ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವೆಂಬ ಪರಕೀಯನ ಜೊತೆ ಅಸಂಬದ್ಧ ಮಾತುಕತೆ

‘ಅವಧಿ’ಗಾಗಿ ಜೋಗಿ
ನಾನು ಇವತ್ತು ರಾತ್ರಿ ಸಾಯಬಹುದು. ಅಥವಾ ನಾಳೆ ಬೆಳಗ್ಗೆ. ಇವತ್ತು ರಾತ್ರಿ ನಿದ್ದೆಯಲ್ಲಿ ಸತ್ತರೂ ಅದು ಲೋಕಕ್ಕೆ ಗೊತ್ತಾಗುವುದು ಬೆಳಗ್ಗೆಯೇ. ಸತ್ತವನಿಗೆ ಬೆಳಗ್ಗೆ ಸತ್ತರೂ ಒಂದೇ, ರಾತ್ರಿ ಸತ್ತರೂ ಒಂದೇ. ನರಳಾಡಿ ಸಾಯದಿದ್ದರಾಯಿತು ಅಷ್ಟೇ. ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ.
ಸತ್ತು ಹೋದರಂತೂ ನೆಮ್ಮದಿ. ನಾಳೆ ಆಫೀಸಿಗೆ ಹೋಗಬೇಕಾಗಿಲ್ಲ. ಮತ್ತೆ ಅಕ್ಷರಮಾಲೆಯ ಒಂದೊಂದೇ ಅಕ್ಷರಗಳನ್ನು ಹೆಕ್ಕಿ ಅದನ್ನು ಆದಷ್ಟೂ ವಿನೂತನವಾಗಿ ಪೋಣಿಸುವುದಕ್ಕೆ ಹೆಣಗಾಡಬೇಕಿಲ್ಲ. ತರುಣ ಕವಿಯ ಕವಿತೆ ಓದಬೇಕಾಗಿಲ್ಲ. ಹಿರಿಯ ಕವಿಯ ಫೋನಿಗೆ ಕಿವಿಯಾಗಬೇಕಿಲ್ಲ. ಮತ್ತದೇ ಕೆಟ್ಟ ಸಿನಿಮಾ ನೋಡುತ್ತಾ, ಜೋತಾಡುವ ಸರ್ಕಾರಕ್ಕೆ ಒಂದಂಕಿ ಯಾರು ಜೋಡಿಸಿ ಪಾರು ಮಾಡುತ್ತಾರೆ ಎಂದು ಕೆಟ್ಟ ಕುತೂಹಲದಿಂದ ಕಾಯಬೇಕಾಗಿಲ್ಲ.
ಹಾಗಂದುಕೊಳ್ಳುವುದು ಕೇವಲ ಸುಳ್ಳು. ಸಾಯುವುದಿಲ್ಲ ಅನ್ನುವುದು ದೇಹಕ್ಕೂ ಮನಸ್ಸಿಗೂ ಗೊತ್ತು. ನಿಜಕ್ಕೂ ಸಾಯುವ ಕಾಲ ಬಂದಾಗಲೂ ಹೀಗೇ ಯೋಚಿಸೋದಕ್ಕೆ ಸಾಧ್ಯವಾ? ಎಂಥಾ ತತ್ವಜ್ಞಾನವಾಗಲೀ, ಬೌದ್ಧಿಕತೆಯಾಗಲೀ, ವಿಚಾರವಾದವಾಗಲೀ ಬದುಕುವ ಅದಮ್ಯ ಆಸೆಗಿಂತ ದೊಡ್ಡದಲ್ಲ. ಬದುಕು ಅನ್ನುವುದು ಯಾವತ್ತೂ ಕ್ರಿಯಾಪದ. ಇನ್ನೊಬ್ಬರ ಬದುಕು ಮಾತ್ರ ನಾಮಪದ.
ಸಾವಿನ ಅಂಚಿಗೆ ಹೋಗಿ ಬಂದವರು ಬದಲಾಗಿದ್ದಾರೆ ಅಂತ ಕೇಳಿದ್ದೆ. ಇನ್ನೇನು ಸಾಯುತ್ತಾರೆ ಅಂದುಕೊಂಡವರು ಮತ್ತೆ ಬದುಕಿ ಬಂದು, ಜೀವನದ ಕುರಿತ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಇನ್ನೇನೋ ಆಗಿದ್ದುಂಟು ಎಂದು ಓದಿದ್ದೆ. ಆದರೆ ಬದುಕನ್ನು ಬದಲಾಯಿಸುವ ಶಕ್ತಿ ಸಾವಿಗಿದೆ ಅನ್ನುವುದು ನನಗೆ ಖಾತ್ರಿಯಿಲ್ಲ. ಅದು ಕೇವಲ ಸ್ಮಶಾನ ವೈರಾಗ್ಯ ಅಷ್ಚೇ. ತೀರಾ ಎದೆ ನೋವು ಬಂದಾಗ, ಕೊಂಚ ಕೆಮ್ಮು ಜಾಸ್ತಿಯಾದಾಗ ಇನ್ನು ಸಿಗರೇಟು ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಬಹುದು. ಅದು ಪ್ರಾಣಭಯದ ಪ್ರಮಾಣ ಅಷ್ಟೇ. ಮತ್ತೆ ಆರೋಗ್ಯ ಮರುಕಳಿಸಿದ ತಕ್ಷಣ ಎಲ್ಲ ದುರ್ಜನರೂ ಬಂದು ಸೇರುತ್ತಾರೆ. ಮತ್ತೆ ಅದೇ ಬದುಕು, ಅದೇ ನಗು, ಅದೇ ಸಂಭ್ರಮ.
*****
ಆವತ್ತು ಹಾಗೆ ಮಲಗಿದ್ದೆ.
ದೇಹ ನನ್ನದು ಹೌದೋ ಅಲ್ಲವೋ ಅನುಮಾನವಿತ್ತು. ಯಾವತ್ತೂ ನನ್ನ ದೇಹ ಹೀಗೆ ವಿಚಿತ್ರವಾಗಿ ವರ್ತಿಸಿದ್ದೇ ಇಲ್ಲ. ಭಯಂಕರ ಕೈಕಾಲು ನೋವು ಎಂದು ಗೋಳಾಡುವವರನ್ನು ನೋಡಿದ್ದೆ. ಆ ನೋವು ಹೀಗಿರುತ್ತದೆ ಅನ್ನುವುದು ಗೊತ್ತಿರಲಿಲ್ಲ. ಎಲ್ಲಾ ನೋವುಗಳೂ ಅಷ್ಟೇ. ಅದರ ತೀವ್ರತೆಯ ಅರಿವಾಗುವುದು ಅದು ನಮ್ಮನ್ನು ಕಾಡಿದಾಗ ಮಾತ್ರ. ಬೇರೊಬ್ಬರ ನೋವು ನಮಗೆ ಸುದ್ದಿ ಮಾತ್ರ.
ಸಾಯುತ್ತಾ ಮಲಗಿದಾಗ ಏನೆಲ್ಲ ನೆನಪಾಗುತ್ತದೆ. ಉಪ್ಪಿನಂಗಡಿಯ ಗೆಳೆಯ ಆಶ್ರಫ್ ಸೂಟು ಹಾಕಿಕೊಂಡು ಅಬ್ಬರದಿಂದ ಓಡಾಡುವವರನ್ನು ನೋಡಿದಾಗೆಲ್ಲ ಹೇಳುತ್ತಿರುತ್ತಾನೆ: ಇವನು ಹೀಗೆ ಇಡೀ ಜಗತ್ತೇ ತನ್ನದು ಅಂತ ಓಡಾಡ್ತಾನಲ್ಲ. ಇವನ ಮೆದುಳಿನ ನರಮಂಡಲದ ಸೂಕ್ಷ್ಮಾತಿಸೂಕ್ಷ ನರವೊಂದು ಕೊಂಚ ಏರುಪೇರಾದರೆ, ಇದೇ ಮನುಷ್ಯ ಹಾಕಿಕೊಂಡ ಸೂಟು, ಕೋಟು ಕಿತ್ತೆಸೆದು ಬೆತ್ತಲೆಯಾಗಿ ಬೀದಿಯಲ್ಲಿ ಓಡಾಡೋದಿಲ್ವಾ. ಆದ್ರೂ ಈ ಜಂಬ ಯಾಕೆ ಮನುಷ್ಯನಿಗೆ ಅನ್ನೋದು ಅವನ ಪ್ರಶ್ನೆ.
ಜೀವವೂ ಅಷ್ಚೇ. ಯಾವಾಗ ದೇಹವನ್ನು ಬಿಟ್ಟು ಅಗಲುತ್ತದೋ ಗೊತ್ತಿಲ್ಲ. ಒಂದು ಕತೆಯಲ್ಲಿ ಒಬ್ಬಾತ ಪೇಟೆ ಬೀದಿಯಲ್ಲಿ ಅಡ್ಡಾಡುತ್ತಾ ಸಾವನ್ನು ನೋಡುತ್ತಾನೆ. ಸಾವಿನಿಂದ ಪಾರಾಗಬೇಕೆಂದು ತಕ್ಷಣವೇ ನಾಗಾಲೋಟದಿಂದ ಸಾಗುವ ಕುದುರೆಯನ್ನೇರಿ ನೂರಾರು ಮೈಲಿ ಸಾಗುತ್ತಾನೆ. ಸಾಕಷ್ಟು ದೂರ ಬಂದೆ ಎಂದು ನಿಟ್ಟುಸಿರುಡುತ್ತಿದ್ದಂತೆ ಅಲ್ಲಿ ಸಾವು ಹಾಜರಾಗುತ್ತದೆ.
ನನ್ನ ಯಜಮಾನನ ಅಪ್ಪಣೆಯ ಪ್ರಕಾರ ನಾನು ನಿನ್ನನ್ನು ಇಲ್ಲಿ ಸಂಧಿಸಬೇಕಾಗಿತ್ತು. ಆದರೆ ನೀನು ಬೆಳಗ್ಗೆ ಇಲ್ಲಿಂದ ತುಂಬಾ ದೂರದಲ್ಲಿದ್ದೆಯಲ್ಲ, ಹೇಗಿದು ಅಂತ ಯೋಚಿಸುತ್ತಿದ್ದೆ’ ಅನ್ನುತ್ತದೆ ಸಾವು. ಸಾವನ್ನು ಹುಡುಕಿಕೊಂಡು ಹೋಗುವುದು ಅಂದರೆ ಅದೇ.
ನಮ್ಮಲ್ಲಿ ಯಮವೇಗ ಎನ್ನುವ ಮಾತಿದೆ. ಯಮವೇಗ ಅನ್ನುವುದು ಯಮನ ವೇಗ ಇರಲಾರದು. ಅವನದೋ ಕೋಣ ವಾಹನ. ಕಂಬಳದಲ್ಲಿ ಕೋಣ ವೇಗವಾಗಿ ಓಡುತ್ತದೆ ನಿಜ. ಆದರೆ ಅದು ಅಂಥ ವೇಗವೇನೂ ಅಲ್ಲ. ಹೀಗಾಗಿ ಯಮವೇಗ ಅನ್ನುವುದು ಸಾವು ಜೀವವನ್ನು ಸೆಳೆದೊಯ್ಯುವ ವೇಗ ಇರಬಹುದೇ. ಅಥವಾ ವೇಗವಾಗಿ ಹೋಗುವವನು ಬೇಗ ಯಮಲೋಕ ಸೇರುವುದರಿಂದ ಆ ವೇಗವನ್ನು ಯಮವೇಗ ಅನ್ನುತ್ತಾರಾ? ಹಾಗೇ ಪ್ರಾಣವನ್ನು ಯಮ ಉರುಳೆಸೆದು ಕರೆದೊಯ್ಯುತ್ತಾನೆ ಅನ್ನುವುದೊಂದು ಪ್ರತೀತಿ. ಪ್ರಾಣಪಕ್ಷಿ ಹಾರಿಹೋಯಿತು ಅನ್ನೋದು ಮತ್ತೊಂದು ಉಕ್ತಿ. ಪ್ರಾಣಪಕ್ಷಿ ಯಾಕೆ ಹಾರಿಹೋಗುತ್ತದೆ. ಪ್ರಾಣ ಯಾಕೆ ಪಕ್ಷಿ? ಮತ್ಯಾರಿಗೋ ಪ್ರಾಣವೆಂಬುದು ಜ್ಯೋತಿ. ಅದು ಆ ಮಹಾಜ್ಯೋತಿಯನ್ನು ಸೇರುತ್ತದಂತೆ.
ಬದುಕಿರುವಾಗ, ನೆಮ್ಮದಿಯಾಗಿ ಬದುಕಿರುವಾಗ ಸಾವಿನ ಬಗ್ಗೆ ಮಾತಾಡುವುದಕ್ಕೆ ಸೊಗಸಾಗಿರುತ್ತದೆ. ಇತ್ತೀಚೆಗೆ ಶಿರಾಡಿ ಘಾಟಿಯ ಬಳಿ ಮರಕ್ಕೆ ಜೀಪು ಡಿಕ್ಕಿ ಹೊಡೆದು ಏಳೋ ಎಂಟೋ ಮಂದಿ ತೀರಿಕೊಂಡರಂತೆ. ಆ ಘಟನೆಗೆ ಪತ್ರಿಕೆಗಳು ಎಷ್ಟು ನೀರಸವಾಗಿ ಶೀರ್ಷಿಕೆ ಕೊಡುತ್ತವೆ ಅನ್ನುವುದನ್ನು ಗೆಳೆಯನೊಬ್ಬ ತಮಾಷೆಯಾಗಿ ವಿವರಿಸುತ್ತಿದ್ದ: ನಿಂತಿರುವ ಮರಕ್ಕೆ ಚಲಿಸುತ್ತಿದ್ದ ಜೀಪು ಡಿಕ್ಕಿ. ಇದನ್ನೇ ಬುದ್ಧಿಜೀವಿಗಳ ಮುಂದೆ ಹೇಳಿದರೆ ಜೀವವಿರೋಧಿ ಧೋರಣೆ ಅನ್ನುತ್ತಾರೆ. ಸಾವಿನ ಬಗ್ಗೆ ತಮಾಷೆ ನಿಷೇಧಿಸಲಾಗಿದೆ. ಸಾಯುವುದು ಸತ್ತವನ ಪಾಲಿಗೆ ಏನೋ ಎಂತೋ ಗೊತ್ತಿಲ್ಲ, ಬದುಕಿರುವವರ ಪಾಲಿಗೆ ಮಾತ್ರ ಅಂಥ ಆಹ್ಲಾದಕರ ಅನುಭವ ಅಲ್ಲ.
ಸತ್ತ ಮೇಲೆ ಏನಾಗುತ್ತೇವೆ ಅನ್ನುವ ಪ್ರಶ್ನೆಗೆ ಬದುಕಿರುವವರು ಉತ್ತರಿಸಲಾರರು, ಉತ್ತರಿಸುವುದಕ್ಕೆ ಸತ್ತವರು ಸಿಗುವುದಿಲ್ಲ. ಆದರೆ ದೆವ್ವಗಳನ್ನು ನೋಡಿದವರು, ದೆವ್ವಗಳ ಜೊತೆ ಮಾತಾಡಿದವರು ಯಾರೂ ಸತ್ತ ನಂತರ ಏನಾಗುತ್ತಾರೆ ಅಂತ ಕೇಳಿದ್ದು ವರದಿಯಾಗಿಲ್ಲ. ಸತ್ತ ನಂತರ ದೆವ್ವವಾಗುತ್ತಾರೆ ಅಂತ ದೆವ್ವಗಳು ಹೇಳಬಹುದು. ಆದರೆ ಎಲ್ಲರೂ ದೆವ್ವಗಳಾಗುವುದಿಲ್ಲ. ಪಾಪಿಗಳು ಮತ್ತೆ ಹುಟ್ಟುತ್ತಾರೆ ಅನ್ನುತ್ತದೆ ಪುರಾಣ. ಮತ್ತೆ ಹುಟ್ಟುವುದೇ ಪಾಪವಂತೆ. ಹುಟ್ಟದೇ ಇರುವುದು ಪುಣ್ಯ. ಪುಣ್ಯವಂತರು ದಿವ್ಯ ಸಾಯುಜ್ಯವನ್ನು ಸೇರುವತ್ತಾರಂತೆ. ಅವರು ಹುಟ್ಟುಸಾವುಗಳ ಚಕ್ರದಿಂದ ಬಿಡುಗಡೆ ಪಡೆಯುತ್ತಾರಂತೆ. ಹಾಗಿದ್ದರೆ ಹುಟ್ಟು ಇಲ್ಲದ ಸಾವೂ ಇಲ್ಲದ ಆ ಸ್ಥಿತಿ ಯಾವುದು. ಹುಟ್ಟದ ಹೊರತು ಇರುವುದು ಹೇಗೆ? ಇರದ ಮೇಲೆ ಅದು ಸ್ಥಿತಿ ಹೇಗಾಗುತ್ತದೆ. ಸ್ಥಿತಿಯೇ ಅಂದ ಮೇಲೆ ಹುಟ್ಟು ಇದೆ ಅಂತಾಯಿತಲ್ಲ. ಅಂದರೆ ಅದು ಸಾವಿಲ್ಲದ ಸ್ಥಿತಿಯೇ?
ಪ್ರಶ್ನೆಗಳು ಹೆಚ್ಚುತ್ತಾ ಹೋಗುತ್ತವೆ. ಉತ್ತರ ಸಿಗುವುದಿಲ್ಲ. ನಾಳೆಯ ಹಾಗೆ ಸಾವು ಕೂಡ ಅನೂಹ್ಯ. ಸಾವಿನ ಹಾಗೆ ನಾಳೆ ಕೂಡ ನಿಗೂಢ. ನಿನ್ನೆಗೆ ಸತ್ತು, ನಾಳೆಗೆ ಹುಟ್ಟದ ನಮ್ಮ ಇಂದಿನ ಬದುಕಿನಲ್ಲಿ ಯಾವುದು ಸತ್ಯ, ಯಾವುದು ಸುಳ್ಳು. ನಾಳೆಗಾಗಿ ಕಾಯುತ್ತಿರುವುದು ಕೂಡ ಬರೀ ನಿರೀಕ್ಷೆಯೇ. ಅದೂ ಪೂರ್ವಯೋಜಿತವೇ. ಪ್ರತಿ ಕ್ಷಣವೂ ನಮ್ಮನ್ನು ಗೋರಿಯತ್ತ ಕರೆದೊಯ್ಯುತ್ತಿರುತ್ತದೆ ಅನ್ನುವ ಮಾತು ನೆನಪಾಗುತ್ತದೆ.
*****
ಅಮರತ್ವ ಮನುಷ್ಯನ ಮೂಲಭೂತ ಆಸೆ. ಆದರೆ ಅಂಥ ಅಮರತ್ವ ಎಂಥ ಸ್ಥಿತಿಯಲ್ಲಿ ನಮ್ಮನ್ನು ಸಮೀಪಿಸುತ್ತದೆ ಅನ್ನುವುದೂ ಮುಖ್ಯ. ಇಚ್ಛಾಮರಣಿ ಅನ್ನುವ ವರ ಭೀಷ್ಮನಿಗೆ ಶಾಪವೂ ಆಗಿತ್ತು. ಆತ ತನ್ನಿಚ್ಚೆ ಬಂದಾಗ ಸಾಯಬಹುದಾಗಿತ್ತು. ಆ ಹಿರಿಯ ಜೀವ ಸಾಯಬೇಕು ಎಂದು ಅನ್ನಿಸುವ ಹಾಗೆ ಅವನ ಮೊಮ್ಮಕ್ಕಳು ವರ್ತಿಸಿದರೇ? ಹಾಗೆ ಅವರು ವರ್ತಿಸುತ್ತಾರೆ ಅನ್ನುವುದು ವರ ಕೊಟ್ಟಾಕೆಗೆ ಗೊತ್ತಿತ್ತೇ? ಅಮರನಾಗು ಎಂದು ಹರಸಿದ್ದರೆ ಅದು ಮತ್ತಷ್ಟು ದೊಡ್ಡ ಶಾಪ ಆಗುತ್ತಿತ್ತೇ?
ಸಾವಿಲ್ಲದ ಅಶ್ವತ್ಥಾಮನನ್ನು ನೆನಪಿಸಿಕೊಳ್ಳಿ. ಅವನು ಚಿರಂಜೀವಿ ನಿಜ. ಆದರೆ ಚಿರಂಜೀವತ್ವದಿಂದ ಏನು ತಾನೇ ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಾಗಿದ್ದಾಗ ಹೇಗಿರುತ್ತೇವೋ ಬೆಳೆಯುತ್ತಾ ಹೋದಂತೆ ಹಾಗಿರುವುದಿಲ್ಲ. ಕ್ರಮೇಣ ನಮ್ಮ ಸುತ್ತಲಿನವರ ಪಾಲಿಗೆ , ಮಕ್ಕಳ ಪಾಲಿಗೆ, ಜಗತ್ತಿನ ಪಾಲಿಗೆ ನಾವು ಅಪ್ರಸ್ತುತರಾಗುತ್ತಾ ಹೋಗುತ್ತೇವೆ. ಹೀಗೆ ಅಪ್ರಸ್ತುತರಾಗುತ್ತಾ ಹೋಗುವುದೇ ಸಾವಲ್ಲವೇ. ಇನ್ನೂರು ವರುಷ ಬದುಕುತ್ತೀರಿ ಅಂತಿಟ್ಟುಕೊಳ್ಳಿ. ಆಗ ನಿಮ್ಮ ಓರಗೆಯ ಮಂದಿ ಹೊಸಬರಾಗಿರುತ್ತಾರೆ. ಅವರ ಜಗತ್ತೇ ಬೇರೆಯಾಗಿರುತ್ತದೆ. ಅವರ ಸಮಕಾಲೀನರು, ಮಿತ್ರರು ಯಾರ ಜೊತೆಗೂ ನಿಮಗೆ ಸಂವಹನ ಸಾಧ್ಯವಾಗುವುದಿಲ್ಲ. ಆ ಹೊತ್ತಲ್ಲಿ ಬದುಕಿದ್ದರೂ ಮಹಾತ್ಮಗಾಂಧಿಯ ಮೂರ್ತಿಯ ಹಾಗೆ ಜೀವಿಸಿರಬೇಕಾಗುತ್ತದೆ. ಎಲ್ಲರೊಂದಿಗಿದ್ದೂ ಎಲ್ಲರಂತಿರದೆ.
ಹೀಗಾಗಿ ಅಮರರಾಗಬೇಕು, ದೀರ್ಘಾಯುಷಿ ಆಗಬೇಕು ಅನ್ನುವ ಆಸೆ ಕೇವಲ ಭ್ರಮೆ ಮಾತ್ರ. ಅದರಿಂದ ಬಹಳ ಅನುಕೂಲಗಳೇನಿಲ್ಲ. ಕ್ರಮೇಣ ನಮ್ಮ ಆಯಸ್ಸೇ ನಮಗೆ ಭಾರವಾಗಿ, ನಮ್ಮ ಉಸಿರೇ ನಮಗೆ ಹೊರೆಯಾಗಿ ಯಾಕಾದರೂ ಬದುಕಿದ್ದೇವೋ ಅನ್ನಿಸತೊಡಗುತ್ತದೆ. ಬೇರೆಯವರ ಬಗ್ಗೆ ಹೀಗನ್ನಿಸುವುದಕ್ಕೂ ನಮ್ಮ ಬಗ್ಗೆಯೇ ಹೀಗನ್ನಿಸುವುದಕ್ಕೂ ಅಂಥ ವ್ಯತ್ಯಾಸವೇನಿಲ್ಲ.
ಬಾಲ್ಯದಲ್ಲಿ ತಮಾಷೆಯಾಗಿ ಆಮೇಲೆ ಭಯವಾಗಿ ಅದಾದ ಮೇಲೆ ನಿಗೂಢವಾಗಿ ಕಾಣುವ ಸಾವು, ಕ್ರಮೇಣ ಗೆಳೆಯನಂತೆ ಭಾಸವಾಗುತ್ತದೆ. ಎಲ್ಲೋ ಸಂಧಿಸಿದ ಹಳೆಯ ಮಿತ್ರನಂತೆ ತೋರುತ್ತದೆ. ತುಂಬ ದಿನದಿಂದ ಕರೀತಿದ್ದಾನೆ, ಒಂದ್ಸಾರಿ ಹೋಗಬೇಕು’ ಎಂದು ದೂರದಲ್ಲಿ ನೆಲೆಸಿರುವ ಮಿತ್ರನ ಕುರಿತು ಹೇಳುವಂತೆ ಸಾವಿನ ಕುರಿತೂ ಯೋಚಿಸಬಲ್ಲವರಾಗುತ್ತೇವೆ.
ಆದರೆ, ಎಪ್ಪತ್ತು ಸಮೀಪಿಸಿದ ನಂತರ ಮತ್ತೆ ಸಾವಿನ ಭಯ ಕಾಡುತ್ತದಾ? ನಿರಾಳವಾಗಿ ಬದುಕಿದ್ದವರು, ತೀರಾ ಇಳಿವಯಸ್ಸಿನಲ್ಲಿ ವಿಚಿತ್ರವಾಗಿ ವರ್ತಿಸುವುದನ್ನು ನೋಡಿದ್ದೇನೆ. ದಿನಾ ಡಾಕ್ಟರ ಹತ್ರ ಹೋಗೋಣ ಅಂತ ಗೋಳು ಹುಯ್ಕೋತಾರೆ ಅಂತ ಗೆಳೆಯರು ಅವರ ಅಮ್ಮ ಅಪ್ಪಂದಿರ ಬಗ್ಗೆ ಬೇಸರದಿಂದ ಹೇಳಿಕೊಳ್ಳುವುದುಂಟು.
ದುರಭ್ಯಾಸಗಳನ್ನೆಲ್ಲ ತ್ಯಜಿಸಿದ ಮಿತ್ರನಿಗೆ ವೈದ್ಯರೊಬ್ಬರು ಸಲಹೆ ಕೊಟ್ಟಿದ್ದರು: ಇವೆಲ್ಲ ಬಿಟ್ಟುಬಿಟ್ಟರೆ ನೀನು ಹತ್ತು ವರುಷ ಜಾಸ್ತಿ ಬದುಕ್ತೀಯಾ. ಆ ಕೊನೆಯ ಹತ್ತು ವರುಷಗಳು ನಿನ್ನದಲ್ಲ. ಯಾಕೆಂದರೆ ನೀನು ಬೇರೆಯವರ ಅಧೀನದಲ್ಲಿರುತ್ತೀಯಾ. ಅದರ ಬದಲು ಎಲ್ಲಾ ದುರಭ್ಯಾಸಗಳನ್ನು ಆನಂದಿಸುತ್ತಾ ಹತ್ತು ವರುಷ ಮೊದಲೇ ಸತ್ತು ಹೋಗು. ಕನಿಷ್ಟ ನೀನಾದರೂ ಸುಖವಾಗಿರುತ್ತೀಯಾ.
ಸತ್ಯವಾದ ಮಾತು ಎಂದು ಹೇಳುವುದಕ್ಕೂ ಮನಸ್ಸಾಗುತ್ತಿಲ್ಲ. ಇಲ್ಲ ಎಂದು ನಿರಾಕರಿಸುವುದಕ್ಕೂ ಮನಸ್ಸು ಒಪ್ಪುತ್ತಿಲ್ಲ.

‍ಲೇಖಕರು avadhi

6 June, 2008

3 Comments

  1. mayura

    Once again a brilliant article by Jogi. Can you please increase the frequency of your articles Mr.Jogi?

  2. dundiraj

    idu asambaddhavalla susambaddha.
    lekhana istavayithu

  3. Sunil Kulkarni

    namaste
    ಸಾಯುವುದು ಸತ್ತವನ ಪಾಲಿಗೆ ಏನೋ ಎಂತೋ ಗೊತ್ತಿಲ್ಲ, ಬದುಕಿರುವವರ ಪಾಲಿಗೆ ಮಾತ್ರ ಅಂಥ ಆಹ್ಲಾದಕರ ಅನುಭವ ಅಲ್ಲ.
    ಸತ್ತ ಮೇಲೆ ಏನಾಗುತ್ತೇವೆ ಅನ್ನುವ ಪ್ರಶ್ನೆಗೆ ಬದುಕಿರುವವರು ಉತ್ತರಿಸಲಾರರು, ಉತ್ತರಿಸುವುದಕ್ಕೆ ಸತ್ತವರು ಸಿಗುವುದಿಲ್ಲ.
    Lekhanadalli nanage ishtavada salugaLu
    ninne taane nanna hattirada snehitarobbaru hrudayaghatadinda teerihodaru. aaga naanu mitranalli heLta nijvaglu yara saavu yaavaag barutto gottilla indu iddavanu naaLe iruttano ilvo BE READY agirbeku kaNo yendu heLidde
    ivattu snehitarobbara blog nodtirbekadre AVADHI samparkakke bande
    nijavagu E lekhana Odi savige yaake hedarbeku annisuttide.
    savina bagge hechchu hechchu charche madidre innu madta iroNa annisutte.
    adre lekhanadalli heLida haage saavu baruvaagina anubhava hegirutto EnO?

Trackbacks/Pingbacks

  1. ಕಾಗದ ಬಂದಿದೆ… « ಅವಧಿ - [...] on June 8, 2008. ಜೋಗಿ ಅವರ ಸಾವೆಂಬ ಪರಕೀಯನ ಜೊತೆ ಅಸಂಬದ್ಧ ಮಾತುಕತೆಗೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading