ಸಿಂಗಾಪುರ್ ನಲ್ಲಿ ಕಸ ಇಲ್ಲ..

ಈ ಟಿವಿ ಕನ್ನಡ ನ್ಯೂಸ್ ಚ್ಯಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅದು ಹೈದರಾಬಾದಿನಲ್ಲಿ. 3 ವರ್ಷದ ಬಾಂಡ್ ಬೇರೆ. ಕೋರ್ಟ್ – ನೋಟೀಸ್ ಅಲೆದಾಡುವ ಬದಲು ಮರ್ಯಾದೆಯಿಂದ 3 ವರ್ಷ ಇದ್ದು, ಕೆಲಸ ಕಲಿತು ಹೊರಡೋದೆ ಒಳಿತು ಅಂದುಕೊಳ್ಳುತ್ತಾ ಮುತ್ತಿನ ನಗರಿಗೆ ಪ್ರಯಾಣ ಬೆಳೆಸಿದೆ. ನಮ್ಮ ಜೊತೆ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದವರು ಬಿಟ್ರೆ ಮತ್ಯಾರು ಇರಲಿಲ್ಲ ಅಲ್ಲಿ ಪರಿಚಯದವರು. ಹಾಗಾಗಿ ಹೆಚ್ಚಿನವರು ಒಂದೇ ಸ್ಥಳದಲ್ಲಿ ಬಾಡಿಗೆ ಮನೆ ಹೊಂದಿದ್ದರು. ನನ್ನದು ಆರಂಭವಾಗಿತ್ತು ಗೆಳತಿಯ ಜೊತೆ ಹೈದರಾಬಾದಿ ಜೀವನ. ಅದು 4 ಅಂತಸ್ತಿನ ಕಟ್ಟಡ. ಕಟ್ಟಡದ ಹಿಂದೆ, ಅಲ್ಲಿನ ಸ್ಥಳೀಯರ ಒಂದು ಸ್ವಂತ ಮನೆ. ಅದರ ಪಕ್ಕಕ್ಕೆ ಒಂದು ಖಾಲಿ ಸೈಟ್. ಎದುರುಗಡೆ ಯಾವುದೇ ಮನೆಗಳಿಲ್ಲದೇ ಖಾಲಿಯಾಗಿಯೇ ಇತ್ತು ಜಾಗ.

ಆ ಅಪಾರ್ಟ್ಮೆಂಟ್ ನಲ್ಲಿ ಎಲ್ಲಾ ವ್ಯವಸ್ಥೆಯೂ ಚೆನ್ನಾಗಿಯೇ ಇತ್ತು. ಕಸದ ವಿಲೇವಾರಿ ಒಂದು ಹೊರತು ಪಡಿಸಿ. ವಾರಕ್ಕೊಂದು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದವರು ನಾವೆಲ್ಲ. ಬಂದು ಬಿದ್ದುಕೊಂಡ್ರೆ ಸಾಕು ಅನ್ನುವ ಸ್ಥಿತಿ ನಮ್ಮದಾಗಿ ರುತಿತ್ತು. ಇನ್ನೂ ಮನೆಯ ಕಸ ಹಿಡಿದು, ಕಸದ ತೊಟ್ಟಿಗಾಗಿ ರಸ್ತೆ ರಸ್ತೆ ಅಲೆದಾಡಲು ಶಕ್ತಿ ಆದರೂ ಎಲ್ಲಿ ಇರುತ್ತೆ ಹೇಳಿ. ಆ ಅಪಾರ್ಟ್ ಮೆಂಟ್ ಗೆ ಅದಾಗಲೇ ಬಂದು ನೆಲೆಸಿದವರ ಮಾರ್ಗವನ್ನೇ ನಾವು ಅನುಸರಿಸಿದೆವು. 3 ನೇ ಮಹಡಿಯಿಂದ ಕಟ್ಟಡದ ಹಿಂದಿದ್ದ ಖಾಲಿ ಸೈಟ್ ಗೆ ನೇರ ಎಸೆತ. ಕಸದ ಚೀಲ ಎಸೆಯುವುದೇ ಒಂದು ಚ್ಯಾಲೆಂಜ್ ಆಗಿತ್ತು. ಆದರೆ ಕ್ರಮೇಣ ಸೈಟ್ ನ ಪಕ್ಕದ ಮನೆಗೂ ಕಸ ಬೀಳಲು ಆರಂಭ ವಾಗಿ ದೂರಿನ ಸುರಿಮಳೆ ಆರಂಭವಾಯಿತು. ಬಳಿಕ ಹೇಗೋ ಮನಸ್ಸು ಮಾಡಿದ ನಮ್ಮ ಅಪಾರ್ಟ್ ಮೆಂಟ್ ಮಾಲೀಕರು, ನಿತ್ಯ ಕಸ ಸಂಗ್ರಹಿಸುವವರನ್ನು ಕರೆ ಸುವ ಯೋಜನೆಗೆ ಕೈ ಹಾಕಿದರು.

ಇವೆಲ್ಲಾ ಸಿಂಗಾಪುರದಲ್ಲಿ ನಡೀತಿದ್ರೆ, ಬಾಡಿಗೆ ಮನೆಯಿಂದ ನೇರ ಜೈಲುಮನೆ ಸೇರುತ್ತಿದ್ದೆವೋ ಏನೋ. ಅಂದ ಹಾಗೆ ಇಲ್ಲಿ ಮನೆಯ ಕಸವನ್ನು ಬಿಸಾಕಲು ಎಲ್ಲೂ ಹೊರಗೆ ಹೋಗಬೇಕಿಲ್ಲ. ಮನೆಯ ಒಂದು ಮೂಲೆಯಲ್ಲಿ ಚೂಟ್ ಎಂಬ ಹೆಸರಿನ ರಂಧ್ರ ಇರುತ್ತವೆ. ಸ್ಟೀಲ್ ಬಾಗಿಲಿನಿಂದ ಮುಚ್ಚಲ್ಪಡುವ ಈ ಚೂಟ್ ಗೆ ಯಾವುದೇ ಸಮಯದಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಕಸಗಳನ್ನು ಹಾಕಬಹುದು. ಇಳಿಜಾರಿನಂತಿರುವ ಆ ಭಾಗದಿಂದ ಅದು ನೇರ ನೆಲ ಮಹಡಿಯಲ್ಲಿರುವ ಒಂದು ಬೃಹತ್ತಾದ ಕಸದ ತೊಟ್ಟಿಯಲ್ಲಿ ಹೋಗಿ ಸಂಗ್ರಹವಾಗುತ್ತದೆ. ರಿಸೈಕಲ್ ವೇಸ್ಟ್, ಜನರಲ್ ವೇಸ್ಟ್ ಎಂಬ ರೀತಿಯಲ್ಲಿ ಬೇರ್ಪಡಿಸಿದ ಎರಡೆರಡು ಚೂಟ್ ಗಳು ಕೂಡ ಹೊಸ ಕಟ್ಟಡಗಳಲ್ಲಿ ಈಗ ಲಭ್ಯವಿದೆ.

ನಮ್ಮ ಊರಲ್ಲಿ ಕಸ ಕಡ್ಡಿಗಳ ರಾಶಿಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಒಂದಷ್ಟು ಕಸ ದ ರಾಶಿಗೆ ಪಾಲಿಕೆಯ ಗಾಡಿ ಹತ್ತುವ ಭಾಗ್ಯ ಸಿಕಿದ್ರೆ, ಮತ್ತೊಂದಿಷ್ಟು ಕಸಗಳಿಗೆ, ರಸ್ತೆಗಳು, ಚರಂಡಿಗಳೇ ಗತಿ. ಸಿಂಗಾಪುರದಲ್ಲಿ ಕಸಗಳು, ಕಸದ ತೊಟ್ಟಿಯಲ್ಲಿ ಬಿಟ್ರೆ ಮತ್ತೆಲ್ಲೂ ಕಾಣೋದಿಲ್ಲ. ಕಾಣಿಸುವ ಹಾಗೆ ಮಾಡಿದ್ರೆ ಪೊಲೀಸರು ಬಿಡೋದಿಲ್ಲ. ಎಷ್ಟೋ ಸಲ ಹೊರಗೆ ಹೋದಾಗ, ಸಣ್ಣ ಪುಟ್ಟ ಕಸ ಗಳನ್ನು ಬಿಸಾಡಲು ಸಾಧ್ಯವಾಗದೇ ಮನೆ ಯವರೆಗೆ ತಂದು ಕಸದ ತೊಟ್ಟಿಗೆ ಹಾಕಿದ್ದು ಇದೆ.

ಇಡೀ ದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವು “ರಿಸೈಕಲ್” ಎಂಬ ಮಹತ್ತರ ಯೋಜನೆಯಡಿ ಸಾಗಿ ಮತ್ತೆ ಉಪಯುಕ್ತ ವಸ್ತುವಾಗಿ ಜನರ ಕೈ ಸೇರುತ್ತಿದೆ.

ಸೀಮಿತ ಪ್ರದೇಶ, ಬೆಳೆಯುತ್ತಿರುವ ಜನಸಂಖ್ಯೆ ನಿಟ್ಟಿನಲ್ಲಿ ಸಿಂಗಾಪುರ ದಕ್ಷ ವ್ಯವಸ್ಥೆಯತ್ತ ಹೆಜ್ಜೆ ಹಾಕಿದೆ. ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ವಿಷಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.

ಸಿಂಗಾಪುರದ ನಾಲ್ಕು ಭಸ್ಮೀಕರಣ ಸ್ಥಾವರಗಳು ಇವೆ. ಭೂ-ಸಮರ್ಥ ವಿಧಾನ ತ್ಯಾಜ್ಯ ನಿರ್ವಹಣೆ ಇದಾಗಿದ್ದು, ದ್ವೀಪದ ವಿದ್ಯುತ್ ಅಗತ್ಯಗಳ ಶೇ. 3 ರಷ್ಟು ಒದಗಿಸುತ್ತವೆ. ದಿನಕ್ಕೆ 7200 ಟನ್ ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. ಇವುಗಳಲ್ಲಿ 92% ರಷ್ಟು ತ್ಯಾಜ್ಯವನ್ನು ಸುಟ್ಟುಹಾಕಲಾಗುತ್ತದೆ.

ಹೀಗೆ ಸುಟ್ಟ ಬೂದಿಯನ್ನು ಹಾಗೂ ಸುಡಲು ಯೋಗ್ಯವಲ್ಲದ ಕೈಗಾರಿಕಾ ತ್ಯಾಜ್ಯಗಳು, ಕಟ್ಟಡಗಳ ಅವಶೇಷಗಳನ್ನು ಸೆಮಕೌ ಲ್ಯಾಂಡ್‌ಫಿಲ್ ಎಂಬ ಸ್ಥಳಕ್ಕೆ ಹಡಗಿನ ಮುಖಾಂತರ ಸಾಗಿಸಲಾಗುತ್ತದೆ. ಈ ದ್ವೀಪ ಬೇಡದ ವಸ್ತುಗಳನ್ನು ಹೂತು ಹಾಕಲೆಂದೇ ನಿರ್ಮಿಸಲಾಗಿದೆ. 7 ಕಿಲೋ ಮೀಟರ್ ಸುತ್ತಳತೆಯನ್ನು ಹೊಂದಿದ್ದು, ಕಲ್ಲುಗಳಿಂದ ನಿರ್ಮಿಸಿದ ಕಟ್ಟೆಯಿಂದ ಸುತ್ತುವರಿದಿದೆ.

ಇಲ್ಲಿ ಹಾಕಲಾಗುವ ಬೂದಿ ಹಾಗೂ ತ್ಯಾಜ್ಯಗಳಿಂದ ಸಮುದ್ರದ ನೀರಿಗೆ ಯಾವುದೇ ಹಾನಿಯಾಗದ ರೀತಿಯ ಪದರಗಳ ವ್ಯವಸ್ಥೆಯೊಂದಿಗೆ ದ್ವೀಪವನ್ನು ರಚಿಸಲಾಗಿದೆ.

350 ಹೆಕ್ಟೇರ್ ಜಾಗವನ್ನು ಹೊಂದಿರುವ ಇಲ್ಲಿ, ತ್ಯಾಜ್ಯದಿಂದ ನಿರ್ಮಾಣಗೊಂಡ ಬೂದಿಯನ್ನು ಪಸರಿಸಲಾಗುತ್ತದೆ. ಜೊತೆಗೆ ಸುಡಲಾಗದ ಘನ ತ್ಯಾಜ್ಯಗಳನ್ನು ಹೂತು, ಇವುಗಳ ಮೇಲಿನ ಪದರಕ್ಕೆ ಮತ್ತೆ ಮಣ್ಣು ಹಾಕಲಾಗುತ್ತದೆ. ಸಿಂಗಾಪುರದಿಂದ 25 ಕಿಲೋಮೀಟರ್ ದೂರದ ದಕ್ಷಿಣ ಭಾಗದಲ್ಲಿ ಇದನ್ನು ನಿರ್ಮಿಸಲಾಗಿದೆ.  ಕಿರು ಕೋಣೆಗಳ ರೀತಿಯಲ್ಲಿ ಕಾಣುವ ಈ ಭೂಮಿ, 1999ರಲ್ಲಿ ತನ್ನ ಕಾರ್ಯವನ್ನು ಆರಂಭಿಸಿತು. 2045 ರ ವೇಳೆ ಇದು ಸಂಪೂರ್ಣವಾಗಿ ತ್ಯಾಜ್ಯಗಳಿಂದ ಭರ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಹಿನ್ನಲೆಯಲ್ಲಿ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಅಭಿಯಾನಗಳು ನಡೆಯುತ್ತಿವೆ. ಈ ಮೂಲಕ ಜನರಲ್ಲಿ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶ ಇದಾಗಿದೆ. ಅಲ್ಲದೆ, ಲಭ್ಯವಾಗುವ ತ್ಯಾಜ್ಯದಲ್ಲಿ ಶೇ 70ರಷ್ಟು ಭಾಗವನ್ನು ರಿಸೈಕಲ್ ಮಾಡುವ ಯೋಜನೆಯನ್ನುಇಲ್ಲಿನ ಸರ್ಕಾರ ಹೊಂದಿದೆ. ಈ ಮೂಲಕ ಲ್ಯಾಂಡ್‌ಫಿಲ್ ನ ಪ್ರಮಾಣವನ್ನು ಕಡಿಮೆಗೊಳಿಸುವ ಇರಾದೆ ಇವರದ್ದಾಗಿದೆ.

ಈ ಕಾನೂನು ನಮ್ಮಲ್ಲೂ ಜಾರಿಯಲ್ಲಿದೆ. ಪ್ಲಾಸ್ಟಿಕ್ ವಸ್ತುಗಳು, ಆಹಾರ ತ್ಯಾಜ್ಯಗಳನ್ನು ಬೇರ್ಪಡಿಸಿ ನೀಡುವ ವಿಧಾನ. ರಿಸೈಕಲ್ ಬಗ್ಗೆ ಕೆಲವೊಂದು ಸಂಘಟನೆಗಳು ಕೂಡ ಜನರಲ್ಲಿ ಮಾಹಿತಿ ನೀಡುತ್ತಲೂ ಇವೆ. ಆದರೆ ಅನುಸರಿಸುವ ನಾಗರಿಕರು ಮಾತ್ರ ಬೆರಳೆಣಿಕೆಯ ಷ್ಟರಲ್ಲೇ ಇವೆ. ಖಾಲಿ ಜಾಗ ಇದ್ದಲ್ಲೆಲ್ಲಾ ಪ್ರತಿ ದಿನ ಕಸದ ರಾಶಿ ಉದ್ಭವವಾಗುತ್ತಲೇ ಇರುತ್ತವೆ. ತಮ್ಮ ತಮ್ಮ ಮನೆಗಳು ಸ್ವಚ್ಛ ಇದ್ದಲ್ಲಿ ಸಾಕು ಅನ್ನೋದು ಬಹುತೇಕರ ಲೆಕ್ಕಾಚಾರ. ಆದರೆ ಸ್ವಚ್ಛ ಮಾಡೋರಿಗೆ ಮಾತ್ರ ನಿತ್ಯ ಕ್ಲೀನಿಂಗ್ ತಪ್ಪಿದ್ದಲ್ಲ.

‍ಲೇಖಕರು Avadhi

November 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Natesha Babu

    ಕಸ ನಿರ್ವಹಣೆ ಕಲಿಯುವುದು ಮತ್ತು ಕಲಿಸುವುದು ಎಲ್ಲರ ಹೊಣೆಗಾರಿಕೆ. ಮಾಹಿತಿ ಪೂರ್ಣ ಬರಹಕ್ಕೆ ಥ್ಯಾಂಕ್ಸ್ ಮೇಡಂ.

    ಪ್ರತಿಕ್ರಿಯೆ
  2. Bvkulkarni

    I have been reading this column of Srividya. Good practices of Singapore are narrated nicely.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: