ಸಿಂಗಾಪುರದಲ್ಲಿ ಡ್ರ್ಯಾಗನ್ ಬೋಟ್ ಫೆಸ್ಟಿವಲ್

ನಮ್ಮ ದೇಶದ ಕೇರಳ ರಾಜ್ಯದಲ್ಲಿ ನಡೆಯುವ ವಳ್ಳಮ್ ಕಲಿ ಅಥವಾ ಬೋಟ್ ಗೇಮ್ ಉತ್ಸವ ನಮಗೆಲ್ಲ ಗೊತ್ತಿರುವ ವಿಚಾರ. ಎಷ್ಟೊಂದು ಜನರು, ಅವರ ಉತ್ಸಾಹ ನೋಡೋದೇ ಒಂದು ಖುಷಿ.  ಓಣಂ ಹಬ್ಬದ ಪ್ರಯುಕ್ತ ನಡೆಯುವ ಈ ಸ್ನೇಕ್ ಬೋಟ್ ರೇಸ್ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು. ೧೦೦ ರಿಂದ ೧೨೦ ಫೀಟ್ ಉದ್ದದ ದೋಣಿಗಳಲ್ಲಿ ನೂರಕ್ಕೂ ಅಧಿಕ ಮಂದಿ ಕೂತು, ಸ್ಪರ್ಧೆಯಲ್ಲಿ ಜಯಗಳಿಸುವ ನಿಟ್ಟಿನಲ್ಲೇ ತಮ್ಮೆಲ್ಲ ಶಕ್ತಿ ಮೀರಿ ಪ್ರಯತ್ನಿಸುವುದು ನಿಜಕ್ಕೂ ರೋಮಾಂಚನ.

ಇಂತಹದ್ದೇ ಒಂದು ಹಬ್ಬ ಸಿಂಗಾಪುರದಲ್ಲಿ ನಡೆಯುತ್ತದೆ. ಅದೇ ಡ್ರ್ಯಾಗನ್ ಬೋಟ್ ಫೆಸ್ಟಿವಲ್. ಈ ಉತ್ಸವದ ಕಾರಣಕ್ಕೂ ಒಂದು ಇಂಟ್ರೆಸ್ಟಿಂಗ್  ಇತಿಹಾಸವಿದೆ.

ಅದು ವಾರಿಂಗ್ ಸ್ಟೇಟ್ಸ್ ಕಾಲದ ಅವಧಿ. ಆ ಸಂದರ್ಭದಲ್ಲಿ “ಝೌ” ಎಂಬ ಹೆಸರಿನ ರಾಜವಂಶ ಆಡಳಿತ ನಡೆಸುತ್ತಾ ಇತ್ತು. “ಚೂ” ಎಂಬ ಪ್ರಾಚೀನ ರಾಜ್ಯವನ್ನು ಕೂಡ ಇದು ಹೊಂದಿತ್ತು. ಆ ರಾಜಮನೆತನದಲ್ಲಿ ಕ್ಯು ಯುವಾನ್ ಎಂಬ ವ್ಯಕ್ತಿ  ಕವಿ ಹಾಗೂ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಒಂದು ಸಂದರ್ಭದಲ್ಲಿ ಚೂ ದೇಶದ ರಾಜ, ಕ್ವಿನ್ ಎಂಬ ಹೆಸರಿನ ರಾಜ್ಯದ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಇದನ್ನು ಕವಿ ಕ್ಯು ಯುವಾನ್ ವಿರೋಧಿಸುತ್ತಾರೆ. ಈ ಕಾರಣಕ್ಕಾಗಿ ಅವರನ್ನು ದೇಶಭ್ರಷ್ಟನೆಂದು ಗಡೀಪಾರು ಮಾಡಲಾಗುತ್ತದೆ. ಅದಾಗಿ ೨೮ ವರ್ಷಗಳ ಬಳಿಕ ನಡೆಯುವ ಒಂದು ಯುದ್ಧದಲ್ಲಿ ಕ್ವಿನ್ ರಾಜ್ಯ, ಚೂ ರಾಜ್ಯವನ್ನು ವಶಪಡಿಸಿಕೊಳ್ಳುತ್ತದೆ. ಈ ಸುದ್ದಿಯನ್ನು ತಿಳಿದು ಬೇಸತ್ತ ಕ್ಯು ಯುವಾನ್ ಮಿಲುವೊ ಎಂಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಆದರೆ, ಇವರ ಒಳ್ಳೆಯತನ ಅದಾಗಲೇ ರಾಜ್ಯದ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸುವಂತೆ ಮಾಡಿತ್ತು. ಕವಿಯನ್ನ ರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯರು ತಮ್ಮ ದೋಣಿಗಳ ಮೂಲಕ ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಕಡೆ ಪಕ್ಷ ದೇಹವನ್ನಾದರೂ ಮರಳಿ ಪಡೆಯುವ ನಿಟ್ಟಿನಲ್ಲಿಸತತ ಶ್ರಮ ಪಡುತ್ತಾರೆ. ಕವಿಯ ದೇಹ ಮೀನುಗಳಿಗೆ ಆಹಾರವಾಗದಂತೆ ತಪ್ಪಿಸಲು, ದೊಡ್ಡ ದೊಡ್ಡ ಗಾತ್ರದ ಅನ್ನದ ಉಂಡೆಗಳನ್ನು ಕೂಡ ಈ ಸಂದರ್ಭದಲ್ಲಿ ನೀರಿಗೆ ಎಸೆಯುತ್ತಾರೆ. ಎಷ್ಟೇ ಪ್ರಯೋಗಗಳನ್ನ ಮಾಡಿದ್ರೂ ಕವಿ ಕ್ಯು ಯುವಾನ್ ಅವರನ್ನು ಉಳಿಸಿಕೊಳ್ಳಲು ಮಾತ್ರ ಅವರ ಬಗ್ಗೆ ಕಾಳಜಿ ಹೊಂದಿದ್ದ ಜನತೆ ವಿಫಲರಾಗುತ್ತಾರೆ. ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾದ ಪ್ರದೇಶ ಚೀನಾದ ಹುನಾನ್ ಪ್ರಾಂತ್ಯ. ಈ ದಿನದ ನೆನಪಿಗಾಗಿ ನಡೆಯುವ ಹಬ್ಬವೇ ಡ್ರ್ಯಾಗನ್ ಬೋಟ್ ಫೆಸ್ಟಿವಲ್.

ಸಿಂಗಾಪುರ ದೇಶದ ಹೆಸರು ಹೆಚ್ಚಾಗಿ ಕೇಳಿ ಬರೋದು ಆಧುನಿಕ ಮನೋರಂಜನೆಗಳಿಗೆ, ಶಾಪಿಂಗ್ ಅಥವಾ ಪ್ರವಾಸ. ಆದಾಗ್ಯೂ ಈ ದೇಶದಲ್ಲಿ ಸಾಂಪ್ರದಾಯಿಕ ಆಚರಣೆ ಹಾಗೂ ಹಬ್ಬಗಳಿಗೆ ಅಷ್ಟೇ ಮಹತ್ವ ನೀಡಲಾಗುತ್ತದೆ.  ಅದರಲ್ಲೂ ಇಲ್ಲಿ ನಡೆಯುವ ಡ್ರ್ಯಾಗನ್ ಬೋಟ್ ರೇಸ್ ಮಿಸ್ ಮಾಡೋ ಹಾಗೇನೇ ಇಲ್ಲ. ಹಿಂದಿನ ಕಾಲದಿಂದ ಮುಂದುವರಿದ ಜನರ ಸಂಸ್ಕೃತಿ ಹಾಗೂ ಚೀನಿ ಪ್ರಭಾವ ಈ ಹಬ್ಬವನ್ನ ಪ್ರತಿಬಿಂಬಿಸುತ್ತದೆ. ಈ ದೇಶದಲ್ಲಿ ಶೇ.೭೦ರಷ್ಟು ಮಂದಿ ಚೀನೀಯರು ನೆಲೆಸಿದ್ದಾರೆ. ಹೆಸರಿಗೆ ಪುಟ್ಟ ದೇಶವಾದ್ರೂ, ಇಲ್ಲಿ ಚೈನೀಸ್ ಹಬ್ಬಗಳು ಬಹಳ ಕಟ್ಟುನಿಟ್ಟಾಗಿ ವಿಜೃಂಬಣೆಯಿಂದ ನಡೆಯುತ್ತದೆ.

Dragon boat

ಇಂತಹ ಬೋಟ್ ರೇಸ್ ಗಳಿಗೆ ದೇಹ ಬಲ, ಅಭ್ಯಾಸ ಹಾಗೂ ತಂಡದ ಸಹಕಾರ ಅತ್ಯಗತ್ಯ. ಇಂದಿನ ದಿನಗಳಲ್ಲಿ ಇವು ಸಂಸ್ಕೃತಿ ಅನಾವರಣಗೊಳಿಸುವ ಜೊತೆಗೆ ಮನೋರಂಜನೆಯ ಭಾಗವಾಗಿಯೂ ಪರಿಗಣಿಸಿದೆ. ಸಾಂಪ್ರದಾಯಿಕ ದೋಣಿ ಸ್ಪರ್ಧಾ ಉತ್ಸವವನ್ನು ವೀಕ್ಷಿಸುವ ಸಲುವಾಗಿ ವಿದೇಶಗಳಿಂದಲೂ ಪ್ರವಾಸಿಗರು ಸಿಂಗಾಪುರಕ್ಕೆ ಆಗಮಿಸುತ್ತಾರೆ. ಇದನ್ನು ವರ್ಷದ ಜೂನ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಇಲ್ಲಿನ ಕಲಾಂಗ್ ನದಿ, ಬೆಡೋಕ್ ಜಲಾಶಯ ಹಾಗೂ ಗಾರ್ಡನ್ಸ್ ಬೈ ದ ಬೇ ನಲ್ಲಿರೋ ಮರೀನಾ ಕಾಲುವೆ ಗಳಲ್ಲಿ ನಡೆಸಲಾಗುತ್ತದೆ. ಬಾಳೆ ಎಲೆಗಳಲ್ಲಿ ಅಥವಾ ರೇಷ್ಮೆಗಳಲ್ಲಿ ಸುತ್ತಿ ಅನ್ನವನ್ನು ನೀರಿಗೆ ಎಸೆಯುವ ಮೂಲಕ ನದಿ ದೇವರುಗಳು ಸಮಾಧಾನಗೊಳಿಸುವ ಪ್ರಕ್ರಿಯೆ ಈ ಸಂದರ್ಭದಲ್ಲಿ ನಡೆಯುತ್ತದೆ.

ಈ ಹಬ್ಬದ ಸಮಯದಲ್ಲಿ ಅಕ್ಕಿಯಿಂದ ತಯಾರಿಸಿದ ಡಂಪ್ಲಿಂಗ್ಸ್ ಅನ್ನೋ ಖಾದ್ಯ, ವೈನ್ ಹಾಗೂ ಡ್ರ್ಯಾಗನ್ ಬೋಟ್ ರೇಸ್ ಚೀನೀಯರಿಗೆ ಮಹತ್ವವಾದುದು. ಡ್ರ್ಯಾಗನ್ ದೋಣಿ ಸ್ಪರ್ಧೆಗೆ ಮಾನವ-ಚಾಲಿತ ಹಾಗೂ ಪೆಡಲ್ ದೋಣಿಗಳಿಗಳಿಗೆ ಮಾತ್ರ ಅವಕಾಶ. ಸಾಂಪ್ರದಾಯಿಕವಾಗಿ ಇವುಗಳನ್ನು, ತೇಗದ ಮರದಿಂದ  ತಯಾರಿಸಲಾಗುತ್ತದೆ. ಈ ಬೋಟ್ ಗಳು ಸುಮಾರು 40 ರಿಂದ 100 ಅಡಿ ಉದ್ದವಿರುತ್ತವೆ. ದೋಣಿಯ  ಮುಂಭಾಗ ತೆರೆದ ಬಾಯಿಯುಳ್ಳ ಡ್ರ್ಯಾಗನ್ ಮುಖದ ಆಕಾರ ಹೊಂದಿದ್ದು, ಹಿಂಭಾಗ ಚಿಪ್ಪುಳ್ಳ ಬಾಲದ ಅಕಾರವಿರುತ್ತದೆ. ದೋಣಿ ಸ್ಪರ್ಧೆಗೆ ಜೀವ ತುಂಬುವ ನಿಟ್ಟಿನಲ್ಲಿ ” ಕಣ್ಣುಗಳನ್ನು ಚಿತ್ರಿಸುವ ಮೂಲಕ ”  ಪವಿತ್ರ ಸಮಾರಂಭವನ್ನು ಆರಂಭಿಸಲಾಗುತ್ತದೆ.

ಈ ಸ್ಪರ್ಧಾ ಹಿನ್ನಲೆಯಲ್ಲಿ ಹಲವಾರು ಡ್ರ್ಯಾಗನ್ ಬೋಟ್ ರೇಸಿಂಗ್  ಕ್ಲಬ್ ಗಳೇ  ಇಲ್ಲಿ ತಲೆಯೆತ್ತಿವೆ. ಈ ಮೂಲಕ ತಂಡ ರಚನೆಗೊಂಡು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವ್ಯವಸ್ಥೆಯಾಗಿದೆ.  ಈ  ಓಟದಲ್ಲಿ ಪ್ರತ್ಯೇಕವಾಗಿ ಭಾಗವಹಿಸುವವರಿಗೂ ಕೂಡ ನೋಂದಾವಣಿಗೆ ಆನ್‌ಲೈನ್ ವೇದಿಕೆಗಳಿವೆ. ಈ ಉತ್ಸವದಲ್ಲಿ ಭಾಗವಹಿಸಲೆಂದೇ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಒಂದೆಡೆ ಸುಂದರವಾಗಿ ಅಲಂಕರಿಸಿದ ಬೋಟ್ ಗಳು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳ ಉತ್ಸಾಹ, ಇನ್ನೊಂದೆಡೆ ನದಿಯ ಬದಿಗಳಲ್ಲಿ ನಿಂತು ವೀಕ್ಷಿಸುವ ಅದೆಷ್ಟೋ ಜನರ ಬೆಂಬಲ, ಹುರಿದುಂಬಿಸುವ  ಮೂಲಕ ಈ ಉತ್ಸವ ಮತ್ತಷ್ಟು ರಂಗೇರುತ್ತದೆ.

ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರೋದು ನಮ್ಮ ದೇಶ. ಹೀಗಾಗಿ ಇಲ್ಲಿನ ಆಚಾರ – ವಿಚಾರ, ಸಂಪ್ರದಾಯ, ಸಂಸ್ಕೃತಿ ಹಬ್ಬ ಹರಿದಿನಗಳು ಅಷ್ಟೇ ಶಿಸ್ತುಬದ್ಧವಾಗಿ ನೆರವೇರುತ್ತಾ ಬರುತ್ತಿವೆ. ವಿದೇಶ ಅಂದ್ರೆ ಆಧುನಿಕ ತಂತಜ್ಞಾನಗಳ ಗೂಡು ಎಂದೇ ಖ್ಯಾತಿ.  ಆದರೆ ಇಲ್ಲೂ, ಪೌರಾಣಿಕ ಕಥೆಗಳು ನಮ್ಮ ರೀತಿಯಲ್ಲೇ ಕಟ್ಟುನಿಟ್ಟಾಗಿ ನೆರವೇರುತ್ತವೆ ಹಾಗೂ ಅವುಗಳನ್ನು ಪಾಲಿಸುತ್ತಾ ಮುಂದಿನ ಪೀಳಿಗೆಗೆ ತಲುಪಿಸುವ ಜನರು ಇದ್ದಾರೆ ಅನ್ನೋದು ಕುತೂಹಲದ ಸಂಗತಿ. ಒಟ್ಟಾರೆ, ಆಧುನಿಕತೆಯ ಜೊತೆಗೆ ತಮ್ಮ ಪೂರ್ವಜರು ನಂಬಿಕೊಂಡು ಬಂದಂತಹ  ಸಂಪ್ರದಾಯಗಳನ್ನು ಚಾಚು ತಪ್ಪದೆ ಮುಂದುವರಿಸುತ್ತಿರುವುದಕ್ಕೆ ಈ ಡ್ರ್ಯಾಗನ್ ಬೋಟ್ ಫೆಸ್ಟಿವಲ್ ಕೂಡ ಒಂದು ಸಂಕೇತವಾಗಿದೆ.

‍ಲೇಖಕರು avadhi

October 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: