ಸಿಜಿಕೆ ಮತ್ತು ಸಾವಿರ ರೂಪಾಯಿ ನೋಟು

ಜಡಿಯಪ್ಪ ಗೆದ್ಲಗಟ್ಟಿ 

ಹೊಸಪೇಟೆಯಲ್ಲಿ ಹೈಸ್ಕೂಲ್ ಸೇರಿದ ಸಮಯ, ಟೀನೇಜಲ್ಲಿ ಬಳ್ಳಾರಿ ಬಿಸಿಲಿಗೆ ಟ್ಯಾನಾಗುವಷ್ಟು ಓಡಾಡಿಕೊಂಡಿದ್ದ ಸಮಯದಲ್ಲಿ ಬೀದಿ ನಾಟಕದ ತಂಡ ಭಾವೈಕ್ಯತಾ ವೇದಿಕೆಯಲ್ಲಿ ಸಕ್ರಿಯನಾಗಿದ್ದ ಸಮಯದಲ್ಲಿ ಹಂಪಿ ಉತ್ಸವ!

ಹೇಳಿ-ಕೇಳಿ ಹೊಸಪೇಟೆಯ ಸಾಂಸ್ಕೃತಿಕ ಲೋಕದಲ್ಲಿ ಜಗತ್ಪ್ರಸಿದ್ದಿಯಾಗಿದ್ದ ನಮ್ಮ ತಂಡದ ಸಂಸ್ಥಾಪಕ ಪಿ.ಅಬ್ದುಲ್ ಮಾಮಾನಿಗೆ ಅವರ ಚಿಕ್ಕಪ್ಪ ಇಬ್ರಾಹಿಂ ಸಾಹೇಬರಿಂದ ರಾಜ್ಯದ ಬಹುತೇಕ ಸಾಂಸ್ಕೃತಿಕ ವ್ಯಕ್ತಿಗಳ ಪರಿಚಯವಿತ್ತು. ಹಂಪಿಗೆ ಬರುವವರು, ಆಗಷ್ಟೇ ಪ್ರಾರಂಭವಾಗಿದ್ದ ಹಂಪಿ ಕನ್ನಡ ವಿವಿಗೆ ಬರುವವರು ಸೇರಿ ಹೊಸಪೇಟೆಗೆ ಯಾರೇ ಬಂದರು ಅಬ್ದುಲ್ ಮಾಮಾನ ಮನೆಗೆ ಬೇಟಿ ನೀಡುತ್ತಿದ್ದರು, ಅವರ ಮನೆಯನ್ನೆ ವೇದಿಕೆಯ ಕಚೇರಿ ಮತ್ತು ನಾಟಕದ ತಾಲೀಮು ಸ್ಥಳವನ್ನಾಗಿ ಬಳಸುತ್ತಿದ್ದ ಅಬ್ದುಲ್ ಮಾಮಾ ಯಾರೇ ಸಾಂಸ್ಕೃತಿಕ ವ್ಯಕ್ತಿಗಳು ಬಂದರು ನಮಗೆಲ್ಲಾ ಸರ್ಕಲ್ಲಿನಲ್ಲಿ ಕೂರಿಸಿ ಬಂದವರ್ಯಾರು ಎಂದು ಪರಿಚಯಿಸುತ್ತಿದ್ದರು.

ಆಗಲೇ ನಾವು ಹೊಸಪೇಟೆಯಲ್ಲಿದ್ದುಕೊಂಡು ನಾಡಿನ ಬಹುತೇಕ ಸಾಧಕರ ಜೊತೆ ಹಂಪಿ ತೋರಿಸುವ ನೆಪದಲ್ಲಿ ದಿನಗಟ್ಟಲೇ ಅವರ ಜೊತೆ ಸಹಾಯಕರಾಗಿ ಒಡನಾಟ ಬೆಳೆಸಿಕೊಂಡಿದ್ದೆವು. ಕೀರಂ ಅಂತಾ ಮೇದಾವಿಗಳ ಜೊತೆ ಕುಳಿತು ದೊಡ್ಡವರ ಮಾತುಗಳನ್ನು ಆಲಿಸುವುದೇ ನಮಗೆಲ್ಲಾ ಪರಾಮನಂದ.

ಹಂಪಿ ಉತ್ಸವದಲ್ಲಿ ಈ ವರ್ಷದ ಕಾರ್ಯಕ್ರಮಗಳು ಮತ್ತು ಅಲಂಕಾರಿಕ ತಯಾರಿಕೆಗಾಗಿ ಸಿಜಿಕೆ ಅನ್ನೋರು ಬೆಂಗಳೂರಿಂದ ಬರ್ತಿದ್ದಾರೆ, ಅವರು ಬೆಂಗಳೂರು ವಿವಿಯಲ್ಲಿ ಮೇಷ್ಟ್ರು ಮತ್ತು ನಾಡಿನ ಮೇರು ರಂಗ ಸಂಘಟಕರು, ಚಿತ್ರದುರ್ಗದ ಮೂಲದವರಾಗಿದ್ದು ನಿಮ್ಮ ನಾಯಕರೇ ಲೇ ಅಂತಾ ಅಬ್ದುಲ್ ಮಾಮಾ ನಂಗೆ ಅವರ ವ್ಯಕ್ತಿ ಪರಿಚಯ ಕೊಟ್ಟಾಗ ನಮ್ಮೋರು ಅನ್ನೊ ಪ್ರೀತಿ ಆಗ ಮನಸ್ಸಿನ ಮೂಲೆಯಲ್ಲಿ ಬಂದೋಗಿತ್ತು.

ಶಾಲೆಯ ಸಮಯಕ್ಕಿಂತ ಮುಂಚೆ ಅವರನ್ನು ನೋಡಿ ಆಮೇಲೆ ಶಾಲೆಗೆ ಹೋದ್ರಾಯಿತು ಅಂತಾ ನಮ್ಮಳ್ಳಿಯಿಂದ ಬೇಗನೆ ಬಿಟ್ಟು ಅಬ್ದುಲ್ ಮಾಮಾನ ಮನೆಗೆ ಬಂದೆ, ಮಾಮಾ ಹೇಳಿದ್ರು ಅವರು ಬೆಳಗಿನ ಜಾವ ಬಂದು ಮಲ್ಲಿಗೆ ಹೋಟೆಲ್ಲಿನ ರೂಮಲ್ಲಿ ಮಲಗಿದ್ದಾರೆ, ರೆಸ್ಟ್ ಆದಮೇಲೆ ಹಂಪಿ ಕಡೆ ಹೋಗಿ ಸಂಜೆ ನಮ್ ಟೀಮಿನ ಸದಸ್ಯರ ಜೊತೆ ಸಿಗ್ತಾರೆ ಅಂತಾ. ಆವತ್ತಿನ ಶಾಲೆ ಟೈಂ ಸ್ವಲ್ಪ ನಿದಾನವಾಗಿತ್ತು ಕಾರಣ ಮನಸ್ಸಿನ ತುಡಿತ ಜಾಸ್ತಿಯಾಗಿತ್ತು ಈ ಸಿಜಿಕೆಯವರು ಯಂಗೀರ್ತಾರೆ ಅಂತಾ!

ಸಂಜೆ ಸ್ಕೂಲಿಂದ ಸೀದಾ ಮಾಮಾನ ಮನೆಗೆ ಹೋದೆ, ನಮ್ಮ ತಂಡದ ಗೆಳೆಯರು ಅವರವರ ಕೆಲಸ ಮುಗಿಸಿ ಫ್ರೆಸ್ಸಾಗಿ ಒಬ್ಬಬ್ರೆ ಬರ್ತಿದ್ರು. ಸಂಜೆ ಮಬ್ಬುಗತ್ತಲಲ್ಲಿ ಬಂದ ಕಾರಿನಿಂದಿಳಿದ ಸಿಜಿಕೆಯವರ ಕೈ ಹಿಡಿದು ಅವರ ಹೆಗಲ ಮ್ಯಾಲೆ ಹಾಕಿಕೊಂಡು ಸೊಂಟಕ್ಕೊಂದು ಕೈಕೊಟ್ಟು ಮಾಮಾ ಇಳಿಸಿಕೊಂಡಾಗ ಗೊತ್ತಾಯಿತು ಅವರು ದಿವ್ಯಾಂಗರು ಅಂತಾ. ನಂಗಂತು ಪರಮಾಶ್ಚರ್ಯ ಈ ಯಪ್ಪಾ ಅಷ್ಟೊಂದ್ ಫೇಮಸ್ ಅಂತಾ ?

ನಮ್ಮ ಸರ್ಕಲ್ಲಿನಲ್ಲೊಂದು ಚೇರ್ ಹಾಕಿ ಎಲ್ಲರ ಮುಖ ಎಲ್ಲಾರಿಗೂ ಕಾಣಿಸುತ್ತಾ ಅಂತಾ ಕನ್ಫರ್ಮ್ ಮಾಡಿಕೊಂಡು ಮಾಮಾ ಮಾತು ಶುರು ಮಾಡಿ ಟೀಮಿನ ಬಗ್ಗೆ ಮಾತಾಡಿ ಕೊನೆಗೆ ನಮಗೆ ನಾವೇ ಪರಿಚಯಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ರು. ಎಲ್ಲಾರನ್ನು ಪ್ರೀತಿಯಿಂದ ಮಾತಾಡಿಸಿ ಖಾಲಿ ಇರುವ ಮಕ್ಕಳು ಹಂಪಿ ಉತ್ಸವದ ಪೂರ್ವ ತಯಾರಿ ಕೆಲಸಗಳಲ್ಲಿ ಬಂದು ಸಹಾಯಕರಾಗಿ ಕೆಲಸ ಮಾಡಬಹುದು ಅಂತಾ ಆಫರ್ ಕೊಟ್ಟು ಹೋದರು.

ನಮಗೆಲ್ಲಾ ಇಂತವರನ್ನೂ ನೋಡುವುದು ಮತ್ತು ಅವರಾಡುವ ಮಾತುಗಳನ್ನು ಕೇಳಿ ಆನಂದಪಡುವುದು ಚಟವಾಗಿ ಹೋಗಿತ್ತು. ಮಾಡಿದ್ದ ಕೆಲಸವೇನಿರಲಿಲ್ಲ ಒಂದಿಷ್ಟು ದಿನಗಳ ಕಾಲ ಅವರ ಜೊತೆ ಇದ್ದಿದ್ದಕ್ಕೆ ಹಂಪಿ ಉತ್ಸವದ ನಂತರ ಕರೆದು ನಮಗೆಲ್ಲಾ ಸಾವಿರದ ನೋಟು ನೀಡಿ ಚೆನ್ನಾಗಿ ಓದಿ ಅಂತಾ ಅಕ್ಕರೆಯಿಂದ ಗದರಿದ್ದರು. ಅದೇ ಫಸ್ಟ್ ನಾ ಸಾವಿರದ ನೋಟು ನೋಡಿದ್ದು, ಮುಟ್ಟಿದ್ದು ಮತ್ತು ಜೇಬಿನಲ್ಲಿಟ್ಟುಕೊಂಡಿದ್ದು 🙂 ಚಿಲ್ಲರೆ ಮಾಡಿಸುವ ಬಗ್ಗೆ ತವಕಗೊಂಡಿದ್ದು

‍ಲೇಖಕರು avadhi

April 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: