ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವೆಂಬ ಕಣ್ಣ ಮುಂದಿನ ಸಖ

ಮಹಾಂತೇಶ ನವಲಕಲ್

ಕೆಲ ವರ್ಷಗಳ ಹಿಂದೆ ಪೂರ್ಣಿಮಾ ಎನ್ನುವ ಹುಡುಗಿ ತಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ವಾರ ಪತ್ರಿಕೆಯಲ್ಲಿ ಆಕೆ ಬರೆದ ಕವನಗಳು ನನಗೆ ಬಹು ಕಾಡಿದ್ದವು. ಆಕೆಗೆ ಇಲ್ಲಿ ಸಾವು ಎನ್ನುವುದು ಭಯದ ಬಂಡಿಯಲ್ಲಿ ಬಂದುದ್ದಲ್ಲ. ಅದು ಆ ಕಥೆಯನು ಪ್ರೀತಿಯಿಂದ ಸಂಧಿಸಲು ಬಂದಿದ್ದು. ಆಕೆ ಆ ಕಾವ್ಯದಲ್ಲಿ ಸಾವನ್ನು ಕಾಣುವ ಆಶಯದೊಂದಿಗೆ ಸಂಭ್ರಮಿಸುತ್ತಾಳೆ. ನಾನೆಂದೂ ನೋಡದ ನಾನೆಂದೂ ಸಂಧಿಸದ ಬಂಧುವೊಬ್ಬ ನನ್ನ ಕಾಣಲು ಬರುತ್ತಾನೆ ನಾನು ಆತನೊಂದಿಗೆ ಶಾಶ್ವತವಾಗಿ ಇರುತ್ತೇನೆ. ಆ ದಿನ ನನಗೆ ಒಂದು ಪರಿಪೂರ್ಣವಾದ ಹಾಗೂ ಅಮರತ್ವದ ದಿನ ಎನ್ನುತ್ತಾಳೆ.

ಇದು ಈ ಕವನ ನಾನು ಏಕೆ ಇಲ್ಲಿ ಉಲ್ಲೇಖಿಸಿದನೆಂದರೆ ಕೋವಿಡ್ ಎಂದರೆ ಸಾವಿನ ಮನೆಗೆ ಒಯ್ಯುವ ರೋಗ ಎನ್ನುವಾಗಲೇ ಪ್ರತಿಶತಃ ೩೦ ಜನ ಕೋವಿಡ್ ಬಂದಿದೆ ಎನ್ನುತ್ತಲೇ ಪ್ರಾಣತ್ಯಾಗ ಮಾಡುತ್ತಾರೆ. ನನಗೆ ಹುಟ್ಟು ಇದೆ ನನಗೆ ಯೌವ್ವನವಿದೆ, ನನಗೆ ಮುಪ್ಪಿದೆ, ನನಗೆ ಸಾವಿದೆ, ಎನ್ನುವ ಸತ್ಯ ಮರೆಮಾಚಿ ನಾವು ಅಮರರಾಗಿದ್ದೇವೆ ಎಂದು ತಿಳಿದು ಸಾವನ್ನು ಎದುರಿಸಲು ಅಸಮರ್ಥರಾಗುತ್ತಾರೆ.

ಇದು ಒಂದು ಭಾಗವಾದರೆ ಇನ್ನೊಂದು ಕೋವಿಡ್ ನನಗೆ ಬರುವುದಿಲ್ಲ ಎನ್ನುವ ಪೂರ್ವಾಗ್ರಹ ಹಾಗೂ ಕೋವಿಡ್ ಎನ್ನುವುದು ಒಂದು ರೋಗವೇ ಅಲ್ಲ ಅದೊಂದು ಅಂತರಾಷ್ಟ್ರೀಯ ಸಂಚು ಎನ್ನುವ ಅಪಪ್ರಚಾರವೂ ಸಹ ಅನೇಕರದು. ಇದರ ಬಗ್ಗೆ ಉದಾಸೀನ ಮೂಡುವಂತೆ ಮಾಡುತ್ತದೆ ಹಾಗೂ ಬಲಿಯಾಗುವಂತೆಯೂ ಮಾಡುತ್ತದೆ. ಅದಕ್ಕೆ ಉದಾಹರಿಸಬೇಕೆಂದರೆ ಇತ್ತೀಚೆಗೆ ಅತ್ಯಂತ ಆರೋಗ್ಯವಂತ ಬಲಿಷ್ಠ ಗೆಳೆಯನೊಬ್ಬನನ್ನು ಬಲಿ ತೆಗೆದುಕೊಂಡಿತು. ಆತ ಪ್ರಗತಿಪರ ಚಳುವಳಿಯ ಮುಂಚೂಣಿಯಲ್ಲಿದ್ದ ಇದೊಂದು ದುರಂತ.

ಏಪ್ರಿಲ್ ೧೦ ೨೦೨೧ ರಂದು ಆಫೀಸು ಕೆಲಸದ ನಂತರ ಮನೆಗೆ ಬಂದ ನಂತರ ಸಣ್ಣಗೆ ಚಳಿ ನೀರು ಮುಟ್ಟಿದರೆ ಭಯಂಕರ ಚಳಿ ಒಮ್ಮಿಂದೊಮ್ಮೆಲೇ ಬೆಡ್‌ರೂಮಿನಲ್ಲಿ ಮಲಗಿದ್ದೆ. ಮೆಲ್ಲಗೆ ಜ್ವರ ಏರತೊಡಗಿದವು. ನನ್ನ ಶ್ರೀಮತಿ ಶೋಭಾ, ಮಕ್ಕಳಾದ ಸೋಮು, ಸುಮಂತ ನನ್ನನ್ನು ನಮ್ಮ ವೈದ್ಯರಾದ ಡಾ.ರಾಜೇಶ ಎದಗೀರ್ ಹತ್ತಿರ ಕರೆದುಕೊಂಡು ಹೋದಾಗ ಅವರು ಪ್ರಾಥಮಿಕವಾಗಿ ಪರೀಕ್ಷಿಸಿ, Oxygen ಲೆವೆಲ್ ಚೆನ್ನಾಗಿದೆ, ನೋಡೋಣ. ಮೂರುದಿನ ಮಾತ್ರೆ ಕೊಡುತ್ತೇನೆ ಎಂದು ಮಾತ್ರೆ ಕೊಟ್ಟರು.

ಮೂರು ದಿನ ಜ್ವರ ಕಡಿಮೆಯಾಗಲಿಲ್ಲ. ಹಾಗೇ ಕೆಮ್ಮು ಕಫ ವಿಪರೀತ ನಿಶ್ಯಕ್ತಿ. ಮತ್ತೆ ಡಾಕ್ಟರ್ ಹತ್ತಿರ ಹೋದಾಗ ಅವರು ಆಸ್ಪತ್ರೆಗೆ ಸೇರಿಸಲು ಶಿಫಾರಸ್ಸು ಮಾಡಿದರು. ಅಷ್ಟರಲ್ಲಿ ನನ್ನ ಶ್ವಾಸಕೋಶ ಧ್ವಂಸಗೊಂಡಿತ್ತು. ವಿಪರೀತ ಕೆಮ್ಮು, ವಿಪರೀತ ನಿಶ್ಯಕ್ತಿ, ವಿಪರೀತ ಜ್ವರ. ಆಸ್ಪತ್ರೆಯ ಆ ಸ್ಪೆಷನ್ ಇಂಡಿವೀಜಿಯಲ್ ರೂಮಿನಲಿ ಸಾವು ಕಣ್ಣ ಮುಂದೆ ಬಂದಂತೆ, ಬಾ ಎಂದು ಕರೆದಂತೆ ಆಗುತ್ತಿತ್ತು. ನಾನು ಅಲ್ಲಿ ಒಬ್ಬನೇ ಇದ್ದುದರಿಂದ ಏನೇನೋ ಯೋಚನೆಗಳು. ಮಕ್ಕಳ ಬಗ್ಗೆ, ಹೆಂಡತಿಯ ಬಗ್ಗೆ ಎಲ್ಲಾ ಯೋಚನೆಗಳು ಬರುತ್ತಿದ್ದವು. ಆದರೆ ಸಾವು ನನಗೆ ಭಯ ಕೊಡಲಿಲ್ಲ.

ಶರಣರು ಹೇಳಿದ ಮರಣವೇ ಮಹಾನವಮಿ ಎನ್ನುವ ಉಕ್ತಿ ಹಾಗೂ ಪೂರ್ಣಿಮಾ ಸಾವನ್ನು ಎದುರಿಸಿದ ರೀತಿ ನನಗೆ ಪಾಠವಾಗಿದ್ದವು. ದಿನದಿಂದ ದಿನಕ್ಕೆ ನನ್ನ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸುತ್ತಿತ್ತು. ಡಾ. ಕುಸೈರ್ ಹಾಗೂ ಡಾ. ವೆಂಕಟೇಶ ದೇಸಾಯಿ ಬಹುಪ್ರಯತ್ನ ಪಟ್ಟು ನನ್ನ ಮೇಲೆ ಅನೇಕ ಪ್ರಯೋಗಗಳನ್ನು ಮಾಡಿದಾಗ ನಾನು ಕೊಂಚ ಚೇತರಿಸಿಕೊಳ್ಳುತ್ತಿದ್ದೆ. ಇದರ ಮಧ್ಯೆ ಸುತ್ತಮುತ್ತಲಿನ ವಾರ್ಡಿನಲಿ ಬರುವ ಚೀತ್ಕಾರಗಳು ನನಗೆ ಬಹುವಾಗಿ ರಾತ್ರಿಯ ನಿದ್ದೆಯನ್ನು ಕಸಿಯುತ್ತಿದ್ದವು.

ಒಂದು ಮುಂಜಾನೆ, ಡಾಕ್ಟರ್ ಬಂದು ಪರೀಕ್ಷಿಸಿ ನಿಮಗೆ ಆಮ್ಲಜನಕ ಅವಶ್ಯಕತೆ ಇಲ್ಲವೆಂದು ಹೇಳಿದಾಗ ನಾನು ಭಯಭೀತನಾದೆ. ಯಾಕೆಂದರೆ ಉಸಿರಾಟದ ತೊಂದರೆ ನನಗೆ ಆಗ ಇನ್ನೂ ಇತ್ತು. ಆಮ್ಲಜನಕ ತೆಗೆದ ಎರಡು ತಾಸಿನವರೆಗೆ ಸ್ವಲ್ಪ ತೊಂದರೆ ಆಯಿತಾದರೂ ಮತ್ತೆ ನಾನು ಆಮ್ಲಜನಕವಿಲ್ಲದೆ ಉಸಿರಾಡುವುದು ಕಲಿತೆ. ಸ್ವಲ್ಪ ಸ್ವಲ್ಪ ನಡೆಯುವುದು ಅಭ್ಯಾಸವಾಯಿತು. ಜೀವ ತಿರುಗುತ್ತಿದೆ ಅಪಾಯದಿಂದ ಪಾರಾದೆ ಅನ್ನಿಸುತ್ತಿತ್ತು. ಕೆಲಸದ ಅರಿವೇ ಇಲ್ಲದೆ ಬೆಡ್‌ನಲ್ಲಿ ಬಿದ್ದುಕೊಂಡಿದ್ದ ನನಗೆ ಏನೋ ಹೊಸ ಚೈತನ್ಯ ಬಂದಂತೆ ಆಯಿತು. ನನ್ನ ಆತ್ಮವಿಶ್ವಾಸ ಸಂಪೂರ್ಣ ನನ್ನನ್ನು ಸಂತೈಸುತ್ತಿತ್ತು.

ನಾನು ಬೆಡ್‌ನಲ್ಲಿ ಅರಿವೆ ಇಲ್ಲದೆ ಯಾವಾಗಲೋ ಎಚ್ಚರವಾದಾಗ ನನಗೆ ಕಾಡಿದ್ದು ನನಗೆ ಅರ್ಧಕ್ಕೆ ನಿಲ್ಲಿಸಿದ ಕೆಲಸಗಳು ಅದರಲಿ, ಕರಿಕಾಳ ಚೋಳ ನಾಟಕ ಫೈನಲ್ ಪ್ರೂಫ್ ತಿದ್ದಿದ್ದಿಲ್ಲ. ಅದನ್ನು ಮಾಡಬೇಕಾಗಿತ್ತು ಅನ್ನಿಸುತ್ತಿತ್ತು. ಆ ಕೆಲಸ ಆಗದಿದ್ದರೆ ಅನ್ನಿಸುತ್ತಿತ್ತು. ಗೆಳೆಯ ಉಮೇಶ್ ಪಾಟೀಲ್ ಆರಂಭ ಮಾಡಬೇಕಾಗಿದ್ದ ಬಸವ ಅಲ್ಲಮ ನಾಟಕ ಸಾಕಾರವಾಗಬೇಕಾಗಿದ್ದುದು ಆಗಲಿಲ್ಲ ಎನ್ನುವುದು ಕೊರಗು ೮೦೦೦ ರೈತರ ಜೊತೆ ಕೆಲಸ ಮಾಡುತ್ತಿದ್ದ ನನಗೆ ಅವರಿಗೇನು ಮಾಡಲಾಗಲಿಲ್ಲ ಎನ್ನುವ ಕೊರಗು ಕಾಡುತ್ತಿತ್ತು.

ನನಗೆ ಸಾವಿನ ಭಯ ಸುಳಿಯಲೇ ಇಲ್ಲ. ನನ್ನನ್ನು ಶುಶ್ರೂಷೆ ಮಾಡುತ್ತಿದ್ದ ವೈದ್ಯರಿಗೆ ನಾನು ಬದುಕುವ ವಿಶ್ವಾಸದ ಬಗ್ಗೆ ಅಂತಹ ನಂಬಿಕೆಯೇನೂ ಇರಲಿಲ್ಲ. ಆದರೆ ಅವಿರತ ಶ್ರಮ ಅನುಪಾಲನೆ, ಪ್ರಯೋಗಗಳು ನಡೆದೇ ಇದ್ದವು. ನಾನು ಮೆಲ್ಲನೆ ಚೇತರಿಸಿಕೊಳ್ಳಹತ್ತಿದ್ದೆ. ಸ್ವಲ್ಪ ಸ್ವಲ್ಪ ನಡೆದಾಗ ಸ್ವಲ್ಪ ಊಟ ಮತ್ತು ಈಗಿನ ಪ್ರಪಂಚಕ್ಕೆ ಬಂದೆ.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಾಗ ನಮ್ಮ ನೆರೆಹೊರೆಯವರು ಮಾತಾಡಿದರೆ ಮೈಮೇಲೆ ಬರುವುದೆಮಗೆ ಎಂಬಂತೆ ದಬಕ್ಕನೆ ಕದ ಹಾಕಿಕೊಂಡರು ನಮ್ಮ ಮನೆ ಎದುರಿಗೆ ಇರುವ ಕುಟುಂಬವಂತೂ ಮನೆಯ ಒಳಗೆ ಅಂತರ್ಧಾನರಾದರು. ಒಂದು ತಿಂಗಳು ಅವರು ಹೊರಗೆ ಬರಲೇ ಇಲ್ಲ. ನಾನು ಹೋದಾಗ ಬಂದಾಗ ಹರಟೆ ಹೊಡೆಯುತ್ತಿದ್ದ ಕುಟುಂಬದ ಯಜಮಾನ ಹೀಗೆ ಅಂತರ್ಧಾನವಾಗಿದ್ದು ನನಗೂ ಆಶ್ಚರ್ಯ ಮತ್ತು ಅನುಮಾನ ಎನಿಸಿತ್ತು. ಆಗ ತಟ್ಟನೆ ಬಾಬಾಸಾಹೇಬರು ನೆನಪಾದರು. ಕೆಲ ಬಂಧುಗಳು ನಾನು ಆಸ್ಪತ್ರೆಯಲ್ಲಿ ಇದ್ದಾಗ ಹೋಳಿಗೆ ಮಾಡಿಕೊಂಡು ಉಂಡರೆಂದು ಕೇಳಲ್ಪಟ್ಟೆ.

ನನ್ನ ದುಃಖವೇ ನಿಮ್ಮ ಸಂತಸವಾಗುವುದಾದರೆ
ಆಗಲಿ ನಾನು ವಿಷ ಕುಡಿದ ನೀಲಕಂಠನಾಗಲಿ

ಇದರ ಮಧ್ಯೆ ನನ್ನ ಶ್ರೀಮತಿಯ ಟೆನ್ಷನ್ ಹೇಳತೀರದಾಗಿತ್ತು. ಆಕೆ ಹುಚ್ಚಿಯೇ ಆಗಿದ್ದಳು. ಜಪ ತಪ ಮಂತ್ರಗಳು ಆಕೆಯಿಂದ ನಿರಂತರವಾಗಿ ನಡೆದೇ ಇದ್ದವು. ಆಕೆಯ ವಿಚಾರಗಳಲ್ಲಿ ವೈದ್ಯರು ಬೇಜಾರಾಗಿದ್ದರು. ಕೆಲ ಮನೆಯವರಂತೆ ಇದ್ದ ಕುಟುಂಬಗಳು ಸಹ ಇಲ್ಲಿಯವರೆಗೂ ನಮ್ಮನ್ನು ಮಾತಾಡಿಸಿಲ್ಲ ಅಂದರೆ ಕೋವಿಡ್ ಮಾತಾಡಿದರೆ ಬರುವ ರೋಗವೆಂದು ಅವರ ತಲೆಯಲ್ಲಿ ಬೇರೂರಿದೆ ಅನ್ನಿಸಿತು. ನನ್ನ ಸಂಸ್ಥೆ ನನಗೆ ಬೆಂಬಲವಾಗಿ ನಿಂತು ಆತ್ಮಸ್ಥೈರ್ಯ ತುಂಬಿತು.

ಸಾವೆಂಬ ಕಣ್ಣ ಮುಂದಿನ ಸಖ ಹಾಗೆಯೇ ಮಾಯವಾದದ್ದು ಅಂತಹ ವ್ಯತ್ಯಾಸವೆನ್ನಿಸಲಿಲ್ಲ.

ಸಾವೆಂಬ ಕಣ್ಣ ಮುಂದಿನ ಸಖ

ಅದು ಹೀಗೆಯೇ ಇಣುಕುತ್ತಿತ್ತು
ಅದಕೆ ಅಡ್ಡಡ್ಡ ಉದ್ದುದ್ದ ಕೋರೆ ಹಲ್ಲು
ಇರಲಿಲ್ಲ
ಯಮಪಾಶದ ಹಗ್ಗ ಅದು ಹೂವಿನ
ತೆಳುದಾರದಿಂದ ಮಾಡಲ್ಪಟ್ಟಿತ್ತು
ವಾಹನ ಕೋಣವೋ ಐರಾವತವೋ ಇನ್ನೂ ಅಸ್ಪಷ್ಟ
ತೇಜೋಪುಂಜವಾದ ಅದರ ನಡಿಗೆ, ಸ್ಪಷ್ಟ ಮಾತ್ರ

ಮಧ್ಯರಾತ್ರಿ ಗಂಟೆ ಹೊಡೆದಂತೆ
ಬಂದು ನನ್ನ ಸುತ್ತ ಸುಳಿಯುತ್ತಿತ್ತು
ನಾನು ನನ್ನ ಒಂದು ಕಾಲನೆ ಎತ್ತಿ ಅದರ ಮೇಲೆ
ಇಡಲು ಹೋದಾಗ ಹಿಂದೆ ಸರಿಯುತ್ತಿತ್ತು
ಇದರ ಮೋಜಿನ ಆಟಕೆ ನಾನೇ ನಿಬ್ಬೆರಗಾಗಿದ್ದೆ
ಒಂದು ದಿನ ನನ್ನೆದುರಿನ
ಕುರ್ಚಿಯ ಮೇಲೆ ಬಂದು ಕುಳಿತು
ಹಾಗೆಯೇ ಕಣ್ಣಗಲಿಸಿ ನೋಡಹತ್ತಿತು
ಹುಲಿ ಬೇಟೆಯನು ನೋಡುವಂತೆ
ನಾನು ಅಂದೇ ಅಂದುಕೊಂಡೆ. ಸಾವಿನ ಆಟ
ಮುಗಿಯಿತು ಎಂದು
ಆದರೆ ಅದರ ಕಣ್ಣಿಂದ ಬರುತ್ತಿದ್ದುದ್ದು
ಕರುಣಾರಸವಾಗಿತ್ತು

ಅಮ್ಮ ಹೇಳುತ್ತಿದ್ದಳು
ಮಗನೆ ಸಾವಿಗೂ ಕರುಣೆ ಇದೆ
ಸಿಡಿಲು ಬಡಿದರೂ ಗಜ ನೀರಿನ ಹಳ್ಳ ದಾಟಿದರೂ
ಹಾವು ಕಚ್ಚಿದರೂ
ಕೋಟಿ ಚಿಂತೆಗಳು ದಾಳಿ ಮಾಡಿದರೂ
ನಾನು ಬದುಕಿಲ್ಲವೆ
ಈಗ ನೆನಪಾಗುತ್ತಿದೆ ಅಮ್ಮನ ಮಾತು
ಸಾವು ಎಂದರೆ ಕಣ್ಣ ಮುಂದಿನ ಸಖ

‍ಲೇಖಕರು Avadhi

2 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading