‘ಸಿಂಕ್ ಸೌಂಡ್’ ಸಿನೆಮಾಗೆ ಒಂದು ಜೀವಂತಿಕೆ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ. ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ಸಿನೆಮಾ ಒಂದರ ನಿರ್ಮಾಣದಲ್ಲಿ ಮುಖ್ಯವಾದ ಘಟ್ಟ ನಿರ್ಮಾಪಕರನ್ನು ಹುಡುಕುವುದು, ಆತಂಕಗಳ ನಡುವೆ ಸಿನೆಮಾ ನಿರ್ಮಾಪಕರು ಸಿಕ್ಕಿದ್ದರು. ಈಗ ಮುಂದಿನ ಟಾಸ್ಕ್ ತಂಡವನ್ನು ಕಟ್ಟುವುದು. ಯಾವುದೇ ಸಿನೆಮಾದ ಯಶಸ್ಸಿನ ಮುಖ್ಯವಾದ ಅಂಶಗಳಲ್ಲಿ ತಂಡವನ್ನು ಆಯ್ಕೆ ಮಾಡುವುದೂ ಒಂದು ಪ್ರಮುಖವಾದ ಭಾಗ. ನಿಮ್ಮೊಂದಿಗೆ ಕೈಜೋಡಿಸುವವರ ಮೇಲೆ ನೀವು ಎಷ್ಟು ಯಶಸ್ವಿಯಾಗಿ ಸಿನೆಮಾ ಪೂರ್ಣಗೊಳಿಸುತ್ತೀರಿ ಎಂಬುದು ಅವಲಂಬಿಸಿರುತ್ತದೆ.

ನಿಮ್ಮೊಂದಿಗೆ ಕೈಜೋಡಿಸುವ ತಂಡದ ಪ್ರತಿಯೊಬ್ಬ ಸದಸ್ಯನೂ ಕಥೆ ಹಾಗೂ ನಿರ್ದೇಶಕನನ್ನು ನಂಬಬೇಕು. ಆ ನಂಬಿಕೆಗೆ ಪೂರಕವಾಗಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ಆ ಕಾರ್ಯದಲ್ಲಿ ತೊಡಗಿಸಿ ಆ ಸಿನೆಮಾ ನಿರ್ಮಾಣವನ್ನು ಪೂರ್ಣಗೊಳಿಸುವುದಕ್ಕೆ ಸಹಕರಿಸಬೇಕು. ಅದರಲ್ಲೂ ಕಡಿಮೆ ಬಡ್ಜೆಟ್ಟಿನಲ್ಲಿ ಸಿನೆಮಾ ಮಾಡುವಾಗ ಆ ಸೀಮಿತ ಹಣಕಾಸು ಸಂಪನ್ಮೂಲಗಳಲ್ಲೇ ಉನ್ನತವಾದುದನ್ನು ನೀಡಲು ಶ್ರಮಿಸಬೇಕಾಗುತ್ತದೆ. ಅಲ್ಲಿ ಸಾಮಾನ್ಯವಾಗಿ ಸಿಗುವ ಸೌಲಭ್ಯಗಳು ಸಿಗುವುದಿಲ್ಲಾ ಎಂಬ ಅರಿವು ಸದಾ ಜಾಗೃತವಾಗಿರಿಸಿಕೊಂಡು ಕೆಲಸವನ್ನು ಮುಂದುವರೆಸಬೇಕಾಗುತ್ತದೆ.

ಸಿನೆಮಾಗೆ ಸಂಕಲನ ಮಾಡಲು ನಾಗೇಂದ್ರ ಈಗಾಗಲೇ ಸಿದ್ಧರಾಗಿದ್ದರು. ಕಲಾ ನಿರ್ದೇಶನಕ್ಕೆ ನನ್ನ ಹಿರಿಯ ಗೆಳೆಯರಾದ ಸಂತೋಷ್ ಪಾಂಚಾಲ್ ಇದ್ದರು. ಅವರನ್ನು ನಾನು ಕೆಲಸ ಮಾಡಲು ಬನ್ನಿ ಎಂದು ಆಹ್ವಾನಿಸುವುದೇ ಇಲ್ಲ. ಬಂದು ಮಾಡ್ಬೇಕಣ್ಣಾ ಎಂದು ಹೇಳುವುದಷ್ಟೇ, ಅಷ್ಟರಮಟ್ಟಿಗೆ ನಮ್ಮಿಬ್ಬರದು ಗೆಳೆತನ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಸಂತೋಷ್ ಪಾಂಚಾಲ್ ಅವರು ನನ್ನ ಸೀನಿಯರ್. ಆನಂತರ ನಾವಿಬ್ಬರು ಸಾಕಷ್ಟು ಕೆಲಸಗಳನ್ನು ಜೊತೆಯಲ್ಲಿ ಮಾಡಿದ್ದೇವೆ. ಇವತ್ತಿಗೂ ಅವರೊಂದಿಗೆ ಗೆಳೆತನ ಮುಂದುವರಿದಿದೆ.

ನನಗೆ ಸಿಂಕ್ ಸೌಂಡ್ (ಸಂಭಾಷಣೆ ಹಾಗೂ ಸನ್ನಿವೇಶ ನಡೆಯುವ ಪರಿಸರವನ್ನು ಸ್ಥಳದಲ್ಲೇ ಧ್ವನಿಗ್ರಹಣ ಮಾಡುವುದು) ಮಾಡುವುದು ಇಷ್ಟ. ಅದರಿಂದ ಸಿನೆಮಾಗೆ ಒಂದು ಜೀವಂತಿಕೆ ಸಿಗುತ್ತದೆ, ನಟ ನಟಿಯರ ಅಭಿನಯ ತೆರೆಯ ಮೇಲೆ ನೈಜವಾಗಿ ಮೂಡಿ ಬರುತ್ತದೆ. ಹಿನ್ನೆಲೆಯ ಪರಿಸರದ ಶಬ್ಧಗಳಿಗೆ ಒಂದು ಆಯಾಮ (sound scape/ sound depth) ಸಿಗುತ್ತದೆ. ಹರಿವು ಸಿನೆಮಾ ಅಷ್ಟು ನೈಜವಾಗಿ ಮೂಡಿ ಬರಲು ಸಿಂಕ್ ಸೌಂಡ್ ಕೂಡ ಮುಖ್ಯ ಕಾರಣ.

ಹರಿವು ಸಿನೆಮಾದ ಸಿಂಕ್ ಸೌಂಡ್ ಹಾಗೂ ಶಬ್ಧವಿನ್ಯಾಸವನ್ನು ಮಾಡಿದ್ದು ಮಹಾವೀರ್ ಸಾಬಣ್ಣವರ್. ಅವರು ‘ಖ್ವಾಡಾ’ ಎಂಬ ಸಿನೆಮಾದ ಶಬ್ಧ ಗ್ರಹಣಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು ಅದಕ್ಕಿಂತ ಹೆಚ್ಚಾಗಿ, ನನ್ನ ಆಲೋಚನೆಗಳಿಗೆ ಪೂರಕವಾಗಿ ಶಬ್ಧ ವಿನ್ಯಾಸವನ್ನು ಅದ್ಭುತವಾಗಿ ಮಾಡುತ್ತಾರೆ. ಈ ಸಿನೆಮಾವನ್ನು ಕೂಡ ಸಿಂಕ್ ಸೌಂಡ್ ಮಾಡಬೇಕೆಂದು ನಿರ್ಧರಿಸಿದ್ದರಿಂದ, ಮಹಾವೀರ್ ಅವರನ್ನು ಸಂಪರ್ಕಿಸಿ, ಅವರಿಗೆ ನನ್ನ ಬಡ್ಜೆಟ್ ನ ಮಿತಿಯನ್ನು ತಿಳಿಸಿ ಅವರನ್ನು ಒಪ್ಪಿಸಿದೆ.

ಈ ಸಿನೆಮಾಗೆ ವಿಶೇಷವಾಗಿ ಕಾಸ್ಟ್ಯೂಮ್ ಡಿಸೈನಿಂಗ್ ಮಾಡಿಸಬೇಕಿತ್ತು. ಪಾತ್ರಗಳು ಧರಿಸುವ ಬಟ್ಟೆ, ಆಯಾ ಪಾತ್ರದ ಮನೋಭಾವವನ್ನು ಅಭಿವ್ಯಕ್ತಿಸುತ್ತಿರುವಂತಿರಬೇಕಿತ್ತು. ಇದಕ್ಕಾಗಿ ಯಾರನ್ನು ಕೇಳುವುದು ಎಂದು ಯೋಚಿಸುತ್ತಿರುವಾಗಲೇ ಮಾನಸ ಮುಸ್ತಫಾ ಅವರು ಕರೆ ಮಾಡಿದರು. ಅವರದ್ದೊಂದು ಬೊಟಿಕ್ ಇತ್ತು. ನಮ್ಮ ಸಿನೆಮಾ ಬಗ್ಗೆ ಅದಾಗಲೇ ಸಾಕಷ್ಟು ಜನರಿಗೆ ವಿಷಯ ತಿಳಿದಿತ್ತು. ಹಾಗೇ ಮಾನಸ ಅವರಿಗೂ ವಿಷಯ ತಿಳಿದು, ನಮ್ಮ ಬಡ್ಜೆಟ್ಟಿನಲ್ಲೇ ವಸ್ತ್ರ ವಿನ್ಯಾಸ ಮಾಡಲು ಆಸಕ್ತಿ ಇದೆ, ಅವಕಾಶ ನೀಡಿ ಎಂದು ಕೇಳಿದರು. ಅವಕಾಶ ನೀಡುವಷ್ಟು ದೊಡ್ಡವನು ನಾನಲ್ಲ. ಬನ್ನಿ ನಮ್ಮೊಂದಿಗೆ ಕೈಜೋಡಿಸಿ, ಎಲ್ಲರೂ ಜೊತೆಯಲ್ಲಿ ಕೆಲಸ ಮಾಡೋಣ. ಆದರೆ ಅದಕ್ಕೂ ಮೊದಲು ಒಮ್ಮೆ ನಮ್ಮ ಮನೆ ಕಮ್ ಆಫೀಸಿಗೆ ಬಂದು ಸಂಪೂರ್ಣವಾಗಿ ಸ್ಕ್ರಿಪ್ಟ್ ಓದಿ ಆನಂತರ ನಿಮ್ಮ ನಿರ್ಧಾರ ತಿಳಿಸಿ ಎಂದು ಹೇಳಿದೆ. ಅದಕ್ಕೆ ವೈಯಕ್ತಿಕ ಸಕಾರಣವೂ ಇತ್ತು.

ಮಾನಸ ಅವರ ಗಂಡ ಮುಸ್ತಫಾ ಅಪಘಾತದಲ್ಲಿ ತೀರಿಕೊಂಡು ಮೂರು ವರ್ಷಗಳಾಗಿತ್ತು. ಅವರ ನೆನಪಲ್ಲೇ ಇವರು ದಿನ ಕಳೆಯುತ್ತಿರುವುದು ನನಗೆ ತಿಳಿದಿತ್ತು. ಈ ಸಿನೆಮಾದಲ್ಲಿನ ಗೌರಿ ಗಂಡ ಮಹೇಶ ಕೂಡ ಅಪಘಾತದಲ್ಲಿ ತೀರಿಕೊಂಡಿರುತ್ತಾನೆ. ಇದು ಅವರಿಗೆ ಮಾನಸಿಕವಾಗಿ ಡಿಸ್ಟರ್ಬ್ ಮಾಡಬಹುದೇನೊ ಎಂಬ ಆತಂಕ ನನ್ನದು. ಆದರೆ ಸ್ಕ್ರಿಪ್ಟ್ ಪೂರ್ತಿ ಓದಿದ ನಂತರ ಮಾನಸ ಈ ಚಿತ್ರಕಥೆಯ ಜೊತೆಗೆ ಭಾವನಾತ್ಮಕವಾಗಿ ಕನೆಕ್ಟ್ ಆದರು. ಅವರು ನನ್ನ ಬಳಿ ಬಂದು ಈ ಸಿನೆಮಾಗೆ ಮೊದಲು ಬರೀ ಕೆಲಸ ಮಾಡುವ ಆಸೆ ಇತ್ತು. ಈಗ ಈ ಸಿನೆಮಾ ಮಾಡಲೇಬೇಕು ನಾನು. ಇಂತಹ ಕಥೆ ಎಲ್ಲರಿಗೂ ಗೊತ್ತಾಗಲೇಬೇಕು. ಈ ಕಥೆಗೆ ಅಷ್ಟು ಮಹತ್ವ ಇದೆ ಎಂದು ಮನಸ್ಪೂರ್ತಿಯಾಗಿ ನಮ್ಮ ತಂಡವನ್ನು ಸೇರಿಕೊಂಡರು.

ಇನ್ನು ಛಾಯಾಗ್ರಹಣ. ಈ ಸಿನೆಮಾದ ಛಾಯಾಗ್ರಹಣ ಯಾರಿಂದ ಮಾಡಿಸಬೇಕು ಎಂಬುದಕ್ಕೆ ನಾನು ಆಯ್ಕೆಗಳನ್ನು ಇರಿಸಿಕೊಂಡಿರಲಿಲ್ಲ. ನನ್ನ ಹಿಂದಿನ ಸಿನೆಮಾಗೆ ಕೆಲಸ ಮಾಡಿದ್ದ ಆನಂದ್ ಸುಂದರೇಶ್ ಬೇರೊಂದು ಸಿನೆಮಾದಲ್ಲಿ ಬ್ಯುಸಿಯಾಗಿದ್ದ. ಆನಂದ್ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಗುರುಪ್ರಸಾದ್ ನರ್ನಾಡ್ ಮೊದಲಿಂದಲೂ ಪರಿಚಯ ಹಾಗೂ ಕೆಲವೊಂದು ಸಾಕ್ಷ್ಯಚಿತ್ರಗಳಿಗೆ ಛಾಯಾಗ್ರಹಣ ಮಾಡಿಕೊಟ್ಟಿದ್ದ. ಅದರ ಜೊತೆಗೆ ಕೆಲವೊಂದು ಕಿರುಚಿತ್ರಗಳಿಗೆ ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದ್ದರು. ಅವರ ಕೆಲಸ ನೋಡಿ ಇಷ್ಟಪಟ್ಟಿದ್ದೆ. 

ಈ ಸಿನೆಮಾದ ಛಾಯಾಗ್ರಹಣಕ್ಕೆ ಗುರು ಅಂತಾನೇ ನಿರ್ಧರಿಸಿದೆ. ಗುರು ಮತ್ತು ಅವರ ಗೆಳೆಯರ ಬಳಗ ಒಂದು ರೀತಿಯಲ್ಲಿ ಪ್ಯಾಕೇಜ್ ಆಫರ್ ಇದ್ದಂಗೆ. ನನ್ನ ಹಿಂದಿನ ಸಿನೆಮಾಗೆ ಕೆಲಸ ಮಾಡಿದ್ದ ವಿಶ್ವನಾಥ್ ಪೆಡ್ನೇಕರ್ ಸ್ಥಿರ ಚಿತ್ರಣ ಮಾಡುವ ಅವಿನಾಶ್ ಹೆಗ್ಡೆ, ಲೈಟಿಂಗ್ ಡಿಸೈನ್ ಮಾಡುವ ಸ್ಯಾಂಡಿ, ಎಲ್ಲರೂ ಒಂದೇ ರೂಮ್ ಮೇಟ್ಸ್. ಎಲ್ಲರೂ ತಂಡವನ್ನು ಸೇರಿಕೊಂಡರು. ಜೊತೆಗೆ ರಾಕೇಶ್ ಹಾಗೂ ಶ್ರೀನಿವಾಸ್ ನಿರ್ದೇಶನ ತಂಡದ ಹೊಸ ಮುಖಗಳು ಸೇರ್ಪಡೆಯೂ ಆಯ್ತು.

ಇವರೆಲ್ಲರಿಗಿಂತ ಮೊದಲು ತಂಡವನ್ನು ಸೇರಿಕೊಂಡಿದ್ದು ಸರವಣ. ಬಹುಕಾಲದ ಕಿರಿಯ ಗೆಳೆಯ. ಕಾಲೇಜು ದಿನಗಳಿಂದಲೂ ನಾವು ಒಟ್ಟಿಗೆ ಕೆಲಸ ಮಾಡಿದವರು. ನಿರ್ದೇಶಕನಾಗಲು ಸಾಕಷ್ಟು ಶ್ರಮ ಪಡುತ್ತಿರುವ ಮಿತ್ರ. ಸರವಣ ಒಬ್ಬ ನನ್ನೊಂದಿಗಿದ್ದರೆ ಸಾಕು. ನನ್ನ ಆತ್ಮವಿಶ್ವಾಸ ನೂರ್ಮಡಿ ಹೆಚ್ಚುತ್ತದೆ. ನನ್ನ ಆಲೋಚನೆ, ಸಿದ್ಧಾಂತ, ಕಾರ್ಯ ವೈಖರಿ, ಕೋಪ, ಖುಷಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಏಕೈಕ ವ್ಯಕ್ತಿ. ಯಾವುದೇ ಕೆಲಸವಾಗಲಿ ಒಮ್ಮೆ ಹೇಳಿದರೆ ಸಾಕು. ಯಾವ ಗೊಂದಲವೂ ಇಲ್ಲದೆ ಗ್ರಹಿಸಿ ಆ ಕಾರ್ಯವನ್ನು ಶ್ರದ್ಧೆಯಿಂದ ಮುಗಿಸುತ್ತಾನೆ. ಚಿತ್ರಕಲೆಯಲ್ಲಿ ಅಪಾರವಾದ ಪರಿಣಿತಿ ಇದೆ. ಅಷ್ಟೇ ಸಾಹಿತ್ಯವನ್ನು ಓದಿಕೊಂಡಿದ್ದಾನೆ. ಅಷ್ಟೇ ವಿನಯವಂತಿಕೆ ಇರುವ ಹುಡುಗ ಸರವಣ ನಿರ್ದೇಶನದ ತಂಡದಲ್ಲಿ ಸೇರಿಕೊಂಡಿದ್ದ. ಗೆಳೆಯ ಪ್ರಶಾಂತನ ಮೂಲಕ ಪರಿಚಯವಾಗಿ ನಿರ್ದೇಶನದ ವಿಭಾಗಕ್ಕೆ ಬಂದವರು ಭಾರತಿ.

ಈ ಸಿನೆಮಾದಲ್ಲಿ ಹಾಡುಗಳನ್ನು ಬಳಸಿಕೊಳ್ಳುವ ಉದ್ಧೇಶವು ಇದ್ದುದ್ದರಿಂದ ಈ ಸಿನೆಮಾಗೆ ಸರಿಯಾಗಿ ಸ್ಪಂದಿಸುವಂತಹ ಸಂಗೀತ ನಿರ್ದೇಶಕರನ್ನು ಹುಡುಕಬೇಕಿತ್ತು. ಎಷ್ಟು ಯೋಚಿಸಿದರೂ ಯಾರೂ ತಲೆಗೆ ಬರಲಿಲ್ಲ, ಇರುವ ನಿರ್ದೇಶಕರು ಕೆಲವರು ನನಗೆ ಸರಿಹೊಂದುವುದಿಲ್ಲ. ಇನ್ನು ಕೆಲವರ ಬಡ್ಜೆಟ್ ನನ್ನ ಕೈಮೀರಿದ್ದು. ಸರಿ ಸಂಗೀತ ನಿರ್ದೇಶಕರನ್ನು ಹುಡುಕುವ ಪ್ರಯತ್ನ ಜಾರಿಯಲ್ಲಿರಲಿ. ಅದಕ್ಕೂ ಮೊದಲು ಒಂದು ಮುಖ್ಯವಾದ ಕೆಲಸ ಮುಗಿಸಬೇಕಿತ್ತು. ಅದು ಚಿತ್ರಕಥೆ ರಚನೆ.

ಸಿನೆಮಾದ ಕಥೆಯೇನೊ ಸಿದ್ಧವಾಗಿತ್ತು. ಮುಖ್ಯವಾದ ಸಂಭಾಷಣೆಯ ಜೊತೆಗೆ ಸಂಧ್ಯಾ ಮೇಡಂ ಕತೆಯನ್ನು ಬರೆದು ಕೊಟ್ಟಿದ್ದರು. ಆದರೆ ಅದನ್ನು ಹಾಗೇ ಸಿನೆಮಾ ಮಾಡಲು ಸಾಧ್ಯವಾಗುವುದಿಲ್ಲ. ಕಥೆಯನ್ನು ತೆರೆಯ ಮೇಲೆ ಯಾವ ಮಾದರಿಯಲ್ಲಿ, ಯಾವ ಅನುಕ್ರಮದಲ್ಲಿ, ದೃಶ್ಯಗಳ ಸಂಯೋಜನೆಯ ಜೊತೆಗೆ ರೂಪಕ, ಸನ್ನಿವೇಶ, ಸಮಯ ಇತ್ಯಾದಿ ಎಲ್ಲವನ್ನೂ ಒಳಗೊಂಡಂತೆ ತೆರೆಯ ಮೇಲೆ ಸಿನೆಮಾ ಹೇಗೆ ಮೂಡಬರುತ್ತದೆಯೋ ಹಾಗೇ ಕಥೆಯನ್ನು ಚಿತ್ರಕಥೆಯಾಗಿ ಬರೆದುಕೊಳ್ಳಬೇಕು. ಆಗ ಮಾತ್ರ ಅದನ್ನು ಚಿತ್ರೀಕರಿಸಲು ಅನುಕೂಲವಾಗುವುದು. ಅದಿನ್ನೂ ಸಿದ್ಧವಾಗೇ ಇರಲಿಲ್ಲ. ಈ ಚಿತ್ರಕಥೆ ರಚಿಸುವಾಗ ಚಿತ್ರತಂಡ ಅದರಲ್ಲೂ ಮುಖ್ಯವಾದ ತಂತ್ರಜ್ಞರ ಜೊತೆಯಲ್ಲಿ ಚರ್ಚಿಸುತ್ತಾ ಈ ಚಿತ್ರಕಥೆ ಸಿದ್ದಪಡಿಸಿದರೆ ಸಿನೆಮಾ ಉತ್ತಮವಾಗಿ ಮೂಡಿ ಬರುತ್ತದೆ. ಚಿತ್ರೀಕರಣದ ಸಮಯದಲ್ಲಿ ಗೊಂದಲಕ್ಕೆ ಆಸ್ಪದವಿರುವುದೂ ಇಲ್ಲ.

ಸಿನೆಮಾಗೋಸ್ಕರ ಆಫೀಸ್ ಅಂತ ಮಾಡಿ ಬಡ್ಜೆಟ್ ಪ್ರತ್ಯೇಕವಾಗಿ ಖರ್ಚು ಮಾಡಿಸುವುದು ಇಷ್ಟವಿಲ್ಲದೇ. ನಮ್ಮ ಮನೆಯನ್ನೇ ಸಿನೆಮಾ ಆಫೀಸಾಗಿ ಮಾಡಿಕೊಂಡು, ನನ್ನ ತಂಡದವರನ್ನೆಲ್ಲಾ ಗುಡ್ಡೆಹಾಕಿಕೊಂಡು ಚಿತ್ರಕಥೆ ರಚಿಸುವುದನ್ನು ಪ್ರಾರಂಭಿಸಿ ಜೊತೆ ಜೊತೆಯಲ್ಲೇ ಸಿನೆಮಾದ ಇನ್ನಿತರ ಕೆಲಸಗಳನ್ನು ಶುರು ಹಚ್ಚಿಸಿದೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

January 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: