ಸಿಜಿಕೆ ಹೇಳಿದ ಜಾಥಾ ಕಥೆ

(ಸಿಜಿಕೆ ಯವರ ಆತ್ಮಕಥನದಿಂದ ಆಯ್ದ ಭಾಗ)


ಸನತ್ ಚಹಾ ಕುಡಿದು, ಕುಡಿದ ಚಹಾವನ್ನು ಹಾಗೆಯೇ ಉಗುಳಿ ‘ಇದೇನ್ ಗುರು ?’ ಎಂದ. ನಾನು ‘ಚಹಾ’ ಎಂದೆ. ‘ನಮ್ಮ ತಾಯಾಣಿಗೂ ಟೀ ಅಲ್ಲ ಗುರು’ ಎಂದ. ನಾನು, ಶ್ರೀಕಾಂತ್ ಕೊಂಚ ಕೊಂಚ ಕುಡಿದೆವು. ಟೀ ಪುಡಿಯ ಬದಲು ಮರದ ಹೊಟ್ಟು ಹಾಕಿದ್ದರೋ ಏನೋ, ಟೀ ಕುಡಿದ ತಕ್ಷಣವೇ ಟೀಯನ್ನು ಉಗುಳಿ ಕೈ ಬೆರಳುಗಳಿಂದ ನಾಲಿಗೆ ಉಜ್ಜಿ ನೀರು ಕುಡಿದೆವು. ಅಲ್ಲಿನ ನೀರು ಎಂದರೆ ಮಣ್ಣನ್ನು ಕದಡಿ ಸೋಸದೆ ಬಿಟ್ಟ ನೀರು ಹೇಗಿರುತ್ತೋ ಹಾಗೆಯೇ ಇತ್ತು! ಕುಮಾರ ನೀರು ಕುಡಿಯುವಾಗಲೆಲ್ಲಾ ತನ್ನ ಲುಂಗಿಯನ್ನು ಎತ್ತಿ ಬಾಯಿ ಮೇಲೆ ಇಟ್ಟು ಜೈನ ಮುನಿಗಳಂತೆ ಜೈ ಹನುಮಾನ್ ಎಂದು ನೀರು ಕುಡಿತ್ತಿದ್ದ. ಈ ರೀತಿ ಸೋಸಿ ಕುಡಿಯುವ ಕುಮಾರನ ವ್ಯವಸ್ಥೆಯೇ ನಮಗೆ ಮಾದರಿಯಾಯಿತು. ನಾವೆಲ್ಲ ನೀರನ್ನು ಸೋಸಿ ಕುಡಿಯುವುದೆಂದು ತೀರ್ಮಾನಿಸಿದೆವು.
ಹಾಡುಗಳು, ನಾಟಕ ಬೀರಿದ ಪರಿಣಾಮ ಅಪಾರ. ‘ಬೆಳೆದವರು’ ನಾಟಕದಲ್ಲಿ ಕುಮಾರ ಯಾರಿಗೂ ಅರಿವಾಗದಂತೆ ದೂರದ ಮರವೊಂದರ ಕೆಳಗೆ ಸಾಯಿಬಾಬಾನ ರೀತಿ ಕೂತಿದ್ದು ವೃತ್ತಾಕಾರದಲ್ಲಿ ನಿಂತು ಅಭಿನಯಿಸುತ್ತಿದ್ದ ನಟರು ಕೂತಿದ್ದ ಜನರನ್ನು, ‘ಪಕ್ಕಕ್ಕೆ ಸರೀರಿ, ನಮ್ಮ ಗುರುಗಳು ಬರ್ತಾ ಇದ್ದಾರೆ’ ಎಂದು ಅತ್ತ ಓಡಿ ಹೋಗಿ, ಕತ್ತಲಾಗಿದ್ದರೆ ಪಂಜು ಹೊತ್ತಿಸಿ ಕರೆ ತರುತ್ತಿದ್ದರು. ಜನಸ್ತೋಮ ನಿಜವಾದ ಗುರುಗಳೇ ಬಂದರೆಂದು ಅವರೂ ಎದ್ದು ಹೋಗಿ ಅಲ್ಲಿಂದ ಭಜನೆ ಮಾಡುತ್ತಾ ನಾಟಕ ನಡೆಯುವ ಸ್ಥಳಕ್ಕೆ ಹಿಂದಿರುಗುತ್ತಿದ್ದರು. ಕುಮಾರನ ಅಭಿನಯ ಚಾತುರ್ಯ ಎಷ್ಟಿತ್ತೆಂದರೆ ಸಾಯಿ ಭಗವಾನ್ ಎಂದು ಭಜನೆ ಹೇಳಿಕೊಡುತ್ತಾ, ಭಗವಾನ್ ನನ್ನು ಸಾಯಿಸುತ್ತಾ ಜನ ನೀಡುತ್ತಿದ್ದ ನಾಕಾಣಿ, ಎಂಟಾಣಿಯನ್ನು ತನ್ನ ಕಿಸೆಗೆ ಹಾಕಿಕೊಳ್ಳುತ್ತಾ ವೃತ್ತಾಕಾರದಲ್ಲಿ ನಿಂತ ವಿದ್ಯಾರ್ಥಿಗಳನ್ನು ನೋಡಿ ‘ಏನ್ ಬೇಕ್ರಪ್ಪ ನಿಮಗೆ?’ ಎಂದಾಗ ಬಲ ಪಂಥದ ಗುರುಕುಲದ ಹುಡುಗರು ‘ಗುರುವೆ ಈ ಹಿಡಿ ಜೋಳವನ್ನು ನೂರ್ಮಡಿ ಮಾಡಿಕೊಡಿ ಗುರುವೆ’ ಎಂದಾಗ ನಿಮ್ಮೀ ಸಾಯಿಬಾಬಾ ಅರ್ತಾತ್ ಕುಮಾರ ‘ಹಿಡಿ ಜೋಳದ ಬದಲು ಚಿನ್ನ ಕೇಳಿ ಕೊಡ್ತೀನಿ; ವಾಚು ಕೇಳಿ ಕೊಡ್ತೀನಿ; ಜೋಳನ ನೂರ್ಮಡಿ ಮಾಡು ಎಂದರೆ ಹೇಗೆ ಸಾಧ್ಯ?’ ಎನ್ನುತ್ತಾ ನಿರ್ಗಮಿಸುವಾಗ ಕೂತಿದ್ದ ಪ್ರೇಕ್ಷಕರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳತೊಡಗಿದರು.
‘ಛಸ್ನಾಲಾ’ ನಾಟಕ ತುರ್ತು ಪರಿಸ್ಥಿತಿಯ ದಿನಗಳನ್ನು ಜ್ಞಾಪಿಸುತ್ತಿತ್ತು. ‘ಹೆಚ್ಚು ಕೆಲಸ, ಕಮ್ಮಿ ಕೂಲಿ’ ಎನ್ನುತ್ತಿದ್ದಾಗ ಜನರು ನಿರ್ಲಿಪ್ತತೆಯಿಂದ ಇರುತ್ತಿದ್ದರು. ಕಾರಣ ಗೊತ್ತಾಗುತ್ತಿರಲಿಲ್ಲ. ನಂತರ ತಿಳಿಯಿತು. ಅಲ್ಲಿ ಮುಕ್ಕಾಲು ಪಾಲು ಜನ ಕೃಷಿ ಕೂಲಿಕಾರರು, ತಮ್ಮ ಕೂಲಿಯ ಮೇಲೆ ನೇಮಕವಾಗದೆ ಜೀತಕ್ಕಾಗಿ ದುಡಿದವರು ಹಾಗೂ ದುಡಿಯುತ್ತಿದ್ದವರಾಗಿದ್ದರು ಎಂದು.  ಆ ಭಾಗದಲ್ಲಿ ಕಮ್ಮಿ ಕೂಲಿ ಎಂಬ ಪದವನ್ನು ನಾಟಕದಲ್ಲಿ ಬಳಸಿದರೆ, ‘ಅಷ್ಟಾದ್ರು ಕೊಡಿಸಿ’ ಎನ್ನುವುದು ಆ ಊರ ಮಂದಿಯ ಉತ್ತರವಾಗುತ್ತಿತ್ತು. ಆರ್. ಕೆ. ಹುಡ್ಗಿಯವರ ಬಳಿ ಪ್ರಸ್ತಾಪ ಮಾಡಿದಾಗ ‘ನಮ್ಮ ಭಾಗ ಎಂದರೆ ಎಲ್ಲರಿಗೂ ಬೇಡವಾದ ಭಾಗ. “ಅಭಿವೃದ್ಧಿ ಹಾಗೂ ನಾವು” ಒಂದಕ್ಕೊಂದು ಸಂಬಂಧವಿಲ್ಲದ ಪದಗಳು ಎಂದು ಹೇಳುತ್ತಿದ್ದ. ಆರ್. ಕೆ. ಹುಡ್ಗಿಯ ಭಾಷಣ ನಮಗೆ ಬೋರಾದರೆ, ಜನಕ್ಕೆ ಜೋರೋ ಜೋರು ! ಅಂದರೆ ಮೇರೆ ಮೀರಿದ ಉತ್ಸಾಹ. ಅವರು ಭಾಷಣದಲ್ಲಿ’ಮನುಷ್ಯ ದುಡಿಯಬೇಕು, ಅಸಮಾನತೆ ಹೋಗಲಾಡಿಸಬೇಕು, ಬಸವಣ್ಣ ಹೇಳಿದ ತತ್ವಗಳನ್ನು ಗಟ್ಟಿಯಾಗಿ ಹಿಡಿಯಬೇಕು, ದುಡಿಯುವ ಮನುಷ್ಯ ಬಂಗಾರದ ಮನುಷ್ಯನಾಗಲು ಸಾಧ್ಯವಿಲ್ಲ. ಅದು ಸಾಧ್ಯವಿದ್ದರೆ ಸಿನಿಮಾದಲ್ಲಿ ಮಾತ್ರ. ಉದಾಹರಣೆಗೆ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ. ಸರ್ಕಾರಿ ಅಧಿಕಾರಿಗಳು ಬಂದು ಸಾಲ ಕೊಡುತ್ತಾರೆ: ಬೋರ್ ವೆಲ್ ಕ್ಷಣಾರ್ಧಕ್ಕೆ ಸಿದ್ಧವಾಗುತ್ತದೆ. ಕ್ಷಣ ಮಾತ್ರಕ್ಕೆ ನೆಲ ಕೆಸರು ಗದ್ದೆಯಾಗಿರುತ್ತದೆ: ಮೊಣಕಾಲಿನ ತನಕ ಸೀರೆ ಎತ್ತಿದ ಹೆಂಗಸರು ಕೈ ಉಗುರಿಗೆ ಬಣ್ಣ ಬಳಿದು, ಹೂವು ಮುಡಿದು, ಸೊಂಟದ ಕೆಳಗೆ ಸೀರೆಯುಟ್ಟು ಕುಯ್ಲಿಗೆ ಇಳಿದು ಕುಯ್ದಿದ್ದನ್ನು ಹಿಡಿದು ಸಾಗುತ್ತಾರೆ. ಸಿಲ್ಕ್ ಪಂಚೆ, ಜುಬ್ಬಾ ಧರಿಸಿದವರು ಹೆಂಗಸರು ಇಟ್ಟಿದ್ದ ಭತ್ತದ ತೆನೆಗಳನ್ನೆಲ್ಲಾ ಬಡಿಯುತ್ತಾ ‘ಕೈ ಕೆಸರಾದರೆ ಬಾಯಿ ಮೊಸರು” ಎಂದು, ಹಿರಿಯರು ಹೇಳುವ ಮಾತು ಸತ್ಯ ಎಂದು ಭತ್ತದ ರಾಶಿಗೆ ಪೂಜೆ ಮಾಡುತ್ತಾರೆ, ರೈತನ ಅಭಿವೃದ್ದಿಗಾಗಿ. ಇದು ಸಿನಿಮಾದಲ್ಲಿ ತೋರಿಸುವ ಬಗೆ.
ಆದರೆ ಇಲ್ಲಿ ನೋಡ್ರಿ, ಸರ್ಕಾರಿ ಕಛೇರಿಗೆ ಹೋದರೆ ಲಂಚ ಕೊಡಬೇಕು. ಇನ್ನು ಬೋರ್ ವೆಲ್ ಹಾಕೋದು ಹೆಂಗೆ ? ನಾಟಿ ಮಾಡೋ ನಮ್ಮ ಹೆಂಗಸರ ಕೈ ಕಾಲು ಒಣಗಿ ಹೋಗಿರೋದು ನೋಡಿಲ್ವಾ ? ಸಿನಿಮಾದಲ್ಲಿ ತೋರಿಸಿದಂತೆ ಕಣದ ಪೂಜೆ ನಮ್ಮೂರಲ್ಲಿ ಯಾಕೆ ಆಗಿಲ್ಲ ಹೇಳಿ ? ಭ್ರಷ್ಟ ವ್ಯವಸ್ಥೆ ನಮ್ಮ ತಲೆ ಮೇಲಿದೆ, ಸ್ವಾತಂತ್ರ್ಯ ನಮಗೆ ಎಷ್ಟೊತ್ತಿಗೆ ಬಂತು ಹೇಳಿ ? ಕಳ್ಳನಿಗೆ ಕಳ್ಳತನ ಮಾಡೋದಕ್ಕೆ ರಾತ್ರಿ ಹೇಗೆ ಸ್ವಾತಂತ್ರ್ಯ ನೀಡುತ್ತೋ ಹಾಗೇ ನಮ್ಮ ರಾಜಕೀಯ ನಾಯಕರಿಗೆ ನಮ್ಮನ್ನು ದೋಚೋಕೆ ರಾತ್ರಿಯಲ್ಲಿ ಸ್ವಾತಂತ್ರ್ಯ ನೀಡಿದ್ದಾರೆ ಆ ಬ್ರಿಟೀಷ್ ನವರು’ ಎಂದು ಗಂಟಲಲ್ಲಿ ಉಸಿರು ಸಿಕ್ಕಿಸಿಕೊಂಡು ಮಾತು ನಿಂತಾಗ ಆರ್.ಕೆ. ಹುಡ್ಗಿಯ ಭಾಷಣವನ್ನು ನಿಲ್ಲಿಸಲು ಇದೇ ಸರಿಯಾದ ಸಮಯವೆಂದು ತಿಳಿದು ಸನತ್ ಕೂಡಲೇ ತಮಟೆ ತಂದು ಬಡಿದು ‘ಯಾರಿಗೆ ಬಂತು ಎಲ್ಲಿಗೆ ಬಂತು’ ಎಂದು ಹಾಡು ಶುರುಮಾಡುತ್ತಿದ್ದ. ಆರ್.ಕೆ.ಹುಡ್ಗಿ ಸೋಡಾವೊಂದನ್ನು ಕುಡಿದು ಮತ್ತೆ ಭಾಷಣ ಮುಂದುವರಿಸಲು ಹಾಡು ನಿಲ್ಲಿಸುವುದನ್ನೇ ಕಾಯುತ್ತಿದ್ದ. ಹಾಡು ನಿಲ್ಲಲಿ ಬಿಡಲಿ, ಹುಡ್ಗಿಯ ಭಾಷಣ ಮುಂದುವರಿಯುತ್ತಿತ್ತು ! ‘ಕೇಳಿದ್ರಲ್ಲಾ ಹಾಡನ್ನ. ಸ್ವಾತಂತ್ರ್ಯ ಬಂದಿರುವುದು ಗರೀಬರಿಗೆ ಅಲ್ಲ. ಟಾಟಾ ಬಿರ್ಲಾರಿಗೆ ! ರೊಕ್ಕ ಇದ್ದೋರು ಸ್ವಾತಂತ್ರ್ಯ ದೇವಿಯನ್ನು ಕರೆದರೆ ಅವಳು ಬಟ್ಟೆ ಬಿಚ್ಚಿಕೊಂಡು ಬಂದು ರೊಕ್ಕ ಇದ್ದೋರ್ ತೊಡೆ ಮೇಲೆ ಕೂತ್ಕೋತಾಳೆ. ನಮ್ಮಲ್ಲಿರೋ ಸರ್ಕಾರ ಅಂದ್ರೆ ಜನಗಳನ್ನು ತಿನ್ನುವ ಸರ್ಕಾರ, ಈ ಸರ್ಕಾರ ಬಂಡವಾಳಶಾಹಿ ಜನಗಳದ್ದು. ಈ ಅಸಮಾನತೆ ಅವ್ಯವಸ್ಥೆ ಹೋಗಬೇಕಾದರೆ ಚೈನಾದಲ್ಲಿ ನೋಡಿ, ಅಸಮಾನತೆ ಅನ್ನೋದು ಎಲ್ಲಿದೆ ಎಂದು…?’ ಮತ್ತೊಮ್ಮೆ ಸೋಡಾ ಕುಡಿಯಲು ಹುಡ್ಗಿ ಬಿಡುವು ಕೊಟ್ಟೊಡನೆಯೇ ಹೇಗಾದರೂ ಮಾಡಿ ಅವರ ಭಾಷಣಕ್ಕೆ ಕೊನೆ ಹೇಳಲೇ ಬೇಕೆಂದು ಹಾಡುವವರು ದನಿ ತೆಗೆದೇ ಬಿಡುತ್ತಿದ್ದರು :
ದಲಿತರು ಬರುವರು ದಾರಿ ಬಿಡಿ
ದಲಿತರ ಕೈಗೆ ರಾಜ್ಯ ಕೊಡಿ ||
ಕೋಟಿ ಕೋಟಿ ಕನಸುಗಳೊಂದಿಗೆ
ಗುಡುಗು ಮಿಂಚಿನ ಘೋಷಣೆಗಳಲ್ಲಿ
ಬಂತೋ ದಲಿತರ ಮೆರವಣಿಗೆ
ನೆಲಕೆ ಕಾಲುಗಳ ಬರವಣಿಗೆ ||
ಇಷ್ಟು ಹಾಡನ್ನು ಹಾಡುಗಾರರು ಹೇಳಿ ಮುಂದಿನ ಉಸಿರನ್ನು ತೆಗೆದುಕೊಳ್ಳುವ ಹೊತ್ತಿಗೆ ಹುಡ್ಗಿಯವರು ಈ ಹಾಡಿನ ಸಾರಾಂಶ ಹಿಡಿದೇ ಭಾಷಣಕ್ಕೆ ಪುನಃ ಸಂಸಿದ್ಧರಾಗಿಬಿಡುತ್ತಿದ್ದರು. ‘ಅಲ್ರೀ ನಮ್ಮೂರ್ನಾಗೆ ಯಾಕೆ ಬ್ರಾಹ್ಮಣರ ಮನೆ ಒಂದು ಕಡೆ ಐತೆ ? ಲಿಂಗಾಯಿತರ ಮನೆ  ಅವರ ಪಕ್ಕದಾಗ ಐತೆ ! ವೊಲೆಯರ ಮನೆ ಊರಾಚೆ ಯಾಕೆ ಐತೆ ? ಈ ಪ್ರಶ್ನೆ ಕೇಳೋದಕ್ಕೆ ಅವರ ಪಕ್ಕದಾಗ ಐತೆ ! ವೊಲೆಯರ ಮನೆ ಊರಾಚೆ ಯಾಕೆ ಐತೆ ? ಈ ಪ್ರಶ್ನೆ ಕೇಳೋದಕ್ಕೆ ಬಂದಿದ್ದೀವಿ ನಾವು. ಮನುಷ್ಯನಲ್ಲಿರೋದು ಒಂದೇ ರಕ್ತ : ಭಿನ್ನ ಭೇದ ಮಾಡೋದನ್ನ ಹೇಳಿ ಕೊಟ್ಟವರು ಯಾರು ? ನಮ್ಮಪ್ಪ ಬುದ್ಧ ಹೇಳಿದ್ನೇನ್ರಿ ? ನಮ್ಮ ಬಸವಣ್ಣ ಹೇಳಿದ್ನೇನ್ರಿ ? ಮತ್ಯಾರು ಹೇಳಿಕೊಟ್ರು ? ನೋಡಿ, ಈಗ ನಾಟಕ ‘ಬಿಹಾರ್ ಬೆಲ್ಚಿ’ ಎನ್ನುತ್ತಿದ್ದಂತೆ ಹುಡ್ಗಿಯ ಭಾಷಣ ಕೊನೆಗೂ ಮುಗಿಯಿತಲ್ಲಾ ಎಂಬ ಸಂತಸದಿಂದ ನಾಟಕ ಪ್ರಾರಂಭಿಸುತ್ತಿದ್ದೆ. ಅತ್ತ ನಾಟಕ ಶುರುವಾದಂತೆ ನಾನು ಇತ್ತ ಕಡೆ ‘ರೀ ಹುಡ್ಗೀ ಭಾಷಣ ಕಮ್ಮಿ ಮಾಡ್ರೀ’ ಎನ್ನುತ್ತಿದ್ದೆ. ಅದಕ್ಕೆ ಹುಡ್ಗಿ, ‘ಲ್ರೀ ಸರಾ, ನಮ್ ಜನಕ್ಕೆ ಒಮ್ಮಿಂದೊಮ್ಮೆಲೆ ಮುಟ್ಟಲ್ರೀ, ಬಿಡಿಸೀ ಬಿಡಿಸೀ ಹೇಳ್ಬೇಕ್ರೀ’ ಎನ್ನುತ್ತಿದ್ದರು.
‘ಬೆಲ್ಚಿ’ ನಾಟಕ ಮುಗಿಯುತ್ತಿದ್ದಂತೆ ಮತ್ತೆ ಮೈಕನ್ನು ಹುಡ್ಗಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ‘ನೋಡಿದ್ರಲ್ಲಪ್ಪ ನಾಟ್ಕಾನ, ದೇಶ ಆಳಿದೋರು ಕಾಂಗ್ರೆಸ್ ನೋರು, ಆಳ್ತೀರೋರು ಚೌಚೌ ಪಾರ್ಟಿ, ಜನತಾದವರು. ಈ ಬೆಲ್ಚಿ ಹುಡುಗ ಎಲ್ಲಿ, ಹೋಗಿ ನ್ಯಾಯ ಕೇಳಬೇಕು? ಹೇಳ್ರೀ’ ಎನ್ನುತ್ತಾ ‘ಬೆಲ್ಚಿ’ ನಾಟಕದಲ್ಲಿ ಇಡೀ ವ್ಯವಸ್ಥೆಗೆ ಧಿಕ್ಕಾರ ಎಂದು ಕೂಗುತ್ತಿದ್ದ, ಹುಡುಗನನ್ನು ತಮ್ಮ ಹೆಗಲಿಗೇರಿಸಿ ಜನಗಳ ಮುಂದೆ ನ್ಯಾಯ ಕೇಳುತ್ತಿದ್ದರು. ಜನ ಮಾತಿಗೆ ಒಲಿಯುತ್ತಿದ್ದರು. ಹೀಗೆ ನಾಟಕಗಳು ಹಳ್ಳಿಗೆ ರಾಜಕೀಯ ರಂಗು ತರುತ್ತಿದ್ದವು. ನಾಟಕದ ನಂತರ ಚರ್ಚೆ, ಕೆಲವರ ಗುಮಾನಿ, ಹಲವರ ಪ್ರಶ್ನೆಗಳೂ. ನಾಟಕವಾಡಲು ರೊಕ್ಕ ನಿಮಗೆ ಕೊಟ್ಟವರ್ಯಾರು ?’ ಇತ್ಯಾದಿ. ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮುಂದೆ ಸಾಗುತ್ತಿದ್ದೆವು.
ಶರೀಫಾ ಮಿಂಚಿನಂತೆ ಸಂಚರಿಸುತ್ತಾ ಪುಸ್ತಕ ವ್ಯಾಪಾರ, ಗ್ರೀಟಿಂಗ್ ಕಾರ್ಡ್ ಮಾರಾಟ ಮುಂದುವರಿಸುತ್ತಿದ್ದಳು. ಇದೊಂದು ರೀತಿಯಲ್ಲಿ ಎರಡೂವರೆ ಗಂಟೆಯ ಕಾರ್ಯಕ್ರಮ ನಮಗೆ ಗೊತ್ತಲ್ಲದಂತೆ ನಡೆಯುತ್ತಿತ್ತು. ಇವೆಲ್ಲದರ ನಡುವೆ ನಿದ್ದೆ, ಊಟ,ಹೆಂಡತಿ, ತಾಯಿ, ತಂದೆ, ಎಲ್ಲವನ್ನು ಎಲ್ಲರನ್ನೂ ಮರೆಯುತ್ತಿದ್ದೆ. ಸಿಕ್ಕಲ್ಲಿ ನಿದ್ದೆ: ತಿಂದ್ದಿದ್ದೇ ಊಟ: ಜಯದೇವ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ಎದೆಯ ಮೇಲೆಲ್ಲಾ ಹರಡಿದ್ದ ಒಂದೊಂದೇ ವೈಯರನ್ನು ಮುಟ್ಟಿಕೊಳ್ಳುತ್ತಿದ್ದಾಗಲೂ ನಾನಕ್ ಝರಾ, ಬೀದರ್ ನ ಮುನಿಸಿಫಲ್ ಕಚೇರಿ, ಹಳ್ಳಿಖೇಡ, ದೊಡ್ಡ ಹಳ್ಳಿಖೇಡ, ಹುಮ್ನಾಬಾದ್, ಓಕಳಿ, ಕಮಲಾಪುರ, ಕಿರಣಿ, ಜ್ಞಾಪಕ ಬರುತ್ತಿತ್ತು. ನನಗೆ ಇದರ ಬಗ್ಗೆ ಪಶ್ಚಾತ್ತಾಪವಿಲ್ಲ. ದೂರದಲ್ಲಿ ನಿಂತು ಅಳುತ್ತಿದ್ದ ಹೆಂಡತಿಯ ಕಣ್ಣೀರಿನಲ್ಲಿ ಈ ಎಲ್ಲಾ ಜಾಥಾದ ಸಂತಸ ಕಂಡಿದ್ದೆ. ಕೈ ಕೋಳವನ್ನು ಕಿತ್ತು ಬಿಸುಟು ನಿಂತ ಜನಗಳ ಮಧ್ಯೆ ಈ ದೇಶದ ಆಗು ಹೋಗುಗಳನ್ನು ಹೇಳುತ್ತಾ ಹೋಗುವುದು ಎಷ್ಟೊಂದು ಸಂತಸ. ಇಂತಹ ಹೆಮ್ಮೆ ಯಾರದ್ದಾದರೂ ಆಗಿದ್ದರೆ ಅದು ನನ್ನದು. ಸಾವೇ ನನ್ನನ್ನು ಜಯದೇವ ಆಸ್ಪತ್ರೆಯಲ್ಲಿ ಅಂದು ಅಪ್ಪಿದ್ದರೂ ಈ ಸಂತಸದಲ್ಲಿಯೇ ಸಾಯುತ್ತಿದ್ದೆ. ಆ ಹಳ್ಳಿಯ ಜನ, ಅವರ ಮುಗ್ಧತೆ, ತೋರುತ್ತಿದ್ದ ಪ್ರೀತಿ ನಿಷ್ಕಲ್ಮಶವಾದುದು: ಅಜ್ಜಿಯ ಪ್ರೀತಿಗಿಂತ ದೊಡ್ಡದು. ಸ್ವಾರ್ಥವಿಲ್ಲದ ಸಂಸ್ಕೃತಿಯ ಹರಿಕಾರನಿಗೆ ಸ್ವತಃ ಹರನೂ ಸಾಟಿಯಾಗಲಾರ. ಇದು ನಿಜ. ಈ ಸತ್ಯವನ್ನು ಕಲಾಕ್ಷೇತ್ರ, ಭೂಮಿಗೀತ, ಶಿವರಾಮ ಕಾರಂತರ ರಂಗಮಂದಿರದಲ್ಲಿ ಸಾರಿ ಹೇಳಲು ಸಾಧ್ಯವಾಗಿದ್ದರೆ, ಇಲ್ಲಿ ಇದ್ದವರೆಲ್ಲಾ ಸ್ವಾರ್ಥವಿಲ್ಲದ ಸಂಸ್ಕೃತಿಯ ಹರಿಕಾರರಾಗಬಹುದಿತ್ತು. ಆದರೆ ಎ.ಸಿ. ಗಾಳಿಗೆ ಮೈಯೊಡ್ಡಿ, ಕೈಯಲ್ಲಿ ರಮ್ ಗ್ಲಾಸ್ ಹಿಡಿದು, ಎಡಗೈಯಲ್ಲಿ ಹೊಸ ಹೆಂಡತಿಯರನ್ನು ಅಪ್ಪಿ, ದೆಹಲಿಯ ಕಡೆ ಮುಖ ಮಾಡಿ, ದೆಹಲಿಯಿಂದ ಎಸೆಯುವ ಒಂದೆರಡು ಬ್ರೆಡ್ ಚೂರುಗಳಿಗೆ ಕೈ ಚಾಚಿ ಸಂಸ್ಕೃತಿಯನ್ನು ಮಾರಿಕೊಂಡ ಜನರ ಬಗ್ಗೆ ನೀವೇ ತೀರ್ಮಾನಿಸಿ. ಈ ಮಾತುಗಳನ್ನು ಬರೆಯುತ್ತಿರುವಾಗ ನನಗೆ ನಾನೇ ಸ್ವಲ್ಪ ಭಾವುಕನಾಗಿದ್ದೇನೆಂದು ಅರಿವಾಗುತ್ತಿದೆ, ಕ್ಷಮೆ ಇರಲಿ.
ಹಳ್ಳಿಖೇಡ ಬಿಟ್ಟು ಬಸ್ಸಿನ ತಾಪತ್ರಯದೊಂದಿಗೆ ಹೊನ್ನಕಿರಣಿಯನ್ನು ತಲುಪಿದೆವು, ಜಾಥಾ ವ್ಯಾನು ಊರು ತಲುಪಿದ ತಕ್ಷಣ ಗಂಗಾಧರ ಸ್ವಾಮಿ ಮಕ್ಕಳೊಡನೆ ನಾಟಕದ ಪ್ರಚಾರ ಮಾಡುತ್ತ ಊರು ಸುತ್ತುತ್ತಿದ್ದ. ಶರೀಫಾ ತನ್ನ ಪುಸ್ತಕದ ಗಂಟನ್ನು ತೆಹಗೆದುಕೊಂಡು ಆಯಕಟ್ಟಾದ ಜಾಗವನ್ನು ಹಿಡಿಯುತ್ತಿದ್ದಳು. ನಾನು ಧ್ವನಿವರ್ಧಕಕ್ಕೆ ಪವರ್ ಪಾಯಿಂಟ್ ಹುಡುಕುತ್ತಿದ್ದೆ: ಇಷ್ಟೂ ಹೊತ್ತು ನಮ್ಮ ನಟರು ಬಸ್ ನಲ್ಲಿ ಆದಂದವಾಗಿ ಮಲಗುತ್ತಿದ್ದರು. ನಾನು ಒಮ್ಮೆ ಕೋಪ ಮಾಡಿಕೊಂಡಾಗ, ‘ಇನ್ನೂ ಹುಡ್ಗಿಯವರ ಭಾಷಣದಲ್ಲಿ “ಬಂಗಾರದ ಮನುಷ್ಯ” ಬಂದೇ ಇಲ್ಲಾ ಸಾರ್, ಎದ್ದು ಏನು ಮಾಡುವುದು?’ ಎನ್ನುತ್ತಿದ್ದರು. ಕುಮಾರ ‘ಹುಡ್ಗಿಯವರ ಭಾಷಣ ಮತ್ತು “ಬೆಲ್ಚಿ” ನಾಟಕದ ನಂತರ ನನ್ನ ಪಾತ್ರ’ ಎಂದು ಸಾಯಿಬಾಬಾನ ಗೌನ್ ಒಳಗೆ ಬಸವನಹುಳದ ರೀತಿ ಸೇರಿಕೊಂಡುಬಿಡುತ್ತಿದ್ದ. ಸನತ್ ಕುಮಾರ್, ಬಸವಲಿಂಗಯ್ಯ, ಅಲ್ಲಿ ಇಲ್ಲಿ ಪುಳ್ಳೆ ಆಯ್ದು ತಂದು ತಮಟೆ ಕಾಯಿಸಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ಹೇಗೋ ಜಾಥಾ ಒಂದು ರೀತಿಯ ಫ್ರೀಕ್ವೆನ್ಸಿಯನ್ನು ತನಗೇ ಗೊತ್ತಿಲ್ಲದಂತೆ ಹೊಂದಿಸಿಕೊಂಡಿತ್ತು.
ಈ ಭಾಗದಲ್ಲಿ ನಮಗೆ ಮುಖ್ಯವಾಗಿ ಕಾಡಿದ ಸಮಸ್ಯೆ ಎಂದರೆ ಸಾಹಿತಿ, ಕವಿಗಳ್ಯಾರೂ ಇಲ್ಲದಿದ್ದದ್ದು. ಕನಿಷ್ಟ ಪ್ರಗತಿಪರ ಸಂಘಟನೆಯಿಂದಲೂ ಯಾರೂ ಸಿಗದಿದ್ದುದು. ಹೊನ್ನಕಿರಣಿಯಿಂದ ಸಾಗುತ್ತಿದ್ದಾಗ ಸಿಕ್ಕಿದ ಫರಹತಾಬಾದಿನಲ್ಲಿ ಅಂದು ಸಂತೆ. ನಾನು ಬಸ್ ನಿಲ್ಲಿಸಿ ‘ಇಲ್ಲಿ ನಾಟಕ ಮಾಡೋಣ’ವೆಂದಾಗ ಎಲ್ಲರೂ ಗುಂಪಾಗಿ ನನ್ನ ಬಳಿ ಬಂದು ಹಲ್ಲುಪುಡಿ, ಸೋಪು, ಟವಲ್, ಲುಂಗಿ, ಬಾಚಣಿಗೆ, ಎಣ್ಣೆ, ಹೀಗೆ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟರು. ಇನ್ನೂ ಕೆಲವರು ತಮ್ಮ ಮೈ ಮೇಲೆ ಕಲ್ಲು ಮುಳ್ಳಿನಿಂದಾದ ರಕ್ತದ ಕಲೆಗಳನ್ನು ತೋರಿಸತೊಡಗಿದರು. ನಾನು ಎಲ್ಲರಿಗೂ ಅಗತ್ಯವಿದ್ದ ಸಾಮಾನುಗಳನ್ನು ಖರೀದಿಸಲು ಸಂತೆಗೆ ಹೋದೆ. ಹೇಗೆ ನೋಡಿದರೂ ನಮ್ಮ ಪ್ರಕಟಣೆಗಳ ಪುಸ್ತಕ ವ್ಯಾಪಾರ ಅಷ್ಟಕಷ್ಟೆ. ಕಾರಣ ಆ ಭಾಗದಲ್ಲಿ ಓದುವವರ, ಓದಿದವರ ಸಂಖ್ಯೆಯೇ ಕಡಿಮೆ. ಶ್ರೀಮಂತರು ಅಥವಾ ಕಡು ಬಡವರು – ಈ ಎರಡು ವರ್ಗದವರಷ್ಟೇ ಆ ಭಾಗದ ವಾಸಿಗಳಾಗಿದ್ದವರು. ಬಡವರು ನಿರ್ವಾಹವಿಲ್ಲದೆ ಜೀತ ಒಪ್ಪಿಕೊಂಡಿದ್ದರು. ಶ್ರೀಮಂತರು ಕೆಲಸದ ಗೊಡವೆಗೆ ಹೋಗದೆ ಅಪರೂಪಕ್ಕೆ ಜೀಪಿನಲ್ಲಿ ಊರಿಗೆ ಬಂದು ಹೋಗುತ್ತಿದ್ದರು. ಇನ್ನು ಯುವಕರು ಹಾಗೂ ವಿದ್ಯಾರ್ಥಿ ಸಮುದಾಯ ಗಂಭೀರ ಚಿಂತನೆಗೆ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ ವ್ಯಾನಿಗೆ ಡೀಸೆಲ್ ಹಾಕಿಸಲು ನೂರು ಸಲ ಹಿಂದೆ ಮುಂದೆ ನೋಡಬೇಕಿತ್ತು.
ಜಾಥಾದಲ್ಲಿ ಭಾಗಿಯಾಗಿದ್ದವರಲ್ಲಿ ಯಾರ ಜೇಬಿಗೆ ಕೈ ಹಾಕಿದರೂ ಹಿಡಿ ತುಂಬ ಸಿಕ್ಕುತ್ತಿದ್ದುದು ಧೂಳು. ಇದರಿಂದ ನನ್ನ ಉಗುರಲ್ಲಿ ಮಣ್ಣು ತುಂಬಿ, ಅವರ ತಲೆಯನ್ನು ದಿಟ್ಟಿಸಿ ನೋಡಿದಾಗ ಕೆದರಿದ ಕೂದಲಲ್ಲೂ ಧೂಳು ಗೂಡು ಕಟ್ಟಿಕೊಂಡು ಗೆದ್ದಲು ಹತ್ತುವ ಸಮಯ ಬಂದೇ ಬಿಟ್ಟಿತು ಎಂದುಕೊಳ್ಳುತ್ತಿದ್ದೆ. ಇದರೊಟ್ಟಿಗೆ ಸೊಳ್ಳೆಗಳ ಧಾಳಿ, ನೊಣಗಳ ಹಿಂಡು ಕಾಡುತ್ತಿದ್ದುದರಿಂದ ವಿಶೇಷವಾದ ಸ್ಫೂರ್ತಿ ಎಲ್ಲರ ಅಸ್ತ್ರವಾಗಬೇಕಿತ್ತು. ಹೀಗಾಗಿ ಹಣದ ಕೊರತೆಯನ್ನು ಅವರ ಮುಂದೆ ಹೇಳದೆ ಜಾಥಾವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಬೆಂಗಳೂರಿನ ಕಛೇರಿಯ ಸಂಪರ್ಕವನ್ನು ಹೆಚ್ಚು ಕಮ್ಮಿ ಕಳೆದುಕೊಂಡಿದ್ದೆವು. ಪ್ರತಿನಿತ್ಯ ರಾತ್ರಿ ನಾನು, ಶರೀಫಾ ಕೂತು ರೊಕ್ಕ ಎಣಿಸಿ ದಿನಚರಿ ಬರೆಯುತ್ತಿದ್ದೆವು. ಇಂತಹ ದಿನಚರಿ ಬರೆಯುವ ಸಮಯ ರಾತ್ರಿ ಹನ್ನೆರಡಂತು ಆಗುತ್ತಲೇ ಇತ್ತು. ಬೆಳಗ್ಗೆ ಮತ್ತೆ ಜಾಥಾ ದಿನಚರಿ. ಹೀಗಾಗಿ ಹಣಕ್ಕಾಗಿ ಯೋಚಿಸುವ ಹಾಗೂ ನೋವನ್ನು ಹಂಚಿಕೊಳ್ಳಲೂ ಯಾರೂ ಜೊತೆ ಇಲ್ಲದೆ ಕೊರಗತೊಡಗಿದೆ. ಕ್ರಮಿಸಬೇಕಾಗಿದ್ದ ದಿನಗಳು 20ಕ್ಕೂ ಹೆಚ್ಚು. ನನ್ನ ಉತ್ಸಾಹವೊಂದೇ ಎಷ್ಟು ದಿನ ಬಂಡವಾಳವಾಗಬಹುದು ? ಹಾಗೇ ನಿರಂತರ ಸಂಘಟಿಸುವ ಶಕ್ತಿ ಬರಬೇಕು ಎಲ್ಲಿಂದ ?

 

‍ಲೇಖಕರು avadhi

January 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ತಡಗಳಲೆ ಸುರೇಂದ್ರ

    ಪ್ರಚಂಡ ಕೃಷ್ಣ ಅವನು.ಅಪಾರ ಸಂಘಟಕ.ಕಾರ್ಯಕರ್ತರನ್ನು ಹುರಿದುಂಬಿಸುವ ಕಲೆ ಕರಗತ ಮಾಡಿಕೊಂಡಿದ್ದ ಆಪ್ತಮಿತ್ರ.ಜನರ ನೋವಿಗೆ ಹೃದಯದಾಳದಿಂದ ಸ್ಪಂದಿಸಿದ ಮೃದುಜೀವಿ.

    ಪ್ರತಿಕ್ರಿಯೆ
  2. ವಿಮಲಾ ಶರ್ಮಾ ಕಲಗಾರ್

    ಮರೆತೇನೆಂದರ ಮರೆಯಲಿ ಹ್ಯಾಂಗ ಸಿ.ಜಿ.ಕೆ ನಿನ್ನ……….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: