ಸಾಹಿತ್ಯ ಪರಿಷತ್ತೇನು ಮಿಲಿಟ್ರಿ ಹೋಟ್ಲಾ ಅಂತ ಕಿಡಿಕಾರಿದ್ದರು..

ಮಾಂಸಾಹಾರ: ಅಸಹನೆ ಏಕೆ?

HK sharath

ಎಚ್ ಕೆ ಶರತ್

ಎರಡೂವರೆ ವರ್ಷಗಳ ಹಿಂದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಉತ್ಸವದ ವೇಳೆ ಹಂದಿ ಮಾಂಸ ಭೋಜನ ವ್ಯವಸ್ಥೆ ಮಾಡಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದರಿಂದಾಗಿ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಕೆಲವರು ತೀವ್ರ ಅಸಮಾಧಾನ ತೋಡಿಕೊಂಡಿದ್ದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರೊಬ್ಬರಂತೂ ಸಾಹಿತ್ಯ ಪರಿಷತ್ತೇನು ಮಿಲಿಟ್ರಿ ಹೋಟ್ಲಾ ಅಂತೆಲ್ಲ ಕಿಡಿಕಾರಿದ್ದರು. ಈ ವಿವಾದ ಆಹಾರ ಸಂಸ್ಕೃತಿಯಲ್ಲೂ ಬೇರೂರಿರುವ ಪವಿತ್ರ-ಅಪವಿತ್ರವೆಂಬ ವಿಂಗಡಣೆಗೆ ಕನ್ನಡಿ ಹಿಡಿದಿತ್ತು.

ನಮ್ಮೂರಿನಲ್ಲಿ ಸಾಕು ದನಗಳು ತೀರಿ ಹೋದ ಮೇಲೆ ಅಥವಾ ಸಾಯುವ ಸ್ಥಿತಿ ತಲುಪಿದಾಗ ದಲಿತರ ಕೇರಿಯವರಿಗೆ ವಿಷಯ ಮುಟ್ಟಿಸುತ್ತಿದ್ದರು. ಅವರು ಬಂದು ಆ ದನ ಅಥವಾ ಅದರ ಕಳೇಬರವನ್ನು ಊರಿನ ಹೊರಭಾಗಕ್ಕೆ ಕೊಂಡೊಯ್ದು ದನದ ಮಾಂಸ ಕತ್ತರಿಸಿಕೊಂಡು ಹೋಗುತ್ತಿದ್ದರು. ಶೂದ್ರರಾದ ನಮ್ಮ ಸಂಬಂಧಿಕರಿಗೆ ಸತ್ತ ಅಥವಾ ಸಾಯಲಿರುವ ದನದ ಅಂತ್ಯಸಂಸ್ಕಾರ ನೆರವೇರಿಸುವ ಉಸಾಬರಿಯಿಂದ ತಪ್ಪಿಸಿಕೊಂಡೆವೆಂಬ ನಿರಾಳತೆ ಒಂದೆಡೆಯಾದರೆ, ತಮ್ಮ ಮನೆಯ ಸದಸ್ಯನಂತಿದ್ದ ಪ್ರಾಣಿಯೊಂದು ತೀರಿಕೊಂಡ ದುಃಖ ಮತ್ತೊಂದೆಡೆ. ಆದರೆ ಅದನ್ನು ಆಹಾರವಾಗಿ ಸೇವಿಸುವ ಕುರಿತು ಆಕ್ಷೇಪವೇನೂ ಇರಲಿಲ್ಲ.

avadhi baduta jugari crossನಾವು ಸಂಬಂಧಿಕರು ಅಥವಾ ಸ್ನೇಹಿತರು ಒಟ್ಟಿಗೆ ಕುಳಿತು ಮಾಂಸಾಹಾರ ಸೇವಿಸುವಾಗಲೆಲ್ಲ, ತಾವು ಇದುವರೆಗೂ ಯಾವೆಲ್ಲ ಪ್ರಾಣಿಗಳ ಮಾಂಸ ಸೇವಿಸಿದ್ದೇವೆನ್ನುವ ವಿಚಾರವೂ ಪ್ರಸ್ತಾಪವಾಗುತ್ತಿತ್ತು. ನಮ್ಮೂರು ಅರೆಮಲೆನಾಡಾಗಿದ್ದರಿಂದ ಕಾಡು ಪ್ರಾಣಿಗಳ ಬೇಟೆಯೂ ಜಾರಿಯಲ್ಲಿತ್ತು. ಸಾಕಿದ ಕುರಿ, ಕೋಳಿ, ಹಂದಿಯಲ್ಲದೇ ಕಾಡು ಕುರಿ, ಕಾಡು ಹಂದಿ, ಕಾಡು ಕೋಳಿ, ಕಾಡು ಬೆಕ್ಕು, ಮೊಲ, ಗುಳ್ಳೆನರಿ ಹೀಗೆ ತಿಂದುಂಡ ಪ್ರಾಣಿಗಳ ಕುರಿತು ಹರಟುತ್ತಿದ್ದೆವು. ಈ ಸಂದರ್ಭದಲ್ಲಿ ಕೆಲವರು ತಾವು ಬೀಫ್ ಕೂಡ ತಿಂದಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಉಳಿದವರೆಲ್ಲ ಅದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಅದರ ರುಚಿ ಹೇಗಿರುತ್ತದೆಂದು ವಿಚಾರಿಸಿಕೊಳ್ಳುತ್ತಿದ್ದರು.

ನನ್ನ ಸ್ನೇಹಿತೆ ಒಂದು ದಿನ ತೀರಾ ಮಂಕಾಗಿದ್ದಳು. ಕಾರಣ ಏನೆಂದು ಕೇಳಿದೆ. ತನ್ನ ರೂಮಿಗೆ ಬಂದು ಉಪಟಳ ನೀಡುತ್ತಿದ್ದ ಇಲಿ ಸಾಯಿಸಲು ವಿಷ ಇಟ್ಟಿದ್ದೆ. ಇವತ್ತು ಅದು ನನ್ನ ಕಣ್ಣಮುಂದೆಯೇ ವಿಷ ತಿನ್ನುತ್ತಿದ್ದನ್ನು ನೋಡಿ ತುಂಬಾ ಬೇಜಾರಾಯ್ತು. ಪಾಪ ಇನ್ನೂ ಮರಿ ಕಣೋ ಅಂತ ಬೇಸರ ತೋಡಿಕೊಂಡಳು. ಪಕ್ಕಾ ಮಾಂಸಾಹಾರಿಯಾದ ಅವಳ ಆಹಾರ ಪದ್ಧತಿಯಲ್ಲಿ ಬೀಫ್ ಕೂಡ ಸ್ಥಾನ ಪಡೆದಿತ್ತು.

ಮೇಲಿನ ಘಟನೆಗಳೆಲ್ಲವೂ ಇದೀಗ ನೆನಪಾಗಲು ನೆಪವಾದದ್ದು ಮತ್ತೊಮ್ಮೆ ಚಾಲ್ತಿಗೆ ಬಂದಿರುವ ಗೋಮಾಂಸ ಸೇವನೆ ಸರಿಯೋ ತಪ್ಪೋ ಎಂಬ ವಿವಾದ.
ಮಾಂಸಾಹಾರ ಮತ್ತು ಸಸ್ಯಾಹಾರ ಇವೆರಡರಲ್ಲಿ ಯಾವುದೂ ಶ್ರೇಷ್ಠವೂ ಅಲ್ಲ ಕನಿಷ್ಠವೂ ಅಲ್ಲ ಎಂಬ ಪ್ರಜ್ಞೆ ನಮ್ಮೆಲ್ಲರೊಳಗೂ ಜಾಗೃತಗೊಳ್ಳಲು ಇನ್ನೂ ಅದೆಷ್ಟು ಕಾಲ ಬೇಕೊ ತಿಳಿಯದು. ಮಾಂಸಾಹಾರವೆಂಬುದು ‘ಹೊಲಸು’ ಎಂಬ ವಿಚಾರ ಈಗಾಗಲೇ ಬಹುತೇಕರ ಮೈಮನಸ್ಸು ಹೊಕ್ಕಾಗಿದೆ. ಹಾಗಾಗಿಯೇ ಕೆಲವು ನಿರ್ಧಿಷ್ಟ ‘ವಾರ’ಗಳಂದು ಕೆಲವರು ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವಿಸುವುದಿಲ್ಲ. ಇನ್ನು ಕೆಲ ವಿಶೇಷ ಪೂಜೆಗಳ ಸಂದರ್ಭದಲ್ಲಂತೂ ತಿಂಗಳುಗಟ್ಟಲೆ ಮಾಂಸಾಹಾರ ತ್ಯಜಿಸುವವರೂ ಉಂಟು. ಇವೆಲ್ಲವೂ ಅವರವರ ನಂಬಿಕೆಗಳಿಗೆ ಸಂಬಂಧಿಸಿರುವುದರಿಂದ ಮತ್ತದು ಅವರವರ ಮನೆಯಲ್ಲಿ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುವುದರಿಂದ ಆ ಕುರಿತು ಆಕ್ಷೇಪ ಎತ್ತುವುದರಲ್ಲಿ ಯಾವುದೇ ಅರ್ಥವಿಲ್ಲ.

ಆದರೆ, ತಮ್ಮ ವ್ಯಕ್ತಿಗತ ನೆಲೆಯಲ್ಲಿ ಉಳಿಯಬೇಕಿದ್ದ ಈ ಪವಿತ್ರ-ಅಪವಿತ್ರತೆಯ ಭ್ರಮೆಯನ್ನು ಇಡೀ ಸಮಾಜದ ಮೇಲೆ ಹೇರಲು ಕೆಲವರು ಹೊರಟಿರುವುದು ದುರಂತ. ಗೋವು ತಮಗೆ ಪವಿತ್ರ ಮತ್ತು ಪೂಜನೀಯವಾದ ಕಾರಣ ಗೋಹತ್ಯೆ ನಿಷೇಧಿಸಿ ಗೋಮಾಂಸ ಸೇವನೆ ತಡೆಗಟ್ಟಬೇಕೆಂದು ಕೆಲವರು ಏರಿದ ದನಿಯಲ್ಲಿ ಆಗ್ರಹಿಸುತ್ತಿದ್ದಾರೆ. ಗೋಮಾಂಸ ಸೇವಿಸುವವರು ಮತ್ತವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸುವವರು ದುಷ್ಟರು, ನಿಕೃಷ್ಟರು, ಮನುಷ್ಯತ್ವ ಉಳ್ಳವರಲ್ಲವೆಂದು ದೂಷಿಸುತ್ತಿದ್ದಾರೆ. ಬಹುಸಂಖ್ಯಾತರ ಭಾವನೆಗಳಿಗೆ ಬೆಲೆಯೇ ಇಲ್ಲವೇ ಅಂತೆಲ್ಲ ಪ್ರಶ್ನಿಸುತ್ತಿದ್ದಾರೆ.

non veg ootaಹೀಗೆ ಪ್ರಶ್ನಿಸಲು ಇವರ ಬಳಿ ಇರುವ ಪುರಾವೆಗಳಾದರೂ ಯಾವುವು? ಹಾಗಾದರೆ ಹಿಂದೂಗಳಾಗಿ ಗೋಮಾಂಸ ಸೇವಿಸುವವರು ಇವರ ‘ಬಹುಸಂಖ್ಯಾತರ’ ಬೌಂಡರಿಯೊಳಗೆ ಸೇರುವುದಿಲ್ಲವೇ? ಹಾಗೆ ಸೇರುವವರ ಪಟ್ಟಿಯಲ್ಲಿ ಶೂದ್ರರು, ದಲಿತರಿಲ್ಲವೇ? ಇದೀಗ ಗೋಮಾಂಸ ಸೇವನೆಯ ವಿರುದ್ಧ ಕೆಂಡ ಕಾರುತ್ತಿರುವವರ ಪೂರ್ವಜರ ನಾಲಿಗೆಗೆ ಗೋಮಾಂಸದ ರುಚಿ ತಟ್ಟಿಲ್ಲವೇ?

ಹೋಗಲಿ, ಸ್ವಯಂಘೋಷಿತ ‘ಬಹುಸಂಖ್ಯಾತರ’ ಭಾವನೆಗಳಿಗೆ ಸ್ಪಂದಿಸುವ ಸಲುವಾಗಿ ಗೋವಧೆ ನಿಷೇಧಿಸುವುದೇ ಆದರೆ, ಇವರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ರಾಜಿ ಸೂತ್ರಕ್ಕೆ ಬದ್ಧರಾಗುವವರಿಗೆ ಸಿಗುವ ಉಡುಗೊರೆಗಳಾದರೂ ಯಾವುವು? ದುಬಾರಿಯಾಗಿರುವ ಆಡು-ಕುರಿ ಮಾಂಸಕ್ಕೆ ಸಬ್ಸಿಡಿ ನೀಡಿ, ಕಡಿಮೆ ದರಕ್ಕೆ ದೊರೆಯುವಂತೆ ಮಾಡುವರೇ?

ಅಷ್ಟಕ್ಕೂ ಗೋವಧೆ ನಿಷೇಧಿಸಿದ ನಂತರ ಪವಿತ್ರ ದೇಸಿ ಗೋವುಗಳನ್ನು ಸಾಕುವವರಾದರೂ ಯಾರು? ಹೈನುಗಾರಿಕೆಯನ್ನೇ ನೆಚ್ಚಿಕೊಂಡವರಂತೂ ಅಧಿಕ ಹಾಲು ನೀಡುವ ಜೆರ್ಸಿ, ಸಿಂಧಿ ಹಸುಗಳನ್ನು ಸಾಕುತ್ತಿದ್ದಾರೆ. ಎಲ್ಲವನ್ನೂ ಲಾಭ-ನಷ್ಟದ ಮಾನದಂಡದಲ್ಲಿಯೇ ನೋಡುವ ಮನಸ್ಥಿತಿ ನಮ್ಮದಾಗಿರುವಾಗ, ತಮಗೆ ನಷ್ಟವಾದರೂ ಪರವಾಗಿಲ್ಲ ಪವಿತ್ರ ದೇಸಿ ಗೋವುಗಳನ್ನು ಅವು ಸಾಯುವವರೆಗೂ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎನ್ನುವ ಮನಸ್ಥಿತಿ ಹೊಂದಿದವರು ಎಷ್ಟು ಮಂದಿ ಇದ್ದಾರೆ?

ಆ ರೀತಿಯ ಭಾವನೆ ಅಸಲಿಗೂ ಹಸುಗಳನ್ನು ಅವು ತಮ್ಮೊಂದಿಗಿರುವಷ್ಟೂ ದಿನ ಉತ್ತಮ ಹಾರೈಕೆಯೊಂದಿಗೆ ನೋಡಿಕೊಳ್ಳುವವರಿಗೆ ಇದ್ದಿದ್ದರೆ, ಕಸಾಯಿಖಾನೆಗಳಿಗೆ ಗೋವುಗಳು ಹೇಗೆ ಸರಬರಾಜಾಗುತ್ತಿದ್ದವು? ಈಗ ಗೋಹತ್ಯೆ ನಿಷೇಧಿಸಿ ಎಂದು ಆಗ್ರಹಿಸುತ್ತಿರುವ ಕೆಲವರು ತಾವು ನೆಲೆಸಿರುವ ಮಹಾನಗರಗಳಲ್ಲಿ ಕೊಟ್ಟಿಗೆಗಳನ್ನು ಕಟ್ಟಿ ಪವಿತ್ರ ದೇಸಿ ಗೋ ಸಂತತಿ ಉಳಿಸಿಕೊಳ್ಳಲು ತಯಾರಾಗಿದ್ದಾರೆಯೇ? ಅಸಲಿಗೂ ಗೋವುಗಳನ್ನು ಮನೆ ಮಕ್ಕಳಂತೆ ನೋಡಿಕೊಳ್ಳುತ್ತಿರುವ ರೈತರು ಮೌನವಾಗಿಯೇ ಇದ್ದಾರೆ, ತಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ.

ಗೋಹತ್ಯೆ ನಿಷೇಧವೂ ಸೇರಿದಂತೆ ಮಾಂಸಾಹಾರವು ಅಪವಿತ್ರವೆಂಬ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ವಿವಾದಗಳೆಲ್ಲವೂ ಅಂತಿಮವಾಗಿ ನಮ್ಮನ್ನು ಒಡೆದು ಆಳುವವರಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತವೆಯೇ ವಿನಾ ಸಾಮಾನ್ಯ ಜನರಿಗೆ ಇದರಿಂದಾಗುವ ನಷ್ಟವೇ ಹೆಚ್ಚು.

ಗೋಹತ್ಯೆ ನಿಷೇಧದ ಹಿಂದೆ ‘ಪ್ರಾಣಿ ಹಿಂಸೆ’ ತಡೆಯಬೇಕೆಂಬ ಉದ್ದೇಶವೇನಾದರೂ ಇದ್ದರೆ, ಕುರಿ, ಕೋಳಿ, ಹಂದಿ, ಹಸು ಯಾವುದೇ ಆಗಲಿ ಅವುಗಳ ಸಾಕಣೆ, ಸಾಗಾಟ ಮತ್ತು ಕಸಾಯಿಖಾನೆಗಳಲ್ಲಿ ವಧಿಸುವ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಮರುಪರಿಶೀಲಿಸಲು ಆಗ್ರಹಿಸುವುದು ಸೂಕ್ತವೇ ಹೊರತು, ಮಾಂಸಾಹಾರ ಸೇವನೆ ತಡೆಯುವುದು ಪರಿಹಾರವಲ್ಲ. ಹಿಂಸೆ-ಅಹಿಂಸೆಯ ವ್ಯಾಖ್ಯಾನ ಅಷ್ಟು ಸರಳವಾಗೇನು ಇಲ್ಲ. ಹಿಂಸೆಗೆ ಅಮೂರ್ತ ಆಯಾಮಗಳೂ ಇವೆ ಅಲ್ಲವೇ? ದೈಹಿಕ ಹಿಂಸೆಯೊಂದಿಗೆ ಮಾನಸಿಕ ಹಿಂಸೆಯತ್ತಲೂ ಮನಸ್ಸು ಹಾಯಿಸಬೇಕಿದೆ, ಮತ್ತೊಬ್ಬರ ಮನಸ್ಸು ನೋಯಿಸುವ ಮುನ್ನ!

ಕಳೆದ ಅಕ್ಟೋಬರ್ ನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಬರಹ

‍ಲೇಖಕರು admin

April 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: