆ ಹೋಲಿಸಿದರೆ, ಸಿದ್ಧರಾಮಯ್ಯ ಸರಕಾರದ್ದು ಪ್ಲಸ್ಸೇ ಜಾಸ್ತಿ ಇದೆ.

ಮುಖಸಹಿತ ಸರಕಾರ

ಕಾಂಗ್ರೆಸ್ ದೇಶದಲ್ಲಿ ಈಗ ತಲುಪಿರುವ ಸ್ಥಿತಿಗೆ ನೇರ ಕಾರಣ ಅದರ ಹೈಕಮಾಂಡ್ ಮತ್ತು ಅದರ ಸುತ್ತ ಇರುವ “Make-believe” ಒಳಪೌಳಿ ರಾಜಕೀಯಸ್ಥರು. ಪಕ್ಷವನ್ನು ಏಕಚಕ್ರಾಧಿಪತ್ಯಕ್ಕೆ ಒಳತರುವ ಪ್ರಯತ್ನದಲ್ಲಿ, ಕಾಂಗ್ರೆಸ್ಸಿಗಿದ್ದ ರಾಷ್ಟ್ರವ್ಯಾಪಿ ವೈವಿಧ್ಯತೆ, ಸಂಕೀರ್ಣ ಸ್ವರೂಪಗಳನ್ನು ನಾಶಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತಾನು ಅಧಿಕಾರದಲ್ಲಿರುವಲ್ಲೆಲ್ಲ ಕವರು ಕಳಿಸಿ ನಾಯಕರನ್ನು ಆಯ್ಕೆ ಮಾಡತೊಡಗಿದ ಬಳಿಕ ಕಾಂಗ್ರೆಸ್ಸಿನಲ್ಲಿ ಈವತ್ತು ಬಹಳ ಕಾಲದ ಬಳಿಕ “ಮುಖ ಸಹಿತ” ಸರಕಾರವೊಂದು ಉಳಿದು, ಅವಧಿ ಪೂರೈಸುವತ್ತ ಸಾಗಿರುವುದಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ಇಷ್ಟಾದರೂ ಸಿದ್ಧರಾಮಯ್ಯ ಕಾಂಗ್ರೆಸ್ಸಿನ ಹೈಕಮಾಂಡ್ ಜೊತೆ ಸಾಮರಸ್ಯ  ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ಹೊಸತಳಿ ಆಗಿರುವ ಸಿದ್ಧರಾಮಯ್ಯ ಮೂಲ ಕಾಂಗ್ರೆಸ್ಸಿಗರ ಕರಗಿಹೋಗಿರುವ ಬೆನ್ನು ಹುರಿಗೆ ದಬ್ಬೆ ಕಟ್ಟಿದಂತೆ ಬಲವಾಗಿ ನಿಂತು ಆಧರಿಸುತ್ತಿದ್ದಾರೆ.

ಎಡವಿದ್ದೇ ಇಲ್ಲವೇ?

ಹಾಗಿದ್ದರೆ ಕಳೆದ ನಾಲ್ಕು ವರ್ಷಗಳಲ್ಲಿ ಸಿದ್ಧರಾಮಯ್ಯ ಎಡವಲೇ ಇಲ್ಲವೇ? ಎಂದು ಕೇಳಿದರೆ ತಕ್ಷಣ ಹೊಳೆಯುವ ಉತ್ತರ “ನಡೆವವರು ಎಡವಬೇಕಲ್ಲದೇ ಕುಳಿತವರು ಎಡವುತ್ತಾರೆಯೇ?”

ಒಂದೆಡೆ ಮೂಲ ಕಾಂಗ್ರೆಸ್ಸಿಗರ ಅಸಹಕಾರ, ಇನ್ನೊಂದೆಡೆ ಬಹುಮಾಧ್ಯಮಗಳ ಅರಬಾಯಿ, ರಾಜ್ಯ ಎದುರಿಸುತ್ತಿರುವ ಬರ, ನೋಟು ರದ್ಧತಿಯ ಪರಿಣಾಮಗಳು, ಅಧಿಕಾರಿಗಳ ಧಾಡಸೀತನ- ಇವುಗಳ ನಡುವೆ ಸಿದ್ಧರಾಮಯ್ಯನವರಿಗೆ ಇಲ್ಲಿಯ ತನಕ ಏನಾದರೂ ಸ್ವಲ್ಪ ಸುಖ ಸಿಕ್ಕಿದ್ದಿದ್ದರೆ, ಅದು ‘ಸೆಲ್ಫ್ ಗೋಲ್ ಪೀಡಿತ’ ಪ್ರತಿಪಕ್ಷಗಳಿಂದಲೇ! ಆದರೆ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈಗ ಅವರೂ ಎಚ್ಚೆತ್ತುಕೊಂಡಿದ್ದಾರೆ. ಇನ್ನೊಂದು ವರ್ಷ ಸಿದ್ಧರಾಮಯ್ಯನವರಿಗೆ ನಿಜವಾದ ಸವಾಲಿದೆ.

ಸಾಧನೆಗಳು-ತಪ್ಪುಹಾದಿಗಳು

ಒಂದು ಸರಕಾರದ ಯಶಸ್ಸನ್ನು ಅಥವಾ ವೈಫಲ್ಯವನ್ನು ನಿರ್ಧರಿಸುವುದು ಯಾವುದು?

ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒಂದು ಎಂದು ಒಂದು ಸ್ವತಂತ್ರ ಸಮೀಕ್ಷೆ ಹೇಳಿದರೆ, ಇನ್ನೊಂದು ಕರ್ನಾಟಕ ಆಡಳಿತದಲ್ಲಿ ನಂಬರ್ 4  ಎಂದು ಹೊಗಳುತ್ತದೆ. ಇಂತಹ ಹಲವು ಸಮೀಕ್ಷೆಗಳಿಗೆ ಹೊರತಾಗಿ ಅಧಿಕ್ರತ ಅಂಕಿ ಅಂಶಗಳನ್ನು ಗಮನಿಸುತ್ತಾ ಹೋದರೆ, ಬಹುತೇಕ ಎಲ್ಲ ರಂಗಗಳಲ್ಲೂ ಕರ್ನಾಟಕದ ಸರಾಸರಿ ಇಡಿಯ ದೇಶದ ಸರಾಸರಿಗಳಿಗೆ ಹೋಲಿಸಿದರೆ ಬಹಳ ಮುಂದಿದೆ. ಅದು ಸಾಕ್ಷರತೆ ಇರಬಹುದು, ಶಿಶು ಮರಣದ ಪ್ರಮಾಣ ಇರಬಹುದು, ಆರೋಗ್ಯದ ಪ್ರಮಾಣ ಇರಬಹುದು, ತಲಾ ಆದಾಯದ ಪ್ರಮಾಣ ಇರಬಹುದು, ಕ್ರಷಿ ಉತ್ಪಾದನೆ ಇರಬಹುದು, ವಿದ್ಯುತ್-ನೀರಾವರಿ-ಪ್ರವಾಸೋದ್ಯಮ ಇರಬಹುದು, ಕೈಗಾರಿಕೆ – ವಿದೇಶಿ ಹೂಡಿಕೆಯಂತಹ ಅಂಶಗಳಿರಬಹುದು, ಜಿಡಿಪಿ ಇರಬಹುದು: ಎಲ್ಲವೂ ದೇಶದ ಸರಾಸರಿಗಿಂತ ಚೆನ್ನಾಗಿಯೇ ಇವೆ. ದೇಶದ ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದು ಸಿದ್ಧರಾಮಯ್ಯನವರ ಏಕಾಂಗಿ ಸಾಧನೆಯೇನಲ್ಲ. ಈ ಹಿಂದಿನ ಸರಕಾರಗಳ ಪಾಲೂ ಇದರಲ್ಲಿದೆ. ಸಿದ್ಧರಾಮಯ್ಯ ಸರಕಾರ ಆ ಪರಂಪರೆಯನ್ನು ಚ್ಯುತಿ ಬರದಂತೆ ಮುಂದುವರಿಸಿದೆ.

ನನ್ನ ಪ್ರಕಾರ ಸಿದ್ಧರಾಮಯ್ಯ ಸರಕಾರದ ನಿಜವಾದ ವೈಫಲ್ಯ ಇರುವುದು ರಾಡಿಕಲ್ ಆದ ಬದಲಾವಣೆಗಳಿಗೆ ಮನ ಮಾಡುವಷ್ಟು ವಿಶ್ವಾಸವನ್ನು ಪಕ್ಷದ ಜೊತೆ-ಜನರ ಜೊತೆ ಬೆಳೆಸಿಕೊಳ್ಳಲು ಸಾಧ್ಯವಾಗದ್ದರಲ್ಲಿ ಮತ್ತು ತನ್ನ ಸಾಧನೆಗಳನ್ನು ಜನರಿಗೆ ತಲುಪುವಂತೆ ಬಿಂಬಿಸಲು ಸೋತದ್ದರಲ್ಲಿ. ಇದಲ್ಲದೆ, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಹಿಯಾದರೂ ಪರಿಸರ ಸಹ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಗ್ಯಾಲರಿಗಾಗಿ ಆಡಲು ಹೊರಟದ್ದು; ಅದಕ್ಕೆ ಕಿರೀಟ ಇಟ್ಟಂತೆ ಎತ್ತಿನಹೊಳೆ ಯೋಜನೆಗೆ ಒಲವು ತೋರಿಸಿದ್ದು, ನಿಗಮ-ಮಂಡಳಿಗಳ ನೇಮಕ ಸಕಾಲದಲ್ಲಿ ಮಾಡದೆ ಅವರ ಪಕ್ಷದ ತಳಮಟ್ಟದ ಕಾರ್ಯಕರ್ತರ ವಿಶ್ವಾಸ ಸೋತದ್ದು (ಮೊನ್ನೆ ಹೈಕಮಾಂಡ್ ಉಸ್ತುವಾರಿಗಳು ಬಂದಾಗ ಶಾಸಕರು, ಶ್ರದ್ಧೆಯಿಂದ ಕೆಲಸ ಮಾಡಲು ತಮಗೆ ಟಿಕೆಟ್ ಖಾತ್ರಿ ಮಾಡಿ ಎಂದು ಕೇಳಿದರೆಂದು ವರದಿಗಳಿವೆ), ಅಧಿಕಾರಿಗಳ ಆಟಾಟೋಪಗಳನ್ನು ತಳಮಟ್ಟದಿಂದ ನಿಯಂತ್ರಿಸಲು ವಿಫಲರಾದದ್ದು, ಕಾನೂನು ಕೈಗೆತ್ತಿಕೊಳ್ಳುವಂತಹ ಸಂಗತಿಗಳಿಗೆ ಸ್ಥಳೀಯ ರಾಜಕೀಯದ ಬಣ್ಣ ಬರಲು ಅವಕಾಶ ನೀಡಿದ್ದು… ಇತ್ಯಾದಿ ಅವರ ತಂಡದ ವೈಫಲ್ಯಗಳು.

ಹೆಚ್ಚುವರಿ ಓದಿಗಾಗಿ:

೧. ಕೇಂದ್ರ ಸರಕಾರದ ಈ ಸಾಲಿನ ಆರ್ಥಿಕ ಸರ್ವೇ: http://indiabudget.nic.in/ es2016-17/echapter.pdf

೨. OECD ನಡೆಸಿದ ಈ ಸಾಲಿನ ದೇಶದ ಆರ್ಥಿಕ ಸರ್ವೆ: https://www.oecd.org/eco/ surveys/INDIA-2017-OECD- economic-survey-overview.pdf

೩. PRS ನಡೆಸಿದ ದೇಶದ ಕ್ರಷಿ ಪರಿಸ್ಥಿತಿಯ ಸಮೀಕ್ಷೆ: http://www.prsindia.org/ uploads/media/Analytical% 20Report/State%20of% 20Agriculture%20in%20India.pdf

 

‍ಲೇಖಕರು avadhi

May 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. BVKulkarni

    Good analysis of Mr Siddaramaiah Government in the last four years. Plusses and minuses are realistic. When Congress is sinking at all India level, Karnataka Government headed by Mr Siddaramaiah is a ray of hope for Congress. Hope to see good performance in the last year of this tenure of government and overcomes negative effect.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: