ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಾಸಿವೆ ಗಾತ್ರದ ಪುಟ್ಟ ಮಗು’

ಅನಿತಾ ನರೇಶ್ ಮಂಚಿ

 

ಆಗ ನಾನು ಎರಡನೇ ತರಗತಿಯಲ್ಲಿದ್ದೆ.

ಅದೊಂದು ದಿನ ಪಕ್ಕದ ಮನೆಯ ಆತ್ಮೀಯ ಗೆಳತಿ ನಯನ ನನ್ನನ್ನು ಸನ್ನೆ ಮಾಡಿ ಕರೆದಳು. ‘ಏನೇ’ ಎಂದು ಕೇಳಿದರೆ ತುಟಿಗೆ ಬೆರಳಿಟ್ಟು ಸುಮ್ಮನಿರುವಂತೆ ಆರ್ಡರ್ ಕೊಟ್ಟಳು. ಅವಳಿಗೆಲ್ಲಾದರೂ ನನ್ನ ಅಕ್ಕ ಅಥವ ಅಣ್ಣನ ಬಗ್ಗೆ ಚಾಡಿ ಹೇಳಬೇಕಾದರೆ ಇಂತಹ ವರ್ತನೆಗಳು ಮಾಮೂಲು. ‘ಸರಿ’ ಅಂದುಕೊಂಡು ಅವಳನ್ನು ಹಿಂಬಾಲಿಸಿದೆ . ಸ್ವಲ್ಪ ದೂರ ಹೋದ ನಂತರ ‘ಏನೇ ವಿಷ್ಯ?’ ಅಂತ ಪುನಃ ಪ್ರಶ್ನಿಸಿದೆ. ಆಗಲೂ ಉತ್ತರಿಸದೆ ಮುಂದೆ ನಡೆಯುತ್ತಲೇ ಇದ್ದಳು.

ಗದ್ದೆ ಹುಣಿ ದಾಟಿ ಗುಡ್ಡದ ಕಡೆಗೆ ಇನ್ನು ಕೊಂಚ ದಾರಿ ಸವೆದ ಬಳಿಕ ಹತ್ತಿರ ಯಾರೂ ನಮ್ಮನ್ನು ನೋಡುತ್ತಿಲ್ಲವೆಂದು ಧೃಡ ಪಡಿಸಿಕೊಂಡು ಕಿವಿಯಲ್ಲೇನೋ ಉಸುರಿದಳು. ಮೊದಲೇ ಅವಳ ಬಗ್ಗೆ ಸಿಟ್ಟು ಬಂದಿದ್ದ ನನಗೆ ಈಗ ಅವಳು ಹೇಳಿದ್ದು ಏನೂ ಅರ್ಥವಾಗದೆ ಸಿಟ್ಟು ಇನ್ನಷ್ಟೂ ಹೆಚ್ಚಾಯಿತು.

‘ಅಲ್ಲಾ, ಇಲ್ಲಿ ಯಾರಿದ್ದಾರೆ ಅಂತ ಕಿವಿಯಲ್ಲಿ ಮೆತ್ತಗೆ ಹೇಳೋದು ..? ಸ್ವಲ್ಪ ಕೇಳುವ ಹಾಗೆ ಹೇಳು ಮಾರಾಯ್ತೀ’, ಅಂತ ಜೋರು ಮಾಡಿದೆ. ಆಕೆಗೂ ಸಿಟ್ಟು ಬಂತೇನೋ ..’ಹೋಗು ನೀನು , ನಿನಗೇನು ಹೇಳಲ್ಲ ನಾನು’ ಅಂತ ಅವಳೂ ಸ್ವರವೇರಿಸಿದಳು. ‘ಸರಿ ಹಾಗಾದ್ರೆ ನಾನು ಹೋಗ್ತೀನಿ. ಒಬ್ಳೇ ಕೂತುಕೊಂಡು ಮ್ಯಾಥ್ಸ್ ಹೋಮ್ವಕರ್್ ಮಾಡ್ತೇನೆ’ ಅಂತ ಅಲ್ಲಿಂದ ಹೊರಟೇ ಬಿಟ್ಟೆ.

ಈ ಬಾಣ ಗುರಿ ಮುಟ್ಟುತ್ತೆ ಅಂತ ಚೆನ್ನಾಗಿ ಗೊತ್ತಿತ್ತು. ಲೆಕ್ಕದಲ್ಲಿ ದಡ್ಡಿಯಾದ ಅವಳಿಗೆ ನನ್ನ ಸಹಾಯವಿಲ್ಲದೆ ಮ್ಯಾಥ್ಸ್ ಮಾಡುವುದು ಅಸಾಧ್ಯ ಎಂಬುದು ನನಗೆ ತಿಳಿದ ವಿಷಯವೇ.. ಕೂಡಲೇ ಅವಳು ಸ್ವರ ತಗ್ಗಿಸಿ ‘ಸರಿ, ಇಲ್ಲಿ ಬಾ, ನಾನು ಹೇಳಿದ್ದನ್ನು ಮಾತ್ರ ಯಾರಿಗೂ ಹೇಳಬಾರದು’ ಅಂದಳು. ನಾನು ಆಯ್ತು ಅಂತ ತಲೆ ಅಲುಗಾಡಿಸಿದೆ. ಆ ನನ್ನ ಮೆತ್ತಗಿನ ತಲೆಯ ಅಲುಗಾಟ ಅವಳಿಗೆ ನಂಬಿಕೆ ನೀಡಿದಂತೆ ಕಾಣಲಿಲ್ಲ. ‘ಆಣೆ’ ಮಾಡು ಎಂದು ಅವಳಿಗೆ ಗೊತ್ತಿರುವ ಎಲ್ಲಾ ದೇವ ದೇವತೆಗಳ ಹೆಸರುಗಳನ್ನು ಒಂದೊಂದಾಗಿ ಹೆಸರಿಸಿದಳು. ಅದೂ ಸಾಲದಾಗಿ ಅಮ್ಮ, ಅಪ್ಪ, ಅಜ್ಜ, ಅಜ್ಜಿಯರನ್ನೂ ಒಟ್ಟಿಗೆ ಸೇರಿಸಿದಳು. ಇಷ್ಟೆಲ್ಲಾ ದೊಡ್ಡ ಸೈನ್ಯದ ಸಾಲನ್ನು ನೋಡಿ ವಿಷಯದ ಗಂಭೀರತೆಯ ಅರಿವಾದ ನಾನು ಅವಳು ಹೇಳಿದ್ದರ ಮೇಲೆಲ್ಲಾ ಆಣೆ ಹಾಕಿ ‘ಸರಿ ಆಯ್ತಲ್ಲಾ ಮಾರಾಯ್ತಿ? ಇನ್ನಾದ್ರೂ ಒಮ್ಮೆ ಹೇಳೀಗ’ ಅಂತ ಬೇಡಿಕೊಂಡೆ.

ಆಕೆ ಪುನಃ ಇನ್ನೊಂದು ಬಾರಿ ಸುತ್ತು ಮುತ್ತೆಲ್ಲ ಪರಿಶೀಲಿಸಿ, ಸಣ್ಣ ಸ್ವರದಲ್ಲಿ ‘ಏಯ್, ನಮ್ಮ ಹೊಟ್ಟೆ ಒಳಗೆ ಮಗು ಇರುತ್ತೆ ಗೊತ್ತಾ’ ಅಂತ ಅಂದ್ಲು. ನನಗೆ ಅಚ್ಚರಿ!!! ಕ್ಲಾಸಿನಲ್ಲಿ ಬುದ್ಧಿವಂತೆ ಎಂಬ ಬಿರುದು ಬಾವಲಿಗಳನ್ನು ಧರಿಸಿ ಮೆರೆಯುತ್ತಿರುವ ನನಗೇ ಗೊತ್ತಿಲ್ಲದ ಇಷ್ಟೊಂದು ಅದ್ಭುತ ವಿಷಯ ಇವಳಿಗೆ ಹೇಗೆ ತಿಳಿಯಿತು ಅಂತ ಅವಳ ಬಗ್ಗೆ ಅಸೂಯೆಯಾಯಿತು. ಆದರೆ ಅದನ್ನು ತೋರಗೊಡದೆ ‘ನಿಂಗ್ಯಾರೇ ಹೇಳಿದ್ದು’ ಅಂತ ಕೇಳಿದೆ.

‘ಅದೆಲ್ಲ ನಿಂಗೆ ಯಾಕೆ? ನಾನು ಹೇಳಿದ ಈ ವಿಷಯ ಮಾತ್ರ ಯಾರಿಗೂ ಹೇಳಬಾರದು’ ಎಂದು ಪುನಃ ಆಣೆ ಭಾಷೆಗಳ ಸರಣಿ ನಡೆಸಿದಳು. ಆಗಾಗಲೇ ನನ್ನ ಕುತೂಹಲ ಸಾಕಷ್ಟು ಕೆರಳಿದ್ದರಿಂದ ‘ನನ್ನ ಬಗ್ಗೆ ನಿಂಗೆ ಗೊತ್ತಿಲ್ವಾ .. ಇಷ್ಟರವರೆಗೆ ನೀನು ಹೇಳಿದ ಯಾವ್ದಾದರೂ ಸುದ್ದಿಯನ್ನು ನಾನು ಯಾರಿಗಾದರು ಹೇಳಿದ್ದೀನಾ??’ ಅಂತ ನನ್ನ ಪ್ರಾಮಾಣಿಕತೆಯನ್ನು ಮೆರೆದೆ.

ಈಗ ಅವಳು ಇನ್ನೂ ಹತ್ತಿರ ಬಂದು ‘ನಾವು ಹುಟ್ಟುವಾಗಲೇ ನಮ್ಮ ಹೊಟ್ಟೆಯಲ್ಲಿ ಚಿಕ್ಕ ಸಾಸಿವೆಯ ಗಾತ್ರದ ಪುಟ್ಟ ಮಗು ಇರುತ್ತೆ. ನಾವು ಬೆಳೆದಂತೆಲ್ಲ ಅದೂ ಬೆಳೆಯುತ್ತಾ ಹೋಗಿ ನಮಗೆ ಮದುವೆ ಆದ ಮೇಲೆ ಮಗು ಹುಟ್ಟುತ್ತೆ’ ಅಂತ ನ್ಯೂಸ್ ಇನ್ ಡಿಟೇಲ್ಗೆ ಇಳಿದಳು. ಈಗ ನನ್ನೊಳಗೆ ಹಲವಾರು ಪ್ರಶ್ನೆಗಳು ಎದ್ದು ನಿಂತವು. ಅವಳ ಮೊದಲಿನ ಮಾತನ್ನೆಲ್ಲ ಒಪ್ಪಿಕೊಂಡರೂ, ನಮಗೆ ಮದುವೆ ಆಯಿತು ಅಂತ ಹೊಟ್ಟೆಯಲ್ಲಿರುವ ಆ ಮಗುವಿಗೆ ಅದು ಹೇಗೆ ಗೊತ್ತಾಗುತ್ತೆ? ಎಂಬ ಮೂಲಭೂತ ಪ್ರಶ್ನೆ ನನ್ನನ್ನು ಕಾಡತೊಡಗಿತು. ಆದರೆ, ಅದಕ್ಕೆ ಅವಳ ಬಳಿಯೂ ಉತ್ತರ ಇರಲಿಲ್ಲ.

ಮರಳಿ ಹೊರಡಬೇಕೆನ್ನುವಾಗ ಕೈ ಹಿಡಿದು ನಿಲ್ಲಿಸಿ ‘ ಮಗು ಹುಟ್ಟುವಾಗ ಜೋರು ಹೊಟ್ಟೆ ನೋವಾಗುತ್ತದಂತೆ’ ಅಂತ ಸೇರಿಸಿದಳು. ಈಗಂತೂ ನನಗೆ ಗಾಭರಿಗಿಟ್ಟುಕೊಂಡಿತು. ಕೆಲವು ದಿನಗಳ ಮೊದಲಷ್ಟೆ ಪೇರಳೆ ಹಣ್ಣು ಮತ್ತು ಅಜ್ಜಿ ಮಾಡಿದ ಅತಿರಸ ಎರಡನ್ನೂ ವಿಪರೀತ ತಿಂದು ಮೂರು ದಿನ ಹೊಟ್ಟೆ ನೋವಿನಲ್ಲಿ ನರಳಿದ್ದೆ. ಅಜ್ಜಿಯ ಮನೆ ಮದ್ದುಗಳೆಲ್ಲ ನಾಟದೆ, ಅಪ್ಪ ಇಂಜೆಕ್ಷನ್ ಚುಚ್ಚಿದ ಮೇಲೆ ಎಲ್ಲಾ ಶಾಂತವಾಗಿದ್ದು.

ಆದರೆ ಈಗ ನನ್ನ ಚಿಂತೆ ಹೆಚ್ಚಾಯಿತು. ಎಲ್ಲಾದರು ಆ ಸಮಯದಲ್ಲೇ ಸಾಸಿವೆ ಗಾತ್ರದ ಮಗು ಹುಟ್ಟಿ ನನಗೆ ಕಾಣದೆ ಹೋಗಿದ್ದರೆ..?? ‘ರೆ .. ಏನು? ಖಂಡಿತಾ ಹಾಗೆಯೇ ಆಗಿರುತ್ತದೆ’ ಎಂದಿತು ನನ್ನ ಮನಸ್ಸು. ಏಕೆಂದರೆ ಆವತ್ತು ಹೊಟ್ಟೆ ನೋವು ಅಷ್ಟು ಜೋರಾಗಿತ್ತು. ‘ಛೇ.. ಎಂತಾ ಅನ್ಯಾಯವಾಯಿತು. ಮೊದಲೇ ಈ ಸುದ್ಧಿ ಗೊತ್ತಿದ್ದಿದ್ದರೆ ಸ್ವಲ್ಪ ಜಾಗ್ರತೆಯಾದರೂ ಮಾಡಬಹುದಿತ್ತೇನೋ’ ಎನ್ನಿಸಿ ಬೇಸರವಾಯಿತು. ಆದರೆ ಇದನ್ನೆಲ್ಲಾ ಅವಳ ಮುಂದೆ ಬಯಲು ಮಾಡಲಿಲ್ಲ. ಮೌನವಾಗಿ ಮನೆಗೆ ಬಂದೆ. ಮನೆಗೆ ಬಂದು ಮ್ಯಾಥ್ಸ್ ಮಾಡಲು ಕುಳಿತರೂ ತಲೆಯೊಳಗೆಲ್ಲ ನನ್ನ ಸಾಸಿವೆ ಗಾತ್ರದ ಮಗುವೇ ತುಂಬಿತ್ತು.

ಈ ರೀತಿ ಆ ನಂತರ ಆಗೊಮ್ಮೆ ಈಗೊಮ್ಮೆ ನೆನಪಾಗಿ ಕಾಡುತ್ತಿದ್ದ ಸಾಸಿವೆ ಗಾತ್ರದ ಮಗು ದಿನಗಳೆದಂತೆ ನಿಧಾನಕ್ಕೆ ಮರೆಯತೊಡಗಿತು.

ಇಷ್ಟೆಲ್ಲಾ ಆಗುವಾಗ ನಮ್ಮ ಪಕ್ಕದ ಮನೆಗೆ ಒಂದು ಹೊಸ ಸಂಸಾರ ಬಂದಿತು. ಸುತ್ತು ಮುತ್ತೆಲ್ಲ ತುಂಬಾ ಜನ ಅಂಕಲ್ , ಆಂಟಿ ಗಳು ಇದ್ದ ಕಾರಣ ಅವರಿಗೆ ‘ಹೊಸ ಅಂಕಲ್, ಹೊಸ ಆಂಟಿ’ ಎಂದು ಹೊಸದಾಗಿ ನಾಮಕರಣ ಮಾಡಿದೆವು. ಅವರಿಗೆ ಮದುವೆಯಾಗಿ ಎರಡೋ ಮೂರೋ ವರ್ಷ ಕಳೆದಿತ್ತೆಂಬ ಸುದ್ದಿಯೇ ನನ್ನ ಮತ್ತು ನಯನಳ ಚಿಂತೆಗೆ ಕಾರಣವಾಯಿತು. ಹಾಗಿದ್ರೆ ಅವರಿಗೆ ಇನ್ನೂ ಮಗು ಯಾಕೆ ಆಗಲಿಲ್ಲ? ಎಂಬ ಗಂಭೀರ ಸಮಸ್ಯೆ ನಮ್ಮನ್ನು ಕಾಡತೊಡಗಿತು. ನಯನ ಅದಕ್ಕೆ ಕೂಡಾ ಪರಿಹಾರವನ್ನು ಒಂದೆರಡು ದಿನದಲ್ಲೇ ಕಂಡು ಹಿಡಿದಳು. ‘ಏನ್ ಗೊತ್ತಾ? ಅವರ ಮದುವೆ ಎಲ್ಲೋ ದೇವಸ್ಥಾನದಲ್ಲಿ ಗುಟ್ಟಾಗಿ ನಡೆದಿತ್ತಂತೆ. ಹಾಗಾಗಿ ಹೊಟ್ಟೆ ಒಳಗಿರುವ ಮಗುವಿಗೂ ಮದುವೆ ಆಗಿರುವುದು ಗೊತ್ತೇ ಇರಲಿಕ್ಕಿಲ್ಲ’ ಎಂದಳು. ನನಗೂ ಅದು ಹೌದೆನ್ನಿಸಿ ತಲೆ ತೂಗಿದೆ.

ಅದೇ ದಿನ ಸಂಜೆ ನಮ್ಮಲ್ಲಿಗೆ ಹೊಸ ಆಂಟಿ, ಹೊಸ ಅಂಕಲ್ ಬಂದಿದ್ದರು. ಯಾಕೋ ಸಪ್ಪೆ ಮುಖ ಹೊತ್ತ ಇಬ್ಬರೂ, ವೈದ್ಯರಾದ ನನ್ನಪ್ಪನ ಬಳಿ ಮಾತನಾಡುತ್ತಿದ್ದರು. ನಡು ನಡುವೆ ಆಂಟಿ ಹನಿಗಣ್ಣಾಗುವುದು, ಅಂಕಲ್ ಬೆನ್ನು ಸವರಿ ಸಮಾಧಾನಿಸುವುದು. . . ಇವೆಲ್ಲಾ ನಡೆಯುತ್ತಿತ್ತು. ಅಷ್ಟರಲ್ಲಿ ನನ್ನಮ್ಮ ಬಂದು ಓದಲಿರುವ ನನ್ನ ಪಾಠದ ಬಗ್ಗೆ ಗದರಿಸಿ ಒಳ ಕರೆದಳು. ಹಾಗಾಗಿ ಆಮೇಲೆ ಏನಾಯಿತೋ ನಮಗೆ ಗೊತ್ತೇ ಆಗಲಿಲ್ಲ.

ಇನ್ನೂ ಒಂದು ಆರೇಳು ತಿಂಗಳು ಕಳೆದಿರಬಹುದು. ಅಮ್ಮ ಒಂದಿನ ಅಪ್ಪನಲ್ಲಿ, ‘ರೀ, ನಿಮ್ಗೆ ಗೊತ್ತಾ? ಪಕ್ಕದ್ಮನೆ ವಿನುತಂಗೆ ಈಗ ಮೂರು ತಿಂಗಳಂತೆ’ ಅಂತ ಎಂದರು. ‘ಅರೇ..! ನಂಗೇ ವರ್ಷ ಆರು ಕಳೀತಾ ಬಂತು; ಇನ್ನು ನನ್ನಿಂದ ಅಷ್ಟು ದೊಡ್ಡ ಇರುವ ಅವರಿಗೆ ಬರೇ ಮೂರೇ ತಿಂಗಳಾ..?? ಅಂತ ನಡುವೆ ಅಡ್ಡಬಾಯಿ ಹಾಕಿದೆ. ಅದಕ್ಕೆ ಅಮ್ಮ ನನ್ನ ತಲೆಗೆ ಒಂದು ಚೆನ್ನಾಗಿ ಮೊಟಕಿ ಅಪ್ಪನ ಮುಖ ನೋಡಿ ನಕ್ಕರು. ನಂಗೆ ಸಿಟ್ಟು ಬಂದು ಸೀದಾ ಮನೆಯಿಂದ ಹೊರಬಂದೆ. ಜೊತೆಗೆ ನನಗೆ ತಿಳಿದ ಈ ವಿಚಿತ್ರ ಸುದ್ದಿಯನ್ನು ನಯನಳಿಗೆ ಬೇರೆ ಹೇಳಬೇಕಿತ್ತಲ್ಲ. ..?

ಈಗೀಗ ಹೊಸ ಆಂಟಿ ಹೆಚ್ಚು ಹೊರ ಬರುತ್ತಿರಲಿಲ್ಲ. ಅವರ ಹೊಟ್ಟೆ ಭಯಂಕರ ದೊಡ್ಡದಾಗಿ ನೋಡಲು ಜೋಕರ್ ತರ ಕಾಣಿಸುತ್ತಿದ್ದರು. ನಾವು ಒಂದಿನ ಕೇಳಿದ್ದಕ್ಕೆ ‘ಇದರೊಳಗೆ ಒಂದು ಪುಟ್ಟ ಪಾಪು ಇದೆ, ಮಕ್ಳೇ’ ಅಂತ ಅಂದರು. ನಾನೂ-ನಯನ ಮುಖ ಮುಖ ನೋಡಿಕೊಂಡು ಅಲ್ಲಿಂದ ಓಡಿದೆವು. ನಮಗೀಗ ಇದು ಹೊಸ ವಿಚಾರ. ‘ಈ ಬುದ್ಧು ಮಗುವಿಗೆ ಬಹುಷಃ ಈಗಷ್ಟೇ ತಿಳಿಯಿತೇನೋ ಇವರಿಗೆ ಮದುವೆಯಾದದ್ದು’ ಎಂದು ಮಾತನಾಡಿಕೊಂಡು ನಕ್ಕೆವು.

ಇನ್ನೂ ಕೆಲವು ತಿಂಗಳುಗಳ ಬಳಿಕ ತವರಿಗೆ ಹೋದ ಹೊಸ ಆಂಟಿ ವಾಪಾಸು ಬರುವಾಗ ಉಣ್ಣೆ ಬಟ್ಟೆಯಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ಪುಟ್ಟ ಮಗುವನ್ನು ಹಿಡಿದುಕೊಂಡು ಬಂದಿದ್ದರು.

ವಠಾರದಲ್ಲಿ ಎಲ್ಲರೂ ಆ ಮಗುವಿನ ಅಂದ ಚೆಂದದ ವರ್ಣನೆ ಮಾಡುತ್ತಿದ್ದರೆ ನಾನು ಮಾತ್ರ ನನ್ನ ಹೊಟ್ಟೆ ನೋವಿನೊಂದಿಗೆ ಕಳೆದು ಕೊಂಡ ನನ್ನ ಸಾಸಿವೆ ಗಾತ್ರದ ಪುಟ್ಟ ಮಗುವಿನ ಬಗ್ಗೆ ಯೋಚಿಸಿ ಮರುಗುತಿದ್ದೆ.

‍ಲೇಖಕರು G

19 July, 2011

12 Comments

  1. Jayalaxmi

    ಮತ್ತೊಮ್ಮೆ ಬಾಲ್ಯ ಅನುಭವಿಸಿದೆ. 🙂 ಮುಗ್ಧತೆ ಅಂದರೆ ಮುಗ್ಧತೆ! ಖುಷಿ ಆಯ್ತು ಅನಿತಾ. 🙂

  2. pramod shetty

    ಆದರೆ ಈಗ ನನ್ನ ಚಿಂತೆ ಹೆಚ್ಚಾಯಿತು. ಎಲ್ಲಾದರು ಆ ಸಮಯದಲ್ಲೇ ಸಾಸಿವೆ ಗಾತ್ರದ ಮಗು ಹುಟ್ಟಿ ನನಗೆ ಕಾಣದೆ ಹೋಗಿದ್ದರೆ..?? ‘ರೆ .. ಏನು? ಖಂಡಿತಾ ಹಾಗೆಯೇ ಆಗಿರುತ್ತದೆ’ ಎಂದಿತು ನನ್ನ ಮನಸ್ಸು. ಏಕೆಂದರೆ ಆವತ್ತು ಹೊಟ್ಟೆ ನೋವು ಅಷ್ಟು ಜೋರಾಗಿತ್ತು. ‘ಛೇ.. ಎಂತಾ ಅನ್ಯಾಯವಾಯಿತು. ಮೊದಲೇ ಈ ಸುದ್ಧಿ ಗೊತ್ತಿದ್ದಿದ್ದರೆ ಸ್ವಲ್ಪ ಜಾಗ್ರತೆಯಾದರೂ ಮಾಡಬಹುದಿತ್ತೇನೋ’ ಎನ್ನಿಸಿ ಬೇಸರವಾಯಿತು. ಆದರೆ ಇದನ್ನೆಲ್ಲಾ ಅವಳ ಮುಂದೆ ಬಯಲು ಮಾಡಲಿಲ್ಲ. ಮೌನವಾಗಿ ಮನೆಗೆ ಬಂದೆ. ಮನೆಗೆ ಬಂದು ಮ್ಯಾಥ್ಸ್ ಮಾಡಲು ಕುಳಿತರೂ ತಲೆಯೊಳಗೆಲ್ಲ ನನ್ನ ಸಾಸಿವೆ ಗಾತ್ರದ ಮಗುವೇ ತುಂಬಿತ್ತು,ಬಾಲ್ಯದ ಮುಗ್ದತೆಯಲ್ಲಿ ಮಗು ಮೇಲೆ ಇತ್ತ ಅಸೆ ..ಪುಟ್ಟ ಮನಸ್ಸಿನ ಕಡಲಲ್ಲಿ ಎಂತೆಲ್ಲ ಯೋಚನೆ , ತುಂಬಾ ಚೆನ್ನಾಗಿದೆ ,

  3. shama, nandibetta

    beautiful………. adbhutha mathu sahaja… thanks a lot

  4. sandhya

    ಹೆಣ್ಣು ಹುಟ್ಟಿದ ಕೂಡಲೇ ಅವಳ ಒಳಗೆ ಒಬ್ಬ ತಾಯಿ ಸಹ ಹುಟ್ಟುತ್ತಾಳ? ಹೌದು ಅನ್ನಿಸುತ್ತೆ ಅಲ್ಲವೇ?

  5. ಜಯರಾಮ ಚಾರಿ

    ಬಾಲ್ಯದ ಮುಗ್ದತೆ ತುಂಬಾ ಚೆನ್ನಾಗಿ ಬರೆದಿದ್ದೀರಿ …ಧನ್ಯವಾದಗಳು

  6. Ashoka

    ‘ವಠಾರದಲ್ಲಿ ಎಲ್ಲರೂ ಆ ಮಗುವಿನ ಅಂದ ಚೆಂದದ ವರ್ಣನೆ ಮಾಡುತ್ತಿದ್ದರೆ ನಾನು ಮಾತ್ರ ನನ್ನ ಹೊಟ್ಟೆ ನೋವಿನೊಂದಿಗೆ ಕಳೆದು ಕೊಂಡ ನನ್ನ ಸಾಸಿವೆ ಗಾತ್ರದ ಪುಟ್ಟ ಮಗುವಿನ ಬಗ್ಗೆ ಯೋಚಿಸಿ ಮರುಗುತಿದ್ದೆ.’

    Nicely written!

  7. Sharada Pyatigoudar

    ಬಾಲ್ಯದ ಮಗ್ಧತೆಯಲ್ಲಿ ಮೂಡುವ ಇಂತಹ ಕುತೂಹಲಕಾರಿ ಪ್ರಶ್ನೆಗಳು ಎಷ್ಟು ವಿಚಿತ್ರ ಅಲ್ಲವೇ? ಮಗುವಿಗೂ ಮಗುವಿನ ಬಗೆಗಿರುವ ಅಪಾರ ಪ್ರೀತಿಯ ಚಿತ್ರಣ ತುಂಬಾ ಸುಂದರವಾಗಿ ಹೆಣೆದಿದ್ದೀರಾ. ಬಾಲ್ಯವನ್ನು ಮರುಕಳಿಸುವಂತೆ ಮಾಡಿ ಇಂತಹ ವಿಭಿನ್ನ ,ಕುತೂಹಲಕಾರಿ ಪ್ರಶ್ನೆಗಳ ಅವಲೋಕನಕ್ಕೆ ಅನುಕೂಲವಾದ ಲೇಖನ. ತುಂಬಾ ಚೆನ್ನಾಗಿದೆ ಅನಿತಾ ಅವರೆ ,ಧನ್ಯವಾದಗಳು

  8. malathi S

    innocence is bliss!!!especially when we think of it later in life alwaa??
    good one
    🙂
    malathi S

  9. Tejaswini Hegde

    Liked the story very much. Really a very good story. Thanks for it.

  10. D.RAVIVARMA

    nimma mugdathe nijakku wonderful,nanatu story tumba enjoumadide,vaidehi avara nayimari nataka odi nimma mugda barahakkondu abhinandane d.ravi varma hospet

  11. lakshmikanth itnal

    beautiful narration. balyada mugdhateyannu yathavattagi citrisiddeeeri anitA ji, vandane.

  12. Jayashree Bhat

    Very nice narration, took me back to those blissful days of childhood.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading