ತುಂಬಾ ಮನ ಕಲಕುವ ಪತ್ರ; ಗಾಢ ವಿಷಾದವನ್ನು ಕವಿಸುವ ಪತ್ರ. ರೋಹಿತ್ ಅವರ ಈ ಪತ್ರವನ್ನು (ಅದು ಅನುವಾದವಾಗಿದ್ದರೂ) ಓದಿದಾಗ ಮುಂದೆ ಅವರೊಬ್ಬ ಸಮರ್ಥ ಲೇಖಕರಾಗುತ್ತಿದ್ದರು ಎಂಬುದಕ್ಕೆ ಸಂದೇಹವೇ ಇಲ್ಲ.
ಅವರು ಇನ್ನೂ ಬಹು ಕಾಲ ಬದುಕಿ ಬಾಳಬೇಕಿತ್ತು. ಕನಿಷ್ಠ ಪಕ್ಷ ಅವರ ಕೊನೆಯಾಸೆಗಳಾದರೂ ಪೂರೈಸಿದರೆ ಆ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಬಹುದು. ತುಂಬಾ ನೋವಿನಿಂದ
-ಸಿ. ಎನ್. ರಾಮಚಂದ್ರನ್
ರೋಹಿತ್ ವೆಮುಲ ಎಂಬ ಯುವಕ ಹೈದರಾಬಾದ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬರೆದ ಪತ್ರ.. very sad and disturbing.
ಆತನ ಕೊನೆಯ ಪತ್ರವನ್ನು ಓದಿಕೊಂಡರೆ ಅದೆಂಥ ಸುಂದರ ಭಾವಬಿಂದುವೊಂದು ಆವಿಯಾಗಿಹೋಯಿತಲ್ಲ ಅಂಥ ವಿಷಾದ ಕಾಡದೇ ಇರದು. ಇಷ್ಟು ಚೆಂದಕ್ಕೆ ಅಕ್ಷರಗಳನ್ನು ಪೋಣಿಸಿದ ರೋಹಿತ್ ವೆಮುಲ ಸಾವಿಗೆ ಶರಣಾದ ಎಂಬುದನ್ನು ಮಾತ್ರ ನಂಬಲು ಕಷ್ಟವಾಗುತ್ತಿದೆ.
-ಟಿ ಎನ್ ಸೀತಾರಾಂ






ಬಹಳ ನೋವಿನ ಸಂಗತಿ. ಇಂಥ ಘಟನೆಗಳಿಗೆ ಅಧ್ಯಾಪಕ-ವಿದ್ಯಾರ್ಥಿ ಮಾನವೀಯ ಸಂಬಂಧ ಈ ದಿನಗಳಲ್ಲಿ ಕಡಿಮೆಯಾಗಿರುವುದೂ ಒಂದು ಕಾರಣ ಎಂದು ನನ್ನ ಅನಿಸಿಕೆ. ಈ ಹುಡುಗನ ಮಾನಸಿಕ ತೊಳಲಾಟಕ್ಕೆ ಕಾರಣವೇನೋ ತಿಳಿಯದು. ಏನಿದ್ದರೂ ಅದನ್ನು ಗ್ರಹಿಸಿ ಸರಿಪಡಿಸುವುದು ಸಾಧ್ಯವಿತ್ತು ಎನಿಸುತ್ತದೆ. ಯುನಿವರ್ಸಿಟಿಗಳ ಪ್ರತಿಯೊಂದು ವಿಭಾಗವೂ ಈ ಕುರಿತು ಗಮನ ನೀಡುವುದು ಅಗತ್ಯ.
ರೋಹಿತ್ ನಂಥ ಪ್ರತಿಭಾವಂಥ ಯುವಕರಲ್ಲಿ ವರ್ತಮಾನ ಸಂದರ್ಭದ ಕಷ್ಟಕೋಟಲೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಯಾಕೆ ಕುಂಟಿತಗೊಳ್ಳುತ್ತಿರುವುದೊ? ಇಂಥ ನೋವಿನ ಘಟನೆಗಳಿಗೆ ಯಾರು ಹೊಣೆ? ಚಂದ್ರಶೇಖರರಾವ್ ರಂಥ ಸನಾತನ ಮನಸ್ಸಿನ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು, ಇಂಥ ದುರ್ಬಲ ಮನಸ್ಸಿನ ಯುವಕರನ್ನು ಹೆತ್ತವರ ಸದ್ಯದ ಪರಿಸ್ಥಿತಿ ಊಹಿಸಿಕೊಂಡರೇನೆ ಭಯ ಅಗುತ್ತೆ, ನನಗಂತೂ ತುಂಬ ದುಃಖ ಆಗಿದೆ
ಕುಂವೀ
ರೋಹಿತ್ ವೆಮುಲಾನ ಸಾವು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆಯೆನಿಸುತ್ತೆ. ಮೊದಲಿಗೆ ಪದವಿಗಳನ್ನು ಮಾರುವ ಕೇಂದ್ರಗಳಾಗಿರುವ ನಮ್ಮ ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿಯನ್ಉ ವಿಮರ್ಶೆಗೊಳಿಸಬೇಕಿದೆ. ಹರಯದ ಯುವಕ ಯವತಿಯರನ್ನು ಅತ್ಯಂತ ಮಾನವೀಯವಾಗಿ, ಪ್ರೇಮದಿಂದ ನಡೆಸಿಕೊಳ್ಳಬೇಕಾದ ವಿ.ವಿ.ಗಳು ಅಧಿಕಾರಸ್ಥರ ಮತ್ತು ಕೆಂಪುಪಟ್ಟಿಯ ತಾಣಗಳಾಗಿರುವುದನ್ನು ಬದಲಾಯಿಸಬೇಕಿದೆ.
ಇನ್ನು ರೋಹಿತನಿಗೆ ಅಗತ್ಯವಾಗಿ ಸಿಗಬೇಕಿದ್ದ ಅವಕಾಶಗಳು ಮತ್ತು ಹಕ್ಕುಗಳು ದೊರೆಯದೇ ಹೋದದ್ದಕ್ಕೆ ಕಾರಣ ನಾವು ಮತ್ತು ನಾವುಗಳೇ ಸೃಷ್ಠಿಸಿಕೊಂಡು ಪೊರೆಯುತ್ತಿರುವ ನಮ್ಮ ವ್ಯವಸ್ಥೆ!
ನೀನು ನಕ್ಷತ್ರಗಳನ್ನು ಪ್ರೀತಿಸುವುದೇ
ನಿಜವಾಗಿದ್ದರೆ
ಅವುಗಳನ್ನು ಇಲ್ಲಿಂದಲೂ ಪ್ರೀತಿಸಬಹುದಿತ್ತು
ಅವುಗಳೆಡೆಗೆ ಹೋಗುವ ಅಗತ್ಯವಿರಲಿಲ್ಲ