ನೇಯಬೇಕು ಮತ್ತೆ ನೋಯಬೇಕು..

ಸ್ಮಿತಾ ಅಮೃತರಾಜ್

ಇತ್ತೀಚೆಗೆ ಡಿಸೆಂಬರ್ 24 ರಂದು ಕೊಡಗಿನ ಮಡಿಕೇರಿಯಲ್ಲಿ ಬಿಡುಗಡೆಗೊಂಡ  ‘ನಿರುತ್ತರ’ ಕವನ ಸಂಕಲನದ ಕರ್ತೃ ಶ್ರೀಮತಿ ಸಂಗೀತಾ ರವಿರಾಜ್. ಮೈಸೂರಿನ ದೀಪ್ತಿ ಬುಕ್ ಹೌಸ್ ನ ಪ್ರಕಾಶನದಡಿಯಲ್ಲಿ ಪ್ರಕಟಗೊಂಡ ಈ ಸಂಕಲನದಲ್ಲಿ ಒಟ್ಟು ಐವತ್ತು ಕವಿತೆಗಳಿವೆ.

ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳಿರುವುದಿಲ್ಲ. ಉತ್ತರ ಹುಡುಕಬೇಕೆಂಬ ಜಿದ್ದಿಗೂ ಇಲ್ಲಿಯ ಕವಿತೆಗಳು ಬಿದ್ದಿಲ್ಲ ಅನ್ನುವಂತೆ ಸ್ವಗತದಂತೆ ಮಾತನಾಡುವ ಸಂಗೀತರ ಕವನ ಸಂಕಲನವನ್ನು ಓದುತ್ತಿದ್ದಂತೆ  ಈ ಭಾವವೊಂದು ಅವರಿಸಿಕೊಳ್ಳುತ್ತದೆ.  ಆಕೆಗೆ ಕವಿತೆಯೆಂಬುದು ಬದುಕಿನ ಒಂದು ಭಾಗ. ಹಾಗಾಗಿ ಆಕೆ ತನ್ನ ದಿನನಿತ್ಯದ ಕೆಲಸಗಳ ನಡುವೆಯೂ ಆಕೆ ಕವಿತೆಯನ್ನೇ ಧ್ಯಾನಿಸಿದಂತೆ ಬರೆಯುತ್ತಾರೆ.

ಗೃಹಿಣಿಯೂ ಮತ್ತು ಕೃಷಿಕ ಮಹಿಳೆಯೂ ಆಗಿರುವ  ಸಂಗೀತಾಗೆ ಕವಿತೆಯೊಂದು ಕಿಟಕಿ. ಆ ಕಿಟಕಿಯ ಮೂಲಕ ಆಕೆ ಜಗತ್ತನ್ನು ನೋಡುತ್ತಾಳೆ, ದಕ್ಕಿದ್ದಷ್ಟನ್ನೂ ಒಳಗೆಳೆದುಕೊಳ್ಳುತ್ತಾಳೆ. ಅದರ ಜೊತೆಗೆ ಕವಿತೆ ಆಕೆಗೆ ಸೇತುವೆಯೂ ಕೂಡ. ಆ ಮೂಲಕ ಆಕೆ ಹೊರಜಗತ್ತಿನ ಸಂವಹನಕ್ಕೆ ಸೇತುವಾಗುತ್ತಾಳೆ.

ಅಚ್ಚರಿಯೆನ್ನಿಸುತ್ತದೆ, ಕೃಷಿ ಮತ್ತು ಗೃಹಕೃತ್ಯದೊಳಗೆ ದಿನವಿಡೀ ತೊಡಗಿಸಿಕೊಳ್ಳುವಾಗ, ಗ್ರಾಮೀಣ ಮಹಿಳೆಯೊಬ್ಬಳು ಕವಿತೆಯ ಸಾಂಗತ್ಯದ ಮೂಲಕ  ಬದುಕಿನ ಸುಖವನ್ನೂ, ನೆಮ್ಮದಿಯನ್ನೂ ಅರಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿಯ ಕವಿತೆಗಳೇ ಸಾಕ್ಷಿ. ಕವಿತೆಯಿಂದ ದಕ್ಕುವ ಸಾಂತ್ವನವನ್ನೂ, ಸಮಾಧಾನವನ್ನೂ ಅರಿತುಕೊಂಡಿರುವುದರಿಂದಲೇ ಕವಿತೆಯೆಂಬ ಜೀವ ಸಂಜೀವಿನಿಯ ಸಖ್ಯ ಆಕೆಗೆ ಅತ್ಯಾಪ್ತ ಅನ್ನಿಸಿದ್ದು.

 ಇಲ್ಲಿಯ ಕವಿತೆಗಳು ಒಂದು ಮೌನ ಸಂವಾದದಂತಿದೆ. ತನ್ನ ಭಾವಗಳ ಅಭಿವ್ಯಕ್ತಿಗೆ ಆಕೆ ನೆಚ್ಚಿಕೊಂಡದ್ದು ಕವಿತೆಯನ್ನು. ಆಕೆ ಕವಿತೆಯ ಪರಿಕರಗಳಿಗೆ ಬೇರೆಲ್ಲೂ ಎಡತಾಕುವುದಿಲ್ಲ. ತಾನು ಕಂಡುಂಡ ಅನುಭವ, ತನ್ನ ಸುತ್ತಮುತ್ತಲಿನ ಜೀವ ಮಿಡಿತದ ಸದ್ದು ಆಕೆಯ ಎದೆಯನ್ನು ತಟ್ಟುತ್ತದೆ.  ತಾಕಿದ ಸಾಲುಗಳು ಕವಿತೆ ಸಾಲಿನ ಮೂಲಕ ವಿಮೋಚನೆಯನ್ನು ಪಡೆದುಕೊಳ್ಳುತ್ತವೆ.  ಆದ ಕಾರಣ ಇಲ್ಲಿಯ ಕವಿತೆಗಳಲ್ಲಿ ಸಿಟ್ಟಿಲ್ಲ, ಪ್ರತಿಭಟನೆಯಿಲ್ಲ, ಬದುಕು ಹೇಗಿದೆಯೋ ಅದರೊಳಗೇ ತಕರಾರುಗಳಿಲ್ಲದೆ ಬದುಕುವುದು ಚೆನ್ನ ಅನ್ನುವ ಸಂದೇಶವಿದೆ. ಅಸಹಜ ವಾತಾವರಣದ ನಡುವೆಯೂ ಸಹಜವಾಗಿ ಉಸಿರೆಳೆದುಕೊಳ್ಳುವ ಕಲೆಯನ್ನು ಆವಾಹಿಸಿಕೊಳ್ಳಬೇಕೆಂಬುದನ್ನ ಇಲ್ಲಿಯ ಕವಿತೆಗಳು ಬಿತ್ತರ ಪಡಿಸುತ್ತವೆ.

‘ನೇಪಥ್ಯ’ ಅನ್ನುವ ಕವಿತೆಯಲ್ಲಿ ಆಕೆ ಒಗ್ಗರಣೆಯ ಕುರಿತು ಬರೆಯುತ್ತಾರೆ. ಇದು ಹಳೇ ಪ್ರತಿಮೆಯಾದರೂ ಆಕೆ ಅದನ್ನ  ಹೊಸ ಬಗೆಯಲ್ಲಿ ಕಟ್ಟುತ್ತಾರೆ. ಒಗ್ಗರಣೆಯ ಮೂಲಕ ಹೆಣ್ಣಿನ ನೆಲೆ ಬೆಲೆಯನ್ನು  ಸೂಚ್ಯವಾಗಿ ತೆರೆದಿಡುತ್ತಾರೆ. ಅದೆಷ್ಟೋ ಗಹನವಾದ ಪಾತ್ರ ಧರಿಸಿಯೂ ನಗಣ್ಯವಾಗಿ ಬಿಡುವ ಹೆಣ್ಣಿನ ಸ್ಥಿತಿ ಗತಿಯನ್ನು ಆ ಮೂಲಕ ತೋರಿಸುತ್ತಾ, ತನ್ನ ಕೆಲಸಕ್ಕೆ ಕೃತಜ್ಞತೆ ಸಲ್ಲಿಸದವರು ಚಿಟಿಕೆ ಸಾಸಿವೆಯ ಮುಂದೆ ಕುಬ್ಜರು ಅಂತ ಮರುಕ ವ್ಯಕ್ತಪಡಿಸುತ್ತಾರೆ. ಇದು ಒಂದು ರೀತಿಯಲ್ಲಿ ತನ್ನನ್ನು ತಾನು ಸಮಾಧಾನ ಪಡಿಸುವ ಗುಣ. ಇಂಥ ವೈಶಾಲ್ಯತೆ ದಕ್ಕುವುದು ಕೂಡ ಕವಿತೆಯ ಒಡನಾಟದಿಂದಷ್ಟೇ.

‘ಅನಾವರಣʼ ಕವಿತೆಯ ಮೂಲಕ ಧಾರವಾಹಿಯ ಪಾತ್ರಗಳು ಹೇಗೆ ಹೆಂಗಳರೆಯರ ಮನಸಲ್ಲಿ ನಾನಾ ರೀತಿಯ ಕಲ್ಪನೆಯನ್ನು ಹುಟ್ಟಿಸುತ್ತದೆ ಅನ್ನುವುದನ್ನು ಹೇಳುತ್ತಾ, ನಟನೆ ಮುಗಿದ ಬಳಿಕ ಅವರೂ ನಮ್ಮಂತೆ ಅಂದುಕೊಂಡರೂ ಕಲ್ಪನೆ ಕಟ್ಟಿಕೊಡುವ ಸುಖ ಅನಂತವಾದದ್ದು. ಧಾರವಾಹಿಯ ಸುಳಿಯಲ್ಲಿ ಮುಳುಗಿದ ನಮಗೆ ಕೊನೆಗೆ ಪಥಿಕರು ನಾವೋ? ಅವರೋ? ಅನ್ನುವ ಜಿಜ್ಞಾಸೆಯನ್ನು ಬಿತ್ತಿ ಬಿಡುತ್ತದೆ.

ಹೆಣ್ಣೊಬ್ಬಳ ಒಳತೋಟಿಗಳನ್ನು ಇಲ್ಲಿಯ ಕವಿತೆಗಳು ಸಹಜವಾಗಿ ಕಟ್ಟಿಕೊಡುತ್ತವೆ. ಎಷ್ಟು ಮಾಡಿದರೂ ಮೆಚ್ಚಿಸಲಾಗದ ಅನಿವಾರ್ಯತೆಯಲ್ಲಿ, ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೆಣಗಾಡುವ ಪಡಿಪಾಟಲು ಎಲ್ಲ ಹೆಣ್ಮಕ್ಕಳ ತೊಳಲಾಟದ ಪ್ರತಿರೂಪದಂತಿದೆ. ಈ ಧಾವಂತದ ಬದುಕಿನಲ್ಲಿ ಯಾರಿಗೆ ಯಾರೂ ಆಸರೆಯಲ್ಲ ಅನ್ನುವ ಬದುಕಿನ ಪರಮ ಸತ್ಯವನ್ನು ಹೇಳುತ್ತಾ..

ಹೋಗಿ ಕುಳಿತುಕೊಳ್ಳಲು ಮರದ ಬುಡವಿಲ್ಲ
ತಲೆ ನೇವರಿಸುವ ಗೆಳತಿಯರು ನೀರಿಗೂ
ಬರುತ್ತಿಲ್ಲ..

ಎನ್ನುವ ಸಾಲುಗಳು ವರ್ತಮಾನದ ಜಗತ್ತಿನ ಬದಲಾದ ಚಿತ್ರಣವೊಂದು ಕಣ್ಣ ಮುಂದೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಮಲೆನಾಡಿನ ಹುಡುಗಿ ಸಂಗೀತಾಗೆ ಮಳೆಯೂ ಕೂಡ ಭಾವನೆಯ ರವಾನೆಗೆ ರಹದಾರಿ. ಅದಕ್ಕಾಗಿ ಆಕೆಯ ಹೆಚ್ಚಿನ ಕವಿತೆಗಳಲ್ಲಿ ಮಳೆಯ ನಾದವೊಂದು ಆಗಾಗ್ಗೆ ನಿನಾದಿಸುತ್ತದೆ. ಅಂಗೈಯಲ್ಲಿ ಬಿದ್ದ ಮಳೆ ಹನಿ ಚೂರಾಗದಂತೆ ಬೊಗಸೆಯೊಳಗೆ ಕಾಪಿಡುವಂತ ಕಲೆಯನ್ನು ಕರುಣಿಸೆನ್ನುವ ನಿವೇದನೆಯಿಲ್ಲಿದೆ.  ಸಾವು, ಅದರಿಂದಾಗುವ ಅಸ್ಥಿರತೆ ಇಲ್ಲಿಯ ಕವಿತೆಗಳಲ್ಲಿ ಪದೇ ಪದೇ ಹಾದು ಹೋಗುವ ಪ್ರಮುಖ ಅಂಶ. ಸುತ್ತಮುತ್ತಲಿನ ಸಾವು, ಅದರೊಂದಿಗೆ ಬದುಕಿನ ನಶ್ವರತೆ ಅರಿವಾದಗಲಷ್ಟೇ ಇಂತಹ ಭಾವವೊಂದು ಗಾಢವಾಗಿ ಕಾಡಲು ಸಾಧ್ಯ. ಆದರೂ ಇವೆಲ್ಲವನ್ನೂ ಮರೆತು,

 ಸಾವ ನೋವಿಗೆ ನೆಪದ ಮೂಟೆ ಕಟ್ಟಿ
ತೀವ್ರವಾಗಿ ಬದುಕಿ ತೋರಿಸುತ್ತೇನೆ..

ಅನ್ನುವ ಎದೆಗಾರಿಕೆಯ ಸಾಲುಗಳು ಬದುಕಿನ ಕುರಿತು ಭರವಸೆಯನ್ನು, ಅದಮ್ಯ ನಿರೀಕ್ಷೆಯನ್ನೂ ಹುಟ್ಟು ಹಾಕಿ ಬಿಡಬಲ್ಲವು. ಬೆಂಕಿ ಉರಿಸುವುದು ಹೇಗೆ ಕಲೆಯೋ ಅಂತೆ ಅಚಾನಕ್ ಬರುವ ಬಿರುಗಾಳಿಗೆ ಆರದಂತೆ ಕಾಪಿಡುವುದು ಕೂಡ ಕಲೆ ಅನ್ನುವ ಸಾಲುಗಳ ಅರ್ಥ ವ್ಯಾಪ್ತಿ ಝಗ್ಗನೆ ಬೇರೆ ಕಡೆಗೆ ವ್ಯಾಪಿಸಿಕೊಳ್ಳುತ್ತದೆ. ಸಂಗೀತರ ಕವಿತೆಗಳೇ ಹಾಗೆ ತನ್ನ ಸುತ್ತಮುತ್ತಲ ಎಲ್ಲ ಸಂಗತಿಗಳ ಕಡೆಗೆ ದಿಟ್ಟಿ ಹಾಯಿಸುತ್ತಾರೆ. ಹಾಗಾಗಿ ಆಸ್ಪತ್ರೆಯ ವಾರ್ಡಿನ ಒಳಗೊಂದು ಸತ್ಯದರ್ಶನ ಕಾಣುತ್ತದೆ. ನುಣುಪ ಪಾದದವರಿಗಷ್ಟೇ ಮೀಸಲಿಟ್ಟ ಶಹರಿನಲ್ಲಿ, ಒಡೆದ ಹಿಮ್ಮುಡಿಗಳ ಲೆಕ್ಕವ ಇಟ್ಟವರಾರೋ ಅಂತ ಮನ ಮರಗುತ್ತದೆ.

ಅದಕ್ಕಾಗಿಯೇ ಇವೆಲ್ಲ ತಳಕು ಬಳಕಿನ ನಡುವೇ ಎಷ್ಟೇ ಕಷ್ಟವಾದರೂ ತನ್ನೂರೇ ಅವರಿಗೆ ಹಿರಿಮೆಗರಿಮೆಯಾಗುವುದು. ಬಗೆ ಬಗೆಯ ಬಗೆಯನರಳಿಸಿ ಸರಿವ ಕಾಲವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ಅದಕ್ಕನುಗುಣವಾಗಿ ಹೆಜ್ಜೆ ಹಾಕುತ್ತಾ, ಬುದ್ದನ ಸಾವನ್ನು ಬದುಕಿನ ಪಾಠವೆಂದು ತಿಳಿ ಹೇಳುತ್ತಾ, ಆತ್ಮ ನಿವೇದನೆಯ ಬಾಳು ಇಲ್ಲವೆಂದಾದಲ್ಲಿ ಬದುಕು ಹೇಗೆ ಆತ್ಮ ವಂಚನೆಯಾಗಬಲ್ಲದು ಎಂಬುದನ್ನು ಸೂಕ್ಷ್ಮವಾಗಿ ತೆರೆದಿಡಬಲ್ಲರು.

ಬದುಕಿನ ಆಕಸ್ಮಿಕ ತಿರುವುಗಳನ್ನು ಒಪ್ಪಿಕೊಳ್ಳದಿದ್ದರೆ ಬದುಕಿನಲ್ಲೇನು ಆಕರ್ಷಣೆಯಿದೆ? ಬದುಕಿಗೇನು ಅರ್ಥವಿದೆ? ಅಂತ ದಾರ್ಶನಿಕವಾಗಿ ಕವಿತೆಯ ಒಳಹೊಕ್ಕು ನುಡಿಯಬಲ್ಲರು. ಜೇಡನ ಬಲೆ ನೇಯುವಿಕೆಯ ಕುಶಲಗಾರಿಕೆಯನ್ನು ಪ್ರತಿಮೆಯಾಗಿಸಿಕೊಂಡು, ನೇಯುವುದು ಹಾಗೂ ನೋಯುವುದು ಬದುಕಿನ ಪರಮ ಸತ್ಯವೆಂಬ ಕಟು ವಾಸ್ತವವನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತಲೇ ಬೆಳದಿಂಗಳ ಬೆಳಕಿನಲ್ಲಿ ಭಾವಗೀತೆ ಹೊಸೆಯಬಲ್ಲರು.

ಇಷ್ಟೆಲ್ಲದರ ನಡುವೆಯೂ ಇಲ್ಲಿ ಕೆಲವು ಕವಿತೆ ಅವಸರಕ್ಕೆ ಬಿದ್ದಂತಿವೆ. ಕವಿತೆ ತನ್ನ ಭಾವನೆಗಳನ್ನ ಮಾತ್ರ ನಿವೇದಿಸಿಕೊಳ್ಳುವ ಮಾಧ್ಯಮ ಅಲ್ಲ, ತನಗೆ ದಕ್ಕಿದ ಕವಿತೆಯ ಎಳೆ ಓದುಗನ ಎದೆಯೊಳಗೂ ಇಳಿಯಬೇಕು ಅಂತಾದಾಗ  ಕವಿತೆಯ ಭಾವ ಮತ್ತಷ್ಟು ವಿಸ್ತಾರ ಆಗಬೇಕಿದೆ. ಕವಿತೆಯ ಒಳಗೆ ತಾನೇ ಇಳಿದು ಮಾತಾನಾಡುವುದ ಬಿಟ್ಟು ಕವಿತೆಯಷ್ಟೇ ಮಾತಾಡಬೇಕಿದೆ. ಹಾಗಾದಾಗ ಕವಿತೆಯ ಅರ್ಥವ್ಯಾಪ್ತಿ ಮತ್ತಷ್ಟು ಹಿಗ್ಗಬಲ್ಲದೇನೋ ಅನ್ನುವಂತದ್ದು ನನ್ನ ಅನಿಸಿಕೆ.

ಇವೆಲ್ಲದರ ನಡುವೆ ಕೊಡಗಿನ ಹಳ್ಳಿ ಮೂಲೆಯಾದ ಚೆಂಬುವಿನಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು, ಬದುಕಿನ ಎಲ್ಲಾ ಸೂಕ್ಷ್ಮ ಸಂಗತಿಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾ, ಅವುಗಳೆಲ್ಲವನ್ನೂ ಅಷ್ಟೇ ಜತನದಲ್ಲಿ ಆಯ್ದು ಕವಿತೆಯಾಗಿ ಪೋಣಿಸುತ್ತಾ ಕಾವ್ಯಕ್ಷೇತ್ರದಲ್ಲಿ ಈಗಾಗಲೇ ಭರವಸೆಯ ದೃಢ ಹೆಜ್ಜೆಯನ್ನೂರಿರುವ ಕವಯತ್ರಿ, ಸಂಗೀತಾ ರವಿರಾಜ್.

ಕನಸಿಗೂ ಕವಿತೆಗೂ ನಡುವೆ ಸೇತುವೆಯಾಗುತ್ತಲೇ ಎರಡನ್ನೂ ಸಮತೂಕದಿಂದ ಪೊರೆಯುವುದರ ಮೂಲಕ ಆ ಕ್ಷಣದ ಬದುಕಿನ ಸತ್ಯವನ್ನಷ್ಟೇ ತನ್ನದಾಗಿಸಿಕೊಳ್ಳುವ ಸಮಚಿತ್ತದ ಸಮಭಾವದ ತುಡಿತ ಹೊಂದಿರುವ ಕವಯತ್ರಿ ಸಂಗೀತ, ಈಗ ತಮ್ಮ ಮೂರನೇ ಸಂಕಲನದ ಜೊತೆಗೆ ನಮಗೆ ಮತ್ತೆ ಇದಿರಾಗಿದ್ದಾರೆ.

ಕವಯತ್ರಿ ಸಂಗೀತರ ‘ನಿರುತ್ತರ’ ಕವನ ಸಂಕಲನ ತನ್ನ ನವಿರು ಭಾವ, ಹದವಾದ ಮಾತು, ಸೊಗಸಿನ ಭಾಷೆಯ ಮೂಲಕ ನಮ್ಮನ್ನು ಸೆಳೆಯಬಲ್ಲದು. ಈ ಸಂಕಲನವನ್ನು ಎಲ್ಲರೂ ಮತ್ತದೇ ಪ್ರೀತಿಯಿಂದ ಬರಮಾಡಿಕೊಳ್ಳುವರೆಂಬ ವಿಶ್ವಾಸವಿದೆ.

‍ಲೇಖಕರು Avadhi

January 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಸಂಗೀತ ರವಿರಾಜ್

    ಧನ್ಯವಾದಗಳು ಅವಧಿಗೆ ಮತ್ತು ಸ್ಮಿತಕ್ಕ ಅನಂತ ಧನ್ಯವಾದಗಳು

    ಪ್ರತಿಕ್ರಿಯೆ
  2. ಸಂಗೀತ ರವಿರಾಜ್

    ತುಂಬಾ ಜತನದಿಂದ ಓದಿ ಸೂಕ್ಷ್ಮ ವಾಗಿ ಅವಲೋಕಿಸಿದ ಕವಿ ಮನಸ್ಸಿಗೆ ಹೇಗೆ ಕೃತಜ್ಞತೆ ಹೇಳಲಿ?

    ಪ್ರತಿಕ್ರಿಯೆ
  3. ಸಂಗೀತ ರವಿರಾಜ್

    ಸದಾ ಪ್ರಕಟಿಸಿ ಪ್ರೋತ್ಸಾಹಿಸುವ ಅವಧಿಗೆ ಅನಂತ ಧನ್ಯವಾದಗಳು

    ಪ್ರತಿಕ್ರಿಯೆ
  4. Vasundhara k m

    ಚೆಂದದ ಕೃತಿ ವಿಶ್ಲೇಷಣೆ ಸ್ಮಿತಾ.. ಅಭಿನಂದನೆಗಳು ಸಂಗೀತಾ ರವಿರಾಜ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: